ಮಗ ಯಕ್ಷಿಯ ಬೆನ್ನು ಬಿದ್ದಾಗಿಂದ ಶಿವಗೋಳು ತಪ್ಪಿರಲಿಲ್ಲ ಲಕ್ಕಬ್ಬೆಗೆ. ಆಗಲೇ ಅವಳಿಗೆ ಕೈಖಾಲಿ, ಉಡಿ ಖಾಲಿ, ಗರ್ಭ ಖಾಲಿಯಾದಂತೆನಿಸಿತ್ತು. ಆಮೇಲಾಮೇಲಿನ ಮಗನ ನಡುವಳಿಯಿಂದ ಆಶೆಯ ಬೇರು ಕಿತ್ತು ಹೋಗಿ,

ಮಗನ ಹಾಡು ಹೂವಾಗಿ ಅರಳಲೆಂದು
ಅರಳಿ ಪರಿಮಳವಾಗಿ ಹರಡಲೆಂದು
ಮಲ್ಲಿಗೆ ಬಳ್ಳಿಯ ನೆಟ್ಟು ಕಾದೆನೊ ಶಿವನೆ.
ಸುಳಿದು ಬರಲೇ ಇಲ್ಲ ನಿನ್ನ ಗಾಳಿ
ಎಲೆ ಉದುರಿ ನಿಂತಾವು ಬರಲುಬಳ್ಳಿ.

– ಎಂದು ಅವಳೇ ರಾಗಿ ಬೀಸುತ್ತಾ ಕಾಳು ಕುಟ್ಟುತ್ತಾ ಹಾಡಿಕೊಂಡತ್ತಿದ್ದಳು. ಈಚೀಚೆಗಂತೂ,

ನಾವಿಕನಿಲ್ಲದೆ ಗಾಳಿ ಒಯ್ದತ್ತ ಹೋಗುವ
ಹರಿಗೋಲು ನನ್ನ ಬಾಳು, ಸೋರುತ್ತಿದೆ.
ಮುಳುಗುವುದಿನ್ನು ಹೆಚ್ಚು ವ್ಯಾಳ್ಯ
ತಕ್ಕೊಳಲಾರದು ಶಿವನೇ –

ಎಂದು ಶಿವದುಃಖಿ ಮಾಡುತ್ತಿದ್ದಳು. ಎದೆಯಲ್ಲಿ ನಕ್ಷತ್ರ ನೆಟ್ಟ ಬಾಲಕನ ಕನಸು ಕಂಡಾಗಿಂದ ಹೊತ್ತಿಕೊಂಡುರಿದಳು ತಾಯಿ ಪಂಜಿನಂತೆ. ಕಥೆಗೆ ಹ್ಯಾಗೋ ಹಾಗೆ ಅವಳ ಆರೋಗ್ಯಕ್ಕೂ ಅಗತ್ಯವೆನ್ನಿಸಿ ಎದೆಯಲ್ಲಿ ನಕ್ಷತ್ರ ನೆಟ್ಟ ಬಾಲಕನ ಬದಲು ಚಂದಮುತ್ತನ್ನ ತೋರಿಸಿದೆವು. ಅಬ್ಬೆ ಅರಗಳಿಗೆಯಲ್ಲಿ – ನೀರು ತುಂಬಿದ ಕಣ್ಣಿಗೆ ತಾನಿದ್ದ ಗೂಡು ಸರಿಯಾಗಿ ಕಾಣದೆ ವಿಸ್ಮೃತಿಗೆ ಸಂದಳು. ಏನೇನೋ ಆಡಿಕೊಂಡಳು. ಯಾರೊಂದಿಗೋ ವಾದಿಸಿದಳು. ತಂತಾನೇ ಸಮಾಧಾನ ಮಾಡಿಕೊಂಡುದನ್ನು ನೋಡಿ ನಮಗೆ ನೆಮ್ಮದಿಯಾಗಿ ಮುಂದಿನ ಕಥೆ ಸುರು ಮಾಡಿದೆವು.

