ಮಾತೆಲ್ಲ ಸಂಗೀತ, ನಡೆಯಲ್ಲ ನರ್ತನವಾದ ಚಕೋರಿ ಎಂಬ ಯಕ್ಷಿ ಕೊಟ್ಟರೆ ಕೊಡಬೇಕು ಇವಗೆ ವಿದ್ಯೆಯನೆಂದು ಚಂದಮುತ್ತನ ದಡ್ಡತನಗಳ ಪಳಗಿಸಿ ಮಹಾನುಭಾವನಿಗಿಂತ ನೂರು ಮಡಿ ನಿಷ್ಠುರವಾಗಿ ಕಠಿಣ ವ್ರತಂಗಳ ಮಾಡಿಸಿ ರಾಗ ರಾಗಿಣಿಯರ ನಿಯಮಂಗಳ ಬೋಧೆ ಮಾಡಿದಳು. ಬೋಧೆ ಮಾಡುವಾಗ ಅವಳೆಂದೂ ತುಟಿ ತೆರೆದಾಡಲಿಲ್ಲ. ಮುಗುಳು ನಗೆಗೂಡಿ ಮೌನದಲ್ಲಿ ಕುಂತರೆ ಸಾಕು, ಆಕಾಶಗುಂಭದ ಒಳಗಿಂದ ಗುಂಗು ಗುಂಗಿನ ನಾದ, ದುಂಬಿಯ ನಾದ, ತಂಬೂರಿ ತಂತಿಯ ಆಧಾರಶೃತಿ ನಾದ ಸುನಾಂದಂಗಳು ಅಲೆ ಅಲೆಯಾಗಿ ಒದಗಿಬರುತ್ತಿರುವಲ್ಲಿ – ಚಕೋರಿ ಎಂಬ ಯಕ್ಷಿ ಮೂರು ಚಂದ್ರರ ಕಾಲ ರಾಗ ರಾಗಿಣಿಯರ ಗುಟ್ಟುಗಳ ಒಳಗಿವಿಗೆ ತಾಗುವಂತೆ ಬೋಧೆ ಮಾಡಿದಳು. ಒಳಗಿವಿಗೆ ತಾಗಿದ್ದು ಹಾಡಾಗಿ, ಹಾಡಿನಲಿ ಹುರಿಗೊಂಡ ನಿಜವಾಗಿ ಹೊರಬರುವಂತೆ ಮಾಡುವ ಹವಣು ಹೇಳಿಕೊಟ್ಟಳು. ಆಮ್ಯಾಲೆ ಮಾರನೆ ಚಂದ್ರನಲ್ಲಿ ಆಕಾಶ ಸೂಕ್ಷ್ಮದಲಿ ಕರಗಿದ್ದ ರಾಗಂಗಳ ಸ್ಥೂಲದಲ್ಲಿ ಕರೆದು ತೋರಿಸಿ, ಅವರ ನಡೆವಳಿಕೆ, ಅಭಿಮಾನ ದೇವತೆಗಳ ಕೊಡುಕೊಳುವ ರೀತಿರಿವಾಜುಗಳ ಬೋಧಿಸಿದಳು. ಕೆಲವು ದೈವಂಗಳು ತಾವಾಗಿ ಮೆಚ್ಚಿಬಂದು ಸ್ವಪ್ನದಲ್ಲಿ ಕಾಣಿಸಿಕೊಂಡು ತಮ್ಮನ್ನು ನುಡಿಸುವ ಗುಟ್ಟುಗಳ ಬಿಟ್ಟುಕೊಂಡವು. ಮಹಾಶಿವರಾತ್ರಿಯಂದು ಮಹಾನುಭಾವನೊಂದಿಗೆ ಕಂಡ ರಾಗಂಗಳು ಇವನು ಕೊಳಲು ತುಟಿಗಿಟ್ಟುದೇ ತಡ ಪ್ರಸನ್ನವಾಗಿ ಆಶೀರ್ವದಿಸಿ ಸುರಿದವು. ಇಂತೀ ಪರಿ ಚಂದಮುತ್ತ ಒಂದರ ಮ್ಯಾಲೊಂದು ಮತ್ತೊಂದು ಮಗದೊಂದು ರಾಗವ ಕಲಿತು ಕಲಿತ ವಿದ್ಯನಾದನು.

ಆಮೇಲಾಮೇಲೆ ಒಂದು ದಿನ ತುಂಬಿದ ಸೋಮವಾರ ಹುಣ್ಣಿವೆ ದಿನ ಸಪ್ಪಟು ಸರಿರಾತ್ರಿ ಒಳ್ಳೆಯ ಗಳಿಗೆ ಮಂಗಳ ಮುಹೂರ್ತವ ನೋಡಿ ತಿಂಗಳ ರಾಗ ರಚನೆಯ ಪೂರ್ವಾಪರ ಹೇಳಿ ಈಗ ನುಡಿಸು ಎಂದಳು. ಚಂದಮುತ್ತ ಕೊಳಲು ನುಡಿಸಿದ. ಸಾಲದೆಂದಳು. ಮತ್ತೆ ನುಡಿಸಿದ. ಮತ್ತೂ ಸಾಲದೆಂದಳು. ಈ ಹೀಂಗೆ ಎಷ್ಟು ಬಾರಿ ನುಡಿಸಿದರೆ ಅಷ್ಟೂ ಬಾರಿ ಸಾಲದು ಸಾಲದೆಂದಾಗ ಚಂದಮುತ್ತ ಚಿತ್ತ ಸಂಶಯದಿಂದ ಕೇಳಿದ:

“ಒಂದು ರಾಗ ನೀ ತೋರಿದ ಸೀಮೆಗಳ ತುಂಬಿ ಸಂಪೂರ್ಣವಾದುದಕ್ಕೆ ಕುರುಹೇನು ದೇವಿ?”

