ಶಿವಲೋಕವೆಂಬ ಬೆಳಕಿನ ಮಿರಿಲೋಕ, ಅಖಂಡವಾಗಿದ್ದ ಆದಿಮಕಾಲದಲ್ಲಿ ಜಪತಪ ಮಾಡಿಕೊಂಡು ಶಿವದೇವರು ಏಕಾಂಗಿ ಸುಖವಿದ್ದರು. ಆರೂ ಅನಂತಕಾಲ ಜಪತಪ ಮಾಡಿ ಮಾಡಿ ಬೇಸರವಾಗಿ ವಿನೋದಕ್ಕೆಂದು ತಮ್ಮ ನಡಿನಲಿ ಕಟ್ಟಿಕೊಂಡಿದ್ದ ಅಮೃತಗಿಂಡಿಯಲ್ಲಿ ಮುಖ ನೋಡಿಕೊಂಡಾಗ, ಆಹಾ! ನಾನೆಂಥ ಚೆಲುವನೆಂದು ಘನಾನಂದವಾಗಿ ಅದೇ ಮಾದರಿಯಲ್ಲಿ ತಮ್ಮ ವಾಮಾಂಗವ ಕಿತ್ತು ಇನ್ನೊಂದು ಮೂರ್ತಿಯ ಮಾಡಿ ಆದಿಮಾಯಿಯೆಂದು ನಾಮಕರಣವ ಕೂಗಿ ಅವಳೊಂದಿಗೆ ಕ್ರೀಡಿಸಿದರು. ಸೀಳಿಕೊಂಡ ಗಾಯದ ಮ್ಯಾಲೆ ಅಮೃತವ ಸುರಿದುಕೊಂಡು ಮಾಯಿಗೆ ನೀಡಿ ನೀನೂ ಸುರಿದುಕೊ ಎಂದರೆ ಅವಳ ಕೈ ಜಾರಿ ಕೆಳಗೆ ಚೆಲ್ಲಿಕೊಂಡುದುದರಿಂದ ಶಿವದೇವರು ಕೋಪಗೊಂಡು ಅಮೃತವ ವಿನಿಯೋಗಿಸುವ ವಿವೇಕ ಮತ್ತು ವಯಸ್ಸು ಬೆಳೆಯುವ ತನಕ ಸುಮ್ಮನಿರೆಂದು ಹೇಳಿ ಒಳಮನೆಯಲ್ಲಿ ಅಮೃತದ ಗಿಂಡಿಯ ಭದ್ರವಾಗಿಟ್ಟು, – “ಎಲೌ ಆದಿಮಾಯಿಯೇ, ನೀನು ಬೇಕೆನಿಸಿದಂತೆ ಆಡಿಕೊಂಡಿರು. ಆದರೆ ಅಂಧಂತಮಸ್ಸಿನ ಒಳಮನೆಯ ಬಾಗಿಲನ್ನು ಮಾತ್ರ ತೆರೆಯಬ್ಯಾಡೆಂ”ದು ತಾಕೀತು ಮಾಡಿ ಜಪತಪಕ್ಕೆ ಕುಂತರು.

ಇಂತೀರೀತಿ ಶಿವದೇವರು ಕಣ್ಣುಮುಚ್ಚಿರುವಲ್ಲಿ ಆತುರ ತಾಳದ ಆದಿಮಾಯಿಯು ಒಳಮನೆಯ ಬಾಗಿಲು ತೆಗೆದಳು ನೋಡು –

ಒಳಗೆ ಹಿಡಿದಿಟ್ಟ ಅಂಧಂತಮಸ್ಸು ಭುಸ್ಸೆಂದು ಹೊರನುಗ್ಗಿ ಬೆಳಕಿನ ಲೋಕ ಲೋಕಾಂತರವ ವ್ಯಾಪಿಸತೊಡಗಿತು. ಶಿವದೇವರಿಗಿದು ಗೊತ್ತಾಗಿ ಉಳಿದಿರುವಷ್ಟು ಲೋಕವನ್ನಾದರೂ ಕಾಪಾಡಿಕೊಳ್ಳೋಣವೆಂದು ಕತ್ತಲಾವರಿಸಿದಷ್ಟು ಶಿವಲೋಕವ ಸೀಳಿ ಕೆಳಕ್ಕೆ ತಳ್ಳಿದರು. ಕಾಪಾಡು ಶಿವನೇ ಎಂದು ಕಿರುಚುತ್ತ ಇನ್ನೂ ಒಳಮನೆಯಲ್ಲೇ ಇದ್ದ ಆದಿಮಾಯಿಯೂ ಅಂಧಂತಮಸ್ಸಿಗಂಟಿದ ಲೋಕದೊಡನೆ ಕೆಳಕ್ಕೆ ಬಿದ್ದಳು.

ಕತ್ತರಿಸಿ ಬಿದ್ದ ಕೀಳರ್ಧ ಲೋಕವೇನಾಯಿತೆಂಬುದು ಎಲ್ಲಿಯೂ ಕಾಣ ಬರಲಿಲ್ಲವಾಗಿ ಶಿವದೇವರು ತಮ್ಮ ಹಣೆಗಣ್ಣಿನ ಒಂದು ಕಿಡಿಗೆ ಸೂರ್ಯನೆಂದು ನಾಮಕರಣವ ಕೂಗಿ ಆದಿಮಾಯಿಯ ಶೋಧಿಸಿಕೊಂಡು ಬಾ ಎಂದು ಹೇಳಿ ಕಳಿಸಿದರು. ಅವನು ಶೋಧನೆ ಮಾಡಿ ಮಾಡಿ ದಣಿದು ವಿಶ್ರಾಂತಿ ತಗೊಂಡು ಮತ್ತೆ ಶೋಧನೆ ಮಾಡುತ್ತಿದ್ದ. ಇಂತಿರುವಲ್ಲಿ ಅವನು ಹುಡುಕಿದ್ದು ಹಗಲಾಗಿ ದಣಿವಾರಿಸಿಕೊಂಡದ್ದು ರಾತ್ರಿಯಾಯಿತು. ಇಂತೀರೀತಿ ದಿನವಾರ ಋತುಮಾನ ಮಾಸ ವರುಷಂಗಳಾಗಿ, ಯುಗ ಜುಗಂಗಳಾಗಿ ಕಾಲನ ವ್ಯವಹಾರ ನಿರಂತರ ನಡೆಯಿತು.