ವಿಸ್ಮೃತಿಯ ಪರಿಣಾಮ ನಮಗೆ ಆಗಲೇ ಗೋಚರಿಸಿಬಿಟ್ಟಿತು. ದುಃಖದ ದುಗುಡಂಗಳ ಮರೆತು ಹೊರಗೆ ಬಂದು ಪುನಃ ನೆಲ ಸಾರಿಸಿದಳು. ಅಂಗಳ ಗುಡಿಸಿ ಸೆಗಣಿ ಸಾರಣೆ ಮಾಡಿದಳು. ಇವತ್ತು ಶಿವರಾತ್ರಿ ಅಮಾವಾಸ್ಯೆಯಂದು ಗೊತ್ತಿದ್ದರೂ ತಿಂಗಳಮಾವನ ಪೂಜೆಯಲ್ಲಿ ಮಾಡುವಂತೆ ಸೀಮೆಸುಣ್ಣದಲ್ಲಿ ಅಂಗಳದ ತುಂಬ ಚಂದಪ್ಪನ ಹುಯ್ದಳು. ಅವನ ಸುತ್ತ ಚಿಕ್ಕೆಯ ಬಳಗವ ಹುಯ್ದು ಚಂದವಾಯಿತೇ ಎಂದು ನಿಂತು ನೋಡಿ ತೃಪ್ತಿಯಾದ ಮ್ಯಾಲೆ ಒಳಕ್ಕೆ ಹೋದಳು. ಒಲೆ ಸಾರಿಸಿ ರಂಗೋಲಿ ಹುಯ್ದಳು. ಮನೆದೇವರು ಚಂದಪ್ಪನ ಬಿಲದ ಸುತ್ತ ಸುಣ್ಣದಲ್ಲಿ ಬಳ್ಳಿ ಎಲೆ ಹೂ ಬರೆದಳು. ಆಮ್ಯಾಲೆ ರಾಗಿಹಿಟ್ಟಿನ ಆಧಾರದಲ್ಲಿ ಕಪಿಲೆಯ ಹಾಲು ಸೇರಿಸಿ ಮನೆದೇವರ ಬಿಲದ ಮ್ಯಾಲೆ ಚಂದ್ರನ ಆಕಾರದ ಬೆರಣಿಯ ತಟ್ಟಿದಳು. ಅದರ ಮುಂದೆ ಕೋಲದೀಪ ಇಟ್ಟು ಪೂಜೆ ಮಾಡಿ ಮೈ ಹಾಸಿ ನಮಸ್ಕಾರ ಮಾಡಿದಳು.

ಸಂಜೆ ಸಾಯಂಕಾಲವಾದೇಟಿಗೆ ಚಂದಮುತ್ತ ಓರೆಯಾಗಿ ಜುಟ್ಟು ಕಟ್ಟಿಕೊಂಡು ನವಿಲುಗರಿ ಸಿಕ್ಕಿಸಿಕೊಂಡು ಸೊಂಟದ ಲಂಗೋಟಿಯಲ್ಲಿ ಗೆಜ್ಜೆಕೊಳಲು ಸಿಕ್ಕಿಸಿಕೊಂಡು ಹೆಗಲ ಮ್ಯಾಲೆ ಕರಿಕಂಬಳಿ ಹಾಕಿಕೊಂಡು ಎದ್ದ. ಹೆತ್ತಯ್ಯ ಮುತ್ತಯ್ಯರ ನೆನೆದು ಕುಲದೇವರು ಮನೆದೇವರ ನೆನೆದು ಸತ್ಯದ ಸಾವಳಗಿ ಶಿವನ ನೆನೆದು ಆಶೀರ್ವಾದ ಪಡೆಯಲು ಅಬ್ಬೆಯ ಬಳಿಗೆ ಬಂದಾಗ, ಅಬ್ಬೆ ವಿಸ್ಮೃತಿಗೆ ಸಂದಿದ್ದಳಾಗಿ ತೊಂದರೆ ಎಂಬುದಾಗಲಿಲ್ಲ. ಮಗ ಕಾಲಿಗೆ ಹಣೆ ತಾಗಿಸಿದಾಗ ತಲೆ ಹಿಡಿದೆತ್ತಿ ನೆತ್ತಿಯ ಮೂಸಿ ಕರುವನಪ್ಪಿಕೊಳ್ಳುವಂತೆ ಹಿಡಿದುಕೊಂಡು ಹೇಳಿದಳು:

