ಸಪ್ಪಟ ಸರಿರಾತ್ರಿ ಕಲ್ಲೂ ನೀರೂ ಕರಗುವಂಥ ಹೊತ್ತಿನಲ್ಲಿ ಚಂದಮುತ್ತನ ಕೊಳಲು ಅಪಸ್ವರ ಕಿರಿಚಿ ಸುಮ್ಮನಾದುದ ಕೇಳಿ ಕುಲಗುರು ವಿಸ್ಮಯಂಬಟ್ಟ. ಆಮೇಲಾ ಮೇಲೆ ಏನೋ ಅನಾಹುತ ಆಗಿರಬೇಕೆಂದು ಚಿತ್ತಸಂಶಯ ತಾಳಿ ನಾಲ್ಕಾರು ಬಾಲಕರ ಕರಕೊಂಡು ಆತಂಕದಿಂದ ಮಾತು ಮಾತಿಗೆ ಮಾದೇವನ ನೆನೆಯುತ್ತ ಯಕ್ಷಿಯ ಗುಡಿಗೋಡಿ ಹೋಗಿ ನೋಡಿದರೆ, ಚಂದಮುತ್ತ ಮೂರ್ಛಾಗತನಾಗಿ ಬಿದ್ದೈದಾನೆ ! ಅವನನ್ನೆತ್ತಿಕೊಂಬಂದು ಗೂಡಿನಲ್ಲಿ ಮಲಗಿಸಿ ಮದ್ದರೆದು ಕುಡಿಸುವಲ್ಲಿ ನವಿಲೇ ನವಿಲೇ ಎಂದಳುತ್ತ ಬೀಳುತ್ತೇಳುತ್ತ ಬಂದ ಲಕ್ಕಬ್ಬೆಯ ಸಂತವಿಸಿದ.