ಚಂದಮುತ್ತನ ಕತ್ತಿನ ನೋವು ಕಮ್ಮಿಯಾಗಿ
ಅಧಿಕವಾದವು ಯಕ್ಷಿಯ ವಿರಹದ ನೋವು.
ಅವಳ ಗ್ಯಾನದಲ್ಲಿ ನೂರೊಂದು ನೆನೆದ,
ನೂರೊಂದು ಪರಿತಪಸಿದ.
ಯಕ್ಷಿ ವಿರಹಿತ ಲೋಕ ನಾಯಿ ನರಕವೆಂದು
ಕಣ್ಣೀರುಗರೆದ
ಹಾಳು ಸುರಿವ ಯಕ್ಷಿಯ ಗುಡಿಯ ನೋಡಿ
‘ನನ್ನ ಯಕ್ಷಿಗೇನಾಯಿತು ಶಿವನೆ?’ ಎಂದು ಯಾರಿಲ್ಲದಾಗ
ಕರಳು ಬಾಯಿಗೆ ಬರುವಂತೆ
ಬಾಯಿ ಬಡಕೊಂಡತ್ತ, ತಲೆ ಹೊಡೆಕೊಂಡತ್ತ.
ಕಾಡು ನೆನಪಿನ ಸ್ಮಶಾನವಾಗಿ, ಬೆಳ್ದಿಂಗಳು ಬೂದಿಯಾಗಿ
ತೇಲುವ ಹೆಣ ಚಂದ್ರನ ಕಂಡು ಕರುಳು ಹಿಂಡಿಕೊಂಡತ್ತ.
ನಿದ್ದೆ ನೀರಡಿಕೆ ಇಲ್ಲದೆ
ಹಾರಿತೆಲ್ಲಿಗೆ ನನ್ನ ಬೆಳ್ಳಾನ ಬಿಳಿ ಹಕ್ಕಿ ಎಂದು
ಹಾಕಿಕೊಂಡತ್ತ.
ಕೊನೆಗೆ ಅವಳಿಲ್ಲದೆ ಈ ನಾಯಿಜಲ್ಮ ಯಾಕಿರಬೇಕೆಂದು
ದುಃಖಶೋಕವ ಮಾಡುತ್ತ
ಅಬ್ಬೆಗೂ ಕುಲಗುರುವಿಗೂ ಹೇಳದೆ ಕೇಳದೆ
ಹಟ್ಟಿಯ ಬಿಟ್ಟು ಏಕಾಂಗಿ ಹೊರಟ.

ಅಡವೀಲಿ ನಡೆದು ಬಂಡೆ ಹತ್ತಿಳಿದು
ಕಲ್ಲುನೆಲ ತುಳಿದ.
ಹಗಲು ರಾತ್ರಿ ಅನ್ನದೆ, ಹಾವು ಹುಲಿ ಮೃಗ ಜಾತಿ ಅನ್ನದೆ
ಕಾಲಿಗೆ ಮುಳ್ಳು ಚುಚ್ಚಿ ರಕ್ತ ಸುರಿಸುತ್ತಾ
ಕಾಲೆಳೆಯುತ್ತಾ, ಕೈ ಊರುತ್ತಾ
ಬೀಳುತ್ತಾ, ಏಳುತ್ತಾ ನೀರು ನೆರಳೂ ಇಲ್ಲದಲ್ಲಿ ನಡೆದ.
ಇದ್ದಲ್ಲಿ ನಡೆದ.
ಹಕ್ಕಿ ಪಕ್ಷಿ ಇಲ್ಲದಲ್ಲಿ ನಡೆದ, ಇದ್ದಲ್ಲಿ ನಡೆದ.

ಯಕ್ಷಿಯ ಕೂಗಿ ಹುಡುಕಿದ. ಕಾಕು ಹೊಡೆದು ಹುಡುಕಿದ.
ಮ್ಯಾಲೂ ನೋಡಿದ ಕೆಳಗೂ ನೋಡಿದ,
ಅಕ್ಕಪಕ್ಕ ಆಸುಪಾಸು ನೋಡುತ
ಯಕ್ಷಿ ಯಕ್ಷೀ ಎಂದು
ಬಿದ್ದೂ ಕೆಡೆದೂ ಒದ್ದಾಡಿಕೊಂಡು ನಡೆದ.

ದಾರಿಯಲ್ಲಿ ಹಿರಿಯ ಜಾಲಿ, ಕಿರಿಯ ಜಾಲಿ
ಮರಕ್ಕೆ ಮರ ಕೂಡಿಕೊಂಡು ಚಂದಮುತ್ತನ
ಜಡೆ ಗಡ್ಡ ಕಿತ್ತವು. ಆ ಮರಕ್ಕೂ ತಾಗಿ
ಈ ಮರಕ್ಕೂ ತಾಗಿ ಮೂರ್ಛೆ ಬಿದ್ದಿರುವಲ್ಲಿ –
ಮರದಲ್ಲಿದ್ದ ಮರಿ ಹಕ್ಕಿ ತಾಯಿಗೆ ಹೇಳಿತು:

ಯಾರವ್ವ ಇವನು?
ಇವನ ಕಂಡರೆ ಮರಮರ ಮರುಗುತ್ತಾವೆ ತರುಮರ
ಎಲೆಗಳ ಉದುರಿಸುತಾವೆ,
ಹೂ ಹೂ ಬಾಡಿ ಕತ್ತು ಚೆಲ್ಲುತ್ತಾವೆ.
ಹರಿವ ತೊರೆ ಗೋಗರೆಯುತಾವೆ.

