ನಮ್ಮ ಕಥೆಗೆ ಒಂದಿನಿತೂ ಒದಗದ ಮಹಾನುಭಾವ ಮರೆವಿಗೆ ಸಂದು ಆರೆಂಟು, ಚಂದ್ರರು ಕಳೆದರು. ಈ ಮಧ್ಯೆ ಚಂದಮುತ್ತ ತಿಂಗಳುರಾಗದ ಕಠಿಣ ವ್ರತಾಚರಣೆಯಲ್ಲಿದ್ದಾನಾಗಿ ಘಟಿತಂಗಳೇನೂ ನಡೆಯಲಿಲ್ಲ.

ಅದೇನು ವ್ರತಾಚರಣೆಯೋ, ಚಂದಮುತ್ತ ದಿನಾ ತಾರೆ ಅಡಗಿ ತಾವರೆ ಅರಳುವ ಹೊತ್ತಿಗೆದ್ದು ಜಳಕವ ಮಾಡಿ ಜಡೆಕಟ್ಟಿ ಲಂಗೋಟಿ ಹಾಕಿಕೊಂಡು, ಮುಂಜಾನೆಯ ಹಾಲುಗಂಜಿ ಉಂಡು ಒಡಲ ತಂಪೇರಿಸಿಕೊಂಡು ಕಾಡು ಹೊಕ್ಕನೆಂದರೆ ಹೊರ ಬರುವುದು ಯಾವಾಗಲೊ. ವ್ರತಾಚರಣೆಯ ವಿಧಿಗಳು ಬೋರು ಬೋರೆಂದು ನಾವ್ಯಾರೂ ಆ ಕಡೆ ಸುಳಿಯಲಿಲ್ಲ. ಆ ದಟ್ಟ ಕಾಡಿನಲ್ಲಿ ಗಿಡಬಳ್ಳಿಗಳ ಅಡಿ ಪೊದರು ಕಡಿದು, ಮೇಲು ಪೊದರು ಸವರಿ ದಾರಿಮಾಡಿಕೊಂಡು ಚಂದ್ರಮುತ್ತನಿದ್ದಲ್ಲಿಗೆ ಹೋಗುವಷ್ಟು ಆಸಕ್ತಿ ನಮ್ಮಲ್ಲಿರಲಿಲ್ಲ.

ಚಂದ್ರಮುತ್ತ ಯಕ್ಷಿಯ ಸ್ನೇಹವ
ಚಪ್ಪರಿಸಿ ಸವಿದನೆಂದು
ಪರಾಗಭರಿತ ಹೂವಿನಲ್ಲಿ ದುಂಬಿ
ಹುದುಗಿ ಹೋಯಿತೆಂದು

ಪ್ರಿಯವಾದ ಚಾಡಿಗಳ ಹಾಡುಮಾಡಿ ಚಂಡಿನ ಹಾಗೆ ಅವುಗಳನ್ನು ನಮ್ಮ ಮಧ್ಯೆ ಎಸೆದಾಡುತ್ತ ಪರಸ್ಪರ ಚುಡಾಯಿಸುತ್ತ ಯಕ್ಷಿಯ ಗುಡಿಯ ಮ್ಯಾಲಿನ ಮೋಡಗಳಲ್ಲಿ ನವಿಲಾಟವಾಡುತ್ತ ಕಾಲ ಕಳೆಯುತ್ತಿದ್ದೆವು.

ಆದರೆ ಯಾವಾಗಂದರೆ ಆವಾಗ ಕೊಳಲ ತಾಲೀಮಿನ ದನಿ ಕೇಳಿಸಿ ಕಿವಿ ನಿಮಿರಿ ನಿಲ್ಲುತ್ತಿದ್ದೆವು. ನಾವು ಹಿಂದೆಂದೂ ಕೇಳರಿಯದ ನಾದಂಗಳು, ಹಾಡಿನ ತುಂಡುಗಳು ಪರಿಮಳದಂತೆ ತೇಲಿಬಂದು ಪರವಶಗೊಳಿಸುತ್ತಿದ್ದವು. ಜನ್ಮ ಜನ್ಮಾಂತರದ ಆಳದ ಸುಖ ಅಥವಾ ನೋವಿನ ಮ್ಯಾಲೆ ಯಾರೋ ಬೆರಳಾಡಿಸಿದಂತೆ ತನ್ಮಯರಾಗುತ್ತಿದ್ದೆವು.

