ಮಗ ಮಲಗಿದ್ದ ಜಗಲಿಗೆ ಹೋಗಿ ಅಬ್ಬೆ ಬೆಳಕಿನಲ್ಲಿ ಕಣ್ಣಾಡಿಸಿ ಹುಡುಕಿದಳು. ಕತ್ತಲಲ್ಲಿ ಕಾಲಾಡಿಸಿ ಹುಡುಕಿದಳು. ‘ಮಗಾ ಚಂದಮುತ್ತ, ಚಂದ್ರಮಾ’ – ಎಂದು ದನಿಮಾಡಿ ಹುಡುಕಿದಳು. ಹುಡುಕುತ್ತಿದ್ದಾಗ ತಡಕುವ ಕಾಲಿಗೆ ಮಗನ ಮುಡಿ ತಾಗಿತು. ಅಲ್ಲೇ ಕುಳಿತು ಮಗನ ತಲೆ ನೇವರಿಸಿದಳು. ಜ್ವರದಿಂದ ತಲೆ ಸಿಡಿಯುತ್ತಿತ್ತು. “ಅಯ್ಯೋ ಕಂದಾ” ಎಂದು ಒಂದೇ ಉಸುರಿಗೆ ಬಂದು ಕಷಾಯ ಕುದಿಸಿ ಕೊಂಡೊಯ್ದಳು. ಒತ್ತಾಯದಿಂದೆಬ್ಬಿಸಿ ಮಗನಿಗೆ ಕುಡಿಸಿ ಭದ್ರ ಮಂಚದ ಮ್ಯಾಲೆ ಮಲಗಿಸಿದಳು. ಮಗನಿಗೆ ಭೂತ ಪಿಶಾಚಿ ಬಾಧೆಯೋ ಎಂದು ಹೆದರಿ ಕುಲದೈವ ಚಂದಪ್ಪ ಬೆಳಗಾಗುವುದರೊಳಗೆ ಮಗನ ಪೀಡೆ ತೊಲಗಲಿ, ನಿನಗೆ ಮಲ್ಲಿಗೆ ಹೂ ದಂಡೆ, ಬಾಡಿನ ರುಚಿ ಕೊಡುವುದಾಗಿ ಹರಕೆ ಹೊತ್ತು ಹಾಲು ಹಿಂಡಲು ಹೋದಳು.

ಚಂದಮುತ್ತ ಅಂಗಾತ ಮಲಗಿದ್ದಾಗ ಎಲೆಮರೆಯಲ್ಲಿದ್ದ ನಾವು ಕನಸುಗಳು, ಹೂಹೂಗಳಲ್ಲಿ ಹುದುಗಿದ್ದ ಕನಸುಗಳು ಚಂದ್ರ, ತಾರೆಯರೊಂದಿಗೆ ಆಕಾಶದಂಗಳದಲ್ಲಿ ತೇಲಾಡುವ ಮಾಯದ ಕನಸುಗಳು – ಹೀಗೆ ಸುತ್ತೂ ಸೀಮೆಯ ಕನಸುಗಳು ಗುಂಪಾಗಿ ಬಂದು ಚಂದಮುತ್ತನ ಕಣ್ಣು ಮುತ್ತಿ ನಮ್ಮ ನಮ್ಮಲ್ಲಿ ಕೆಲಸ ಹಂಚಿಕೊಂಡೆವು.

