ಇತ್ತ ಚಂದಮುತ್ತ ಗುಡಿಯಲ್ಲಿ ಯಕ್ಷಿಯ ಜೋಪಾನ ಮಲಗಿಸಿ ಗುಡಿ ಮುಂದಿನ ಅಂಗಳ ಸಾರಿಸಿ, ಸಾರಣೆ ಮಾಡಿ, ರಂಗೋಲಿ ಎಳೆದು ಮರುಗ ಮಲ್ಲಿಗೆ ಪತ್ರಿಯೆಲೆ ತಂದು ಸಂಜೆಯ ಶಾಂತಿಪೂಜೆ ಮಾಡಿದೇಟ್ಗೆ ಹಗಲ ಬೆಳಕಾರಿ ಕತ್ತಲಾದವು. ಪಂಜು ಹೊತ್ತಿಸಿ ಕರಿ ಬಿಳಿ ಸುಣ್ಣ ಬಣ್ಣ ಅರಿಷಿಣ ಕುಂಕುಮಗಳಲ್ಲಿ ಮಂಡಳ ಬರೆದು ಮಂಡಳದ ಎಡಬದಿಯಲ್ಲಿ ಮೂರು ಕಾಲಿನ ಮೂಳೆರೂಪದ ಭೃಂಗೀಶನ ವಿರಚಿಸಿದ. ಅವನ ಮುಗಿದ ಕೈ ತಲುಪುವಲ್ಲಿ ಸತ್ಯಶಿವನ ಶ್ರೀಪಾದಂಗಳ ಸ್ಥಾಪನೆ ಮಾಡಿ ಮಂಡಳ ಮಧ್ಯೆ ಬೂದಿಬಡಕ ಶಿವನ ಮತ್ತವನ ತಲೆಯಲ್ಲಿ ಮಿಡಿನಾಗರ ಜಡೆಯ ಬರೆದು ಜಡೆಯಲ್ಲಿ ಚಂದ್ರನ ಬರೆವುದನ್ನ ಮರೆತ. ಯಂತ್ರ ಮಂತ್ರ ತಂತ್ರಂಗಳ ಸುತ್ತೂ ಬರೆದು ಮಂತ್ರಭಾವಿತ ರಚನೆಗಳೊಂದಿಗೆ ಸಾವಿರದೊಂದು ಗಣಂಗಳ ಆವಾಹಿಸಿ ರಕ್ಷಣೆಗಿಟ್ಟ ಮಂಡಳದ ಕೆಳಭಾಗದ ಆಯಕಟ್ಟಿನ ಸ್ಥಳದಲ್ಲಿ ಇನ್ನೊಂದು ಮಂಡಳ ಬರೆದು ಗುಡಿಯಲ್ಲಿಯ ಯಕ್ಷಿಯ ಅದರೊಳಗಿಟ್ಟು ಸುತ್ತ ರಕ್ಷೆಯ ರಚಿಸಿ ದೈವಂಗಳ ಆವಾಹಿಸಿ ಕಾವಲಿಗಿಟ್ಟು ಬಂದೋಬಸ್ತ್ ಮಾಡಿದ. ಇಷ್ಟೆಲ್ಲಾ ಆಗಿ ಏನೊಂದು ಊನವಾಗಿಲ್ಲವೆಂದು ಭಾವಿಸಿ ತುಟಿಗಿಡುವಲ್ಲಿ ನಟ್ಟಿರುಳು ನಡುರಾತ್ರಿಯಾಗಿ ಸರ್ವರೂ;

ಸುವ್ವಿ ಸಾವಿರ ಬಾರಿ, ಸುವ್ವಾಲಿ ಸಾವಿರ ಬಾರಿ
ಪಾರ್ವತೀಸಮೇತ ಪರಮೇಶ್ವರನಿಗೆ ಸಾವಿರದೆಂಟು ಬಾರಿ ಶರಣೆಂದೆವು.

ನಾವಿಂದು ಸಾಂಬಶಿವನ ನೆನೆಯುತ್ತಿರಬೇಕಾದರೆ ಚಂದಮುತ್ತ ನಾಭಿಕುಹರದ ಉಸಿರಿನಿಂದ ಹದವಾದ ನಾದಂಗಳ ತೆಗೆದು ಆಲಾಪವ ಸುರು ಮಾಡಿದ. ಸುತ್ತಲಿನ ಸಚರಾಚರದಲ್ಲಿ ಜೀವಸಂಚಾರವಾಗಿ ಮಹಾಶಿವರಾತ್ರಿಯ ಮಹಾಪೂಜೆಯಲ್ಲಿ ಭಾಗಿಯಾಗಲು ಚಡಪಡಿಸಿದವು. ಮಧುರಾಲಾಪನ ಮಾಡಿ ಮಂಡಳದ ಸುತ್ತಲಿನ ಮಲ್ಲಿಗೆ ಬಳ್ಳಿ ಅರಳಿ ನಲುಗುವ ಹಾಗೆ ಮಾಡಿದ. ಆನಂದ ನಾದವ ಹೊರಡಿಸಿ ಗಾಳಿ ಪರಿಮಳವಾಗಿ ಸುಳಿದು ಮಂಡಳದ ಒಳಹೊರಗಿನ ದೇವತೆಗಳೆಲ್ಲ ಪ್ರಸನ್ನರಾಗುವಂತೆ ನುಡಿಸಿದ. ಸುತ್ತಲಿನ ಚರಾಚರವು ಮಹಾಶಿವರಾತ್ರಿಯ ಶಿವಾನಂದ ಸವಿವ ಕಿವಿಯಾಗುವಂತೆ ನುಡಿಸಿದ.

