ಆಕಾಶದಂಗಳದಲ್ಲಿ ಬೆಳ್ಳಿಮೂಡುವ ಮುನ್ನವೇ ಗುರುಶಿಷ್ಯರಿಬ್ಬರೂ ಎದ್ದರು. ಕಗ್ಗತ್ತಲಿತ್ತು ಸುತ್ತ. ಶಬ್ದಸೂತಕ ಮಾಡದೆ ಶುಚಿಯಾಗಿ ಶಿವಾಲಯಕ್ಕೆ ಹೋದರು. ಮಹಾನುಭಾವ ಮಂತ್ರ ತಂತ್ರಾದಿಗಳಿಂದ ಶಿವಲಿಂಗದ ಅಕ್ಕಪಕ್ಕದ ಭೂತಪಿಶಾಚಿಗಳ ಓಡಿಸಿದ. ಇಬ್ಬರೂ ಶಿವಭಕ್ತಿ ಶಿವಾಚಾರ ಮಾಡಿದ ಮ್ಯಾಲೆ ಮಹಾನುಭಾವ ಸುಮುಹೂರ್ತ ನೋಡಿ ಶಿಷ್ಯನ ನೆತ್ತಿಯ ಜುಟ್ಟು ಹಿಡಿದು ಶಿವಲಿಂಗಕ್ಕೆ ಹಣೆ ತಾಗಿಸಿ ಅವನ ಕಿವಿಯಲ್ಲಿ ಮಂತ್ರೋಪದೇಶವ ಮಾಡಿದ. ರಾಗಮಂಡಳ ಬರೆವ ವಿಧಾನಗಳ ಹೇಳಿಕೊಟ್ಟ. ಮಂಡಳಕ್ಕೆ ಮುದಿಜೋಗ್ತಿಯ ಆವಾಹಿಸುವ, ಅವಾಹಿಸಿ ಬಂಧಿಸುವ ಅವಳ ಹುಸಿಗಳ ಸುಲಿದು ನಿಜದಲ್ಲಿ ಸಾಕ್ಷಾತ್ಕಾರ ಮಾಡಿಕೊಂಬ ರಾಗರಚನೆ ಮಂತ್ರಗಳ ಹೇಳಿ, ‘ಅವಳಿಂದ ತಿಂಗಳ ರಾಗ ಪಡೆವ ಗುಟ್ಟು ಮಾತ್ರ ನೀನೇ ಬಲ್ಲೆ’ ಎಂದು ಶಾಸ್ತ್ರ ಮುಗಿಸಿದ. ಈಗ ಕಾಡುಕೋಳಿ ಕೂಗಿ, ಗಂಡುಹಕ್ಕಿ ಚಿಲಿಪಿಲಿ ಸ್ವರಗೈದು, ಹೆಣ್ಣು ರೆಕ್ಕೆ ಬಡಿದು, ಮೂಡಲು ಹರಿದು ಮುಂಬೆಳಕಾಡುವಲ್ಲಿ,

“ಯೋಗ ಲಕ್ಷಣ ಒದಗಿ ಬಂತು ಇನ್ನು ಹೊರಡು”

– ಎಂದು ಶಿಷ್ಯನಿಗೆ ಹೇಳಿದ, ಚಂದಮುತ್ತ ಗುರುವಿನ ಪಾದಪಡಕೊಂಡು ಹಾಗೇ ಅವನ ಕಾಲು ತಬ್ಬಿಕೊಂಡು ಕುಂತ. ಪಾದಂಗಳ ಮ್ಯಾಲೆ ಕಣ್ಣೀರು ಬಿದ್ದುದನ್ನು ನೋಡಿ ಮಹಾನುಭಾವ ಅವನನ್ನ ಮ್ಯಾಲೆಬ್ಬಿಸಿದ. ಗುರುವಿನ ಕಣ್ಣಲ್ಲೂ ಸಳಸಳ ಜಲಬಿಂದು ಜಗುಳಿದವು; ನಿವಾರಿಸಿಕೊಂಡು,