ನೀನು ಆಕಾಶದಲ್ಲಿ
ನಕ್ಷತ್ರ ತಾರೆ ಚಿಕ್ಕೆಯ ಹರಹಿ
ದೀಪಾವಳಿ ಬೆಳಗುವಂತೆ ಮಾಡು.
ನೀನು ಶಿವನ ನೆತ್ತಿಯ ಜಡೆ ಕೆಡದ ಹಾಗೆ
ಚಂದ್ರನ ಕಿತ್ತು ತಂದು
ಆಕಾಶ ನೀಲಿಮದಲ್ಲಿಡು.
ನೀನು ಚಂದ್ರಲೋಕದ ಗಾಳಿಯ
ಚಂದಾಗಿ ಬೀಸು, ನೆಪ್ಪಿರಲಿ
ಅದರೊಳಗಿಂದ ಅಸಮಸುಖಗಳು ಬೀಸಿ ಬೀಸಿ ಬರುತ್ತಿರಲಿ.
ಬಳ್ಳಿಯ ಕಣ್ಣು ಬಿರಿದು
ಹುಲ್ಲುಗಾವಲಿನಲ್ಲಿ ಹೂಗಾಳಿ ಪರಿಮಳಿಸಲಿ, ಆಯಿತೇ?
ಭದ್ರಮಂಚದ ಮ್ಯಾಲೆ ಮಲಗಿರುವ ಚಂದ್ರಾಮನ್ನ
ಮೆಲ್ಲಗೆ ಕರೆತನ್ನಿ ಕಾಡಿಗೆ.
ಹಿತಕರದ ದೃಶ್ಯಗಳಿಂದ
ಸೊಗಸಿನ ಚದುರನಿಗೆ ಸೋಜಿಗವಾಗುವ ಹಾಗೆ
ನೋಡಿಕೊಳ್ಳಿ.

ಎಲ್ಲಿದ್ದಾಳೆ ಯಕ್ಷಿ?
ಎರಡು ಲೋಕಂಗಳ ಮಧ್ಯೆ
ಕರುಳಬಳ್ಳಿಯ ಬೆಳೆಸಿ
ಎರಡನ್ನು ಬೆಸೆಯುವಾಕೆ.
ಬೇರೆ ಸೀಮೆಯ ಆನಂದಗಳಿಂದ
ಯೌವನದ ಸಿಂಗರಿಸಿಕೊಂಡಿರಲಿ ಆಕೆ.
ಆಯಿತೆ? ಗಿಲಿ ಗಿಲಿ ಗೆಜ್ಜೆಯ ನುಡಿಸುತ
ಸೀದಾ ಬೆಳಸಲಿ ಪದುಮದ ಪಾದ ಕಾಡಿಗೆ.

ಚಂದಮುತ್ತನ ಕಡೆಗೆ ಬಂದಳೆ?
ಭೇಟಿಯಾದವೆ ಕಣ್ಣು? ಹಣೆದುಕೊಂಡವೆ ದೃಷ್ಟಿ?
ಸಂತೋಷ ಚಿಗಿತವೆ?
ಪುಳಕದಲಿ ಮೈತೊಳೆದರೆ?
ಹಾಗಿದ್ದರೆ ಚಂದಮುತ್ತನ ಹಾಡು ಕೇಳಿ:

ಹೇಳಕೇಳದೆ ಸುಳಿದರ್ಯಾರ? ನಮ ಸೀಮೆಯಲಿ
ತಿಳಸದೆ ಬಂದವರ್ಯಾರ ||ಪ||
ಆಡುತಾಡುತ ಬಂದು
ಬಂದ ದಾರಿಯ ಮರೆತು
ಚಿತ್ತದಲಿ ಚಕಿತರಾದವರಾ ||ಅ. ಪ||

ತೆಳ್ಳಾನ ಹೊಟ್ಟೆವಳು ತಾವರೆಯ ಮುಖದವಳು
ಬ್ಯಾರೇ ಸೀಮೆಯ ನಿಲುವು ಶೈಲಿ |
ಹ್ಯಾಗೆ ಸಂಪಿಗೆ ಮೊಗ್ಗು ಹಾಗೆ ಆಕೆಯ ಮೂಗು
ಕಂಗಳೆಂದರೆ ಕಮಲ ನೀಲಿ |
ಮೊಲೆಗಳ ಭಾರಕೆ ಬಾಗಿದ ಬಾಲೆಯ
ಮುಡಿಯಿಂದ ಜಗುಳ್ಯಾವು ಹೂವು||

ಮಾರಿ ಸಣ್ಣದು ಮಾಡಿ ದೂರದಲಿ ನಿಂತಳು
ತಿಳಿಯ ಬೆವರಿತ್ತು ಹಣೆಯೊಳಗೆ|
ಅತಿಶಯದ ಕುಸುಮದ ವಾಸನೆ ಎಸೆದಾವು
ಸುರಿದು ಬಂದಳು ಕ್ಷಿತಿಜದಂತೆ|
ಬೆದರಿದ ಎರಳೆಯೊ ದೇವರ ತರಳೆಯೊ
ನಿಜವ ತಿಳಿದವರ್ಯಾರು ಮಾಯೇ | ನಿಮ್ಮ||

