ಮೂರು ಹಗಲು ಮೂರು ರಾತ್ರಿ ನಡೆದು ಮಂಗಳವಾರ ಮಟ ಮಟಾ ಮಧ್ಯಾಹ್ನ ಚಂದಮುತ್ತ ಸೀದಾ ಯಕ್ಷಿಯ ಗುಡಿಗೆ ಬಂದಾಗ ಅಲ್ಲೇನಿದೆ?

ನರಮಾನವರ ಸುಳಿವಿಲ್ಲ
ಕಾ ಎಂಬ ಕಾಗೆಯಿಲ್ಲ, ಗೂ ಎಂಬ ಗೂಗೆಯಿಲ್ಲ.
ಮಳೆತಪ್ಪಿ ಮೇಲುಲೋಕದ ಮೇಘದಲ್ಲೇ ಇದೆ.
ಬೆಳೆತಪ್ಪಿ ಭೂಲೋಕದ ಮಣ್ಣಿನಲ್ಲೇ ಸುಟ್ಟುಹೋಗಿದೆ.

ಸುತ್ತೂ ಸೀಮೆಯ ಜಲ ಇಂಗಿ ನೆಲ ಬಿರಿದು
ಭಿಕೋ ಅಂತಿದೆ ಕಾಡು ನಾಡು ಒಣಗಿ.
ಯಾರೋ ಬೆಂಕಿ ಹಚ್ಚಿ,
ಈಗಷ್ಟೆ ನಂದಿದ ಹಾಂಗಿದೆ ಬಯಲು
ಓಡ್ಯಾಡುತಾವೆ ಬಿಸಿಲುಗುದರಿ !
ಕೊತಕೊತ ಕುದಿಯುತ್ತಿದೆ ಅಕಾಲದ ಬೇಸಿಗೆ.
ಮೌನದೊಳಗೆ ಹುಗಿದ ಹಾಗಿದೆ ಜಗವು.
ಕಂದಿಬಿಟ್ಟಿದೆ ಬೆಳಕು,
ಸುರಿಯುತ್ತ ಇದೆ ಹಾಳು ಹಾಳು.
ಇರುವೆ ಮೊದಲು ಆನೆ ಕಡೆ ಖಗಮೃಗ ಜಾತಿಯ
ಹೆಣಗಳಲ್ಲಲ್ಲೇ ಬಿದ್ದೈದಾವೆ.
ಹಿಂಗಿರುವಾಗ ಭೂಲೋಕ ಬದುಕೋದು ಹ್ಯಾಂಗೆಂದು
ಹಳೆದೇವರು ಶಕ್ತಿಗುಂದಿದವೇ ಶಿವನೇ ಎಂದು
ಬದುಕುಳಿದಿರುವ ಜೀವಸಂಕುಲ ಚಿಂತೆ ಮಾಡುತ್ತ ಇವೆ.