ಇದಾದ ಮ್ಯಾಲೆ ಭೃಂಗೀಶನ ಶ್ರೀಪಾದಂಗಳ ನುತಿಸುವ ರಾಗ ರಚನೆಯ ಪದಕಟ್ಟಿ ಅಮೋಘವಾಗಿ ನುಡಿಸಿ ಸೂಕ್ಷ್ಮ ಲೋಕದ ದೇವರು ಸ್ಥೂಲಕ್ಕೆ ಬರಬೇಕೆಂದು ಭಕ್ತಿಯಿಂದ ಪ್ರಾರ್ಥಿಸಿದ. ಮಂಡಳದ ಆಸುಪಾಸು ಸಾವಿರದೆಂಟು ಜಂಗುಜಂಗಿನ ಅನಾಹತನಾದ ವಿಜೃಂಭಿಸಿ ಭೃಂಗೀಶನ ಅವತಾರದ ಮುನ್ಸೂಚನೆಯಾಯಿತು. ಅವನ ಕರೆತಂದು ಸೂಕ್ಷ್ಮ ಮತ್ತು ಸ್ಥೂಲಗಳ ನಡುವಿನ ಹೊಸ್ತಿಲ್ಲಿ ನಿಲ್ಲಿಸಿ ಶಿವಗಣದ ರೀತಿರಿವಾಜಿನಲ್ಲಿ ಶಿವಾಚಾರ ಶಿವಭಕ್ತಿಯ ಅರ್ಪಿತ ಮಾಡಿ, ತೃಪ್ತಿಗೊಳಿಸಿ ತಿಂಗಳುರಾಗವ ಸುರುಮಾಡಿದ ಚಂದಮುತ್ತ.

ಕನಸುಗಳಾದ ನಮಗಿನ್ನೂ ಏಕಾಗ್ರತೆ ಒದಗಿರಲಿಲ್ಲ. ಅದು ಇದು ನುಡಿದಾಡುತ್ತಿದ್ದಾಗ ಚಂದಮುತ್ತ ಹೊತ್ತಿಸಿದ ಇದ್ದೊಂದು ಪಂಜು ಆರಿ ಕಗ್ಗತ್ತಲಾವರಿಸಿತು. ಇದ್ದಕ್ಕಿದ್ದಂತೆ ಹಾಳುಗುಡಿಯ ಕರೀ ಶಿವಲಿಂಗ ಎದ್ದುಬಂದು ನಮ್ಮನ್ನು ಗದರಿದಂತಾಯ್ತು. ಏನೆಂದು ನೋಡಿದರೆ ಶಿವಾ ಶಿವಾ! –

ಚಂದಮುತ್ತನ ತಿಂಗಳು ರಾಗದ ಮಾಯೆ ಹಬ್ಬಿಬಿಟ್ಟಿದೆ!
ಮಹಾಶಿವರಾತ್ರಿಯ ಕಗ್ಗತ್ತಲೆಯ ಆವರಿಸಿಬಿಟ್ಟಿದೆ ಅಂಧಂತಮಸ್ಸನ್ನ
ಮೀರಿ ಬೆಳೆಯುತ್ತಿದೆ
ಮ್ಯಾಲಿನ ಮಿರಿಲೋಕದ ತಾರಾಲೋಕದವರೆಗೆ
ನ್ಯಾವ್ಯಾರೆಂದು, ಎಲ್ಲಿದ್ದೇವೆಂದು,
ಏನಾಯಿತೆಂದು, ಯಾಕಾಯಿತೆಂದು ತಿಳಿಯದೆ
ನಮ್ಮ ನಾಮರೂಪ ಕ್ರೀಗಳೆಲ್ಲ ಕರಗಿ,
ಸುತ್ತಲಿನ ಸಚರಾಚರದ ಎಲ್ಲ ಎಲ್ಲವುಗಳಲ್ಲಿ
ಶಿವವು ಎಚ್ಚರವಾಗಿ
ತನ್ನ ತಾನು ಕಂಡುಕೊಂಬ ಸಡಗರದಲ್ಲಿದೆ
ನಮ್ಮ ದೇಹಂತ ದೇಹ ಪುಳಕಗೊಂಡು ವಿವಶರಾಗಿ
ಹೊತ್ತು ಬಹಳ ಹಾಗೇ ಇದ್ದೆವು.

ಇಂತೀಪರಿ ಚಂದಮುತ್ತನ ಕೊಳಲ ಸಂಗೀತ ನಡೆದಿರಲಾಗಿ ಎಲ್ಲೋ ಏನೋ ಸೂತ್ರ ತಪ್ಪಿದೆಯೆನಿಸಿ ನೋಡಿದರೆ –

ಹೆಂಗಿತ್ತೊ ಹಂಗೆ ಇದೆ ಸರ್ವಲೋಕ!
ಕರ್ಮಂಗಳು ನಡೆಯದೆ
ಘಟಿತಂಗಳು ಘಟಿಸದೆ
ಎಲ್ಲೆಂದರಲ್ಲಿ ಹೆಂಗೆಂದರೆ ಹಂಗೆ
ಕಿಂಚಿತ್ತೂ ವ್ಯಾತ್ಯಾಸವಾಗದೆ
ನಮ್ಮಕಥೆ ಇದ್ದಲ್ಲೇ ಇದೆ.
ಏನೋ ಆಗಬಾರದ ಅನಾಹುತ
ಆಗಿ ಹೋಗಿದೆಯೆನಿಸಿ ಮುಂದೆ
ಹ್ಯಾಂಗ ಮಾಡುವುದೆಂಬ ಮಾತಿಗೆ ಈ ಹೀಂಗೆ ಹೊಳೆಯಿತು:

ಚಂದಮುತ್ತ ನುಡಿಸುತ್ತಿರುವುದು ತಿಂಗಳರಾಗ. ಹುಣ್ಣಿವೆಯ ರಾತ್ರಿ ಅದನ್ನು ನುಡಿಸಬೇಕಾದ್ದು ನಿಯಮ. ಆದರೆ ಶಿವರಾತ್ರಿಯ ಅಮವಾಸ್ಯೆ ಚಂದ್ರಮಸ್ವಾಮಿ ಮೂಡುವುದಿಲ್ಲವೆಂಬುದು ನಮಗೆ ಅರಿದಲ್ಲ. ಆದರೆ ಚಂದಮುತ್ತನ ತಿಂಗಳ ರಾಗ ಕಾರಣವಾಗಿ ಪವಾಡ ಜರುಗಿ ಚಂದ್ರಾಮನ ಅವತಾರವಾಗಿ ಬೆಳುದಿಂಗಳು ಸುರಿಯಬಹುದೆಂದು; ಆ ಬೆಳಕಿನಲ್ಲಿ ಸತ್ಯಶಿವದೇವರು ಭೃಂಗೀಶನೇ ಮುಂತಾದ ಗಣಂಗಳ ಸಮೇತದರ್ಶನಕೊಟ್ಟು, ಯಕ್ಷಿಗೆ ದೈವತ್ವದ ಅನುಗ್ರಹಿಸಿ, ಚಂದಮುತ್ತನ ಉದ್ಧರಿಸುವರೆಂದು ನಮ್ಮ ನಂಬಿಕೆಯಾಗಿತ್ತು. ಆದರೆ ಅದ್ಯಾವುದೂ ನಡೆಯದೆ ಚಂದಮುತ್ತನ ಕೊಳಲು ಮತ್ತು ನಮ್ಮ ಕಥೆ ಎಡವಿದಲ್ಲೇ ಎಡವುತ್ತ ನಿಂತವು. ಮುಂದೇನು ಮಾಡುವುದೆಂಬ ಗೊಂದಲದಲ್ಲಿ ನಾವೆಲ್ಲ ಮುಳುಗಿರುವ ಪ್ರಸ್ತಾವದಲ್ಲಿ ಚಂದಮುತ್ತನೇನು ಮಾಡಿದ?

