ಇಳಿಹೊತ್ತಿನಲ್ಲಿ ಅಬ್ಬೆ
ಸುವ್ವಾಲೆ ಸುಪ್ಪಾಲೆಯೆಂದು ರಾಗ ಎಳೆಯುತ್ತಾ ರಾಗಿ ಕುಟ್ಟುತ್ತಾ ಇರಬೇಕಾದರೆ
ಮೋಜಿನ ಗಾಳಿ ಬೀಸಿ ಸೋಜಿಗದ ಮಳೆ ಬಂತು.
ಎಳೆಬಿಸಿಲಲ್ಲಿ ಬಿದ್ದ ಮಳೆ ಯಕ್ಷಿಯ ಮದುವೆಯ ಮಾಡಿ
ಸಣ್ಣಗೆ ಉರಿಯುತ್ತಿದ್ದ ಪಡುಸೂರ್ಯನ ನಂದಿಸಿತು.

ಮಗರಾಯ ಇನ್ನೂ ಬರಲಿಲ್ಲವೆಂದು ಅಬ್ಬೆ
ಬಾಗಿಲಲ್ಲಿ ನಿಂತು ಕಾಡದಾರಿ ಕಣ್ಣಾಗಿ ಕಾಯುತ್ತಿರಲು
ದನಕರು ಬಂದು ದೊಡ್ಡಿ ಸೇರಿದವು.
ಮಗರಾಯ ಬಂದು, ತಾಯ ನುಡಿದಾಡಿಸದೆ
ದೊಡ್ಡಿಗೆ ದನಗಳ ಕೂಡಿ ಬಿಡದೆ
ಜೋಡು ಕಳಚಿ, ಹೆಗಲ ಕಂಬಳಿ, ಬಗಲ ಚೀಲ
ಸೊಂಟದ ಕೊಳಲು, ಕಕ್ಕೆ ದೊಣ್ಣೆಗಳ
ಮೂಲೆಗೆಸೆದು ನೇರ ಜಗಲಿಗೆ ಹೋಗಿ ಬಿದ್ದುಕೊಂಡ.

ಗರ್ಭಕ್ಕೆ ಬೆಂಕಿ ಸುರಿದಂತಾಗಿ
ಅಬ್ಬೆ ಉರಿವುಸಿರ ಸೂಸಿದಳು.
“ಚಂದಿರಾಮ ಚಂದಮುತ್ತಾ” ಎಂದಳು.
“ಒದ್ದೆ ಕಳಚಿ ಮಡಿ ಉಡು ಮಗಾ” ಎಂದಳು.
ಒಮ್ಮೆ ಕರೆದರೆ ಮೂರು ಬಾರಿ ಓ ಎನ್ನುವ ಮಗ
ಇಂದು ಓಗೊಡಲಿಲ್ಲ.

ತಂದೆಯಿಲ್ಲ, ಒಂದಿಗೆ ಹುಟ್ಟಿದವರಿಲ್ಲ
ಹೇಳಕೇಳುವುದಕ್ಕೆ ಯಾರು ಇಲ್ಲವಾಯಿತೇ,
ಬೆನ್ನಿಗಿರು ಬೆಟ್ಟದ ಮಾಯೀ ಎಂಬಲ್ಲಿ
ದೊಡ್ಡಿಗೆ ದನಗಳ ಕೂಡಿಬಿಟ್ಟ ವಾರಗೆಯವರು
ಬಂದರು. ಅಬ್ಬೆ ಕೇಳಿದಳು:
“ಏ ದೇಚ, ಏ ಕೆಂಚ
ತಿಳಿದವರು ನೀವು ತಿಳಿಸಿ ಹೇಳಿರಯ್ಯಾ
ಅಬ್ಬೆಯ ನುಡಿಸದೆ, ಒದ್ದೆಕೂಡ ಕಳಚದೆ
ಮಾರಿ ಸಣ್ಣದು ಮಾಡಿ ಮಲಗಿಬಿಟ್ಟಿದ್ದಾನೆ ಚಂದ್ರಾಮ
ಯಾರೇನಂದರು ಕಂದನಿಗೆ?”

