– ಇಲ್ಲಿ ಗೂಡಿನಲ್ಲಿ ಮಲಗಿದ್ದ ಚಂದಮುತ್ತನ ಕತ್ತಿನ ನೋವು ಹಗುರವಾಗಿ ಬಿಗಿಯಾದ ಗಾಯ ಸಡಿಲಗೊಂಡವು.

ಆಮೇಲಾಮೇಲೆ ಚಂದಮುತ್ತನಿಗೆ ಗುಣವಾಯಿತು ಶಿವನೇ!

ಒಂದು ದಿನ ಅಬ್ಬೆ ಕಾಡಿನ ಕಡೆಗೆ ಹೋಗಿದ್ದಾಗ ಕುಲಗುರು ಒಬ್ಬನೇ ಚಂದಮುತ್ತನ ನಾಡಿ ನುಡಿತವ ಅಲಿಸುತ್ತಿದ್ದಾಗ ಶಿಷ್ಯ ಹೇಳಿದ:

“ನಿನ್ನೊಂದಿಗೆ ಏಕಾಂತವ ನುಡಿದಾಡುವುದಿದೆ ಶಿವನೇ”

“ಹೇಳು ಮಗನೆ. ಈಗ ಯಾರು ಇಲ್ಲವಲ್ಲ”

“ಹುಣ್ಣಿವೆ ದಿನ ನನ್ನ ಕೊಳಲು ಆಲಿಸಿದೆಯ ತಂದೆ?”

“ಆಲಿಸಿದೆನಪ್ಪ, ಅಮೋಘವಾಗಿತ್ತು. ಇಂತಿಪ್ಪ ಸಂಗೀತವ ನಾನು ಜನ್ಮಾಪಿ ಕೇಳಿರಲಿಲ್ಲ.”

ಚಂದಮುತ್ತ ತಕ್ಷಣ ಗುರುವಿನ ಕಾಲುಮುಟ್ಟಿ,

“ಅದೆಲ್ಲ ನಿನ್ನ ದಯೆ ಶಿವಪಾದವೇ”

ಎಂದು ನಮಸ್ಕರಿಸಿದ.

“ನನ್ನ ದಯೆ ಹೌದೋ ಅಲ್ಲವೋ ನಿನ್ನ ಭಕ್ತಿಯಿಂದ ಸಂತೋಷವಂತೂ ಆಯಿತಪ್ಪ, ಅದು ಯಾವ ರಾಗ ಮಗನೇ”

“ಅದು ತಿಂಗಳ ರಾಗ ಶಿವನೇ! ವ್ರತಾಚರಣೆ ಮಾಡಿ ಕಲಿತೆ”

“ನಿನ್ನ ವ್ರತಾಚರಣೆಗೆ ಭಂಗವಾಗಿದ್ದರೆ ಹೇಳು: ಆ ರಾಗದ ಅಂತಿಮದಲ್ಲಿ ನಿಂತಿರುವ ಸಿದ್ಧಿ ಯಾವುದು ಕಂದ?”

“ಶಿವ ಪಾದವೇ, ತಿಂಗಳು ರಾಗವ ಭಕ್ತಿಯಿಂದ ಸುಡಿಸುತ್ತಿದ್ದರೆ ಯಕ್ಷಿಗೆ ರೆಕ್ಕೆ ಮೂಡಿ ಪಕ್ಷಿಯಾಗಿ ಆಕಾಶದಲ್ಲಿ ಹಾರಾಡುತ್ತಾಳೆ. ಅದೇ ಸಿದ್ಧಿ ಶಿವನೇ”

“ಇದಿಷ್ಟೇ ಆದಲ್ಲಿ ಅದೊಂದು ಕ್ಷುದ್ರ ಕೀರ್ತಿಯ ವ್ಯಸನವಲ್ಲವೆ ಕಂದಾ?”