ಕೊಳಲು ನುಡಿಸಿ ಮಳೆ ತರಿಸಿದ ಮಹಾರಾಯ ಇವನಲ್ಲವೆ?
ಎಷ್ಟೊಂದು ಹಾಡು ಕಲಿತೆವು ಇವನಿಂದ.
ಇವನಿಲ್ಲದ ಹಾಡುಂಟೆ?

ನಾವೆಷ್ಟು ಹಾಡಬೇಕೆಂದರೂ ಅತ್ತಹಾಗಿದೆಯಲ್ಲ ಇವತ್ತು!
ನೀನ್ಯಾಕೆ ಅಳುತಿರುವೆ ತಾಯಿ?

ಬಹಳ ಹೊತ್ತಾಗಿ ತಂಗಾಳಿಗೆಚ್ಚತ್ತು ಕಿರಿಗಣ್ ತೆರೆದಾಗ ಎದುರಿಗೆ ಬ್ರಹ್ಮರಾಕ್ಷಸ ಕಳಚಿಬೀಳುವಂತೆ ಕಣ್ ತೆರೆದುಕೊಂಡು, ಅಡಿಯಿಂದ ಮುಡಿತನಕ ಇಡಿಯಾಗಿ ನುಂಗುವಂತೆ ನೋಡುತ್ತ ಕುಂತಿತ್ತು! ‘ಸತ್ತನೋ ಶಿವನೇ’ ಎಂದು ಗಾಬರಿಯಿಂದೇಳಬೇಕೆಂಬಲ್ಲಿ ಗಪ್ಪನೆ ಅವನ ಕಾಲು ಬಿಗಿಯಾಗಿ ಹಿಡಿದು “ಗುರುತಾಗಲಿಲ್ಲೇನೋ ನನ್ನಪ್ಪಾ?” ಎಂದಿತು. ಹೊಯ್ಕಿನಿಂದರ್ಧಾ ಸಂಶಯದಿಂದರ್ಧಾ ನೋಡಿದ. ಮೈಮುಖದ ತುಂಬ ಹೆಂಗೆಂದರೆ ಹಂಗೆ ಹುಲುಸು ಬೆಳದ ಕೂದಲು ಜಡೆಗಟ್ಟಿ ಅಂಗಾಂಗ ಸಾಂಗೋಪಾಂಗ ಯಾವುದೆಂದು ತಿಳಿಯದಂತಿತ್ತು. ಕಳಚಿಬೀಳುವಂತಿದ್ದವು ಕೆಂಡಗಣ್ಣು. ಕೋರೆಹಲ್ಲಿಳಿದು ತುಟಿಯ ಹೊರಗೆ ಕಾಣಿಸುತ್ತಿದ್ದವಾಗಿ ಸದಾ ಕೋಪಗೊಂಡ ರಾಕ್ಷಸನ ಹಾಗೆ ಕಾಣುತ್ತಿದ್ದ. ಸೊಂಟದಲ್ಲಿ ಮನುಷ್ಯರು ನೇಯ್ದ ಬಟ್ಟೆಯಿದ್ದುದರಿಂದ ಧೈರ್ಯ ಬಂತು. ಅಷ್ಟರಲ್ಲಿ ಮತ್ತದೇ ಹೇಳಿತು; “ನಿನ್ನ ಪಾಪಿ ಗುರು ಮಹಾನುಭಾವನ ಮರೆತೆಯೇನಪ್ಪ?” ಗುರುತಾಯಿತು. ಆದರೆ ನನ್ನ ಗುರುಪಾದವೆಲ್ಲಿ? ಈ ವಿಕಾರವೆಲ್ಲಿ? ಎಂದು ಆಶ್ಚರ್ಯದಿಂದ ನೋಡುತ್ತಿರುವಂತೆ ಮಹಾನುಭಾವ “ಕಾಪಾಡೊ ನನ್ನಪ್ಪಾ” ಎಂದು ಚಂದಮುತ್ತನ ಪಾದಂಗಳ ಹಣೆಗೆ ಗಿಟ್ಟಿಸಿಕೊಂಡು ಬಿಕ್ಕಿಬಿಕ್ಕಿ ಅಳತೊಡಗಿದ. “ಅಯ್ಯಯ್ಯೋ ಶಿವಪಾದವೇ” – ಎನ್ನುತ್ತ ಕಾಲು ಬಿಡಿಸಿಕೊಂಡು ಚಂದಮುತ್ತ ಗುರುವಿನ ಪಾದ ಹಿಡಿಯಲು ಹೋದಾಗ ಅವನೊಪ್ಪದೆ ಇಬ್ಬರೂ ಪರಸ್ಪರ ಕೈಹಿಡಿದುಕೊಂಡರು. “ಇದೇನು ಗುರುಪಾದವೇ?” ಅಂದ ಚಂದಮುತ್ತ. ಮಹಾನುಭಾವ ಪಶ್ಚಾತ್ತಾಪದಲ್ಲಿ ಬೆದ ಬೆದ ಬೆಂದು ಹೋಗಿದ್ದ;