ಹುಡುಗರು, “ಅಬ್ಬೇ ನಮಗೂ ಅದೇ ಬೆರಗೆಂದರು.
ಕಾರ್ಯಕಾರಣ ಅರಿಯೆವೆಂದು
ನಡೆದದ್ದನ್ನು ನಡೆದಂತೆ” ವಿವರಿಸಿದರು:
“ನಮ್ಮ ಚಂದಮುತ್ತ ಗೊತ್ತಲ್ಲ, ದಿನದಂತೆ
ಈ ದಿನವೂ ಇಳಿಹೊತ್ತಲ್ಲಿ ಕೊಳಲೂದಿ ಮೋಡಿಯ ಮಾಡಿ,
ದನಕರು ಕಿವಿ ನಿಗರಿ ಮೇಲುಗಣ್ಣು ತೇಲುಗಣ್ಣಿನಲಿ
ಪರವಶವಾಗಿ ನೆರಳಲ್ಲಿ ಮಲಗಿದ್ದವು.
ನಾವುಗಳಿರಲಿ, ಈ ದಿನ
ಗಿಡಮರ ಕೂಡ ಅವನ ಹಾಡಿಗೆ
ತೂಗಿ ತೊನೆದವು ತಾಯಿ.
ದನಕರು ಮಲಗಿದರೆ ನಾವು ಹುಡುಗರಿಗೇನು ಕೆಲಸ?
ಓಡಾಡುತ್ತ ಮೋಜಿನ ಮತ್ತೇರಿ
ಈ ದಿನ ಮದುವೆಯಾಟ ಆಡೋಣವೆಂದೆವು.
ಚಂದಮುತ್ತ ಒಪ್ಪದಿರಲು ಅವನಿಗೇ ಮದುವೆಯೆಂದೆವು.
ನಮ್ಮ ಒತ್ತಾಯದಿಂದ ತಪ್ಪಿಸಿಕೊಂಡು
ಓಡಿ ಹೋಗಿ ಕಾಡಲ್ಲಿ ಅಡಗಿದ.

ನಾವು ಹುಡುಕುತ್ತಾ ಹೋದೆವು.
ಮೂರು ದಾರಿಗಳು ಸೇರುವಲ್ಲಿ
ಎಳೆ ಆಲದ ಮರದಡಿಯಲ್ಲಿ ಚಂದಮುತ್ತ ಅಡಗಿ ನಿಂತಿದ್ದ.
ಅಲ್ಲಿಯೇ ಬಿದ್ದಿದ್ದ, ಯಾವುದೋ ಕಾಲದ
ಶಿಲಾಮೂರ್ತಿಯ ಕದಲದೆ ನೋಡುತ್ತಿದ್ದ.

ಯಾವಳೋ ಆಗಸದ ರಂಭೆ
ಚಂದಮುತ್ತನ ಕೊಳಲುಲಿಯ ಮಾಯೆಗೆ ಒಳಗಾಗಿ
ಭೂಮಿಗಿಳಿದು ಪರವಶವಾಗಿ ಮೈಮರೆತಂತೆ,
ನರಮಾನವರು ನಮ್ಮ ದನಿ ಕೇಳಿ ಈಗಷ್ಟೇ ಕಲ್ಲಾದಂತೆ
ಅದರ ಭಂಗಿ.
ಕನ್ಯೆ ಸಣ್ಣವಳು, ಶುದ್ಧ ಸುಳಿ ಮುದ್ದುಮುಖದವಳು.
ಪಳಗಿದ ಬೇಟೆಗಾರನ ಹಾಗೆ ನೋಟ, –
ಹ್ಯಾಂಗೆ ನಿಂತಿದ್ದಳು ಅಬ್ಬೆ ಬಿಲ್ಲಿನಂತೆ!
ಶಿಲೆಯನ್ನುವುದೊಂದು ಬಿಟ್ಟರೆ ಉಳಿದೆಲ್ಲ ಜೀವಂತ