“ಜಯವುಳ್ಳ ಮುದಿಜೋಗ್ತಿಯ ಕಂಡು ಬಾ. ಶಿವ ನಿನಗೆ ದಯವಾಗ್ಲಿ ಅಂತ ಶಿವಲಿಂಗಕ್ಕೆ ದಿನಾ ಒಂದು ಪತ್ರಿಯೆಲೆ ಹಾಕುತ್ತೇನೆ. ನಿನ್ನ ಕಾಮಿತ ಫಲಿಸಲಿ ನನ್ನಪ್ಪ. ಎಲ್ಲ ಹೇಳಿದ ಮ್ಯಾಲೆ ಇನ್ನೊಂದುಳಿಯಿತು. ಅಗಲುವ ಮುನ್ನ ಅದನ್ನೂ ಹೇಳಿಬಿಡುತ್ತೇನೆ. ಕೊಂಚದವಳಲ್ಲ ಮುದಿಜೋಗ್ತಿ. ಅಂತಿಂಥವರಿಗೆ ದಕ್ಕುವಂಥದಲ್ಲ ಅವಳ ನಿಜ. ಯಾರಿಗಾದರೂ ಒಳಗೊಳಗೇ ಪ್ರೇರಕಳು. ಹೊರಗೆ ತೋರುವುದಿಲ್ಲ ತನ್ನ ನಿಜವ. ಚೆನ್ನಾಗಿ ತಿಳಿದಿರಲಣ್ಣ, ಒತ್ತಾಯವಿಲ್ಲದೆ ಒಲಿಯುವವಳಲ್ಲ ಅವಳು.”

– ಎಂದು ಚಂದಮುತ್ತನ್ನ ತಬ್ಬಿ, ತಲೆ ಸವರಿ ನೆತ್ತಿಯ ಮೂಸಿ ಆಶೀರ್ವಾದ ಮಾಡಿದ. ಮತ್ತೆ ಮತ್ತೆ ಗುರುಪಾದ ಪಡಕೊಂಡು ಹೆತ್ತಯ್ಯ ಮುತ್ತಯ್ಯರ ನೆನೆದು ತಾಯಿಯ ನೆನೆದು ಬೆಟ್ಟದ ಮಾಯಿಯ ನೆನೆದು ಚಂದಮುತ್ತ ಏಕಾಂಗಿ ಹೊರಟ.

ಕಾಡು ಜಂಗಲ್ ತಿರುಗುತ್ತ ಕಷ್ಟವೃತ್ತಿಯನಾಚರಿಸುತ್ತ ಮನದಲ್ಲಿ ದಾಖಲಾಗಿ ಅರಿಯದ ಸೀಮೆಗೆ ಸರಿದವಳ, ಆತ್ಮದ ಮ್ಯಾಲೆ ಅತ್ಯಾಚಾರ ಮಾಡಿದವಳ ಹುಡುಕುತ್ತ ನಡೆದ. ಕಾಡು ನೆಲ ಅನ್ನದೆ, ನೀರು ನಿಡಿ ಅನ್ನದೆ, ಕಲ್ಲುಮುಳ್ಳೆನ್ನದೆ, ಗೊದ್ದು ಗೋಸುಂಬೆ ಅನ್ನದೆ, ಹಾವು ಹುಲಿ ಅಂಬೋದು ಕಾಣದೆ, ಎಲ್ಲಿ ಸಿಕ್ಕಾಳು ಮುದಿಜೋಗ್ತಿ ಎಂದು, ಯಾವಾಗ ಸಿಕ್ಕಾಳು ಮುದಿಜೋಗ್ತಿ ಎಂದು ಕಾತರಿಸಿ ನಡೆದ. ಗುಡ್ಡಬೆಟ್ಟ ಏರಿ ಇಳಿದು ಗಾವುದ ಗಾವುದ ಹದಿಮೂರು ಹಗಲು ಹದಿಮೂರು ರಾತ್ರಿ ನಡೆದ. ಕಾಲುಪ್ಪಳಿಕೆಯಿಂದ ಮುಂದೆ ನಡೆಯಲಾಗದೆ ತುಸುಹೊತ್ತು ಹಾಗೇ ಇದ್ದು ಎತ್ತರೆತ್ತರ ಬೆಟ್ಟದೆತ್ತರ ದೊಡ್ಡಾಲದ ಮರದಡಿ ಕೂತ.

ದಣಿವಾರಿಸಿಕೊಳ್ಳುತ್ತ ಕುಂತಿರಬೇಕಾದರೆ ಮ್ಯಾಲಿಂದ, ಮರದ ತುದಿಯಿಂದ ಮುದಿಜೋಗ್ತಿಯ ಹಾಡು ಕೇಳಿಸಿ ವಿಸ್ಮಯಂಬಟ್ಟ, ಆ ಮುದಿಜೋಗ್ತಿ ಅಲ್ಲಿ ವಾಸವಾಗಿರುವ ಹಾಂಗಿದೆಯಲ್ಲ ಶಿವನೇ! ಆಗಲಾಗಲಿ, ಅಲ್ಲಾದರೂ ಸಿಕ್ಕಾಳೆಂದು ಆಲದ ಮರವ ಹತ್ತಿದ. ಹತ್ತಿದಂತೆ ಮರ ಆಕಾಶಕ್ಕೆ ಬೆಳಯುತ್ತ ಹೋಗಿ ಮುಗಿಲಿಗೆ ಮೂರು ಗೇಣು ಕಮ್ಮಿ ಉಳಿವಂತೆ ಬೆಳೆಯಿತು. ಆರು ಮೂರು ತಾಸು ಮರ ಹತ್ತಿ ಸಂಜೆ ಸಾಯಂಕಾಲ ವಾದೇಟ್ಗೆ ತುದಿ ಸಿಕ್ಕಿತು.

