ಆರು ಮೂರೊಂಬತ್ತು ದಿನ ಬಾಯಿ ಬರಲೇ ಇಲ್ಲ ಚಂದಮುತ್ತನಿಗೆ. ಕಣ್ಣು ಪಿಳುಕಿಸದೆ ಶೂನ್ಯ ಹೃದಯನಾಗಿ ಬಿದ್ದಿರುತ್ತಿದ್ದ. ತಾಯಿ ಬಂದು ಪಕ್ಕದಲ್ಲಿ ಕುಂತರೂ ಗಮನಿಸುತ್ತಿರಲಿಲ್ಲ. ಪೆಟ್ಟು ಮಗನಿಗಾದರೆ ನೋವು ತಾಯಿಗಲ್ಲವೆ? ಏನಾಗಿದೆ ಮಗಂಗೆ? ದಿನಾ ಬೆಳೆಯುತ್ತಿದೆ ಗಂಟಲ ಹುಣ್ಣು. ಕತ್ತು ಕೆಂಪಗಿದೆ. ರಾಕ್ಷಸರ್ಯಾರಾದರು ಬಂದು ಹಿಸುಕಿದರೆ? ಮಗ ಮಾತನಾಡಲಾರ. ಕುಲಗುರು ಹೇಳಲಾರ. ಮಗನಿಗೆ ಕೇಡು ಮಾಡಿದವರು ನಾಲಗೆ ಹಿರಿದು ಸಾಯಲೆಂದು ಶಪಿಸಿ, ಸತ್ಯ ಶಿವದೇವರ ನೆನೆದು –

ನನ್ನ ದೀವಟಿಗೆಗೆ
ಎಣ್ಣೆ ಎರೆಯೋ ಶಿವನೇ

– ಎಂದು ಬೇಡಿಕೊಂಡತ್ತಳು ಅಬ್ಬೆ.

ಕುಲಗುರು ದಿನಾ ಮದ್ದರೆದು ಕುಡಿಸುತ್ತಿದ್ದ. ಆದರೆ ಕತ್ತಿನ ಹುಣ್ಣು ಯಾಕಾಯಿತೆಂದು, ಹೆಂಗಾಯಿತೆಂದು, ಆ ದಿನ ಕಾಡಿನಲ್ಲಿ ನಡೆದದ್ದೇನೆಂದು ಯಾರಿಗೂ ತಿಳಿಯಲಿಲ್ಲ.

ಶಿವ ಶಿವಾ, ಇಂತೀ ಪ್ರಕಾರವಾಗಿ ಚಂದಮುತ್ತನಂಥ ಸಂಪನ್ನನ ಕಥೆಯ ನಾವು ಹೇಳುವಂಥ ಪ್ರಸ್ತಾವದಲ್ಲಿ ಆ ದಿನ ತುಂಬಿದ ಸೋಮವಾರ ತುಂಬಿದ ಹುಣ್ಣಿವೆ ನಟ್ಟಿರಳು ನಡುರಾತ್ರಿ ಕಾಡಿನಲ್ಲಿ ಏನು ನಡೆಯಿತೆಂದು ನಾವಾದರೂ ಹ್ಯಾಂಗೆ ಹೇಳೋಣ? ನಿಮಗೂ ತಿಳಿದಿರುವಂತೆ ಯಕ್ಷಿಯ ಗುಡಿಯಾಚೆ ದೂರದ ಮರಗಳ ಅಡರಿ ಕುಂತಿದ್ದೆವಾಗಿ ನಮಗೂ ತಿಳಿಯದು. ಆದರೆ ಶಿವನ ಜಡೆಯಂಥ ಶಿವರಾತ್ರಿಯಲ್ಲಿ ನಾವಿನ್ನೂ ಸಾವಿರ ವರ್ಷ ಚಂದಮುತ್ತನ ಕಥೆಯ ಹೇಳಬೇಕೆಂದಿರುವುದರಿಂದ ಈ ಕಥಾಕೊಂಡಿಯ ಪತ್ತೆ ಹಚ್ಚಲೇಬೇಕಲ್ಲವೆ? ಇಂತಪ್ಪ ಕಷ್ಟ ನಿಷ್ಟೂರದಲ್ಲಿ ಸಿಕ್ಕಿಕೊಂಡು ನಾವು ಸಾವಳಗಿ ಶಿವ ಶಿವಾ ಎಂದು ಕೈಹೊತ್ತು ಕುಂತಿರಬೇಕಾದರೆ – ಸುಳಿವು ಸಿಕ್ಕಿತು ಶಿವನೆ !

