ಹಟ್ಟಿಯ ಕಾಡಿನಲ್ಲಿ ಇಂತಪ್ಪ ಹಸಿರಿನ ಪವಾಡಂಗಳು ನಡೆವ ಕಾಲದಲ್ಲಿ ತನ್ನ ಕೊಳಲ ಹಾಡಿನಿಂದ ಮಳೆ ಸುರಿಸಿದ ಚಂದಮುತ್ತನ ಕೀರ್ತಿ ಸುತ್ತೂ ಸೀಮೆಗೆ ಹಬ್ಬಿತು ನೋಡು ಹರಿಶ್ಚಂದ್ರನ ಗಾಳಿಯಂತೆ.

ಹಟ್ಟಿಯಲ್ಲಿ, ಹಟ್ಟಿಯವರ ಮನದಲ್ಲಿ
ಇನ್ನಿಲ್ಲ ಇವನ ಸಮನೆಂದು ಪೂರಾ ತುಂಬಿ
ಸಕಲರಿಗೆ ಬೇಕಾದವನಾದ ಚಂದಮುತ್ತ.
ಇಂಥ ಮಗನ ಪಡೆಯಲು ಲಕ್ಕಬ್ಬೆ
ಯಾ ಪುಣ್ಯ ಮಾಡಿದಳೊ ಯಾ ನೋಂಪಿ ನೋಂತಳೊ
ಎಂದು ಹೊಳಪುಳ್ಳ ಶಬ್ದಗಳಲ್ಲಿ ಹೊಗಳಿದರು ಜನ.

ಕೇರಿಗೆ ದೊಡ್ಡವನಾದ ಊರಿಗೆ ದೊಡ್ಡವನಾದ
ದಿಕ್ಕಿಗೆ ದೊಡ್ಡವನಾದ ನಾಡಿಗೆ ದೊಡ್ಡವನಾದ
ನಾಕು ರಾಜ್ಯ ಎಂಟು ದಿಕ್ಕಿನಾಗಿಲ್ಲ ಇವನ ಸಮ
ಎಂದು ಒಂದೆ ನುಡಿ ಸಾಕಿರಲು
ನೂರೊಂದು ಹೊಗಳಿದರು ಜನ.

ಮಳೆರಾಯನ ಪಳಗಿಸಿದನೆಂದು
ಸಿಡಿಲು ಮಿಂಚುಗಳ ಹಾದಿಗೆ ತಂದನೆಂದು
ರಮ್ಯ ವಚನಂಗಳಿಂದ ಹಾಡಿ
ಮಕ್ಕಳಿಗವನ ಹೆಸರಿಟ್ಟರು ಜನ.