ಅವನಿಗೂ ಏನೂ ಹೊಳೆಯದೆ ಗಾಬರಿಯಾಗಿ, ಆದರೂ ಧೈರ್ಯ ಕಳಕೊಳ್ಳದೆ ರಾಗರಚನೆಯಲ್ಲಿ ಓಂಕಾರವಂಕುರಿಸುವಂತೆ ಮಾಡಿ ಈಗ ಕಾಪಾಡಿದರೆ ಅವನೇ ಸೈ ಎಂದು ತಾರಕದಲ್ಲಿ ಭೃಂಗೀಶನ ಪ್ರಾರ್ಥನೆಯ ನುಡಿಸುತ್ತ – ಪ್ರಸನ್ನವಾಗು ಶಿವಪಾದವೇ ಎಂದು ಹಾರೈಸುತ್ತಿದ್ದರೆ ಇಲ್ಲಿ –

ಅಲ್ಲಿ ಆ ಕಡೆ ಶಿವಾಪುರವೆಂಬ ಘನವಾದ ಹಟ್ಟಿಯ ಲಕ್ಕಬ್ಬೆಯ ಗೂಡಿನಲ್ಲಿ ಏನು ನಡೆಯಿತೆಂದರೆ:

ಭೃಂಗೀಶನಿಗೆ ಚಂದಮುತ್ತ ಮರವೆಯಿಂದ ಮಂಡಳದ ಶಿವನ ಜಡೆಯಲ್ಲಿ ಚಂದ್ರನ ಬರೆದಿಲ್ಲವೆಂಬ ಸಂಕಟದ ಅರಿವಾಗಿ, ಬಾಲಕನ ಕಾಪಾಡಲೇಬೇಕೆಂಬ ನಿಶ್ಚಯ ಮಾಡಿ, ಸ್ಥೂಲದ ಹೊಸ್ತಿಲಲ್ಲಿ ನಿಂತಿದ್ದ ಭೃಂಗೀಶ ದೇವರ ಠಳಾರನೆ ಸ್ಥೂಲದ ಬಾಗಿಲನ್ನೊದ್ದು ಬೆಳಕಿನ ರೇಖೆಯಾಗಿ, ಮುಂಗಾರಿನ ಮುಕ್ಕೋಟಿ ಮಿರಿಮಿಂಚು ಮಿಂಚಿಧಂಗೆ ಲಕ್ಕಬ್ಬೆಯ ಗೂಡಿನಲ್ಲಿ ಪ್ರತ್ಯಕ್ಷರಾದರು!

