ಸತ್ಯದ ಶಿವಲಿಂಗಸ್ವಾಮಿ ಚಿತ್ತದಲ್ಲಿ ಸ್ಮರಿಸಿ
ಮುಂದೇನಾಯಿತೆಂದು ಹೇಳಬೇಕೆಂದರೆ –
ಮಹಾನುಭಾವನ ದರ್ಶನದಿಂದ
ಚಂದಮುತ್ತನ ಅಮಾವಾಸ್ಯೆಗೆ
ಚಂದ್ರನ ಕನಸಾಯಿತು.
ಕತ್ತಲ ಕಗ್ಗಂಟು ಸಡಿಲಿ,
ಬಿಡಿವಜ್ರ ಬೆಳ್ಳಿ ಮೂಡಿ
ಉದಯಗಿರಿ ಬಿರಿದು ಉದಯವಾದರು
ಸೂರ್ಯನಾರಾಯಣ ಸ್ವಾಮಿ,
ಹೊಸಬೆಳಕಿನ ಮಹಾಪೂರ ನುಗ್ಗಿ ಬಂತು ನೋಡು,
ಕೊಚ್ಚಿಹೋದವು ಇದ್ದಬಿದ್ದ ಅನುಮಾನಗಳು.
ಮೂಡುಬೆಟ್ಟ ಬಂಗಾರವಾಗಿ
ನಮ್ಮೀ ಧರೆಯ ಮ್ಯಾಗಿನ ಗಿಡಮರಗಳಲ್ಲಿ
ಚಿನ್ನದ ಚಿಗುರೆಲೆ ಹೊಳೆದವು.

ಮಹಾನುಭಾವ ಹಾಲುಹಸುಳೆ ಚಂದಮುತ್ತನ್ನ ತನ್ನ ನಿರ್ಜನ ಆಶ್ರಮಕ್ಕೆ ಕರೆದೊಯ್ದು, ಇಬ್ಬರೂ ಗುರುಶಿಷ್ಯರಾಗಿ, ಒಲೆಹೂಡಿ ಹೊಸಜೀವನ ಆರಂಭಿಸಿದರು. ಹೊಸಬೆಳಕಿನ ಮಳೆಯಾಗಿತ್ತಲ್ಲ, ಹೊಸನೀರು ನುಗ್ಗಿತ್ತು ಮಡುಗಳಲ್ಲಿ, ಮಹಾನುಭಾವ ತಂದೆಗಿಂತ ನೂರುಮಡಿ ಹೆಚ್ಚಿನ ಗುರುವಾಗಿ ತನ್ನಲ್ಲಿದ್ದ ವಿದ್ಯೆಗಳ ಚಂದಮುತ್ತನ ಸತ್ಪಾತ್ರಕ್ಕೆ ಧಾರೆಯೆರೆದನು. ಚಂದಮುತ್ತ ಶಿಷ್ಯನಾಗಿ ತನ್ನೆಲ್ಲವ ಗುರುವಿಗರ್ಪಿತ ಮಾಡಿ ಗುರುಕರುಣೆ ಪಡೆದನು. ಗುರುವು ಶಿಷ್ಯನಿಗೆ ದಿನಕ್ಕೊಂದರಂತೆ ನೂರೊಂದು ರಾಗಂಗಳ ಕಲಿಸಿದನು. ಎದ್ದಾಗೊಂದು ರಾಗ, ನಿಂತುಕುಂತಾಗೊಂದು ರಾಗ, ಬಿಸಿಲು ಆಶ್ರಮದ ಹೊಸಲಿಗೆ ಬಂದಾಗೊಂದು ರಾಗ, ಕತ್ತಲೆಗೆ ಕಾವೇರಿ ತಡಮಾಡಿ ಬಂದ ತಿಂಗಳಲ್ಲಿ ಬೆಟ್ಟ ತುದಿಗೆರೆ ಬೆಳಕಾಡಿದರೆ ಒಂದು ರಾಗ, ಬೆಳ್ಳಿ ಮೂಡಿದಾಗೊಂದು ರಾಗ, ಉದಯರಾಗ, ಬೆಳೆ ಬರಿಸುವ ರಾಗ, ಹಸಿರು ಚಿಗುರುವ ರಾಗ, ಹಾಳು ಸುರಿವ ರಾಗ, ಗೋಳು ಗೋಳಿನ ರಾಗ ಇಂತೆಂಬ ನೂರಾರು ರಾಗಂಗಳ ಕಲಿಸಿ, ತಿಂಗಳ ರಾಗವೊಂದನ್ನು ಕಲಿಸದೆ “ಅದು ನಾನರಿಯದ ರಾಗ”ವೆಂದು ಸೋತು ಮಾತಾಡಿದ.