“ಅದು ಆಕಾಶದಂತುಪಾರವನರಿವ ಹವಣಿಕೆ ತಂದೆ! ಬೆಳ್ದಿಂಗಳಲ್ಲಿ ಈಜುತ್ತ ಚಂದ್ರನೆಂಬ ಕನ್ನಡಿಯ ಮೂಲಕ ಶಿವನ ನೋಡುವುದೇ ಅಂತಿಮ ಗುರಿ – ಗುರುಪಾದವೇ”

ಕುಲಗುರುವಿನ ಹೃದಯ ಆನಂದದಿಂದ ಭಗ್ಗನೆ ಹೊತ್ತಿಕೊಂಡಿತು. ತಕ್ಷಣ ಅಭಿಮಾನದಿಂದ ಚಂದಮುತ್ತನ್ನ ಬಾಚಿ ತಬ್ಬಿಕೊಂಡು “ಭೇಶ್ ಭೇಶ್! ನಿನಗೆ ಅಕ್ಷಯವಾಗ್ಲಿ ನನ್ನಪ್ಪ. ಅಂಥ ಅನುಭವದ ಹೊಸ್ತಿಲಲ್ಲಿ ನಿಂತ ಹಂಗಾಯ್ತು ಆ ದಿನ ನನಗೆ. ಆದರೆ ಹಾಡಿನಲ್ಲಿ ಏನೋ ಕೊರತೆ ಕಂಡು ಬಂತಲ್ಲವೆ?”

“ಹೌದು ಶಿವನೆ, ಸಕಾಲದಲ್ಲಿ ಓಂಕಾರದ ಅಂಕುರವಾಗಬೇಕಿತ್ತು. ಅದು ನನ್ನ ಮೊದಲ ಯತ್ನವಾದ್ದರಿಂದ ಹಂತ ಹಂತವಾಗಿ ನುಡಿಸುತ್ತ ಮತ್ತು ಅರಿಯುತ್ತ ಇರುವಾಗ ಯಾರೋ ನನ್ನ ಕುತ್ತಿಗೆ ಸೂಜಿ ಚುಚ್ಚಿ ಸೊಲ್ಲಡಗಿಸಿದರು ಶಿವನೆ….”

“ಯಾರು?”

“ಚುಚ್ಚುವ ಹಸ್ತ ಮತ್ತು ವ್ಯಕ್ತಿ ಎರಡೂ ಅದೃಶ್ಯವಾಗಿದ್ದವು ತಂದೇ”

“ಅಧೆಂಗಾದೀತು ಮಗ? ವ್ರತಾಚರಣೆಗೆ ಕೂತಾಗ ನಿನ್ನ ಸುತ್ತ ರಾಗದಿಂದ ಮಂತ್ರಮಂಡಳ ಕೊರೆಯಲಿಲ್ಲವೆ?”

“ಕೊರೆದೆ ಶಿವನೆ!”

“ಕಾಯುವ ದೇವರನ್ನ ಅವರವರ ದಿಕ್ಕಿನಲ್ಲಿ ಪ್ರತಿಷ್ಠಾಪಿಸಿ ಬಂದೋಬಸ್ತ್ ಮಾಡಲಿಲ್ಲವೆ?”

“ಮಾಡಿದ್ದೆ ಶಿವನೆ, ಅಲ್ಲೇ ಏನೋ ಊನವಾದ ನೆನಪು”

“ಹ್ಯಾಂಗೇ ಸೈ. ಯಕ್ಷಿಯ ಪಕ್ಷಿಯ ಮಾಡಿ ಹಾರಿಸುವ ತಿಂಗಳು ರಾಗದ ತಂತ್ರ ಇನ್ಯಾರಿಗೋ ಬೇಕಾಗಿದೆ. ಅದಕ್ಕೇ ಅವರು ನೀ ಮಾಡಿದ ತಪ್ಪಿನೊಳಗೆ ತೂರಿ, ಮಂತ್ರ ತಂತ್ರ ಯಂತ್ರದ ಗೊಂಬೆಯ ಮಾಡಿ, ನಿನ್ನ ಹಾಡು ನಿಲ್ಲಿಸಿ, ಹಾರುವ ಯಕ್ಷಿಯ ಕೆಳಕ್ಕೆ ಬೀಳಿಸಿ ವಶವರ್ತಿ ಮಾಡಿಕೊಂಡು ಹೋಗಿದ್ದಾರೆ. ಇಗೋ ಇಲ್ಲಿದೆ ನಿನ್ನ ಗೊಂಬೆ.”

– ಎಂದು ಅಬ್ಬೆ ಕೊಟ್ಟ ಗೊಂಬೆಯ ತೋರಿಸಿದ. ಚಂದಮುತ್ತನಿಗೆ ನಿಚ್ಚಳವಾಗಿ ಕಾರ್ಯಕಾರಣ ಹೊಳೆದವು ಆದರೆ ಇಂತಪ್ಪ ಗೊಂಬೆಯನ್ಯಾರು ಮಾಡಿರಬಹುದೆಂದು ಇಬ್ಬರಿಗೂ ಬಗೆಹರಿಯಲಿಲ್ಲ.