ಆಮೇಲಾಮೇಲೆ ಚಕೋರಿ ಎಂಬ ಯಕ್ಷಿ ಚಂದಮುತ್ತನ ದೃಢವ ಪರೀಕ್ಷಿಸಿ, ಇನ್ನಷ್ಟು ಕಠಿಣ ವ್ರತನಿಷ್ಠೆಗಳ ಮಾಡಿಸಿ ತಿಂಗಳು ರಾಗ ಬೋಧಿಸುವ ದೊಡ್ಡಮನಸ್ಸು ಮಾಡಿದಳು. ಒಂದು ದಿನ ತುಂಬಿದ ಸೋಮವಾರ ಅಮಾವಾಸ್ಯೆಯಂದು ಸೋಮವಾರದ ಒಡೆಯ ನಾದಪ್ರಿಯ ಶಿವಲಿಂಗಸ್ವಾಮಿಗೆ ಚಂದಮುತ್ತನಿಂದ ಮುಂಜಾನೆಯ ಹನಿ ಪೂಜೆ, ಮಧ್ಯಾಹ್ನದ ಮಹಾಪೂಜೆ ಮಾಡಿಸಿದಳು. ಸಂಜೆಯ ಶಾಂತಿಪೂಜೆ ಯಾದೇಟ್ಗೆ, ಸಾಲು ಸಾಲು ಸೊಡರುರಿದಂತೆ ತಾರಾನಕ್ಷತ್ರ ಬೆಳಗಿ ರಾತ್ರಿಯಾಯಿತು. ಪಡುವಲ ಮುಖವಾಗಿ ತಿಂಗಳುರಾಗದ ಮಂಡಳ ಬರೆದು, ಮಂಡಳದಲ್ಲಿ ಸತ್ಯಶಿವಲಿಂಗೇಶ್ವರದೇವರ ಸ್ಥಾಪನೆ ಮಾಡಿ ನೆತ್ತಿಯ ಮ್ಯಾಲೆ ಮಿಡಿನಾಗರ ಜಡೆ ಬರೆದಳು. ಜಡೆಯಲ್ಲಿ ಸುಣ್ಣದ ಗೆರೆಯೆಳೆದು ಎಳೆಯ ಚಂದ್ರನ ಬರೆದು ಮಂಡಳದ ಸುತ್ತೂ ಕಡೆ ಮಂತ್ರಭಾವಿತ ರಕ್ಷೆಗಳ ರಚಿಸಿ ರಕ್ಷಿಸೆಂದು ಭೃಂಗೀಶನ ಪ್ರಾರ್ಥಿಸಿಕೊಂಡಳು. ಇಷ್ಟೊತ್ತಿಗೆ ಸಪ್ಪಟು ಸರಿರಾತ್ರಿ ಕಲ್ಲೂ ನೀರೂ ಕರಗುವ ಸಮಯವಾಗಿರಲು ಸಾವಿರ ಶಿವಗಣಂಗಳ ಕರೆದು ಜೀವಬೋಧೆಯ ಮಾಡಿ ಕಾವಲಿರಿಸಿದಳು. ಆಮ್ಯಾಲೆ ಒಳ್ಳೆಯ ನಾದ ಸುನಾದವ ಅನುಗ್ರಹಿಸಿ ಸಾರಾಂಶ ನುಡಿ ಹೇಳಿದಳು:

ಅಯ್ಯಾ ಹೆಚ್ಚಿನವನೇ
ಮೆಚ್ಚಿ ಅರ್ಪಿಸಿಕೊಂಡಿದ್ದೇನೆ
ಹೆಚ್ಚು ಕಡಿಮೆ ನುಡಿಸಬ್ಯಾಡ
ಎಚ್ಚರವಿರಲಿ ರಾಗದ ಮ್ಯಾಲೆ
ನನ್ನ ಜೀವದ ಮ್ಯಾಲೆ
ಕಣ್ಣಿರಲಿ ಮಂಡಳದ ಚಂದ್ರನ ಮ್ಯಾಲೆ
ಇನ್ನು ನುಡಿಸೆಂದಳು.