ಇದೇನು ಹೊಯ್ಕೆಂದು, ಇದೆಲ್ಲಿಯ ಜಂಗಿನ ಗೌಜು ಗದ್ದಲವೆಂದು, ಗೂಡಿನ ದನಕರು, ಲಕ್ಕಬ್ಬೆ ದೇಹಂತ ದೇಹವೆಲ್ಲ ಗಾಬರಿ ಪುಳಕಂಗಳಲ್ಲಿ ನೋಡುತ್ತಿರಲು ಮಿಂಚಿನ ಮೂಳೆರೂಪದ ಭೃಂಗೀಶ ದೇವರು ಮೂರು ಕಾಲಿನ ಆರುಮೂರೊಂಬತ್ತು ಪೆಟ್ಟಿನ ಬೆಸಸಂಖ್ಯೆಯ ತಾಳಲಯದಲ್ಲಿ ಗಲಿರು ಗಲಿರು ಅಂತ ಜಂಗು ನುಡಿಸುತ್ತ ಕುಣಿಯುತೈದಾರೆ! ಮುಂದಲ ಕಾಲಿಗೆ ಮುನ್ನೂರು ಜಂಗ, ಹಿಂದಲ ಕಾಲಿಗೆ ಆರನೂರು ಜಂಗ, ಮೂರನೆ ಕಾಲಿಗೆ ನೂರೆಂಟು ಜಂಗುಗಳ ಪುಟ್ಟ ಪುಟ್ಟ ಪಾದಂಗಳ ಜಂಗೀನ ಶಬುದಕ್ಕೆ ಕಗ್ಗತ್ತಲ ರಾತ್ರಿ ಮಾತಾಡುವಂತೆ ಹೆಜ್ಜೆಯ ಹಾಕಿ ನಾಂಟ್ಯವಾಡುತೈದಾರೆ! ಆವಾಗ ನೋಡು ಶಿವಾ, ಎಲ್ಲೆಲ್ಲಿದ್ದರೋ ಹಿಂಡು ಹಿಂಡು ಶಿವಗಣಂಗಳು ಹುಡುಹುಡು ಎಂದು ಗುಡುಗುಡುನೋಡಿ ಬಂದು ಗೂಡಿನ ಮೂಲೆ ಮೂಲೆಯಲ್ಲಿ ಪ್ರತ್ಯಕ್ಷರಾಗಿ, ಕೆಲವರು ತಲೆಮ್ಯಾಲೆ ಮುಗಿದ ಕೈ ಹೊತ್ತುಕೊಂಡು ಬಗೆಬಗೆಯ ನಾದಶಬ್ದಂಗಳ ಮಾಡುತ್ತ, ಕೆಲವರು ಕೇಕೆಗಳ ಹಾಕುತ್ತ ಭಕ್ತಿಯ ಆವೇಶವಡರಿ ಶಿವಧೋ ಎಂದು ಕಾಲಕೆಳಗಿನ ನೆಲ ಧೂಳು ಧೂಳಾಗುವಂತೆ ಹುಡಿ ಹುಡಿಯಾಗುವಂತೆ ಹುಡದಿಯಾಡುತ್ತ, ಇನ್ನು ಕೆಲವರು ತಾವು ಕಲ್ಪಿಸಿದ ಹುಯಿಲ್ಗೊಂಬು, ಹುಯಿಲ್‌ತಮ್ಟೆ, ಹುಯಿಲ್ತಾಳ ವಾದ್ಯಂಗಳ ಮಂತ್ರ ಭಾವಿತದಿಂದ ಸೃಷ್ಟಿಸಿಕೊಂಡು ಬಾರಿಸುತ್ತ, ಶಿವಾನಂದದ ಆವೇಶವಡರಿ ಕಣ್ಣರಳಿ, ಮುಖ ಹಿಗ್ಗಿ, ಕಿವಿಗಳತನಕ ನಗುತ್ತ ಮೈಮರೆತು ಕುಣಿಯತೊಡಗಿದರು! ಇಂತೀರೀತಿ ಹೆಜ್ಜೆ ಹೆಜ್ಜೆಯ ಜಂಗಿನ ಶಬ್ದ ಗೂಡು ತುಂಬಿರಲು, ದನಕರು ಕಣ್ಣಗಲ ತೆರೆದು ಬರೆದ ಚಿತ್ರವಾಗಿರಲು ನೋಡು ನೋಡುತ್ತಿರುವಂತೆ ಬೆಳಗಿನ ಸಮಯ ಲಕ್ಕಬ್ಬೆ ರಾಗಿಹಿಟ್ಟಿನಲ್ಲಿ ಮಾಡಿ ಬೆರಣಿತಟ್ಟಿದ್ದ ಮನೆದೇವರು ಚಂದಪ್ಪನಲ್ಲಿ ಸಾಕ್ಷಾತ್ ಚಂದ್ರಾಮಸ್ವಾಮಿ ಅವತಾರ ಆವೇಶವಾಗಿ ಹುಣ್ಣಿವೆ ಚಂದ್ರನಂತೆ ಫಳಫಳ ಹೊಳೆಯತೊಡಗಿತು! ತಡಮಾಡದೆ ಭೃಂಗೀಶದೇವರು ದೂರದಿಂದಲೆ ಲಕ್ಕಬ್ಬೆಗೆ ನಮಸ್ಕರಿಸಿ ಸತ್ಯದೇವರಿದ್ದಲಿಗೆ ಸಾಗಲಿ ಮೆರವಣಿಗೆಯೆಂದು ಮುಂದೆ ಮುಂದೆ ನಡೆದರೆ ಬೆರಣಿಯ ಚಂದ್ರಾಮಸ್ವಾಮಿ ಹಿಂಡು ಹಿಂಡು ಶಿವಗಣಂಗಳೊಡನೆ ಹಿಂದೆ ಹಿಂದೆ ತೇಲುತ್ತ ನಡೆದರು. ಭೃಂಗೀಶನ ಜಂಗಿನ ಗಲಿರು ನಾದ, ತಮ್ಮಟೆ ವಾದ್ಯಗಳ ಒರಟು ನಾದಗಳಲ್ಲಿ ಕಂಚು ಕಹಳೆಗಳ ಮೊಳಗಿನಲ್ಲಿ ಕಗ್ಗತ್ತಲ ಕಾಡು ಗೀಳಿಟ್ಟು, ಪ್ರತಿಧ್ವನಿಸಿ ನಿನದಿಸಿತು. ಇಂತೀಪರಿ ಹೊಸ ಬೆರಣಿಯ ಚಂದ್ರನ ಉದಯವಾಗಿ ಭಯಂಕರ ಸದ್ದು ಸಡಗರದಲ್ಲಿ ನಡೆದ ಮೆರವಣಿಗೆಯ ಕಂಡು ಮ್ಯಾಲಿನ ಚಿಕ್ಕ ಬಳಗ ಗಾಬರಿಯಾಗಿ ಕಣ್ಣು ಪಿಳುಕಿಸಿದೆ ನಿಂತಲ್ಲಿ ನಿಂತುಕೊಂಡರೆ ಗಲಾಟೆಗೆ ಹಟ್ಟಿಯ ಜನ ಎಚ್ಚರಾದರೂ ಅಮವಾಸ್ಯೆಯ ದಿನ ಹುಣ್ಣಿವೆ ಬೆಳಕು ಮೂಡಿದಕ್ಕೆ ಬೆದರಿ ಗಾಬರಿಯಾಗಿ ಬಾಗಿಲು ಭದ್ರಮಾಡಿಕೊಂಡು ನಡುಗುತ್ತ ಒಳಗೇ ಕುಂತರು. ಮೆರವಣಿಗೆ ಯಕ್ಷಿ ಗುಡಿಗೆ ಬಂದು ಮಂಡಳದ ಶಿವನ ನೋಡಿದ್ದೇ ತೇಲುತ್ತ ಹೋಗಿ ಶಿವನ ಜಡೆಯಲ್ಲಿ ಬೆರಣಿಯ ಚಂದಪ್ಪಸ್ವಾಮಿ ಸ್ಥಾಪನೆಗೊಂಡರು.

ಬೆರಣಿ ಚಂದ್ರನ ಎಳೆಯ ಬೆಳ್ದಿಂಗಳು
ಅರಳಿ ಅರಳಿ ಸುರಿಯಿತು!
ಉಕ್ಕುವ ನೊರೆ ಹಾಲಿನಂತೆ
ತುಂಬಿ ಸುರಿವ ತಿಂಗಳು|
ತುಂಬಿ ಬಂದ ಚಂದ್ರನ ಕೊಡ
ತುಳುಕಿತು ಬೆಳ್ದಿಂಗಳು

ಬೆರಣಿ ಚಂದ್ರನ ಎಳೆಯ ಬೆಳ್ದಿಂಗಳಿಗೆ ಬಲಿತ ಕತ್ತಲ ರಾಜ್ಯ ಕರಗಿ ಹೋಯಿತೆಂಬಲ್ಲಿ ಲೋಕದ ಮೈಲಿಗೆ ತೊಳೆದು ಬೆಳಕು ಮೂಡಿಸಿದ ಚಂದ್ರಶೇಖರ ಸ್ವಾಮಿಯ ನೆನೆನೆನೆದು ಮುಂದಿನ ಪದ ನುಡಿಯುತ್ತೇವೆ ಕೇಳುವಂಥವರಾಗಬೇಕು.

