ಸಂಜೆ ಸಾಯಂಕಾಲವಾಗಿ ಸೂರ್ಯನಾರಾಯಣದೇವರು
ಪಡುವಣದಲ್ಲಿ ಅಸ್ತಂಗತವಾಗಿ
ಮೂಡುಮಲೆ ಬಿರಿದು ಉದಯವಾದರು ಚಂದ್ರಾಮಸ್ವಾಮಿ.
ಶಿವನ ಸೋಮವಾರ, ತುಂಬಿದ ಹುಣ್ಣಿಮೆಯ
ಕಲ್ಯಾಣದ ಬೆಳಕು ಬೆಳ್ದಿಂಗಳು
ಕ್ಷಿತಿಜವ ತುಂಬಿ ತುಳುಕಿತು ಶಿವನೆ.
ನಿಶ್ಚಯಿಸಿದ ಗಳಿಗೆ ಮಹೂರ್ತದಲ್ಲಿ
ಚಂದಮುತ್ತ ಜಳಕವ ಮಾಡಿ
ವಾರೆ ಜಡೆಕಟ್ಟಿ ನವಿಲಗರಿ ಜಡೆಗೇರಿಸಿಕೊಂಡು
ಒದ್ದೆ ಲಂಗೋಟಿಯಲ್ಲಿ, ಹೆಚ್ಚಿನ ಕರಿಕಂಬಳಿಯ
ಹೆಗಲಿಗೇರಿಸಿಕೊಂಡು ಗೂಡಿನ ಬಿಲಕ್ಕೆ ಹೋಗಿ
ಹೆತ್ತಯ್ಯ ಮುತ್ತಯ್ಯರ ನೆನೆದ.
ಸುತ್ತಲಿನ ದೇವರ ನೆನೆದ
ಆದರದಿಂದ ಆದಿಯ ಶಿವನ ನೆನೆದು
ತಾಯಿ ಪಾರ್ವತಿಯ ನೆನೆದು
ದಾಸೋಹರಿ ಭಕ್ತನ ಕಾಪಾಡಬೇಕೆಂದು ಕೈಮುಗಿದು
ಭಕ್ತಿಗೆ ಬೂದಿ ಹಚ್ಚಿಕೊಂಡು
ಗೆಜ್ಜೆ ಕೊಳಲು ಸೊಂಟದಲ್ಲಿ ಸಿಕ್ಕಿಸಿಕೊಂಡು ನಡೆದ.
ಒಂದು ಹೆಜ್ಜೆ ಮುಂದೆ ಹೋಗಿ ಹಿಂದೆ ನೋಡಿದ,
ಎರಡು ಹೆಜ್ಜೆ ಮುಂದೆ ಹೋಗಿ ಹಿಂದೆ ನೋಡಿದ
ಮೂರಡಿ ಮುಂದೆ ಹೋಗಿ ಹಾ ಮರೆತಿದ್ದೆ ಎಂದು
ಹಿಂದುರುಗಿ ಬಂದು,
ಅಬ್ಬೆಯ ಪಾದಮುಟ್ಟಿ ನಮಸ್ಕಾರ ಮಾಡಿ ಜಯ ಒದಗುವಂತೆ
ಶುಭನೀಡಿ ಅಬ್ಬೇ ಅಂದ.

ವ್ರತಾಚರಣೆಯ ವಿಚಾರ ಅಬ್ಬೆಗೆ ಗೊತ್ತಿದ್ದದ್ದು ಅಲ್ವ. ರಾತ್ರಿಯಿಡೀ ಕೆಟ್ಟ ಕನಸಾಗಿತ್ತು. ಬಲಭುಜ ಬಲಗಣ್ಣು ಹಾರಿತ್ತು. ಇದನ್ನು ಒಡೆದಾಡುವ ಮುನ್ನವೇ,

“ನಿನಗೆ ಅಕ್ಷಯವಾಗ್ಲಿ ನನ ಕಂದಾ.
ಜಯವುಳ್ಳವನಾಗಿ ಬಾ”