ಚಂದಮುತ್ತನ ನಡೆನುಡಿಗಳಿಗೆ ಈಗ ಅಸಾಮಾನ್ಯ ಘನತೆ ಒದಗಿತ್ತು. ಅವನೊಂದು ಹೆಜ್ಜೆಯಿಟ್ಟರೂ ಅದರಲ್ಲಿ ನಿರ್ಧಾರ ಮತ್ತು ಛಲಗಳಿದ್ದುವಾಗಿ ನಡೆಯುವಾಗ ನಾವರಿಯದ ಯಾವುದೋ ಲೋಕದ ಜಬರ್ ದಸ್ತ್ ಸಾಮ್ರಾಟನಂತೆ ಕಾಣುತ್ತಿದ್ದ. ಜೋಡಿ ಚಂದ್ರಾಮರಂಥ ಅವನ ಕಣ್ಣುಗಳಿಗೆ ಕ್ಷಿತಿಜದಾಚೆಗಿನ ದನಕರುಗಳೇನು, ಚಂದ್ರನಲ್ಲಿಯ ಜಿಂಕೆ ಕೂಡ ಕಾಣುತ್ತಿತ್ತು. ಬೀಜ ಬಿರಿಯುವ ಶಬ್ದ, ಚಿಕ್ಕೆ ತಾರೆಯರ ರೆಪ್ಪೆ ದನಿ ಕೂಡ ಕೇಳಿಸುತ್ತಿತ್ತು. ಅವನ ಕಿವಿಗಳಿಗೆ ಅವನ ಮೈಯಂತ ಮೈಯೆಲ್ಲ ಜಗ ಜಗ ಹೊಳೆಯುತ್ತಿತ್ತು. ಕೊಳಲು ನುಡಿಸುತ್ತಿದ್ದ ನೇರ ಶಿವನಿಗೇ ಕೇಳಿಸುವಂತೆ, ಕೇಳಿ ಶಿವ ಕೂತಲ್ಲೆ ಮೈಮರೆಯುವಂತೆ. ಸಣ್ಣವನಾದರೂ ಧರೆಗೆ ದೊಡ್ಡ ಸಾಧನೆಯಲ್ಲಿ ತೊಡಗಿದ್ದಾನೆಂದು ನಮಗೆ ಖಾತ್ರಿಯಾಗಿತ್ತು. ಆ ಸಾಧನೆ ಸೋಮವಾರ ಹುಣ್ಣಿವೆಯೆಂದು ಮಂಗಳವಾಗಲಿದೆಯೆಂದು, ಅವನ ಸಾಧನೆಯ ಸಿದ್ಧಿ ಫಲಂಗಳು ಅಂದೇ ಸಿಕ್ಕಲಿವೆಯೆಂದು ಸುದ್ದಿ ಕೇಳಿದ್ದೇ ನಾವೆಲ್ಲ ಭಾವಪರವಶರಾದೆವು. ಕಲಾವಿದರೆಲ್ಲ ಕನಸುಗಾರರೇ. ಆದರೆ ಚಂದಮುತ್ತನ ಹಾಗೆ ನಮ್ಮನ್ನು ಕರುಳಿಗಂಟಿಸಿಕೊಂಡವರಿಲ್ಲ. ಸುದ್ದಿ ಕೇಳಿ ನಮ್ಮಲ್ಲಿಯ ಕೆಲವರು ಬುಟ್ಟಿ ತುಂಬ ಬಣ್ಣದ ಹೂ ಹರಿದು ಆಕಾಶಕ್ಕೆ ಎರಚಿ ಹೂಮಳೆಯಲ್ಲಿ ನಿಂತು ಆನಂದವ ಆಚರಿಸಿದರು. ಇನ್ನೊಬ್ಬ ನೂರೊಂದು ಕಿರಣಗಳ ಪಂಚೈದು ಬಣ್ಣದ ಹೂವುಗಳಿಂದ ಮಳೆಬಿಲ್ಲು ಮಾಡಿ ಆಕಾಶವ ಸಿಂಗರಿಸಿದ. ಒಬ್ಬ ಯಕ್ಷಿಯ ಬಗ್ಗೆ ರಾಗ ರಚನೆಯ ಕಟ್ಟಿ ಕವಿ ಮಾಡಿ ಹೀಗೆ ಪದ ಹಾಡಿದ:

ತಿಂಗಳ ನಗೆಯವಳೊ
ನಮ್ಮ ಯಕ್ಷಿ | ಚಿಕ್ಕೆಗಳ ಮುಡಿಯುವವಳೊ
ಎದ್ದುನೋಡೊ ಮುದ್ದು ಚಂದ್ರಾಮ | ಕಾಡಿನಲಿ
ಕೈಲಾಸ ತೂಗಿರುವಳೊ ||

ಗಿಂಡಿಯ ಮೊಲೆಯವಳೊ
ಚಿನ್ನದ ಚೊಂಬಿನ ಮೊಲೆಯವಳೊ
ಚಿನ್ನದ ಚೊಂಬಿನ ಮೊಲೆಯಿಂದ | ಬೆಳಕಿನ
ನೊರೆಹಾಲ ಸುರಿವವಳೊ ||
ಹಾಡಿಗೆ ಒಲಿಯುವಳೊ
ಹುರಿಗೊಂಡ | ನಾದದಲಿ ಅಡಗಿರುವಳೊ
ಗುಂಗುಗುಂಗಿನ ನಾದ ಗುಂಭದ | ಒಳಗಿಂದ
ಹಾಡಾಗಿ ಹೊಮ್ಮುವವಳೊ ||

ಚಂದಮುತ್ತನ ವ್ರತಾಚರಣೆಯ ಸಿದ್ಧಿಗೆ ಯಾವ ಕಂಟಕಗಳೂ ಬಾರದಿರಲೆಂದು ಎಳೆಯ ಸರಳನೊಬ್ಬ ಕೆಸರು ಮಣ್ಣಿನಲ್ಲಿ ಕಂಟಕ ನಿವಾರಕ ಬೆನಕನ ಮೂರ್ತಿಯ ಮಾಡಿ ಅಡ್ಡಬಿದ್ದ. ಇಲ್ಲಿಯೇ ಬಿಕ್ಕಟ್ಟಾಯಿತು ನೋಡು. ಇನ್ನೊಬ್ಬ ಮುಂದೆ ಬಂದು ಬೆನಕನಿಗೆ ಮಜ್ಜನ ಮಾಡಿಸೋಣವೆಂದು ಮೂರ್ತಿಯ ಮ್ಯಾಲೆ ನೀರು ಸುರಿದ.

ಅಯ್ಯಯ್ಯೋ ಪಾಪವೇ ! ಅಕಟಕಟಾ ಕರ್ಮವೇ!
ಕೆಸರಿನ ಬೆನಕ ಭಿನ್ನವಾಗಿ
ಕೈಕಾಲೊಂದು ಕಡೆ, ಸೊಂಡಿಲೊಂದು ಕಡೆ ಬಿದ್ದು
ಮೂರ್ತಿಯ ಮಾಡಿದಾತ ದೊಡ್ಡ ದನಿ ತೆಗೆದು
ಬಾಯಿ ಬಡಕೊಂಡತ್ತ.
ಸುರುವಾಯಿತು ವಿರಸ.
ಉರಿದೆವು ನಖಶಿಖಾಂತ.
ಕನಸುಗಳು ಇತ್ತಂಡಗಳಾಗಿ
ಸುಡುಸುಡುವ ಮಾತು ಸುರಿದೆವು
ಪರಸ್ಪರರ ಮ್ಯಾಲೆ.
ರಾತ್ರಿ ಸಮ್ಮನಿರದೆ ಅಬ್ಬೆಯ ನಿದ್ದೆಗೂ ನುಗ್ಗಿ
ಬೆಳ್ಳೆಂಬೆಳಗು ಜಗಳವಾಡಿ
ಹುಡದಿಯಾಡಿದೆವು
ಕಠಿಣೋಕ್ತಿಗಳಿಂದ ಹೀಂಕಾರವಾಗಿ ಜರಿದು
ಪಂಥವ ಮಾಡಿ ಅಗಲಿದೆವು.