“ತಿಂಗಳ ರಾಗ ನನಗೆಲ್ಲಿ ಸಿಕ್ಕೀತು ಗುರುಪಾದವೇ? ಎಂದು ಚಂದಮುತ್ತ ಕೇಳಿದಾಗ “ಅದನ್ನು ಹೇಳಬಲ್ಲವನು ಭೃಂಗೀಶ ಮಾತ್ರ” ಎಂದು ಸುಮ್ಮನಾದ. ಮಾಸಗಳುರುಳಿ ಮತ್ತೊಂದು ಮಹಾಶಿವರಾತ್ರಿ ಬಂತು. ಜೊತೆಯಲ್ಲಿ ಚಂದಮುತ್ತನಿರುವುದರಿಂದ ತನ್ನ ಬಿಡುಗಡೆ ಖಚಿತವೆಂದು ಮಹಾನುಭಾವನಿಗೆ ವಿಶ್ವಾಸವಾಗಿತ್ತು.

ಗುರುಶಿಷ್ಯರು ಮಹಾಶಿವರಾತ್ರಿಯ ಮುನ್ನಾದಿನದ ಬೆಳ್ಳಿಯ ಬೆಳಕಿನಲ್ಲೆದ್ದರು. ಪಡುಬದಿಗೆ ಮೋರೆ ಮಾಡಿ ನೆತ್ತಿಯಲ್ಲಿ ಚಂದ್ರಾಮಸ್ವಾಮಿಯಿರುವ ಸತ್ಯದ ಸಾವಳಗಿ ಶಿವಲಿಂಗದೇವರ ನೆನೆದರು. ಸುತ್ತಲಿನ ದೇವ ದೈವಂಗಳ ನೆನೆದರು. ಹಿಡಿಸೂಡಿ ಹಿಡಿದು ಶಿವಾಲಯದ ಅಂಗಳ ಗುಡಿಸಿ ಹಸಿರು ಸೆಗಣಿ ಸಾರಿಸಿ ರಂಗೋಲಿ ಬರೆದರು. ಮಡುವಿನಲ್ಲಿ ಮಿಂದು ಮೈಲಿಗೆ ಕಳೆದು, ಮಡಿಯುಟ್ಟು ಓರೆಯಾಗಿ ಜುಟ್ಟು ಕಟ್ಟಿಕೊಂಡರು. ಗಂಧದ ನೀರಲ್ಲಿ ಗುಡಿಯ ತೊಳೆದರು. ಹಿಡಿಗಂಧ ತೇದರು. ಪಂಚದರ್ಭೆಯ ಕಡ್ಡಿ ತಂದರು. ಬುಟ್ಟಿ ತುಂಬ ತುಂಬೆಯ ಹೂ, ಬಿಲ್ವಪತ್ರೆ ತಂದರು. ಪರಿಮಳದ ಹೂ ಹಿಂಗಾರುಗಳಲ್ಲಿ ಶಿವಲಿಂಗವ ಸಿಂಗರಿಸಿ ಪರಿಮಳ ಮ್ಯಾಲೇಳು ಲೋಕ, ಕೀಳೇಳು ಲೋಕಂಗಳಿಗೆ ಪಸರಿಸುವಂತೆ ಮಾಡಿದರು. ನಂದಾದೀಪ ಏರಿಸಿ ಶಿವಲಿಂಗದ ಬಳಿ ಕರಿ ಬಿಳಿ ಸುಣ್ಣ ಬಣ್ಣ ಕುಂಕುಮ ಅರಿಷಿಣಗಳಲ್ಲಿ ಮಂಡಳ ಬರೆದರು. ಮಂಡಳದ ಎಡದಲ್ಲಿ ಸೂರ್ಯ, ಬಲದಲ್ಲಿ ಚಂದ್ರರ ಬರೆದರು. ಅವರ ಮಧ್ಯೆ ಬಾಳೆಯೆಲೆ ಹಾಸಿ, ಅದರ ಮ್ಯಾಲೆ ವೀಳ್ಯದೆಲೆಯಿಟ್ಟು ಒಂದಡಿಕೆಯ ಐದು ಹೋಳು ಮಾಡಿ ಕರವೆತ್ತಿ ಶರಣೆಂದು ಕುಣಿವ ಭೃಂಗೀಶನ ಬಹಿರೂಪ ಬರೆದರು. ಹಸಿರುಗಣ್ಣಿನ ಮೂರು ಕಾಲಿನ ಆ ಮೂಳೆರೂಪವ ನೋಡಿ ಚಂದಮುತ್ತ ಗಾಬರಿಯಾದ. “ಇದ್ಯಾರ ರೂಪ ಗುರುವೇ?” ಎಂದ.