– ಎಂದು ಬಾಯಿಂದ ಮಾತು ಬಂದೇ ಬಿಟ್ಟಿತು. ಮಗನ ನೆತ್ತಿಯ ಮುಟ್ಟಿ ಮೂಸಿ ಆಶೀರ್ವದಿಸಿ ಮಗ ಹೋಗುವ ಚಂದವ ತಾಯಿ ಕಣ್ತುಂಬ ನೋಡಿದಳು. ಆಮ್ಯಾಲೆ ಕುಲಗುರುವಿನ ಬಳಿ ಬಂದು ಒಡಲು ಹಾಸಿ ಪಾದ ಪಡಕೊಂಡು ಪಾದಧೂಳಿ ಹಣೆಗೊತ್ತಿಕೊಂಡ. ಕುಲಗುರುವಿಗೆ ವ್ರತಾಚರಣೆಯ ವಿಚಾರ ಸಾದ್ಯಂತ ಗೊತ್ತಿದ್ದುದರಿಂದ “ದೇವಲೋಕದ ಸಿರಿಯ ದೋಚಿಕೊಂಡು ಬಾ ಮಗನೇ” ಎಂದು ಹಣೆತುಂಬ ಬಂಡಾರ ಹಚ್ಚಿ ಕಳಿಸಿದ.

ಯಕ್ಷಿಯ ಗುಡಿಗೆ ಬಂದು ರಾತ್ರಿಯ ಶಾಂತಿಪೂಜೆ ಮಾಡಿ ಮೂರು ಬಾರಿ ಪ್ರದಕ್ಷಿಣೆ ಬಂದು ಚಂದ್ರಜಪ ಮಾಡಲು ಪಡುದಿಕ್ಕಿಗೆ ಮುಖ ಮಾಡಿದ. ನಾವಲ್ಲೇ ಬಾಯಿಮುಚ್ಚಿಕೊಂಡು ಅವನನ್ನೇ ನೋಡುತ್ತಿದ್ದೆವು. ನಮ್ಮ ಕಡೆಗೊಮ್ಮೆ ನೋಡಿದ. ಅವನ ನೋಟಗಳಿಂದಲೇ ನಮಗಲ್ಲಿರಲು ಅವಕಾಶವಿಲ್ಲವೆಂದರಿತು ಹೆಚ್ಚು ಕಡಿಮೆ ಆಡದೆ ಕಣ್ಣಿಗೆ ದೂರ, ಕಿವಿಗೆ ಸಮೀಪವಾಗುವಂತೆ ಹೋಗಿ ಗಿಡಮರ ಅಡರಿ ಕೂತೆವು. ಆಗಲೆ ಬೆಳ್ದಿಂಗಳು ಬಲಿತು ಚದುರಿದ ಮೋಡಗಳಲ್ಲಿ ಮುತ್ತಿನ ಅರಮನೆ, ಬೆಳ್ಳಿಯ ಅರಮನೆ, ಗಾಜು ವಜ್ರಗಳ ಅರಮನೆಗಳು ಮೂಡಿ ಹೊಳೆಯುತ್ತಿದ್ದವು. ತರುಮರಗಳಲ್ಲಿ ಅಲ್ಲಲ್ಲಿ ಕತ್ತಲೆ ಜೋತುಬಿದ್ದಿತು. ದೂರ ಕುಂತಿದ್ದೆವಾಗಿ ಚಂದಮುತ್ತ ಚಕೋರಿಯರ ವ್ರತಾಚರಣೆಯ ವಿವರಗಳು ನಮಗೆ ಕಾಣಲಿಲ್ಲ.

ಮಧ್ಯರಾತ್ರಿಯವರೆಗೆ ನಮಗೇನೂ ಕೇಳಿಸಲಿಲ್ಲ. ಶಿವನ ನಗೆಯಂಥ ಬೆಳ್ದಿಂಗಳು ಮಾತ್ರ ಹುಚ್ಚು ಹತ್ತಿಸುವಷ್ಟು ಮಾದಕವಾಗಿದ್ದುದರಿಂದ ಕೆಲವರಾಗಲೇ ತೂಕಡಿಸುತ್ತಿದ್ದೆವು. ಇಡೀ ಕಾಡು ಶೀತಲ ಶಿವಶಾಂತಿಯಲ್ಲಿ ಅದ್ದಿಬಿಟ್ಟಿತ್ತು. ಆವಾಗ ನೋಡು ಶಿವಾ –