ಇತ್ತ ಅಂಧಂತಮಸ್ಸಿನ ಕೀಳರ್ಧ ಶಿವಲೋಕದಲ್ಲಿದ್ದ ಆದಿಮಾಯಿ ನೋಡಿ ಕೊಂಡರೇನಿದೆ? ಮ್ಯಾಲೆ ನೋಡಿದರೆ ಬಾನಾಯಿತು. ಕೆಳಗೆ ನೋಡಿದರೆ ತಾನಾಯಿತು. ಶಿವನಿಂದ ಸೀಳಿಕೊಂಡ ಗಾಯವಿನ್ನೂ ಹಾಂಗೇ ಉರಿಯುತ್ತಿದೆ. ಶಿವನೇ ಇನ್ನೆಂದಿಗೆ ನಿನ್ನೊಂದಿಗೆ ಒಂದಾದೇನೆಂದು ಮ್ಯಾಲೆ ನೋಡಿ ತನ್ನಲ್ಲಿ ತಾ ಮಿಡುಕಿ ಬಡವಿಯಾದಳು. ಬಗೆಬಗೆಯ ಶೋಕಂಗಳ ಶೋಕಿಸುತ್ತ ಯುಗಯುಗಾಂತರ ಕಳೆದು ಅಮೃತ ಕುಡಿಯದ ಅವಳ ದೇಹ ಕುಸಿದು ಅಸುನೀಗಿ ಬಿದ್ದಲ್ಲಿ ನೋಡು ಶಿವಾ,

ಮಾಯಿಯ ಉಬ್ಬಿದವಯವಂಗಳು
ಗಿರಿಬೆಟ್ಟ ಪರ್ವತಂಗಳಾಗಿ,
ಬೆವರುಜಲ ಕಣ್ಣೀರು
ಹೊಳೆಹಳ್ಳ ಮಳೆಗಳಾಗಿ,
ಅವಳುಸಿರು ಗಾಳಿಯಾಗಿ,
ಮರ್ತ್ಯಲೋಕ ಮೊದಲಾಯಿತೆಂಬಲ್ಲ ಗತಿಸಿಹೋದವು
ಆರುಮೂರು ಒಂಬತ್ತು ಅನಂತಕಾಲಂಗಳು.

ಆಮೇಲೆ ಆದಿಮಾಯಿ ಧರಣಿಮಂಡಳ ಮಧ್ಯದಲ್ಲಿ ಪುಣ್ಯಕೋಟಿ ಎಂಬ ಹಸುವಿನ ಅವತಾರ ತಾಳಿ ಇರುವೆ ಮೊದಲು ಆನೆ ಕಡೆಯಾಗಿ ಒಟ್ಟು ಚೌರ್ಯಾಂಸಿ ಲಕ್ಷ ತಿರ್ಯಕ್ ಜಂತುಜಾಲಕ್ಕೆ ಜನನ ನೀಡಿದಳು. ಅದು ಹೆಂಗೆಂದರೆ:

ಆದಿಯಲ್ಲೊಂದು ಕಾಡು
ಕಾಡಿನಲ್ಲೊಂದು ಗವಿ
ಗವಿಯಲ್ಲೊಂದು ಪಡ್ಡೆ ಕರು ಪುಣ್ಯಕೋಟಿ
ಅಂದರೆ ನಮ್ಮ ಕಥಾನಾಯಕಿ.
ಸಂತಾನವಿಲ್ಲದ ಸಂತಾಪದಿಂದ
ಮೌನದಿಂದ ತುಂಬಿದ ಹಗಲುಗಳಿಂದ
ನಿದ್ರೆಯಿಂದ ತುಂಬಿದ ರಾತ್ರಿಗಳಿಂದ
ಬೋರಾಗಿ ಬೇಸರಗೊಂಡು ಮಲಗಿರಲಾಗಿ
ಸದರಿ ಕರುವಿಗೊಂದು ಕನಸಾಯ್ತು.

ಆಕಾಶ ನೀಲಿಮದಲ್ಲಿ
ಮಾಯದ ಬೆಳ್ಳಿಯ ಗಿಂಡಿ. ಫಳ್ಳನೆ ಹೊಳೆದು
ಬೆಳ್ದಿಂಗಳ ಹಾಲು ಸುರಿದು ಮರೆಯಾಯ್ತು.
ಆದಿಮದ ಬೆದೆ ಕೆರಳಿ
ಚಿತ್ತವೈಕಲ್ಯವುಂಟಾಗಿ ಚಡಪಡಿಸಿ
ಎಚ್ಚತ್ತಳು ಹೆಣ್ಣು ಪುಣ್ಯಕೋಟಿ.

ಆಮೇಲಾಮೇಲೆ ಕಾಡಿನ ಕಥೆಗೆ
ಮಬ್ಬು ಕವಿಯಿತು ನೋಡು:
ಕೆಂಗಣ್ಣಿನಿಂದ ತುಂತುರು ಹನಿ ಉದುರಿಸುತ್ತ
ಮೈಮರೆತು ಮ್ಯಾಲೆ ನೋಡುತ್ತ
ಬೆಳ್ಳಿಗಿಂಡಿಯ ಪಡೆವ ಯೋಗಾ ಹ್ಯಾಗೆ ಒದಗೀತೆಂದು
ಅಂತರಂಗದ ಒಳಗೊಳಗೇ ಚಿಂತಿಸುತ್ತಾ

ಏಕಾಂತ ಕುಂತಳು ಕಾಂತೆ
ಕೊಂಬಿಂದ ಗವಿಯ ಗೋಡೆಯ ಮ್ಯಾಲೆ ಗೀರುತ್ತ.

ಏನೇನೋ ಗೀಚಿದಳು:
ಹೂಹಣ್ಣು ಹೆರುವ ತರುಮರ ಬರೆದಳು.
ಚಿಲಿಪಿಲಿ ಹಕ್ಕಿಯ ಬರೆದಳು.
ಮ್ಯಾಲಿನ ಮಿರಿಲೋಕದ ಆಕಾಶವೆಂಬ ಗೋಮಾಳದಲ್ಲಿ
ಬೆಟ್ಟದೆತ್ತರ ಹೋರಿಯ ಚಿತ್ರಚಿತ್ತಾರ ಬರೆದು
ಶಿವಭಕ್ತಿ ಶಿವಾಚಾರ ಮಾಡಿದಳು.

