ಲೋಕ ಲೌಕಿಕದಲ್ಲಿ ಅಬ್ಬೆ ಈ ಪರಿ ಯಕ್ಷಿಗೆ ಶಿಕ್ಷೆ ಮಾಡಿದೇಟ್ಗೆ ಆಕಾಶವೆಂಬ ಬಯಲ ಅರಮನೆಗೆ ಉರಿ ತಾಗಿತು ನೋಡು!

ಮೇಲು ಮಿರಿಲೋಕದ ಏಳುಪ್ಪರಿಗೆ ಮೋಡಗಳ ಮ್ಯಾಲೆ ಕೊಳಲುಲಿಯ ಮತ್ತಿನಲ್ಲಿ ಸೊಗದಿಂದ ಮಲಗಿದ್ದ ನಮ್ಮ ಕಿವಿಯಲ್ಲಿ ಯಾರೋ ಸಿಡಿಲು ಸಿಡಿಸಿದಂತಾಗಿ ಸ್ವಪ್ನಂಗಳಾದ ನಾವೇ ದುಃಸ್ವಪ್ನ ಕಂಡ ಮಕ್ಕಳಂತೆ ಚಂಗನೆ ನೆಗೆದು ನಿಂತವು. ಭೀತ ಬೆರಗಿನಲ್ಲಿ ನೋಡಿದರೆ ಶಿವ ಶಿವಾ –

ಮೆಣಸಿನ ನೀರಿನ ಕಾರದುರಿ
ಸೆಗಣಿಗಂಜಳದ ಅವಮಾನದುರಿಗಳಿಂದ
ಯಕ್ಷಿ ಹೊತ್ತಿಕೊಂಡುರಿಯುತ್ತಿದ್ದಾಳೆ ಪಂಜಿನಂತೆ !

ಉರಿ ಉರಿ ಎಂದು ಕಿರುಚುತ್ತ
ಮೈ ಪರಚಿಕೊಳ್ಳುತ್ತ
ನಿಲ್ಲದೆ ಕೂರದೆ ನೆಗೆದಾಡುತ್ತ
ತಾರಾಮಾರು ಹಾರ್ಯಾಡುತ್ತಿದ್ದಾಳೆ ಯಕ್ಷಿ ಮಿಂಚಿನಂತೆ !

ಬೆಳ್ದಿಂಗಳು ಸೂಸುವ ಅವಳ ಮುಖ ಮೈಗಳಿಗೆ ಸೆಗಣಿ ಗಂಜಳವಂಟಿದೆ ! ಶಿವನೇ ಇದೇನಾಗಿದೆಯೆಂದು ಕಂಗಾಲಾಗಿ ನಿಂತಿದ್ದಾನೆ ಚಂದಮುತ್ತ ! ಶಕ್ತಿಗುಂದಿ ಬಾಯೆಂಜಲೊಣಗಿ, ಮಾತುಬಾರದೆ ಕೈಬಾಯಿ ಸನ್ನೆಯಲಿ ಯಾಕೆಂದು ಏನೆಂದು ಕೇಳಿದ್ದಕ್ಕೆ ಉತ್ತರ ಕೊಡದೆ ಮೈಯಲ್ಲಿ ಆವೇಶವಾದವರಂತೆ ನೆಗೆದಾಡುತ್ತಿದ್ದವಳ ಸಂತವಿಸಲೆಂದು ಸಮೀಪ ಹೋದರೆ “ಮುಟ್ಟಿದರೆ ಕೆಟ್ಟೀಯಾ” ಎಂದು ಆಕಾಶ ಹರಿವಂತೆ ಕಿಟಾರನೆ ಕಿರಿಚಿ ಎಚ್ಚರಿಸಿದಳು ಯಕ್ಷಿ. ಅವಳ ಮಾತೆಲ್ಲ ಬೆಂಕಿ ಹೊಳೆ, ಕಣ್ಣೆಲ್ಲ ಉರಿಯ ಮಳೆ. ಇಂಪಿರದ ಅವಳ ಮಾತಿಗೆ ಕಂಪಿಸಿತು ಚಂದಮುತ್ತನ ಕಾಯ. ಬೆವರುಜಲದಿಂದ ನೆಲ ತೊಯ್ದವು. ಏನು ಮಾಡಲೂ ತೋಚದೆ ನಮ್ಮಪ್ಪ ಶಿವನೇ ಕಾಪಾಡೆಂದು ಕರುಳು ಕಿತ್ತು ಬಾಯಿಗೆ ಬರುವಂತೆ ಎದೆ ಬಾಯಿ ಬಡಕೊಂಡು ಒದರಿ ಅಳುತ್ತಿದ್ದಾನೆ ಚಂದಮುತ್ತ.

