ಮ್ಯಾಲಿನ ಲೋಕದಲ್ಲಿ ಈ ಹಿಂಗೆ ನಡೆಯುತ್ತಿರಬೇಕಾದರೆ ಕೆಳಗಿನ ಲೋಕ ಗೋಳುಬೀಸುವ ಗಿರಣಿ ನಮ್ಮೀ ಧರಣಿಯ ಮ್ಯಾಲೆ ಏನು ನಡೆಯುತ್ತಿದ್ದಿತೆಂದರೆ:

ಹೇಳಿ ಹೋದ ಸೋನೆಮಳೆ ಬರಲಿಲ್ಲವಾಗಿ
ಶಿವಾಪುರದ ಜೀವಜಿಂದಗಾನಿ ಅಸ್ತವ್ಯಸ್ತವಾಗಿವೆ.
ಮ್ಯಾಲಿನ ಲೋಕದ ಮಳೆ ತಪ್ಪಿ
ಕೆಳಗಿನ ಲೋಕದಲ್ಲಿ ಬೆಳೆಯಿಲ್ಲದೆ
ನಾಡು ನರಲೋಕ ನರಕವಾಗಿದೆ.
ಹುಲ್ಲು ಹಸಿರಿಲ್ಲದೆ ಹಟ್ಟಿಯೊಕ್ಕಲು ಮಂದಿ
ಕಟ್ಟಿ ಮೇಯಿಸುವ ದನ, ಬಿಟ್ಟು ಮೇಯಿಸುವ ಕುರಿಗಳ
ಹೊಡೆದುಕೊಂಡು ಮೇವಿರುವ ನಾಡಿಗೆ ಗುಳೆ ಹೋಗಿದ್ದಾರೆ.
ಅಡವಿಯಲ್ಲಿ ಜೇನು ಸಿಗದೆ,
ಕಾಡುಬಾಳೆ ಗಡ್ಡೆಗೆಣಸು ಸಿಗದೆ
ತಿಂದೇನೆಂದರೆ ಸೊಪ್ಪು ಸದೆ ಸಿಕ್ಕದೆ, ಪ್ರಾಯದವರು ಗುಳೆ ಹೋಗಿ
ಉಳಿದವರು ಬಿದಿರಕ್ಕಿ ಬಿದಿರ ಕಳಲೆಯ ತಿಂದು
ಬದುಕಿದ್ದಾರೆ.
ಹದ್ದುಗೈಯಿಟಗೊಂಡು ಮಳೆ ಹಾದಿಯ ನೋಡುತ್ತ,
ಮಳೆ ಕಳಿಸು ಶಿವನೇ ಎಂದು
ಕರುಳು ಬಾಯಿಗೆ ಬರುವಂತೆ ಮೊರೆಯಿಡುತ್ತ.
ನೀಲಿಮ ಆಕಾಶದಲ್ಲಿ
ಉರಿಯುವ ಮೋಡ ಹಾರ್ಯಾಡುತಾವೆ.
ಚಂದ್ರ ಹೊತ್ತಿ ಬೆಳ್ದಿಂಗಳ ಬೂದಿ ಬಿದ್ದು
ನೀರು ನೆರಳಿಲ್ಲದ ಕಾಡು ಉರಿವುಸಿರ ಹಾಕುತ್ತಿದೆ.
ಹಕ್ಕಿಪಕ್ಕಿ ಬೆವತು ಬೆಂಡಾಗಿ ಸೀಮೆದಪ್ಪಿವೆ.

ಮಳೆ ಕಳಿಸು ಶಿವನೇ
ನಮ್ಮ ಕಾಡಿಗೆ ಮತ್ತೆ ಯೌವನ ಬರಲಿ.
ಹಸಿರು ಹಬ್ಬಿ ಹಂದರವಾಗಲಿ.
ಹೂಮುಡಿದು ಶೃಂಗಾರವಾಗಲಿ
ಹಾಡುವ ಹಕ್ಕಿಗಳಿಂದ, ತುಂಟ ಪ್ರಾಣಿಗಳಿಂದ
ಮೆಲುಕಾಡಿಸುವ ನಮ್ಮ ದನಕರು ಕುರಿಗಳಿಂದ
ಕಾಡು ತುಂಬಲಿ.