ಒಳಗೆ ಇಣಕಿ ನೋಡಿದರೆ ಮೈಗೆಲ್ಲ ಸೆಗಣಿ ಗಂಜಳ ಬಡಿದ ಯಕ್ಷಿಯ ಶಿಲಾಮೂರ್ತಿ ಬೆನ್ನುಮೇಲಾಗಿ ಬಿದ್ದುಕೊಂಡಿದೆ! ಚಂದಮುತ್ತನಿಗೆ ಎಲ್ಲವೂ ವೇದ್ಯವಾಯಿತು. ಯಾರೋ ಮಾಡಿದ ತಪ್ಪಿಗೆ ತನಗೆ ನಾಯಿನರಕವಾಯಿತೆಂದು ಖಾತ್ರಿಯಾಗಿ ಕೆನ್ನೆ ಕೆನ್ನೆ ಬಡಿದುಕೊಂಡ. ಕವಿಗೆ ಹರಳು ಹಚ್ಚಿಕೊಂಡ. ಆಮ್ಯಾಲೆ ದ್ವಾರಬಾಗಿಲಿನ ಕೊರೆಬೇಲಿ ತೆಗೆದು ಈಚೆ ಚೆಲ್ಲಬೇಕೆಂಬಲ್ಲಿ ಅಲ್ಲೊಂದು ಮುದಿಕೋತಿ ಕೂತಂಗಿತ್ತು. ವಿಸ್ಮಯಂಬಟ್ಟು ನೋಡಿದರೆ ಓಂ ಸಾವಳಗಿ ಶಿವ ಶಿವಾ – ಒಣಗಿದ ಮಲ್ಲಿಗೆ ಬಳ್ಳಿಯ ಗೂಡಿನಲ್ಲಿ ಸುಟ್ಟ ಕಾಡಿನಂತೆ ಕುಂತಿದ್ದಾಳೆ ಪುಣ್ಯಕೋಟಿ ಲಕ್ಕಬ್ಬೆ! ಅತ್ತು ಅತ್ತು ಕಣ್ಣೀರು ಖಾಲಿಯಾದಂಗಿತ್ತು ಆಕೆಯ ಮೂತಿ. ಚಂದಮುತ್ತನ ಕರುಳು ಕಿತ್ತು ಕಣ್ಣಿಗೆ ಬಂದು ಕಣ್ಣೀರು ಜಲ ಸಣ್ಣ ತೊರೆಯಾಗಿ ಹರಿಯಿತು. ‘ಅಬ್ಬೇ’ ಎಂದೊದರಿ ಓಡಿಹೋಗಿ ತಬ್ಬಿಕೊಂಡ. ಕೂಗಿಗೆಚ್ಚರವಾದ ಮುದುಕಿ ಕಣ್ಣು ತೆರೆವುದರೊಳಗೆ ಕಂದನ ಅಪ್ಪುಗೆಯಲ್ಲಿದ್ದಳು. ಸ್ಮೃತಿಯಾಯಿತು ನೋಡು, ಕಣ್ಣು ಭಗ್ಗನೆ ಹೊತ್ತಿಕೊಂಡವು. ಮಗನ ಕಂಡಳೇ – ಕೊಚ್ಚಿ ಹೋದವು ಅವಳ ದುಃಖ ದುಗುಡಂಗಳು. “ಬಂದೆಯಾ ಕಂದಾ” ಎಂದು ಚೀರಿ ಮೈಮ್ಯಾಲೆ ಆವೇಶವಡರಿ ಏಳೇಳು ಲೋಕದ ಆನಂದಪಟ್ಟಳು. ಕಣ್ಣಿಂದ ಮಗನ ಹೀರುವಂತೆ ನೋಡಿ ತಬ್ಬಿ ತೂಪಿರಿದು ನೆತ್ತಿಯ ಮೂಸಿ ಆನಂದದ ಆವೇಶ ಹಿಂಗದೆ ಬಂದವನು ಮಗ ಹೌದೊ, ಅಲ್ಲವೋ ಎಂದು ಮತ್ತೆ ಮತ್ತೆ ನೋಡಿ ಹೌದೆಂದು ಖಾತ್ರಿಯಾಗಿ ಮತ್ತೆ ಮತ್ತೆ ತಬ್ಬಿ ಬುದಿಂಗನೆ ಎದ್ದು ‘ಬಾ ಹಟ್ಟಿಗೆ’ ಎಂದು ಕೈಹಿಡಿದು ನಡೆದಳು. ಅಷ್ಟು ದೂರ ಹೋಗಿದ್ದವಳು ಯಕ್ಷಿಯ ನೆನಪಾಗಿ ದುಡುದುಡನೆ ಓಡೋಡಿ ಹಿಂದುರುಗಿ ಬಂದು ಬಾಗಿಲೆದುರು ಕೈಮುಗಿದು ನಿಂತು ‘ನಿನ್ನ ಮರೆತಿದ್ದೆ, ತಪ್ಪಾಯಿತೇ ತಾಯಿ; ಭಕ್ತಿಯ ಮಾಡಲು ಮಡಿಯಾಗಿ ಬರುತ್ತೇನಿರು’ ಎಂದು ದಿಂಡುರುಳಿ ಶರಣು ಮಾಡಿ, ಮಗನಿಗೂ ದಿಂಡುರುಳಲು ಹೇಳಿದಳು.