ಒಂಬತ್ತು ಹಗಲು ಒಂಬತ್ತನೇ ರಾತ್ರಿ ಕಳೆದ ಮ್ಯಾಕೆ ಚಂದಮುತ್ತ ಬೋಧೆಗೊಂಡು ಕೂಸಿನ ಕನವರಿಕೆಯಂತೆ ಮಾತಾಡಿದ. ರಾತ್ರಿಯೆಲ್ಲ ಎವೆ ಮುಚ್ಚದೆ ಅಡ್ಡಗೋಡೆಯ ನೆಮ್ಮಿ ಮಗನ ಕಾಯುತ್ತಿದ್ದ ಲಕ್ಕಬ್ಬೆಯ ಕಣ್ಣಲ್ಲಿ ಬೆಳಕಾಡಿತು. ಆದರೆ ಆ ಬೆಳಕು ಬಹಳ ಹೊತ್ತು ಉಳಿಯಲಿಲ್ಲ. ಯಾಕೆಂದರೆ ಚಂದಮುತ್ತಿನಿಗೆ ಬಾಯಿ ಬಂತು, ಗ್ಯಾನ ಬರಲಿಲ್ಲ. ಏನೊ ಧ್ಯಾನಿಸಿದ. ದೂರದಿಂದಲಿ ಯಾರೊ ಕೂಗಿ ಕರೆಧಂಗೆ ಓs ಎಂದು ಎದ್ದ. ಯಾರೊಂದಿಗೋ ಮಾತಾಡಿದ. ನಾಯಿ ಬೊಗಳಿದರೆ ಹೆದರಿ ಥರಾಥರನೆ ನಡುಗಿದ. ಅಬ್ಬೆ ಹೇಳಿದಳು:

ಎಲೆ ಮಗಾ,
ಎದುರಿಗಿರೋಳು ನಿನ್ನ ಅಬ್ಬೆ.
ಇನ್ಯಾರದೋ ಎದುರಿಗಿದ್ದಂತೆ ನುಡಿದಾಡುವಿಯಲ್ಲಪ್ಪ
ಗಾಳಿಯಲ್ಲಿ ಯಾರೋ ಕದ್ದು ನಿಂತವರಂತೆ
ಆ ಕಡೆ ನೋಡುವಿಯಲ್ಲ.
ಯಾರಿದ್ದಾರೆ ಅಲ್ಲಿ?
ಗಾಬರಿಯೆ?
ನಿನ್ನ ಹೆದರಿಸುವಂಥವರು ಯಾರಿದ್ದಾರೆ ಅಲ್ಲಿ?

ನಾನಿಲ್ಲವೆ ನಿನ್ನ ಜೊತೆಗೆ?
ನಾಯಿ ಬೊಗಳಿದರ್ಯಾಕೆ ಬೆಚ್ಚಿ ಬೀಳುವಿಯಪ್ಪ?
ಅದು ನಿನ್ನದೆ ಅಲ್ಲವೆ ನಾಯಿ?
ನಾನಾಡಿದ್ದು ಕೇಳಿಸೋದಿಲ್ಲವೆ?
ಯಾಕೆ ಮಾತಾಡುವುದಿಲ್ಲ? ಗುರುತಿಲ್ಲದವರ
ಹಾಂಗೆ ನನ್ನ ಕಡೆ ನೋಡಿದರೆ ನನಗೆ
ಹೆದರಿಕೆಯಾಗೋದಿಲ್ಲವೆ?
ಇಲ್ಲಿದ್ದೂ ಇನ್ಯಾವ ಲೋಕದಲ್ಲಿರುವೆ?
ಯಾವ ಲೋಕದ ಮಾತು ಹೇಳುತ್ತಿರುವೆ ಕಂದಾ?