ನೋಡಿದರೆ – ಅರಿಯದ ಸೀಮೆ ಆಕಾಶದಂಗಳದ ಮೋಡಗಳ ರಾಜ್ಯದಲ್ಲಿ ತಾನಿರುವುದಾಗಿ ಅರಿವಿಗೆ ಬಂತು. ಎದ್ದು ನಿಂತ ಬೆಳಕಿನ ಲೋಕ! ಕ್ಷಿತಿಜ ಮತ್ತು ಅದರಾಚೆ ಈಚೆಗಳು ಅಲ್ಲಿ ಇಲ್ಲಿಗಳಿಲ್ಲದ ಅಖಂಡಲೋಕ ! ತಾನ್ಯಾರು ಎಂತೆಂಬುದ ಮರೆತು, ಯಾಕಾಗಿ, ಏನು ಗುರಿಯಾಗಿ ಬಂದೆನೆಂಬುದ ಮರೆತು ಗಾಳಿಯಂತೆ ಹಗುರವಾಗಿ ಸಂಚರಿಸಿದ. ನೀಲಿಮ ಆಕಾಶ ಹಿನ್ನೆಲೆಗಿದ್ದು ಮೋಡಗಳಲ್ಲಿ

ಎಷ್ಟೊಂದು ಬಣ್ಣಗಳು
ಅಷ್ಟೊಂದು ಹೂವುಗಳು !
ಎಷ್ಟೊಂದು ಹೂಬಣ್ಣದ ಬೆಳಕುಗಳು
ಅಷ್ಟೊಂದು ಹೂಬಣ್ಣ ಬೆಳಕುಗಳ ಹಾಡುತ್ತ
ತೇಲುವವು ರಾಗದಲಿ ಮುಗಿಲುಗಳು ||

ಅಷ್ಟರಲ್ಲಿ ಮತ್ತೆ ಮಧುರವಾದ ರಾಗ ರಚನೆ ಕೇಳಿಸಿ ಮುದಿಜೋಗ್ತಿಯ ನೆನಪಾಗಿ “ಎಂಥಾ ಮರವೆ ಶಿವನೇ” ಎಂದು ತಿಳಿವಿಗೆ ಬಂದ. ನಿಂತರೆ ನಾದ, ಕುಂತರೆ ನಾದ, ತಿರುಗಿದರೆ ಮಧುರ ನಾದ, ನಡೆದರೆ ಮಾದಕನ ನಾದ. ಕಿವಿಯ ಬಳಿ ಸುಳಿವ ನಾದ, ಅಂಗಾಂಗಗಳಿಗೆ ಸ್ಪರ್ಶ ಸುಖ ಲೇಪಿಸುವ ನಾದ, – ಆಹಾ ಇದು ಎಲ್ಲ ನಾದಂಗಳು ಇಂಗುವ ಸ್ಥಳ, ಎಲ್ಲ ನಾದಂಗಳ ಹೊರಚೆಲ್ಲುವ, ಎಲ್ಲ ನಾದಂಗಳ ಒಳಗೊಳ್ಳುವ ಸ್ಥಳ – ನಾದಂಗಳ ಈ ನಾದಬ್ರಹ್ಮಲೋಕದಲ್ಲಿ ಮುದಿಜೋಗ್ತಿ ಇರಲೇಬೇಕೆಂದು –

ಮ್ಯಾಲೂ ನೋಡುತ ಕೆಳಗೂ ನೋಡುತ
ಹಿಂದೂ ನೋಡುತ ಮುಂದೂ ನೋಡುತ
ಆಸುಪಾಸು ಅಕ್ಕಪಕ್ಕ ನೋಡುತ್ತ ನಡೆದ.

