ನೆತ್ತಿಯಲ್ಲಿ ಚಂದ್ರನ ಮಡಗಿಕೊಂಡ
ಪಂಚಮುಖದ ಪರಮಾತ್ಮನ್ನ
ಕಿಂಚಿತ್ ಭಕ್ತಿಯಿಂದ ನೆನೆದು
ಇನ್ನು ಮುಂದಿನ ಕಥೆಯ ಹೇಳಬೇಕೆಂದರೆ:

ಗುಡಿ ಮುಂದೆ ನಳನಳಿಸಿ ಬೆಳೆದ
ಎಳಮಲ್ಲಿಗೆ ಬಳ್ಳಿಯ ಮ್ಯಾಲ್ಯಾರೋ ಅತ್ಯಾಚಾರ ಮಾಡಿ
ಬಾಸುಳ ಮೂಡುವಂತೆ
ಹಿಡಿದು ಎಳೆದಾಡಿದ್ದಾರೆ.
ಹಿಸುಕಿ ಘಾಸಿಮಾಡಿ
ಎಸೆದಿದ್ದಾರೆ ಮೂಲೆಗೆ
ಹ್ಯಾಗೆ ಬಿದ್ದಿದೆ ನೋಡು ಶಿವನೆ,
ಕಣ್ಣುಳ್ಳವರು ಮರುಗುವಂತೆ
ಕರುಳು ಕರಗುವಂತೆ.

ಸಾಕ್ಷಿಗಿದ್ದ ಚಂದ್ರ ಮೋಡಗಳಲ್ಲಿ
ಮುಖ ಮರೆಸಿಕೊಂಡಿದ್ದಾನೆ.
ಬೆದರಿವೆ ಹಕ್ಕಿ ಪಕ್ಕಿ
ಉಸಿರುಗಟ್ಟಿದೆ ಗಾಳಿ.
ಹಗಲು ರಾತ್ರಿ ಏಕಾಏಕಿ ಬದಲಾಗಿ
ಪಲ್ಲಟವಾಗಿದೆ ಬದುಕು.

ದೇವತೆಗಳ್ಯಾರೂ ಒದಗಿಲ್ಲ ಸಹಾಯಕ್ಕೆ
ಕುಲದೇವರು ಕೃಪೆಯಿಂದ ಹೊರಗಿಟ್ಟಿದ್ದಾರೆ.
ಸಾವಳಗಿ ಶಿವನೇ,
ನೀನಾದರೂ ಈಕಡೆ ನೋಡು.
ನಿನ್ನ ಬದಲು ಒಂದು ಗುಂಡಕಲ್ಲು ಬಳ್ಳಿಯ ನೋಡಿದ್ದರೆ
ಅದಾಗಲೇ ಹರಿಯುತ್ತಿತ್ತು ಕರಗಿ ನೀರಾಗಿ,
ನೀನಿನ್ನೂ ಸುಮ್ಮನಿದ್ದೀಯಲ್ಲಾ ಸ್ವಾಮಿ !

 

ಲೋಕ ಲೌಕಿದಲ್ಲಿ ಮಲ್ಲಿಗೆ ಬಳ್ಳಿಯಾಗಲಿ ಬಾಳು ಎಂದು,
ಅರಳಿದ ಮಲ್ಲಿಗೆ ನೋಡಿ ಚಂದ್ರನ ನೆನಪಾಗಲೆಂದು,
ಚಂದ್ರನ ಹೆಸರಿನಲ್ಲಿ ನಾವು ಮಾಡುವುದಿಷ್ಟೇ ಅಂತ
ಚಂದ್ರನಿಗೆ ತಿಳಿದಿರಲೆಂದು,
ನಾವು ಹಾರೈಸಿದ್ದು ಹುಸಿಯಾಯ್ತೆ ಶಿವನೆ !
ನಿನ್ನ ನೆನಪಿನಲ್ಲಿ ಈ ಬಳ್ಳಿ ದಾಖಲಾಗಿಲ್ಲವೇ?
ದಾಖಲಾದರೂ ಚಿಗುರಿಲ್ಲವೆ?
ಚಿಗುರಿದರು ಹೂವಾಗಿ ಅರಳಿಲ್ಲವೆ?

ಬಳ್ಳಿಗೆ ನ್ಯಾಯ ಒದಗಿಸಿ
ನೀನಿನ್ನೂ ಬದುಕಿದ್ದೀ ಅಂತ
ಪ್ರಮಾಣ ತೋರಿಸು ಶಿವನೇ !