ಹುಣ್ಣಿವೆಯದಿನ ಕೋಳಿ ಕೂಗಿಗೆದ್ದು ಚಂದಮುತ್ತ ತಣ್ಣೀರು ಮುಳುಗೆದ್ದು ತಾಯಿ ಪಾದವ ಪಡಕೊಂಡ. ಕುಲಗುರುವಿನ ಪಾದದ ಮ್ಯಾಲೆ ಮೈ ಚೆಲ್ಲಿ ಪಾದಧೂಳಿಯ ಹಣೆಗಿಟ್ಟುಕೊಂಡಾಗ ಕುಲಗುರು ಅನುಮಾನದಿಂದ ಮಂಗಳವಾಕ್ಯವ ಅನುಗ್ರಹಿಸಿದ. (ಅನುಮಾನವಾಕ್ಯವೆಂದರೆ ತನಗೇ ಬಾರದ ಮಳೆಯರಾಗವ ತಾನು ಶಿಷ್ಯನಿಗೆ ಕಲಿಸಿಲ್ಲವಾಗಿ ಅವನು ನುಡಿಸುವುದು ಸಾಧ್ಯವೇ – ಎಂದು) ಮಳೆ ಬೀಳುವತನಕ ಗುಡಿಯ ಕಡೆಗ್ಯಾರೂ ಸುಳಿಯಬಾರದೆಂದು ಕೈಮುಗಿದು ಕೇಳಿಕೊಂಡು ಗುಡಿಗೆ ಹೊರಟ.

ಗುಡಿಯ ರಜವ ಗೂಡಿಸಿ ಗಂಧದ ನೀರು ಸಿಂಪಡಿಸಿ ರಂಗೋಲಿ ಹುಯ್ದು ಮಡಿಬಟ್ಟೆಯ ಯಕ್ಷಿಯ ಮುಂದಿಟ್ಟು ಹೊರಬಂದು ನಿಂತುಕೊಂಡ. ಹಿಂದಿನ ವಾಡಿಕೆಯಂತೆ ಯಕ್ಷಿ ಮಡಿ ಉಡಲಿಲ್ಲವಾಗಿ ಮೈಲಿಗೆ ಬಟ್ಟೆ ಹೊರಬೀಳಲಿಲ್ಲ. ಅಮಂಗಳವೆಂದು ಹೃದಯ ನಡುಗಿ ಉಸಿರುಗರೆದ. ಮೂರು ಬಾರಿ ಗುಡಿಯ ಬಲಗೊಂಡು ದಿಂಡುರುಳಿ ಯಕ್ಷಿಯ ವಿಗ್ರಹದೆದುರು ಕುಂತು ಕಣ್ಣೀರ ಧಾರೆಯ ಸುರಿದ. ಹೆತ್ತಯ್ಯ ಮುತ್ತಯ್ಯರ ನೆನೆದು, ತಂದೆ ತಾಯಿಯ ನೆನೆದು, ಕಪಿಲೆಯ ನೆನೆದು, ಸುತ್ತ ದೇವರ ನೆನೆದು ಕೊಳಲು ತುಟಿಗಿಟ್ಟ. ನಡುಗುವ ಬಿಸಿ ಉಸಿರನ್ನ ಒತ್ತಾಯದಿಂದ ಒಳಕ್ಕೆ ತಳ್ಳಿದಾಗ ಕೊಳಲು ಅರಚಿಕೊಂಡಿತು.

ರಾಗ ಸರಾಗವಾಗಿ ಸುರುವಾಗಲಿಲ್ಲ. ಉಸಿರು ಗಂಟಲಲ್ಲೇ ಹುಟ್ಟಿ ಸ್ವರ ತುಂಡು ತುಂಡಾಗಿ ಹೊರಬಂತು. ಕೊಳಲು ಕೆಳಗಿಟ್ಟು ಯಕ್ಷಿಯ ಶಿಲಾವಿಗ್ರವ ನೆತ್ತಿಗೆ ಹೊಡೆದುಕೊಂಡು ಪ್ರಾಣ ಬಿಡಲೇ? ಎಂದುಕೊಂಡ. ಕಲಾವಿದನಾಗಿ ತನ್ನ ಕೊನೆಯುಸಿರು ಕೊಳಲ ಮೂಲಕವೇ ಹೋಗಲೆಂದು ಗುರುಹಿರಿಯರ ಧ್ಯಾನಿಸಿ ಭೃಂಗೀಶನ ನೆನೆದು ಕೊಳಲು ತುಟಿಗಿಟ್ಟುಕೊಂಡ.