ಲಕ್ಕಬ್ಬೆಯ ಸಂತೋಷವನ್ನಾಚರಿಸಲು ಹಟ್ಟಿಯಲ್ಲಿ ಹೆಚ್ಚು ಮಂದಿಯಿರಲಿಲ್ಲ. ಇದ್ದವರೆಲ್ಲರ ಮನೆಮನೆಗೆ ಹೋಗಿ ಮಗ ಬಂದ ಸುದ್ದಿಯ ಸಾರಿ ಸಾರಿ ಹೇಳಿ ಮಾತು ನಡೆಸಿಕೊಟ್ಟಳೆಂದು ಭಕ್ತಿಯಿಂದ ಯಕ್ಷಿಯ ಹೊಗಳಿ ಯಕ್ಷಿಯ ಮೀಯಿಸಲು ನಾಳೆ ಬರಬೇಕೆಂದು ಆಮಂತ್ರಣ ನೀಡುತ್ತ ಬಂದಳು. ಹಟ್ಟಿಯಾಳ್ತನವ ಮಾಡುವ ಹೆಗಡೇರಿಗೆ ಕೈ ಎತ್ತಿ ನಮಸ್ಕಾರ ಮಾಡಿ ದಯಮಾಡಿಸಬೇಕಪ್ಪ ಎಂದಳು. ಕುಲಗುರುವಿನ ಪಾದ ಮುಟ್ಟಿ ಧರೆಗೆ ದೊಡ್ಡವನು, ಹರಕೆಯ ನಡೆಸಿಕೊಡು ನನ್ನಪ್ಪ ಎಂದು ಬೇಡಿಕೊಂಡಳು. ಶಿಷ್ಯನ ನೋಡಿ ಕುಲಗುರು ಆನಂದದಲ್ಲಿ ಮೈಮರೆತಿದ್ದರೆ ‘ಕಂದನ ಹರಸು ತಂದೇ’ ಎಂದು ಅವನ ಕೈತಗೊಂಡು ಬಾಗಿದ ಮಗನ ನೆತ್ತಿಯ ಮ್ಯಾಲಿಟ್ಟಳು.