ಹಿಂಗಾಗಿ ಹುಣ್ಣಿಮೆ ದಿನದ ಯಕ್ಷಿಯ ಬೆಳಗಿನ ಪೂಜೆಗೆ
ನಾವ್ಯಾರೂ ಸಿದ್ಧರಿರಲಿಲ್ಲ.

ಹಕ್ಕಿಯ ಚಿಲಿಪಿಲಿಗೆ ಎಚ್ಚತ್ತು ನಾವಿನ್ನೂ ಆಕಳಿಸುತ್ತಿರಬೇಕಾದರೆ –

ಯಕ್ಷಿಯ ಗುಡಿಗೆ ಚಂದಮುತ್ತನ ಬದಲು ಲಕ್ಕಬ್ಬೆ ಸಾಮಗ್ರಿ ಸಮೇತ ಬಂದುದ ಕಂಡು ಬೆರಗಾದೆವು. ಅವಳೊಂದಿಗೆ ಕಪಿಲೆಯ ಕರು ನಂದಿನಿ ಬಂದಿತ್ತು. ಇದೇ ಮೊದಲ ಬಾರಿ ಇಷ್ಟು ದೂರ ಬಂದುದರಿಂದ ಗುಡಿ, ಕಾಡು ಘಮಘಮ ಮಾಡಿಸುವ ಮಲ್ಲಿಗೆ ಇವನ್ನೆಲ್ಲ ಕಂಡು ಕರುವಿನ ಕಿವಿಯಲ್ಲಿ ಗಾಳಿ ತುಂಬಿ ವಿನಾಕಾರಣ ಓಡಾಡಿ ಆನಂದವನ್ನಾಚರಿಸಿತು. ನಾವು ಮುದುಕಿಯ ಉತ್ಸಾಹ ಕಂಡು ಆಶ್ಚರ್ಯವ ಆಚರಿಸುತ್ತಿರಬೇಕಾದರೆ ಎಲ್ಲಿಗೋ ಹೋಗಿದ್ದ ಯಕ್ಷಿ ಅವಸರದಲ್ಲಿ ಬಂದು ವಿಗ್ರಹದಲ್ಲಿ ಅಡಕಗೊಂಡಳು. ಅಬ್ಬೆಗಿದು ಕಾಣಲಿಲ್ಲವಾದರೂ ನಂದಿನಿಗೆ ಗೋಚರವಾಗಿ ಮೈ ಅದುರಿ ಹೆದರುತ್ತ ಕಿವಿ ನಿಮಿರಿ ಕಣ್ಣಗಲಿಸಿ ಒಂದೆ ಸಮನೆ ನಿಟ್ಟಿಸಿತು. ಹೊತ್ತು ಬಹಳ ಹೀಗೇ ನಿಂತು ನೋಡಿ ವಿಗ್ರಹದ ಬಳಿ ಬಂದು ಮೈತುಂಬ ಮೂಸಿ ಅಪಾಯವಿಲ್ಲವೆಂದು ಖಾತ್ರಿಯಾದಾಗ ಆಶೀರ್ವದಿಸುವ ಅವಳ ಕೈ ನೆಕ್ಕಿತು.