ಶಿವಾಚಾರ ಮಾಡಿದ್ದೇ ಆಯ್ತು ನೋಡು:
ಹೋರಿಯ ಚಿತ್ರ ಚಿತ್ತಾರದಲ್ಲಿ
ಆಕಾಶ ನಂದೀಶನ ಆವೇಶ ಅವತಾರವಾಗಿ
ಹಣೆಯಲ್ಲಿ ಕಿಡಿಗಣ್ಣಿನ ಜೋಗಿಜಂಗಮ ಹೋರಿ
ಗಲಿರು ಗಲಿರು ಅಂತ ಜಂಗವ ನುಡಿಸುತ
ಕಣ್ಣಿಂದ ಕೆಂಗಿಡಗಳ ಕಾರುತ, ಅರಳಿದಳ್ಳೆಗಳಿಂದ ಹೊಗೆಯ ಉಗುಳುತ
ಕಾಲು ಕೆದೆರಿ ಬೆಟ್ಟದೆತ್ತರ ಧೂಳೆಬ್ಬಿಸಿ
ಢುರಕಿ ಹೊಡೆಯುತ ಹೊಂಚುತ ಹೊಂಚುತ ಏಕಾಏಕಿ
ಮಿಂಡೆದ್ದ ಮಣಕಿನ ಮೈಮ್ಯಾಲೇರಿ ಹೋ ಹಾರಿ
ಮೈಯಂತ ಮೈ ಮುರಿದು
ನಡಿನಲ್ಲಿದ್ದ ಬೆಳ್ಳಿಗಿಂಡಿಯ ಹಾಲು ಮೈತುಂಬ ಸುರಿದು
ಆಕಾಶವನಡರಿ ಮಟಾಮಾಯವಾಯಿತು !
ಮೈ ಅದುರಿ ಗುಮ್ಮಂತ ಬೆವರಿ
ಸಳಸಳ ಮೈಜಲವಿಳಿದು ಸ್ಮೃತಿಗೆ ಬಂದಳು ಮಹಾತಾಯಿ
ಚೆಲ್ಲಿದ ಹಾಲು ಮಡಕೆಯಲಿ ಕೂಡಿಟ್ಟು
ಹೆಪ್ಪುಹಾಕಿ ನೆಲವಿನ ಮ್ಯಾಲಿಟ್ಟು
ಕಾದು ಕುಂತಳು.

ಈ ಮಧ್ಯೆ ತರುಮರ ಬೆಳೆಗಳಿಗೆ ತಾಯಾಗಿ
ಪುಣ್ಯಕೋಟಿ ಹಸುವಾಗಿ ಹಸಿರುಧರ್ಮ ಹಬ್ಬಿಸಿದಳು.
ಒಂದಕಿನ್ನೊಂದು ಹೀಗೇ ನೂರೊಂದು ಜೀವರಾಶಿಯ ಪಡೆದು
ಚಿಲಿಪಿಲಿ ಪ್ರಪಂಚವ ಕಟ್ಟಿ ಹೆಸರಿಟ್ಟಳು.

ಆಮೇಲಾಮೇಲೆ ಚೌರ್ಯಾಂಸಿ ಲಕ್ಷ ತಿರ್ಯಕ್ ಜಂತುಜಾಲ ಜನನವಾಗಿ ಎಲ್ಲಾ ಜೀವರಾಶಿಗೆ ಹಸಿವೆ ಹಾಹಾಕಾರವಾಗಿ ನಮ್ಮೀ ಧರಣಿ ಗೋಳು ಬೀಸುವ ಗಿರಣಿಯಾದ ಪ್ರಸ್ತಾವದಲ್ಲಿ ಆದಿಮಾಯಿ ತಾನೇನು ಮಾಡಿದಳೆಂದರೆ –

ಮಕ್ಕಳ ಕಾಪಾಡಲು ಹಾಲು ನೆತ್ತರು ಸುರಿದು ಸುಸ್ತಾಗಿ, ಮೈ ಬರಿದಾಗಿ ಹನ್ನೆರಡಾಳುದ್ದದ ಪಾತಾಳ ಜಲಬಾವಿಯಲ್ಲಿ ಜಲಸಮಾಧಿಗೊಂಡಳೆಂಬಲ್ಲಿ ಹತ್ತು ಅನಂತಕಾಲಂಗಳು ಸಂದವು.

ಇತ್ತ ಶಿವದೇವರು ಜಪತವೆಂದು ಮಿರಿಲೋಕದಲ್ಲಿ ಕುಂತಿರಲಾಗಿ ಹಣೆಯ ಬೆವರು ಹನಿ ಭೂಲೋಕದ ಮ್ಯಾಲೆ ಬಿದ್ದು ಅದರಿಂದೋರ್ವ ನರಮಾನವನ ಸೃಷ್ಟಿ ಮಾಡಿ ತಿಂದುಂಡು ಸುಖವಾಗಿರೆಂದು ಹೇಳಿ ಕಣ್ಣು ಮುಚ್ಚಿದರು. ಆದರೆ ನರಮಾನವನಿಗೆ ಒಂಟಿ ಜೀವನದಿಂದ ಬೋರಾಗಿ ದೊಡ್ಡದೇವರ ನೆನೆಯಲು ಶಿವದೇವರು ಪ್ರಸನ್ನ ಪ್ರತ್ಯಕ್ಷರಾದರು. ನರಮಾನವನು ಕೈಮುಗಿದು –

“ಎಲಾ ತಂದೆಯೇ, ಹಟ್ಟಿಯಲ್ಲಿ ಹೆಣ್ಣಿಲ್ಲ,
ಕೊಟ್ಟಿಗೆಯಲ್ಲಿ ದನಕರುಗಳಿಲ್ಲ.
ಇರು ಎಂದರೆ ಒಬ್ಬನೇ ಹೆಂಗಿರಲಿ?
ಇದಕ್ಕೇನಾದರೂ ಆಧಾರ ಮಾಡಿಕೊಡಬ್ಯಾಡವೆ?”

– ಎಂದ. ಇದಕ್ಕೆ ನಮ್ಮ ಶಿವಲಿಂಗದೇವರು ಏನೆಂದರೆಂದರೆ –

“ತನುಜನೇ, ಅತಳ ವಿತಳ ಪಾತಾಳವೆಂಬ
ಅಧೋಲೋಕದಲ್ಲಿ ಬೆಟ್ಟದ ಮಾಯಕಾರ್ತಿ ಅವತಾರಗೊಂಡು
ಕಟ್ಟಿರುವೆ ಹುತ್ತದಲ್ಲಿ ಸ್ಥಾಪನೆಗೊಂಡಿದ್ದಾಳೆ.
ಪುರುಷಾಮೃಗವೆಂಬ ಸೈತಾನ ಸರ್ಪ ಅವಳ ಕಾವಲಿಗಿದೆ.
ಅದನ್ನ ಜಯಿಸಿ, ಅವಳನ್ನು ವರಿಸಿ,
ಸಂಸಾರ ದಂದುಗವ ಸುರುಮಾಡಯ್ಯ”

– ಎಂದು ಆಶೀರ್ವದಿಸಿ “ತೊಂದರೆ ಬಂದರೆ ತಗೊ” ಎಂದು ತಮ್ಮ ಮೈಮ್ಯಾಲಿನ ಹಿಡಿ ರೋಮಂಗಳ ಕಿತ್ತು ಕೊಟ್ಟು ಮಾಯವಾದರು.