ಮಾರನೆ ದಿನ ಬೆಳ್ಳಿಮೂಡುವ ಮೊದಲೇ ಸಿರಿಲಕ್ಕಬ್ಬೆ ಮತ್ತು ಚಂದಮುತ್ತ ತಣ್ಣೀರು ಮಿಂದು ಮೈಲಿಗೆ ಕಳೆದು ಒದ್ದೆ ಮಡಿಯುಟ್ಟರು. ಹರಕೆಯ ಸಾಮಾನು ಸರಂಜಾಮು ಸಜ್ಜು ಮಾಡುವಲ್ಲಿ ಬೆಳ್ಳಂಬೆಳಕಾಗಿ ಸಕಲಜನ ಕುಲಗುರು ಹೆಗಡೇರ ಸಮೇತ ಯಕ್ಷಿಯ ಗುಡಿಗೆ ಬಂದರು. ಗುಡಿಸಿ ಗುಡಿಯಂಗಳ ಸೆಗಣಿಸಾರಣೆ ಮಾಡಿ ಗಂಧದನೀರು ಸಿಂಪಡಿಸಿ ರಂಗೋಲಿ ಬರೆದರು ತಾಯಿ ಮಗ. “ನಿನ್ನಿಂದಧಿಕ ದೇವರಿಲ್ಲ ಬಿಡು” ಎಂದು ನೂರೆಂಟು ಗುಣಗಳಿಂದ ಯಕ್ಷಿಯ ಹೊಗಳುತ್ತ ಹಸುಗೂಸನ್ನ ಎರೆವಂತೆ ಯಕ್ಷಿಯ ಮೂರ್ತಿಯ ತೊಡೆಯ ಮ್ಯಾಲೆ ಚೆಲ್ಲಿಕೊಂಡು ಸಣ್ಣ ಯಕ್ಷಿಯ ಪಾತಾಳಗಂಗೆಯ ತಣ್ಣೀರಲ್ಲಿ ತೊಳೆದಳು ಅಬ್ಬೆ. ಆಮ್ಯಾಲೆ ಎಣ್ಣೆ, ಬೆಣ್ಣೆ, ತಿಳಿದುಪ್ಪದಲ್ಲಿ ಎರೆದು ನೂರೊಂದು ಚೊಂಬು ಬಿಸಿನೀರಿನಲ್ಲಿ ಸೀಗೆಯಿಂದೊಮ್ಮೆ ಶುದ್ಧ ಮಾಡಿದಳು. ಸಾಬೂನಿನಿಂದೊಮ್ಮೆ ಶುದ್ಧ ಮಾಡಿದಳು. ಬೆನ್ನುಜ್ಜಿ ಮೈಯುಜ್ಜಿ ಕೈ ಕಾಲು ಮುಖ ತಿಕ್ಕಿ ತಿಕ್ಕಿ ತೀಡಿ ಉಜ್ಜಿದಳು. ಕಿವಿ, ಕಣ್ಣು, ಮೂಗುಜ್ಜಿ ಮೂಗುತಿ, ವಾಲೆ, ಕೊರಳಸರ, ನೇವುಳ್ಳ, ಬೆರಳುಂಗುರುಗಳ ತಿಕ್ಕಿ ತಿಕ್ಕಿ ತೊಳೆದಳು. ಸೊಂಟದ ಡಾಬು ಕಾಲಿನ ಕಡಗ ಮುಂಗೈ ಬಳೆಗಳ ತಿಕ್ಕಿ ತೀಡಿ ತೊಳೆದಳು. ಆಮ್ಯಾಲೆ ನೂರೊಂದು ಚೊಂಬು ಬಿಸಿನೀರಿನಲ್ಲಿ ಬಿಸಿಮಾಡಿ ಆಮ್ಯಾಕೆ ಮೈ ಒಣಗಿಸಿ ಬಣ್ಣದಲ್ಲಿ ಮೇಲಾದ ಹಸಿರು ಗಿಣಿ ನೂರು ಬರೆದ ಇಳಕಲ್ ಬಣ್ಣವನುಡಿಸಿ ಗುಳೇದಗುಡ್ಡದ ಬಣ್ಣವ ತೊಡಿಸಿದಳು. ಹೆಗಡೇರು ಕೊಟ್ಟ ಚಿನ್ನದ ಕಣ್ಣು ಬೆಳ್ಳಿಯ ಮೀಸೆಯಿಟ್ಟಳು. ನೊಸಲಲ್ಲಿ ಚಂದ್ರನ ಬೊಟ್ಟಿಟ್ಟು ಕರಗಳ ಮ್ಯಾಲೆ ಗೀರುಗಂಧ ಬರೆದಳು. ತುರುಬಿಗೆ ಮಲ್ಲಿಗೆ ದಂಡೆ ತುರುಕಿದಳು. ಇಂತೀಪುರಿ ಚಿಕ್ಕ ಯಕ್ಷಿಯ ಶೃಂಗಾರ ಮಾಡಿ ತೆಂಗಿನ ಚಿಪ್ಪಿನಲ್ಲಿ ಕಪಿಲೆ ಹಸುವಿನ ತುಪ್ಪದ ಸೊಡರಿಟ್ಟು ಪೂಜೆಯ ಮಾಡಿದಳು. ಜನ ತಾಳ ಕುಟ್ಟಿ, ಜಾಗಟೆ ಬಡಿದು ಶಂಖ ಊದಿದರು. ಆಮ್ಯಾಲೆ ಎಂಟು ಕಾಲಿನ ಕುರಿಯ ಬಲಿ ಕೊಟ್ಟು ಬಾಡಿನ ನೈವೇದ್ಯ, ಕಳ್ಳಿನ ನೊರೆ, ಈಚಲ ರುಚಿಗಳ ಒಪ್ಪಿಸಿಕೊ ಎಂದು ನೀಡಿ ಅಡ್ಡಬಿದ್ದರು.