ಚಂದಮುತ್ತ ಕೊಳಲ ನುಡಿಸಿದ. ಈಗ ಹಬ್ಬಿತು ನೋಡು ರಾಗದ ಮಾಯೆ ಸುತ್ತ ಕ್ಷಿತಿಜದ ತನಕ ಮ್ಯಾಲುರಿವ ಸೊಡರು ನಕ್ಷತ್ರಗಳ ತನಕ ! “ಮಂಡಳದಲ್ಲಿ ಏನು ಕಂಡೆ?” ಎಂದಳು.

“ಸಾವಳಗಿ ಶಿವಲಿಂಗವ ಕಂಡೆ
ಬದಿಯಲ್ಲಿ ಮಡುವ ಕಂಡೆ”

ಸಾಲದು ಸಾಲದೆಂದು ಚಂದಮುತ್ತನ ಎಡಗಾಲ ಹೆಬ್ಬೆರಳ ಮ್ಯಾಲೆ ತನ್ನ ಬಲಗಾಲ ಹೆಬ್ಬೆರಳೂರಿ, ಬಾಹುಸರ್ಪಂಗಳಿಂದವನ ಗಟ್ಟಿಯಾಗಿ ಕಟ್ಟಿ ಮುಖಕ್ಕೆ ಮುಖ ಕೊಟ್ಟು ಕಣ್ಣಲ್ಲಿ ಕಣ್ಣಿಟ್ಟು ಈಗ ನೋಡು ನೋಡೆಂದಳು. ಏಕಾಏಕಿ ನಡೆದ ಈ ಆಕ್ರಮಣವ ಎದುರಿಸಲಾರದೆ ಚಂದಮುತ್ತ ಚಡಪಡಿಸುತ್ತ ಯಕ್ಷಿಯ ಕುರಂಗಾಕ್ಷಿಗಳಲ್ಲಿ ನೋಡಿದ.

ಚಕೋರಿ : ಹೇಳು ನನ್ನ ಕಣ್ಣಲ್ಲಿ ಏನೇನ ಕಂಡೆ?
ನನ್ನ ಮುಖದ ಕಾಂತಿಯ ಕಂಡೆಯಾ?
ನಿನ್ನ ಹಾಡಿನ ಬೆಳಕನ್ನ ಕಂಡೆಯಾ?

ಚಂದಮುತ್ತ : ಮಂಡಳದ ಶಿವನ ಜಡೆ
ಪಡುವಲ ಗಿರಿಯಾದುದ ಕಂಡೆ,
ಪಡುವಲ ಗಿರಿ ಬಿರಿದು ಗೆರೆಗಾತ್ರದ ಚಂದ್ರ
ಉದಯವಾದುದ ಕಂಡೆ.
ಗೆರೆಗಾತ್ರದ ಚಂದ್ರ ಚೊಗಚಿಯ ಹೂಗಾತ್ರದ
ಚಂದ್ರನಾದ.
ಎಳೆಯ ಚಂದ್ರ ಬೆಳೆದ ಚಂದ್ರನಾದ.
ಚಂದ್ರಾಮಸ್ವಾಮಿಯ ಬೆಳಕು
ಮೋಡ ಮೋಡದ ಮ್ಯಾಲೆ
ಕಾಲೂರಿ ಇಳಿವುದ ಕಂಡೆ.
ಇಳಿದ ಬೆಳಕಿನಲ್ಲಿ
ನೋಡಿದರೆ ಶಿವಶಿವಾ,
ಶಿವಾಪುರದ ಮಾಯದ ಕೆರೆ ಕೆಳಗಿದೆ.
ಬೆಳಕಿನ ಕೆನೆಗಟ್ಟಿದ ಚಂದ್ರ ಮ್ಯಾಲಿದ್ದಾನೆ.
ಚಂದ್ರಾಮನ ಹೃದಯದಲ್ಲಿ ಮೇಯುವ ಜಿಂಕೆ ಮರಿಯಿದೆ.
ಕೆರೆನೀರಿನ ಹೃದಯದಲ್ಲಿ
ಚಂದ್ರಾಮನ ಕನಸು ತೇಲಾಡಿದೆ…

