ಲಕ್ಕಬ್ಬೆಯ ಕನಸಿನಲ್ಲಿ
ನಂದೀ ಕಳಸ ಧಗ ಧಗ ಉರಿದಂತಾಗಿ
ಆ ಉರಿಯ ನವಿಲುಗರಿಯ ಮ್ಯಾಲ್ಯಾರೋ ಸುರಿದು
ತುದಿಯಿಂದ ಬುಡತನಕ ಉರಿಯುತ್ತಿದೆ ಗರಿ.
ಅರೆ ಅರೇ
ಗರಿಯ ಬುಡದಲ್ಲಿ ನವಿಲಿದ್ದುದ
ಯಾರೂ ಅರಿಯರಲ್ಲಾ !
ನವಿಲಿಗೂ ಬೆಂಕಿ ತಗಲಿ
ನವಿಲೇ ನವಿಲೇ ಎಂದು ಒದರುತ್ತ
ಗರ್ಭವ ಗಟ್ಟಿಯಾಗಿ ಹಿಡಿದುಕೊಂಡೇ
ಎದ್ದಳು ಮುದುಕಿ.
ಗಕ್ಕನೆ ನಿಂತು, ದಿಕ್ಕುದಿಕ್ಕೆಲ್ಲ ನೋಡಿದರೆ
ನಖಶಿಖಾಂತ ಉರಿಯುತ್ತಿದೆ ಲೋಕ.
ಎಷ್ಟೊಂದು ಬೆಂಕಿ ಶಿವನೆ !
ಚಿಕ್ಕೆ ತಾರೆಗೆ ಬೆಂಕಿ, ಮುಗಿಲ ನೀಲಿಗೆ ಬೆಂಕಿ,
ಕನಸಿಗೂ ಬೆಂಕಿ !

ತಕ್ಷಣ ಮಗನ ನೆನಪಾಗಿ ಕುಲಗುರುವಿನ ಗೂಡಿಗೋಡಿದಳು ಅಬ್ಬೆ.