ಈ ಕಡೆ ಹಾಡಿಯಲ್ಲಿ ಏನು ಕಥೆ ನಡೆಯಿತೆಂದರೆ, ಪುಣ್ಯಕೋಟಿ ಲಕ್ಕಬ್ಬೆಗೆ ಚಂದಮುತ್ತನ ಚಿತ್ರ ಚರಿತ್ರದ ಬಗ್ಗೆ ಚೋದ್ಯದ ಸುದ್ದಿ ತಲುಪಿ ಆಘಾತವಾಗಿತ್ತು. ಮಗನಿಲ್ಲದಾಗ ಮಗನ ಗುರುದೇವ, ಅದೇ ಆ ಮಹಾನುಭಾವ ಬಂದು “ಯಕ್ಷಿಯ ಸಂಗವಾಗಿದೆ ಮಗಂಗೆ; ಕಾಪಾಡಿಕೊ” ಎಂದು ಅವನು ಹೇಳಿ, ಇವಳು ಕೇಳಿದ್ದೇ ಆಯ್ತು ನೋಡು ಬೋಧೆ ತಪ್ಪಿಬಿದ್ದಳು. ಸ್ಮೃತಿ ಬಂದಾಗ ಮಹಾನುಭಾವ ಇರಲಿಲ್ಲ. ಕಣ್ಣಿಂದ ಜಲಬಿಂದು ಜಗುಳಿ ಮುದುಕಿಯ ಆನಂದಗಳು ಇದ್ದಿಲಾದವು. ನೆಲಮುಗಿಲುಗಳಿಗೆ ತನ್ನ ದುಃಖವ ತೋಡಿಕೊಂಬಂತೆ ಮ್ಯಾಲೂ, ಕೆಳಗೂ ನೋಡಿ,

ಶಿವನೇ ಸಲವಬೇಕು ನೀ ನಮಗ
ಎತ್ತು ಬಗಲಾಗ

– ಎಂದು ಶಿವದುಃಖ ಮಾಡುತ್ತ,

ಹೂವಿನ ವಿನ್ಯಾಸದ
ಮೂರ್ಕಾಲಿನ ಮಂಚವನೊರಗಿ
ಮುಂಗೈ ಮ್ಯಾಲೆ ಗದ್ದವ ಹೇರಿ ಗುಮಾನಿ ಬಂದು
ಚಿಂತಿಯ ಮಾಡಿದಳು.
ಏನೆಂದು ಚಿಂತಿಯ ಮಾಡಿದಳು?
ಎಲ ಎಲ, ಹೌಂದಲ್ಲ!
ಮಂದಮತಿಗೆ ಹೊಳೆದಿರಲಿಲ್ಲ.

ರಾತ್ರಿಯಿಡೀ ಎಲ್ಲೆಲ್ಲೊ ಅಲೆದಾಡಿ ಬರುವ
ಸುಖ ಸುರತದಲ್ಲಿ ಅದ್ದಿ ಬಂಧಂಗಿರುವ
ಮುರಿದ ಶಬ್ದಗಳಲ್ಲಿ ಏನೇನೊ ಕನವರಿಸುವ
ಆಡುತಾಡುವ ಶಬ್ದಗಳ ಮರೆವ
ನೋಡಿ ನೋಡದ ಹಾಗೆ ನುಡಿಸದೆ ಹೋಗುವ
ಹತ್ತಿರ ಬಂದರು ತಾತ್ಸಾರ ಮಾಡುವ
ಎಲೆ ಮರೆಯ ಪರಾಗಭರಿತ ಹೂವಿಗಾಗಿ
ದುಂಬಿಯಂತೆ ಹಂಬಲಿಸುತ್ತ
ಸದಾ ಪರಾಗ್ಯಾನ ಪರಚಿತದಲ್ಲಿರುವ !

ಇದೆಲ್ಲ ಹೆಣ್ಣಿನ ಸಂಗದೋಷವಲ್ಲವೆ?
ಹೆಣ್ಣೆಂದರೆ ಇವನಿಗೆ ಯಕ್ಷಿಯ ವಿನಾ ಇನ್ಯಾರು?

ಈಗೊ ಇನ್ಯಾವಾಗೊ ಹರಣ ಹಾರ್ಯಾವೆಂದು
ಹಾಗೂ ಹೀಗೂ ಕಾದು ಹ್ಯಾಗೊ ಬದುಕಿದ್ದೇನೆ.
ಹ್ಯಾಗಿರುವಿ ಎಂದೊಮ್ಮೆ ಕೇಳಿದನ?
ಇವನಿಗೆ ಹತ್ತಿದೆ ಅಮರಿದ ವ್ಯಸನ.
ತಂದೆಯಿಲ್ಲದ ಕಂದನೆಂದು ಕೊಂಡಾಟದಲ್ಲಿ ಬೆಳೆಸಿದರೆ
ಬೇಲಿಯಿಲ್ಲದ ಬದುಕಾಯಿತಲ್ಲ ಮಗಂದು!
ಇದನು ಅನ್ಯರಿಗೆ ಹೇಳಲಮ್ಮೆ ಶಿವನೆ ಕೇಳಲಮ್ಮೆ.