ಅಲ್ಲೊಂದು ಮುತ್ತಿನರಮನೆ. ಹವಳದ ಚೌಕಟ್ಟಿನಲ್ಲಿ ವಜ್ರದ ಬಾಗಿಲು ಹಾಕಿತ್ತು. ತಳ್ಳಿ ನೋಡಿದ, ತೆರೆಯಲಿಲ್ಲ. ಒತ್ತಿ ಯತ್ನವ ಮಾಡಿದ, ತೆರೆಯಲಿಲ್ಲ. ಹೆತ್ತಯ್ಯ ಮುತ್ತಯ್ಯರ ನೆನೆದು ಇದು ತೆರೆದರೆ ಪಂಜಿನ ಸೇವೆ ನಿಮಗೆಂದು ನೂಕಿದ. ಯಾವ ಹರಕೆಗೂ ವಜ್ರದ ಬಾಗಿಲು ತೆರೆಯಲಿಲ್ಲ. ಆಸುಪಾಸು, ಯಾರಾದರೂ ಸಹಾಯ ಮಾಡುವಂಥವರು ಇದ್ದಾರೆಯೇ ಎಂದು ಕರೆದು ನೋಡಿದ. ಕೂಗು ಹೊಡೆದು ನೋಡಿದ. ಯಾರೂ ಬರಲಿಲ್ಲ. ಕೊನೆಗೆ ತಾಯಿ ಪಾರ್ವತೀ ಸಮೇತ ಸತ್ಯಶಿವನ ಶ್ರೀಪಾದಂಗಳ ನೆನೆದು – “ಶಿವನೇ ನಾನು ಗೊಲ್ಲಮತದ ಗೋಕುಲ ಕುಲದ ತಂದೆ ಮಾಚನಾಯ್ಕನ ವೀರ್ಯಕ್ಕೆ ಸಿರಿಲಕ್ಕವ್ವೆಯ ಗರ್ಭದಲ್ಲಿ ಹುಟ್ಟಿದ್ದೇ ಹೌಂದಾದರೆ ಹೂವು ತೆರೆದಂತೆ ಬಾಗಿಲು ತೆಗಿ, ಇಲ್ಲವಾದಲ್ಲಿ ಪ್ರಾಣ ತೆಗಿ” –ಎಂದು ಹಿಂದೆ ಸರಿದು ಗುಡುಗುಡುನೆ ಓಡೋಡಿ ಬಂದು ಮಸ್ತಕದಿಂದ ವಜ್ರದ ಬಾಗಿಲಿಗೆ ಹಾದ ನೋಡು: ಠಳಾರನೆ ದ್ವಾರಬಾಗಿಲು ತೆರೆಯಿತು ಶಿವನೆ!

ಎದುರಿಗೆ ಕರಿಘನ ಮೋಡದ ಪರದೆ ಕಂಡಿತು. ಒಳಗೆ ಇಣಿಕಿ ನೋಡಿದರೆ ಶಿವ ಶಿವಾ – ಹೂವಿನ ವಿನ್ಯಾಸದ ಚಾಪೆ ಮ್ಯಾಲೆ ಪದ್ಮಾಸನದ ಸಿಂಬೆ ಸುತ್ತಿಕೊಂಡು, ಮ್ಯಾಗಡೆ ಶಿಖರದಲ್ಲಿ ಹೆಡೆಯಂತೆ ಮುಖ ಮಾಡಿಕೊಂಡು, ಕೈಯಲ್ಲಿಯ ಬಿದಿರು ಕೋಲನ್ನೇ ಕೊಳಲು ಮಾಡಿಕೊಂಡು ಕಣ್ಣು ಮುಚ್ಚಿಕೊಂಡು ನುಡಿಸುತ್ತ ಬಹಳ ಹೆಚ್ಚಳದಿಂದ ಕುಂತಿದ್ದಾಳೆ ನೋಡು, ಯಾರು? ಆ ಮುದಿಜೋಗ್ತಿ! ಕೈಕಾಲು ನೋಡಿದರೆ ಒಂದು ಕರಡಿಯ ಅವತಾರ, ಮೂತಿ ನೋಡಿದರೆ ಒಂದು ಕೋತಿಯ ಅವತಾರ, ಕೆದರಿದ ಜಡೆ ನೋಡಿದರೆ – ಶಿವ ಶಿವಾ ಪುಟ್ಟ ಪುಟ್ಟ ಹೆಡೆ ತೆರೆದುಕೊಂಡು ಕುಡಿವರಿದು ಹೆಣೆದಾಡುವ ಮಿಡಿನಾಗರಗಳ ಅವತಾರ, ಇವಳೇನು ಮುದಿಜೋಗ್ತಿಯೋ? ಚಂದ್ರನಿಲ್ಲದ ಹೆಣ್ಣು ಶಿವನೋ ಎನಿಸಿ ಚಂದಮುತ್ತನ ಮೈಮನ ನಡುಗಿದವು.

