ರಾತ್ರಿ ಆಕಾಶ ಮಂಡಳದ ಉಲ್ಕೆಯೊಂದು ಉರಿದುರಿದು ಯಕ್ಷಿಯ ಗುಡಿಯ ಮ್ಯಾಲೆ ಉದುರಿದ ಹಾಗೆ ಕನಸಾಗಿತ್ತು. ಭೀತನಾಗಿದ್ದ ಕುಲಗುರು ಕರಿಕಂಬಳಿಯ ಗದ್ದಿಗೆಯ ಮ್ಯಾಲೆ ಕುಂತು ಕವಡೆ ಶಾಸ್ತ್ರ ಗುಣಿಸುತ್ತಿರಬೇಕಾದರೆ ಮುಗಿದ ಕೈ ಹೊತ್ತು ದಯವಾಗು ಶಿವನೇ ಎಂದು ಚಂದಮುತ್ತ ಬಂದು ಮೈ ಹಾಸಿ ಅಡ್ಡಬಿದ್ದ. ಕುಲಗುರು ಬಗಲ ಚೀಲದಿಂದ ಬಂಡಾರವ ತೆಗೆದು ಹಣೆತುಂಬ ಹಚ್ಚಿ ಜಯದಿಂದ ಬದುಕು ನನ್ನಪ್ಪಾ ಎಂದು ಬಾಗಿದ ಚಂದಮುತ್ತನ ನೆತ್ತಿಯ ಮ್ಯಾಲೆ ಎರಡೂ ಕೈಯಿಟ್ಟು ಆಶೀರ್ವದಿಸಿದ. ಚಂದಮುತ್ತ ಮಹಾನುಭಾವನ ಭೇಟಿಯಿಂದ ಹಿಡಿದು ಮುರಿದ ಮಹಿಮೆಯ ಯಕ್ಷಿ ಪುನಃ ತನಗೆ ದೊರೆತವರೆಗಿನ ಕಥಾಂತರವ ನಿರೂಪಿಸಿ, ಅವಳ ಧರ್ಮಸೆರೆ ಬಿಡಿಸಿ ಪುನಃ ಹಾರಾಡುವಂತೆ ಮಾಡಬೇಕಾದರೆ ಯಾವ್ಯಾವ ವ್ರತ ನಿಯಮ ಉಪಾಯಂಗಳ ಪಾಲಿಸಬೇಕೆಂದು ತಿಳಿಸಿ, ತಾನು ಶಿಲೆಯಾಗಲಿರುವ ಅನಿವಾರ್ಯವ ಹೇಳಿ, ಅಬ್ಬೆಯ ಕಾಪಾಡಿ ನನ್ನ ಸತ್ಯಕ್ಕೆ ಒದಗು ಶಿವಪಾದವೇ ಎಂದು ಕಾಲು ಹಿಡಿದ. ಕುಲಗುರುವಿಗೆ ತನ್ನ ಕನಸಿನ ಸತ್ಯ ನಿಚ್ಚಳವಾಗಿ ಹೊಳೆದು ಅಯ್ಯೋ ನನ್ನಪ್ಪ ಎಂದು ಗಾಬರಿಯಾಗಿ ಗಪ್ಪನೆ ಶಿಷ್ಯನ ತಲೆ ತಬ್ಬಿಕೊಂಡ. ಮಳೆಗಾಲದ ಗುಡುಗಿನಂತೆ ಬಂಡಕೊಂಬ ಎದೆಯ ಗಟ್ಟಿಯಾಗಿ ಶಿಷ್ಯನ ತಲೆಗೊತ್ತಿ ಹಿಡಿದವನು ಗಳಿಗೆ ಹೊತ್ತಾದರೂ ಬಿಡಲಿಲ್ಲ. ಹೊತ್ತು ಬಹಳ ಹಿಂಗೇ ಕುಂತಿರುವಲ್ಲಿ ತನ್ನ ಮೈಮ್ಯಾಲೆ ಗುರುವಿನ ಕೆಂಡದಂಥ ಕಣ್ಣೀರು ಬಿದ್ದ ಅರಿವಾಗಿ ತಲೆ ಬಿಡಿಸಿಕೊಂಡು ಚಂದಮುತ್ತ ಮ್ಯಾಲೆ ನೋಡಿದ.

ಕುಲಗುರು ಕಣ್ಣೀರು ಜಲವ ಸುರಿಸುತ್ತ ಕೇಳಿದ, –

“ಯಕ್ಷಿಯ ಧರ್ಮಸೆರೆ ಬಿಡಿಸೋದಕ್ಕೆ ಬೇರೆ ದಾರಿ ಇಲ್ಲವೇ ನನ್ನಪ್ಪ?”

“ಇಲ್ಲ ಶಿವನೆ”

ಯಕ್ಷಿಯ ಬಿಡುಗಡೆ ಇಲ್ಲವೆಂದಾದರೆ ಲೋಕಕ್ಕೆ ಸಂಗೀತವಿಲ್ಲ. ಬಿಡುಗಡೆ ಇದೆಯೆಂದಾದರೆ ಅಬ್ಬೆಗೆ ಮಗನಿಲ್ಲ, ನನಗೆ ಶಿಷ್ಯನಿಲ್ಲ, ಹಟ್ಟಿಗೆ ಚಂದಮುತ್ತನಿಲ್ಲ. ಅಯ್ಯೋ ನರಮಾನವನ ನಶೀಬವೇ ಎಂದು ಮಂಡೆಯ ಮ್ಯಾಲೆ ಕೈ ಹೊತ್ತು ಕುಂತ.