ಈಗಿವನಿಗೆ ನೀತಿನುಡಿ ಹೇಳಬಲ್ಲವನು ಕುಲಗುರವೆ ಸೈ ಎಂದು
ಬುದಿಂಗನೆದ್ದು ಕುಲಗುರವಿನಲ್ಲಿಗೆ ಓಡಿದಳು: ನಮಸ್ಕಾರವ
ಮಾಡಿ, ಏನ್ಹೇಳ್ಲಿ ನನ್ನಪ್ಪ ಚಂದಮುತ್ತ.

ಒಂದರಿತು ಇನ್ನೊಂದನರಿಯದ ಕಂದನ
ನಡೆ ಚೋದ್ಯವೋ ಶಿವನೆ ನುಡಿ ಚೋದ್ಯ | ನೀನಾರೆ
ಹೇಳಬಾರದೆ ನೀತಿನುಡಿಯ ||

ಕ್ಷಣ ನಕ್ಕು ದಿನವೆಲ್ಲ ಹುಬ್ಬುಗಂಟಾಗುವನು
ಹೃದಯಕ್ಕೆ ಬಾಹಿರಳ ಮಾಡಿ | ನೋಡುವನು
ಮುಳ್ಳಿರುವ ನೋಟಗಳ ಬೀರಿ ||

ಚಂದ್ರನ ಕಲೆಯಂಥ ಕಲೆಗಳು ಮೂಡ್ಯಾವು
ಕಂದನ ಕೆನ್ನೆಯಲಿ ದಿನವು | ಕಣ್ಣಲ್ಲಿ
ದಣಿದ ಸುಖ ಆಕಳಿಸತಾವು ||

– ಎಂದು ಹಾಡಿಕೊಂಡತ್ತಳು. ಯಕ್ಷಿಯ ಸಂಗವಾಗಿದೆಯಂತೆ ಮಂಗಂಗೆ ಕವಡೆ ಚೆಲ್ಲಿ ಶಾಸ್ತ್ರ ನೋಡು ನನ್ನಪ್ಪಾ ಎಂದು ಜಲಜಲ ಕಣ್ಣೀರು ಸುರಿಸಿದಳು.

ತಾಯಿ ನುಡಿ ಸಾದ್ಯಂತ ಕೇಳಿ ಕಳವಳ ವೇದ್ಯವಾಗಿ ಕುಲಗುರು ಶಿಷ್ಯನ ಬಗ್ಗೆ ಚಿಂತಿಸುತ್ತ ಚೌಕಚಿತ್ತಾರದ ಮಣೆ ಮ್ಯಾಲೆ ಕಂತೆ ಹಾಸಿ ಕವಡೆಗಳ ತಂದು ಬೆಟ್ಟದ ಕಡೆ ಮುಖ ಮಾಡಿ ಸಿರಿಮಾಯಿಯ ಧ್ಯಾನಿಸಿದ. ಆಮ್ಯಾಲೆ ಭಕ್ತಿಯಿಂದ ಕವಡೆ ಚೆಲ್ಲಿ ಬೆರಳೆಣಿಸಿ, ಗಣಿತ ಗುಣಿಸಿ ಲೆಕ್ಕಾಚಾರ ಹಾಕಿ ಗಂಭೀರವಾಗಿ ಹೇಳಿದ.

ಕುಲಗುರು : ಹೌದು ಅಬ್ಬೆ.
ಮಗಂಗೆ ಯಕ್ಷಿಯ ಸಂಗವಾಗಿದೆಯೆಂದು
ಶಾಸ್ತ್ರ ಹೇಳುತ್ತದೆ.

ಲಕ್ಕಬ್ಬೆ : ಅಯ್ಯೊ ಅಯ್ಯೊ ನಾನು ಕೇಳಿದ್ದು
ನಿಜವಾಗಿದೆಯಲ್ಲಪ್ಪ

ಕುಲಗುರು : ಆದರವಳು ನೀನಂದುಕೊಂಡಂತೆ
ಸೇಡುಮಾರಿ ಯಕ್ಷಿಯಲ್ಲ ಅಬ್ಬೆ.

