ಓಂ ಪ್ರಥಮದಲ್ಲಿ
ಆದಿಗಾಧಾರವಾದ ಸಾವಳಗಿ ಶಿವಲಿಂಗನ ನೆನೆದು
ನಾದದಲಿ ಹುರಿಗೊಂಡ ತನ್ನ ನಿಜವ ತೋರಲಿ ಸ್ವಾಮಿ
ಬೇಡಿಕೊಂಡು ಕಥಾರಂಭ ಮಾಡುತ್ತೇವೆ.

ನಾವು ಕನಸುಗಳು,
ಎಲ್ಲ ಕಾಲ ಎಲ್ಲ ಸೀಮೆಗೆ ಸಲ್ಲುವ
ಎಲ್ಲಾ ವಯಸ್ಸಿನ, ಎಲ್ಲಾ ಮನಸ್ಸಿನ,
ಆದಿಮ ಕಾಲದಿಂದ ಹಾಂಗೇ ಉಳಿದು ಬಂದಿರುವ ಕನಸುಗಳು –
ಮಹಾಶಿವರಾತ್ರಿಯಂದು, ಸಂಜೆ ಸಾಯಂಕಾಲವಾದೇಟ್ಗೆ
ಯಕ್ಷಿಗುಡಿಯಲ್ಲಿ ಸೇರಿ,
ಸಾವಳಗಿ ಶಿವನ ಜಡೆಯಂಥ ಅಮವಾಸ್ಯೆ ಅಂಧಂತಮಸ್ಸಿನಲ್ಲಿ
ಚಂದಮುತ್ತನೆಂಬ ಹೆಸರಾಂತ ಕಲಾವಿದನ ಕಥೆಯ
ನಾವು ಹೇಳಿ ಶಿವನು ಕೇಳಿ
ಜಾಗರಣೆ ಮಾಡುತ್ತೇವೆ; ಭಕ್ತಿಯಿದ್ದವರು ಬನ್ನಿರಯ್ಯಾ.

ಮೇಲುಕಾಡಿಸುವ ಎದುರು ಬಸವನ ಮ್ಯಾಲೆ
ಕುಂತಾಲಿಸುವ ಹಂಪಿಯ ವಿರೂಪಾಕ್ಷನ ಪಾದ
ಮತ್ತು ಪಂಪಮ್ಮನ ಶ್ರೀಪಾದಂಗಳ ಹೊತ್ತ
ಚಂದಮುತ್ತಾ ನಿನ್ನ ಪಾದಕ್ಕೂ ಶರಣು.
ಸಾವಳಗಿ ಮಠದ ಸಿದ್ಧರಾಮೇಶ್ವರ ಸ್ವಾಮಿಗಳ ಶ್ರೀಪಾದಂಗಳ ಹೊತ್ತು
ವಿಶ್ವಕರ್ಮ ಕುಲದ
ತಂದೆ ಕಂಬಾರ ಬಸವಣ್ಣೆಪ್ಪ ಮತ್ತು
ತಾಯಿ ಚನ್ನಮ್ಮ ಅವರ ಪಾದಂಗಳಿಗೆ ನಮಿಸಿ
ಕವನ ಮಾಡಿ ಹಾಡುತ್ತೇವೆ.

ಶಿವನ ಕಾಣದಿದ್ದವರೆಲ್ಲ
ಕಂಡವನ ಕತೆಯ ಕೇಳಬನ್ನಿರಯ್ಯಾ
ಹೇಳುವವರು ಸಾವಿರ ಬಾರಿ
ಕೇಳುವವರು ಸಾವಿರ ಬಾರಿ
ಶಿವಶಿವಾ ಎಂದು ಹೇಳಿ ಕೇಳಿದರೆ
ಕರ್ಮ ಪರಿಹಾರ ಸಂಕಲ್ಪಸಿದ್ಧಿ ಎಂದು
ಸ್ವಯಂ ಶಿವಲಿಂಗನ ಭಾಷೆಯಿದೆ ಬನ್ನಿರಯ್ಯಾ.

ಸಾವಿರ ಬಾರಿ ಚಂದಮುತ್ತನ ಕಥೆಯ
ಹೇಳಿದ್ದೇವೆ ಕೇಳಿದ್ದೇವೆ ಶಿವಾ,
ಸಾವಿರ ಬಾರಿ ಚಂದಮುತ್ತನ ಹಾಡ
ಬಾಳಿದ್ದೇವೆ ಬದುಕಿದ್ದೇವೆ ಶಿವಾ,
ಬರುವ ಜನ ಬಾಳಲೆಂದು ಬದುಕಲೆಂದು
ಇನ್ನೊಮ್ಮೆ ರಾಗರಚನೆ ಕಟ್ಟಿ
ಕವಿಮಾಡಿ ಪದ ಹಾಡುತ್ತೇವೆ, –
ಸಾವಳಗಿ ಶಿವಲಿಂಗ ಮೆಚ್ಚಿ ಹೌಂದು ಹೌಂದೆನುವಂತೆ,
ಭಕ್ತಾದಿಗಳ ಹೃದಯಗಳಲ್ಲಿ ಆಳವಾಗಿಳಿವಂತೆ
ಇಳಿದದ್ದು ಹೊಳೆವಂತೆ.

ನಮ್ಮ ಹಾಡು ಹೂಪತ್ರಿಯಾಗಿ ಸುರಿಯಲಿ ಸ್ವಾಮಿ
ನಿಮ್ಮ ಶ್ರೀಪಾದಂಗಳ ಮ್ಯಾಲೆ,
ಭಕ್ತರ ಹೃದಯಂಗಳ ಮ್ಯಾಲೆ