ಇಂತೀಪರಿ ಪೂಜೆ ಮುಗಿದು ಕಡ್ಡಿ ಕರ್ಪೂರ ಸುಟ್ಟು, ಹಣ್ಣುಕಾಯಿ ಅನ್ನ ಶಾಂತಿ ಪುಣ್ಯ ಫಲಗಳ ಎಲ್ಲರೂ ಹಂಚಿಕೊಂಡು ಊಘೇ ಚಾಂಗುಭಲಾ ಎಂದು ಶಬ್ದ ಸಡಗರದಲ್ಲಿ ಜನ ಎದ್ದೇಳುವ ಪ್ರಸ್ತಾವದಲ್ಲಿ ಯಕ್ಷಿಯ ಗುಡಿಯೇ ಕಿರಿಚಿದ ಹಾಗೆ ಕುಲಗುರು ಕಿಟಾರ್ನೆ ಕಿರಿಚಿದ ಶಿವನೆ! ಭೀತ ಮಂದಿ ಮತ್ತೇನು ಘೋರ ಬಂತೆಂದು ನೋಡಿದರೆ ಕುಲಗುರು ಥರಾಥರ್ನೆ ನಡುಗುತ್ತಿದ್ದ. ಅವನ ಮೈಯಲ್ಲಿ ಯಕ್ಷಿಯ ಆವೇಶವಾದದ್ದು ಜನಕ್ಕೆ ಬಹುಬೇಗ ಅರಿವಿಗೆ ಬಂದು ಹಿಂದಿದ್ದ ಹೆಗಡೆ ಮುಂದೆ ಬಂದು ಕೈಮುಗಿದು ನಿಂತ. ಲಕ್ಕಬ್ಬೆ ಚಂದಮುತ್ತ ಸಮೇತ “ಅಪ್ಪಣೆಯಾಗಲಿ ಘನಪಾದವೇ” ಎಂದು ಮೈಚೆಲ್ಲಿ ಕುಲಗುರುವಿನ ಪಾದ ಹಿಡಕೊಂಡು ಕುಂತರು. ಕುಲಗುರು ಆರ್ಭಟಿಸಿ ನಡುಗುವ ಶಬ್ದಂಗಳ ಗರ್ಜಿಸಿದ:

ನನ್ನ ಮಾತು ನಾನುಳಿಸಿಕೊಂಡೆ.
ಇನ್ನು ಮ್ಯಾಕೆ ಅತ್ತೆಯೆಂಬಾಕೆ
ತನ್ನ ಮಾತು ತಾನುಳಿಸಿಕೊಳ್ಳಲಿ!

ದಿಗಿಲಾಯಿತೆಲ್ಲರಿಗೂ, ಈಗ ಅತ್ತೆಯೆಂಬಾಕೆ ಲಕ್ಕಬ್ಬೆಯಲ್ಲದೆ ಬೇರೆ ಯಾರೂ ಅಲ್ಲ. ಅವಳು ಉಳಿಸಿಕೊಳ್ಳಬೇಕಾದ ಮಾತು ಯಾವುದೆಂದು ಜನ ತಂತಮ್ಮಲ್ಲಿ ಅಂದಾಡಿಕೊಂಡರು. ತಾನು ಕೊಟ್ಟ ಮಾತು ಆತ್ಮಕ್ಕೆ ಅರಿವಾಗಿ ಲಕ್ಕಬ್ಬೆಯ ಬೆವರು ಜಲ ಸಳಸಳ ಭೂಮಿಗಿಳಿದು ಕುಂತ ನೆಲ ಒದ್ದೆಯಾದವು. ಹತಾಶೆಯಿಂದ ಹೃದಯ ಪರಚಿ ಕೊಂಬಂತೆ ಎರಡೂ ಕೈಗಳಿಂದ ಎದೆ ಹಿಡಿದುಕೊಂಡು ನೆಲಮುಗಿಲಿಗೆ ತನ್ನ ದುಃಖವ ನಿವೇದಿಸಿಕೊಳ್ಳುವಂತೆ ಮ್ಯಾಲೆ ಕೆಳಗೆ ನೋಡಿದಳು. ಆಕಾಶ ದೇವರಲ್ಲಿ ಸಿಡಿಲಿಲ್ಲವೆ? ಇದ್ದರ್ಯಾಕೆ ನನ್ನ ಮ್ಯಾಲೆ ಬೀಳಬಾರದು? ಭೂಮಿಯ ದೇವ ದೈವ ಭೂತಂಗಳಲ್ಲಿ ನ್ಯಾಯವಿಲ್ಲವೆ? ಇದ್ದರ್ಯಾಕೆ ನನಗೆ ಸಿಗುತ್ತಿಲ್ಲ? ಎಂದು ಹಣೆ ಹಣೆ ಬಡಿದುಕೊಂಡಳು. ಅಷ್ಟರಲ್ಲಿ