ಪುಣ್ಯಕೋಟಿ ಹಸು ಲಕ್ಕಬ್ಬೆ ಕಣ್ಣು ಹೊತ್ತಿಸಿಕೊಂಡು ಮಗ ಇಂದು ಬಂದಾನು ಈಗ ಬಂದಾನೆಂದು ಹಾದಿಗುಂಟ ನೆದರು ಹಾಸಿ ಕಾದಳು. ಸುತ್ತಿನ ದೇವದೈವಂಗಳು ಮಗನ ಕಳಿಸಲೆಂದು ಬಿದಿರುಬತ್ತ ಕುಟ್ಟುತ್ತಾ, ರಾಗ ಎಳೆಯುತ್ತಾ, ಪದ ಹಾಡುತ್ತಾ ಬೇಡಿಕೊಂಡಳು. ಬಿಕ್ಕಳಿಕೆ ಜಾಸ್ತಿಯಾದರೆ ಮಗ ನೆನೆದನೆಂದು ಚಿಂತೆ ಮಾಡಿದಳು. ಚಂದಮುತ್ತನ ಚಿಕ್ಕಂದಿನ ಆಟಿಗೆಗಳ; ನಾರಿನ ಹಗ್ಗ, ಹೂವಿನ ಮುಖವಾಡದ ಮಣ್ಣಿನ ಬಸವ, ದುಂಡುಮಲ್ಲಿಗೆ ಹಸು, ಇರಿದಾಡಲು ನಿಂತ ಮರದ ಟಗರು, ಪಿಳ್ಳಂಗೋವಿ, ಕುಣಿಯೋ ನವಿಲು, ಬಂಡಿ ಎಳೆಯುವ ಗಿಣಿ, ಮೇಯುವ ಕುರಿಗಳ ಜೋಪಾನವಾಗಿ ಕೂಡಿಟ್ಟು ಅವುಗಳೊಂದಿಗೆ ಮಗನ ಆಟ ಕಲ್ಪಿಸಿ ಆನಂದಪಡುತ್ತ ಮುದುಕಿ ತಂತಾನೆ ಆಡಿಕೊಂಡಳು.

ಚಿಕ್ಕಂದು ನೀ ಆಡಿದ ಅಟಿಗೆಗಳನ್ನ
ಇಂದಿಗೂ ಕಾದಿಟ್ಟಿದ್ದೇನೆ ಕಂದಾ.

ಹಿತ್ತಲಲ್ಲಿ ನೀ ಮಾಡಿದ ಪುಟ್ಟ ಮಲ್ಲಿಗೆ ತೋಟ,
ಯಾತದ ಬಾವಿ, ಮ್ಯಾಲೊಂದು ಮರ,
ಮರದಲ್ಲೊಂದು ಗಿಣಿಮರಿ
ಬಿದಿರಿನ ಪುಟ್ಟ ಕೊಳಲು, ಕೊಳಲುಲಿಗೆ ಮೈಮರೆತ
ಮಣ್ಣಿನ ಕುರಿ ಮುಂದೆ, ದನಕರು,
ಕರುವಿಗಾಗಿ ಕಾಡಿನಲ್ಲಿ ಕಾದು ನಿಂತ
ಮರದ ಹುಲಿ, ಬೊಗಳುವ ನಾಯಿ…

ನಿನ್ನೆ
ಕಾಲನ ಧೂಳು ಸರಿಸಿ ನೋಡಿದಾಗ
ನಿನ್ನ ತೋಟ ಹಾಗೇ ಇದ್ದುದ ಕಂಡೆ.
ತಪ್ಪಿಸಿಕೊಂಡ ಕರುವೊಂದ ತಂದು
ಹಿಂಡಿನಲ್ಲಿ ಬಿಡಬೇಕೆಂದಾಗ
ಸಾಲುಹುಲ್ಲಿನ ಮರದ ನಾಯಿ ಮೈಮ್ಯಾಲೇರಿ ಬಂದು
ಎದೆ ಕಚ್ಚಿ ಬೊಗಳಿತು ಮಗನೇ.

