ಮಾರನೆ ದಿನ ಚಂದಮುತ್ತ ಕೋಳಿಯ ಕೂಗಿನಲ್ಲಿ ಮಿಂದು ಮಡಿಯುಟ್ಟು ಯಕ್ಷಿಯ ಗುಡಿಗೈದಿ ದಿನದಂತೆ ನೇವೇದ್ಯ ಬಾಗಿನಗಳ ಅರ್ಪಿತ ಮಾಡಿ ಹೊರಬಂದು ಬಾಗಿಲಿಕ್ಕಿಕೊಂಡು ಕಾದುನಿಂತ. ಗಳಿಗೆ ಎಷ್ಟಾದರೂ ಬಾಗಿಲು ತೆರೆಯಲಿಲ್ಲ. ಕಾದು ಕಂಗಾಲಾಗಿ ಮೆಲ್ಲಗೆ ಕದ ತೆರೆದು ಹಣಿಕಿ ಹಾಕಿದ. ವಿಗ್ರಹದ ಮುಂದಿನ ಮಡಿಬಟ್ಟೆ ಹಾಂಗೇ ಇದ್ದ ಚೋದ್ಯದ ನೋಡಿ ದುಃಖ ಗಾಬರಿಯಾಗಿ ಅಂಗಜಲ, ನೇತ್ರಜಲ, ಜಗುಳಿ, ನೆಲ ಒದ್ದೆಯಾದವು. ನನ್ನ ಭಕ್ತಿ ಭಿನ್ನವಾಯಿತೇ ! ಎಂದು ಗಡ ಗಡ ನಡುಗಿ ಯಕ್ಷಿಯ ಪಾದದ ಮ್ಯಾಲೆ ಮೈಚೆಲ್ಲಿ ಅಡ್ಡಬಿದ್ದ.

ಅಡಗಿಸಿಟ್ಟ ಕಪಟ ತಂತಾನೆ ಪ್ರಕಟವಾಗುವ ಹಾಂಗೆ ಯಾರೋ ನಕ್ಕದ್ದು ಕೇಳಿಸಿ ಚಂದಮುತ್ತ ಆಸುಪಾಸು ನೋಡಿದ, ಅಕ್ಕ ಪಕ್ಕ ನೋಡಿದ. ಮ್ಯಾಲೂ, ಕೆಳಗೂ ನೋಡುತ ಪರಿಶೋಧನೆ ಮಾಡಿದ. ವಿಗ್ರಹದ ಹಿಂದೆ ಅಡಗಿ ಕುಂತಿದ್ದ ಮಹಾನುಭಾವ ಫಳಾರನೆ ಮಿಂಚುವ ಹಲ್ಲು ತೋರಿಸಿ ನಂಜಿನ ನಗಾಡುತ್ತ ಈಚೆ ಬಂದ. ಘನಘೋರ ಆಘಾತವಾಯ್ತು ಚಂದಮುತ್ತನಿಗೆ.

ಚಂದಮುತ್ತ : ನಾನು ಬಾಗಿನವಿಟ್ಟು ಬಾಗಿಲಿಕ್ಕಿಕೊಂಡಾಗ ನೀನು ಒಳಗೇ ಇದ್ದೆಯಾ ಗುರುಪಾದವೇ?

ಮಹಾನುಭಾವ : ಹೌದು.

ಚಂದಮುತ್ತ : ಯಾಕಾಗಿ?

ಮಹಾನುಭಾವ : ನಿನ್ನ ಸತ್ಯ ಕಾಂಬುದಕ್ಕೆ.

ಚಂದಮುತ್ತ : ಕಂಡೆಯಾ?

ಮಹಾನುಭಾವ : ಆಹಾ ಕಂಡೆನಯ್ಯಾ ಕಂಡೆನು!
ಗೊಲ್ಲ ಕುಲದ ಸೋಜಿಗವ ಕಂಡೆನು!
ಹಟ್ಟಿಯ ಕೀರ್ತಿಶಿಖರದ ಬೆಳಕ ಕಂಡೆನು!
ಲೀಲೆಗಳ ಮರೆವ ಮಹಾ ಲೀಲೆಗಾರ ನೀನು
ನಿನ್ನ ಭಕ್ತಿಗೆ ಕಪ್ಪು ಬಿಳಿಯಾದದ್ದು,
ಬಿಳಿ ಬೆಳಕಿನಲ್ಲಿ ಕಲ್ಲಿನ ಯಕ್ಷಿ
ಹೆಣ್ಣು ದೇವತೆಯಾಗಿ ನಿನಗೊಲಿದದ್ದು ಕಂಡೆನು!