“ನಿನ್ನ ಘಾತಿಸಿದ ಕಥೆ ಹ್ಯಾಗೆ ಹೇಳಲಿ? ಆದರೂ ನೀನು ಈ ಕಪಟವಿದ್ಯನ ತೆಪ್ಪು ಹೊಟ್ಟೆಗೆ ಹಾಕಿಕೊಳ್ಳತ್ತೀ ಅಂತಾದರೆ ಮಾತ್ರ ಹೇಳುತ್ತೇನಪ್ಪ”

“ನಾತಿ ವಿಸ್ತಾರ ನಾತಿ ಹೃಸ್ವ ಅದೇನು ಹೇಳು ಶಿವಪಾದವೇ”

ಆಮೇಲೆ ದಮ್ಮಯ್ಯಾ ದಕ್ಕಯ್ಯ ಎಂದು ಸತ್ಯ ಸಂಗತಿಯನ್ನೊಪ್ಪಿಕೊಳ್ಳುತ್ತಾ ಮಹಾನುಭಾವ ಹೀಗಂದ:

ನೀನು ಕೊಳಲು ನುಡಿಸಿ ಮಳೆ ತರಿಸಿದ್ದೇ ಆಯಿತು ನೋಡು
ಸಮೂಹ ಸನ್ನಿಯಂತೆ ನಿನ್ನ ಕೀರ್ತಿ
ನಾಕು ರಾಜ್ಯ ಎಂಟು ದಿಕ್ಕಿಗೆ ಹಬ್ಬುವುದ ನೋಡಿ ಕೇಳಿ
ಅಸೂಯೆ ಅಧಿಕವಾಗಿ
ಹೊಟ್ಟೆಯ ಕಿಚ್ಚು ತಳಮಳಿಸಿತು.
ಮಳೆರಾಯನ ಪಳಗಿಸಿದೆಯೆಂದು, ಶಿವನ ಒಲಿಸಿದೆಯೆಂದು
ದಿನಾ ಬಂದ ಥರಾವರಿ ಕತೆ ಪುರಾಣ ಕೇಳಿ ಕೇಳಿ
ತಾಮಸಕ್ಕೊಳಗಾದೆ.
ನಿಜ ಹೇಳುತ್ತೇನೆ ಮಾರಾಯ: ಆಮೇಲಾಮೇಲೆ
ಲೋಕ ಲೌಕಿಕದಲ್ಲಿ ನಾನು ಬದುಕಲೇ ಇಲ್ಲ.
ನೋವನ್ನ ಹ್ಯಾಗೆ ಸಹಿಸಿದೆನೆಂದು ಕೇಳಬೇಡ –
ಇದ್ದಲ್ಲಿ ಇರಲಾಗದೆ, ಬಿದ್ದಲ್ಲಿ ಬಿದ್ದಿರಲಾಗದೆ
ಕೊನೆಗೆ ನಿನ್ನ ಹಟ್ಟಿಗೆ ಬಂದೆ, ನಿನ್ನ ನೋಡುವುದಕ್ಕೆ.
ಸೇಡಿನ ಸೆರೆಮನೆಯಲ್ಲಿ ಸಿಕ್ಕ ಹಂಗಾಯ್ತು.
ಕೆಟ್ಟ ಪಿಶಾಚಿ ಚಿನ್ನಮುತ್ತ ಬಂದ ನನ್ನ ಸಹಾಯಕ್ಕೆ,
ಅಥವಾ ನಾನು ಅವನ ಸಹಾಯಕ್ಕೆ.
ಅವನ ದೇಹಂತ ದೇಹ ಸೇಡಿನಿಂದ ಕೊಳೆಯುತ್ತಿತ್ತು.
ನಿನ್ನ ದುರ್ಗುಣಗಳು ಸಾವಿರ ಬಾರಿ ಜಪಿಸಿದ
ನಿನ್ನ ಗುಣಗಳ ನೇತಿಗೆಳೆದು ಮಾತಾಡಿದ
ಸುಳ್ಳು ಹೇಳಿ ಕಪಟವೊಡ್ಡಿದ.
ಶಿಷ್ಯನಾಗುವೆನೆಂದ. ತನ್ನ ಗುರುಭಕ್ತಿಗೆ
ಶಿವನೇ ಜಾಮೀನು ಎಂದ.
ಸುಖ ಸವಲತ್ತುಗಳ ಆಮಿಷ ತೋರಿದ.
ಕಾಲಾನುಕಾಲದಲಿ ಇದಕೂ ಬೆಲೆ ತೆರಬೇಕೆಂದು
ತಿಳಿದಿದ್ದರೂ ನಾನ್ಯಾಕೆ ಅವನ ಮೋಡಿಗೆ ಸೋತೆನೋ,
ಶಿವನನ್ನ ಕಡೆಗಣಿಸಿ ಒಪ್ಪಿಕೊಂಡೆ.