ಆವಾಗ ನೋಡು ಶಿವಾ, ನೋಡನೋಡುತ್ತಿರುವಂತೆ ಏನಾಯಿತೆಂದರೆ,

ಆಕಾಶ ನೀಲಿಮದ ಚಂದ್ರನೊಳಗಿಂದ
ಚಂಗನೆ ಹೊರಕ್ಕೆ ನಗೆಯಿತು ಜಿಂಕೆಮರಿ.
ಎಳೆಯ ಜಿಂಕೆಮರಿ ಹೊಳೆವ ಜಿಂಕೆಮಾರಿಯಾಗಿ
ಕೆಳಕ್ಕಿಳಿದು ನೇರ ಕೆರೆಗೇ ಬಂತು ಬಾಯಾರಿಕೆಗೆ.
ಬಾಯಿ ಹಾಕಿದ್ದೇ
ನೀರಲ್ಲಿ ಕಂಡಿತು ಇನ್ನೊಂದು ಜಿಂಕೆಮರಿ
ಗುರುತಿಲ್ಲದ ಮರಿಯೆಂದು ಸ್ನೇಹದಲ್ಲಿ ಮೂಸಿ
ಮುದ್ದಾಡಿ ಕೊಂಬಿನಲ್ಲಿ ತಿವಿದಾಡಿದಾಗ

ಕದಡಿದ ಕೆರೆನೀರು
ತೆರೆತೆರೆ ಬೆಳಕಿನ ಹೆಡೆಯಾಡಿಸಿತು.
ನೀರು ತಿಳಿಯಾಗಿ ಮತ್ತೆ ಕನ್ನಡಿಯಾಗಿ ನೋಡಿದರೆ
ಎದುರುಬದುರಾಗಿವೆ ರವರುದ್ರಗೋಪದಲ್ಲಿ
ಎರಡೂ ಮರಿ!

ಹಗೆ ಹಗೆ ಹೊಗೆಯಾಡುವ ಉಸಿರು ಬಿಡುತ್ತ
ಉರಿವ ನೋಟಗಳಿಂದ ಪರಸ್ಪರ ಇರಿಯುತ್ತ
ಕೊಂಬಿನ ಹರಿತ ಶಕ್ತಿಗಳ
ಪ್ರಯೋಗಿಸಲು ಹೊಂಚಿ ನಿಂತಿವೆ
ಕಾದುವ ಹಮ್ಮಿನಲ್ಲಿ !
ಒಂದರ ಕಣ್ಣಲ್ಲಿ ಇನ್ನೊಂದು ಬೆಳೆಯುತ್ತಿದೆ
ರಾಕ್ಷಸಾಕಾರ.

ಅನಬಹುದೆ ಶಕ್ತಿಯುಕ್ತಿಗಳಲ್ಲಿ
ಅದು ಹೆಚ್ಚು ಇದು ಕಮ್ಮಿ ಅಂತ? ಮುಖ್ಯ
ಎರಡರ ಪ್ರಳಯವೂ ಸನ್ನಿಹಿತ.
ಎರಡರ ಕಾಮಿತ ಒಂದಾದರೆ
ನಿಭಾಯಿಸಬಹುದು, ಆ ಮಾತು ಬೇರೆ.
ಅದರಲ್ಲಿ
ಒಂದಕ್ಕೆ ನೀರಿನ ಬಾಯಾರಿಕೆ.
ಇನ್ನೊಂದಕ್ಕೆ ಬೆಳಕಿನ ಬಯಕೆ.

ಎರಡರ ಉಸಿರಿನ ಜ್ವಾಲೆ
ಸುಡು ಸುಡು ಸುಡುತ್ತದೆ ಕಾಡನ್ನ, ಕೆರೆಯನ್ನ.

ತಕ್ಷಣ ಚಂದಮುತ್ತ ಮಧ್ಯೆ ಬಂದು,
“ಕೆರೆನೀರಲ್ಲಿ ಕುದಿಯುತ್ತಿರುವ ಚಂದ್ರಾಮ ಸ್ವಾಮಿ
ನೀವಿಬ್ಬರೂ ಬಿಂಬ ಪ್ರತಿಬಿಂಬಗಳೆಂದು
ನೀತಿ ನುಡಿ ಹೇಳಿ
ಬಗೆಹರಿಸಬಾರದೆ ಮರಿಗಳ ಜಗಳ?”

