ಬೆಳ್ಳಿ ಮೂಡಿ ನಾವೆದ್ದು ಒಡಮುರಿದೇಳುವಷ್ಟರಲ್ಲಿ
ಮುಂಗೋಳಿ ಕೂಗಿ ಮೂಡು ಕೆಂಪಾಗಿ
ತುಂಬಿದ ಸೋಮವಾರ ಮಹಾಶಿವರಾತ್ರಿಯ
ಹಗಲು ಸೂರ್ಯ ಉದಯವಾದರು.
ಲಕ್ಕಬ್ಬೆ ಶಿವನೇ ಎಂದು ಎದ್ದು
ಮಲೆಯ ಮ್ಯಾಲಿರೋ ಕೈಲಾಸದ ಕಡೆ ಮುಖ ಮಾಡಿ
ಕೈ ಮುಗಿದು ಗಲ್ಲ ಗಲ್ಲ ಬಡಿದುಕೊಂಡಳು.
ಅಷ್ಟರಲ್ಲಿ, ಮರೆವಿನ ತೆರೆ ಹರಿದು
ಎದುರೆದುರೆ ಬಂದುಬಿಟ್ಟ
ಎದೆಯಲ್ಲಿ ನಕ್ಷತ್ರ ನೆಟ್ಟ ಬಾಲಕ.
ಅವನ ಮರೆಯುವುದಕ್ಕಾಗಿ
ನೆಲ ಒಲೆ ಸಾರಿಸಿ ರಂಗೋಲಿ ಹುಯ್ದು
ಮಡುವಿನಲ್ಲಿ ಮಿಂದು ಬಂದಳು.
ಶಿವನಾಮವ ನಾಲಗೆಯ ಮ್ಯಾಲೆ ತೇಯುತ್ತ
ಬುಟ್ಟಿತುಂಬ ದವನದ ಹೂ ಮಲ್ಲಿಗೆ ಮರುಗ
ಬಿಲ್ವಪತ್ರಿಯ ತಂದು
ಬಿಲದಲ್ಲಿಯ ದೇವರ ಮ್ಯಾಲೆ ಸುರಿದಳು.

ಯಾರೂ ಸಾರದಿದ್ದರೂ ಈ ದಿನ ಆಕಾಶದಲ್ಲಿ ಯಕ್ಷಿಯ ಸಂಚರಣೆಯಿದೆಯೆಂದು, ಚಂದಮುತ್ತನ ಕೊಳಲ ಸಂಗೀತವಿದೆಯೆಂದು ಪಶುಪಕ್ಷಿ ತರುಮರಾದಿ ಜೀವರಾಶಿಗೆ ತಿಳಿದುಬಿಟ್ಟಿತ್ತು.

ಅವೆಲ್ಲ ತನ್ನನ್ನು ಕದ್ದು ನೋಡುತ್ತಿವೆಯೆನ್ನಿಸಿ ಅಬ್ಬೆಯ ಅಂತರಂಗಕ್ಕೆ ಜ್ವರ ಬಂದವು. ಮುರಿದ ಮಾತುಗಳಲ್ಲಿ ಏನೇನೋ ಕನವರಿಸಿ ಕೊನೆಗೆ ತನ್ನ ಕಂಕುಳದ ಕೂಸನ್ನು ಶಿವ ಕಸಿದನೆಂದು ಶಪಿಸಿ ಜಲ ಜಲ ಕಣ್ಣೀರು ಸುರಿಸಿ ಕಣ್ಣೀರಲ್ಲಿ ತೆಪ್ಪದ ಹಾಗೆ ತೇಲಿದಳು ತಾಯಿ.

ಅದಕ್ಕೆ ಅಬ್ಬೆಗೆ ವಿಸ್ಮೃತಿ ಮಾಡುವುದೆಂದು ನಾವು ಆಲೋಚಿಸಿದೆವು. ಯಾಕಂತೀರೋ? ಒದಗಲಿರುವ ಘೋರದ ಅರಿವಾಗಿ ಚಂದಮುತ್ತನ್ನ ಹೊರಗೆ ಹೋಗಗೊಟ್ಟಾಳೆಂಬ ಬಗ್ಗೆಯೇ ನಮಗೆ ಅನುಮಾನವಿತ್ತು. ಎದೆಯಲ್ಲಿ ನಕ್ಷತ್ರ ನೆಟ್ಟ ಬಾಲಕನ ಕನಸು ಮರೆಯಲೆಂದು ರಾತ್ರಿಯಿಡೀ ಅಬ್ಬೆಯ ಕಣ್ಣಿಗೆ ಹಿತಕರವಾದ ಹಳವಂಡಗಳ ತೋರಿದೆವು.