ನಿನ್ನ ದನಗಳಿಗೆ ಹಸಿರು ವಿದ್ಯೆ ಗಿಡಮೂಲಿಕೆ ಮಾಡಿದೆವು.
ತೊಣಚಿರೋಗ ತಂದಿಕ್ಕಿದೆವು
ನಿನ್ನ ಹಟ್ಟಿ ಹಾಳಾಗುವಂತೆ
ಕೊಟ್ಟಿಗೆ ಬಯಲಾಗುವಂತೆ ಮಾಟ ಮಾಡಿದೆವು;
ನಮ್ಮ ಆಟ ನಡೆಯಲಿಲ್ಲ.
ಆಮೇಲೆ ತಿಳಿಯಿತು; ಯಕ್ಷಿಯ ರಕ್ಷೆಯಿದೆಯೆಂದು.
ನಿನ್ನ ಹಾಡು ಕದಿಯುವುದು ಸಾಧ್ಯವಿರಲಿಲ್ಲ.
ಯಕ್ಷಿಯ ಕದ್ದು ವಶವರ್ತಿ ಮಾಡಿಕೊ ಶಿವನೇ,
ಹಂಗಾದಲ್ಲಿ ಚಂದಮುತ್ತನ ಕೀರ್ತಿ ಕುಂದಿ
ನಿನ್ನ ಕೀರ್ತಿ ಹಬ್ಬುವುದೆಂದು ಪ್ರಚೋದನೆ ಕೊಟ್ಟ.
ಅಂದೇ ನವತಂತ್ರಿ ನರಸಯ್ಯನ ಮೊರೆಹೊಕ್ಕೆವು.

ಯಂತ್ರ ತಂತ್ರ ಮಂತ್ರಾದಿಗಳ ಕರಿವಿದ್ಯೆ ಮಾಡಿ
ಹಸುವಿನ ಕರುವಿನ ಬಲಿಕೊಟ್ಟೆವು
ಬಲಿ ಕೊಟ್ಟ ಕರು
ಮನುಷ್ಯರ ಥರ ಒದರಿ ಸತ್ತಿತಪ್ಪ!
ಭೈರವನೆದುರಿಟ್ಟ ನಮ್ಮ ನೈವೇದ್ಯ
ಕಪ್ಪೇರಿ ನೋಡ ನೋಡುವುದರೊಳಗೆ
ನರಿ ನಾಯಿಗಳ ಪಾಲಾಯಿತು.
ಆದರೂ ನಾವು ಹಿಂದಿರುಗುವ ಸ್ಥಿತಿಯಲ್ಲಿರಲಿಲ್ಲ,
ಆಗಲೇ ಕತ್ತಿನ ತನಕ ಮುಳುಗಿದ್ದೆವು.

ನವತಂತ್ರಿ ನರಸಯ್ಯನಿಂದ ಕರಿವಿದ್ಯೆಯಲ್ಲಿ
ನಿನ್ನ ಗೊಂಬೆಯ ಮಾಡಿಸಿ
ಗೊಂಬೆಗೆ ಮಲೆಯಾಳ ಮಾಟವ ಮಾಡಿಸಿ ತಂದೆ.

ಆ ದಿನ ನಿನ್ನ ಹಾಡಿಗೆ ಒಲಿದು ಹಾರಾಡುವ ಯಕ್ಷಿಯ ಕಂಡು
ಚಿತ್ತ ವಿಭ್ರಮವಾಯಿತಯ್ಯಾ –
ಮಾಡಬಾರದನ್ನು ಮಾಡಿಬಿಟ್ಟೆ.

ನಿನ್ನ ಹಾಡು ನಿಂತಿತು ನೋಡು: ಸುಖನಿದ್ದೆಯಲ್ಲಿ ಯಾ
ಕನಸಿನಲ್ಲಿ ಚಿಲಿಪಿಲಿ ಜಗತ್ತು
ಒಮ್ಮಿಗಿಲೆ ಎಚ್ಚತ್ತು, ಕಿಟಾರನೆ ಕಿರಿಚಿ
ಸದ್ದುಗದ್ದಲ ಮಾಡಿದವು ಬಹಳ.
ಆಕಾಶದಿಂದ ಕಳಚಿ ಬೀಳುವ ಮುನ್ನ
ಯಕ್ಷಿಯ ಹೊತ್ತುಕೊಂಡೋಡಿ ಬಂದೆ.
ಆಗ ಮೂರ್ಛೆ ಹೋದವಳಿಗೆ ಇನ್ನೂ ಗ್ಯಾನ ಬಂದಿಲ್ಲ.

ಇಂತೆಂಬ ನುಡಿಕೇಳಿ ಏಳೇಳು ಲೋಕದ ರವರುದ್ರಗೋಪ ತಾಳಿದ ಚಂದಮುತ್ತ ತಂತಾನೇ ವಿವೇಕಿಸಿಕೊಂಡು ಹೀಗೆಂದು ಕೇಳಿದ:

“ನಿನ್ನಂಥವರು ಇತಂತಪ್ಪ ಕಾರ್ಯವೆನೆಸಗಬಹುದೇ?”