ಇಂತು ನರಮಾನವನು ಪಾತಾಳಕಿಳಿವ ಬಿಲಕ್ಕೆ ಬಂದು ಶಿವನೇ ಎಂದು ಕೆಳಗಿಳಿದು ಮಾಯಕಾರ್ತಿಯ ಪರಿಶೋಧನೆ ಮಾಡುತ್ತಿರುವಲ್ಲಿ ಎತ್ತರವಾದ ಬೆಟ್ಟದ ಹಾಗೆ ಎದುರಿಗೇ ಕುಂತಿದೆ ಪುರುಷಾಮೃಗವೆಂಬ ಸೈತಾನಸರ್ಪ! ನೆತ್ತಿಯಲ್ಲಿ ಜೋಡಿ ಸೂರ್ಯರಂಥ ಕಣ್ಣಿವೆ! ಮುಳ್ಳಿನಂತೆ ಒರಟಾದ ಉದ್ದುದ್ದ ರೋಮಂಗಳಿವೆ! ನೂರುಗಾವುದ ಹುತ್ತದರ ಮನೆಗೆ ಶಿಂಬಿಸುತ್ತಿ ಶಿಖರದಲ್ಲಿ ಹೆಡೆಯೆತ್ತಿ ಹೊಸನಾತ ಹೊಸನಾತವೆಂದು ಹೊಂಚುತ ನರಮಾನವನಿಗೆ ಬಾಯಿ ಹಾಕೇಬಿಟ್ಟಿತು. “ಇದೇನು ಬಿಕ್ಕಟ್ಟು ಬಂತು ಶಿವನೇ” ಎಂದುಕೊಳ್ಳುವಷ್ಟರಲ್ಲಿ ನರಮಾನವನು ಪುರುಷಾಮೃಗದ ನಾಲಗೆಯಲ್ಲಿ ಲಾಗಹಾಕುತ್ತಿದ್ದ. ಅಂಗೈಯಲ್ಲಿ ಅಡಿಕೆಮಾಡುವಂತೆ ನಾಲಗೆಯ ಮ್ಯಾಲೆ ಇವನನಾಡಿಸುತ ಸೈತಾನ ಸರ್ಪ ಇನ್ನೇನು ಇವನನ್ನ ದವಡೆಗೆ ತಳ್ಳಬೇಕು ಅಷ್ಟರಲ್ಲಿ ದೊಡ್ಡ ದೇವರು ಕೊಟ್ಟ ರೋಮಂಗಳ ನೆನಪಾಗಿ ಅವನ್ನು ಎಸೆದು ಬಿಟ್ಟ. ಶಿವಶಿವಾ. ಅವು ಬಿದ್ದಲ್ಲೆಲ್ಲಾ ರೋಮಕ್ಕೊಂದರಂತೆ ಸಾವಿರ ಶಿವಲಿಂಗಗಳು ಉದ್ಭವವಾಗಿ ಕಾಣದ ಆಕಾಶಗಂಟೆ ಢಣಲೆಂದು ಹೊಡೆದಾಡಿದವು! ತಕ್ಷಣ ಪುರುಷಾಮೃಗವು ನರಮಾನವನ ಹೊರಕ್ಕೆ ಉಗುಳಿ ಒಂದೊಂದು ಶಿವಲಿಂಗಕ್ಕೂ ಆರುಮೂರೊಂಬತ್ತು ಪ್ರದಕ್ಷಿಣೆ ಸುತ್ತಿ ಶಿವಭಕ್ತಿ ಶಿವಾಚಾರ ಮಾಡತೊಡಗಿತು. ಇದೇ ಸಮಯವೆಂದು ನೆರನು ಅವಸರದಲ್ಲಿ ಓಡಿ ಹೋಗಿ ಹುತ್ತದರಮನೆಯ ಏಳೇಳು ಗೇಟುಗಳನೊದ್ದು ಮುರಿದು ಒಳಗೆ ಹೋಗಿ ನೋಡಿದರೆ ಬೆಟ್ಟದಾ ಮಾಯಕಾರ್ತಿ ಬಟ್ಟೆಯ ನೇಯುತ್ತ ಕುಂತಿದ್ದಾಳೆ! ಹುಟ್ಟು ನಿರ್ವಾಣದಲ್ಲಿದ್ದ ನರನು ಬಟ್ಟೆ ನೇಯುವ ಮಾಯಕಾರ್ತಿ ಕಂಡು ಮರುಳಾಗಿ ಶಿವನ ನಿರೂಪವ ತಿಳಿಸಿದ. ಮಾಯಕಾರ್ತಿ ನಾಂಚಿ ಕಾದ ಲೋಹದೋಪಾದಿಯಲ್ಲಿ ಕೆಂಪಾಗಿ ದಯಮಾಡಿ ಅವನಿಗೂ ಒಂದು ಬಟ್ಟೆಯ ಕೊಟ್ಟಳು. ಆಮ್ಯಾಲೆ ಅವಸರ ಮಾಡಿ ಅಲ್ಲೇ ಬಿದ್ದಿದ್ದ ತನ್ನ ಹಿಂದಿನವತಾರ ಪುಣ್ಯಕೋಟಿಯ ಕೊಂಬುಗಳ ತಗೊಂಡು ನರನೊಂದಿಗೆ ಓಡೋಡಿ ಪಾತಾಳದ ಬಿಲ ತಲುಪಿದಳು.