ಕಂಡೆನಯ್ಯಾ ಕಂಡೆನು
ಯಕ್ಷಿ ದಯಮಾಡಿ ನಕ್ಕದ್ದು
ಮೈಲಿಗೆ ಕಳೆದು ಮಡಿಯುಟ್ಟದ್ದು
ಚಂದ್ರಲೋಕದ ಗಾಳಿ ಬೀಸಿದ್ದು ಕಂಡೆನು!

ಚಂದಮುತ್ತ : ವ್ಯಂಗ್ಯದ ನುಡಿ ನಿನಗೆ ಶೋಭಿಸುವುದಿಲ್ಲ ಶಿವನೆ.

ಮಹಾನುಭಾವ : ನಿನಗೆ ಸುಳ್ಳು ಕೂಡ.

ಚಂದಮುತ್ತ : ನಾನೇನು ಸುಳ್ಳು ಹೇಳಿದೆ?

ಮಹಾನುಭಾವ : ಹಾಂಗಿದ್ದರೆ ವಿಗ್ರಹ ತಂತಾನೆ ಕೈಯಾರೆ ಯಾಕೆ ಮಡಿ ಉಡಲಿಲ್ಲ?

ಚಂದಮುತ್ತ : ಹಾಗೆಂದು ನಾನು ಕೊಚ್ಚಿಕೊಂಡಿಲ್ಲ.

ಮಹಾನುಭಾವ ಮಾತಿನಲ್ಲಿ ಸಣ್ಣವನಾದ. ವಿಗ್ರಹ ಮಡಿಯುಡುವ ವಿಚಾರ ಹೇಳಿದವನು ಚಿನ್ನಮುತ್ತ. ತನ್ನ ತಪ್ಪಿನ ಅರಿವಾಗಿ ಅದನ್ನು ಬಚ್ಚಿಟ್ಟುಕೊಂಡು ಎಡಗೈ ಕಿರು ಉಗುರು ಕಚ್ಚಿ ಮುಗುಳ್ನಕ್ಕು ಹೇಳಿದ.

ಮಹಾನುಭಾವ : ಆಯಿತಯ್ಯ,
ರಚನೆಯ ಮಾತು ಬಿಟ್ಟು
ಮುದಿಜೋಗ್ತಿಯ ವೃತ್ತಾಂತ ಹೇಳಯ್ಯ,
ಅವಳಿಂದ ಹ್ಯಾಗೆ ವಿದ್ಯವ ಪಡೆದೆ?
ಎಂಬಿತ್ಯಾದಿ ಒಂದೂ ಬಿಡದೆ ಹೇಳು.

ಚಂದಮುತ್ತ : ಶಿವಪಾದವೇ,
ಬಲಗೈ ಭಾಷೆ, ಎಡಗೈನಂಬಿಕೆ ಕೊಟ್ಟು
ಹೇಳುತ್ತೇನೆ, ನನ್ನ ಮಾತು ನಂಬು.
ಜುಲುಮೆಯ ನಿಲ್ಲಿಸಿದರೆ ಇಲ್ಲಿಗೆ
ಇಬ್ಬರಿಗೂ ಹಿತ.

ಮಹಾನುಭಾವ : ಹೆಚ್ಚಳ ಪಡಬೇಡವೋ ಗೊಲ್ಲಕುಲದ ಹೊಸಕುಡಿಯೇ, ಈಗಷ್ಟೇ ಕುಡಿ ಬಿಟ್ಟಿದ್ದೀಯಾ, ನೆತ್ತಿಯ ಸುಳಿ    ಬಲಿಯುವ ತನಕ ನಿಧಾನಿಸು. ಗುರುವಿಗೂ ಮಿಗಿಲೇನು ಆ ನಿನ್ನ ಮುದಿ ಜೋಗ್ತಿ? ಗುರುದ್ರೋಹ ದೋಷಕ್ಕೆ ಈಡಾಗಬಾರದೆಂಬಲ್ಲಿ ನುಡಿಗಳಿಗೆ ವೇಷ ತೊಡಿಸದೆ ನಿಜವಾರ್ತೆಯ ಹೇಳು.

ಚಂದಮುತ್ತ : ಕಿವಿಯ ಸುಖವ ನಾನು ನುಡಿಯಲಾರೆ ಶಿವನೇ.

ಮಹಾನುಭಾವ : ಹಾಂಗಿದ್ದರೆ ನೀನೇ ತೂಕ ಮಾಡಿ ಹೇಳಯ್ಯಾ, ತಂದೆಗಿಂತ ನೂರು ಮಡಿ ಹೆಚ್ಚಿನ ಗುರುವಾಗಿ ಬೋಧನೆ ಮಾಡಿದ ನಾನು ಕಮ್ಮಿ; ಆ ಮುದಿಜೋಗ್ತಿ ಹೆಚ್ಚಲ್ಲವೆ ನಿನಗೆ?