ಒಡೆದುಸಿರು ಬಿಗಿಹಿಡಿದು ಅಖಂಡವಾಗಿ, ಬಿರುಸಾದ ಉಸಿರ ನಿಯಂತ್ರಿಸಿ ನುಡಿಸಿದ. ನಾಭಿಯ ಕಮಲ ತೆರಕೊಂಡಂತಾಗಿ ಮರಳಿ ಯತ್ನವ ಮಾಡಿದಾಗ ಹದಗೊಂಡು ಮೂಡಿತು ರಾಗ. ಸರಾಗವಾಗಿ ಆಲಾಪವ ಸುರುಮಾಡಿದ. ಮ್ಯಾಲಿನ ಮಳೆಗಾಗಿ ಭೂಮಿಯ ಬಡ್ಡಿಬೇರಿನ ಆದಿಮ ಹಂಬಲವ ಆಲಾಪವಾಗಿ ನುಡಿಸಿ ಆಕಾಶದಲ್ಲಿ ವಿರಾಜಮಾನರಾಗಿದ್ದ ಮಳೆರಾಯನ ಪರಿವಾರವ ಜಾಗೃತಗೊಳಿಸಿದ. ಖಗಮೃಗಪ್ರಾಣಿ ತಿರ್ಯಕ್ ಜಂತುಜಾಲದ ಹೃದಯಪ್ರಾರ್ಥನೆಯನ್ನು ವಿಸ್ತರಿಸಿ, ಮಳೆರಾಯ ಸಮೇತ ದೇವಗಣ ಕರುಣೆಗೊಳ್ಳುವಂತೆ ಮಾಡಿದ. ಅವರವರ ಚಂದದ ನಡೆನುಡಿಗಳ ಅಲಂಕರಿಸಿ, ಅನುಕರಿಸಿ ಅವರು ಪ್ರಸನ್ನಗೊಳ್ಳುವಂತೆ ಮಾಡಿ, ಅವರೆಲ್ಲ ಮಳೆರಾಯನ ಸಂಕೇತಕ್ಕಾಗಿ ಕಾಯುವಂತೆ ಮಾಡಿದ. ಸಿದ್ಧರಾದ ಅವರೆಲ್ಲರಿಗೆ ನಮಿಸಿ ಮಳೆರಾಯನ ಪ್ರೌಢರಚನೆ ಸುರುಮಾಡಿದ.

ಕೊಳಲಿನ ಮೃದುಕಠಿಣ ಸ್ವಭಾವಂಗಳನರಿಯ ಮಳೆರಾಯನ ನೂರೆಂಟು ಹೆಸರುಗಳಿಂದ ಮಧುರ ನಾದಂಗಳಲ್ಲಿ ಸ್ತುತಿಸಿದ. ಕ್ಷಿತಿಜದಗುಂಟ ರಾಗಮಂಡಳ ಬರೆದು ಗುಡಿಯ ನಡುನೆತ್ತಿಯ ಆಕಾಶದಲ್ಲಿ ಪೀಠವ ರಚಿಸಿ ಅನುಗ್ರಹಿಸು ತಂದೇ ಎಂದು ಪ್ರಾರ್ಥಿಸಿದ್ದೇ ಆಯಿತು ಶಿವಾ,

ಬೀಸಿ ಬೀಸಿ ಬಂದವು ಕಾರ್ಗಾಳಿ
ಹುಯಿಲ್ಗಾಳಿ, ಹಿಂಡುಗಾಳಿಗಳು, ಮುಗಿಲ ತುಂಬ
ಮುಂಗಾರಮೋಡ ಕವಿದು
ಕಡುನೀಲಿ ಆಗಸ ಕಪ್ಪಿಟ್ಟಿತು.