ನೀ ನೆಟ್ಟ ಮಲ್ಲಿಗೆ ಬಳ್ಳಿ ಮೊಗ್ಗು ಬಿಟ್ಟಿವೆ.
ಹೂವಾಗುವ ಸಮಯ, ಮಳೆಯಿಲ್ಲ; ನೀರುಣಿಸಬೇಕು
ರಾದರೊಬ್ಬರು.

ಮುಖಕ್ಕೆ ಸೀಮೆ ಸುಣ್ಣವ ಬಳಿದು
ಹುಣ್ಣಿಮೆ ಚಂದ್ರಾಮನಾಗಿದ್ದ ಬಾಲಕನೊಬ್ಬ
ಬಳ್ಳಿಯ ಬಳಿ ನಿಂತಿದ್ದ.
ನನ್ನ ಕಂಡೊಡನೆ ಓಡೋಡಿ ಬಂದು
ತೆಕ್ಕೆ ಹಾದು ಕುತ್ತಿಗೆ ನೇತು ಬಿದ್ದ.
ಯಾರೋ ನೀನು? ಅಂದರೆ,
ನಿನ್ನ ಮಗ ಚಂದ್ರಾಮನೆಂದ.

ಅಲ್ಲೇ ಕಂದಿ ಮುಳುಗಲಾರದೆ ನಿಂತಿದ್ದ
ನೀ ಬರೆದ ಸೀಮೆಸುಣ್ಣವ ಚಂದ್ರ,
ದೂರದಲ್ಲಿ ಹೊಂಚಿದ್ದ ಧೂಮಕೇತು.
ಆತನ ಬೆಂಕಿ ಹೂಗಳ ಮ್ಯಾಲೆ ಸುರಿದು
ಗುಡಿ ಗೂಡು ಕೊಳಲು ಬೂದಿಯಾದರೆ
ಜನ ದನ ಶಿವನೇ ಎಂದರೆ
ಸುಟ್ಟುಳಿದ ನಿನ್ನ ಹಾಡಿನ ಇದ್ದಿಲು ಚೆಲ್ಲಾಪಿಲ್ಲಿ ಬಿದ್ದರೆ…

ಇದನ್ನೆಲ್ಲ ಮಕ್ಕಳಾಟ ಎನ್ನಲಾದೀತೆ?
ಹಾಗಾದಲ್ಲಿ ನಾ ನೀನು ತಾಯಿ ಮಗ ಆದದ್ದೂ
ಆಟವಾಗದೆ ಕಂದ?
ಅದಕ್ಕೇ ಹೇಳಿದೆ: ಯಾರಾದರೊಬ್ಬರು
ಕಾಯಬೇಕಿದೆ ನಿನ್ನ ತೋಟವ. ಅದಕ್ಕೇ
ಎಲ್ಲಿದ್ದರೆ ಅಲ್ಲಿಂದ
ಮಗನೇ ನೀ ಬೇಗನೆ ಬಾ –

– ಎಂದು ಹೇಳುತ್ತ ಮಣ್ಣಿನಾಟಿಗೆಯ ಹಿಡಿದುಕೊಂಡು ಗೋಳು ಗೋಳೆಂದತ್ತಳು ಅಬ್ಬೆ. ಕೈಯಲ್ಲಿ ಆಟಿಗೆಯಾಯ್ತು, ದಿನಾ ಕಣ್ಣಲ್ಲಿ ಕಂಬನಿಯಾಯ್ತು.