ನಿಗೂಢವಾಗಿ ನಿನದಿಸುವ ಚಂದಮುತ್ತನ ಕೊಳಲ ನಾದ
ಮೆಲ್ಲಮೆಲ್ಲನೆ ಸುರುವಾಯಿತು ನೋಡು
ಕಟ್ಟಿದ ಗೂಡಿಂದ ಜೇನು ತೊಟ್ಟಿಕ್ಕುವ ಹಾಗೆ
ಚಂದಮುತ್ತನ ಕೊಳಲ ದನಿ ಕೇಳಿಸಿತು.
ಹಿಂದೆಷ್ಟೋ ಬಾರಿ ಚಂದಮುತ್ತನ ಕೊಳಲ
ಕೇಳಿಲ್ಲವೆ ನಾವು?
ಅದರಿದೇ ಬೇರೆ ಎನ್ನಿಸಿ ಸೊಲಿಲ್ಲದ ಸೊಮ್ಮಿಲ್ಲದೆ
ಪರವಶರಾದೆವು.
ನಾಮರೂಪಕ್ರೀಗಳೆಲ್ಲ ನಿಷ್ಕ್ರಿಯಗಳಾಗಿ,
ಶಬ್ದಮುಗ್ಧರಾಗಿ, ಕಾಲವಿರಹಿತರಾಗಿ
ಬರೀ ಕಿವಿಗಳಾದೆವು.
ನಮ್ಮೆಲ್ಲರ ಮೂಲಾಧಾರದಿಂದ ಯಾವುದೋ ಆದಿಮ
ನಾದವೊಂದು ಹೊರಟು
ಬಯಲು ತುಂಬಿ ಬಯಲು ನಾದಮಯವಾಗಿ
ಒಳಗೂ ನಾದ ಹೊರಗೂ ನಾದ
ಒಳಹೊರಗೆ ಏಕಾಗಿ

ತಿಳಿವಿಂಗೆ ನಿಲುಕದ ನಿಜವೊಂದು
ನಾದದಲಿ ಹುರಿಗೊಳ್ಳುತ್ತಿರುವಂತೆ
ಅರಿವಿಗೆ ಬಂತು.

ಕೇಳಕೇಳುತ್ತ ಮೈಮರೆತಿದ್ದ ನಮ್ಮಿರವು
ಹಗುರವಾಗಿ ನಿಧಾನವಾಗಿ
ಲೋಕಾಂತರಕೆ ಸಂಯಮಿಸಿದಂತಾಗಿ
ಪರಿಚಯವಿಲ್ಲದ ಹೊಸಲೋಕದ ಹವಾಮಾನದಲ್ಲಿ
ತೇಲುತ್ತಿರುವಂತೆ –

ಹಾಡಿನಿಂದಿಡಿ ಬಯಲು ಭರಿತವಾಗಿ
ಭರಿತವಾದದ್ದು ಬಿರಿತು
ತೂಬುತೆಗೆದ ಕೆರೆಯಂತೆ
ಹಾಡಿನ ಮಹಾಪೂರ ನುಗ್ಗಿತು ನೋಡು
ಆಹಾಹಾ ಮುಳುಗಿದೆವೆಂದು ನೋಡಿದರೆ ತೇಲುತ್ತಿದ್ದೇವೆ ! ಅರೆಅರೇ
ತೇಲುವವರು ನಾವಲ್ಲ
ಚಕೋರಿ ಎಂಬ ಯಕ್ಷಿ !
ಬಿಳಿಯ ಮೋಡದ ಹಾಗೆ ಹಗುರವಾಗಿ
ಕಣ್ಣೆದುರೆ ಅವಳು ಬಿಳಿಯ ಪಕ್ಷಿಯಾಗಿ
ತೇಲುತ್ತಿದ್ದಾಳೆ ! ಸಾವಳಗಿ ಶಿವ ಶಿವಾ,

ಬೆಳಕಿನ ನಿಲುಮೆಗೆ ಗಾಳಿಯ ಸೆಲೆ ಸೇರಿ
ಶಾಶ್ವತ ಆಕಾಶ ನೀಲಿಮದಲ್ಲಿ
ತೂಗುವ ಚಂದ್ರನ ಕೆಳಗೆ
ನೆಲದ ತೇಜೋಮಯವೆ
ಮ್ಯಾಲೇರಿ ಹೊಳೆಹೊಳೆದು ಸುಳಿದಾಡಿದಂತೆ,
ಹಾಡಿನ ಕಾಮಿತದಿಂದ ಸಂಗೀತವೆ
ಕಾರಣ ಕಾಯವ ಧರಿಸಿ ಕೊಳಲ ಮೂಲಕ
ತಂತಾನು ನುಡಿಸಿಕೊಂಬಂತೆ,
ಸೂತ್ರ ಮಾತ್ರ ನೆಲಕ್ಕಂಟಿ
ಮ್ಯಾಲೆ ತೇಲುವ ಗಾಳಿಪಟದಂತೆ.