 

ಯಕ್ಷಿಯ ಗುಡಿಮ್ಯಾಲೆ ಚಂದಮುತ್ತ
ಚಂದ್ರಮಂಡಳದಷ್ಟು ಎತ್ತರವಾದ ಧ್ವಜ ಹಾರಿಸಿದಂತೆ,
ಕಲ್ಲಿನ ರಥವೇರಿ
ಕೈಲಾಸಕ್ಕೆ ಲಗ್ಗೆಯಿಟ್ಟಂತೆ,
ಚಂದ್ರನೊಳಗಿನ ಜಿಂಕೆಯ ಬೆನ್ನೇರಿ
ಬೆಳಕಿನ ಮಿರಿಲೋಕದಲ್ಲಿ ತೇಲಾಡಿದಂತೆ…

ಹೀಗೆ ಒಂದಾದ ಮ್ಯಾಲೊಂದು ಅರೆಬೆಂದ ಹಳವಂಡಗಳ ತೋರಿದರೂ ಅಬ್ಬೆಯ ಹೃದಯ ತಂಪಾಗಲಿಲ್ಲ. ನೆನಪಿನ ಕುಣಿಕೆ ಮತ್ತೆ ಬಿಗಿದು ಎದೆಯಲ್ಲಿ ಮೂಡಿದ ಕನಸಿನ ಬಾಲಕನ ಚಿತ್ರವ ಮರೆಯಲಾಗಲೇ ಇಲ್ಲ.

ಬೆಳಗಾನೆದ್ದು ಅಬ್ಬೆ ಬಂದು ಮಗನನ್ನು ಎಬ್ಬಿಸುವುದು ರೂಢಿ. ಆಕೆ ಬರಲಿಲ್ಲವಾಗಿ ಚಂದಮುತ್ತನೇ ಎದ್ದು ಮಡುವಿನಲ್ಲಿ ಮಿಂದೇಳಬೇಕೆಂಬಲ್ಲಿ ಕಾಡುಮರ ನಡೆದು ಬಂದ ಹಾಗೆ ಅಲ್ಲಿಗೇ ಬಂದಳು ಅಬ್ಬೆ. ಮಾತಿಲ್ಲದೆ ದಂಡೆಯ ಕೊಂಬುಗಲ್ಲಿನ ಮ್ಯಾಲೆ ಮಗನ ಕೂರಿಸಿ ಹಿಡಿ ಕಲ್ಲು ತಗೊಂಡು ಚೆನ್ನಾಗಿ ಬೆನ್ನುಜ್ಜಿದಳು. ಅನ್ಯೋನ್ಯ ಮಾತಾಡಿ ಅಬ್ಬೆಯ ಸಂತಸವಿಸಬೇಕೆಂಬಲ್ಲಿ ಬೆನ್ನಿನ ಮ್ಯಾಲೆ ಬಿಸಿಹನಿ ಬಿದ್ದ ಅರಿವಾಗಿ “ಯಾಕಬ್ಬೆ?” ಎಂದು ಮ್ಯಾಲೆ ನೋಡಿದ. ಒಡಲೊಳಗಿನ ನುಡಿಯ ಹೊರಕ್ಕೆ ಹಾಕುವುದಕ್ಕೆ ಹೊತ್ತು ಹಿಡಿಯಿತು ಬಹಳ –

“ಎಷ್ಟು ಅತ್ತರೂ ನನ್ನ ಕಣ್ಣೀರು ಕೈಲಾಸಕ್ಕೆ
ಅರಿವಾಗಲಿಲ್ಲ ಬಿಡಪ್ಪ”

– ಎಂದುಸುರಿ ಯಕ್ಷಿಯ ಬಳಿಗೆ ಹೋದಳು.

ಆಮೇಲೆ ಚಂದಮುತ್ತ ಶಿವಪೂಜೆ ಶಿವಗ್ಯಾನವ ಮಾಡಿ ಕೊಟ್ಟಿಗೆಗೆ ಹೋಗಿ ಕರುಗಳ ಬಿಟ್ಟ. ಒಂದು ಕರುವೂ ತಾಯ ಮೊಲೆಗಂಟಲಿಲ್ಲ. ದನಕರುಗಳೆಲ್ಲ ಚಂದಮುತ್ತನ ಸುತ್ತಾಮುತ್ತಾ. ಗೇರಾಯಿಸ್ಕೊಂಡು ಮೌನವಾಗಿ ಅವನನ್ನೇ ನೋಡುತ್ತಾ ನಿಂತವು. ಕಪಿಲೆ ಕಡೆಗಣ್ಣಲ್ಲಿ ಕಣ್ಣೀರು ಕೆಡಿಕ್ಕಂಡು ಚಂದಮುತ್ತನ ಭುಜದ ಮ್ಯಾಲೆ ಗದ್ದ ಊರಿ ನಿಂತಿತು.