ಲಕ್ಕಬ್ಬೆ : ಅವಳು ಆಕಾಶದ ತುದಿಯಲ್ಲಿರುವವಳು
ನಮಗೆ ದೇವರೊಂದಿಗೆ ಒಗೆತನ
ಅಥವಾ ವೈರ ಸಾಧ್ಯವೆ ಶಿವನೆ?

ಕುಲಗುರು : ಸಮಾಧಾನ ಮಾಡಿಕೊ ಅಬ್ಬೆ.
ಚಂದಮುತ್ತ ನಿನಗೆ ಮಗನಾದರೆ ನನಗೆ ಶಿಷ್ಯ.
ಶಾಸ್ತ್ರ ರೀತ್ಯಾ ಲಾಭಾಂಶಗಳೇ ಜಾಸ್ತಿಯಿವೆ
ಈ ಒಗೆತನದಲ್ಲಿ.

ಲಕ್ಕಬ್ಬೆ : ಅವಳು ಎಷ್ಟೆಂದರೂ ಬ್ಯಾರೆ ಸೀಮೆಯವಳು.
ಹಸಿರು ಕಣ್ಣವಳು, ಕರಾಳ ವಿದ್ಯೆ ಬಲ್ಲವಳು.
ಅವಳ ಕಟ್ಟಳೆ ಹ್ಯಾಗಿದೆಯೊ!
ಅವಳ ಜೊತೆ ವ್ಯವಹರಿಸಲಿಕ್ಕೆ
ನಿನ್ನ ಜಾಣ್ಮೆ ಸಾಲದೇ ಬರಬಹುದು ಅಂತ
ತಿಳಿಹೇಳಿ ಮಗನ ಪಳಗಿಸು ಶಿವನೇ.

ಕುಲಗುರು : ನಮ್ಮಳವು ಮೀರಿದ ಸತ್ಯಗಳು ಬೇಕಾದಷ್ಟಿವೆ ಅಬ್ಬೆ;
ಅವುಗಳನ್ನ ಶಿವ ನೋಡಿಕೊಳ್ಳುತ್ತಾನೆ. ಮಗನನ್ನ
ಹ್ಯಾಂಗೊ ಯಕ್ಷಿಗೆ ಗುಡ್ಡ ಬಿಟ್ಟಿರುವಿ. ಇನ್ನವನ
ಆಗುಹೋಗು ಅವಳದಲ್ಲವೆ? ನೀನು ಯಕ್ಷಿಯ
ಮೀಯಿಸಿದ ದಿನ ಕಾರಣಿಕದಲ್ಲಿ ನಿನ್ನನ್ನವಳು ಅತ್ತೆ ಅಂದದ್ದು
ನೆನಪಿದೆಯ ಅಬ್ಬೆ?

ಲಕ್ಕಬ್ಬೆ : ಆಹಾ ಹೌದು ಶಿವನೇ!
ಎಂದು ನೆನಪಾಗಿ ತಾಯಿ
ಸಳಸಳ ಪುಳಕ ಜಲದಲ್ಲಿ ಅದ್ದಿಹೋದಳು.

ಕುಲಗುರು : ಅಂದಿನಿಂದ ಚಂದಮುತ್ತನ ಕೀರ್ತಿ ಹಬ್ಬಿದೆ.
ನಮ್ಮ ಕಾಡು ಹೆಚ್ಚು ಹಸಿರಾಗಿದೆ.
ಕೊಟ್ಟಿಗೆಯಲ್ಲಿ ದನಕರು, ಕಾಡಿನಲ್ಲಿ ಜೇನು,
ಹಣ್ಣು ಹೆಚ್ಚಿಲ್ಲವೆ?
ನಮ್ಮ ಕೂಸುಗಳು ಹೆಚ್ಚು ಹೆಚ್ಚು ಹಡೆಯುತ್ತಿಲ್ಲವೆ?
ಹೆರಿಗೆಯಾದ ಒಂದು ಮಗುವೂ ಸತ್ತಿಲ್ಲ; ಸಾಕಲ್ಲವೆ?
ಚಂದಮುತ್ತ ಸಣ್ಣ ಹರೆಯದಲ್ಲಿ
ದೊಡ್ಡದನ್ನು ಸಾಧಿಸಲು ತಪಿಸುತ್ತಿದ್ದಾನೆ.
ಯೋಗ ಭಾಗ್ಯ ಹಾಂಗಿದ್ದರೆ ಹಂಗೇ ಆಗಲೇಳು.
ನಿನ್ನ ಗೋಳುಗಳಿಂದವನ ವ್ರತಭಂಗ ಮಾಡಬೇಡ.
ಯಕ್ಷಿಯನ್ನ ಸೊಸೆಯಾಗಿ ಪಡೆದುದಕ್ಕೆ
ಕುಲದೇವರ ಹಬ್ಬ ಮಾಡಬೇಡ ನೀನು
ಹೋಗು ಹೋಗು.

