ನಾವು ಲೋಕದ ಕನಸುಗಳೆಲ್ಲ ಈಗ ಚಂದಮುತ್ತನ ಹಟ್ಟಿಯ ಕಾಡಿನಲ್ಲೇ ಬೀಡು ಬಿಟ್ಟಿದ್ದೆವು. ಎಲ್ಲೆಂದರಲ್ಲಿ ಹಸಿರೆಲೆಗಳಿಗೆ, ಹೂ ಚಿಗುರಿಗೆ, ದುಂಬಿ ಪಾತರಗಿತ್ತಿಗಳಿಗೆ, ಮನು ಮುನಿ ಮಾನವ ಖಗಮೃಗ ಜಾತಿಯ ಮನಸ್ಸುಗಳಿಗೆ ಅಂಟಿಕೊಂಡು ಚಂದಮುತ್ತ ಕೊಳಲು ತುಟಿಗಿಡುವುದನ್ನೇ ಕಾಯುತ್ತಿದ್ದೆವು. ಇಲ್ಲವೆ ಮೋಡಗಳಲ್ಲಿ ನವಿಲಾಟವಾಡುತ್ತ ಕಾಯುತ್ತಿದ್ದೆವು. ಕೊಳಲು ನುಡಿಸಿದನೇ, ಸುಖದ ಅಲೆಗಳಾಗಿ ತೇಲುವುದೊಂದೆ ಕೆಲಸ. ಇಂತಿರುವಲ್ಲಿ ಆ ದಿನ ಸಂಜೆ ಚಂದಮುತ್ತ ಹಿಂಡು ದನ ಮೇಯಿಸ್ಕೊಂಡು ಅಟ್ಟಿಸಿಕೊಂಡು, ಹಟ್ಟಿಗೆ ಬಂದು ಕೋಲುಕುಟ್ಟಿ ‘ಚಂದೂ ಚಂದಾಣ್ಣಾ ಚಂದಮುತ್ತಾ’ – ಹೆಂಗಿದ್ದರೆ ಹಂಗೇ ಎಲ್ಲಿದ್ದರಲ್ಲಿಂದ ಬರಬೇಕೆಂದು ಹೆಗಡೆ ಹೇಳಿದನಪೋ – ಎಂದು ಒದರಿದ್ದರಿಂದ ತುರ್ತಿನ ಕಾರ್ಯವೆಂದು ಅಬ್ಬೆಗೂ ಹೇಳದೆ ಓಡಿದ.

ಹೋಗಿ ನೋಡಿದರೆ ಹೆಗಡೆ ಮನೆಯ ಚಿತ್ರ ಚಾವಡಿಯಲ್ಲಿ ಮುಕ್ಕಾಲು ಮಂಚದ ಮ್ಯಾಲೆ ನೂರೆಂಟು ಬಿರುದು, ಬೆಳ್ಳಿ ಬೆತ್ತದ ದಂಡಸಮೇತ ಒರಗಿ, ಎಲಡಿಕೆ ಮೆಲ್ಲುತ್ತ ಎಡ ಅಂಗೈಯಲ್ಲಿ ಬಲ ಹೆಬ್ಬೆರಳೂರಿ ಸುಣ್ಣದಲಿ ಸೊಪ್ಪಿನ ತುಂಡು ತೀಡುತ್ತ ಕುಂತಿದ್ದಾನೆ ಮಹಾನುಭಾವ! ನೋಡಿದ್ದೇ ಚಂದಮುತ್ತನ ಹೃದಯ ಹೂವಿನಂತರಳಿ ದಡುಬಡನೋಡಿ ದಿಂಡುರಳಿ ಪಾದ ಪಡಕೊಂಡು “ಯಾವಾಗ ಬಿಜು ಮಾಡಿದೆ ಶಿವನೆ?” ಎಂದು ಗುರುಪಾದವ ಮತ್ತೆ ಮತ್ತೆ ಹಣೆಗೊತ್ತಿಕೊಂಡ. ಮಾರ್ಗಾಯಾಸವೆಂದು ಕಾಲೊತ್ತಿ ಪರಿಪರಿ ರೀತಿಯಲ್ಲಿ ಉಪಚರಿಸಿದ. ಇಷ್ಟಾದರೂ ಮಹಾನುಭಾವ ಏನೊಂದೂ ನುಡಿದಾಡದೆ ಕುಂತ ಹೆಗಡೆಯ ಕಡೆ ಮತ್ತವನ ಮಗನ ಕಡೆ ಕುಲಗುರುವಿನ ಕಡೆ, ನಿಂತ ಮಂದಿಯ ಕಡೆಗೆ ನೋಡುತ್ತ ಚಂದಮುತ್ತನ ಭಕ್ತಿಯ ತೋರಿಸಿ ಬೀಗುತ್ತ ಕುಂತ. ಪುರದಿಂದ, ನೇರ ಒಡೆಯನ ಕಡೆಯಿಂದ ಬಂದವನಾಗಿ ಹೆಗಡೆ ಸೈತ ಎಲ್ಲರನ್ನೂ ಹೆದರಿಸಿದ್ದ. ಈಗ ಈ ಕಾಡಿನ ಹೈದರಿಗೆ ತಾನು ಚಂದಮುತ್ತನ ಗುರುವೆಂಬುದು ತಿಳಿದಿರಲೆಂದು ಪ್ರಕಟದನಿಯಲ್ಲಿ ‘ಆಹಾ ಚೆಲುವಾಯ್ತು ನನ್ನಾಸೆ ಗೆಲುವಾಯ್ತೆಂ’ದು ಕಿಲಕಿಲ ನಗುತ “ಭೇಶ್ ಮಗನೆ, ನನ್ನ ಅಭಿಮಾನ ಕಾದ ಶಿಷ್ಯ ನೀನೊಬ್ಬನೇ ನೋಡು” ಎಂದು ಹೇಳಿ ಚಂದಮುತ್ತನ ಭಕ್ತಿಯ ದಯಮಾಡಿ ಸ್ವೀಕರಿಸಿ,

