ಅಬ್ಬೆಯ ವೇದನೆಯ ಭೇದಿಸಲಾಗಲೇ ಇಲ್ಲ ಚಂದಮುತ್ತನಿಗೆ. ತನ್ನನ್ನ ಗುಡ್ಡ ಬಿಟ್ಟದ್ದು ಅನುಕೂಲವಾಗಿ ಕಂಡರೂ ವ್ಯತ್ಯಾಸ ಕಾಣದೆ ಯಥಾತಥಾ ಇದ್ದ. ಏನಿದ್ದೇನು?

ಯಕ್ಷಿ ವಿರಹಿತ ಲೋಕ
ಸಾವಿಗಿನ್ನೊಂದು ಪರಿ
ಹುಗಿದ ಹಾಗಿದೆ ಜಗವು ಮೌನದೊಳಗೆ.

– ಎಂದು ಯಕ್ಷಿಯ ವಿಗ್ರಹದೆದುರು ಕುಂತು ಸೋತು ಮಾತಾಡಿದ. ಅವಳ ಕಲ್ಲಿನಂಥಾ ಮನಸು ಬೆಣ್ಣೆಸಮವಾಗಲೆಂದು ಬೇಡಿಕೊಂಡು ನಾಲಗೆಯಲ್ಲವಳ ನಾಮಸ್ಮರಣೆ ತೇದು ದೀನಭಾವಂಗಳಿಂದ ಅಂಗಲಾಚಿದ :

ಗಜಗಮನೆಯೇ ನಿನ್ನ ನಿಜವ ತಿಳಿದವರ್ಯಾರು?
ಅಬ್ಬೆಯ ತಪ್ಪಿಗೆ ನನ್ನ ಶಿಕ್ಷಿಸಬ್ಯಾಡ,
ಅಬ್ಬೆಯ ಮ್ಯಾಲೂ ಕೋಪ ಮಾಡಬ್ಯಾಡೆಂದ

ನಿನ್ನ ಬದಿಯಗಲಿ ನಾ ಅರೆಗಳಿಗೆ ಇರಲಾರೆ
ಸಿಡಿದು ಸಿಟ್ಟಲಿ ದೂಡಬ್ಯಾಡ ಹೊರಗೆ.
ಅನುಮಾನವ್ಯಾತಕ್ಕೆ ಮುನಿಸು ಮಾಣೇ ದೇವಿ
ನೆನೆದಂತೆ ಮಾಡುವೆ ಶಿವನ ಆಣೆ.

ರಚನೆಯ ಮಾತಲ್ಲ
ಅಸು ಹೋದರೂ ಹುಸಿಯಾಡುವವನಲ್ಲ
ಖಚಿತವಾದರೆ ನನ್ನ ವಚನವ ನಂಬು ಎಂದ.
ಮಾನಿನಿಯಳೇ
ಮಧುರ ವಾಕ್ಯದವಳೇ
ತಾವರೆಯ ಮುಖದವಳೇ
ತೆಳ್ಳಾನ ಹೊಟ್ಟ್ಯವಳೇ
ಪೂರ್ಣಳೇ, ಪರಿಪೂರ್ಣಳೇ ಎಂದು
ಒಂದು ನೂರಾ ಎಂಟು ಹೆಸರುಗಳಿಂದವಳ ಹೊಗಳಿದ.

ಇದಕೆ ಒಪ್ಪಿಗೆ ಉಂಟೆಂಬ ಇಲ್ಲೆಂಬ ಯಾವ ಸನ್ನೆಯೂ ಸಿಗದೆ ಒಂದೆರಡು ದಿನಗಳಲ್ಲಿ ತನ್ನಿಂದಾದ ತಪ್ಪು ಮನ್ನಿಸಿ ಮತ್ತೆ ಕರೆಕಳಿಸುವಳೆಂದು ಹದ್ದುಗೈ ಇಟಗೊಂಡು ಹಾದಿಯ ನೋಡಿದ. ಹುಣ್ಣಿವೆ ಬಂತೆಂದಾಗ ಹತಾಶನಾದ.

ಯಕ್ಷಿಯ ಲೋಕಕ್ಕೆ ಬಾಹಿರನಾದಾಗಿನಿಂದ ಹಾಡು ತನ್ನಿಂದ ಮಾಯವಾಗಿದೆಯೆಂದೇ ಅಂದುಕೊಂಡ. ಹಾಗೆಂದು ಹಾಡದಿರಲೂ ಸಾಧ್ಯವಿಲ್ಲೆಂದ. ಹುಣ್ಣಿವೆದಿನ ಶಿವಪಾರ್ವತಿಯರ ಹೆಸರುಗೊಂಡು ಮಳೆರಾಗ ಹಾಡುವುದೆಂದು ಕೃತನಿಶ್ಚಯವ ಮಾಡಿದ. ಮಾತು ಕೊಟ್ಟವಳು ಯಕ್ಷಿ. ಗೆಲ್ಲಬೇಕಾದ್ದು ಅವಳ ಸತ್ಯ. ಮಳೆ ಸುರಿಯತೇ ಹಟ್ಟಿಯ ಭಾಗ್ಯ. ಇಲ್ಲವೇ? ಅವಳ ಕೇಡು. ಶಿವಕಾರುಣ್ಯ ತೋರಿದ ಹಾಗೆ ನುಡಿಸುವುದು ನನ್ನ ಧರ್ಮ, ಒಂದಂತು ನಿಜ;

ಹಾಡಿಗೆ ಆಕಾಶದ ಮಳೆ ಸುರಿಯಬೇಕು.
ಆಲದ ಯಕ್ಷಿ ಒಲಿದು ಬರಬೇಕು.
ಬಂದರಿದೇ ಮೊದಲ ಹಾಡು.
ಇಲ್ಲವೇ? ಇದೇ ಕೊನೆಯ ಹಾಡೆಂದು
ಶಿವನ ಹೆಸರಿನಲ್ಲಿ ಆಣೆ ಪಂಥವ ಮಾಡಿದ.
ಕನಿಕರವಿದ್ದವರು ಕಾಯ್ದುಕೊಳ್ಳಲಿ
ಎಂದು ಎದ್ದ.