ಭೃಂಗೀಶದೇವರ ಆವೇಶದ ನರ್ತನ ನೋಡಿ ಪ್ರೋತ್ಸಾಹವುಂಟಾಗಿ ಆರೂಮೂರು ಪೆಟ್ಟಿನ ಹೆಜ್ಜೆಯ ಹಾಕಲಾರದೆ ಕರುಬಿ ಸುಮ್ಮನೆ ನಿಂತ ಚಂದ್ರಶೇಖರ ಸ್ವಾಮಿಯ ಶ್ರೀಪಾದಂಗಳಿಗೆ ಚಂದಮುತ್ತನ ಹಂಬಲದ ಅರಿವಾಗಿ ಅನುಗ್ರಹದ ಕೈ ಮಿಡುಕಿತು. ಹಾಗಂದೇಟ್ಗೆ ಯಕ್ಷಿಗೆ ದೈವತ್ವದ ಆವೇಶವಾಗತೊಡಗಿತು ನೋಡು, –

ಮುಖವು ಕಳೆಕಳೆಯಾಗಿ
ನೀಲಾಂಜನದಂತೆ ಹೊತ್ತಿಕೊಂಡವು ಕಣ್ಣು,
ಹೊರಡುವ ಸಮಯದ ಅರಿವಾಗಿ
ಬಟ್ಟೆಯ ಸರಿಪಡಿಸಿಕೊಂಡಳು.

ಮನಸ್ಸು ಹಗುರವಾಯಿತು. ಅದಕ್ಕೂ ಮುನ್ನ ದೇಹವು ಕೂಡ. ಮೆಲ್ಲಗೆ ಎದ್ದು ಕುಂತು ಅಂಗೈಯ ಕನ್ನಡಿ ಮಾಡಿ ನೋಡುತ್ತಾ ಕರುಳು ಸರಿಸಿ ಕುಂಕುಮದ ಬೊಟ್ಟು ತಿದ್ದಿಕೊಂಡಳು.

ಆಮ್ಯಾಲೆ ಮೆಲ್ಲಗೆ ಎದ್ದು
ಶಕ್ತಿ ಸಾಲದೆ ಎರಡೂ ಕಡೆಗೊಲಿದು
ಸಮತೋಲ ಸರಿಪಡಿಸಿಕೊಂಡು
ಬೀಳದಿರುವಂತೆ ಕೈ ಚಾಚಿದಾಗ
ಚಂದಮುತ್ತನ ಹಾಡಿಗೇ ರೆಕ್ಕೆ ಮೂಡಿದಂತೆ
ಕೈಗಳು ರೆಕ್ಕೆಗಳಾಗಿ
ಮೆಲ್ಲಮೆಲ್ಲಗೆ ಗಾಳಿಪಟದಂತೆ ತೇಲಿ ನಲಿದಳು.
ತಿಂಗಳುರಾಗದ ಮಹಾಪೂರ ಬಂದು ಬಯಲು ತುಂಬಿತು ನೋಡು;
ರಾಗದ ಲಹರಿ ಲಹರಿಗಳಲ್ಲಿ ಈಜುತ್ತ

ಕಣ್ಣುಗಳಲ್ಲಿ ಚಂದ್ರನ ಸೆರೆಹಿಡಿದುಕೊಂಡಳು.
ತನ್ನ ತೇಜಸ್ಸನ್ನ ತಾನೆ ಹೊರಚೆಲ್ಲುತ್ತ
ಚಿಮ್ಮುವ ಬೆಳಗಿನ ಸೆಲೆಯಂತೆ ಕಂಡಳು. ಚಕೋರಿ ಎಂಬ ಯಕ್ಷಿ.
ರಾಗಕ್ಕೆ ಕಾವೇರಿದಂತೆ
ಆಕಾಶಕ್ಕೆ ಬೆಳೆವ ಶಿವನಿಗೆ ಶಿರಬಾಗಿ
ಭೃಂಗೀಶನ ಜಂಗು ಜಂಗಿನ ಮೂಳೆ ಪಾದಂಗಳಿಗೆ ವಂದಿಸಿ
ಗಣಂಗಳ ನೆನೆದು
ಪ್ರೀತಿ ಮತ್ತು ಅಭಿಮಾನದ ಕಡೆಗಣ್ಣು ಕುಡಿನೋಟದಲ್ಲಿ
ಚಂದಮುತ್ತನ ನೋಡಿ,

ಮೋಹದಲಿ ಅವನ ಹಾಡಿಗೆ ತಾಳ ಬಾರಿಸಿದಂತೆ
ರೆಕ್ಕೆ ಬಡಿಯುತ್ತ
ಎಳೆಯ ಬೆಳ್ದಿಂಗಳಲ್ಲಿ ಮೇಲುಮೇಲಕ್ಕೆ ಈಜುತ್ತ
ಹಾರಿದಳು.

ಕೊಳಲು ನುಡಿಸುತ್ತ ಚಂದಮುತ್ತ ದಿವ್ಯೋನ್ಮಾದದಲ್ಲಿ – ಚಂದ್ರಶೇಖರಸ್ವಾಮಿಯ ಶ್ರೀಪಾದಂಗಳ ಕಡೆ ನೋಡಿದ:

ಶಿವಪಾದದಲ್ಲೊಂದು ಕೆರೆಯ ಕಂಡ
ಕೆರೆಯಲ್ಲಿ ಮೂರೆಸಳಿನ ತಾವರೆ ಕುಸುಮವ ಕಂಡ!
ಕುಸುಮದಲ್ಲಿ ಧಗಧಗನೆ ಉರಿವ
ಉರಿಯ ಗದ್ದುಗೆ ಮ್ಯಾಲೆ ನಿಂತ್ಕೊಂಡು
ಧ್ಯಾನವ ಮಾಡುವ ಶಿವದೇವರ ಕಂಡ!
ಸ್ವಾಮಿ ರೂಪಾಂತರಚರಿಸಿ ಲೋಕಾಂತರ ಬೆಳೆದುದ ಕಂಡ!
ನಿಂತ ಹೆಜ್ಜೆ ಭೂಲೋಕದ ಸೀಮೆ ತುಂಬಿದವು
ಬೆರಣಿ ಚಂದ್ರನ್ನ ಜಡೆಯಲ್ಲಿ ಧರಿಸಿದ ಮುಖವು –
ಆಹಾ ತೇಜೋಮಯವು
ಮ್ಯಾಲೆ ಮಿರಿಲೋಕದೀಚೆಯ
ಅವಕಾಶ ತುಂಬಿದುದ ಕಂಡ!
ಈ ನಡುವೆ ದೇವದೈವ ಭೂತ ಪಿಶಾಚಿ
ರಾಹು ರಾಕ್ಷಸ ಇರಿವೆಂಬತ್ತು ಕೋಟಿ ಜೀವರಾಶಿ
ಸ್ವಾಮಿಯಲ್ಲಿ ಅಡಕಗೊಂಡುದ ಕಂಡ!
ಘನವೇ ಶರಣು
ಗಂಭೀರವೇ ಶರಣು
ಸಾವಳಗಿ ಶಿವಲಿಂಗವೇ ಶರಣು ಶರಣು
ತಂದೇ ಧನ್ಯನಾದೆನೆಂದು.