ಚಂದಮುತ್ತ ಅವಸರದಲ್ಲಿ ಗುಡಿಗೆ ಬಂದಾಗ ಲಕ್ಕಬ್ಬೆ ಆಗಲೇ ಹಸಿರು ಗಂಜಳದಲ್ಲಿ ಗುಡಿ ಸಾರಿಸಿ, ಗಂಧದ ನೀರು ಸಿಂಪಡಿಸಿ, ಹೊರಗಡೆ ಬಣ್ಣದ ರಂಗೋಲಿ ಹುಯ್ಯುತ್ತಿದ್ದಳು. ಮಗನ ನೋಡಿ “ಮಲ್ಲಿಗೆ ಮೊಗ್ಗಿನಿಂದ ದಂಡೆ ಮಾಡು” ಎಂದು ಹೇಳಿ ಒಳಗೆ ಬಂದು ನಂದಾದೀಪ ಏರಿಸಿದಳು. ಯಕ್ಷಿಗೆ ಎಣ್ಣೆತುಪ್ಪದಲ್ಲಿ ಮಜ್ಜನ ಮಾಡಿಸಿದಳು. ಆಮ್ಯಾಲೆ ಸೀಗೆ ಕಾಯಿಂದೊಮ್ಮೆ, ಸಾಬೂನಿನಿಂದೊಮ್ಮೆ ಮೈಯುಜ್ಜಿ ಪಾತಾಳಗಂಗೆಯ ತಿಳಿನೀರೆರೆದು ತಂಪುಮಾಡಿದಳು. ಅಡಿಯಿಂದ ಮುಡಿತನಕ ಸೀರೆ ಸೆರಗಿನಿಂದೊರೆಸಿ ಮೈ ಆರಿಸಿದಳು. ನಮ್ಮಲ್ಲಿಯ ಕೆಲವರಾಗಲೇ ಮೋಜು ಮಜ ಮಾಡುತ್ತ ಮುದುಕಿಯ ಕಣ್ಣಿಗೆ ಮಾಯ ಆಗಿಯೇ ಬಿಟ್ಟರು. ವಿಗ್ರಹದ ಬದಲು ಅಬ್ಬೆಗೆ ತನ್ನ ಸೊಸೆ ಚಕೋರಿ ಎಂಬ ಯಕ್ಷಿಯೆ ಕಾಣತೊಡಗಿದಳು. ಅವಳ ಮೂರು ಮಾರಿನ ಕಾಳನೀಳ ಕೂದಲು ಕೊಡವಿ ಜಾಡಿಸಿ, ಎಳೆಬಿಸಿಲಲ್ಲಿ ಸೊಂಪಾಗಿ ಬೆನ್ನಿಗಿಳಿಸಿ, ಬಂಗಾರ ಬಾಚಣಿಕೆಯಿಂದ ಹಿಕ್ಕಿ, ಹೇನುಗಳ ಹೆಕ್ಕಿ ತೆಗೆದು ಕೊಡದಂಥಾ ತುರುಬು ಕಟ್ಟಿದ ಕನಸು ಕಂಡಳು. ಉಡುಸೀರೆಯಲ್ಲಿ ಮೇಲಾದ, ಸೆರಗಿನಲ್ಲಿ ಹಾರುವ ಗಿಣಿ ನೂರು ಬರೆದ ಇಳಕಲ್ ಸೀರೆಯನುಡಿಸಿ, ಬುಗುರಿ ಕುಚದೆದೆಗೆ ಕುಣಿವ ನವಿಲು ಬರೆದ, ನವಲಗುಂದದ ಕುಬಸ ತೊಡಿಸಿದಳು.