“ನೀನೇನು ಶಿಕ್ಷೆ ಕೊಟ್ಟರೂ ಅನುಭವಿಸುತ್ತೇನೆ, ದಯವಾಗು ನನ್ನಪ್ಪಾ. ಅಸಹಾಯಕ ಯಕ್ಷಿಯ ದಿನಾ ನೋಡಿಕೊಂಡು ಬಿದ್ದಿರೋದೇ ಘನವಾದ ಶಿಕ್ಷೆ. ಉಪಚರಿಸೋಣವೆಂದರೆ ಆಕೆಯ ಸಮೀಪ ಸುಳಿಯುವುದಕ್ಕೆ ಖಗಮೃಗಜಾತಿ ಬಿಡುವುದಿಲ್ಲ. ಬಿಗಿದ ಮುಷ್ಟಿಯ ದೈವಂಗಳೆಷ್ಟೋ ನನ್ನ ಕತ್ತಿನ ಕಡೆಗೆ ಕ್ರೂರ ದೃಷ್ಟಿ ಬೀರುತ್ತಿದ್ದಾವೆ. ಮನುಷ್ಯರಿಗೆ ಬರುವ ಭಯಂಕರ ರೋಗಗಳು ನನ್ನನ್ನಾಗಲೇ ಆಕ್ರಮಿಸಿಕೊಂಡಿವೆ. ಕಣ್ಣುಮುಚ್ಚಿದರೆ ಒಳಗೆ ಹಿಂಸೆ, ತೆರೆದರೆ ಹೊರಗೆ ಹಿಂಸೆ, ಬ್ರಹ್ಮರಾಕ್ಷಸನೆಂದು ನನ್ನ ಬಳಿಗ್ಯಾರೂ ಸುಳಿಯುತ್ತಿಲ್ಲ. ಬದುಕಿದ್ದಾಗಲೇ ಬ್ರಹ್ಮರಾಕ್ಷಸನಾಗೋದೆಂದರೆ ಅದೊಂದು ಸಿದ್ಧಿಯೇ ನನ್ನಪ್ಪ?

ಪಾಪಿ ಎನ್ನು, ನೀಚ ಎನ್ನು, ಗಂಜಳ ತಿಂದು ಬದುಕುವವ ಅನ್ನು. ನಿರ್ಲಜ್ಜನೆನ್ನು, ಅಧಮನೆನ್ನು, ಮನಸಾರೆ ಬೈದು ನನ್ನ ಅತ್ಮಕ್ಕೆ ತುಸು ಶಾಂತಿ ಕೊಡಪ್ಪಾ.

– ಎಂದು ಸೋತು ಮಾತಾಡಿದ.

“ಈಗ ಆ ಯಕ್ಷಿ ದೇವತೆ ಎಲ್ಲಿದ್ದಾಳೆ ಗುರುಪಾದವೆ?”

* * *

ಗಂಟೆ ಮತ್ತು ಅದರ ನಾಲಗೆಯಲ್ಲಿ ಅಡಗಿ ಕುಂತ ನಾದದ ಹಾಂಗಿರುವ ಶಿವನ ನೆನೆದು ಚಕೋರಿ ಎಂಬ ನಮ್ಮ ಕಥಾನಾಯಕಿಯ ಧರ್ಮಸೆರೆ ಬಿಡಿಸುತ್ತೇವೆ ಮಲಗಿರುವವರು ಎಚ್ಚರವಾಗಿರಯ್ಯಾ,

ಇದು ಜಗದ ಖಾಲಿಗಳನ್ನು ಹಾಡುಗಳಿಂದ
ತುಂಬಿದವನ ಕಥೆ,
ಸ್ಮಶಾನದಲ್ಲಿ ಮೈಮರೆತು ಕುಂತಿದ್ದ ಶಿವ –
ಮರೆತ ಹೆಜ್ಜೆಯ ಹಾಕಿ ಮತ್ತೆ ಕುಣಿಯುವಂತೆ
ಮಾಡಿದವನ ಕಥೆ,
ಕಿವಿಗಳ ಕಿಲುಬು ತೊಳೆದು
ಹೃದಯದ ಕೊಳೆ ಕಳೆದು
ಕಥೆಯ ಕೇಳುವುದಕ್ಕೆ ಸಿದ್ಧವಾಗಿರಯ್ಯಾ,
ಹೃದಯದ ಯಾವುದಾದರೂ ಮೂಲೆಯಲ್ಲಿ
ಒಂದೆರಡು ಕನಸು ಮಲಗಿದ್ದರೆ ಎಚ್ಚರಿಸಿರಯ್ಯಾ
ನಮ್ಮ ಹಾಡು ಕೇಳುವುದಕ್ಕೆ.
ಸ್ವಯಂ ಸಾವಳಗಿ ಶಿವಲಿಂಗ ಸ್ವಾಮಿ
ಪ್ರತ್ಯಕ್ಷ ಕಿವಿ ತೆರೆದುಕೊಂಡು ಕುಂತಿದ್ದಾರೆ,
ಶರಣೆಂದು ಬಾಗಿ ಮುಂದಿನ ಕಥಾ ಸಾರಾಂಶವ
ಹೇಳಬೇಕೆಂದರೆ –