ಈ ಕಡೆ ಅಬ್ಬೆ ಚಿತ್ರಚರಿತ್ರಳಾದ ಯಕ್ಷಿಯ ಬಾಡಿದ ಲಲಿತವದನ ನೋಡಿದ್ದೇ ಕರುಳು ಹಿಂಡಿ ಬಂತು. ಉಟ್ಟ ದಟ್ಟಿಯ ಸೆರಗು ಒದ್ದೆ ಮಾಡಿಕೊಂಡುಬಂದು ಕೊಳೆಯಾಗಿದ್ದ ಯಕ್ಷಿಯ ಮುಖ ಒರೆಸಿ, ಮೈಯಂತ ಮೈಯಲ್ಲ ಉಜ್ಜಿ ತೊಳೆದಳು. ಜಡೆಗಟ್ಟಿದ ಇರುಳಿನ ಹಾಗಿದ್ದ ಕಾಳನೀಳವಾದ ಸುರುಳಿಗೂದಲನ್ನ ಕಾಳಜಿಯಿಂದ ಒರೆಸಿ ತೊಳೆದು ಮೆಲ್ಲಗೆ ಬಾಚಿ ಹೆರಳು ಹಣೆದಳು. ಒಂದೆರಡು ಮಲ್ಲಿಗೆ ತಂದು ತುರುಬಿ, ಹಣೆಗೆ ಕುಂಕುಮವಿಟ್ಟು, ದಟ್ಟಿಯ ಸರಿಪಡಿಸಿ ಗಾಳಿ ಬೀಸಿದಳು. ಯಕ್ಷಿಯ ಅಂತಃಕರಣ ಕರಗಿ ಕಣ್ಣೀರು ಜಲವುಕ್ಕಿ ನೀರಲ್ಲಿ ತೇಲಿಬಿಟ್ಟ ದೀಪದ ದೊನ್ನೆಯಂಥ ಕಣ್ಣಿಂದ ಅಬ್ಬೆಯ ನೋಡಿದಳು. ಅಬ್ಬೆಯೂ ಅತ್ತಳು.

ಈ ಮಧ್ಯೆ ಹಟ್ಟಿಗೊಂದು ಭಯಾನಕ ಸುದ್ದಿ ಬಂತು. ಯಕ್ಷಿಯ ಹುಡುಕಿಕೊಂಡು ಹೋದ ಚಿನ್ನಮುತ್ತ, ಮಹಾನುಭಾವನ ಕಂಡದ್ದೇ ಯಕ್ಷಿಯೆಲ್ಲಿ ಎಂದು ಪೀಡಿಸಿದನಂತೆ. ಎಷ್ಟು ಒತ್ತಾಯ ಮಾಡಿದರೂ ಇವನು ಹೇಳಲಿಲ್ಲವಾಗಿ, ಹೆದರಿಸಲು ಕಕ್ಕೆ ದೊಣ್ಣೆಯಿಂದ ಒಂದೇಟು ಹಾಕಿದರೆ ಅಷ್ಟಕ್ಕೇ ಮಹಾನುಭಾವನ ಒಂದು ಕಣ್ಣುದುರಿ ನೆಲಕ್ಕೆ ಬಿದ್ದಾಗ ಅದನ್ನು ನೋಡಲಾಗದೆ ಕಾಡಿನಲ್ಲಿ ಓಡಿದ ಚಿನ್ನಮುತ್ತ ಕಮರಿಗೆ ಬಿದ್ದು ಸತ್ತನೆಂದು ತಿಳಿಯಿತು. ಪಾಪ, ಒಬ್ಬನೇ ಮಗನ ವಿಯೋಗ ಸಹಿಸದೆ ಸೂರ್ಯಮುತ್ತನೆಂಬ ದೊಡ್ಡ ಹೆಗಡೆ ನಿನ್ನೆಯಷ್ಟೇ ಬೆಳ್ಳಿಬೆತ್ತವ ಸಿರಿಲಕ್ಕಿಗೆ ಕೊಡಲು ಹೇಳಿ ಕಾಡಿನಲ್ಲಿ ಕಣ್ಮರೆಯಾದನಂತೆ. ಈ ಘಟನೆಗಳು ಹಟ್ಟಿಯ ಮೇಲೆ ಪರಿಣಾಮ ಬೀರಿದವು. ಜನ ಹೆಗಡೆ ಮನೆಯಲ್ಲಿ ಗುಂಪುಗೂಡಿದ್ದರಿಂದ ಈ ಕಡೆ ಬರಲಿಲ್ಲ. ಚಂದಮುತ್ತ ಅಬ್ಬೆಯರಿಗೆ ಈ ಸುದ್ದಿಯ ನಾವು ಹೇಳಲೂ ಇಲ್ಲ. ಕುಲಗುರು ಹೇಳುತ್ತಿದ್ದನೇನೋ. ಯಕ್ಷಿಯ ಸ್ಥಿತಿ ನೋಡಿ, ಇದಲ್ಲ ಸಂದರ್ಭವೆಂದು ಬಾಯಿ ಬಿಡಲಿಲ್ಲ.