ಅಂದುಕೊಳ್ಳುತ್ತಿರುವಂತೆ ಕಾಲುಗಳಿಗೆ ಛಳಿತಾಗಿ ನೋಡಿಕೊಂಡಾಗ ನಾನು ಶಿಲೆಯಾಗುತ್ತಿರುವ ತಿಳುವಳಿಕೆ ಬಂತು. ಕಷ್ಟಪಟ್ಟು ರಾಗಕ್ಕೆ ಮುಕ್ತಾಯ ಕೊಡಲು ಪ್ರಯತ್ನಿಸತೊಡಗಿದ. ತಕ್ಷಣ ಇದು ಹಾರುತ್ತಿರುವ ಯಕ್ಷಿಗೆ ತಿಳಿದು ಎದೆ ಧಸ್ಸೆಂದಿತು. “ಅಯ್ಯೋ ನನ್ನ ಚಂದಮುತ್ತ” ಎಂದು ಕುಸಿದು ಮತ್ತೆ ಎಚ್ಚರವಾಗಿ ಸಾವರಿಸಿಕೊಂಡಳು. ಕಳೆಕಳೆಯಾಗಿದ್ದ ಮುಖ ಕತ್ತಲಂತೆ ಕಪ್ಪಿಟ್ಟಿತು. ಭಯ ಮತ್ತು ಅಂಗಲಾಚುವ ಆರ್ದ್ರ ನೋಟಗಳಿಂದ ಶಿವನ ಕಡೆ ನೋಡಿದಳು. ತನ್ನ ಪ್ರಾಣ ತಗೊಂಡಾದರೂ ತನ್ನ ಚಂದಮುತ್ತನ ಜೀವ ಉಳಿಸೆಂಬ ಭಾವದಲ್ಲಿ ಶಿವನ ಶ್ರೀಪಾದಂಗಳ ಕಣ್ಣಿಂದ ತೊಳೆದಳು. ಹತಾಶಳಾಗಿ ದುರ್ಬಲ ದೃಷ್ಟಿಗಳಿಂದ ಹೃದಯ ಪರಚಿಕೊಂಡಳು. ಚಂದಮುತ್ತನಿಗಾಗಿ ಶಿವನಲ್ಲಿ ಮೊರೆಯಿಟ್ಟಳು.

ಶಿವ ಶಿವಾ,
ನಂಬಿ ಕರೆದರೆ ಓ ಎಂಬ ಶಿವನೇ
ಮೃತ್ಯುಂಜಯನೆ,
ಮಾರ್ಕಂಡೇಯನ ಪೊರೆದವನೇ,
ಕಿಡಿಗಣ್ಣ ಬೀರು ತಂದೇ,
ಚಂದಮುತ್ತನ ನುಂಗುವ ಶಿಲೆಯ ಮ್ಯಾಲೆ.

ಒದಗಿ ಬಾ ಶಿವನೇ
ನಮ್ಮ ಸತ್ಯಕ್ಕೆ ನಮ್ಮ ಪ್ರೀತಿಗೆ
ನಮ್ಮ ಭಕ್ತಿಗೆ.

ಕರುಣಾಳು ಭೃಂಗೀಶ ದೇವರೇ,
ಶಿಲೆಯಿಂದ ರಕ್ಷಿಸಿರಯ್ಯಾ ಚಂದಮುತ್ತನ್ನ.
ನನಗಾಗಿ, ಲೋಕಕ್ಕಾಗಿ,
ಜೀವತ್ಯಾಗ ಮಾಡುವವನ
ನನ್ನ ಚಂದಮುತ್ತನ್ನ ಕಾಪಾಡಿ ಕಾಪಾಡಿರಯ್ಯಾ
ಆಕಾಶದೇವರಲ್ಲಿ ಸಿಡಿಲಿಲ್ಲವೆ?
ಸುತ್ತಲಿನ ದೇವರಲ್ಲಿ ನ್ಯಾಯವಿಲ್ಲವೇ?
ಶಿವನೆ, ನನ್ನನ್ನೂ ಅವನೊಂದಿಗೆ ಶಿಲೆಯಾಗಿಸು ತಂದೇ,

– ಎಂದು ಅಂಗಲಾಚುತ್ತ ನೀವಾದರೂ ಸ್ವಾಮಿಗೆ ಹೇಳಿರಯ್ಯಾ ಎಂದು ನಮಗೆ ಮೊರೆಯಿಟ್ಟಳು. ನನ್ನ ಚಂದಮುತ್ತನ್ನ ಕಾಪಾಡಿ ಕಾಪಾಡಿರಯ್ಯ ಎಂದು ಅಂಗಲಾಚುತ್ತ ಮೈಮರೆಸಿ ತನ್ನ ಜೀವವ ಅಪಹರಿಸುತ್ತಿದ್ದೀರಿ – ಎಂದು ಎಲ್ಲರ ನೋಡಿದಳು. ಇವಳ ಕಣ್ಣೀರ ಪ್ರವಾಹದಲ್ಲಿ ಎದುರೀಜುವುದು ಯಾರಿಗೂ ಸಾಧ್ಯವಾಗದೆ ಕಲ್ಲಿನಂತೆ ಸುಮ್ಮನೆ ನಿಂತಿರಲು ಕೆಳಗಿಳಿದು ಬಂದಳು. ಚಂದಮುತ್ತನ ಮುಖ ವಿನಾ ಉಳಿದೆಲ್ಲ ದೇಹ ಆಗಲೇ ಶಿಲೆಯಾಗಿತ್ತು.

ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಏನಿತ್ತು?
ಕಣ್ಣು ಕನ್ನಡಿಯ ಹಾಂಗಿತ್ತು
ಆಕಾಶವೆಂಬ ಕನ್ನಡಿಯಲ್ಲಿ ತನ್ನ ತಾ
ನೋಡಿಕೊಂಬ ಬಯಲು ಮೂಡಿತ್ತು.

ನಾವೆಲ್ಲ ದುಃಖ ಭಾವೈಕ್ಯರಾಗಿ ನಿಂತಿರಬೇಕಾದರೆ ಯಕ್ಷಿ ಕೃತಜ್ಞತೆಯಿಂದ ಅಥವಾ ಕೊನೆಯ ಬಾರಿ ಎಂಬಂತೆ ಚಂದಮುತ್ತನ ತುಟಿಳ ಮ್ಯಾಲೆ ತುಟಿ ಊರಿ ಬಹಳ ಹೊತ್ತಿನತನಕ ಮುದ್ದಿಸಿದಳು. ನಿಜ ಹೇಳಬೇಕೆಂದರೆ ಸ್ಮಶಾನವಾಸಿ ಶಿವನಂಥ ಶಿವನ ಕಣ್ಣಲ್ಲೂ ಕಣ್ಣೀರುಕ್ಕಿತು. ಅವರೂ ಕೈಕೈ ಹಿಸುಕಿಕೊಂಡು ಸುಮ್ಮನಿದ್ದರು. ಚಂದಮುತ್ತನ ತುಟಿ ಶಿಲೆಯಾದುದು ಅವಳ ತುಟಿಗರಿವಾಗಿ ಒತ್ತಾಯದಿಂದ ಬಿಟ್ಟಳು. ಈಗ ಅವನಾತ್ಮವ ಪೂರ್ತಿ ಹೀರಿಕೊಂಡ ತೃಪ್ತಿ ಅವಳ ಮುಖದಲ್ಲಿತ್ತು. ಮಂದಹಾಸದಿಂದ ಆಕಾಶವ ಕುರಿತು ಮ್ಯಾಲೆ ಹಾರತೊಡಗಿದಳು. ಹಾರ ಹಾರುತ್ತ ಆ ಯಕ್ಷಿ ಚಕೋರ ಪಕ್ಷಿಯಾಗಿ ಆನಂದಗಳು ಬೆಳೆವ ಸೀಮೆ ಶಿವನ ಜಡೆಯ ಚಂದ್ರನ ಗುರಿಯಾಗಿ ಹರಿದಳು. ಈಗ ಚಕೋರಿಯ ಮ್ಯಾಲೆ ಚಂದ್ರ ಮಾತ್ರ ಹೊಳೆಯುತ್ತಿದ್ದ.

ಚಂದ್ರನ ಸಮೀಪಿಸಿ ಕನ್ನಡಿಯಂತೆ ಅವನ ನೋಡಿದಾಗ
ಚಂದ್ರನೇ ಹಾರುತ್ತಿದ್ದ
ತನ್ನ ಬೆಳ್ದಿಂಗಳಲ್ಲಿ ತಾನೇ ಈಜುತ್ತಿದ್ದ.
ಚಕೋರಿ ಚಂದ್ರನ ನುಂಗಿ
ಚಂದ್ರಚಕೋರಿ ಎರಡೂ ಬಯಲು ನಿರ್ವಯಲಾಗಿ
ಬೆಳಗಾಯಿತು.

ತಿಂಗಳು ರಾಗದಿಂದ ಚಂದಮುತ್ತ ಕಟ್ಟಿದ್ದ ಶಿವಲೋಕ ಮಂಡಳದಲ್ಲಿ ಮಾಯವಾಯಿತು. ಬೆರಣಿ ಚಂದ್ರ ಭಸ್ಮವಾಗಿದ್ದ.

ಎಲ್ಲ ಮುಗಿಯಿತೆಂದಾಗ ಮಲ್ಲಿಗೆ ಬಳ್ಳಿಯ ಬುಡದಲ್ಲಿ ತೂಕಡಿಸುವ ಕರಡಿ ಕಂಡಿತು. ತಲೆಯಲ್ಲಿ ಬೆಳ್ಳಿ ಕೂದಲು ಬೋಳು ಬಾಯಿ, ಕೋಲು ಕೈಕಾಲು, ಕಣ್ಣುಗುಳಿ ಸೇರಿ ಚರ್ಮ ಜೋತಾಡಿ, ಹೊಳೆಯ ಮಹಾಪೂರ ಹಾದು ವಾಲಿದ ಮರದಂತೆ ಮ್ಯಾಲೆ ಮುಖಮಾಡಿ ಕುಂತಿದ್ದಳು. ಅದ್ಯಾರಪ್ಪ ಅಂದರೆ ಲಕ್ಕಬ್ಬೆ! ಅಬ್ಬೆ ಇನ್ನೂ ವಿಸ್ಮೃತಿಯಲ್ಲಿದ್ದಾಳೆ. ಹಾಗೇ ಇರಲೆಂದು, ಮಗ ಶಿಲೆಯಾದ ವಿಚಾರ ಅವಳಿಗೆ ತಿಳಿಯದಿರಲೆಂದು ನಾವು ಮಂಗಳ ಹಾಡುವ ಅವಸರದಲ್ಲಿದ್ದಾಗ ನಮ್ಮಲ್ಲೊಬ್ಬ ಕೇಳಿಯೇ ಬಿಟ್ಟ.

ಅಬ್ಬೆ ಅಬ್ಬೆ,
ಮಡಿಲೊಳಗೆ ಬಚ್ಚಿಟ್ಟುಕೊಂಡಿದ್ದಿಯಲ್ಲ
ನಿನ್ನ ಹಕ್ಕಿಯ,

ಪುಟ್ಟ ಕಾಲು ಇಷ್ಟೆ ಕೊಕ್ಕು
ಬಣ್ಣ ಎಲ್ಲ ಚೆನ್ನು.
ಸವಿಗೊರಳಿನ ಬಿಳಿ ಹಕ್ಕಿಯ
ದನಿಯೆಂದರೆ ಜೇನು.
ಅದೆಲ್ಲಿದೆ ಈಗ?

ಮುಂಗೈ ಮ್ಯಾಲೆ ಕುಣಿಕುಣಿದಾಡಿ
ನೆರಳಿಲ್ಲದೆ ಬೆಳಕಿನ ಲೋಕದ ಕತೆಯ
ಹೇಳುವ ಮೂಜಗದ ಸೋಜಿಗದ ಹಕ್ಕಿ
ಅದರ ಹಾಡೆಲ್ಲಿಗೆ ಈಗ?