ನಮಗಿಷ್ಟೆ ಸಾಕಾಗಿ ಕಲ್ಲಿನ ಮೂರ್ತಿಯೊಂದಿಗೇ
ಚಂದಮುತ್ತನ ಮದುವೆಯೆಂದೆವು. ಬೀಗರಾಗಿ ಬಂದು
ಅಮೃತವಲ್ಲಿಯ ತಾಳಿಸರ ಮಾಡಿ,
ಶಿಲಾಮೂರ್ತಿಯ ಕತ್ತಿಗೆ ಕಟ್ಟು ಎಂದೆವು.
ಕಟ್ಟಿದಾಗಿನ ಅಘಟಿತ ಘಟಿತವ
ನಾವೇನು ಹೇಳೇವು ತಾಯಿ!
ಎಲ್ಲಿಂದಲೋ ಮಂಗಳವಾದ್ಯ ಕೇಳಿಸಿ
ಮಾಯದ ಗಾಳಿ ಜೋರಾಗಿ ಬೀಸಿದವು.
ಕ್ಷಿತಿಜದ ಕಣ್ಣಲ್ಲಿ ಫಳ್ಳನೆ ಬೆಳಕಾಡಿದ್ದ ಕಂಡೆವು.
ತರುಮರ ಬಳ್ಳಿಗಳ ಕಣ್ಣು ಬಿರಿದು
ಯಾರೋ ಕಾಡಿನಂಗಳದಲ್ಲಿ
ಥರಾವರಿ ಹೂವಿನ ರಂಗೋಲಿ ಬರೆದದ್ದನ್ನ ಕಂಡೆವು.
ನೆಲಕ್ಕೆ ಹುಲ್ಲಿನ ನವಿರೆದ್ದು
ನಮ್ಮಡಿಗಳಿಗೆ ಮುತ್ತಿಟ್ಟಿದ್ದ ಅನುಭವಿಸಿದೆವು.
ಹಿಡಿದಿಡಲಾರದ ಉತ್ಸಾಹವುಕ್ಕಿ
ಕೂಗಿ ಹಾಡಿದವು ಹಲವರ್ಣದ ಹಕ್ಕಿ.
ಕೇಕೆ ಹಾಕಿ ನವಿಲಾಡಿದವು ತಾಳಮೇಳದೊಳಗೆ.

ಎಳೆ ಆಲದ ಮರ.
ತಿಳಿಹಸಿರು ಬೆಳಕಿನ ವಲಯ ಸುತ್ತ ನಿರ್ಮಿಸಿಕೊಂಡು
ಬೆಳಗುವ ಪ್ರಾಯದ ಮರ
ಪರಿಪರಿ ಆವೇಶಗಳಿಂದ ನಲಗುತ್ತ
ಸುಖಮಯ ಲೋಲುಪ್ತಿಯಲ್ಲಿ ಹಕ್ಕಿಗಳ ಮುಳುಗಿಸುತ್ತ
ಕಣ್ಣು ಹಬ್ಬಾದ ಎಳೆಯ ಮರ ಇಂದ್ಯಾಕೆ ಹೀಗೆಂದವು.
ಯಾರೋ ಉನ್ನತ ದೇವತೆ ಉಲ್ಲಾಸದಲಿ ಬಂದು
ತಂಗಾಳಿಯಾಗಿ ಮರ ತುಂಬಿ
ಹುಡದಿ ಹಾಕುತ್ತಿರಬಹುದೇ? ಎಂದೆವು.

ಸುತ್ತಮುತ್ತ ಇಷ್ಟೆಲ್ಲ ನಡೆಯುತ್ತಿದ್ದರೆ
ನಮ್ಮ ಮಿತ್ರ ಚಂದಮುತ್ತ
ಲೋಕವ ಇತರೇತರ ಮಾಡಿ ಮೈಮರೆತಿದ್ದ ಅಬ್ಬೆ!”

“ಏನಂದಿರಿ ಮಕ್ಕಳೇ?”
“ಹೌದು ಅಬ್ಬೆ ಅವನು ಮೈ ಮರೆತಿದ್ದ.
ಕನಸುಗಳಿಂದ ಭರಿತವಾಗಿದ್ದವು ಕಣ್ಣು.
ಕೆನ್ನೆ ಕೆಂಪಾಗಿ ಎದ್ದ ಪುಳಕ ಹಾಗೇ ಇತ್ತು.
ಸುಖದಲ್ಲಿ ಮತ್ತೇರಿದ ಪ್ರಮತ್ತನ
ಭುಜತಟ್ಟಿ ಅಲುಗಿ ಚಂದಮುತ್ತಾ ಎಂದೆವು.