ಎಷ್ಟು ದಿನ ಕಾದರೂ ಮಗ ಬಾರದೆ, ನೀರು ತುಂಬಿದ ಕಣ್ಣಲ್ಲಿ ಆಟಿಕೆಗಳು ಕಾಣದೆ ನೀರಲ್ಲಿ ತೇಲಿಬಿಟ್ಟ ದೀಪದ ದೊನ್ನೆಯಂಥ ಕಣ್ಣಿಂದ ಮಗನ ದಾರಿ ನೋಡಿದಳು ಅಬ್ಬೆ:

ಬಾಳೋ ಭಕ್ತಳಿಗೊಂದು ವ್ಯಾಳ್ಯಾವು ಬಂದರೆ
ಕಾಯೋರ್ಯಾರೋ ಶಿವನೆ ನಿನ್ನ ಬಿಟ್ಟು?
ಒಳ್ಳೆಯ ಸಂಗತಿಗಳನ್ನ ನೆನಪನಲ್ಲಿಟ್ಟುಕೊಳ್ಳೋನೇ,
ಕೆಟ್ಟ ಸಂಗತಿಗಳನ್ನ ಮರೆಯೋನೇ,
ಹರಕೆಯ ಬೀಸು ಬಲೆಗೆ ಸಿಕ್ಕಲಾರದ ಶಿವನೇ,
ಅಣುಗನ್ನ ಕಳಿಸೊ ಎಂದು –

ಕುಲದೇವರು ನನ್ನ ಪಾಲಿಗಿಲ್ಲದಂಗಾಯ್ತು
ಮನೆದೇವರು ಮರೆತು ಹೋಯ್ತು
ಮನೆ ಜ್ಯೋತಿ ಬೆಳಗಿಸಬೇಕಂಬೋ ಬುದ್ಧಿ
ನಿನಗಾದರೂ ಬ್ಯಾಡ್ವೇನೇ ಬೆಟ್ಟದ ಮಾಯೀ ಎಂದು,

ನರಲೋಕ ಸುರಲೋಕಗಳ
ಜಬರ್ ದಸ್ತ್ ಆಳುವ ಶಿವನೇ,
ಮಗನೆಲ್ಲಿ ಅಂತ ನಿನಗೂ ಗೊತ್ತಿಲ್ಲವೇ?
ಗೊತ್ತಿದ್ದೂ ಪಂತಪರೀಕ್ಷೆ ಮಾಡದೆ
ಮಗನ್ನ ಕಳಿಸೋ ಮಾದೇವಾ ಎಂದು
ದಿನದಿನಕ್ಕೆ ಹೊಸ ಹೊಸ ಕಣ್ಣೀರನತ್ತಳು ಅಬ್ಬೆ.

ಸುತ್ತೂದೈವಂಗಳಿಗೆ ಹರಕೆ ಹೊತ್ತದ್ದು, ಉರುಳು ಸೇವೆ ಪಂಜಿನ ಸೇವೆ ಮಾಡಿದ್ದು, ಬೇಕಾದಷ್ಟು ಧೂಪದೀಪ ಉರಿಸಿದ್ದು ಎಲ್ಲವೂ ವ್ಯರ್ಥವಾಯಿತು. ಹಾದಿ ಸಿಕ್ಕಿದ್ದರೆ ಕೈಲಾಸಕ್ಕೂ ಹೋಗಿ ಶಿವನ ಕೈಕಾಲು ಕಟ್ಟುತ್ತಿದ್ದಳು. ಆಗಲೂ ಮಗ ಬಾರದೆ ಇಂತೆಂಬ ಕಷ್ಟನಿಷ್ಠೂರ ಹೆಂಗ ತಾಳಿಕೊಳ್ಳಲೋ ಶಿವನೇ ಎಂದು ಮಂಡೆಯ ಮ್ಯಾಲೆ ಕೈಹೊತ್ತು ಕುಂತಿರುವಲ್ಲಿ ಹುಸಿಹೋಗದ ಹೊಸ ಮದ್ದೊಂದು ನೆಪ್ಪಾಯಿತು ನೋಡು, ಅವಳೇ ಸೈ ಎಂದು ಮಂಗಳವಾರದ ಅಮಾವಾಸ್ಯೆ ಸಪ್ಪಟ್ಟು ಸರಿರಾತ್ರಿ ಮಾರಿಮಸಣಿ ಭೂತಪಿಶಾಚಿ ಅಡ್ಡಾಡೋ ಹೊತ್ನಲ್ಲಿ ತಣ್ಣೀರು ಮಿಂದು, ತಣ್ಣನೆ ದಟ್ಟಿಉಟ್ಟು, ಬುಟ್ಟಿ ತುಂಬ ಹಸಿರು ಸೆಗಣಿ, ಗಡಿಗೆ ತುಂಬ ಮೆಣಸಿನ ನೀರು ತಗೊಂಡು ಹಟ್ಟಿಯ ಹೊರಗಿನ ಯಕ್ಷಿಯ ಗುಡಿಗೆ ಹೋದಳು ಅಬ್ಬೆ.