ಯಾರೋ ಬಂಧಂಗಾಯ್ತು,
ನಾತಿದೂರ ನಾತಿಸಮೀಪ
ಸುಳಿದಾಡಿಧಂಗಾಯ್ತು.
ಸುತ್ತಲಿನ ಹವೆ ತಂಪಾಗಿ
ನೀರುಂಡ ನೆಲದ ಪರಿಮಳ ಸುತ್ತ ಪಸರಿಸಿತು.
ತಾನೀವರೆಗೆ ಕಾಣದ ನಾದರೂಪದ
ಭವ್ಯ ಸನ್ನಿಧಿಯಲ್ಲಿ ತಾನಿದ್ದಂತೆನಿಸಿ ರೋಮಾಂಚನಗೊಂಡು
ಕಂಪನಗೊಂಬ ಉಸಿರನ್ನ ಬಿಗಿ ಹಿಡಿದ.
ಭಯಭಕ್ತಿಯಿಂದ ಕುಂಚವನಾಡಿಸುವ ಕಲಾವಿದನಂತೆ
ನಾದವ ಎಳೆ ಎಳೆ ಬಿಡಿಸಿ ನುಡಿಸಿ
ಸುಳಿವ ದೇವತೆಯ ಮೂರ್ತಗೊಳಿಸಿದ.
ಆಕಾಶದ ನಾಲಿಗಿಲ್ಲದ ಗಂಟೆ ಡಣಿಲೆಂದು ಹೊಡೆದಾಡಿ
ಮಳೆರಾಯ ಪ್ರತ್ಯಕ್ಷನಾದ!

ಆನೆಗಾತ್ರ ಮತ್ತು ಬಣ್ಣಗಳಿಂದ ಮತ್ತು ಅಲೌಕಿಕ ಕಾಂತಿಯಿಂದ ಕೂಡಿದ ಅಜಾನುಬಾಹು, ಕಣ್ಣು ಮತ್ತು ನಗೆಗಳಲ್ಲಿ ಮಿಂಚಾಡಿಸುತ್ತ ಪ್ರಸನ್ನವಾಗಿ ಕಾಣಿಸಿಕೊಂಡ. ಕೈಯಲ್ಲಿ ವಜ್ರಾಯುಧ ಫಳ ಫಳ ಹೊಳೆದಾಡಿತು. “ಭಲೇ ಹುಡುಗಾ, ಮೆಚ್ಚಿದೆ ನಿನ್ನ ಕಲೆ ಮತ್ತು ಭಕ್ತಿಯ ಮೆಚ್ಚಿದೆ, ಇಗೋ” ಎಂದು ಡೊಳ್ಳುಬಾರಿಸಿದಂತೆ ಪ್ರಕಟದನಿಯಲ್ಲಿ ನಕ್ಕು ನುಡಿದು ಆಶೀರ್ವದಿಸಿ ಮಾಯವಾದ. ಆಮ್ಯಾಲೆ ಸುರುವಾಯಿತು. ಶಿವಾ, ಮೋಡಗಳ ಕಾಡಾನೆ ಹಿಂಡು ಆಕಾಶದಲ್ಲಿ ಘೀಳಿಟ್ಟವು.

ಗುಡುಗುಡು ಗುಡುಗಿತ್ತು
ಮಿಂಚು ಮಿಡುಕಾಡಿತ್ತು
ಸುರಿಮಳೆ ಸುರಿದಿತ್ತು ಸತ್ತೂ ಕಡೆ.
ಕಾರೆಂಬ ಕಾರ್ಮಳೆ
ಭೋರೆಂಬ ಭೋರ್ಮಳೆ
ಗಿಂಡಿಗಾತ್ರದ ಹನಿಯ ಭಾರೀ ಮಳೆ.
ಆಕಾಶದಣೆಕಟ್ಟು
ಒಡೆಧಾಂಗ ಜಡಿದಾವು
ನೆಲಮುಗಿಲು ಬೆಸೆದಾವು ಸುರಿಮಳೆಗೆ
ಚಂದಮುತ್ತನ ಹಾಡು
ಮುತ್ತಿನ ಮಳೆಯಾಗಿ
ಸುರಿದಾವು ತಂಪಾಗಿ ಭೂಮಿಯ ಧಗೆ.

ಇಂತೀ ರೀತಿ ಹೇಳಿ ಕಳಿಸಿದ ಹಾಗೆ ಮಳೆ ಬಂದು ಧೋ ಧೋ ಸುರಿದರೆ ಕನಸುಗಳಾದ ನಮ್ಮ ಗತಿಯೇನಾಗಬೇಡ ಶಿವಾ.

ಕೊಳಲಿನ ಉಲಿಗಳ ಹೊಳಿಗಳ ಹರಿಸಿದ
ನಾವು ಎಳಿಮೀನಾಗಿ ತೇಲಿ
ಸಿಕ್ಕೇವು ಸೆಳವೀಗೆ ಸುಳಿವೀಗೆ ತಿರುಗಣಿಗೆ
ಸಿಕ್ಕsವು ನಮಗ್ಯಾವ ದಂಡಿ.

