ಇದ್ದಕ್ಕಿದ್ದಂತೆ ಹೇಳಕೇಳದೆ ದಿಕ್ಕು ದೇಶಾಂತರ ಹೋದ ಮಗನ ಬೇಲಿಯಿಲ್ಲದ ಬದುಕಿನ ಬಗ್ಗೆ ಶಿವನಲ್ಲಿ ಬೇಕಾದಷ್ಟು ತಕರಾರೆತ್ತಿದ್ದಳು ಅಬ್ಬೆ.

ಪಳಗಿಸಲಾರೆ ಮಗನ್ನ,
ಅವನಿಗಮರಿಯ ವ್ಯಸನ
ಮ್ಯಾಲೆ ಚಂದ್ರನ ಗ್ಯಾನ.
ನೀವಾದರು ಹಿಂದಿರುಗಿ ಕಳಿಸಿರೇ ಮಗನ್ನ

ಎಂದು ಅಬ್ಬೆ ಸುತ್ತಿದ ದೇವರಿಗೆ ಸೆರಗೊಡ್ಡಿ ಹಾಡಿ ಬೇಡಿಕೊಂಡಳು:

ಬಿಸಿಲಗುದುರೆಯನೇರಿ ಹೋದಾ
ಕೈಮೀರಿದ ಚಂದಿರನ ಬೇಟೆಗೆ ಹೋದಾ ||ಪ||

ಬೆಳ್ಳಿಯ ಮೀನಾಗಿ
ಬೆಳದಿಂಗಳಲೀಜುವ
ಚಂದ್ರನ ಹಿಡಿಯುವೆನೆಂದಾ |ಅಪ|

ಹಾರುವ ಧ್ವಜದಂಥ ಪೊಗರಿನ ಬಾಲಕ
ಮುಗಿಲಿಗೆ ಎಗರುವೆನೆಂದಾ|
ಆಕಾಶದಂಗಳಕೆ ನುಗ್ಗಿ ಲಗ್ಗೆಯ ಹಾಕಿ
ಸೂರೆ ಮಾಡುವೆ ಸಿರಿಯನೆಂದಾ|
ಕಣ್ಣಿಗೆ ಬಣ್ಣಗಳ ಮೆತ್ತುವ ಕನಸಿನಲಿ
ನಿಮ್ಮ ಮುಳುಗಿಸುತ್ತೇನೆ ಅಂದ ||ಹೋದಾ||

ಅಂಬಾರದಾಚೆಯ ರಂಭೇರ ನಾಡಿಂದ
ಬಾಡದ ನಗೆ ತರುವೆನೆಂದ|
ಚಕ್ಕಂದವಾಡುವ ಚಿಕ್ಕೆ ತಾರೆಗಳನ್ನ
ಉಡಿತುಂಬ ತರುತೇನ ಅಂದ|
ಸೊಕ್ಕಿದ ಚಂದ್ರನ ಸಭ್ಯನ ಮಾಡುವೆ
ಪಳಗಿಸುವೆ ದೇವರನೆಂದಾ ||ಹೋದಾ||

ಹೋದವ ಬಾರದೆ ಕಾತರ ತಾಳದೆ
ಕಣ್ಣ ಹಡದಿಯ ಹಾಸಿ ಕಾದೆ |
ಬಂದೇ ಬರುತಾನಂತ ಆಕಾಶದಂಗಳದ
ಒಂದಾರೆ ಹೂ ತರುತಾನಂತ | ಭ್ರಾಂತ
ಯಾವೇರುಪೇರಿನಲಿ ದಾರಿ ತಪ್ಪಿದನೇನೊ
ಕಂಡರೆ ಕಳಿಸಿರೆ ತಿರುಗಿ | ಆ ಬಾಲನ||

ಹಾಡುತ್ತಾ ಹಾಡುತ್ತಾ ದನದ ಶಕುನವ ಕೇಳಬೇಕೆನಿಸಿತು ಅಬ್ಬೆಗೆ. ಅವಸರದಿಂದ ಕೊಟ್ಟಿಗೆಗೆ ಹೋಗಿ ಕಪಿಲೆಯ ಮುಂದೆ ಕುಂತಳು.

“ದಿಕ್ಕು ದೇಶಾಂತರ ಹೋದ ಮಗ ಮತ್ತೆ ಬರುತಾನಂದರೆ ಬಲಗಾಲೆತ್ತು, ಇಲ್ಲದಿದ್ದಲ್ಲಿ ಎಡಗಾಲೆತ್ತು” – ಎಂದಳು.

ಕಪಿಲೆ ಬಲಗಾಲೆತ್ತಿತು. ಅಬ್ಬೆಯ ಪ್ರೋತ್ಸಾಹ ಉಕ್ಕಿ ಬಂತು.