ನಿಜವಾದ ಗೊಲ್ಲ ನೀನು
ಕೊಳಲಿನಿಂದ ಗೆದ್ದಿರುವೆ ದನಕರು ಮಾನವರ ಹೃದಯ,
ಬೆಟ್ಟದ ಮಾಯಿಯ ಹಸಿರು ಸೀಮೆಯ
ಈ ಕಾಡಿನ ಚರಾಚರಕೆ
ನಿನ್ನ ಹಾಡಿನ ನೆಪ್ಪಿದೆಯಣ್ಣ
ಈಗ ಸೀಮೋಲ್ಲಂಘಿಸಿ
ಬೆಲೆ ಬಾಳುವ ಬೆಳ್ದಿಂಗಳ ಸೀಮೆಗಳಲ್ಲಿ
ಹಾಡುಗಳ ಬಿತ್ತುವುದಕ್ಕೆ
ನೀಲಿಮದ ಚಂದ್ರನ್ನ ಕೇಳುತ್ತಿ ನೀನು.
ಚಂದ್ರನ ಹಿಡಿದುಕೋ ಎಂದು
ನಿನ್ನನ್ನ ಆಕಾಶಕ್ಕೆ ಹಾರಿಸಿ ತೋಳು ತೆರೆದು ಕಾಯುವುದು
ನೀ ಬಂದು ನನ್ನ ಮಡಿಲಿಗೆ ಬೀಳುವುದು
ಮತ್ತೆ ಹಾರಿಸುವುದು ಮತ್ತೆ ಬೀಳುವುದು
ಎಷ್ಟೆಷ್ಟು ಎತ್ತರ ಹಾರಿದರೆ ಅಷ್ಟಷ್ಟು ಭಾರ
ಬಂದು ಬೀಳುತ್ತಿ ಮಡಿಲಿಗೆ, ನನ್ನ ಒಡಲಿಗೆ.
ಈಗ ಸಿದ್ಧಳಾಗಿದ್ದೇನೆ
ಆಕಾಶಕ್ಕೆ ನಿನ್ನ ತೂರುವುದಕ್ಕೆ.

ನೆಪ್ಪಿರಲಿ ಕಂದಾ,
ನೀನು ಬಿತ್ತಲಿರುವ ಹಾಡುಗಳಿಗಾಗಿ
ಕಾದವಳು ನಾನು ಹಾರೈಸಿದವಳು
ಹಿಂಗ್ಯಾಕೆಂದರೆ ಉತ್ತರ ಗೊತ್ತಿರದವಳು
ಮತ್ತು ಈಗಲೂ ನಿನ್ನ ತಾಯಾದವಳು.

 

ತಗೋ ನನ್ನ ಹರಕೆಯ, ಶಿವಕೃಪೆಯ,
ನಿನಗೆ ಜಯವಾಗ್ಲಿ ನನ್ನಪ್ಪ, ಶುಭಮಕ್ಕೆ ಶುಭವಾಗಲೆಂದಳು.

ಅಬ್ಬೆಯ ಅನುಗ್ರಹದ ಶುಭ ವಾಕ್ಯ ಹೇಳಿ ಆಘಾತವಾಯಿತು ಮಗನಿಗೆ! ತಲೆಯೆತ್ತಿ ನೋಡಿದ, ಅವಳ ನೀಲಾಂಜನದಂಥ ಕಣ್ಣಲ್ಲಿ ಅಪರಿಚಿತವಾದ ಅದಿಮೆ ಬೆಳಕಿದ್ದುದ ನೋಡಿ ಚಕಿತನಾದ. ತಾಯಿಗೆ ಇನ್ನೊಮ್ಮೆ ನಮಿಸಿ ಹೊರಟ.