ಲಕ್ಕಬ್ಬೆಗೆ ಹ್ಯಾಗೇನೋ ನಮಗೆ ಮಾತ್ರ ವಿಗ್ರಹದಲ್ಲಿ ಅಡಕಗೊಂಡಿದ್ದ ಯಕ್ಷಿಯೂ ಕಾಣಿಸುತ್ತಿದ್ದಳಾಗಿ ಉತ್ಸಾಹದಲ್ಲಿ ಅಬ್ಬೆ ಸೇವೆ ಮಾಡುವುದು, ಯಕ್ಷಿ ಸಂಕೋಚದಿಂದ ಮುಟ್ಟಿದಲ್ಲಿ ಮುದುಡುವುದು ನೋಡಿ ನಮಗೆ ಬಹಳ ಮೋಜೆನಿಸಿತು. ಅಬ್ಬೆಯ ಅಕ್ಕರೆಗೆ ಚಕೋರಿ ಕರಗಿ ವಿಗ್ರಹದಲ್ಲೂ ಬೆವರಿದ್ದಳು. ಲಕ್ಕಬ್ಬೆ ಯಕ್ಷಿಯ ಸುಳಿಗುರುಳ ನ್ಯಾವರಿಸಿ, ಎಳೆಯ ಕುಂತಳ ತಿದ್ದಿ ಕೆನ್ನೆ ಕದಪುಗಳ ತಿಳಿ ಬೆವರೊರಿಸಿದಳು. ತಿದ್ದಿ ತೀಡಿದಳು ನೀಟಾದ ಬೈತಲೆಯ. ಕಣ್ಣಿಗೆ ಕಾಡಿಗೆ, ನೊಸಲಿಗೆ ಚಂದ್ರನ ತಿಲಕವನಿಟ್ಟಳು. ಸಂಪಿಗೆಯೆಸಳು ಮೂಗಿನಲ್ಲಿ ತೂಗುವ ಮುತ್ತಿನ ಮೂಗುತಿಯಿಟ್ಟಳು. ಕರಗಳ ಮ್ಯಾಲೆ ಗೀರು ಗಂಧವ ಬರೆದಳು. ಟೊಂಕಕ್ಕೆ ಒಡ್ಯಾಣ ಬಿಗಿದು ಕೊರಳಿಗೆ ಚಂದ್ರಹಾರಗಳನ್ನಿಟ್ಟು ಬಂಗಾರದಲ್ಲಿ ಶೃಂಗಾರ ಮಾಡಿದಳು. ಎಡಬಲ ಹೂ ಹಿಂಗಾರುಗಳನಿಟ್ಟು ಯಕ್ಷಿಯ ದುಂಡುದುರುಬಿನ ತುಂಬ ಹೂದಂಡೆ ಮುಡಿಸಿದಳು. ಎಂತೆಂತು ಸಿಂಗರಿಸಿದರು ಸಾಲದು ಸಾಲದಾಯಿತು ಮುದುಕಿಗೆ. ಸೊಸೆಯ ಕಣ್ಣು ಕೋರೈಸುವ ದಿವ್ಯ ಚೆಲ್ವಿಕೆ ಕಂಡು ಅಬ್ಬೆಯ ಸಂಭ್ರಮ ಅಂಬಾರಕಡರಿತು. ಕಣ್ಣಗಲಿಸಿ ಬೆರಗಿನಲ್ಲಿ ನೋಡುತ್ತ ಮೈಮರೆತು ತಾನೂ ವಿಗ್ರಹವಾಗಿ ನಿಂತುಬಿಟ್ಟಳು. ಹೊತ್ತು ಬಹಳ ಹೀಗೇ ನಿಂತು ಆನಂದಭಾಷ್ಟಗಳ ಒರೆಸಿಕೊಂಡು –