ಚಂದಮುತ್ತ : ಪೂರ್ವಾಪರವರಿಯದೆ ಮಾತಾಡುತ್ತಿರುವಿ ಗುರುವೆ. ಈ ಮೂಲಕ ರಿಪೇರಿಯಾಗದ ಅಪಾಯಗಳ ಇಬ್ಬರಿಗೂ ತಂದೊಡ್ಡುವಿ ಅಂತ ಗೊತ್ತೇನು?

ಮಹಾನುಭಾವ : (ಪ್ರಾಯ ನೋಡಿ ಪಟ್ಟು ಹಾಕುವಂತೆ) ಆಯಿತಯ್ಯ. ದಕ್ಷಿಣೆ ತೆರಬೇಕಲ್ಲವೆ ಗುರುವಿಗೆ ನೀನು? ಗುರುವಿಗೆ, ಗುರು ಕಲಿಸಿದ ಕಲೆಗೆ, ಕಲೆಯೊಂದಿಗೇ ಬರುವ ಅದರ ಪರಿವಾರಕ್ಕೆ. ಕೃತಜ್ಞತೆ ಅಂಬೋದಿದ್ದಲ್ಲಿ ಮುದಿಜೋಗ್ತಿಯ ವೃತ್ತಾಂತವನ್ನೇ ಕೊಡು.

ಚಂದಮುತ್ತ : ಕೇಳಿದ ತಪ್ಪಿಗೆ ದುಬಾರಿ ದಂಡ ತೆರಬೇಕಾಗುತ್ತದೆ ನೀನು.

ಮಹಾನುಭಾವ : ಹೇಳಿದಿದ್ದರೆ ನೀನು ಕೂಡ.

ಚಂದಮುತ್ತ : (ಭಾವೋದ್ರೇಕದಿಂದ) ಹಾಂಗಿದ್ದರೆ ಕೇಳು,
ಒಡೆಯಬಾರದ ಮಾತು ಒಡೆದಲ್ಲಿ
ಹೇಳಕೇಳುವ ನಾವಿಬ್ಬರೂ
ಪ್ರಾಣ ಬಿಡುವುದು ಖಚಿತ.
ಗುಟ್ಟು ಹೇಳಿದ್ದಕ್ಕೆ ನನ್ನೊಬ್ಬನ ಪ್ರಾಣ ಮಾತ್ರ
ಹೋಗುವಂತಿದ್ದರೆ ಆಗಲೆಂದು ಅರ್ಪಿತ ಮಾಡುತ್ತಿದ್ದೆ.
ಆದರೆ ಕೇಳಿದ ನೀನೂ
ನನ್ನ ಜೊತೆಗೇ ನಾಲಗೆ ಹಿರಿದು
ಪ್ರಾಣ ಬಿಡುತ್ತಿ
ಹೇಳಲೇನು?

ಮಹಾನುಭಾವ : ಅದೇನೆಂಬುದು ಕೇಳಿಯೇ ಸಾಯುತ್ತೇನೆ, ಹೇಳಯ್ಯಾ, ಎಂದು ಘಟ ಹೋದರೂ ಹಟ ಬಿಡಬಾರದೆಂದು, ಆದರೂ ಜೀವಭಯದಲ್ಲಿ ಅಳ್ಳೆಯ ಅರಳಿಸಿಕೊಂಡು ಕೆಂಡಗಣ್ಣಾಗಿ ನಿಂತುಕೊಂಡ ಮಹಾನುಭಾವ.

“ಹಾಗಿದ್ದರಿಗೋ ಕೇಳು”

– ಎಂದು ನಿರ್ಧಾರವಾಗಿ ನಿಂತಿದ್ದ ಚಂದಮುತ್ತ ಒಂದು ಕ್ಷಣ ಧ್ಯಾನ ತಪ್ಪಿ ಚಿತ್ತ ಮಿಡಿದು ಸುಮ್ಮನಾದ. ಸುಮ್ಮನಾಗುವ ಅಗತ್ಯವಿತ್ತು ಅವನಿಗೆ. ಸಾವಿನ ಭಯದಿಂದಲ್ಲ. ಹೇಳುವ ಮುನ್ನ ಸಾವಿರಾರು ಕನಸುಗಳನ್ನು ಬಲಿಕೊಡಬೇಕಾಗಿತ್ತು. ಒಂದೊಂದು ಕನಸೂ ಕರುಳಿಗಂಟಿಕೊಂಡು ಬೆಳೆದಿತ್ತು.

