ಚಂದಮುತ್ತನ ಕೀರ್ತಿ ಪುರಕ್ಕೆ ತಲುಪಿದೇಟ್ಗೆ
ಭೂಮಂಡಳ ಗಿರ್ರನೆ ತಿರುಗಿ ಸೂರ್ಯ ದೇವರು ಕಳಚಿ ಬಿದ್ದಂಗಾಯ್ತು ಮಹಾನುಭಾವನಿಗೆ.
ಇಂತಿಪ್ಪ ಕಲೆಗಾರ ಕೊಳಲೆಂತು ನುಡಿಸುವನೆಂಬುದ ಅರಿಯಬೇಕೆಂದು ಒಡೆಯನ ವಾಕ್ಯವಾದದ್ದೇ
ಹಾವು ಮೆಟ್ಟಿದ ಹಾಗೆ ನೆಗೆದು ನಿಂತ.
“ಸೈ ಬಿಡು ಒಡೆಯಾ, ಅವ ನನ್ನ ಶಿಷ್ಯ
ಹೇಳಿ ಕಳಿಸಿದರೆ ಓಡೋಡಿ ಬರುವ”
– ಎಂದು ಆಶ್ವಾಸನೆಯ ನೀಡಿ –
ಎಲ ಎಲಾ ಮಳೆತರಿಸುವಂತಾದನೆ ಗೊಲ್ಲರ ಬಾಲಕ!
– ಎಂದು ವಿಸ್ಮಯಂಬಟ್ಟು
ನಿರನುಭವಿ ಹೈದ ಏನೆಲ್ಲ ಆದ ನನ್ನ ದಯದಿಂದ;
ಹಿಂದುರುಗಿ ಬಂದು ಸಿದ್ದಿ ಸಾಧನೆಗಳ ಸುದ್ದಿಯ
ಹೇಳಬಾರದೆ?

ಮಳೆರಾಗ ನನಗರಿದು, ಹಾಗಿದ್ದರಿವನೆಲ್ಲಿ ಕಲಿತ?
ಮುದಿಜೋಗ್ತಿಯ ದರ್ಶನ ಯೋಗವಾಯಿತೆ?
– ಎಂದು ಅನುಮಾನ ಮೂಡಿ
ಆನಂದಗೆಟ್ಟು ನೆಲದ ಮ್ಯಾಲೆ ನಿಲ್ಲದಾದ.
ಹೇಳಿ ಕಳಿಸಿದರೆ –
ಅರಿತವನು ತಾನೆಂಬ,
ನುರಿತವನು ತಾನೆಂಬ,
ಮಳೆ ತರಿಸಿದವನು ತಾನೆಂಬ ಹಮ್ಮಿನಲಿ
ಬಾರದೆ ಇದ್ದಾನೆಂದು,
ಖುದ್ದಾಗಿ ಹೋಗಿ ಕರೆತರಬೇಕೆಂದು
ಹೇಳಿಕಳಿಸಿದ ಹಾಗೆ
ಚಂದಮುತ್ತನ ಹಟ್ಟಿಗಿಳಿದು ಬಂದ.