ಆನಂದಗಳನುಂಡು ಬೆಳೆದ ಚಕೋರಿಯ
ಮುಖದರ್ಶನದಿಂದ ಸಂತೋಷವಾಗುತ್ತಿದ್ದ ನಮಗೆ
ಅವಳ ಕರಾಳ ಮುಖ ನೋಡಿ
ಕರುಳು ಹೊಸಕಿದ ಹಂಗಾಯ್ತು.
ಸರ್ವನಾದಂಗಳ ದೇವಿ
ಈ ಪರಿ ಅಪಸ್ವರದಲ್ಲಿ ಕಿರಿಚಿದ್ದನ್ನು ನಾವೆಂದೂ ಕೇಳಿರಲಿಲ್ಲ.
ಕೇಳಿಸಿಕೊಂಡ ಆಲದ ಅರಮನೆ
ಬೇರುಸಮೇತ ಥರಾಥರ್ನೆ ನಡುಗಿದ್ದ ಕಂಡೆವು.

ನೋವು ತಾಳದೆ ಚಕೋರಿ ಎಂಬ ಯಕ್ಷಿ
ವಿಕಾರವಾಗಿ ಒದರಿ
ಧಾರಾವತಿ ಕಣ್ಣೀರು ಜಲವ ಸುರಿಸಿದಳು.
ಹಸ್ತಗಳಿಂದ ಮೈ ಮುಟ್ಟಿಕೊಳ್ಳದೆ, ಸುಮ್ಮನಿರಲೂ ಆಗದೆ
ಏಳೇಳು ಲೋಕದ ಸಂಕಟಪಟ್ಟಳು.

ತುಟಿಕಚ್ಚಿ ಕಣ್ಣುಮುಚ್ಚಿ
ನೋವಿಗೆ ಗುರಿಯಾದ ಮೃದು ಮೈಯನ್ನ
ಕಲ್ಲಾಗಿಸಿ ಕಬ್ಬಿಣವಾಗಿಸಿ
ಕೊನೆಗೆ ವಜ್ರವಾಗಿಸಿ
ನೋವು ತಾಳಿಕೊಳ್ಳಲು ಯತ್ನಿಸಿದಳು.

ಶಿವನ ಜೊತೆ ವಾದ ಮಾಡುತ್ತಿರುವಂತೆ
ತನಗಾದ ದ್ರೋಹದ ಬಗ್ಗೆ
ಸಾರಿ ಸಾರಿ ತಕರಾರು ಹೇಳುತ್ತಿರುವಂತೆ
ಆಕಾಶದ ಕಡೆ ನೋಡಿ ಶಿವದುಃಖ ಮಾಡಿದಳು.

ನಿಜ ಹೇಳಬೇಕೆಂದರೆ
ಹೂವಿನಂಥ ಅವಳ ಮನಸ್ಸಿಗೂ
ಕೋಪದಲ್ಲಿ ಕುದಿಯುತ್ತಿದ್ದ ಅವಳ ಆಲೋಚನೆಗಳಿಗೂ
ಹೊಂದಾಣಿಕೆಯಿರಲಿಲ್ಲ.