ನನ್ನ ಗಗನಮಲ್ಲಿಗೆ ಹೂವೇ
ಆಕಾಶದ ಹೊಂಬೆಳಕೇ
ತಾವರೆಯ ಮುಖದವಳೇ
ತೊಂಡೆತುಟಿಯವಳೇ
ಮೊಳಕೆ ನಗೆಯವಳೇ
ತೆಳ್ಳಾನ ಹೊಟ್ಟೆಯವಳೇ
ತಂಬೀಗಿಯಂಥ ತುಂಬಿದ ಕುಚದವಳೆ
ಮೈತುಂಬ ಪರಿಮಳವ ನಾರುವವಳೆ
ನಿನಗ್ಯಾರೂ ಸರಿಯಾಗದ ಸೊಸೆಮುದ್ದೇ –
ಬಳಗವೆಲ್ಲವ ತೊರೆದು ಮಗನ ಬಳಿ ಬಂದೆ,
ನರಲೋಕದ ನಡಾವಳಿ ನಿನಗರಿದೆ?
ಮಗ ಬೇಕು, ಮಗನ ತಾಯಿ ಬ್ಯಾಡಂದರೆ ಹ್ಯಾಂಗವ್ವ?
ಅವನ ಜೊತೆ ಮಾತಾಡುತ್ತಿ, ನನ್ನೊಂದಿಗ್ಯಾಕಿಲ್ಲ?
ಅಕ್ಕಪಕ್ಕ ನರಮನುಷ್ಯರಾರಿಲ್ಲ
ಈಗಲೇ ಎರಡು ನುಡಿ ನುಡಿದಾಡು.
ನನಗೊಮ್ಮೆ ಬಾಯ್ತುಂಬ ಅತ್ತೇ ಅನಬಾರದೆ ನನ್ನವ್ವ?
ಗೊಲ್ಲ ಗೋಕುಲರ ನಡತೆ ಸೇರದೆ ನಿನಗೆ?

– ಎಂದು ನಿಟ್ಟುರಿಸಿಟ್ಟಳು ಮುದುಕಿ. ಇಂತೆಂಬ ನುಡಿ ಕೇಳಿ ಚಕೋರಿ ಎಂಬ ಯಕ್ಷಿ ಉಕ್ಕಿಬಂದ ಆನಂದವ ಹತ್ತಿಕ್ಕಲಾರದೆ ಹೊರಗೂ ತುಳುಕಲಾರದೆ ಚಡಪಡಿಸಿ ಥೈ ಥೈ ಕುಣಿಯಲೇಬೇಕೆಂದಳು. ಅತ್ತೇ ಎಂದು ಅಬ್ಬೆಯ ತಬ್ಬಿಕೊಂಡು ಮುದ್ದಿಸೋಣ ಎಂದಳು. ತನ್ನ ಘನಾನಂದವ ತಾನೆ ನಿಯಂತ್ರಿಸಿಕೊಂಡು ಮೆಲ್ಲಗೆ ‘ಅತ್ತೇ’ ಎಂದು ಹೇಳಿ ಭಕ್ತಿಯಿಂದ ಲಕ್ಕಬ್ಬೆಯ ಕಾಲುಮುಟ್ಟಿ ನಮಸ್ಕಾರ ಮಾಡಿಯೇ ಬಿಟ್ಟಳು. ಕಿವಿಗೆ ಶಬ್ದ ಕೇಳಿಸಿ ಪಾದಗಳಿಗೆ ಕೈ ಸ್ಪರ್ಶವಾಗಿ ಆನಂದದ ಉನ್ಮಾದದಲ್ಲಿ ಮುದುಕಿ ಹುಚ್ಚಡರಿದ ದನದ ಹಾಗೆ ಒದರಿ ಎದ್ದು ಗುಡಿತುಂಬ ಓಡಾಡಿದಳು. ಸಳ ಸಳ ಪುಳಕಂಗಳೆದ್ದು ಬೆವರು ಜಲದಲ್ಲಿ ಒದ್ದೆಯಾದಳು. ಕಣ್ತುಂಬ ನೋಡಿ ದೃಷ್ಟಿಯಾದೀತೆಂದು ವಿಗ್ರಹಕ್ಕೆ ಲಟಿಕೆ ಮುರಿದಳು. ಸೀರೆ ಸೆರಗಿನಿಂದ ಸೊಸೆಯ ತಿಳಿಬೆವರೊರೆಸಿದಳು. ಮತ್ತೆ ಎದ್ದಳು. ಕೂತಳು. ಹೊರಗೋಡಿ ಇನ್ನೆರಡು ಹೂ ತಂದು ಯಕ್ಷಿಯ ಮುಡಿಗಿರಿಸಿದಳು. ನಿಜ ಹೇಳಬೇಕೆಂದರೆ ಮುದುಕಿಯ ಬಗ್ಗೆ ನಾವು ಗಾಬರಿಯಾದೆವು.