– ಎಂದು ತಿಳಿಹೇಳಿ ಕಳಿಸಿದ. ಮಗನನ್ನ ಇನ್ನೊಮ್ಮೆ ಕಳಕೊಂಡಂತೆ ಗೋಳಾಡಿದಳು ಮುದುಕಿ. ಆಮೇಲಾಮೇಲೆ ತಾಯಿಗೆ ವಿಚಿತ್ರ ಅನುಭವಗಳಾದವು. ಒಮ್ಮೊಮ್ಮೆ ಹೊಸ ಲೋಕದ ಹೆಸರಿಸಲಾಗದ ಸುಖದ ಸನ್ನಿಧಿಯಲ್ಲಿದ್ದಂತೆ ಅಕಾರಣ ಆನಂದಗಳ ಅನುಭವಿಸಿದಳು. ರಾತ್ರಿ ಹೊಳಹುದೋರದ ಶಾಂತ ಬೆಳಕು ಗೂಡಿನ ತುಂಬ ಸುಳಿದಾಡಿದ್ದ ಕಂಡಳು. ಮಗನೊಂದಿಗೆ ತನ್ನ ಗೂಡಿಗೆ ಯಾರೋ ಅತಿಥಿ ಬಂದ ಹಾಗೆ, ಗಾಳಿಯಲ್ಲಿ ಗಾಳಿಯಾಗಿ ಸಂಚರಿಸಿದ ಹಾಗೆ ಅನಿಸಿಕೊಂಡಳು. ದನಕರು ಅನೇಕ ಬಾರಿ ಇದ್ದಕ್ಕಿದ್ದಂತೆ ಕಿವಿ ನಿಮಿರಿ ಕಣ್ಣುಗಳ ಅಗಲವಾಗಿ ತೆರೆದು, ರೆಪ್ಪೆ ತುಳುಕದೆ, ನಿಶ್ಶಬ್ದವಾಗಿ ತನ್ನ ಅಥವಾ ಮಗನ ಹಿಂದೆ ಅಥವಾ ಮುಂದೆ ಅಥವಾ ಅಕ್ಕಪಕ್ಕ ನೋಡುತ್ತ ಮೈಮರೆಯುತ್ತಿದ್ದವು.

ಏನೇ ಆದರೂ ಯಕ್ಷಿ ನೆತ್ತರಲ್ಲಿ ಹುಟ್ಟಿದವಳಲ್ಲ. ನೀರಲ್ಲಿ ಬೆಳೆದವಳಲ್ಲ. ಅವಳೇನು ಉಂಡುಟ್ಟು ಬಾಳುವ ಹೆಣ್ಣೆ? ಇಲ್ಲಿಗೆ ತನ್ನ ಸಂತಾನ ಸಮಾಪ್ತಿಯಾಯಿತೆಂದು ನೆನಪಾದೊಡನೆ ಬೆಲ್ಲದಂಥಾ ಮನಸ್ಸು ಬೇವಾಗಿ ಹಡೆದ ಒಡಲಿಗೆ ಕೆಂಡ ತುಂಬಿದೆಯೇ ಮಾಯಿ – ಎಂದು ಏಳೇಳು ಲೋಕದ ಶಿವದುಃಖ ಮಾಡುತ್ತ ಕೂರುತ್ತಿದ್ದಳು. ಮಗನ ಪಳಗಿಸಲಾರೆನೆಂಬ, ಆಗುವ ಅನಾಹುತವ ತಪ್ಪಿಸಲು ತನ್ನಿಂದಾಗದೆಂಬ ನಿರ್ಧಾರಕ್ಕೆ ಬಂದಂತಿದ್ದಳು ಮುದುಕಿ. ನಾವೇನು ಹೇಳಿದರೂ ಅದಕ್ಕೆ ಕಲ್ಲಿನಂತೆ ಇಲ್ಲವೇ ಕಾಡಿನಂತಿರುತ್ತಿದ್ದಳು. ದಿನಾ ಕ್ಷೀಣಿಸುತ್ತಾ ಯಾವಾಗ ನೋಡಿದರೂ ಗುಟ್ಟಾಗಿ ಅತ್ತ ಹಾಗಿರುತ್ತಿದ್ದಳು. ತನ್ನಷ್ಟಕ್ಕೆ ತಾನು ಮಾತಾಡಿಕೊಳ್ಳುತ್ತಿದ್ದಳು. ನಮಗೆ ಆ ಮಾತು ಕೇಳಿಸುತ್ತಿರಲಿಲ್ಲ, ಕೇಳಿದರೂ ತಿಳಿಯುತ್ತಿರಲಿಲ್ಲ.