ಆಳ ತಿಳಿಯದು ಕೊಳಲ ಗಾಳ ತಳಿಕ್ಯಾಡುವವು
ಕರಿಯ ಗೂಢಗಳನ್ನ ತಟ್ಟಿ.

ಚಂದಮುತ್ತನ ಹಾಡಿನ್ನೂ ಮುಗಿದಿರಲಿಲ್ಲ. ಈ ತನಕ ಕುಲಗುರುವಿನ ಆದೇಶದಂತೆ ದೂರದಲ್ಲಿ ಕಾಯುತ್ತಿದ್ದ ಜನ ಭರ್ಜರಿ ಮಳೆಯಲ್ಲಿ ನೆಂದು ಈಗ ಆನಂದಗಳ ತಡಕೊಳ್ಳಲಾರದೆ ಇದ್ದಲ್ಲಿಂದ ಓಡಿಬಂದು ನಮ್ಮಪ್ಪಾ ಚಂದಮುತ್ತಾ ಎಂದು ಅವನನ್ನೆತ್ತಿಕೊಂಡು ಕೇಕೆ ಹಾಕಿ ಕುಣಿಯತೊಡಗಿದರು. ಇಡೀ ಹಟ್ಟಿಯ ಜನ, ಮಕ್ಕಳು, ಮುದುಕರು, ಗಂಡು ಹೆಣ್ಣೆನ್ನದೆ ಕುಲಗುರು ಮತ್ತು ಹೆಗಡೆ ಸೈತ ಆನಂದದ ಉನ್ಮಾದವೇರಿ ಚಂದಮುತ್ತನಿಗೆ ಚಾಂಗುಭಲಾ ಹೇಳುತ್ತ ತಕ್ಕತೈ ಕುಣಿದರು.

ಈತನಕ ಹ್ಯಾಗೆ ಹ್ಯಾಗೋ ಇದ್ದ ಲಕ್ಕಬ್ಬೆ ಈಗ ಮಗನ ಪವಾಡಕ್ಕೆ ಆನಂದದ ಬೆರಗೇರಿ ಓಡೋಡಿ ಹೊರಬಂದು ಅಂಗಳದಲ್ಲಿ ಎಡವಿ ಬಿದ್ದು ಕಾಲುಳುಕಿ ಕುಂಟುತ್ತ ಗೂಡು ಸೇರಿ, ಉದ್ರೇಕದಲ್ಲಿ ತಾನೊಬ್ಬಳೇ ಕಿರಿಚಿ ಕಿರಿಚಿ ಮಾತಾಡುತ್ತ ಮಗನ ದಾರಿ ಕಾದಳು.

ಜಡಿಮಳೆಯಲ್ಲಿ ಜನ ಮೂರು ತಾಸು ರಾತ್ರಿಯಾಗುವತನಕ ಕಿರಿಚಿ ಒದರಿ ಕೇಕೆ ಹಾಕಿ ಕುಣಿದು ಕುಪ್ಪಳಿಸಿ ಮಳೆಯ ಅಬ್ಬರ ಕಮ್ಮಿಯಾದ ಮ್ಯಾಲೆ ಸಕಲ ಗೌರವ ಮರ್ಯಾದೆಗಳೊಂದಿಗೆ ಚಂದಮುತ್ತನ್ನ ಅವನ ಗೂಡಿಗಿಳಿಸಿ ಲಕ್ಕಬ್ಬೆಯ ಕಾಲುಮುಟ್ಟಿ ನಮಸ್ಕರಿಸಿ ಹೋದರು. ಅಬ್ಬೆಗೆ ಮಾತೇ ಬರಲೊಲ್ಲದು. ಏನೇನೋ ಅಸಂಗತ ಕಿರಿಚುತ್ತ ಮಗನಿಗೆ ನೂರು ಸಲ ದೃಷ್ಟಿ ತೆಗೆದಳು. ನೂರು ಸಲ ತಬ್ಬಿ ತೂಪಿರಿದು ಮುದ್ದಾಡಿದಳು. ಮಗನ ಮುಖದ ಮ್ಯಾಲೆ ನೂರು ಕಪ್ಪಿನ ಬೊಟ್ಟಿಟ್ಟಳು. ಮಗನ ಕೀರ್ತಿಯ ಸುಖದಲ್ಲಿ ಪರವಶಳಾಗಿ ಹಾಗೇ ಮಲಗಿದಳು.