“ಭೃಂಗೇಶ”

ಹಿಂದೆ ತನ್ನ ಗಣೆಗೆ ಕೊಂಬು ದಯಪಾಲಿಸಿದ್ದು ಇದೇ ರೂಪವಲ್ಲವೆ? ಎಂದು ನೆನೆದು ಸಳ ಸಳ ಪುಳಕವೇರಿ, ಬೆವರಿ ಅಂಗಜಲದಲ್ಲಿ ಅದ್ದಿಹೋದ, ತನಗೆ ದರ್ಶನವಾದ ಭೃಂಗೀಶನ ಕಥೆಯ ಗುರುವಿಗೆ ಹೇಳುಬೇಕು; ಇದಲ್ಲ ಕಾಲವೆಂದು ಸುಮ್ಮನಾದ. ಭೃಂಗೀಶನ ನೆತ್ತಿಯ ಮ್ಯಾಲೆ ಮುಗಿದ ಕೈ ಮುಟ್ಟುವಲ್ಲಿ ಧರ್ಮಪತ್ನಿ ಪಾರ್ವತಿದೇವಿ ಸಮೇತ ಸತ್ಯ ಶಿವದೇವರ ಶ್ರೀಪಾದಂಗಳ ಸ್ಥಾಪನೆ ಮಾಡಿದರು. ಯಂತ್ರ ಮಂತ್ರ ತಂತ್ರಗಳಿಂದ ಅಷ್ಟೂ ದೇವದೈವಂಗಳ ಆವಾಹಿಸಿ ಅವರವರ ಸ್ಥಳದಲ್ಲಿ ಬಂಧಿಸಿ ಬಂದೋಬಸ್ತ್‌ ಮಾಡಿ ಮೈಹಾಸಿ ಅಡ್ಡಬಿದ್ದಲ್ಲಿ ತಯಾರಿಗಳು ಮುಗಿದು ಭೂಮಿತಾಯಿ ತುರುಬು ಬಿಚ್ಚಿ ಬೆನ್ನಮ್ಯಾಲೆ ಕೂದಲು ಚೆಲ್ಲಿಕೊಂಡಂತೆ ರಾತ್ರಿ ಬಂತು.

