ಬೆಳಗಿನ ಕನಸಿನಲ್ಲಿ ಮಗ ಬರುವ ಸೂಚನೆ ಕೊಡುವುದಷ್ಟೇ ನಮ್ಮ ಉದ್ದೇಶವಾಗಿತ್ತು. ಆದರೆ ಅಬ್ಬೆಯ ಆತ್ಮಶಕ್ತಿ ನಮಗೇ ಗೊತ್ತಿಲ್ಲದೆ ಕಾಲ ಮೀರಿದ ಮಾನವ ಕುಲದ ಭಯಾನಕ ಸತ್ಯಗಳನ್ನು ಅಭಿನಯಿಸುವಂತೆ ನಿರ್ದೇಶನ ನೀಡಿತು. ಕನಸಿನಲ್ಲಿ ಬಂದವನು ಚಂದಮುತ್ತನಲ್ಲವೇ? – ಎಂದೆನಿಸಿ ಪ್ರಶ್ನೆಯ ಎದುರಿಸಲಾರದೆ ದೂರದಿಂದ ಯಾಓ ಕರೆದಂತೆನಿಸಿ ಓ ಎಂದು ಒಲೆಯ ಬಳಿಗೋಡಿದಳು. ಅಬ್ಬೆಯ ಸಮಯ ನೋಡಿಕೊಂಡು ಚಂದಮುತ್ತ ಅಲ್ಲಿಗೇ ಬಂದು ಹೇಳಿದ:

“ನಾನು ಇಷ್ಟು ದಿನ ಅಗಲಿದ್ದಕ್ಕೆ ತುಂಬ ನೊಂದಿರುವೆ ಅಬ್ಬೆ”

“ಇಲ್ಲವಲ್ಲ. ನೀನು ಸದಾ ನನ್ನ ಹೃದಯದಲ್ಲಿ ಬೆರಳು ಸೀಪುತ್ತ ಚಂದ್ರನ ಕನಸು ಕಾಣುತ್ತ ಮಲಗಿದ್ದೆ”

– ಎಂದಳು. ಸೂತ್ರ ಹರಿದ ಅಬ್ಬೆ ಮಾತಿಗೆ ಮಗ ಬೆರಗಾದ.

“ಅಬ್ಬೆ ನಿನ್ನೊಂದಿಗೆ ಹೇಳಬೇಕಾದ ಸಂಗತಿಗಳಿವೆ” – ಎಂದು ಚಂದಮುತ್ತ ಹೇಳಿದಾಗ ಮಗ ಯಾವುದೋ ಅಪಾಯಕ್ಕೆ ಆಶೀರ್ವಾದ ಕೇಳುವನೆಂದು ಖಾತ್ರಿಯಾಗಿ ಬಿಟ್ಟಿತು ಮುದುಕಿಗೆ. ಈಗ ರಕ್ಷಿಸಿಕೊಳ್ಳಬೇಕು ಮಗನನ್ನ ಮತ್ತು ತನ್ನನ್ನ –

ನನಗೆ ವಯಸ್ಸಾಯ್ತು
ಸೋಜಿಗಗಳೆಲ್ಲ ಸತ್ತಿವೆ ನನ್ನಪ್ಪ.
ಈಗೊ ಇನ್ಯಾವಾಗೊ ಶಿವನ ಕರೆ ಬಂದರೆ
ಮುಗಿಯಿತು ನನ್ನ ಆಟ,
ಬದುಕಿನ ಆಟಿಗೆ ಚೆಲ್ಲಿ ಹೊರಡೋದೇ.
ಆಮ್ಯಾಕೆ ಬಿದ್ದಿರುತಾವೆ ಆಟಿಗೆ, –
ಈ ಗೂಡು, ಈ ಹಟ್ಟಿ, ದನ ಕರ ಈ ಕಾಡು
ಬೆಳದಿಂಗಳು, ನೀನು ಕೂಡ.

ಅಬ್ಬೆಯ ಗಲಿಬಿಲಿ ನೋಟ ಮತ್ತು ಮಾತುಗಳಿಂದ ಗೊಂದಲಗೊಂಡ ಚಂದಮುತ್ತ ಉಪಾಯವಾಗಿ ಹೇಳಿದ:

“ಅಬ್ಬೆ ಹಸಿವಾಗಿದೆ.”

“ಅಯ್ಯೊ ನನ್ನಪ್ಪಾ”

– ಎಂದು ಮುದುಕಿ ನಿನ್ನೆ ಮಾಡಿಟ್ಟ ಅನ್ನ ಅಂಬಲಿಯನ್ನೇ ಹರಿವಾಣಕ್ಕೆ ಬಡಿಸಿ ತುತ್ತು ಮಾಡಿ ಮಗನ ಬಾಯಿಗಿಡುತ್ತ ಕೇಳಿದಳು.

“ನಿನ್ನ ಯಕ್ಷಿ ನಮ್ಮ ಕೂಳು ತಿನ್ನುವಳೇನಪ್ಪ?”
“ಇಲ್ಲ ಅಬ್ಬೆ. ಆಕೆ ಉಂಬುವುದು ಬೆಳ್ದಿಂಗಳು ಮಾತ್ರ”
“ಈ ದುರವಸ್ಥೆಯಿಂದ ಅವಳಿಗೆ ಯಾವಾಗ ಮುಕ್ತಿ ನನ್ನಪ್ಪ?”

“ಶಿವರಾತ್ರಿಯ ದಿನ ತಿಂಗಳ ರಾಗ ನುಡಿಸಬೇಕು.
ತಿಂಗಳ ರಾಗಕ್ಕೆ ಕೆರಳಿ,
ಚಂದ್ರಾಮಸ್ವಾಮಿ ಉದಯವಾಗಿ
ಅವಳ ಮೈಗೆ ಬೆಳ್ದಿಂಗಳು ತಾಗಿದಲ್ಲಿ
ದೈವತ್ವ ಒದಗಿ ಮುಕ್ತಿಯಾಗಬೇಕು.”

ಶಿವರಾತ್ರಿಯ ಅಮವಾಸ್ಯೆಯ ದಿನ ಚಂದ್ರಮಸ್ವಾಮಿ ಉದಯವಾಗಬೇಕೆ? ಶಿವ ಶಿವಾ! ಎಂದು ಹೊಯ್ಕಿನಿಂದ ಅಬ್ಬೆ ಕುಂತಳು. ಆದರೆ ಚಂದಮುತ್ತ ಯಕ್ಷಿಗೆ ದೈವತ್ವ ಒದಗಿದಾಗ ತಾನು ಶಿಲೆಯಾಗಲಿರುವ ವಿಚಾರ ಹೇಳಲಿಲ್ಲವಾಗಿ ಇದರಲ್ಲಿ ಅಪಾಯವಿಲ್ಲವೆಂದು ಅಬ್ಬೆ ಅರಿತಳು. ಆದರೂ ಕನಸಿನ ನೆನಪಾಗಿ.

“ಹೇಳಬೇಕಾದ್ದನ್ನು ಹೇಳದೆನು ಮಗನೆ.
ಹಿತಕರದ ಮಾತಲ್ಲವೆಂದು ತೋರಿತೆ?
ಅದುಬಿಟ್ಟು ಹಿಡಿ ನಿನ್ನ ದಾರಿ.
ನಿನ್ನ ಬೆನ್ನಿನ ಹಿಂದೆ ನಾನಂತು ಇದ್ದೇನೆ.”

– ಎಂದಳು.