ಮೈಮ್ಯಾಲಿನ ಚಿಂದಿಬಟ್ಟೆಗಳಲ್ಲಿ ಕಾಮನ ಬಿಲ್ಲು ಸೃಷ್ಟಿಯಾಗಿ ರಂಗುರಂಗಿನ ಬೆಳಕಿನ ತರಂಗಗಳು ಎಳೆ ಎಳೆ ವಲಯಂಗಳಾಗಿ ಸುಳಿಯುತೈದಾವೆ! ಮಾದಕದ ನಾದಂಗಳು ಬಿದಿರಿನಿಂದ ಹೊರಡುತ್ತಿವೆಯೊ ಕಾಮನಬಿಲ್ಲಿನ ಬೆಳಕಿನಿಂದ ಹೊರಡುತ್ತಿವೆಯೊ? ಬೆಳಕಿನ ತರಂಗಗಳು ನಾದ ತರಂಗಗಳಾಗಿ, ಬೆಳಕು ನಾದ ಎರಡೊಂದಾಗಿ, ಕೇಳ ಕೇಳುತ್ತ ಕೇಳಿಸಿಕೊಂಬಾತ ತಾನಲ್ಲವೆಂದು, ತನ್ನನ್ನು ಯಾರೋ ನುಡಿಸುತ್ತಿರುವರೆಂದು, ಕೇಳುತ್ತಿದ್ದ ನಾದ ತನ್ನಿಂದಲೇ ಹೊರಟಿದೆಯೆನ್ನಿಸಿ ಭಾವಪರವಶ ತರುಣ ತೇಲುಗಣ್ಣಾಗಿ.

“ದಯವಾದಿಯ ಜೋಗ್ತಿ? ಇಂದಿಗೆ, ನನ್ನ ಕರ್ಮ ಹರಿಯಿತು
ನನಗೆ ನಿನ್ನ ಹಾಡಿನ ವಿದ್ಯೆ ಕೊಡು”

– ಎನ್ನುತ್ತ ಕರವೆತ್ತಿ ಕೈಮುಗಿದು ಅವಳ ಪಾದದ ಮ್ಯಾಲೆ ಧೊಪ್ಪನೆ ಮೈಚೆಲ್ಲಿದ. ಹೆಡೆ ಎತ್ತಿದ್ದ ಮುದಿಜೋಗ್ತಿ ಫಳಾರನೆ ಕಣ್ಣು ತೆರೆದು ಕಣ್ಣ ಬೆಳಕಿನ ಕಿರಣ ಶಲಾಕೆಗಳಿಂದ ಚಂದಮುತ್ತನ ಮೈ ಪರಚಿದಳು, ಕ್ಷಣಹೊತ್ತು ಚಂದಮುತ್ತನ್ನ ಹಾಂಗೇ ನೋಡಿ ಚಂಗನೆ ನಗೆದು ನಿಂತು ಕೋಪದಲ್ಲಿ ಕೊತ ಕೊತ ಕುದ್ದು,

“ಯಾರು ನೀನು? ಇಲ್ಲಿಗ್ಯಾಕೆ ಬಂದೆ?”

– ಎಂದು ಕೆರಳಿ ಕೆಂಡವಾಗಿ ಕೋಲಿನಿಂದ ಚಂದಮುತ್ತನ ಮುಸಡಿಗೆ ತಿವಿದು ‘ತೊಲಗಿಲ್ಲಿಂದ’ ಎಂದು ಸದ್ದು ಗದ್ದಲ ಗೌಜು ಗಡಿಬಿಡಿಯ ಮಾಡುತ್ತ ದೂರ ಸರಿದು ನೆಗೆದಳು.

ನಿಂತ್ಕೊಂಡ ನೆಲೆ ಕುಸಿದಂಗಾಯ್ತು ಚಂದಮುತ್ತನಿಗೆ. ಚೇಷ್ಟೆಯಾಡುವಳೋ ಎಂದು, ಸುಳ್ಳು ಹೇಳಿ ಕಪಟವೊಡ್ಡುವಳೋ ಎಂದು ಹಿಂದೆ ಮುಂದೆ ತಿಳಿಯದೆ –

“ರಾತ್ರಿಗೆ ಚಂದ್ರನ ಪರಿಚಯವಿರುವಂತೆ ನೀನು ನನಗೆ ಪರಿಚಿತಳು. ಗುರುತಿಲ್ಲದ ಹಗರಣ ಮಾಡಬೇಡ ಮುದುಕೀ.”

– ಎಂದು ಅವಳ ಮುಂದೆ ಹೋಗಿ ದಾರಿಗಡ್ಡ ನಿಂತ.