– ಇದಕ್ಕೆ ಅಬ್ಬೆ ಹೀಗೆಂದಳು

ಹೌಂದು ನನ್ನಪ್ಪ
ನನ್ನ ಒಡಲಿಗೆ
ನನ್ನ ಮಡಿಲಿಗೆ
ಅದನ್ನು ಹೊಂದುವ ಭಾಗ್ಯವಿರಲಿಲ್ಲ.

ಈ ದಿನ
ಹಸಿವೆಗೆ ಹಾಲೂಡೆಂದು ಹಟ ಮಾಡಿತು
ಜೋತ ಮೊಲೆಯಲ್ಲೇನು ಹಾಲೊಡೆದೀತು ಕಂದಾ? – ಎಂದೆ.

ಚಂದ್ರಾಮನೆಂಬೂವ ಬೆಳ್ಳಿಗಿಂಡಿಯೊಳಗೆ
ಹೆಪ್ಪು ಹಾಕಿದ ಅಮೃತ ಕುಡಿವೆನೆಂದು
ಆಕಾಶವೆಂಬೂವ ಅರಿಯಬಾರದ ಬಯಲು
ಅದರಂತುಪಾರವನು ಅರಿವೆನೆಂದು
ಭರ್ರನೆ ಹಾರಿ ಹೋಯಿತು ಹಕ್ಕಿ
ನನ್ನ ಮತ್ತು ಕಾಲನ ಮೈ ಪರಚಿ

ಹಕ್ಕಿಯ ಭಾರವಿನ್ನೂ ಹಂಗೇ ಇದೆ
ಒಡಲಿನ ಮ್ಯಾಲೆ.
ಇನ್ನೇನು ಜೋಗುಳ ಹಾಡುತ್ತದೆ
ನನ್ನ ಮಲಗಿಸಲಿಕ್ಕೆ.

ಮಗುವೇ ಜೋಗುಳ ಪಾಡಿ
ತಾಯಿಯ ಮಲಗಿಸಿದ್ದನ್ನ
ಎಲ್ಲಾದರು ಕೇಳಿದ್ದಿರೇನ್ರಪ್ಪ?
ಜೋ ಜೋ ಎನ್ನ
ಬೆಳ್ಳಾನ ಹಕ್ಕಿ ಜೋ ಜೋ….

ಚಂದ್ರಾಮನಂಬೂವ ಕನ್ನಡಿ ಮಾಡಿ
ನನ್ನ ಕನ್ನಡಿ ಮಾಡಿ ಅದರ ಎದುರಿಟ್ಟಿ
ಪ್ರತಿಬಿಂಬ ನೆರೆದಾವು ಬಿಂಬದ ಜೋಡಿ || ಬಯಲು ||

ಬಯಲಾಗ ಸೇರ್ಯಾವು ನಿರ್ವಯಲಾಗಿ
ಜೋ ಜೋ ಎನ್ನ ಜ್ಯೋತಿಯ ಕಂದಾ ಜೋ ಜೋ ||

– ಎಂದು ಹೇಳಿ ಕಣ್ಣೀರಲ್ಲಿ ತೆಪ್ಪದ ಹಾಗೆ ತೇಲುವ ತಾಯಿಯ ಕಂಡು ನಮ್ಮ ಕುರುಳು ಕಿತ್ತು ಕಣ್ಣಿಗೆ ಬಂದಂತಾಗಿ ಅತ್ತೆವು. ಅವಳು ವಿಸ್ಮೃತಿಯಲ್ಲಿದ್ದರೇ ಒಳ್ಳೆಯದೆಂದು ಮಂಗಳ ಹಾಡಲು ಸಿದ್ಧರಾದೆವು.

 

ಚಂದಮುತ್ತನ ದೇಹ ಈಗ ಪೂರಾ ಶಿಲೆಯಾಗಿ
ಕಲ್ಲುಗಳಲ್ಲಿ ಕಲ್ಲಾಗಿ ಬಿದ್ದಿದೆ.
ಕಣ್ಣು ಮಾತ್ರ ಗಾಜಿನ ಕಣ್ಣಿನಂತೆ ಕಾಣುತ್ತಿದ್ದವು.
ಕಣ್ಣಗಳಲ್ಲಿ ಹೆಪ್ಪುಗಟ್ಟಿದ ಚಂದ್ರನಿದ್ದ.
ಎರಡೂ ಕಣ್ಣಲ್ಲಿ ಸೋರಿದ್ದ ಕಣ್ಣೀರು ಮಾತ್ರ
ಹಾಗೇ ನೀರುನೀರಾಗೆ ಇತ್ತು.

ಬೆಳಕಿನ ಅವಧೂತ, ಚಂದಮುತ್ತ
ಸತ್ತನೆನಬ್ಯಾಡಿರಯ್ಯಾ
ಅವನ ತುಟಿಯ ಮ್ಯಾಲಿನ ಹಾಡನ್ನ
ಹಕ್ಕಿಗಳಿಗೆ ಕೊಡಿರಯ್ಯಾ
ಕಣ್ಣಂಚಿನಲ್ಲಿರೋ ಕಣ್ಣೀರನ್ನ
ತರುಮರಗಳ ಬೇರಿಗೆ ಹನಿಸಿರಯ್ಯಾ

ಆತ್ಮದ ತುಂಬ ಚಂದಮುತ್ತನ ಬೆಳ್ದಿಂಗಳ
ತುಂಬಿಕೊಂಡು ಹೋಗಿರಯ್ಯಾ

ಬೆಚ್ಚಗಿನ ಬೆಳಕಿನ ಭರವಸೆ ಕೊಡುತ್ತ
ಮುಂಗೋಳಿ ಕೂಗಿದೆ
ಮಂಡಳದಲ್ಲಿ ಬೆರಣಿ ಚಂದ್ರನ ಬೂದಿ ಬಿದ್ದಿದೆ
ಭಕ್ತಿಗೆ ಭಸ್ಮ ಧರಿಸಿಕೊಂಡು ಹೋಗಿರಯ್ಯಾ.

ಇಲ್ಲೀಗಿ ಹರಹರ
ಇಲ್ಲೀಗಿ ಶಿವ ಶಿವ
ಇಲ್ಲೀಗಿ ನಮ ಹಾಡು ಮಂಗಳವಯ್ಯಾ ||