ಬರಬಾರದ ಜಡಿಮಳೆ ಜಡಿದು ಕೊಚ್ಚಿಹೋದವು ನೋಡು ಧರೆಯ ಖಾಯಿಲೆಗಳು ಮತ್ತು ಶಾಪಂಗಳು.
ಹಳ್ಳಾಕೊಳ್ಳಾ ತುಂಬಿ ತುಳುಕಿ
ತೊಳೆದು ಹೋದವು ಎಲ್ಲ ಕಿಲುಬು.
ಕಾಡಿನಂಗಳದಲ್ಲಿ ತಂಗಾಳಿಯಾಡಿ
ಮತ್ತೆ ಅಧಿಕಾರಕ್ಕೆ ಬಂತು ಹಸಿರು.
ಮೇಲು ಮಿರಿಲೋಕದ ಏಳುಪ್ಪರಿಗೆ ಮೋಡಗಳಲಿದ್ದ ನಾವು ಕನಸುಗಳು
ಮುತ್ತಾಗಿ ಸುರಿದು ಹೂವಾಗಿ ಅರಳಿ
ಏರಿದೆವು ಬೆಟ್ಟದ ಮುಡಿಗೆ.
ಕಂಡಲ್ಲಿ ಪಲ್ಲವಿಸಿ ಫಲ ಹೆರುವ ಮರಗಳು
ಜೇನು ತುಂಬಿದ ಹೂಗಳೆಲ್ಲ ಕಡೆ.
ದೀಪಗಳು ಉರಿದಾವು ಸಂಪಿಗೆಯ ಮರದಲ್ಲಿ
ತುಂಬಿಗಳ ತುಟಿಯಲ್ಲಿ ಹಾಡು ಜಿನುಗಿ.
ಕಾಡಿನ ಹೂಗಳಿಗೆ ರೆಕ್ಕೆ ಮೂಡಿದ ಹಾಗೆ ಬಣ್ಣ ಬಣ್ಣದ ಚಿಟ್ಟೆ ಹಾರಾಡಿವೆ.
ಮರವ ಮಾತಾಡಿಸುವ ಸವಿಗೊರಳ ಹಕ್ಕಿಗಳು
ಆನಂದ ಹಾಡುಗಳ ಹಾಡುತ್ತಿವೆ.
Leave A Comment