ನೆರಳಿನ ಜೊತೆ ಎಂದಾದರೂ ಗುದ್ದಡಿದ್ದೀರಾ ಶಿವ?
ಬಲು ಬಲು ಸುಲಭ.
ಬೆಳಕಿನ ಬಳಿ ನೀವು ನಿಂತುಕೊಂಡು
ಗೋಡೆಯ ಕಡೆಗೊಮ್ಮೆ ನೋಡಿರಿ
ನೋಡಿದಿರಾ; ಅಕೋ ಮೂಡಿದ್ದಾನೆ ನಿಮ್ಮ ಶ್ರೀ ನೆರಳು!
ಎರಡೂ ಹಸ್ತಗಳನ್ನು ಕಿವಿಮ್ಯಾಲಿಟಗೊಂಡು ಬಾಯಿ ತೆರೆಯಿರಿ.
ತೆರೆದಿರಾ? : ಅಗೋ ಕೊಂಬು ಕೋರೆಹಲ್ಲಿನ ಬ್ರಹ್ಮರಾಕ್ಷಸ!
ನೀವು ಗುದ್ದಿದರೆ ತಿರುಗಾ ಗುದ್ದಿ
ನೆಗೆದರೆ ನೆಗೆದು
ಕುಣಿದರೆ ಕುಣಿದಾಡಿ ಕುಪ್ಪಳಿಸುವವನಲ್ಲವೆ?

ಅನುಮಾನ ಬಂತ?
ನಿಮ್ಮಿಬ್ಬರಲ್ಲಿ ಯಾರು ನಿಜ ಅಂತ?
ಅದೇನೇ ಇರಲಿ ಶಿವನೆ,
ಗೋಡೆಯ ಮ್ಯಾಲೆ ಮೂಡಿದಷ್ಟು ಕತ್ತಲೆಗೆ
ಯಜಮಾನರು ನೀವೆ!
ಇಷ್ಟಕ್ಕೆಲ್ಲ ಬೆರಗಾಗಬೇಡಿರಯ್ಯಾ
ಅಮವಾಸ್ಯೆಯ ಅಂಧಂತಮಸ್ಸಿಗೆ ಶಿವನು ಯಜಮಾನನಾದಂತೆ
ಈ ಸಣ್ಣ ಕತ್ತಲೆಗೆ ನಾವು ನೀವು!

ನೋಡಿದಿರಲ್ಲ ಮಹಾನುಭಾವನ?
ಕನ್ನಡಿಯಲ್ಲಿ ಮೂಡಿದ ಅವನ ಬ್ರಹ್ಮರಾಕ್ಷಸನ?
ಇನ್ನು ಮ್ಯಾಕೆ ನಮ್ಮ ಕಥಾನಾಯಕ ಚಂದಮುತ್ತ
ಚಂದ್ರನೆಂಬ ಕನ್ನಡಿಯಲ್ಲಿ ನೋಡಿಕೊಂಡಾಗ
ಏನು ಕಂಡಿತೆಂದು ಕೇಳಿರಯ್ಯಾ –

* * *

ಶಿವಾಶಿವಾ, ಈ ಪ್ರಕಾರವಾಗಿ ಚಂದಮುತ್ತ ತನ್ನ ವಿದ್ಯಾಗುರುವಾದಂಥಾ ಮಹಾನುಭಾವನ ಶ್ರೀಪಾದಂಗಳ ಹಿಡಿದು,

“ಈಗ ಯಕ್ಷಿದೇವತೆ ಎಲ್ಲಿರುವಳು ಗುರುಪಾದವೆ?”