ರಾಗದ ಅಭಿಮಾನಿದೇವತೆ ಬಹಿರೂಪ ಕಳಚಿ ಶುದ್ಧ ಆನಂದ ರೂಪುವಡೆದು ಆಕಾಶದಂಗಳದಲ್ಲಿ ತೇಲುವುದೆ ಕುರುಹೆಂದಳು. ದೇವತೆ ಒಲಿದರೆ ನನಗೇನು ಲಾಭವೆಂದರೆ ಆ ದೇವತೆ ಬೇರೆ ಯಾರೂ ಅಲ್ಲ, ನಿನ್ನದೆ ಬಿಂಬ, ನಿನ್ನ ನಿಜವ ನೀನೇ ಕಾಂಬ ಆನಂದಿಸುವ ಲಾಭವೆಂದಳು.

ಚಂದಮುತ್ತ : ನೀನ್ಯಾಕೆ ನುಡಿಸಿ ತೋರಿಸುವುದಿಲ್ಲ ದೇವೀ?

ಚಕೋರಿ : ಗುರುವಲ್ಲ, ನಿನ್ನ ಇಚ್ಛಾಧೀನ
ನಾವು ಹಂಗಿಗರಯ್ಯ ನಿನ್ನ ಕೊಳಲುಲಿಗೆ.
ಬೆಂಕಿ ಪ್ರಕಟವಾಗುವುದಕ್ಕೆ
ಬೇಕು ಮರದ ಆಸರೆ
ಅಂತೆಯೇ ಬೇಕಯ್ಯ ನೀನು ನಮಗೆ.

ಚಂದಮುತ್ತ : ಬಹಿರೂಪದಲ್ಲಿ ನನ್ನೆದುರು ಕುಂತಿರುವಿಯಲ್ಲ ದೇವೀ?

ಚಕೋರಿ : ನಿನ್ನ ಕಾಮನೆಯಿಂದಾಗಿ
ಸ್ಥೂಲದಲ್ಲಿ ಚಕೋರಿ ಎಂಬ ಯಕ್ಷಿ
ಸೂಕ್ಷ್ಮದಲ್ಲಿ ತಿಂಗಳ ಬೆಳಕುಂಡು
ಬದುಕುವ ಚಕೋರಿ ಪಕ್ಷಿ:
ತಿಂಗಳು ರಾಗದ ಅಭಿಮಾನಿದೇವತೆ
ತಿಂಗಳು ರಾಗ ಕಾರಣವಾಗಿ
ಯಕ್ಷಿಯ ಬಹಿರೂಪ ಕರಗಿ
ಪಕ್ಷಿಯಾಗುವುದು ನಮ್ಮ ಧರ್ಮ
ಕಲಾವಿದನಂತೆ ಕಲೆಯೂ ಹುಡುಕುತ್ತದೆ
ತಕ್ಕವನನ್ನ.
ಹಾಗೆ ಪರಸ್ಪರ ಹುಡುಕಿ ಪಡಕೊಂಡವರು
ನಾವು ನಿನ್ನನ್ನ.
ನೀನು ನಮ್ಮನ್ನ.

ಇಷ್ಟು ಕೇಳಿದ್ದೇ ಚಂದಮುತ್ತ ಥರಾಥರ್ನೆ ನಡುಗಿ ಹತ್ತೂ ಬೆರಳು ಕೂಡಿಸಿ ಮುಗಿದು;

ಭಯವಾಗುತ್ತದೆ ದೇವೀ,
ಶಕ್ಯವೆ ಒಗೆತನ ನಿಮ್ಮೊಂದಿಗೆ?
ಲೋಕ ಲೌಕಿಕದವನು ನಾನು
ಮುಗಿಲ ತುದಿಗಿರುವವರು ನೀವು.
ನಿಮ್ಮ ಕಟ್ಟಳೆ ರೀತಿ ರಿವಾಜು ನನಗರಿದು.
ನರಲೋಕದ ನಡಾವಳಿ ನಿಮಗರಿದು.
ನಿಮ್ಮೊಂದಿಗೆ ವ್ಯವಹರಿಸಲು
ನನ್ನ ಜಾಣ್ಮೆ ಸಾಲದೇ ಬರಬಹುದು.
ನನ್ನ ದಡ್ಡತನ ಸಮೇತ ಎಲ್ಲ ನಿನ್ನದು ದೇವೀ.

– ಎಂದು ಮೈಹಾಸಿ ಅವಳ ಪಾದದ ಮ್ಯಾಲೆ ಅಡ್ಡಬಿದ್ದ. ಅವನ ಮುಗ್ಧ ನಡೆ ನೋಡಿ ನುಡಿ ಕೇಳಿ ಹವಳದುಟಿ ಯಕ್ಷಿ ಚಂದಮುತ್ತನ್ನ ಹಿರಿದು ಮೆಚ್ಚಿದಳು.