– ಎಂದು ಹೇಳಿದ. ತೀಕ್ಷ್ಣ ಕಣ್ಣಿಂದ ಚಂದಮುತ್ತನ್ನ ನೋಡಿ ಜಗಳ ಮರೆತು ಇವನ ಕಡೆಗೇ ಬಂತು ಜಿಂಕೆಮರಿ.

“ಬೆಳಕಿನ ಸುಗ್ಗಿ ಒಕ್ಕೋಣ ಹತ್ತುಬಾರೊ ಹುಡುಗ” ಎಂದಿತು. ಹತ್ತು ಎಂದು ಜಯವುಳ್ಳ ಯಕ್ಷಿಯ ದನಿ ಕೇಳಿಸಿತು. ಚಂದಮುತ್ತ ಹೋಗಿ ಬೆಳ್ಳಿಯಂತೆ ಮಿರು ಮಿರುಗುವ ಜಿಂಕೆಮರಿಯ ಬೆನ್ನೇರಿ ಗಟ್ಟಿಯಾಗಿ ಕತ್ತು ತಬ್ಬಿಕೊಂಡ. ಹುಯ್ಯಲಿಟ್ಟಂತೆ ಸುಂಟರಗಾಳಿ ಬೀಸಿ ಭೂಮಿ ಗಿರ್ರನೆ ತಿರುಗಿ ನಾಕು ಲೋಕ ಏಕವಾಗುವಂತೆನಿಸಿ ಚಂಗನೆ ನೆಗೆಯಿತು ಜಿಂಕೆ ಮೇಲುಮೇಲಕ್ಕೆ ಮ್ಯಾಲಿನ ಮಿರಿಲೋಕಕ್ಕೆ. ಈಗ ನೋಡಿದರೆ ಸಾವಳಗಿ ಶಿವ ಶಿವಾ, ಯಕ್ಷಿ ಬೇರೆಯಲ್ಲ, ಜಿಂಕೆ ಬೇರೆಯಲ್ಲ ಯಕ್ಷಿ ಜಿಂಕೆ ಎರಡೊಂದಾಗಿ ತನ್ನಯ ಪ್ರತಿಬಿಂಬವಾಗಿ ಕ್ಷಿತಿಜದಾಚೆಗೆ ಸೇರಿಕೊಂಬ ರಸ್ತೆಯ ರಚಿಸಿ ತೇಲಾಡಿ ದಾಟಿದರು ಸುಲಭದಲ್ಲಿ.

ಒಬ್ಬರಿಗೊಬ್ಬರು ಕನ್ನಡಿಯಾದರು
ಬೇಲಿಯಿಲ್ಲದ ಬಯಲಿನಲ್ಲಿ
ಒಬ್ಬರನ್ನೊಬ್ಬರು ಒಳಗೊಂಡರಿಬ್ಬರು
ಸುರಿವ ಎಳೆಬೆಳುದಿಂಗಳಲ್ಲಿ

ಇಂತೀಪರಿ ಬೆಳ್ಳಿಲೋಕದ ಅಂಚಿನತನಕ ಚಂದಮುತ್ತನ್ನ ಕರೆದೊಯ್ದು ಇನ್ನು ಹಿಂದಿರುಗೆಂದಳು. ಚಂದಮುತ್ತ ತಿರುಗಿ ಬಂದು ಯಕ್ಷಿಯ ನಕ್ಷತ್ರ ಕಣ್ಣಿಂದ ದೃಷ್ಟಿಯ ಕಿತ್ತ.

ನೆಪ್ಪಿರಲಿ ಗೆಳೆಯಾ, ಬೆಳ್ಳಿಲೋಕದಲ್ಲಿ ತೇಲುವಾಗ
ಅಪಸ್ವರವುಂಟಾದರೆ ಇಬ್ಬರಿಗೂ ತಪ್ಪದ ಹಾನಿ.

ಎಂದಳು ಹಸಿರುಗಣ್ಣಿನ ಯಕ್ಷಿ,

ತಿಂಗಳ ಸುಖವಿತ್ತು
ಮುದವಿತ್ತು ಮುಖದಲ್ಲಿ
ಬೆಳ್ದಿಂಗಳು ಸುರಿದಿತ್ತು ಅವಳ ಮೈಯಿಂದ |
ಬೆವರಜಲ ಸುರಿದಿತ್ತು ಇವನ ಮೈಯಿಂದ ||