ಮಾರನೆಯ ಬೆಳಿಗ್ಗೆ ಕೂಡ ನಿನ್ನೆಯ ಆನಂದದ ಅಮಲಿನಿಂದ ಹೊರಬರಲಿಲ್ಲ ಅಬ್ಬೆ. ಕಪಿಲೆ ಚಡಪಡಿಸಿತ್ತು ಬೆಳ್ಳಬೆಳಗು. ಯಾರೊ ಸುಳಧಂಗಿತ್ತು ಕೊಟ್ಟಿಗೆಯ ಬಳಿಯಲ್ಲಿ. ಯಾರೆಂದು ತಿಳಿಯದೆ, ಯಾರೂ ಇರಲಿಲ್ಲವೆಂಬ ಭಾವ ಗಟ್ಟಿಯಾಗದೆ, ಇದ್ದರೆಂಬ ನಂಬಿಕೆ ಹೋಗದೆ – ಅಂತೂ ಭ್ರಾಂತುಭಾವದಲ್ಲಿ ಮಗನನ್ನೇ ಕೇಳಬೇಕೆಂದಳು. ಅವನಾಗಲೇ ಹೊರಗೆ ಹೋಗಿದ್ದರಿಂದ ಹ್ವಾರೆಗೆ ತೊಡಗಿದಳು.

ಬೆಳಗುವ ಪ್ರಾಯದ ಮಗನಿಗಿಂತ ಮುಂಚೆ ಅವನ ಪರಿಮಳದ ಗಾಳಿ ಬೀಸಿ ಗೂಡಿನ ತುಂಬ ಪಸರಿಸಿತು. ಲೋಕವ್ಯಾಪಾರ ಮರೆತವರಂತೆ, ಇನ್ಯಾವುದೋ ಲೋಕಾಂತರಕ್ಕೆ ಸಂಯಮಿಸಿ ಹೂವು ಹುಡದಿಯ ಒಳಗೆ ಹುಡದಿಯಾಡಿ ಬಂಧಂಗಿದ್ದ. ಅಬ್ಬೆಯ ನೋಡಿ ಹೆದರಿ ಬೆವರಿಳಿದು ತಬ್ಬಿಬ್ಬಾದ. ಹೌದೆಂಬ ನಡೆನುಡಿಯ ಮಗ ಇಂದ್ಯಾಕೆ ಹೀಗೆಂದು, ಕಣ್ಣಲಿನ್ನೂ ನಿನ್ನೆಯ ದಣಿವಿದೆಯೆಂದು –

‘ಮಿಂದೆಯ ಕಂದಾ?’

ಎಂದಳು.

‘ಇಗೊ ಮಿಂದು ಬಂದೆ’

ಎಂದು ತಾಮಸದ ನಿವೃತ್ತಿಯ ಮಾಡಿ ಲಂಗೋಟಿಯ ತಗೊಂಡು ದುಡುದುಡುನೆ ಹೊರಗೋಡಿದ. ಹಂಗಿದ್ದರೀವರೆಗೆಲ್ಲಿ ಹೋಗಿದ್ದನೆಂದು ಯೋಚಿಸಿ, ಬಗೆಹರಿಯದೆ ಅಡಿಗೆಗಿಟ್ಟಳು.

ಮಗ ಬಂದು ಭಕ್ತಿಗೆ ವಿಭೂತಿಯ ಹಚ್ಚಿಕೊಂಡು ದೇವರ ಬಿಲದೆದುರು ನಿಂತು ಶಿವಪೂಜೆ ಶಿವಗ್ಯಾನವ ಮಾಡಿ ನೂರೆಂಟು ಸಲ ಶಿವನಾಮವ ಹೊಗಳಿ ಬಂದ. ಲಕ್ಕಬ್ಬೆ ಮಗನ ಚೆಲ್ವಿಕೆಯ ಚೋದ್ಯವ ನೋಡಿ ಅಭಿಮಾನದಲ್ಲಿ ಮೈಮರೆತು ನಿಂತಿದ್ದವಳು ಮಗನನ್ನ ಯಕ್ಷಿಗೆ ಗುಡ್ಡ ಬಿಟ್ಟ ವೃತ್ತಾಂತ ನೆನಪಾಗಿ ನಿಟ್ಟುಸಿರಿಟ್ಟು ಕೈಹಿಡಿದು ಮಗನ ಒಲೆಯ ಬಳಿಗೆ ಕರೆದೊಯ್ದಳು. ಹಾಲು, ಅನ್ನ, ಜೇನು, ಬೆಲ್ಲ, ಪಾಲು ಪಂಚಾಮೃತದ ಅಡಿಗೆಯ ನೀಡಿ ತಾನೇ ತುತ್ತು ಮಾಡಿ ತಿನ್ನಿಸುವಾಗ ನೋಡಿದರೆ – ಮುಖದ ತುಂಬ ಗಾಯಗಳಾಗಿವೆ ಮಗಂಗೆ! ಚಂದ್ರಾಮನಂಥ ತಿಳಿಯಾದ ಮೋರೆಯಲಿ ಕಲೆ ತೋರಿವೆ!

ಕೆನ್ನೆ ಕತ್ತಿನ ಮ್ಯಾಲೆ ಮುದ್ದಿನ ಗಾಯ
ಗಲ್ಲತುಟಿಗಳ ಮ್ಯಾಲೆ ಹಲ್ಲೂರಿದ ಗಾಯ
ಮೈತುಂಬ ಕಂಡಾವು ಚೆಳ್ಳುಗುರು ಗಾಯ
ಮಾದಕದ ನೋಟಗಳು ನೆಟ್ಟ ಎದೆಗಾಯ!

ಅವ್ವಾ ಕಣ್ಣಿನ ತುಂಬ ಕನಸುಗಳ ಗಾಯ
ಕಿವಿಗಳ ತುಂಬ್ಯಾವು ಗಳರವದ ಗಾಯ
ಹೃದಯದ ತುಂಬೆಲ್ಲ ಆನಂದಗಳ ಗಾಯ
ಮನಸಿನ ತುಂಬೆಲ್ಲ ನೆನಪುಗಳ ಗಾಯ !

ಮಗಂಗೆ ಹೆಣ್ಣುಗಾಳಿ ಬೀಸಿರಬಹುದೇ? ಹಾಂಗಿದ್ದರೆ ನನಗೆ ತಿಳಿಸದೆ ನನ್ನ ಉಡಿಯಿಂದ್ಯಾರು ಕದ್ದೊಯ್ದರು ಕಂದನ್ನ?

ಯಕ್ಷಿಯ ನೆನಪಾಗಿ ಸಳಸಳ ಬೆವರು ಜಲವಿಳಿದು ನೆಲ ತೊಯ್ದವು. ಇಲ್ಲಿಲ್ಲ ಹಂಗಾಗಿರಲಾರದೆಂದು, ಆಮ್ಯಾಲೆ ಮಗನ ಕೇಳಿದರಾಯ್ತೆಂದು ತನ್ನ ತಾನು ವಿವೇಕಿಸಿಕೊಂಡು ಸುಮ್ಮನಾದಳು.