“ನ್ಯಾಯ ನುಡಿ ಹೇಳಕೇಳೋರ್ಯಾರೂ ಇಲ್ಲವೆ ಈ ಹಾಳು
ಹಟ್ಟಿಯಲ್ಲಿ? ಜವಾಬ್ದಾರಿಯಿದ್ದವರು ನುಡಿಯಿರಯ್ಯಾ”

– ಎಂದು ಕುಲಗುರು ಆರ್ಭಟಿಸಿ ಅಳ್ಳೆ ಅರಳಿಸಿಕೊಂಡು, ಹಲ್ಲು ಕಡಿಯುತ್ತ ಅಗಲವಾಗಿ ಕಣ್ಣು ಕಿಸಿದು ಸುತ್ತ ನೋಡಿದ. ಗಾಬರಿಗೊಂಡರು ಮಂದಿ. ಮುಖದಲ್ಲಿ ಸೇಡು ಶಾಪಂಗಳ ಹಾವಭಾವಗಳು ಮೂಡಿ ಮುಳುಗಿದವು. ತಕ್ಷಣ ಹೆಗಡೆ ಲಕ್ಕಬ್ಬೆಗೆ ಗದರಿದ:

ತಾಯಿ ಹೇಳಿದ್ದು ನಿನ್ನ ಮಾತು ನೀನುಳಿಸಿಕೊ ಎಂದು

ಅದೇನೆಂದು ಮೊದಲು ಹೇಳು.

ಅಬ್ಬೆ :  ಮಗ ಒಂದು ವಾರದ ಮುದ್ದತಿನೊಳಗೆ
ಕ್ಷೇಮದಿಂದ ಗೂಡು ಸೇರಿದರೆ ನಿನಗೇ ಗುಡ್ಡ
ಬಿಡುವುದಾಗಿ ಬೇಡಿಕೊಂಡಿದ್ದೆ.
ದಿನಕ್ಕೊಂದು ಹರಕೆ ಹೊತ್ತು, ಸುತ್ತ ದೇವರಿಗೆ
ದುಬಾರಿ ಬೆಲೆತೆತ್ತು
ಮಗನ ಯೋಗಕ್ಷೇಮ ಆಯುಷ್ಯ ಅಭಿವೃದ್ಧಿಕೊಂಡಿದ್ದೇನೆ,
ಇಂಥಾ ಮಗನ್ನ ಯಕ್ಷಿಗೆ ಹ್ಯಾಗೆ ಗುಡ್ಡ ಬಿಡಲಿ ಶಿವನೆ?

ಹೆಗಡೆ : ಹರಕೆ ಹೊತ್ತವಳು ನೀನಲ್ಲವೆ?

ಅಬ್ಬೆ : ಹೌದು,

ಹೆಗಡೆ : ತೀರಿಸಬೇಕಾದವಳೂ ನೀನೇ ಅಲ್ಲವೆ?

ಅಬ್ಬೆ : ಲೋಕ ಲೌಕಿಕಳಯ್ಯ ನಾನು. ನನ್ನ ಮಾತಿಗೆ ಕೂಡ ಉಪ್ಪು, ಹುಳಿ ರುಚಿಯುಂಟು. ಧರ್ಮ, ಕರ್ಮ ಅರಿಯದೆ ಮಾತುಕೊಟ್ಟೆ.