ಕುಡಿ ಅಲ್ಲಾಡದ ನಂದಾದೀಪ ಉರಿವಷ್ಟು ಜಾಗಬಿಟ್ಟು ಸುತ್ತೂಕಡೆ ಕಗ್ಗತ್ತಲು ಹೆಪ್ಪುಗಟ್ಟಿತ್ತು. ಗುರುವು ಶೃತಿ ಎತ್ತಿದಂತೆ ವಿಕಾರ ರಾಗಂಗಳು ಒಂದೊಂದೇ ಬಂದು ಮೂಲೆ ಮೂಲೆಗಂಟಿ ಆತಂಕದ ಕಣ್ಣುಗಳ ಅಗಲವಾಗಿ ತೆರೆದು ತಮ್ಮ ದೈವದ ಸದ್ಗತಿಗಾಗಿ ಕಾಯುತ್ತ, ಕೃಪೆಗಾಗಿ ಅಂಗಲಾಚುವ ದೃಷ್ಟಿಗಳಿಂದ ಶಿವಲಿಂಗವ ತೀಡುತ್ತ, ತೊಳೆಯುತ್ತ ನಿಂತವು. ಮಂಡಳದ ಮುಂದೆ ಮಹಾನುಭಾವ ಹಾಡುವುದಕ್ಕೆ ಸಿದ್ಧನಾದಾಗ ಚಂದಮುತ್ತ ಕೊಳಲು ತಗೊಂಡು ಸಾಥಿಗೆ ನಿಂತ.

ಶ್ರುತಿಗಳ ಕೂಡಿಸಿ ನಾಭಿಕುಹರದಿಂದ ಹದವಾದ ನಾದಂಗಳ ತೆಗೆದು ಆಲಾಪವ ಮಾಡಿದರು. ಇಡೀ ಶಿವಾಲಯ ಓಂಕಾರದ ಆಧಾರ ಶೃತಿ ಕೊಡುವಂತೆ ಮರುನುಡಿಯಿತು. ರಾಗಂಗಳ ಕರುಳು ಮಿಡಿದು ಬಳುಕಾಡಿದವು. ಈಗ ಗುರುಶಿಷ್ಯರು ಹೊಂದಾಣಿಕೆಯಿಂದ ಒಂದೊಂದೇ ರಾಗ ರಚನೆ ಹುಟ್ಟಿಸಿ, ಕ್ರಮದಲ್ಲಿ ಕಟ್ಟಿ ವಿಸ್ತರಿಸಿ ಕೌಶಲದಿಂದ ವಿವರಗಳ ಬಿಡಿಸಿ, ಕಾಳಜಿಯಿಂದ ಜೀವ ತುಂಬಿ ಆತ್ಮ ಪ್ರತಿಷ್ಠಾಪನೆಗೈದು ವಿಜೃಂಭಿಸಿದರು. ಮೊದಮೊದಲಲ್ಲಿ ಭಾರವಾಗಿದ್ದ ಈ ಕ್ರಿಯೆ ಬರಬರುತ್ತ ಉಸಿರಾಟದಂತೆ ಸಹಜವಾಗಿ, ಸರಳವಾಗಿ, ನಿರರ್ಗಳವಾಗಿ ಸಾಗಿ ಇಬ್ಬರೂ ದಿವ್ಯೋನ್ಮಾದದಲ್ಲಿ ತೇಲುಗಣ್ಣಾದರು. ಹೆಪ್ಪುಗಟ್ಟಿದ್ದ ಕತ್ತಲೆಯ ಗೂಢಗಳು ತಂತಾವೆ ಡೀಕೋಡಿಸಿಕೊಂಡು ಬೆಳಕಿನ ಪುಂಜಗಳಾಗಿ, ಕಿರಣಂಗಳಾಗಿ ಮಾರ್ಪಾಟಾದವು. ವಿಕಾರ ರಾಗಂಗಳಲ್ಲಿ ವಿದ್ಯುತ್ ಸರಬರಾಜಾಗಿ ವಿರೂಪಂಗಳು ಕಳಚಿ ಒಳಗಡೆಯ ಚೇತನಂಗಳು ಸ್ವಸ್ವರೂಪ ಪಡೆಯಲು ಹವಣಿಸಿದವು. ಶಿವಾಲಯದ ಕಂಬಗಳಲ್ಲಿ ಜೀವಸಂಚಾರವಾಗಿ ನಾದವಾದ್ಯಗಳ ಧ್ವನಿ ಮಾಡಿ ನುಡಿಸುತ್ತ ಗುರುಶಿಷ್ಯರ ಸಂಗೀತಕ್ಕೆ ಸ್ವರಮೇಳವೊದಗಿಸಿದವು.