ಪೂಜೆಯ ಸಾಮಾನು ತಗೊಂಡು ಜೋಕೆಯಿಂದ ಯಕ್ಷಿಯ ಎತ್ತಿಕೊಂಡು ಸುತ್ತಿನ ದೇವರಿಗೆ ನಮಿಸಿ ಕೊಟ್ಟಿಗೆಗೆ ಹೋದರೆ ಇಡೀ ದಿನ ಒಂದು ದನಕರುವೂ ನೀರು ಕುಡಿದಿರಲಿಲ್ಲ. ಮೇವು ಮುಟ್ಟಿರಲಿಲ್ಲ. ಇವನ ಕಂಡದ್ದೇ ನಂದಿನಿ ಓಡಿ ಬಂದು ಚಂದಮುತ್ತನ ತೆಕ್ಕೆಯಲ್ಲಿ ಮುಖ ಹುಗಿದು ನಿಂತುಕೊಂಡಿತು. ಕಣ್ಣು ಕೆಂಪಾಗಿ ಗುಟ್ಟಾಗಿ ಅತ್ತಹಾಂಗಿತ್ತು. ತಿಂಗಳು ಮಡುಗಟ್ಟಿದ ಹಾಗೆ ಕಣ್ಣು ತುಂಬಿ ಕಣ್ಣೀರು ತುಳುಕಿತು. ಗಂಗೆ ಗೌರಿಗೆ ಚಂಡುಹೂ ದುಂಡುಮಲ್ಲಿಗೆಗೆ ಅಬ್ಬೆಯ ನೋಡಿಕೊಳ್ಳಿರೆಂದು ಹೇಳಿ ಹೊರಡುತ್ತಲೂ ಒಂದೊಂದೇ ಕರು ಬಂದು ಚಂದಮುತ್ತನ ಸುತ್ತ ಘೇರಾಯಿಸ್ಕೊಂಡು ತುಂತುರು ಹನಿಯುವ ಕಣ್ಣುಗಳಿಂದ ನೋಡುತ್ತಾ ಹೋಗಬ್ಯಾಡಯ್ಯಾ ಎಂದು ಮೂಕವಾಗಿ ಮೊರೆಯಿಡುತ್ತಾ ನಿಂತವು. ಲಂಗೋಟಿಯ ತುದಿಯಿಂದ ಅವುಗಳ ಕಣ್ಣೀರೊರೆಸಿ ಹೊರಡುವುದಕ್ಕೆ ಸಾಕುಬೇಕಾಯಿತು. ಕೊಟ್ಟಿಗೆಯ ಕಪಿಲೆಗೆ ಅಬ್ಬೆಯ ನೋಡಿಕೋ ಎಂದು ಹೇಳಿ ಹೊರಟ. ಕಂಬದ ಗೌಳಿ ಬೆಸ ನುಡಿದವು. ಕಳ್ನಾಯಿ ಬೆಳ್ನಾಯಿ ಪಟ ಪಟ ಕಿವಿ ಬಡಿದು ಬೆಂಬತ್ತಿದವು. ಚಿತ್ತ ಮಿಡಿದು ಕಣ್ಣೀರು ಬಂತು. ತೆಕ್ಕೆಯಲ್ಲಿಯ ಯಕ್ಷಿಯ ನೆನಪಾಗಿ ನಿರ್ಧಾರದಿಂದ ನಡೆದ.

ಮುಂದೆ ನಡೆದಾಗ ದಾರಿಯ ಅಕ್ಕಪಕ್ಕ ಇಬ್ಬರು ಸೇಡುಮಾರಿ ಬುಡ್ಡಿಯರು ನಿಂತುಕೊಂಡಿದ್ದಾರೆ ಶಿವನೆ! ಮುಖದ ತುಂಬ ಅಂಗೈಗಾತ್ರದ ಕೊಳೆ ಮೆತ್ತಿಕೊಂಡಿದೆ. ಮೂಗಿನ ತುಂಬ ಮುಸುರೆ, ಕಣ್ಣುಗಳು ಇಂಗಿ ಹೋಗಿ ಮೈಯಂತ ಮೈಯೆಲ್ಲ ಕಜ್ಜಿ ಹುರುಕಾಗಿ ಗೊಮ್ಮಂತ ಗಬ್ಬ ನಾತ ಹೊಡೆವುತ್ತಿದೆ ಇಬ್ಬರಿಗೂ. ಇಬ್ಬರೂ ಮಾತಾಡಿಕೊಳ್ಳುತ್ತಿದ್ದಾರೆ, ಏನಂತ?