ಇದ್ದೊಬ್ಬ ಮಗನ ದೈವಕ್ಕೆ ಅಡವಿಟ್ಟು
ನಾನು ಬರಿಗೈಯಲ್ಲಿ ಕೂತಿರಲೆ?

ಮಾನವನ ತಪ್ಪು ಲೆಕ್ಕಕ್ಕಿದೆಯೆ? ಇದೆಯೆಂದಾದರೆ –
ತಪ್ಪಿ ನುಡಿವ ಮಾತಿಗೆ ತಪ್ಪು ದಂಡ ಹೇಳು.
ಮಗನನ್ನ ಕೊಡೆಂದರೆ ಹ್ಯಾಗೆ? ಅರಿತವರು ನೀವು ಆಡಿರಯ್ಯಾ

ನುರಿತವರು ನೀವು ನುಡಿಯಿರಯ್ಯಾ.
ದೇವತೆಯೊಂದಿಗೆ ಈ ಪರಿ ಒಗೆತನ ಸಾಧ್ಯವೆ?

ಹೆಗಡೆ : (ಕೋಪದಿಂದ) ಹಾಗಂತ ವೈರ ಸಾಧ್ಯವೆ?
ನಮ್ಮ ದೇವಿ ಸೇಡುಮಾರಿ ಯಕ್ಷಿಯಲ್ಲ,
ಆಲ ಅವಳ ಮರ, ಗಿಣಿ ಅವಳ ಹಕ್ಕಿ
ಕಲೆಗೆ ಹ್ಯಾಗೋ ಹಾಗೆ ಒಲವಿಗೂ ದೇವತೆ ಅವಳು.
ಬಲಗೈಯಲ್ಲಿ ವರ ಕೊಡುವವಳು.
ನಮ್ಮ ಅಳತೆಗೆ ಮೀರಿದ ಸತ್ಯಗಳೆಷ್ಟೋ ಇದ್ದಾವೆ,
ದೇವಿ ನೋಡಿಕೊಳ್ಳುತ್ತಾಳೆ ಅವುಗಳನ್ನ.
ಹಟ್ಟಿಗೇನು ಸುಖವಿದೆಯೆ? ನೀನೇ ನೋಡು
ಮೊದಲೇ ಮಳೆ ಕಾಣದ ಬರಗಾಲ,
ಸುತ್ತ ದೇವರ ಕೋಪತಾಪ ಶಾಪಂಗಳೇ
ಸಾಕಷ್ಟಿರುವಾಗ
ಈ ಹೊಸದನ್ನ ಸಹಿಸುವ ಶಕ್ತಿ ಯಾರಿಗಿದೆ?
ಹೇಳಿದ ಹಿತನುಡಿ ಕೇಳು.
ಕೆಟ್ಟದ್ದನ್ನು ಯೋಚಿಸದೆ
ಕೊಟ್ಟ ಮಾತು ಉಳಿಸಿಕೊ – ಎಂದು ಕೋಪದಲ್ಲಿ ಗದರಿದ.

ಅಷ್ಟರಲ್ಲಿ ಕುಲಗುರು –

ಆಹಾಹಾ ಇನ್ನೂ ಒಪ್ಪಿಕೊಳ್ಳಲಿಲ್ಲವೆ ಅವಳು?
ಹಟ್ಟಿಯ ಸುಟ್ಟು ಭಸ್ಮ ಮಾಡುತ್ತೇನೆ….