– ಅದನ್ನು ನೋಡಲಾರದೆ ಚಂದಮುತ್ತ ಯಾವಾಗಲೋ ಹೋಗಿ ಬಿಟ್ಟಿದ್ದ. ಗುರುಪಾದಕ್ಕೆ ಅರಿಕೆ ಮಾಡದೆ. ಚಂದಮುತ್ತ ಹೋದ ಕಡೆಗೆ ಎರಡೂ ಕೈ ಎತ್ತಿ ಕುಲಗುರು ಹೇಳಿದ:

ನಮ್ಮ ಕುಲದೈವಂಗಳು, ನಮ್ಮ ಸುತ್ತಿನ ದೇವತೆಗಳೆಲ್ಲ
ನಿನ್ನ ಬೆಂಗಾವಲಿಗಿರಲಿ
ದುಷ್ಟರ ಕೆಟ್ಟಕಣ್ಣು ಮತ್ತು ಕೈ
ನಿನ್ನ ಮುಟ್ಟದಿರಲಿ
ಜಡೆಯಲ್ಲಿ ಪರಂಜ್ಯೋತಿ ಚಂದ್ರಾಮನ ಇಟ್ಟಕೊಂಡ ಶಿವ
ನಿನ್ನ ಮರೆಯದಿರಲಿ ನನ್ನಪ್ಪಾ.

ಚಂದಮುತ್ತ ಹೋದದ್ದೇ ಆಯ್ತು ಆ ಗಳಿಗೆಯೇ ಮುದುಕನ ಎದೆ ಆರಿತು. ಕನಸುಗಳಾದ ನಮಗೆ ಮುದುಕರನ್ನ ಕಂಡರಾಗುವುದಿಲ್ಲ. ಆದರೆ ಈ ದಿನ ಕುಲಗುರುವಿನ ನೋಡಿ ಹಳಹಳಿಯಾಯಿತು ಬಹಳ. ಅಂದೇ ಇಳಿಹೊತ್ತಿನಲ್ಲಿ ಅಬ್ಬೆಯ ಗೂಡಿಗೆ ಹೊರಟ. ಶಕ್ತಿಯಿರಲಿಲ್ಲ ಕಾಲಲ್ಲಿ. ಕೋಲೂರುತ್ತ ಮೆಲ್ಲಗೆ ನಡೆದ.

ಎಂದಿನಂತೆ ಲಕ್ಕಬ್ಬೆ ಧೂಳಿಗೆ ನೀರು ಕೊಡಲಿಲ್ಲ. ಬಾಯಾಸರೆಗೆ ಜೇನು ಹಾಲು ಕೊಡಲಿಲ್ಲ. ಅವಳಿಗಾಗಲೇ ತಿಳಿದು ಹೋಗಿದೆಯಾ? ತಿಳಿದರೆ ಒಳ್ಳೆಯದೇ ಆಯಿತು. ಬಾಯಿ ಬಿಟ್ಟು ಹೇಳುವ ಸೂತಕ ತಪ್ಪಿತು – ಎಂದು ನೇರ ಮಂಚದ ಬಳಿಗೆ ಹೋದ. ಅಸಹಾಯಕ ಯಕ್ಷಿ ಯಃಕಶ್ಚಿತ್ ನರಮಾನವರ ಹಾಗೆ ಮಲಗಿದ್ದುದ ನೋಡಿ, ತೊಡೆಯ ಶಕ್ತಿ ಉಡುಗಿ ಶಿವನೇ ಎಂದು ಕುಸಿದ. ನೆರವಿಗೆ ಬಂದಾಳೆಂದು ಲಕ್ಕಬ್ಬೆಯ ನೋಡಿದ. ಅವಳು ಬಾರದೆ ನೆಲಕ್ಕೆ ಕುಕ್ಕರಿಸಿದ. ಯಕ್ಷಿಯ ಕರುಣಾಜನಕ ಚಿತ್ರ ಕಣ್ಣಿಗೆ ಭಾರವಾಗುವಂತೆ ಅಚ್ಚೊತ್ತಿಬಿಟ್ಟಿತ್ತು.

ಯಕ್ಷಿ ವಿಕಾರವಾಗಿ ನರಳಿದಳು. ಭಯದಿಂದ ಮುದುಕ ಅಯ್ಯೋ ಶಿವನೇ ಎಂದು ಕೋಲೂರಿ ಎದ್ದ. ಸಂಗೀತ ದೇವತೆ ಅಪಸ್ವರದಲ್ಲಿ ನರಳಬೇಕಾದರೆ ಎಷ್ಟೊಂದು ಕಷ್ಟವಾಗಿರಬೇಕು ಶಿವನೆ ಎಂದು ಮರ ಮರ ಮರುಗಿದ. ತನ್ನಿಂದೇನೂ ಆಗದೆಂದು ಪರಿತಪಿಸಿ, ಮಾನವ ಜಲ್ಮವ ಶಪಿಸಿ, ಬೆಟ್ಟದ ಮಾಯಿಯ ನೆನೆದು ಬಗಲ ಚೀಲದ ಬಂಡಾರ ತೆಗೆದು ನಡುಗುವ ಕೈಗಳಿಂದ ಯಕ್ಷಿಯ ಪಾದಕ್ಕಂಟಿಸಿ “ಇಷ್ಟೇ ತಾಯಿ ನನ್ನ ಭಕ್ತಿ” ಎಂದು ಕೈಮುಗಿದು ಅಲ್ಲಿ ನಿಲ್ಲದೆ ಹೊರಟ.