ಸಪ್ಪಟ ಸರಿರಾತ್ರಿ ಗೂಡೆಲ್ಲ ನೀರು ನೀರಾಡಿ ಅಬ್ಬೆಯನ್ನು ಹೊರಸಿನ ಮ್ಯಾಲೆ ಮಲಗಿಸಿದ ಚಂದಮುತ್ತ. ಯಕ್ಷಿಯ ಕೃಪೆಯಾಗಲಿಲ್ಲೆಂಬರಿವು ಇದ್ದುದರಿಂದ ಜನರ ಹೊಳೆವ ಮಾತುಗಳಿಂದ ಸಮಾಧಾನವಾಗಲಿಲ್ಲ. ಈಗ ಒಬ್ಬಂಟಿ ಆಗಿದ್ದನಲ್ಲಾ ನೆನಪಾಗಿ ಕಣ್ಣೀರು ಮತ್ತು ಜಗುಳಿ,

ಇರಲಾರೆ ಆಕೆಯ ಹೊರತ
ಲೋಕ ಸುಂದರಿಯನ್ನ ಮರೆತಾ.

ಎಂದು ನಿಟ್ಟುರಿಸಿಟ್ಟ. ಕೊಟ್ಟಿಗೆಯಲ್ಲಿ ಕಪಿಲೆ ಚಡಪಡಿಸಿ ವಿಚಿತ್ರವಾಗಿ ಅರಚಿದ್ದ ಕೇಳಿ ಅವಸರವಸರವಾಗಿ ಹುಲಿ ಬಂದಿರಬೇಕೆಂದು ಹೊರಬಂದ. ಆಕಾಶ ಹಗುರವಾಗಿ ಮೋಡಗಳಲ್ಲಿ ಚಂದ್ರ ಮೂಡಿ ಮಂದ ಬೆಳ್ದಿಂಗಳಿತ್ತು.

ಆಕಾಶಲೋಕದ ಅಸಮಾನ ಹೂವು
ಭೂಮಿಯ ಮ್ಯಾಲರಳಿ
ಅತಿಶಯದ ಕುಸುಮದ ವಾಸನೆ
ಪಸರಿತ್ತು ಇಡೀ ಸೀಮೆ.

ಕೊಟ್ಟಿಗೆಯ ಸೂರಿನಡಿ ಯಾರೋ ನಿಂತಿದ್ದರು ತುಪ್ಪದ ದೀಪದ ಹಾಗೆ. ಎದೆ ಢವ ಢವ ಹೊಡೆದುಕೊಂಡು ‘ಎಲ್ಲವೆಲ್ಲವೂ ಹಲುಮನವೆ ಥರಥರಗುಡಬ್ಯಾಡ. ನಡುಗಿ ನಲುಗಲು ಬ್ಯಾಡ’ ಎಂದು ತಂತಾನೆ ವಿವೇಕಿಸಿಕೊಂಡು ಒಂದೆರಡು ಹೆಜ್ಜೆ ಮುಂದೆ ಹೋದ. ಬಾಯ ಶಬ್ದ ನಿಶ್ಶಬ್ದವಾಗಿ ಕಣ್ಣು ದೊಡ್ಡದು ಮಾಡಿ ಲಿಖಿತ ಚಿತ್ರದ ಹಾಗೆ ನಿಂತ.

ಮೂಕತನದ ಮುಸುಕಿನಲ್ಲಿ
ನಿಂತುಕೊಂಡಿದ್ದಾಳೆ ಕಾಮನ ಚೂರಿ
ಚಕೋರಿ ಎಂಬ ಯಕ್ಷಿ!
ಸ್ಥಾವರವೆಲ್ಲವೂ ಜಂಗಮವಾದವು
ಯಕ್ಷಿಯ ನೋಟ ಮುಟ್ಟಿದರೆ.
ಮೈಯಂತ ಮೈಯೆಲ್ಲ ಜಗಜಗ ಹೊಳೆದಿದೆ
ಸ್ವಂತ ಬೆಳ್ದಿಂಗಳಿದೆ ಸುತ್ತ.
ಮೈತೊಯ್ದು ಒದ್ದೆ ಮುಖ
ತೊಯ್ದು ಮೈಗಂಟಿದ ದಟ್ಟಿಯಲ್ಲಿ
ಒಡೆದು ಕಂಡವು ಬೆಡಗಿನ ಹೊಂಗೊಡ ಕುಚ.
ತಡಮಾಡದೆ ನೆರಿಗೆಯ ಹಿಂಡಿ ಸರಿಪಡಿಸಿ
ಕಿರಿಗಂಟು ಕಟ್ಟಿ
ಬಡನಡುವ ಸಂವರಿಸಿಕೊಂಡಳು.