ಈಗ ಮಂಡಳದಲ್ಲಿದ್ದ ಭೃಂಗೀಶನ ಬಹಿರೂಪಕ್ಕೆ ಜೀವತುಂಬಿ ಚಿತ್ರದ ಕಂಗಳಲ್ಲಿ ಬೆಳಕಾಡಿತು. ಅಸ್ಥಿಪಂಜರ ರೂಪದ ಅವನ ಕೈಕಾಲುಗಳಲ್ಲಿ ಚೈತನ್ಯ ಹರಿದು ಥೈ ಥೈ ಕುಣಿಯತೊಡಗಿದವು! ಚಿತ್ರದ ಭೃಂಗೀಶನೇ ಜೀವಗೊಂಡು ಕುಣಿಯಬೇಕಾದರೆ ಶಿವಶಿವಾ –ಶಿವಾಲಯದ ಕಂಬಗಳು ಉನ್ಮಾದಗೊಂಡು ಸ್ವರಮೇಳದ ತಾರಕಕ್ಕೇರಿಸಿ, ಇಡೀ ಶಿವಾಲಯವ ಹೊತ್ತುಕೊಂಡೇ ಕುಣಿಯತೊಡಗಿದವು! ವಿಕಾರ ರಾಗಂಗಳಿಗೆ ಸ್ವಸ್ವರೂಪವೊದಗಿ ಸಡಗರದಲ್ಲಿ ಹುಚ್ಚೆದ್ದು ಕಣಿದವು. ಎಲ್ಲರ ಕಣ್ಣುಗಳಲ್ಲಿ ಶಿವರಾತ್ರಿಯ ನಂದಾ ದೀಪಗಳು ಬೆಳಗಿ ಶಿವಾಲಯದಲ್ಲಿ ದೀಪಾವಳಿ ವಿಜೃಂಭಿಸಿತು. ಮಂಡಳಲದಲ್ಲಿದ್ದ ಲೋಕಂಗಳ ತಂದೆ, ತಾಯಿ ಶಿವಪಾರ್ವತಿಯರ ಕಾಲು ಚಡಪಡಿಸಿದವು. ಭೃಂಗೀಶನ ಭಕ್ತಿಯ ಕುಣಿತ, ಶಿವಾಲಯದ ಕಂಬಗಳ ಹುರುಪೇರಿದ ಕುಣಿತ, ವಿಕಾರ ರಾಗಂಗಳ ಸಡಗರದ ಕುಣಿತ, ಮೌನದ ಗುಂಭಕ್ಕೆ ಬಾಯಿ ಬಂದಂತಿದ್ದ ಸಂಗೀತ – ಇವೆಲ್ಲವುಗಳ ಸಮ್ಮೇಳನದಿಂದ ಲೌಕಿಕದಲ್ಲಿ ಅಲೌಕಿಕದ ಅವತಾರವಾಗಿ ಕೈಲಾಸ ಸಾಕ್ಷಾತ್ಕಾರವಾಗುತ್ತಿರುವಲ್ಲಿ –

ತಾರಕಕ್ಕೇರಿದ ಸಂಗೀತವ ಆಧಾರದ ಷಡ್ಜಕ್ಕಿಳಿಸುತ್ತ ಚಂದಮುತ್ತ ಕಣ್ಣು ತೆರೆದನು. ನಿಜರೂಪವ ಮೆರೆದು ಮತ್ತೆ ಮಂತ್ರಭಾವಿತ ಬಣ್ಣದ ಚಿತ್ರವಾಗಲು ಭೃಂಗೀಶ ಮಂಡಳಕ್ಕೆ ಸದ್ದಿಲ್ಲದೆ ಸಂಚರಿಸುತ್ತಿರಲು ಅವನ ಎಲುಬಿನ ಕಾಲುಗಳನ್ನ ಥಟ್ಟನೆ ಗಟ್ಟಿಯಾಗಿ ತಬ್ಬಿಕೊಂಡು “ದಯವಾಗು ಶಿವಪಾದವೇ” ಎಂದ. ಒಂದು ಸಾರಿ ಬಾಲಕನ ಇಡಿಯಾಗಿ ನೋಡಿ ಭೃಂಗೀಶನ ಹರುಷ ಉತ್ತೇಜಿತವಾಯಿತು.