“ಎಲ, ಎಲಾ, ಅಮಾವಾಸ್ಯೆಯಲ್ಲಿ ಹುಟ್ಟಿದವನೇ, ಕಣ್ಣು ಕಾಣಿಸೋದಿಲ್ಲವೆ? ಮೈಗೇ ಅಡರ್ತೀಯಲ್ಲೋ ಬಡ್ಡೀ ಮಗನೇ”

– ಎಂದು ನಂಜಿನ ಮಾತು ಸುರಿದು ತಾರುಮಾರು ಹಾರಾಡಿ ಮೀರಿ ಹಾರಿ ಹೊಂಟಳು. ತಕ್ಷಣ ಚಂದಮುತ್ತ ಕೈಮಾರು ಅಡ್ಡಹಾಕಿ ದಾರಿಕಟ್ಟಿ,

“ಎಲಗೇಲಗೇ
ಏನೇನೊ ಒಳಗೊಂಡು ಹೊರಗೇನೋ ತೋರುವ ಜೋಗ್ತೀ,
ನಿನ್ನ ನುಡಿ ಚೋದ್ಯ, ನಡೆ ಚೋದ್ಯ,
ನನ್ನ ತಿಳಿ ಬದುಕನ್ನ ಕದಡಿ ಓಡಿ ಬಂದಿರುವಿ.
ಕೈ ಮುಗಿತೀನಿ ಕೃತಕ ಮಾಡಬ್ಯಾಡ,
ಮುಳ್ಳಿರುವ ಮಾತಾಡಿ ಆನಂದಗೆಡಿಸಬ್ಯಾಡ.”

– ಎಂದು ಕೈಮುಗಿದು ಪರಿಪರಿ ಬೇಡಿದ. ಮುದಿಜೋಗ್ತಿಗೆ ಏಳೇಳು ಲೋಕದ ಕೋಪ ನೆತ್ತಿಗಡರಿತು.

“ಎಲವೆಲವೋ ಭ್ರಾಮಕನೇ,
ನೀನ್ಯಾರು? ನಾನ್ಯಾರು?
ಇಬ್ಬರ ಮಧ್ಯದ ಹಾಡಿನ ವಿದ್ಯೆ ಧಾವುದು?
ಆಡಬಾರದ ನುಡಿಯ ಅವಗಡಿಸಿ ನುಡಿವವನೇ,
ಈಗೇನು ಹೋಗುತ್ತಿಯೊ? ಇಲ್ಲಾ
ಹಿಡಿ ಹಿಡಿ ಅಂತ ಹಿಡಿ ಶಾಪ ಹಾಕಲೊ?”

– ಎಂದು ಕೈ ಮೈ ತುಂಬಾ ತಿರುವುತ್ತ ಕೈಸನ್ನೆ, ಬಾಯಿಸನ್ನೆ, ಕಣ್ಸನ್ನೆ ಮಾಡುತ್ತ ಬೀದಿರಂಪ ಮಾಡತೊಡಗಿದಳು. ಯಾರು? ಆ ಮುದೀ ಮುದಿ ಜೋಗ್ತಿ!

ಇವಳನ್ನ ಹ್ಯಾಂಗೆ ಹಾದಿಗೆ ತರಬೇಕೆಂಬುದೇ ಹೊಳೆಯದಾಯಿತು. ಒತ್ತಾಯವಿಲ್ಲದೆ ಒಲಿಯಲಾರಳೆಂಬ ಗುರುವಿನ ನುಡಿ ನೆನಪಾಗಿ ಹಟಹಿಡಿದು ಗಟ್ಟಿಯಾಗಿ ನಿಂತು ಸೊಂಟದ ಕೊಳಲು ಹಿರಿದು ಮುದಿಜೋಗ್ತಿ ಹಿಂದೆ ನುಡಿಸಿದ್ದ ಹಾಡನ್ನ ನುಡಿಸಿದ. ಪರವಶ ಜೋಗ್ತಿ ಬೆದೆಯ ಹಸು ಸಾಧುವಾದಂತೆ ಹೊಯ್ಕಿನಿಂದ ತೆಪ್ಪಗೆ ನಿಂತಳು. ಚಂದಮುತ್ತ ತಕ್ಷಣ ಹವಣರಿತು ಹದವಾದ ನಾದ ಹೊರಡಿಸಿ ರಾಗಮಂಡಳ ಬರೆದು ಮಂಡಳಕ್ಕೆ ಅವಳ ಅವಾಹಿಸುವ ರಾಗರಚನೆ ಮಾಡಿದ. ಜೋಗ್ತಿ ಕಿಟಾರನೆ ಕಿರಿಚಿ ಓಡಬೇಕೆಂಬಲ್ಲಿ ಕೈಮಾರು ಹಾಕಿ ದಾರಿಗಡ್ಡ ಕಟ್ಟಿದ. ಕೈಮೀರಿ ಹಾರಬೇಕೆಂದವಳ ಹಿಡಿಯಲು ಕೈ ಹಾಕಿದರೆ ಉಟ್ಟ ಚಿಂದಿ ಸೀರೆ ಕೈಗೇ ಬಂತು! ಬತ್ತಲಾದರೂ ಇನ್ನೂ ಉನ್ಮಾದದಲ್ಲಿ ಗುದಮುರಿಗೆ ಹಾಕುತ್ತಾಳಲ್ಲಾ ಎಂದು ಜುಟ್ಟು ಹಿಡಿದೆಳೆದರೆ ಜುಟ್ಟು ಕೈಗೇ ಬಂದು ಮುದಿಚರ್ಮ ಮುದುಡಿ ಮುದ್ದೆಯಾದಂತಾಗಿ ಒಳಗಡೆಯಿಂದ ಚಿಲ್ಲನೆ ಮೋಡದ ಒಡಲಲ್ಲಿ ಮಿಂಚು ಮಿಡುಕಿದ ಹಾಗೆ ಬೆಳಕಿನ ಚಿಲುಮೆ ಚಿಮ್ಮಿದವು! ಇದೇನೆಂದು ಹಿಡಿದೆಳೆದರೆ ಶಿವ ಶಿವಾ! ಅವಳುಟ್ಟ ಮುದಿಚರ್ಮ ಕೈಗೇ ಬಂದು ಮುದಿಚರ್ಮದ ಒಳಗೊಬ್ಬ ಜಗಜಗ ಬೆಳಗುವ ದಿವ್ಯ ಸುಂದರಿ, ಮೈತುಂಬ ಪರಿಮಳ ನಾರುವ ದಿಗಂಬರಿ, ಹಸಿರುಗಣ್ಣಿನ ಚಕೋರಿ ಎಂಬ ಯಕ್ಷಿ ನಾಂಚಿ ನಾಣುದಾಣಗಳ ಮುಚ್ಚಿಕೊಂಡು ನಿಂತಿದ್ದಾಳೆ!