ಬೆಳ್ದಿಂಗಳಂಥ ಯಕ್ಷಿ
ಇಂತೀಪರಿ ಕೊತ ಕೊತ ಕುದಿವುದೆಂದರೇನು?
ಕುದಿಯೋ ಬೆಳ್ದಿಂಗಳನ್ನ ಯಾರಾದರೂ ಕಂಡಿದ್ದೀರಾ?
ಅಳ್ಳೆ ಅರಳಿವೆ, ಕೋಪಗೊಂಡ ಗೂಳಿಯ ಕಣ್ಣಿನಂತೆ
ಕೆಂಡ ಕೆಂಡವಾಗಿವೆ ಕಣ್ಣು.
ಚಂದಮುತ್ತ ಆ ಕೆಂಡದಲ್ಲಿ
ಸುಡದ ಹಾಗೆ ನೋಡಿಕೋಬೇಕು.

ನೋಡಿದಿಯಾ ಶಿವನೆ,
ಹ್ಯಾಗೆ ಪರಚಿಕೊಳ್ಳುತ್ತಿದ್ದಾಳೆ ಹೃದಯವ?

ಯಾರನ್ನೋ ಶಪಿಸುವುದಕ್ಕಾಗಿ
ಅಧೋಲೋಕದ ಕರಾಳ ಶಬ್ದಗಳನ್ನ
ಹುಡುಕುತ್ತಿದ್ದಾಳೆ.
ಶಾಪಂಗಳು ಅವಳ ಬಾಯಿಂದ ಸಿಡಿಯುವ ಮುನ್ನ
ಶಾಪದೊಳಗಿಂದ ಹಸಿರಕ್ತ ಮಜ್ಜೆ ಮಾಂಸಗಳು
ಸಿಡಿದು ಹೊರಬರುವ ಮುನ್ನ
ಸತಿಯ ಸಂತವಿಸಿರೇ.

ಇರು ಇರು ದೇವೀ
ಅನುಚಿತವ ನೆನೆಯದಿರು.
ಬುದ್ಧಿತಪ್ಪಿದ ಮೇಲೆ ಪಶ್ಚಾತ್ತಾಪ ಪಡಬೇಡ.
ಈಗಲೇ ಎಚ್ಚರಾಗು.
ಇಲ್ಲಿ ಯಾರದೂ ತಪ್ಪಿಲ್ಲ
ಪುಣ್ಯಕೋಟಿ ಹಸುವೇನು ಮಾಡೀತು
ತಪ್ಪಿಸಿಕೊಂಡ ಕರು ನಿನ್ನ ಬಳಿ ಬಂದರೆ?
ಕರುವೇನು ಮಾಡೀತು
ಹಸುವಿನ ಒಡಲ ಹಂಬಲ ತಿಳಿಯದಿದ್ದರೆ?

ನಾಡು ನರಲೋಕದ ನಡಾವಳಿ ಬಲ್ಲವಳು ನೀನು.
ಮುಂದೆ ನಡೆವ ವಿಚಾರ
ಹಿಂದೆ ನಡೆವ ವಿಚಾರ ತಿಳಿದವಳು ನೀನು,
ನೀನಲ್ಲವೆ ನಿಭಾಯಿಸಬೇಕಾದವಳು?
ಕೋಪವ ಪಳಗಿಸು ದೇವೀ.

ನಮ್ಮ ನುಡಿ ಕೇಳಿ ಸಮಾಧಾನವಾಗಿರಬೇಕು ಇಲ್ಲವೆ ಮೈಯುರಿ ಕಮ್ಮಿಯಾಗಿರಬೇಕು. ಚಕೋರಿ ಎಂಬ ಯಕ್ಷಿ ಒಂದು ಸಲ ನಮ್ಮ ಕಡೆ ದಯಮಾಡಿ ನೋಡಿದಳಷ್ಟೆ. ಇನಿಸಿನಿಸಾಗಿ ಮುನಿಸಿಳಿಯಿತು. ಮುಳ್ಳಿರಲಿಲ್ಲ ನೋಟದಲ್ಲಿ. ಹುಬ್ಬು ಗಂಟಿಕ್ಕಿದುವು. ಮುಖದಲ್ಲಿ ಬೇರೆ ಬೇರೆ ಹಾವಭಾವ ಮೂಡಿದುವು. ನಮಗೆ ತೋರದೆ ಆ ಕಡೆ ಮುಖ ತಿರುಗಿಸಿದಳು. ಗಾಬರಿಯಾದೆವು ನಾವು. ಈಗ ನಮಗವಳ ಗಾಯಗೊಂಡ ಬೆನ್ನು ಮಾತ್ರ ಕಂಡಿತು. ಹೇಳಿದಳು:

ಇಲ್ಲಿಂದ ಈಗಿಂದೀಗ
ತೊಲಗಲಿ ಇವನು

ಹಿಂದೆ ಮುಂದೆ ಏನೇನೂ ಗೊತ್ತಿಲ್ಲದ ಚಂದಮುತ್ತ ಆ ಕಡೆ, ಈ ಕಡೆ, ಯಕ್ಷಿಯ ಕಡೆ, ನಮ್ಮ ಕಡೆ ಗಲಿಬಿಲಿಯಲ್ಲಿ ನೋಡುತ್ತ ಅಸಹಾಯಕನಾಗಿ ಅಂಗಲಾಚುವ ದೃಷ್ಟಿಗಳಿಂದ ವಿನಂತಿಸುತ್ತ ನಿಂತ. ನುಡಿದಾಡದೆ ಇಲ್ಲಿಂದ ತೊಲಗೆಂದು ನಾವು ಹಸ್ತಾಭಿನಯದಿಂದ ಹೇಳಿ ಸಪ್ಪಳಾಗದ ಹಾಗೆ ಅವನನ್ನ ಗೇಟಿನ ಕಡೆಗೆ ನಡೆಸಿದೆವು.

“ನಿಲ್ಲು”

ಎಂದಳು ಯಕ್ಷಿ ಉರಿನಾಲಿಗೆಯಿಂದ. ಅವಳಾಡುವ ನುಡಿ ಶಾಪವಲ್ಲದೆ ಬೇರೆ ಆಗಿರಲಾರದೆಂದು ಥರಾತರ್ನೆ ನಡುಗಿ ನಾವು ಯಾಕೆಂದು ಕೇಳುವ ಧೈರ್ಯ ಮಾಡಲಿಲ್ಲ. ಅವಳೇ ಹೇಳಿದಳು:

ಇಲ್ಲಿ ನೋಡಿದ್ದು ನೋಡಿದ ಲೆಖ್ಖಕ್ಕಿಲ್ಲ
ಇಲ್ಲಿ ಕೇಳಿದ್ದು ಕೇಳಿದ ಲೆಕ್ಖಕ್ಕಿಲ್ಲ.
ಇಲ್ಲಿ ಕಂಡದ್ದನ್ನು ಕಂಡೆನೆನ್ನಕೂಡದು
ಕೇಳಿದ್ದನ್ನು ಕೇಳಿದೆನೆನ್ನಕೂಡದು
ಇದ ಮೀರಿ ಯಾವನೊಬ್ಬನಿಗೆ ಹೇಳಿದರೆ
ಹೇಳಿದವನು ಕೇಳಿದವನಿಬ್ಬರೂ
ನಾಲಗೆ ಹಿರಿದು ಸಾಯುತ್ತಾರೆಂದು ತಿಳಿದಿರಲಿ.
ಹಿಂದಿರುಗಿ ಮಾತ್ರ ನೋಡದಿರಲಿ.

ಅವಳಾಜ್ಞೆ ಮುಗಿವುದನ್ನೇ ಕಾಯುತ್ತಿದ್ದ ನಾನು ಸಧ್ಯ  ಪಾರಾದೆವೆಂದು ಹಗುರು ಮನಸ್ಸಿನವರಾಗಿ ಚಂದಮುತ್ತನ್ನ ಆಲದ ಮರದಿಂದ ಕೆಳಗಿಳಿಸಿ ‘ನೇರ ನಿಮ್ಮ ಹಟ್ಟಿಯ ಯಕ್ಷಿಯ ಗುಡಿಗೆ ಹೋಗೆಂದು’ ಕಳಿಸಿದೆವು.