ಕಟ್ಟಿದ್ದ ಮುಡಿ ಸಡಲಿ ಬೆನ್ನಿಗಿಳಿದ
ಕಾಳನೀಳ ಕೇಶರಾಶಿಯಿಂದ ಹೂ ಜಗುಳಿ
ಎಳೆಯ ಕುಂತಳದಿಂದ ಮಳೆಯ ಹನಿ ಜಿನುಗಿ
ಕುಡುತೆಗಂಗಳ ದೊಡ್ಡದು ಮಾಡಿ
ಬೆದರಿದೆರಳೆಯ ಪರಿ ನಿಂತಿದ್ದಳು
ಮಾರಿ ಸಣ್ಣದು ಮಾಡಿ.
ಅಂಗನೆಯ ಅಂಗಾಲಿನಲ್ಲಿ ಕುಂಕುಮವಿತ್ತು.
ಮುಖದಲ್ಲಿ ಹಿಂಗದ ಬೆಳುದಿಂಗಳು.
ಪದುಮದ ದಳದಂತೆ ಕೆಂಪಗಿದ್ದವು ಕೆನ್ನೆ
ಅದುರಿದವು ಹವಳದುಟಿ ಚಳಿಗೆ.
ನೆಲವನುಂಗುಟದಿಂದ ಬರೆದಳೊಮ್ಮೆ.

ನಮಗಿಷ್ಟೇ ಬೇಕಿತ್ತು, ಯಾವಾಗ ಇಬ್ಬರೂ ಜಗಳ ಮರೆತು
ಕೂಡಿಯಾರೆಂದು ಕಾತರಿಸುತ್ತಿದ್ದ ನಮಗೆ ಇದಕ್ಕಿಂತ ಆನಂದದ
ಸಂಗತಿ ಏನಿದೆ? ತಕ್ಷಣವೆ ನುಗ್ಗಿ ಇಬ್ಬರ ಮಧ್ಯೆ ಮತ್ತೆ ಜಗಳ
ಬರದಿರಲೆಂದು – ಪೌರೋಹಿತ್ಯ ವಹಿಸಿದೆವು.

ಎದೆಯ ಬಾಗಿಲು ತೆರೆದು ಒಳಗ ಕರಕೊಳ್ಳಿರಿ
ಎಡವುದು ಬ್ಯಾಡ ಹೊಸ್ತಿಲದೊಳಗ.
ಮೆಲ್ಲಗ ಮಾತಾಡಿ ಮೈಮ್ಯಾಲ ಕೈ ಇಡರಿ
ವಿಶ್ವಾಸ ಮೂಡಲಿ ಒಳಗೊಳಗ.

ನಮ್ಮ ಹಿತನುಡಿ ಕೇಳಿ
ಬೆದರಿದ ಕುರಂಗಾಕ್ಷಿ
ಮದನ ಕದನಾಪೇಕ್ಷಿ
ಕಿಡಿ ತಗಲಿದರೆ ಸಿಡಿವ ಮುದ್ದಿನ ಕುಡಿಕೆಯಂಥ ಯಕ್ಷಿ
ಒಮ್ಮೆ ವಾರಿನೋಟ ಬೀರಿದಳು ನೋಡು ಹುಡುಗನ ಕಡೆಗೆ –
ಚಂದಮುತ್ತ ಥರಾಥರನೆ ನಡುಗಿ
ನಿನ್ನ ಕುರಣೆಯ ಹರಣ ದೇವೀ ಎಂದು
ಓಡಿ ಹೋಗಿ ದಿಂಡುರುಳಿ
ಪುಳಕಜಲದಲಿ ಅವಳ ಪಾದ ತೊಳೆದ.

ಎಲ್ಲಿದ್ದನೋ ಮಾರಾಯ ಮಾರ,
ಸಕ್ಕರೆ ಬಿಲ್ಲಿನ ಹೆದೆಯ ಶಕ್ತಿಂದ ಕರ್ಣಕೆ ಸೆಳೆದು
ಪಂಚೈದು ಬಾಣಗಳ ಹೊಂಚಿ ಬಿಟ್ಟ ನೋಡು –
ತಬ್ಬಿಬ್ಬಾದರಿಬ್ಬರೂ.