ಸೇಡುಮಾರಿ : ಅಕಾ ಬಂದ ನೋಡು

ಸೇಡುಮಾರಿ : ಹಾಂಗೆಲ್ಲ ಹೆದರಿಸಬೇಡ, ಬಾಯಿ ಮುಚ್ಚಿಕೊ.

ಸೇಡುಮಾರಿ : ಅವನಾಗಲೇ ಹೆದರಿದ್ದಾನೆ. ಆಗಲೇ ಕಣೆಗಣ್ಣಲ್ಲಿ ಕಣ್ಣೀರುದುರಿಸಿದ. ನೋಡಲಿಲ್ಲವೆ? ತೆಕ್ಕೆಯಲ್ಲಿ ಯಕ್ಷಿ ಇಲ್ಲದಿದ್ದಲ್ಲಿ ಓಡಿ ಹೋಗುತ್ತಿದ್ದ.

ತನ್ನ ಒಡಲೊಳಗಿನ ನುಡಿಯಾಡುವ ಇವರ್ಯಾರೆಂದು ದಿಗಿಲಾಯಿತು; ಚಂದ ಮುತ್ತನಿಗೆ.

“ಯಾರು ನೀವು?” ಅಂದ.

ಇಬ್ಬರೂ : ಸೇಡುಮಾರಿಯರು.

ಚಂದಮುತ್ತ : ಇಲ್ಲಿ ಯಾಕೆ ನಿಂತಿದ್ದೀರಿ?

ಇಬ್ಬರೂ : ಸೂರ್ಯಮುಳುಗಲಿ ಅಂತ.

ಚಂದಮುತ್ತ : ಯಾಕೆ?

ಇಬ್ಬರೂ : ಸೂರ್ಯ ಮುಳುಗಿದ ಮ್ಯಾಲೆ ಪಡುಬೆಟ್ಟದಲ್ಲಿ ಚಂದ್ರ ಮೂಡುತ್ತಾನಲ್ಲ, ಅವನೊಳಗಿನ ಜಿಂಕೆಯ ತಿನ್ನೋಣ ಅಂತ.

ಚಂದಮುತ್ತ : ಇವತ್ತು ಮಹಾಶಿವರಾತ್ರಿ ಅಮವಾಸ್ಯೆ. ಚಂದ್ರ ಮೂಡುವುದಿಲ್ಲ ಅಂತ ಗೊತ್ತಿಲ್ಲವೆ?

ಸೇಡುಮಾರಿ : ನಿನಗೂ ಗೊತ್ತಿಲ್ಲವೆ? ಯಾವ ಧೈರ್ಯದ ಮ್ಯಾಲೆ ಯಕ್ಷಿಗೆ ದೈವತ್ವ ಕೊಡ್ತೀಯಪ್ಪ, ಚಂದ್ರನೇ ಮೂಡದಿದ್ದರೆ?

ಸೇಡುಮಾರಿ : ಇರು ಇರು. ನೀನು ಕೊಳಲು ನುಡಿಸುವಾಗ ಚಂದ್ರ ಮೂಡುವವನಿದ್ದಾನೆ. ನಿನ್ನ ಅಬ್ಬೆಯಾಗಲೇ ಚಂದ್ರನ ಹೆರಲು ಬೇನೆ ತಿನ್ನುತ್ತಿದ್ದಾಳೆ! ಹೋ ಹೋ…

– ಎಂದು ಕೈ ತಟ್ಟಿ ನಗಾಡುತ್ತ ಓಡಿ ಹೋದವು.