ಅಬ್ಬೆಯ ನೋಡುತ್ತ ಬಹಳ ಹೊತ್ತು ಕಣ್ಣೀರು ಸುರಿಸಿದ ಚಂದಮುತ್ತ. ಮಗನ ಕಂಡಷ್ಟೂ ಅಬ್ಬೆಯ ಕಡುದುಃಖ ಹೆಚ್ಚಾದವು. ಕಣ್ಣೀರು ಒರೆಸಿ, ಮಡಿಲಿನಲ್ಲಿ ಮಲಗಿಸಿಕೊಂಡಳು. ಮಗನ ಕಾದ ಸ್ಪರ್ಶವಾದದ್ದೇ ಹಡೆದೊಡಲಿಗೆ ಕೆಂಡ ಸುರಿದಂತಾಗಿ ಗರ್ಭವ ಹಿಡಿದುಕೊಂಡಳು ತಾಯಿ; ಶಿವನಿಗೆ ಹೇಳಿದಳು:

ಭಕ್ತಿ ಮಾಡಿದ್ದಕ್ಕೆ ನೀ ಕೊಟ್ಟ ಫಲ ಈ ಬದುಕು,
ಅದು ಕಣ್ಣೀರಲ್ಲಿ ಕರಗುತ್ತಿದೆ.
ಭೋಂ ಬೋಳೇಶಂಕರಾ
ತನ್ನೊಳಗೆ ತಾನೇ ಹರಾ – ಅಂತ
ಮಸಣದಲ್ಲಿ ಮೈಮರೆತು ಕುಂತರಾಯ್ತೆ ಶಿವನೆ?
ಹದಿನಾಕು ಲೋಕ ಎದೆಗವಚಿಕೊಂಡವನಿಗೆ
ನನ್ನ ಮಗನೊಂದು ಭಾರವೆ?
ಭಕ್ತರ ಜೀವಕ್ಕೆ ನೀನಲ್ಲವೆ ಜಾಮೀನು?
ನಿನ್ನ ಹೆಸರುಗೊಂಡ ಮ್ಯಾಕೆ
ಇನ್ಯಾರು ಸಲಿವ್ಯಾರು ಬಂದು?
ಹೋಗಲಿ, ಸಾಯುವ ಕಂದನ ನೋಡಿ ತೃಪ್ತಿಯಾಯಿತೆ ನಿನಗೆ?
ಅದನಾದರು ಹೇಳು ಹೇಳೆನುತ,

ಕಣ್ಣುಮುಚ್ಚಿ ಅರೆನಿದ್ರೆಗೆ ಸಂದಳು ಅಬ್ಬೆ. ಇಂತಪ್ಪ ವ್ಯಾಳ್ಯಾದಲ್ಲಿ ಮಂಚದ ಕಾಲಿನ ಗೊಂಬೆಗಳೆರಡು ಮುಂದೆ ಬಂದು ಮಾತಾಡಿಕೊಂಡವು ಶಿವಾ;

ಗೊಂಬೆ : ಹಿಂಗಾದರೆ ಹೆಂಗಕ್ಕೆ?
ಹಗಲೊಂಬತ್ತು ಇರುಳೊಂಬತ್ತಾದರೂ
ಚಂದಮುತ್ತನ ಗಂಟಲಗಾಯ ಮಾಯಲಿಲ್ಲ.
ದಮ್ಮಯ್ಯಾ ದಕ್ಕಯ್ಯಾ ಎಂದು
ದಿನಾ ಹೊಸ ಹೊಸ ಕಣ್ಣೀರನಳುತ್ತಿದ್ದಾಳೆ ತಾಯಿ.
ಹಾಲು ಹೂವಿನಂಥ ಹುಡುಗನ್ನ ಕಂಡು
ನಮಗೇ ಹಿಂಗಾದರೆ
ಹೆತ್ತ ಕರುಳಿಗೆ ಹೆಂಗಾಗಬೇಡ !
ಚಂದಮುತ್ತನ್ನ ಗುಣಪಡಿಸಲು
ಉಪಾಯವೇನೂ ಇಲ್ಲೇನಕ್ಕಾ?