ಮೊದಲು ಮಾಯಕಾರ್ತಿಯ ಮ್ಯಾಲೆ ಹತ್ತಿಸಿ ತಾನೂ ಹತ್ತಬೇಕೆಂದು ಆಧಾರಕ್ಕೆ ಬಲಗೈ ನೀಡಿ ಬಲಗಾಲನ್ನು ಬಿಲದ ಮ್ಯಾಲೂರಿ ಹುಕಿಯಿಂದ ಹತ್ತಬೇಕೆಂಬಷ್ಟರಲ್ಲಿ ಶಿವ ಶಿವಾ, ಸೈತಾನ ಸರ್ಪ ಬಂದು ಇನ್ನೂ ಪಾತಾಳ ಸೀಮೆಯಲ್ಲಿದ್ದ ನರನ ಎಡಗೈ ಎಡಗಾಲು ಹಿಡಿದು ಕೆಳಕ್ಕೆಳೆಯತೊಡಗಿತು! ನರನ ಎಡಗೈ ಎಡಗಾಲು ಪುರುಷಾಮೃಗದ ಕೈಯಲ್ಲಿ, ಬಲಗೈ, ಬಲಗಾಲು ಮಾಯಕಾರ್ತಿಯ ಕೈಯಲ್ಲಿ! ಕೊನೆಗೆ ಮಾಯಕಾರ್ತಿ ಶಿವನ ಹೆಸರುಗೊಂಡು ಡೊಗ್ಗಾಲು ಮಂಡಿಯೂರಿ ನರಮಾನವನ. ಬಲಗೈ ಬಲಗಾಲನ್ನು ಮ್ಯಾಲೆಳೆದಳು. ಹಸಿ ಮರ ಸೀಳಿದಂತೆ ಕರ ಕರ ಭಯಂಕರ ಸದ್ದಾಯಿತು. ಹಲ್ಲು ಕಚ್ಚಿ ಮೀಸಲು ಶಕ್ತಿಯಿಂದ ಮ್ಯಾಲೆಳೆದಳು. ಜತ್ತಿದ್ದ ಹಗ್ಗ ಹರಿದು ಕೈಗೆ ಬಂದಂತಾಗಿ ಹಿಂದೆ ಬಿದ್ದಳು. ಹಿಂಗ್ಯಾಕೆಂದು ನೋಡಿದರೆ ಹಿರಿಯನ ಬಲ ಅರ್ಧ ದೇಹ ಅವಳ ಕೈಯಲ್ಲಿತ್ತು. ಬಲಗೈ ಬಲಗಾಲಿತ್ತು! ಬಲಗಡೆಯ ಅರ್ಧಮುಖವಿತ್ತು, ಸರಿಯಾಗಿ ಬೆನ್ನುಹುರಿಯಲ್ಲೇ ಸೀಳಿ ಸೊಂಟದಿಂದ ನೆತ್ತಿಯ ತನಕ ಹಸಿಯ ನೆತ್ತರು ಸೋರುತ್ತಿತ್ತು! ಇದನ್ನು ನೋಡಿ ಮಾಯಕಾರ್ತಿ ಕಿಟಾರನೆ ಕಿರಿಚಿದಳು.

ಇದನ್ನೆಲ್ಲ ಮ್ಯಾಲಿಂದ ನೋಡುತ್ತಿದ್ದ ಲೋಕನಾಯಕ ಸ್ವಾಮಿಗೆ ವ್ಯಾಕುಲವಾಗಿ ಒಂದು ಮಾಡಹೋದರೆ ಇನ್ನೊಂದಾಯಿತಲ್ಲ ಎಂದು ಖೇದವಾಗಿ, ನೀಲಿ ಆಕಾಶದಲ್ಲಿ ನಿಂತು ಲೋಕವ ಬೆಳಗುತ್ತಿದ್ದ ಸೂರ್ಯನಿಗೆ “ಹೋಗಿ ನರಮಾನವನ ಉದ್ಧರಿಸೆಂದು” ಅಪ್ಪಣೆಯಿತ್ತರು. ಸೂರ್ಯನಾರಾಯಣಸ್ವಾಮಿ ಕೆಳಗಡೆ ಬಂದು ತಮ್ಮ ಕೆಂಡಗಣ್ಣಿನ ಜಗಜಗ ಬೆಳಕನ್ನ ನರನ ಹರಿದ ಭಾಗದ ಮ್ಯಾಲೆ ಚೆಲ್ಲಿದಾಗ ಅರೆಕೊರೆಯಾಗಿದ್ದ ದೇಹ ಇಡಿಯಾಗಿ ಜೀವ ತುಂಬಿತು. ನಿದ್ದೆಯಿಂದೆಂಬಂತೆ ಎದ್ದು ಸಾಷ್ಟಾಂಗವೆರಗಿದ ನರನಿಗೆ ಮಾಯಕಾರ್ತಿಯೊಂದಿಗೆ ಸುಖಬಾಳೆಂದು ಆಶೀರ್ವದಿಸಿ ಸೂರ್ಯದೇವರು ಅಸ್ತಂಗತರಾದರು.

ರಾತ್ರಿಗೆಂದರೆ ಇನ್ನೊಂದು ಹೊಯ್ಕಾಯಿತು ಶಿವನೆ. ನರನ ಇನ್ನರ್ಧ ಎಡಭಾಗವನ್ನ ಸೈತಾನಸರ್ಪ ಕಸಿದಿತ್ತಲ್ಲ. ದೇಹ ಊನವಾದುದರಿಂದ ತಿನ್ನಲಾರದೆ, ಪಾತಾಳಬಿಲದೊಳಗಿಂದ ಅದನ್ನು ಭೂಮಿಗೆ ಉಗುಳಿಬಿಟ್ಟಿತು. ಶಿವದೇವರೀಗೆ ತಮ್ಮ ಜಡೆಮರೆಯ ಚಂದ್ರಸ್ವಾಮಿಗೆ “ನರನ ಉದ್ಧರಿಸಿ ಬಾ” ಎಂದು ಆಜ್ಞಾಪಿಸಿದರು. ಚಂದ್ರಾಮಸ್ವಾಮಿ ತಮ್ಮ ಬೆಳ್ದಿಂಗಳನು ನರನ ಎಡದೇಹದ ಮ್ಯಾಲೆ ಕರುಣೆಯಿಂದ ಸುರುವಿ ಪೂರ್ಣದೇಹನ ಮಾಡಿ ಜೀವಬರಿಸಿ ಸುಖಬಾಳೆಂದು ಹರಸಿ ಶಿವನ ಜಡೆಯಡರಿದರು.

ಇಂತೀಪರಿ ಒಬ್ಬನಿದ್ದ ನರಮಾನವ ಈಗ ಇಬ್ಬರಾದರು. ಸೂರ್ಯನಿಂದ ಜೀವ ಪಡೆದವನು ಅಣ್ಣನೆಂದಾಯಿತು. ಚಂದ್ರನಿಂದ ಪಡೆದವನು ತಮ್ಮನೆಂದಾಯಿತು. ಆದರೆ ಮಾಯಕಾರ್ತಿ ಯಾರೊಂದಿಗಿರಬೇಕೆಂದು ಜಿಜ್ಞಾಸೆಯಾಗಿ ಇಬ್ಬರೂ ಎಳೆದಾಡ ತೊಡಗಿದರು. ಆವಾಗ ಶಿವದೇವರು ಮಧ್ಯೆ ಬಾಯಿ ಹಾಕಿ ಮಾಯಕಾರ್ತಿ ಇಬ್ಬರ ಸೊತ್ತೆಂದು ಪಂಚಾತಿಕೆ ಮಾಡಿ ಅಣ್ಣತಮ್ಮಂದಿರ ಸಮಾಧಾನ ಮಾಡಿದರು. ಪಾತಾಳದ ಬಿಲ ಮುಚ್ಚಿ ಅದರ ಮ್ಯಾಲೆ ಕರಿಕಂಬಳಿಯ ಗದ್ದಿಗೆ ಮಾಡಿ ತೆಂಕುಮುಖವಾಗಿ ಅಣ್ಣನನ್ನು, ಬಡಗುಮುಖವಾಗಿ ತಮ್ಮನನ್ನು ಬೆನ್ನಿಗೆ ಬೆನ್ನಾತು ಕೂರಿಸಿ, ಮಧ್ಯೆ ಮಾಯಕಾರ್ತಿಯ ಸ್ಥಾಪನೆ ಮಾಡಿ ಬೆಳ್ಳಿಬೆತ್ತದ ಅಧಿಕಾರ ಕೊಟ್ಟು ಒಡ್ಡೋಲಗ ಮಾಡಿಸಿ –