ನೋಟ ನೋಟವ ಮೆಚ್ಚಿ ಮೈ ಬೆಚ್ಚಗಾದವು.
ಯಾರ್ಯಾರಿಲ್ಲದ ಸಮಯ ಸಾಧಿಸಿ
ಮಣ್ಣಿನ ಮಾನವ ಹೀಗೆ
ಏಕಾಏಕಿ ಏಕಾಂತಕ್ಕೆ ನುಗ್ಗಿ,
ತೋರಿಕೆಗಳ ಸೆಳೆದು
ಬತ್ತಲೆಗೊಳಿಸಿದರೆ ಏನಾಗಬೇಡ ದೈವದ ಬೆಳಕಿಗೆ?
ಬಿರುಗಾಳಿಗೆ ಹೊಯ್ದಾಡಿತೆ?
ಇಲ್ಲವೆ ಸೋಲಾಯಿತೆ ಅಲೌಕಿಕ ಬಲಕ್ಕೆ?

ಮಣ್ಣಿನ ಕಣ್ಣಾಡಿದಂತೆ
ಬೆಳಕಿನ ಕುಡಿಗೆ
ತನುಮೂಡಿ ತನುವೆಂಜಲಾಗಿ
ಮನ ಮೂಡಿ ಮನವೆಂಜಲಾಗಿ
ಕಾತರಿಸಿ ಮನದಗಲ ತನುವಿನ ಉದ್ದಗಲ
ಥರಥರನೆ ನಡುಗಿದಳು ನೋಡು!

ಅವಳ ಕಂಡನೇ,
ಮೈಯಲ್ಲಿ ಮಿಂಚಿನ ಹೊಳೆ ಹರಿದವು
ಚಂದಮುತ್ತನಿಗೆ.
ಬೆಳಕು ಉರಿದಾಡಿತ್ತು ಕಣ್ಣಿನೊಳಗೆ.
ಧಾರಾವತಿ ಸುರಿದವು ಅಂಗಜಲ ಕೆಳಗೆ.
ನೇತ್ರಸುಖದಲ್ಲಿ ತಬ್ಬಿಬ್ಬಾದ.

ಚಂದಮುತ್ತ ಅವಳನ್ನು ರಾಗಮಂಡಳದೊಳಕ್ಕೆ ಆವಾಹಿಸಿ ಬಂಧಿಸಿ ಒಲಿಸಿಕೊಳ್ಳುವ ರಾಗ ನುಡಿಸುವ ಮೊದಲೇ ತಾನೇ ಮಂಡಳದೊಳಕ್ಕೆ ಒಲಿದು ಬಂದು ಕತ್ತಿನಲ್ಲಿಯ ಅಮೃತವಲ್ಲಿಯ ಸರವ ತೋರಿಸಿದಳು. ಆಘಾತವಾಯ್ತು ಚಂದಮುತ್ತನಿಗೆ. ಶಿವ ಶಿವಾ! ಇದು ತಾನು ಯಕ್ಷಿಯ ಶಿಲಾಪ್ರತಿಮೆಗೆ ಮದುವೆ ಆಟದಲ್ಲಿ ಕಟ್ಟಿದ ತಾಳಿಯಲ್ಲವೆ? ಬಾಡದೆ ಇನ್ನೂ ಹಾಂಗೇ ಇದೆ!
ಎಲ್ಲಿದ್ದನೋ ಮಾರಾಯ ಮಾರ, ಸಕ್ಕರೆ ಬಿಲ್ಲಿನ ಹೆದೆಯ ಶಕ್ತಿಂದ ಕರ್ಣಕೆ ತಂದು ಹೂ ಬಾಣ ಬಿಟ್ಟ ನೋಡು:

ಸ್ಮರಗಾಳಿ ಬೀಸ್ಯಾವು ಕರಣ ಕಳವಳಿಸ್ಯಾವು
ಪರಿಮಳದ ಪವನ ಸುಳಿದಾವು
ಸ್ತನ ವದನ ಯೌವನಕೆ ಬಾಯ್ಬಿಡುವ ಹುಡುಗನಿಗೆ
ಅತಿ ಕಾಮವಂತೆ ಒಲಿದಾಳು.

ಮೊದಲಿವಗೆ ಕಲಿಸುವೆನು ಮಾದನ ವಿದ್ಯೆಯನೆಂದು
ಹಾಕಿದಳು ಲೆಕ್ಕ ಒಳಗೊಳಗೆ
ಹುಲ್ಲೆಗಂಗಳ ನೋಟ ಹೃದಯದಲಿ ನೆಟ್ಟಾಳು
ಕನ್ನ ಹಾಕಿದಳವನ ಎದೆಗೆ.

ಬಿಗಿದ ಹೆದೆ ಅವಳ ಎದೆ ಹುರಿಗೊಂಡ ಚೆಲುವಿಕಿ
ಕುಚದಲ್ಲಿ ಎದ್ದಾವು ನವಿರು.
ಬೆದೆಯಿಂದ ಕುದಿವ ಮೈ ರುಚಿಯ ತೋರುವೆನೆಂದು
ಮಾಯಕಾರ್ತಿ ಯಕ್ಷಿ ಅಂದಾಳು.

ಆತುರ ತೀವ್ರ ಕಾಮಾತುರ ತಾಳದೆ
ಚಂದಮುತ್ತನ್ನ ಆಕ್ರಮಿಸಿ
ಬಾಹುಮಂಡಳದಲ್ಲಿ ಕಟ್ಟಿ ಮುದ್ದಾಡಿದಳು
ಕುಂಭ ಕುಚದಿಂದವನ ಗುಮ್ಮಿ.

ಹೆಪ್ಪು ಹಾಕಿದ ಹಾಗೆ ಜನಿಗಿsಯ ಹಾಲಿಗೆ
ಒಪ್ಪುಗೊಂಡರು ಅಪ್ಪುಗೆಯಲಿ
ಜೀವರಸ ಚಿಮ್ಮಿಸುವ ಸೊಗಸುಗಳ ಸುಖಿಸಿದರು
ಗಳರವ ಸಂಗೀತದಲ್ಲಿ.

ಎಳೆತಗಳ ಸೆಳೆತಗಳ ಬಲಗೊಳಿಸಿ ಸುಖಿಸಿದಳು
ಜಘನ ಗದ್ಗಿದಿಸ್ಯಾವು ಬೆವರಿ
ಮಾನsವ ಶಕ್ತಿಗಳ ಚಪ್ಪರಿಸಿ ಸವಿದಳು
ತೃಪ್ತಿಯ ನಗಿಗಳ ಸೂಸಿ.

ಇಂತೀಪರಿ ನಿರನುಭವಿ ಗೊಲ್ಲಗೋಕುಲರ ಹೈದನ ಪಳಗಿಸಿ, ಸುಖಿಸಿ ಸುರತದ ಸಿದ್ಧಗಿರಿಶಿಖರದಿಂದ ಜಗುಳಿ ಚಕೋರಿ ಎಂಬ ಯಕ್ಷಿ ಚಂದಮುತ್ತನ ಚಂದಮುಖದ ಮುತ್ತು ಬೆವರೊರಿಸಿ ಚಿಗುರು ಬೆರಳಿಂದವನ ಮುಂಗುರುಳು ನ್ಯಾವರಿಸಿ ಮುದ್ದಾಡಿದಳು. ಆಮೇಲಾಮೇಲೆ ಸದರಿ ಯಕ್ಷಿ ಪರಿ ಪರಿ ರೀತಿಯಲಿ ಹೇಳಿದ ಸಂಗೀತ ವಿದ್ಯವನು ಸರಿ ಸರಿ ಎನ್ನುತ್ತ ಚಂದಮುತ್ತ ಪಡಕೊಂಡನೆಂಬಲ್ಲಿಗೆ ಗಿರಿಜಾರಮಣ ಶಿವಶಿವಾ ಸದರಿ ಸಂಧಿ ಮುಗಿದವು.