– ಎಂದು ಕೇಳುವ ಪ್ರಸ್ತಾವದಲ್ಲಿ ಮಹಾನುಭಾವ ‘ಬಾ’ ಎಂದು ಚಂದಮುತ್ತನ್ನ ಕಾಡುಜಂಗಲ್‌ದಲ್ಲಿದಂಥಾ ಒಂದು ಹಾಳು ಗುಡಿಗೆ ಕರೆದು ತಂದ. ಗರ್ಭಗುಡಿ ವಿನಾ ಹೊರಗೆಲ್ಲ ಹಾಳು ಬಿದ್ದಿತು. ಒಳಗೆಲ್ಲ ಅಂಧಂತಮಸ್ಸು ಕಗ್ಗತ್ತಲಿತ್ತು. ತೋರಿಸಿದನೇ ವಿನಾ ಮಹಾನುಭಾವ ಒಳಕ್ಕೆ ಬರಲಿಲ್ಲ. ಚಂದಮುತ್ತ ಕಾಲಿನೆಕ್ಕಡ ಕಳಚಿ ಕಗ್ಗತ್ತಲಲ್ಲಿ ಕಾಲಾಡಿಸುತ್ತು ಒಳಕ್ಕೆ ನಡೆದ. ತುಸು ಹೊತ್ತಿನಲ್ಲಿ ತಡಕಾಡುವ ಕಾಲಿಗೆ ಯಕ್ಷಿಯ ಕಾಲುತಾಗಿ ‘ದೇವೀ’ ಅಂದ. ಮಲಗಿದ್ದ ಚಕೋರಿ ಎಂಬ ಯಕ್ಷಿಗೆ ಮೆಲ್ಲಗೆ ಕಣ್ಣು ತೆರೆದಳು. ಎಳೆ ಹಸಿರು ಬಣ್ಣದ ಜ್ಯೋತಿಗಳೆರಡು ಸಣ್ಣಗೆ ಹೊತ್ತಿಕೊಂಡವು. ಕಣ್ಣಿಗೆ ಪ್ರಿಯವೂ ಹಿತಕರವೂ ಆಗಿತ್ತು ಬೆಳಕು. ಆ ಬೆಳಕಿನಲ್ಲಿ ನೋಡಿದಾಗ ಕರುಳು ಕಿತ್ತು ಕಣ್ಣಿಗೆ ಬಂತು. ದೇವಿಯ ಕಣ್ಣು ವಿನಾ ಉಳಿದೆಲ್ಲ ದೇಹ ಸೆಟೆದುಕೊಂಡಿತ್ತು. ಧೂಳು ಕೆಸರಂಟಿ ಕೊಳೆಯಾಗಿದ್ದವು ಬಿಳಿರೆಕ್ಕೆ, ಅಲುಗಾಡುತ್ತಿರಲಿಲ್ಲ ಕೈಕಾಲು. ಇವನ ನೋಡಿ ಮೂಗಿನ ಪವನ ಬಿರುಸಾದವು. ನಿಟ್ಟುಸಿರ ಹೊಯ್ಲಿನಿಂದ ತುಟಿ ಒಣಗಿದ್ದವು. ಮಾತಾಡಲು ಯತ್ನಿಸಿದಳು. ಬಾಯಿ ಬರಲಿಲ್ಲ. ಪಣತಿಯ ಕೊನೆಯಿಂದ ತೈಲ ಸೋರುವ ಹಾಗೆ ಧಾರಾವತಿ ಕಣ್ಣೀರು ಜಲ ತುಳುಕಿದಳು ಯಕ್ಷಿ. ನೋಡಲಾರದೆ “ಗೋಣು ಕುಯ್ದೆಯೋ ಶಿವನೇ” ಎಂದು ತನ್ನಿಂದಾಗಿ ಈ ಅವಸ್ಥೆಗೆ ಬಂದ ಯಕ್ಷಿ ಸಾಯುವ ಮುನ್ನ ತಾನು ಸಾಯುವುದೆ ಮೇಲೆಂದು ಕುಂತಿರಲಾರದೆ ಎದ್ದು ಹೊರಬಂದ.

ಗುಡಿಯ ಹೊರಗೆ ತಪ್ಪಿತಸ್ಥ ಮಹಾನುಭಾವ ನಿಂತಿದ್ದ. ಇವನ ಕಂಡು ಇನ್ನೇನೊ ಅನಾಹುತವಾಯಿತೆಂದು ಹೌಹಾರಿದ. ಚಂದಮುತ್ತ ನೇರ ಇವನ ಬಳಿ ಹೋಗಿ

“ದೇವಿಯ ಉಳಿಸುವ ಉಪಾಯ ಯಾವುದೂ ಇಲ್ಲವೆ ಗುರುಪಾದವೇ?” ಅಂದ.

“ಇದೆ. ಆದರೆ ಹೇಳಲಾರೆನಪ್ಪ, ಪಾಪಿ ನಾನು, ಈ ಬಗ್ಗೆ ಒತ್ತಾಯ ಮಾಡಬೇಡ” ಎಂದು ಅಳುತ್ತ.

“ಅದೇನಿದ್ದರೂ ಹೇಳು ಗುರುಪಾದವೇ”

– ಎಂದು ಕಾಲು ಹಿಡಿದು ಕೇಳಿದ ಚಂದಮುತ್ತ

“ಹ್ಯಾಗೆ ಹೇಳಲಿ ನನ್ನಪ್ಪಾ; ತಪ್ಪು ಮಾಡಿದವ ನಾನು. ಜೀವಾ ಕೊಟ್ಟರೂ ಕಡಿಮೆ. ಆದರೆ ನನ್ನ ಜೀವದಿಂದ ಅವಳು ಉಳಿಯಲಾರಳು. ನನ್ನ ತಪ್ಪಿಗಾಗಿ ಇನ್ನೊಬ್ಬರ ಬಲಿ ಹ್ಯಾಗೆ ಕೊಡಲಿ?”

“ಅದೇನಿದ್ದರೂ ಹೇಳು ಗುರುಪಾದವೇ.”

“ಕರ್ತವ್ಯವೆಂದು ಹೇಳುತ್ತೇನೆ ಕೇಳು. ಶಿವರಾತ್ರಿಯ ದಿನ ಮಹಾನ್ ಕಲಾವಿದನೊಬ್ಬ ತಿಂಗಳುರಾಗ ಹಾಡಬೇಕು ಇಲ್ಲವೆ ನುಡಿಸಬೇಕು. ತಿಂಗಳು ರಾಗಕ್ಕೆ ಶಿವ ಒಲಿಯಬೇಕು. ಶಿವ ಒಲಿದದ್ದರ ಗುರುತೆಂದರೆ ಅಮವಾಸ್ಯೆಯ ದಿನ ಚಂದ್ರ ಕಾಣಿಸಬೇಕು. ಆವಾಗ ಇವಳಿಗೆ ಮೂಲ ದೈವತ್ವ ಒದಗಿ ಬಂದು ಹಾರುತ್ತಾಳೆ. ಆದರೆ ತಿಂಗಳುರಾಗ ಬಲ್ಲವರು ಯಾರಿದ್ದಾರೆ, ಎಲ್ಲಿದ್ದಾರೆ?”