“ಗುರುವಿಗೆ ಸಣ್ಣವನಾಗಿ
ಹಟ್ಟಿಗೆ ದೊಡ್ಡವನಾಗಿ ಬಾಳು”

– ಎಂದು ಆಶೀರ್ವದಿಸಿದ. ಇದನ್ನೇ ಕಾಯುತ್ತಿದ್ದ ಹೆಗಡೆ ಚಿನ್ನಮುತ್ತನನ್ನ ಮಹಾನುಭಾವನ ಪಾದಂಗಳ ಮ್ಯಾಲೆ ಚೆಲ್ಲಿ “ಇದಕ್ಕೂ ಒಂದಿಷ್ಟು ವಿದ್ಯಾಬೋಧೆಯಾದರೆ ಧನ್ಯನಾದೇನು ಶಿವನೆ” ಎಂದು ಕೈಮುಗಿದ. ಮಹಾನುಭಾವ ಸಂತೋಷದಿಂದ

“ಹಂಗೇ ಆಗಲೇಳು”

– ಎಂದು ಕೃಪೆ ಮಾಡಿದ. ಆದರೂ ಬೆಂಕಿಯಂತೆ ಉರಿವ ಕಣ್ಣಿನ ಮಹಾನುಭಾವನ ನೋಡಿ ಹೆಗಡೆ ಮತ್ತು ಚಿನ್ನಮುತ್ತನ ಹೊರತು ಮತ್ಯಾರಿಗೂ ಸಂತೋಷವಾಗಲಿಲ್ಲ.

ಯಾವ ಕಜ್ಜ ಕಾರ್ಯಕೆ ಬರೋಣವಾದಿರೆಂದು ಚಂದಮುತ್ತ ಕೇಳಿ, ಅವನು ಉತ್ತರವ ಮರೆಮಾಚಿ ಗುರುಶಿಷ್ಯರಿಬ್ಬರೇ ವೇಳೆ ಮೀರುವತನಕ ಏಕಾಂತ ಮಾತಾಡಿಕೊಂಡರು. ಅಕ್ಕಪಕ್ಕದ ಸುದ್ದಿ, ಕಾಡು ನಾಡಿನ ಸುದ್ದಿ, ಮಹಾ ಶಿವರಾತ್ರಿಯ ಸುದ್ದಿಯ ಮಾತಾಡುತ್ತ ಮುದಿಜೋಗ್ತಿಯ ಪ್ರಸ್ತಾಪವಾದ ತಕ್ಷಣ ಮಿರಿಲೋಕದಲ್ಲಿ ಯಕ್ಷಿ ಹಾಕಿದ ಆಣೆ ನೆನಪಾಗಿ ಚಂದಮುತ್ತ –

“ಇಲ್ಲಿಂದ ಮುಂದೆ ಕೇಳಿದರೆ ನಿನಗೂ ಕೇಡು

ಹೇಳಿದರೆ ನನಗೂ ಕೇಡು ಗುರುಪಾದವೇ”

– ಎಂದು ಗಪ್ಪನೆ ಗುರುವಿನ ಕಾಲು ಗಟ್ಟಿಯಾಗಿ ಹಿಡಿದುಕೊಂಡ. ಮಾತಿನಲ್ಲಿ ಹೆಚ್ಚು ಕಡಿಮೆ ಬಂದದ್ದನ್ನು ಗಮನಿಸಿ ಮಹಾನುಭಾವನ ಅಭಿಮಾನ ಮುರಿಯಿತು. ಆಯಿತಾಯಿತು ಎಂದು ಕಾವಿ ಬಣ್ಣದ ಹಲ್ಲು ತೋರಿಸಿ ನಗಾಡಿ ಸುಮ್ಮನಾದ.

ಹರನ ಸಮ ಗುರು ಬಂದನೆಂಬ ವಾರ್ತೆಯ ಕೇಳಿ ಲಕ್ಕಬ್ಬೆ ಕರಿಕಂಬಳಿಯ ಮ್ಯಾಲೆ ಸೇಸಕ್ಕಿ ಹುಯ್ದು ಗದ್ದಿಗೆ ಮಾಡಿ ಆಸರೆಗೆ ಹಣ್ಣು ಹಾಲು ಜೇನುಗಳ ಸಜ್ಜು ಮಾಡಿ ವೀಳ್ಯದೆಲೆಯ ಸುಣ್ಣಬುಟ್ಟು ಇಟ್ಟು ದಾರಿ ಕಾದಳು. ಕಾಲ ತಡವಾಗಿ ಮಗ ಬಂದನೇ ಹೊರತು ಗುರು ಬರಲಿಲ್ಲ.