ಗೊಂಬೆ : ಇದೆ ತಂಗೀ ಯಕ್ಷೀಗುಡಿಯ ಎಡಗಡೆ
ನಾತಿದೂರ ನಾತಿ ಸಮೀಪ ನೇರಳೆ ಮರದಡಿ
ಗೇಣುದ್ದದ ಗೊಂಬೆ ಬಿದ್ದಿದೆ.
ಕರಿಕೂದಲು ಪೋಣಿಸಿದ ಸೂಜಿಯಿದೆ.
ಅದನ್ನ ಕಿತ್ತಸೆದರೆ
ಚಂದಮುತ್ತನ ಗಾಯ ಮಾಯುತ್ತದೆ.

ಗೊಂಬೆ : ಗೊಂಬೆಗೂ ಚಂದಮುತ್ತನಿಗೂ ಏನಕ್ಕ ಸಂಬಂಧ?

ಗೊಂಬೆ : ಅಗೊ ಅಗೊ ಲಕ್ಕಬ್ಬೆಗೆ ಎಚ್ಚರವಾಯ್ತು !

ಎನ್ನುತ್ತ ಗೊಂಬೆಗಳೆರಡೂ ಹಿಂದೆ ಸರಿದವು. ಲಕ್ಕಬ್ಬೆ ಕನಸಿನಲ್ಲೆಂಬಂತೆ ಗೊಂಬೆಗಳ ಮಾತು ಕೇಳಿಸಿಕೊಂಡಿದ್ದವಳು ಅವಸರದಿಂದ ಎಚ್ಚತ್ತಳು. ಬೆಳ್ಳಿ ಮೂಡಿದ್ದೇ ತಡ ಯಕ್ಷಿಯ ಗುಡಿಗೊಡಿ ನೇರಳೆ ಮರದಡಿ ಹುಡುಕಿದಳು. ಗೊಂಬೆ ಸಿಕ್ಕಿತು! ನೋಡಿದರೆ ಗೊಂಬೆಯ ಕೈಯಲ್ಲಿ ಕೊಳಲಿದೆ ! ತಲೆಯಲ್ಲಿ ನವಿಲುಗರಿಯಿದೆ ! ಗೊಂಡೆಯ ಲಂಗೋಟಿ, ಹೆಗಲಿಗೆ ಕಂಬಳಿಯಿದೆ. ಕರುವಿಗಿರುವಂಥ ತೆರೆದ ಕಣ್ಣಲ್ಲಿ ನಿಚ್ಚಳ ಬೆಳಕಿದೆ ! ಕರಿಕೂದಲು ಪೋಣಿಸಿದ ಸೂಜಿಯನ್ನ ಕತ್ತಿನಲ್ಲಿ ಚುಚ್ಚಿದ್ದಿದೆ !

ಶಿವ ಶಿವಾ ಎಂದು ವಿಸ್ಮಯಂಬಡುವಲ್ಲಿ ಅಬ್ಬೆಗೆ ನಿಚ್ಚಳವಾಗಿ ಏನಪ್ಪ ಗೊತ್ತಾಯಿತು ಅಂದರೆ: ಇದ್ಯಾರೋ ನವತಂತ್ರಿ ನರಸಯ್ಯ ಮಾಡಿದ ಚಂದಮುತ್ತನ ಗೊಂಬೆ. ಮದ್ದು ಮಾಟ ಮಾಡಿದ್ದಾನೆ ಮಗಂಗೆ !

– ಎಂದು ಕೊತ ಕೊತ ಕುದಿವ ಕೋಪದಿಂದ ಗೊಂಬೆಯ ಕತ್ತಿನಲ್ಲಿ ನೆಟ್ಟ ಸೂಜಿಯ ಕಿತ್ತು ಥೂ ಎಂದುಗಿದು ದೂರಕ್ಕೆಸೆದರೆ ಅಲ್ಲಿ –