ಆಮ್ಯಾಲೆ ಆಳಾಗಲೇ ಇಲ್ಲ ಅಬ್ಬೆ;
ಆರಿಹೋಯ್ತು ಕಣ್ಣಲ್ಲಿಯ ಬೆಳಕು.
ಅನ್ನೋದಕ ಬಿಟ್ಟು
ಬೆನ್ನು ಹಚ್ಚಲೆ ಇಲ್ಲ ಹಾಸಿಗೆಗೆ.
ಕೊಟ್ಟಂತೆ ಮಾಡಿ ಕಸಿದ ಯಕ್ಷಿಯ ರೀತಿ
ಆರುವ ಬೆಂಕಿಯಲ್ಲಿ ಹುಲ್ಲೊಗೆದ ಹಂಗಾಗಿ
ಬೆಂಕಿ ಹತ್ತಿದ ಕಾಡಿನಂತಾದಳು ಮುದುಕಿ.

ಮಕ್ಕಳಾಗಿ, ಗೆಜ್ಜೆ ಕಾಲಿನ ಹಸುಗೂಸುಗಳಾಗಿ
ಗೂಡಿನ ಮೂಲೆ ಮೂಲೆಗಂಟಿದ್ದ ಕನಸುಗಳನ್ನ
ಕೋಲಿನಿಂದ ಹೊರಗಟ್ಟಿ
ದರೋಡೆಯಾದ ಮನೆಯಲ್ಲಿದ್ದಂತೆ
ಚಡಪಡಿಸಿದಳು ಮುದುಕಿ.

ಚಿತ್ತವೈಕಲ್ಯದ ಹುಚ್ಚಿಯ ಹಾಗೆ
ಕ್ಷಣ ನಕ್ಕು ದಿನವೆಲ್ಲ
ಹುಬ್ಬುಗಂಟಾದಳು ಮುದುಕಿ.

ವಂಶದ ಕುಡಿ ತನ್ನಿಂದ ಬೆಂದುಹೋದವೆಂದು
ಪುರಾತನರೆದುರು ಗೋಳು ಗೋಳೆಂದಾಡಿ
ಹಡೆದೊಡಲು ಜೋರಾಗಿ ಹೊಡೆದುಕೊಂಡಳು ತಾಯಿ.
“ನಿನ್ನ ದೃಢವ ಪರೀಕ್ಷೆ ಮಾಡಿದ ಮ್ಯಾಲೂ
ನಿನ್ನ ಹೆಸರುಗೊಳ್ಳುತ್ತೇನೆ ತಾಯೀ ಧೈರ್ಯದಿಂದ.
ನನ್ನ ದುರ್ಗುಣಗಳ ಬೇಕಾದಷ್ಟು ಸಾರಿ ಜಪಿಸು.
ನಮ್ಮ ಮುಕ್ಕೋಟಿ ತಪ್ಪುಗಳ ಮಾಫಿ ಮಾಡೋಳಲ್ಲವೆ ನೀನು?
ಮಗನ ನಿನ್ನಡಿಗಿಟ್ಟು ದುಃಖದ ಹಬ್ಬ ಮಾಡುತ್ತಿದ್ದೇನೆ
ಹುಚ್ಚಲ್ಲವೆ ತಾಯಿ ಇದು?
ಜಗತ್ತಿಗೆ ಬೇಕಾದ ಯಕ್ಷಿ ನೀನು.

 

ಚಂದಮುತ್ತನಿಗೆ ಮೊದಲು ಹುಟ್ಟಿದ
ಅಕ್ಕ ಅಣ್ಣ ಇಲ್ಲ.
ಮತ್ತೆ ಹುಟ್ಟಿದ ತಮ್ಮ ತಂಗಿಯರಿಲ್ಲ.
ಮಗ್ಗುಲಿಗೆ ಸೊಸೆಯಿಲ್ಲ.
ಮೊಳಕಾಲಿಗಂಟುವ ಮೊಮ್ಮಕ್ಕಳಿಲ್ಲ.

ಮಗನ ನಂತರ ನಂದಾದೀಪವ
ಉರಿಸುವ ಗತಿಗೋತ್ರ ಇಲ್ಲದ ವಂಶ
ಅದ್ಯಾತರದೇ ತಾಯಿ?
ಧಿಕ್ಕರಿಸಬೇಕದನು.
ಸುಡುವ ಈ ಸುಣ್ಣದಲಿ ಸಣ್ಣಾದನೇ !
ಕಣ್ಣಿಗಿಲ್ಲವೆ ನಿದ್ದೆ ನಿನ್ನ ಆಣೆ.
ಅನುಚಿತವಾಡಿದೆನೆನ್ನಬ್ಯಾಡ. ನಿನ್ನ ಹೆಸರಲಿ ವಂಶ ಬೆಳೆಸುತ್ತೇನೆ
ನನ್ನ ಕಂದನ ನನಗೆ ಹಿಂದಿರುಗಿ ಕೊಡೆ ತಾಯಿ”

– ಎಂದು ಸೆರಗೊಡ್ಡಿ ಬೇಡಿದಳು ಅಬ್ಬೆ.