“ನಾನಿದ್ದೇನೆ, ಹೇಳು ಗುರುಪಾದವೇ”

“ಹಾಗಿದ್ದರೆ ಮುಂದಿನ ಮಾತು ಹೇಳಲಾರೆ”

– ಎಂದು ಹೇಳಿ ಮಹಾನುಭಾವ ಸಾವನ್ನ ಕಂಡವರಂತೆ ಓಡತೊಡಗಿದ. ತಕ್ಷಣ ಚಂದಮುತ್ತನೂ ಬೆಂಬತ್ತಿ ಓಡಿ ಹೋಗಿ ಮತ್ತೆ ಕಾಲು ಹಿಡಿದು, “ಹೇಳದಿದ್ದರೆ ಶಿವನಾಣೆ ನಿನಗೆ” ಎಂದ.

ಮಹಾನುಭಾವ ಹತಾಶನಾಗಿ ಕುಸಿದು –

“ಎಷ್ಟಂತ ಪಾಪ ಮಾಡಲಿ? ಈಗ ಮಾಡಿದ್ದು ಸಾಲದೆ ನನ್ನಪ್ಪ?”

“ಹೇಳುವುದನ್ನು ಪೂರ್ತಿಮಾಡು ಶಿವನೇ.”

“ತಿಂಗಳುರಾಗ ಹಾಡಿದವನು ಅವಳಿಗೆ ದೈವತ್ವ ಒದಗಿ ಹಾರಿದೊಡನೆ ಶಿಲೆಯಾಗುತ್ತಾನೆ ನನ್ನಪ್ಪ”

ಆನಂದದಿಂದ ಚಂದಮುತ್ತನ ಕಣ್ಣು ಭಗ್ಗನೆ ಹೊತ್ತಿಕೊಂಡವು.

“ಇದು ನಿಜವೆ ಶಿವಪಾದವೆ? ನಿನಗಿದನ್ನು ಯಾರು ಹೇಳಿದರು?”

“ಮಾತು ತಪ್ಪಿದರೆ ನನ್ನ ಕಿವಿ ಹರಿದು ಕಿರಿಬೆರಳಿಗೆ ಉಂಗುರ ಮಾಡಿಕೊ ನನ್ನಪ್ಪ, ಇಂಥಾ ಪ್ರಸ್ತಾಪದಲ್ಲಿ ಶ್ರೋತೃಸುಖ ನುಡಿಯಲಾರೆ, ಇದು ನಿಜ.”

ಅವಳ ಸಖಿಯರಿಬ್ಬರು ಮಾತಾಡಿಕೊಂಡದ್ದನ್ನ ನಾನು ಕದ್ದು ಕೇಳಿಸಿಕೊಂಡೆ. ಇಲ್ಲಿಯವರೆಗೆ ಸತ್ತಿದ್ದೇನೆ ಅಂತ ಭಾವಿಸಿದ್ದೆ. ಈಗ ಬದುಕೋ ಸಮಯ ಬಂದಿದೆ ಅಂದ್ಕೊತೇನೆ. ದಯಮಾಡಿ ಕ್ಷಮಿಸು ನನ್ನಪ್ಪ.

– ಎಂದ ಮಹಾನುಭಾವ.

“ಉಪಕಾರವಾಯ್ತು ಶಿವನೆ, ಯಕ್ಷಿಯ ಬಿಡುಗಡೆ ಮಾಡದಿದ್ದರೆ ನಾನು ಚಂದಮುತ್ತನೆಂಬೋ ಛಲ ನನಗ್ಯಾಕೆ?”

– ಎಂದು ಮಹಾನುಭಾವನ ಕಾಲುಮುಟ್ಟಿ ನಮಸ್ಕರಿಸಿ ಮತ್ತೆ ಗುಡಿಯೊಳಗೋಡಿದ ಚಂದಮುತ್ತ. ಹೆಗಲ ಕಂಬಳಿ ಹಾಸಿ ಅದರಲ್ಲಿ ಯಕ್ಷಿಯ ಮಲಗಿಸಿ ಕೂಸಿನ ಹಾಗೆ ಸುತ್ತಿ ಘಾಸಿ ಮಾಡದ ಹಾಗೆ ಎತ್ತಿಕೊಂಡು ತನ್ನ ಹಟ್ಟಿಗೆ ನಡೆದ.

ಭಾರ ಇಳಿವಿದ ಹಾಗೆ ಹಗುರವಾದ ಮಹಾನುಭಾವ.
ಯಕ್ಷಿಯ ಪಾದ ಬಿದ್ದಲ್ಲಿಯ ಧೂಳನ್ನು
ತಲೆಗೆ ಹಚ್ಚಿಕೊಳ್ಳಬೇಕೆಂದು
ಹಾಳು ಗುಡಿಯೊಳಕ್ಕೆ ಹೋದ.