ಮಾನವರಿಗೆ ದೊಡ್ಡವರಾಗಿ
ದೇವರಿಗೆ ಸಣ್ಣವರಾಗಿ ಬಾಳಿರಯ್ಯಾ –

ಎಂದು ಹರಸಿ ಶಿವಲೋಕಕ್ಕೆ ಸಂಚರಣೆ ಮಾಡಿದರು. ಇಲ್ಲಿಂದ ಸಂಸಾರ ದಂದುಗ ಸುರುವಾಯ್ತು ನೋಡು; ಗಾಳ ಗುದ್ಲಿ ತಗಂಡು ದುಡಿಯುವಷ್ಟು, ಕೆಲಸ, ಉಣ್ಣುವಷ್ಟು ಅನ್ನವಿರುವ ಶಿವಾಪುರವೆಂಬ ಘನವಾದ ಹಟ್ಟಿಯ ಕಟ್ಟಿ, ಪುಣ್ಯಕೋಟಿಯ ಹೆಸರಿನಲ್ಲಿ ಕೊಟ್ಟಿಗೆಯಲ್ಲಿ ದನಕುರಿಗಳ ಸಾಕಿ ಹಾಲು ಹಿಂಡಿ ಹೈನು ಬೆಣ್ಣೆ ಮಾಡುವ ಗೊಲ್ಲ ಗೋಕುಲ ಕುಲವ ಮೊದಲು ಮಾಡಿದರು.

ಆದರೆ ಅಣ್ಣತಮ್ಮಂದಿರಲ್ಲಿ ವಿರಸ ಕಮ್ಮಿಯಾಗಲಿಲ್ಲ. ಶಿವನು ಮಾಡಿದ ಕಟ್ಟಳೆ ಕಡೆಗಣಿಸಿ ಮಾಯಕಾರ್ತಿ ತನಗೆ ಮಾತ್ರ ಸೇರಿದವಳೆಂದು ಇಬ್ಬರೂ ತಾರುಮಾರು ಗೌಜುಗದ್ದಲಮಾಡುತ್ತ ಜಗಳಾಡತೊಡಗಿದರು. ಅವನಿವನೆನ್ನದೆ ಮಾಯಕಾರ್ತಿ ಎಳೆದವನೊಂದಿಗೆ ಇರಬೇಕಾಗಿ ಬಂದು “ಎರಡು ದಾರಿಗಳಲ್ಲಿ ಹೆಂಗಂತ ವ್ಯವಹರಿಸಲೋ ಶಿವನೆ” ಎಂದು ಮೊರೆಯಿಟ್ಟಳು. ಶಿವದೇವರಿನ್ನೊಮ್ಮೆ ಭೂಲೋಕಕ್ಕೆ ಬಂದು ಪುಣ್ಯ ಕೋಟಿಯ ಕೊಂಬುಗಳ ಪಾಲುಮಾಡಿ ಬಲಗೊಂಬನ್ನು ಅಣ್ಣನಿಗೂ ಎಡಗೊಂಬನ್ನು ತಮ್ಮನಿಗೂ ಪಂಚಾತಿಕೆ ಮಾಡಿ ಕೊಟ್ಟು ಹಗಲು ಅಣ್ಣನದೆಂದೂ ರಾತ್ರಿ ತಮ್ಮನದೆಂದೂ, ಹಗಲಿನವರು ಸೂರ್ಯನ ಒಕ್ಕಲೆಂದೂ, ರಾತ್ರಿಯವರು ಚಂದ್ರನ ಒಕ್ಕಲೆಂದೂ ಹಗಲಿಗೆ ಒಂದು ಸತ್ಯವೆಂದು ರಾತ್ರಿಗೆ ಹಲವು ಸತ್ಯಗಳೆಂದೂ ಸಾರಿ ಪತ್ರಕರಾರು ಬರೆದುಕೊಟ್ಟರು. ಅವರವರ ಸಮಯದಲ್ಲಿ ಮಾಯಕಾರ್ತಿ ಅವರವರೊಂದಿಗೆ ಇರಬೇಕೆಂದು ಕಟ್ಟಳೆ ಮಾಡಿ ಸೂರ್ಯಚಂದ್ರರನ್ನ ಕಾವಲಿಗಿರಿಸಿದರು. ಆದರೂ ಇವರ ಜಗಳ ತೀರಲಿಲ್ಲ. ಒಬ್ಬರ ಸಮಯದಲ್ಲಿ ಇನ್ನೊಬ್ಬರ ಆಕ್ರಮಣ ಅತಿಕ್ರಮಣಗಳಾಗಿ ಮೂವರ ಕೂಗಾಟ ಕೇಳಲಾರದೆ ಶಿವದೇವರು ಭೂಲೋಕದ ಮ್ಯಾಲೆ ಆಕಾಶವ ಡಬ್ಬುಹಾಕಿ ಮುಚ್ಚಿ ಮ್ಯಾಲಿನ ತಮ್ಮ ನಿವಾಸಕ್ಕೆ ಹೋದರು.

ಈಗಿವರು ಎಷ್ಟು ಕಿರಿಚಿದರೂ ಒದರಿದರೂ ಹೇಳಕೇಳುವುದಕ್ಕೆ ಶಿವದೇವರೂ ಇರಲಿಲ್ಲ. ಮೊದಲಾದರೆ ಮಾಯಕಾರ್ತಿ ನೆಪವಾಗಿ ಕುಸ್ತಿ ಜಗಳಗಳಾದರೆ ಈಗ ತಂತಮ್ಮ ಬೆಡಗಿನ ದೇವತೆಗಳಾದ ಸೂರ್ಯ ಚಂದ್ರರ ಹೆಸರಿನಲ್ಲೂ ವಿದ್ದಗಳು ಸುರುವಾದವು.