“ಹೌದಯ್ಯ ಕಂದಾ, ಚಿತ್ತಸಂಶಯ ಬ್ಯಾಡ, ನಿನ್ನ ಸಂಗೀತ ಮೆಚ್ಚಿದೆ. ಸತ್ಯವ ಬೇಡು, ನಿತ್ಯವ ಬೇಡು, ಬೇಕಾದ್ದನ್ನು ಬೇಡು, ಬೇಡಿದ್ದನ್ನ ಕೊಡುವೆ” – ಎಂದು ಮೆಚ್ಚು ನುಡಿದ.

“ನನ್ನ ಗುರುವಿನ ಭಂಗವ ಹಿಂಗಿಸಿ ಮುಕ್ತಿ ಕೊಡು ಶಿವಪಾದವೇ” ಚಂದಮುತ್ತನ ಗುರುಭಕ್ತಿ ಭೃಂಗೀಶನಿಗೆ ಚನ್ನಂಗೊಪ್ಪಿಗೆಯಾಯಿತು. ಮಹಾನುಭಾವನ ಕಡೆ ನೋಡಿ.

“ಅಯ್ಯಾ ಮಹಾನುಭಾವ ಹಾಡುವಾಗ ಏನೇನು ಕಂಡೆ?” ಎಂದ. ಮಹಾನುಭಾವ ತಕ್ಷಣ ಮೈಚೆಲ್ಲಿ ಸಾಷ್ಟಾಂಗವೆರಗಿ ಹೇಳಿದ:

ಕುಣಿವ ನಿನ್ನ ಶ್ರೀಪಾದಂಗಳ ಕಂಡೆ.
ಶಿವಾಲಯದ ಕಂಬಗಳು ಕುಣಿದುದ ಕಂಡೆ.
ರಾಗಂಗಳ ವಿಕಾರ ಕಳೆದು
ಮೂಲರೂಪದಲ್ಲಿ ಹೊಳೆದುದ ಕಂಡೆ.

“ನಿನಗೆ ಈಗಲೇ ಮುಕ್ತಿ ಸಿಕ್ಕಿತು ಹೋಗು” ಎಂದು ಕರವೆತ್ತಿ ಆಶೀರ್ವದಿಸಿ ಚಂದಮುತ್ತನ ಕಡೆ ಕೃಪಾದೃಷ್ಟಿ ಬೀರಿ, “ಕಂದಾ ತಿಂಗಳುರಾಗವ ನೀನು ನುಡಿಸಲಿಲ್ಲ. ಅದನ್ನು ತಿಳಿದವಳು ಫಲಬಿರಿವ ಹದವಂತಿ, ಮುದಿಜೋಗ್ತಿ, ಅವಳಲ್ಲಿಗೆ ಹೋಗು, ಚಂದ್ರಸಮೇತ ಮಂಗಳಮೂರ್ತಿ ಶಿವದೇವರ ದರ್ಶನವಾದಾಗಲೇ ನಿನಗೆ ಮುಕ್ತಿ” ಎಂದು ಚಂದಮುತ್ತನ ಸಂತವಿಸಿ ಭೃಂಗೀಶ ಮಂಡಳದಲ್ಲಿ ಐಕ್ಯವಾದ.

ಗುರುಶಿಷ್ಯರು ಶಿವರಾತ್ರಿಯ ಸತ್ಫಲದಿಂದ ಸಂತೃಪ್ತರಾಗಿ ಕಡ್ಡಿಕರ್ಪೂರ ಬೆಳಗಿ ಮಂಗಳಾರ್ತಿ ಮಾಡಿದರು. ಸ್ವಸ್ವರೂಪ ಪಡೆದು ಆನಂದನಗೆಯವರಾದ ಸರ್ವರಾಗಂಗಳಿಗೆ ನಮಸ್ಕಾರವ ಮಾಡಿ ಆಶೀರ್ವಾದ ಪಡೆದರು.