ಸ್ಮೃತಿಯಾಗಿ ನಮ್ಮ ಕಡೆ ನೋಡಿದ.
ಕಣ್ಣುಗಳಲ್ಲಿ ಇನ್ಯಾವುದೋ ಸೀಮೆಯ ಬೆಳಕಿತ್ತು
ಒಲ್ಲದ ಮನಸ್ಸಿನಿಂದ ಭೂಮಿಗಿಳಿದು ಬಂಧಂಗಿದ್ದ.
ನಮ್ಮ ಗುರುತಾಗಿ ಕ್ಷಣ ಹೊತ್ತು ತಬ್ಬಿಬ್ಬಾಗಿ
ತಕ್ಷಣ ಕಣ್ಣಲ್ಲಿ ಧಾರಾವತಿ ಜಲವ ಸುರಿಸಿದ.
ಗಾಬರಿಯಾಗಿ ಯಾಕೋ ಏನಾಯಿತೆಂದೆವು
ನಮ್ಮನ್ನೆಲ್ಲ ಇತರೇತರ ಮಾಡಿರುವಿಯಲ್ಲ,
ಹಿಂಗ್ಯಾಕೆಂದೆವು.”

ಚಂದಮುತ್ತ : ಯಾರೋ ಕರೆದರಲ್ಲ
ಎದೆಯಲಿ ದಾಖಲಾದರಲ್ಲ|
ಮುಖ ತೋರದೆ ಸುಖದ ಮರವೆಯಲಿ
ಸುಳಿದು ಹೋದರಲ್ಲ||

ಗೆಳೆಯರು : ನೀ ಕೇಳಿದ ಸೊಲ್ಲಾ
ನಮಗೂ ಯಾಕ ಕೇಳಿಸಲಿಲ್ಲಾ?|
ಬಾರೊ ಹುಚ್ಚು ಪೋರ
ಸುರಿಸಲಿ ಬ್ಯಾಡ ಕಣ್ಣ ನೀರಾ||

ಚಂದಮುತ್ತ : ಗೆಜ್ಜೆ ಕೇಳಿತಲ್ಲ
ಗೆಜ್ಜೆಯ ಹೆಜ್ಜೆ ಕಾಣದಲ್ಲ|
ಶ್ರೋತೃಸುಖದ ರಂಭೆ
ಕುಣಧಾಂಗ ಗುಂಭದಾಗ ಗೊಂಬಿ||

ಗೆಳೆಯರು : ಸೂತ್ರವಿರದ ಮಾತಾ
ಛೀ ತಗಿ ಯಾವ ಎಳೆತ ಸೆಳೆತ|
ಸೊಲ್ಲು ಸೊಲ್ಲಿಗೊಮ್ಮಿ
ವ್ಯಾಕುಲವ್ಯಾಕ ಪಡುತ ನಿಂತಿ||

“ಎಷ್ಟೊಂದು ಯತ್ನವ ಮಾಡಿದರು
ಅವನ ವೇದನೆಯನ್ನ ಭೇದಿಸಲಾಗಲಿಲ್ಲ ನಮಗೆ.
ಇನ್ನೊಮ್ಮೆ ಮಾಯದ ಗಾಳಿ ಬೀಸಿ
ಮಳೆ ಬಂದು
ಕಂಗಾಲಾಗಿ ಅಗಲಿದೆವು. ಅವನು ಕ್ಷೇಮದಿಂದ
ಗೂಡಿಗೆ ಬಂದುದ ಕೇಳಿ ಆನಂದವಾದೆವು ಅಬ್ಬೆ” ಎಂದರು.

ವಾರಿಗೆಯವರ ನುಡಿಕೇಳಿ
ಹಡೆದೊಡಲು ಉರಿದವು
ಸತ್ಯವುಳ್ಳ ಶಿವಲಿಂಗದೇವರ ನೆನೆದು
ಮಗನ ನೋಡಲು ಒಳಕ್ಕೆ ಹೋದಳು.