ಯಾವುದೋ ಹೊಸಚಂದ್ರ ಭೂಮಿಗಿಳಿಧಾಂಗಿಹುದು
ಕಾಮಿತ ಫಲಿಸಿದ ಹಾಗೆ|
ಮೂರು ಲೋಕದ ಸುಖದ ಶಿಖರದ ಮ್ಯಾಗಿಂದ
ಕನಸು ಕೆಳಜಾರಿದ ಹಾಗೆ|
ಸಣ್ಣ ಮಿಂಚಿನ ಹಾಗೆ ಕಣ್ಣು ಹೊಡೆವಳು ಕನ್ಯೆ
ಚಿಮ್ಮುವ ಚಿಲುಮೆಯ ಹಾಗೆ || ಹ್ಯಾಗೆ ||

ಅಷ್ಟರಲ್ಲಿ ಉಣ್ಣದೆ ಮಲಗಿದ್ದ ಮಗನ ನೋಡಲೆಂದು ಅಬ್ಬೆ ಬಂದಳು. ಹಣೆ ಮುಟ್ಟಿ ಮುಂಗುರುಗಳು ನ್ಯಾವರಿಸಿದಳು. ನಾವು ಕನಸುಗಳು ಗಡಬಡಿಸಿ ರಚಿಸಿದ ನಿರ್ಮಿತಂಗಳೆಲ್ಲವ ಕರಗಿಸಿ ಓಡುತ್ತ, ಚಂದಮುತ್ತನ ಕಣ್ಣಲ್ಲಿ ನೆಟ್ಟಿದ್ದ ಯಕ್ಷಿಯ ಬಲವಂತ ಕಿತ್ತೆಳೆದುಕೊಂಡು ಮಾಯವಾದೆವು. ಚಂದಮುತ್ತ ಗಾಬರಿಯಿಂದ ಗಕ್ಕನೆ ಎದ್ದು, ಸುತ್ತೂ ಕಡೆ ನೋಡಿ.

ಯಾಕೆನ್ನ ಎಬ್ಬಿಸಿದಿರಿ|
ಕಣ್ಣಾಗಿನ | ಚಂದ್ರನ್ನ ಅಗಲಿಸಿದಿರಿ ||

– ಎಂದು ಅಳತೊಡಿಗಿದ. ಮಗನ ಇಂಪಿರದ ಮಾತಿಗೆ ಅಬ್ಬೆಯ ಹೃದಯ ಕಂಪಿಸಿತು. ‘ಅರಿವಿಗೆ ಬಾ ಮಗನೇ ಕನಸು ಕಂಡೆಯಾ?’ ಎಂದು ಭುಜ ಹಿಡಿದಲುಗಿದಳು.

“ಹೌದು ಅಬ್ಬೆ” – ಅಂದ
“ಏನು ಕನಸು ಕಂಡೆ ಕಂದ?”

“ಬೆಳ್ದಿಂಗಳಲ್ಲಿ ಈಜಾಡುತ್ತಿದ್ದ ಚಂದ್ರನ್ನ ಕಣ್ಣಲ್ಲಿ ಹಿಡಿದುಕೊಂಡಿದ್ದೆ. ನೀ ಬಂದೆ. ಕಣ್ಣಿಂದ ಜಗುಳಿ ಎದೆಗಿಳಿದ ಅಬ್ಬೆ” – ಎಂದು ಎದೆ ಹಿಡಿದುಕೊಂಡ.

ಅಬ್ಬೆಯ ಹರುಷಗಳು ಇದ್ದಿಲಾದವು. ನಾಳೆ ಕುಲಗುರುವ ಕಾಣಬೇಕೆಂದು. ಅಲ್ಲಿಯತನಕ ಇನ್ನಷ್ಟು ಹರಕೆಗಳು ಹೊರಬೇಕೆಂದು ಗೂಡಿನ ಮಾಡದಲ್ಲಿರುವ ಮನೆದೇವರು ಚಂದಪ್ಪನ ಕಡೆಗೆ ನಡೆದಳು.