ಅಣ್ಣನೊಮ್ಮೆ ತಮ್ಮನನ್ನು ಹೀಂಕಾರವಾಗಿ ಜರಿದು ಹೆದರಿಸಲು ತನ್ನ ಪಾಲಿನ ಕೊಂಬನ್ನೂದಿದ ನೋಡು: ಊದಿ ಕೆಳಗಿಡೋದರೊಳಗೆ ಅದರೊಳಗಿಂದ ಬೆಂಕಿ ಮಾಡಿ ಮಾಂಸ ಬೇಯಿಸಿ ತಿನ್ನುವ, ಬೇರಿಂದ ವೈದ್ಯ ಮಾಡುವ, ಲೋಹದಿಂದ ಆಯುಧ ಮಾಡುವ, ಆಯುಧಗಳಿಂದ ವಿದ್ದ ಮಾಡಿ ಗೆಲ್ಲುವ…. ಇತ್ಯಾದಿ ಚೌಸಷ್ಟಿ ವಿದ್ಯೆಗಳು ಸಳ ಸಳ ಹುಟ್ಟಿಕೊಂಡವು. ಅಣ್ಣ ಕೇಕೆ ಹಾಕಿ ಕುಣಿದಾಡಿದ.

ಇದನ್ನು ನೋಡಿದ ತಮ್ಮನೂ ತನ್ನ ಪಾಲಿನ ಕೊಂಬನೂದಿದಾಗ ನಾದ ಮೊದಲು ಶಬ್ದ ಕಡೆಯಾಗಿ ಸಂಗೀತ ಸಾಹಿತ್ಯ ಮುಂತಾದ ಇಪ್ಪತ್ತೇಳು ತನ್ಮಯ ಕಲೆಗಳು, ನೂರೆಂಟು ಕನಸುಗಳಾದ ನಮ್ಮೊಂದಿಗೆ ಹುಟ್ಟಿದವು. ಆದರೆ ನಾವು ಮತ್ತು ಕಲೆಗಳು ಹುಟ್ಟಿದ್ದು ಸೂರ್ಯನಿಗೂ ಅವನೊಕ್ಕಲು ಅಣ್ಣನಿಗೂ ಸರಿಬರಲಿಲ್ಲ. ರಾತ್ರಿಯಲ್ಲಿ ಚಂದ್ರಾಮಸ್ವಾಮಿ ಬೆಳ್ದಿಂಗಳಲ್ಲಿ ನಾವು ಸುಖವಿದ್ದಾಗ ಸೂರ್ಯನಾರಾಯಣಸ್ವಾಮಿ ಗುಡುಗು ಮಿಂಚು ಸಿಡಿಲುಗಳಿಂದ ನಿರ್ದಯವಾಗಿ ಕಲೆಗಳ ಹೆದರಿಸಿ, ಕಲೆಗಳ ಮ್ಯಾಲೆ ವಿದ್ಯೆಗಳ ಬಿಟ್ಟು ಹಿಂಸಿಸಿದರು. ಕಲೆಗಳು ಗಾಬರಿಯಾಗಿ ಎಲ್ಲೆಂದರಲ್ಲಿ ಬಚ್ಚಿಟ್ಟುಕೊಂಡವು. ಮಾಯಕಾರ್ತಿಗೆ ಕಾಳಜಿಯಾಗಿ ಎಲ್ಲಿದ್ದರಲ್ಲಿಂದ ಕಲೆಗಳನ್ನು ಕರೆತರಲು ಗಾಳಿದೇವರ ಕಳಿಸಿದಳು. ಮೂಲೆ ಮೂಲೆಯಲ್ಲಿ ಅಡಗಿದ್ದ ಕಲೆಗಳನ್ನು ವಾಯುದೇವರು ಹುಡುಕಿ ಕರೆತಂದು ಚಂದ್ರಾಮಸ್ವಾಮಿಯ ರಕ್ಷಣೆಗೆ ಬಿಟ್ಟರು. ಸೂರ್ಯದೇವರ ಸೇಡಿನಿಂದ ಕಲೆಗಳು ನಾಶವಾಗಬಾರದೆಂದು ಚಂದ್ರಾಮಸ್ವಾಮಿ ತಾವೇನು ಮಾಡಿದರೆಂದರೆ ತಿಂಗಳ ಹದಿನಾಕು ದಿವಸ ಶಿವನಿಂದ ಅಮೃತವ ತುಂಬಿಕೊಂಡು ಉಳಿದ ಹದಿನಾಲ್ಕು ದಿವಸ ಕಲೆಗಳಿಗೆ ನೀಡಿ ಅಮರತ್ವ ನೀಡುತ್ತಿರಲು – ಸಂಪೂರ್ಣ ಅಮೃತವ ತುಂಬಿಕೊಂಡ ದಿನ ಹುಣ್ಣಿಮೆಯಾಗಿ, ಸಂಪೂರ್ಣ ಖಾಲಿಯಾದ ದಿವಸ ಅಮಾವಾಸ್ಯೆಯೆಂದು ಗೊತ್ತಾದುವೆಂಬಲ್ಲಿ ಆರುಮೂರೊಂಬತ್ತು ಅನಂತಕಾಲಂಗಳು ಗತಿಸಿದವು. ಆದರೂ ಅಣ್ಣ ತಮ್ಮಂದಿರ ಸೇಡು ಮುಗಿಯಲಿಲ್ಲ. ಸೇಡಿನ ಜೊತೆ ಕೇಡುಗಳೂ ಸೇರಿ ಪರಸ್ಪರ ಹಿಂಸಿಸುತ್ತ ಶಪಿಸುತ್ತ ಬೆಳ್ಳಿ ಬೆತ್ತದ ಅಧಿಕಾರವನ್ನು ಒಬ್ಬರಿಂದೊಬ್ಬರು ಕಸಿಯುತ್ತ, ಅದಕ್ಕಾಗಿ ಕೊಲೆಗೈಯುತ್ತ ಪುಂಡಾಟಿಕೆಯಲ್ಲಿ ಬದುಕುತ್ತಿದ್ದಾರೆಂಬಲ್ಲಿ ಪ್ರಸ್ತಾವನೆಯ ಮುಗಿಸಿ, ಕಥಾಬೀಜ ಬಿತ್ತರಿಸುತ್ತೇವೆ.