ಕಾಲವೆಷ್ಟು ಸಂದಾಯವಾಯಿತೊ ಹೀಗೆ
ಏಕ್‌ ದಂ ನಮ್ಮ ಕಿವಿಗ್ಯಾರೊ ಸೀಸುಹುಯ್ದರು ಶಿವನೆ, ಕೊಳಲು ಕಿರಿಚಿ
ಫಕ್ಕನೆಚ್ಚರವಾಯ್ತು –

ಕೊರಳು ಕಿರಿಚಿ
ಹೆಪ್ಪೊಡೆದ ಹಾಲು ಬೆಳ್ದಿಂಗಳು
ಮೋಡಗಳಲ್ಲಿ ಕೆಸರಾಗಿ ನಿಂತುಕೊಂಡಿತು
ಮಂತ್ರಭಿನ್ನವಾಗಿ
ಹುರಿಗೊಂಡ ಹಾಡು ತುಂಡು ತುಂಡಾಗಿ
ಹಾರುವ ಹಕ್ಕಿಯ ರೆಕ್ಕೆಗೆ ಶಕ್ತಿ ಸಾಲದೆ
ಮುರಿದ ರೆಕ್ಕೆಗಳ ಎತ್ತಿ ಬೀಸಲಾಗದೆ
ಬಾನಲ್ಲಿ ತೇಲಲಾಗದೆ
ಹಾ ಎಂದು ಕಿರಿಚಿ
ಆಕಾಶದುಲ್ಕೆ ಫಳ್ಳನೆ ಹೊಳೆದು
ಪತನವಾಗತೊಡಗಿತು.

ನಮ್ಮ ಕಣ್ಣಿಗೆ ಬೆಂಕಿ ಎರಚಿದಂತಾಗಿ ಶಿವ ಶವಾ
ಕಿಟಾರನೆ ಕಿರಿಚಿದೆವು
ಇಗೊ ಇಗೋ ನಾವೇ ಬಿದ್ದೆವೆಂದು ಹೆದರಿ
ಬಿಗಿಯಾಗಿ ಎದೆ ಹಿಡಿದು, ಉರುಗಿನಿಂದ
ಹೃದಯ ಪರಚಿಕೊಂಡೆವು.
ಕರುಣಿ ಶಿವನಿಗಾದರು ಕೇಳಿಸಿ ಕಾಪಾಡಲೆಂದು
ಬಾಯಿ ಬಾಯಿ ಬಡಕೊಂಡತ್ತೆವು.
ಹಕ್ಕಿಯ ಹಿಡಿದಿಡಲಾರದ ಆಕಾಶದಂಗಳ ಕಂದಿ ಕರ್ರಗಾಯ್ತು.
ಚಂದ್ರ ಇದ್ದಿಲಾದ ಬೆಳ್ದಿಂಗಳು ಬೂದಿಯಾಯ್ತು.
ಹಾಡಿನ ಅಮಲಿನಲ್ಲಿ ತೇಲುತ್ತಿದ್ದ ಕಾಡು
ತಬ್ಬಿಬ್ಬಾಗಿ ಕಿರಿಚಿದ್ದಕ್ಕೆ ಗಾಬರಿಯಾಗಿ
ಗರಹೊಡೆದಂತೆ ಕಣ್‌ಕಣ್ಣಿಟ್ಟಿತು.

ಹಕ್ಕಿಯ ರೆಕ್ಕೆಗಳಿಗ್ಯಾರೊ ಆಯುಧ ಚುಚ್ಚಿದರೆ?
ಹನಿ ರಕ್ತ ಸುರಿವುದ ಕಂಡೆವು.

ಹಕ್ಕಿಯ ಬೀಸುವ ರೆಕ್ಕೆ ಕತ್ತಿನ ಕಳಸ ಮುರಿದು
ಶಿವಶಿವಾ ಚಂದಮುತ್ತನ ಆತ್ಮಪಕ್ಷಿ
ಚಕೋರಿ ಎಂಬ ಯಕ್ಷಿ
ಮುರಿದ ಮಹಿಮಳಾಗಿ ಬೀಳು ಬೀಳುತ್ತಿರುವಂತೆ
ಯಕ್ಷಿಯ ಮೂಲ ರೂಪ ಮೂಡಿ
ಧೊಪ್ಪನೆ ಬಿದ್ದಳು.