ಸಿದ್ಧಿ ಒಂದು ಶಾಪ, ಪ್ರಸಿದ್ಧಿ ಇನ್ನೊಂದು ಶಾಪ. ಪ್ರಸಿದ್ಧಿಯಾಸೆ ಅಸೂಯೆ ಹುಟ್ಟಿಸಿ ಮಹಾನುಭಾವನ ಎದೆಯಲ್ಲಿ ನಾಟಿ ಗಾಯ ಮಾಡಿತ್ತು. ಗುಣ ಹೊಂದುವ ಲಕ್ಷಣಗಳಿರಲಿಲ್ಲ. ಕೀಳುಗೀಳಿಗೆ ಗಂಟುಬಿದ್ದು ಚಂದಮುತ್ತನ್ನ ಗೋಳು ಗೋಳೆಂದು ಕಾಡಿಸಿ ಪೀಡಿಸಿ ಅವನು ತನ್ನ ಸತ್ಯಗಳನ್ನು ವ್ಯರ್ಥ ತೇಯುವ ಹಾಗೆ ಮಾಡಿದ. ಆದರೆ ಕೊನೆಯಲ್ಲಿ ಇಬ್ಬರ ವಾದ ಈ ಘಟ್ಟ ತಲುಪೀತೆಂದು, ಆತ್ಮಹತ್ಯೆಗಿಬ್ಬರೂ ಸಿದ್ಧರಾದರೆಂದು ನಮಗ್ಯಾರಿಗೂ ಅಂದಾಜಾಗಿರಲಿಲ್ಲ.

ಅಷ್ಟೂ ಕನಸುಗಳನ್ನು ಬಲಿಕೊಟ್ಟು ಚಂದಮುತ್ತ ಕಣ್ಣುಮುಚ್ಚಿ ಹೆತ್ತಯ್ಯ ಮುತ್ತಯ್ಯರ ನೆನೆದು, ಲಕ್ಕಬ್ಬೆ, ಕಪಿಲೆ, ಚಕೋರಿ ಎಂಬ ಯಕ್ಷಿಯ ನೆನೆದು, ಹಂಕಾರ ಪಡುವವರ ಬೆಂಕೀಲಿ ಸುಡುವ ಕೆಂಡಗಣ್ಣ ಸ್ವಾಮಿ ಶಿವನ ನೆನೆದು ಹೇಳುವುದಕ್ಕೆ ಬಾಯಿ ತೆಗೆದ ನೋಡು –

ಅಷ್ಟರಲ್ಲಿ ಯಕ್ಷಿ ಗುಡಿಯ ದ್ವಾರಬಾಗಿಲು ಧಡಾರನೆ ಮುಚ್ಚಿಕೊಂಡಿತು. ಇಬ್ಬರೂ ಆ ಕಡೆ ನೋಡಿದರು. ಮಹಾನುಭಾವ ಹೇಳಬೇಡವೆಂದು ಕೈಸನ್ನೆ ಮಾಡಿ ಸೂಚಿಸಿ ಆಗಲೇ ತನ್ನನಗಲಿದ್ದ ಉಸಿರನ್ನ ದೀರ್ಘವಾಗಿ ತಗೊಂಡು ಮೈಯಂತ ಮೈಯೆಲ್ಲ ಜಲಜಲ ಬೆವರಿ ಕುಸಿದ. ಸುಧಾರಿಸಲು ಸಮಯವೇ ಹಿಡಿಯಿತು. ಅಷ್ಟರಲ್ಲಿ ಗುಡಿಯ ದ್ವಾರ ಬಾಗಿಲು ತೆರೆಯಿತು. ಮೈಲಿಗೆ ಬಟ್ಟೆ ಹೊರಕ್ಕೆ ಬಿತ್ತು. ಹೋಗಿ ನೋಡಿದರೆ ಯಕ್ಷಿಯ ಮೈಮ್ಯಾಲೆ ಮಡಿಬಟ್ಟೆಯಿತ್ತು. ಅರ್ಥವಾಗಿ ನಕ್ಕ ಮಹಾನುಭಾವ

“ಇಷ್ಟಾದ ಮ್ಯಾಕೆ ನನ್ನವರ್ಯಾಕೆ ತನ್ನವರ್ಯಾಕೆ?”

ಎಂದುಕೊಳ್ಳುತ್ತ ಹೇಳಕೇಳದೆ ಹಟ್ಟಿಯ ಕಡೆಗೆ ನಡೆದ. ನಾನು ಕಾರಣವಾಗಿ ಮಾನಕ್ಕೆ ಹೀನಾಯವಾದರೂ ಇಂತೆಂಬ ಕಷ್ಟನಿಷ್ಠುರದಿಂದ ಪಾರು ಮಾಡಿದೆಯಲ್ಲ ದೇವೀ ಎಂದು ಚಂದಮುತ್ತ ಯಕ್ಷಿಯ ಪಾದಕ್ಕೆ ಹಣೆ ಗಟ್ಟಿಸುತ್ತಿರಬೇಕಾದರೆ –