“ಈವಾರ ಬರುತಾನಂದರೆ ಬಲಗಾಲೆತ್ತು, ಇಲ್ಲದಿದ್ದಲ್ಲಿ ಎಡಗಾಲೆತ್ತು” ಎಂದಳು. ಕಪಿಲೆ ಬಲಗಾಲೆತ್ತಿತು. ಆನಂದದ ಅಮಲೇರಿತು ಮುದುಕಿಗೆ.

“ಇವತ್ತೇ ಬರುತಾನೆಂದರೆ ಬಲಗಾಲೆತ್ತು: ಇಲ್ಲದಿದ್ದಲ್ಲಿ ಎಡಗಾಲೆತ್ತು” – ಎಂದಳು.

ಕಪಿಲೆ ಈಗಲೂ ಬಲಗಾಲೆತ್ತಿದ್ದೇ – ಅಬ್ಬೆಗೆ ಮುದದ ಹುಚ್ಚಡರಿ ಮಕ್ಕಳ ಹಾಗೆ ನಲಿದಾಡಿದಳು. ಕೊಟ್ಟಿಗೆಯಲ್ಲಿ ಕಾಲೂರಲ್ಲೊಲ್ಲಳು. ಕುರುಮರಿಗಳಿಗೆ ಕಲ್ಗಚ್ಚು ಬೆರಸಿ ನೀರು ಕುಡಿಸಿ ದನ ಹಿಂಡಿಕೊಂಡಳು. ಗೂಡಿನ ಮೂಲೆ ಮೂಲೆ ಗುಡಿಸಿ ಸೆಗಣಿ ಸಾರಣೆ ಮಾಡಿ ಅಂಗಳದಲ್ಲಿ ಬಣ್ಣದ ರಂಗೋಲಿ ಹುಯ್ದಳು. ಮೊಸರು ಕಡೆದು ಬೆಣ್ಣೆ ಮಾಡಿ ದೈವದ ಮುಂದೆ ತುಪ್ಪದಲ್ಲಿ ಜಗಜಗ ಬೆಳಕಿಟ್ಟಳು. ಪರಿಮಳ ನಾರುವ ಬಗೆಬಗೆ ಭಕ್ಷ್ಯಗಳ ಮಾಡಿ ಹೊಟ್ಟೆಗೆ ಬೊಗಸೆ ನೀರು ಕೂಡ ಕುಡಿಯದೆ ಮುಖದ ಮುತ್ತು ಬೆವರೊರಿಸಿಕೊಂಡು ಮಗನ ದಾರಿ ಕಾಯುತ್ತ ಕುಂತಳು.  ಸೂರ್ಯನಾರಾಯಣ ದೇವರು ಅಸ್ತಂಗತನಾಗಿ ಕತ್ತಲಾದರೂ ಮಗ ಬರಲಿಲ್ಲ. ಬರುವನೆಂಬ ನಂಬಿಗೆ ಕಂದಲಿಲ್ಲ. ಕಾಯುತ್ತ ಕುಂತಳು ಹಾಗೇ ಸಪನಿದ್ದೆಗೆ ಸಂದಳು. ಸ್ನಪ್ನದಲ್ಲಿ –

ಯಾರೋ ಗೂಡಿನ ಮುಂದೆ ಓಡಿ ಬಂಧಂಗಾಯ್ತು.
ಕದ ಬ್ಯಾಗ ತಗೀರೆಂದು ಕೂಗಿಧಂಗಾಯ್ತು
ಅಬ್ಬೆ ಕದ ತೆರೆದರೆ
ಕದ ತಳ್ಳಿ ಒಳನುಗ್ಗಿ
ಬೆನ್ನಹಿಂದೆಲೆ ಕದಮುಚ್ಚಿ ನಿಟ್ಟುಸಿರಿಟ್ಟ,
ಗುರುತಿಲ್ಲದ ಯಾರೊ ಪರ ಊರಿನವ.

ಬೆಂದ ಹೂವಿನ ಹಾಗೆ ಎಳೆಯ ಮುಖ ಬಾಡಿತ್ತು
ಮೈಮುಖ ಧೂಳಿನಲಿ ಉರುಳಾಡಿಧಂಗಿತ್ತು
ಓರೆಗೂದಲು ಕಟ್ಟಿ ನವಿಲುಗರಿ ಸಿಗಿಸಿದ್ದ.
ಮುರಿದ ಕೈದುಗಳ ಕೈಯಲ್ಲಿ ಹಿಡಿದಿದ್ದ.
ಮೊನಚಾದ ನಕ್ಷತ್ರ ಎದೆಯೊಳಗೆ ನಾಟಿತ್ತು
ಹನಿ ಹನಿ ನೆತ್ತರು ನೆಲಕೆ ಸೋರಿತ್ತು.
ಬೇಟೆಯಲಿ ನೊಂದ ಮಿಗ ನರಳಿಧಂಗಿತ್ತು.
ಹಿಂದಿನಿಂದ್ಯಾರೋ ಬಂದಾರೆಂಬ ಭಯವಿತ್ತು.
ಕದಕೆ ಅಗಳಿಯ ಹಾಕಿ
ಹಡದವ್ವಾ ರಕ್ಷಿಸೆಂದ
ಒಳಗಿದ್ದ ಕತ್ತಲ ಕಂಡು ಬದುಕಿದೆನೆಂದ.
ಅಂಬೆಗಾಲಿಡುತ ಅಬ್ಬೆಯ ಬಳಿ ಬಂದ.