ಬೆಟ್ಟದಡಿಯ ಶಿವಾಪುರವೆಂಬುದು ಘನವಾದ ಹಟ್ಟಿ, ಗೊಲ್ಲ ಗೋಕುಲರ ತಿಂಗಳ ಬೆಡಗಿನ ಮಾಚ ಮತ್ತು ಸಿರಿಲಕ್ಕಿ ಏಳು ಹಿಂಡು ದನಕರು ಏಳೇಳು ಹಿಂಡು ಕುರಿಮೇಕೆ ಇತ್ಯಾದಿ ಬದುಕಿನ ಭಾಗ್ಯವುಳ್ಳ ಪುಣ್ಯವಂತರು. ಆದರೆ ಮಕ್ಕಳ ಫಲಪುತ್ರ ಸೌಭಾಗ್ಯವಿಲ್ಲದಿರಲು ಸಂತಾನೋತ್ಪತ್ತಿಯಾದಲ್ಲಿ ಶಿವದೇವರಿಗೆ ಹಿಡಿ ಹಣ ಹಾಕಿಸುವುದಾಗಿ ಹರಕೆಹೊತ್ತರು. ದೇವರಿಗೆ ದೇವಾಲಯ ಭೂತಂಗಳಿಗೆ ಸ್ಥಾನಂಗಳ ಕಟ್ಟಿ ದಾನಧರ್ಮ ನೇಮವ ಮಾಡಿದರೂ ಮಕ್ಕಳಾಗದಿರಲು ಕುಲಗುರುವಿನ ಕವಡೆ ಶಾಸ್ತ್ರ ಕೇಳಿದಾಗ ಯಕ್ಷಿಯ ಕಾಟವೆಂದು ತೋರಿಬಂತು. ಒಂದು ಹುಣ್ಣಿವೆ ದಿನ ಅಂಗಳದಲ್ಲಿ ಮಂಡಳ ಬರೆದು ಮಂಡಳದ ಮಧ್ಯೆ ತಾಮ್ರದ ತಂಬಿಗೆಯಿಟ್ಟು ಅದರಲ್ಲಿ ಯಕ್ಷಿಯ ಅವಾಹಿಸಿ, ಒಂದು ಕಡೆ ಎಮ್ಮೆ ಕರು. ಇನ್ನೊಂದು ಕಡೆ ಮೊಟ್ಟೆಯಿಡುವ ಕೋಳಿಯ ಬಲಿಕೊಟ್ಟು, ಕೊಪ್ಪರಿಗೆಯಲ್ಲಿ ಕೋಲು ದೀಪ ಇಟ್ಟು ಗಂಡು ಮಗುವಾದರೆ ಐದು ಹಬ್ಬ ನಿನಗೆಂದರು. ಯಕ್ಷಿಗೆ ಹರಕೆ ಒಪ್ಪಿಗೆಯಾಗಿ ಸಿರಿಲಕ್ಕಿ ಬಸಿರಾದಳು.

ಬೆಟ್ಟದ ಮಾಯಿಯ ಧೂಪದೀಪಂಗಳಲ್ಲಿ ಪೂಜೆಯ ಮಾಡಿ ಸುಖ ಹೆರಿಗೆಯಾಗಲೆಂದು ಬೇಡಿಕೊಂಡರು. ತುಂಬಿದ ಸೋಮವಾರ ತುಂಬಿದ ಹುಣ್ಣಿವೆ ದಿನ ಉಚಿತವಾದ ಶಿವಯೋಗ ಲಕ್ಷಣದಲ್ಲಿ ಗಂಡು ಮಗುವಾಯಿತು. ಹುಟ್ಟಿದ ಗಳಿಗೆಗೆ ಉಳ್ಳಾಗಡ್ಡಿಯಿಂದ ಗಂಟೆಯ ಬಡಿದರು. ಮಗುವಿನ ಹೆದರಿಕೆ ತೆಗೆದು ಹೊಕ್ಕಳ ಕುಯ್ದರು. ಮೂರು ದಿವಸಕೆ ಮನೆಯ ಸೂತಕ, ಹತ್ತು ರಾತ್ರಿಗೆ ಹದಿನಾರು ಸೂತಕ ತೆಗೆದು ಚಂದಮುತ್ತನೆಂದು ನಾಮಕರಣವ ಕೂಗಿ ಶೆಟಿವಿ ತಾಯಿಗೆ ಹಣೆಬರಹ ಬರೆಯಲೊಪ್ಪಿಸಿದರು. ಹರಿದು ಹಾಲುಂಡು ಕೂತು ಕೂಳುಂಡು ಎಳೆಯ ಮಗ ಹೋಗಿ ಬೆಳೆದ ಮಗನಾಗುವಷ್ಟರಲ್ಲಿ ಮಾಚ ಸೇಡಿನ ಚೂರಿಗೆ ತುತ್ತಾದ. ಅಂದಿಗೆ ಸಿರಿಲಕ್ಕಿಯ ಅಂಚಿನ ಸೀರೆ, ಅರಿಶಿನ ಕುಂಕುಮ, ಮುತ್ತೈದೆ ಬಳೆ ಮುಗಿಯಿತು. ಅರಿವಿಲ್ಲದೆ ಬರೀ ಲಕ್ಕಬ್ಬೆಯಾಗಿ ಚಂದಮುತ್ತನಿಗೆ ತಂದೆತಾಯಿ ಎರಡೂ ಆಗಿ ಬೆಳೆಸಿ ಕುಲಕಸುಬು ಕಲಿಸಿ ಸೊಂಟಕ್ಕೆ ನೂಲು, ಕಾಲಿಗೆ ಕಡಗ, ಕಿವಿಗೆ ಕುಂಡಲ ಹಾಕಿಸಿದಳು. ಸಂಗೀತದಲ್ಲಿ ಚಂದಮುತ್ತನಿಗೆ ಗತಿಯಿರುವುದ ಗುರುತಿಸಿ ಕುಲಗುರುವಿನ ಕೊಳಲುವಿದ್ಯೆಯ ಬೋಧೆ ಮಾಡಿಸಿದಳು. ಈಗ ಮದುವೆಯ ಹರೆಯವಾದರೂ ಕೊಂಡಾಟದಿಂದ ಬೆಳೆದ ಚಂದಮುತ್ತ ವಾರಗೆಯವರೊಂದಿಗೆ ದನಕಾಯಲು ಹೋಗುತ್ತಿದ್ದ.

ಶಿವಾಪುರವೆಂಬ ಘನವಾದ ಹಟ್ಟಿಗೆ ಬಿಸಿಲ ಬೆಡಗಿನ ಸೂರ್ಯಮುತ್ತ ಹೆಗಡೆಯೆಂಬಾತನ ಒಡೆತನ. ಅವನ ಮಗ ಚಿನ್ನಮುತ್ತ, ಚಂದಮುತ್ತನ ಓರಗೆಯಾತ. ಎರಡೂ ಮನೆತನಗಳು ಚಕಮಕಿಯ ಕಲ್ಲಿನಂತೆ ತಾಗುವುದಿದೆ, ಕಿಡಿಯ ಹಾರಿಸೋದಿದೆಯೆಂಬಲ್ಲಿ ಪ್ರಸ್ತಾವನೆ ಮುಗಿದು, ಆಕಾಶ ತೂಕದ ಶಿವಲಿಂಗ, ಭೂಮಿ ತೂಕದ ಲಕ್ಕಬ್ಬೆ, ಚಂದಮುತ್ತನ ಕಾಪಾಡಲೆಂದು ಹಾರೈಸಿ ಕಥಾರಂಭ ಮಾಡುತ್ತೇವೆ. ಶಿವಶಿವ ಎನ್ನಿರಯ್ಯಾ, ಶಿವಲಿಂಗಾ ಎನ್ನಿರಿ.