ಹೋಗಿ, ಸೆಗಣಿಯಲ್ಲಿ ಮೆಣಸಿನ ನೀರು ಹುಯ್ದು ಗಂಜಳ ಮಾಡಿ ಯಕ್ಷಿಯ ಶಿಲಾಮೂರ್ತಿಯ ಮುಖಕ್ಕೆ ಬಡಿದು ಡಬ್ಬು ಮಲಗಿಸಿ –

ಎಲಗೇಲಗೇ ಸೋಗಲಾಡಿ ದೇವೀ,
ಹಾಡಿಯ ಬಲ್ಲವಳು ಹಟ್ಟಿಯ ಬಲ್ಲವಳು
ಕಾಡು ನೋಡಿಕೊಂಬೋಳು, ಗೂಡು ನೋಡಿಕೊಂಬೋಳು
ಮುಗಿಲಿನ ಆಚೆ ಬಲ್ಲವಳು ಈಚೆ ಬಲ್ಲವಳು
ಮಗ ಎಲ್ಲಿ ಹೋದ ಅಂಬೋದು
ನಿನಗೆ ಗೊತ್ತಿಲ್ಲ ಅಂದಮ್ಯಾಕೆ
ನೀನ್ಯಾಕೆ ವೈನಾಗಿರಬೇಕು?
ಮಗ ನಿನ್ನ ಪೂಜೆ ಮಾಡಲಿಲ್ಲವ?
ಚಾಕರಿ ಮಾಡಲಿಲ್ಲವ?
ತಪ್ಪು ಒಪ್ಪುಗಳ ತೂಕ ಮಾಡೋಳಲ್ಲವ ನೀನು?
ನಿನ್ನ ನಂಬಿದ ನಂಬಿಕೆ ಏನುಳಿಸಿಕೊಂಡೆ?
ನಿನಗ್ಯಾಕೆ ಇನ್ನುಮ್ಯಾಕೆ ಪೂಜೆಪುನಸ್ಕಾರ?
ಇಂದು ಮಂಗಳವಾರದಿಂದ
ಇನ್ನೊಂದು ಮಂಗಳವಾರದವರೆಗೆ – ಮುದ್ದತು ಕೊಟ್ಟೆ, ಅಷ್ಟರೊಳಗೆ,
ದಿಕ್ಕು ದೇಶಾಂತರ ಹೋದ ಮಗ ಬಂದರೆ ಗುಡ್ಡಬಿಡ್ತೀನಿ
ಬರದಿದ್ದರೆ ನಿನಗಿದೇ ಗತಿ.

– ಎಂದು ಉರಿಮಾತುಗಳ ಸುರಿದು ಮುದುಕಿ ಯಕ್ಷಿಯ ಶಿಲಾಮೂರ್ತಿಯ ಬೆನ್ನಿಗೂ ಸೆಗಣಿ ಗಂಜಳ ಸುರಿದು, ಹೊರಬಂದು ಗುಡಿಯ ದ್ವಾರಬಾಗಿಲಿಗೆ ಮುಳ್ಳಿನ ಬೇಲಿಯ ಬಿಗಿದು ಬೆಳ್ಳಿ ಮೂಡಿ ಬೆಳಗಾಗೋ ಹೊತ್ತಿಗೆ ಹಾಡಿಗೆ ಬಂದಳು.