ಬೆಂಬತ್ತಿ ಬರುವವರು ಯಾರು ಕಂದಾ?
ಎಂದಳು ಅಬ್ಬೆ, ಅವನಂದ:
ಚಂದ್ರ ಬರುತ್ತಿದ್ದಾನೆ ಹಿಂದಿನಿಂದ!
ಯಾ ರೂಪದಿಂದಲೋ ಯಾ ಮಾಯೆಯಿಂದಲೋ
ಬೇಟೆಯಾಡುತ ಚಂದ್ರ ಬಂದೆ ಬರುವ,
ಈ ನಿನ್ನ ಕಂದನ್ನ ಕಾಪಾಡೆ ಎವ್ವ.

ಅವ್ವಾ ಅಂದನೆ ಕಂದ, ಅಬ್ಬೆ ಮೂಲೆ ತುಂಬಿ
ಚಿಲ್ಲಂತ ಚಿಮ್ಮಿದವು ಹಾಲು.
ಹಾಲು ಕಂಡದ್ದೇ ಹೋ ಹಾಲು ಬೆಳ್ದಿಂಗಳೆಂದು,
ಚಂದ್ರ ಬಂದನು ಎಂದು ಸೆಟೆದು ಬಿದ್ದ!

ಫಕ್ಕನೆಚ್ಚರವಾಯ್ತು ಲಕ್ಕಬ್ಬೆಗೆ. ಜಲ ಜಲ ಬೆವರಿ ಕುಂತ ನೆಲ ಒದ್ದೆಯಾದವು. ಅಷ್ಟರಲ್ಲಿ ಕದ ಬಡಿದ ಸದ್ದು ಕೇಳಿಸಿ, ಮೈ ಕೊಡಹಿ ಎದ್ದು ಬೀಳುತ್ತೇಳುತ ಪಣತಿ ಸಮೇತ ಬಂದು ಕದ ತೆಗೆದು – ಹೊರಗಿಣಿಕಿದರೆ ನಿಂತಿದ್ದಾನೆ ಮಗರಾಯ! ಯಕ್ಷಿಯ ಹೊತ್ತುಕೊಂಬಂದ ಚಂದಮುತ್ತ ಅಬ್ಬೆಯ ಕಿವಿಯಲ್ಲಿ ‘ಯಕ್ಷಿ’ ಎಂದುಸುರಿದ. ಮಗನಿಗಿಂತ ಮುಂಚೆ ಮಂಚದ ಬಳಿಗೋಡಿ ಕಂಬಳಿ ಹಾಸಿ, ದಿಂಬಿಟ್ಟು ಅದರ ಮ್ಯಾಲೆ ಯಕ್ಷಿಯ ಮಲಗಿಸಲು ನೆರವಾದಳು. ಇವಳೂ ನವತಂತ್ರಿ ನರಸಯ್ಯನ ಮಾಟಕ್ಕೆ ಬಲಿಯಾದಳೆಂಬುದು ಕೂಡಲೇ ಹೊಳೆದುಬಿಟ್ಟಿತು ಅಬ್ಬೆಗೆ. ಮೆಲ್ಲಗೆ ಕಂಬಳಿ ಓಸರಿಸಿ ನೋಡಿದಳು: ಸವೆದ ಶಕ್ತಿಯ ಸೀದ ಚೆಲುವಿನ ಆಕಾಶ ದೇವತೆಯ ಅಸಹಾಯಕ ಸ್ಥಿತಿಗೆ ಆಘಾತವಾಯಿತು. ನರಮಾನವರಿಗೆ ವರ ಕೊಡುವ ಖೇಚರಿ ಈಗ ಭೂಚರರ ಕರುಣೆಯ ಕೈಗೂಸಾಗಿ ಬಿದ್ದುಕೊಂಡಿದ್ದಾಳೆ! ನೋಡಿದ್ದೇ ಮೊಟ್ಟೆಯಂತೆ ಅಖಂಡವಾಗಿದ್ದ ಅಬ್ಬೆಯ ಬ್ರಹ್ಮಾಂಡದಲ್ಲಿ ಬಿರುಕುಂಟಾಯಿತು. ದೇವರು ಜಗತ್ತು ಮತ್ತು ನರಮಾನವರ ಸಂಬಂಧದ ಸಮತೋಲ ತಪ್ಪಿ ಏನೇನೋ ಧ್ಯಾನಿಸಿದಳು.