ಎಂದು ಬಗಲ ಚೀಲಕ್ಕೆ ಕೈಹಾಕಿದ್ದೇ ತಡ ಲಕ್ಕಬ್ಬೆ ತಕ್ಷಣ ನಡುಗುವ ಕೈಗಳಿಂದ ಕುಲಗುರುವಿನ ಪಾದ ಹಿಡಿದು ದಮ್ಮಯ್ಯಾ, ದಕ್ಕಯ್ಯಾ ಎಂದು ನಿಜ ಒಪ್ಪಿ ದೀನಭಾವಗಳಿಂದ ಹೇಳಿದಳು:

ಆಯಿತಾಯಿತೇ ತಾಯಿ. ನನ್ನ ನುಡಿ ತಪ್ಪು
ನುಡಿದ ನಾಲಿಗೆ ತಪ್ಪು, ಸಮಾಧಾನ ಮಾಡಿಕೊ
ಸುಡುಸುಡುವ ಮಾತುಗಳ ಸುರಿಸಬ್ಯಾಡವೆ ತಾಯಿ, ಇಗೊ –
ಕೊಟ್ಟೆ ಮಗನ. ನಿನ್ನಡಿಗಿಟ್ಟೆ, ಸಿಟ್ಟು ಬಿಡು.

ಎಂದು ಹೇಳುವುದು ಹೇಳಿ ಉಳಿದುದ ನುಂಗಿದಳು.

ಈ ಮಾತು ಕೇಳಿದ್ದೇ ಕುಲಗುರು –

ಆಹಾಹಾ ಆನಂದ !
ಪರಮಾನಂದ !
ಶಿವಾನಂದ !

ಎಂದು ತಕ್ಕತೈ ಕುಣಿಯುತ್ತ –

“ಮಗನಿಗೆ ಕೀರ್ತಿ ಶಿಖರವ ಹತ್ತುವ
ಶಿವಯೋಗವಿದೆ. ಇಗೋ ಇಗೋ
ಬಂಡಾರ ತಗೊ ತಗೋ.”

– ಎಂದು ಹೇಳಿ ತಾನು ಮಗನ ಹಣೆಗೆ ಬಗಲ ಚೀಲದ ಬಂಡಾರ ಹಚ್ಚಿ ಕೇಳು ಇನ್ನೇನು ಬೇಕೆಂದ. ತಾಯಿ ಇದ್ಯಾವುದರೆಗ್ಗಿಲ್ಲದೆ ದೋಚಿದ ಮನೆಯಲ್ಲಿದ್ದಂತೆ ಕುಂತಿದ್ದಳು. ಹೆಗಡೆಗೆ ಪ್ರೋತ್ಸಾಹವಾಗಿ ಕುಲಗುರುವಿನ ಪಾದದ ಮ್ಯಾಲೆ ದೊಪ್ಪನೆ ಬಿದ್ದುರುಳಿ:

ಅಂಬಾ ಜಗದಂಬಾ
ನೀ ನಮಗ ತಾಯಿ
ಗತಿ ಯಾರಿಲ್ಲ ನಿನ್ನ ಶಿವಾಯಿ
ಮಳಿ ಕೊಟ್ಟು ನಮ್ಮನ್ನ ಕಾಯಿ

– ಎಂದು ಗಟ್ಟಿಯಾಗಿ ಪಾದ ಹಿಡಿದ. ಕುಲಗುರು ಹೆಗಡೆಯ ಹಣೆಗೆ ಬಂಡಾರ ಹಚ್ಚಿ

ಬರುವ ಹುಣ್ಣಿಮೆಯೆಂದು
ಅತ್ತೆಯ ಮಗ ಮಳೆರಾಗ ನುಡಿಸಿದರೆ
ಆಕಾಶದ ಮಳೆ ಅಬ್ಬರಿಸಿ ಬಿದ್ದಾವು
ಏಳೇಳು ಎದ್ದೇಳೆಂದು

– ಎಬ್ಬಿಸಿ ತಾನೂ ಎದ್ದು ನಿಂತು ಬಗಲ ಚೀಲದ ಬಂಡಾರವ ಚಾಂಗುಭಲಾ ಎಂದು ಆಕಾಶಕ್ಕೆ ಎರಚಿದ. ಎರಚಿದ್ದೇ ಆಯ್ತು ನೋಡು: ಹಾಳು ಬಿಸಿಲು ಹೊಂಬಿಸಿಲಾಗಿ ಅರಿಷಿಣದ ಮಜ್ಜನ ಮಾಡಿಸಿದಂಗಾಯ್ತು ಕಾಡಿಗೆ.