ಬೆಳ್ಳಿಮೂಡಿ ಬೆಳಗಾಯಿತು. ಅಬ್ಬೆ ಕೋಳಿಯ ಕೂಗಿಗಿಂತ ಮುಂಚೆ ಎದ್ದು ಹಿಡಿಸೂಡಿ ಹಿಡಿದು ಅಂಗಳ ಗುಡಿಸಿದಳು. ಎಮ್ಮೆ ಹಸುಗಳ ಗಂಜಳ ಬಳಿದು ತಿಪ್ಪೆಗೆಸೆದು ಬಂದಳು. ಹಲ್ಲುಪುಡಿಯಿಂದ ಹಲ್ಲುಜ್ಜಿ ಮಡುವಿನಲ್ಲಿ ಮಿಂದು ಮಡಿಯುಟ್ಟಳು. ಕುಲದೈವಕ್ಕೆ ತುಪ್ಪದ ದೀವಟಿಗೆ ಹಚ್ಚಿದಳು. ಕರುಗಳ ಬಿಡದೆ, ಹಸು ಎಮ್ಮೆ ಹಿಂಡದೆ ಅವಸರದಲ್ಲಿ ಭದ್ರಮಂಚದ ಮ್ಯಾಲೆ ಮಲಗಿದ್ದ ಮಗನ ಕಡೆಗೊಮ್ಮೆ ನೋಡಿ ಕಂದನ ಕಾಪಾಡೆಂದು ಸತ್ಯದೇವರ ಚಿತ್ತದಲ್ಲಿ ಸ್ಮರಿಸಿ, ಧರೆಗೆ ದೊಡ್ಡವನಾದ ಕುಲಗುರುವಿನಲ್ಲಿಗೆ ದೌಡಾಯಿಸಿದಳು.

ಕುಲಗುರುವಾಗಲೇ ಬೆಳಗಿನ ಕುಲಾಚಾರಂಗಳ ತಪ್ಪದೆ ಪಾಲಿಸಿ ಮೂರು ಕಾಲಿನ ಆಸನದ ಮ್ಯಾಲೆ ಕುರಿ ಕಂಬಳಿಯಲ್ಲಿ ಗದ್ದಿಗೆ ಮಾಡಿ ದೊಡ್ಡ ಚಿಂತೆಯ ಮಾಡುತ್ತ ಕುಂತಿದ್ದ. ರಾತ್ರಿ ಕನಸಾಗಿತ್ತು. ಆತಂಕವಿತ್ತು ಕಣ್ಣಲ್ಲಿ. ಅಷ್ಟರಲ್ಲಿ ಅಬ್ಬೆ ಬಂದು ‘ಕಾಪಾಡು ಶಿವನೇ’ ಎಂದು ಅಡ್ಡಬಿದ್ದಳು.

ಅಬ್ಬೆ : ಕಾಡಿನಿಂದ ಬಂದ ಮಗ ಮಲಗಿ ಬಿಟ್ಟಿದ್ದಾನೆ
ಬಂದವನು ನುಡಿದಾಡಿಸಲಿಲ್ಲ. ಉಣಲಿಲ್ಲ
ಒದ್ದೆ ಬಟ್ಟೆ ತೆಗೆದುಡಲಿಲ್ಲ.

ಕುಲಗುರುಗಳು : ಸುಧಾರಿಸಿಕೊ ಮಗಳೆ, ಕುಂತು ಸಾದ್ಯಂತ ಹೇಳು – ಎಂದನು. ಅಬ್ಬೆ ಹುತ್ತೂ ಬೆರಳು ಜೋಡಿಸಿ ನಮಸ್ಕರಿಸುವ ಭಂಗಿಯಲ್ಲೇ ನಿಂತು ಹೇಳಿದಳು:

ನಿನ್ನೆ ಹಟ್ಟಿಯ ಹೈಕಳು ಕಾಡಲ್ಲಿ ಸೇರಿ
ಆಡಾಡುತ್ತ ಕಂದನಿಗೆ ಕಲ್ಲುಗೊಂಬೆಯ ಜೊತೆ
ಮದುವೆಯ ಮಾಡಿದರೆ,

ಮಾಯದ ಗಾಳಿ ಬೀಸಿ ಬೀಸಿ ಬಂದೋ
ಯಕ್ಷಿಯ ಮಳೆ ಸುರಿದೋ
ಆಗಬಾರದ್ದು ಆಯಿತಂತೆ ಮಗಂಗೆ.
ನನಗೆ ಮಗನಾದರೆ ನಿನಗೆ ಶಿಶುಮಗನಲ್ಲವೆ?
ನೀನೇ ಕೈ ಹಿಡಿದು ವಿದ್ಯಾ ಬುದ್ಧಿ ಹಾಡು ಕಲಿಸಿ, ಕಲಿತವಿದ್ಯನ ಮಾಡಲಿಲ್ಲವೇ?
ಈಗವನು ಹೆಂಗೆಂಗೋ ಆದರೆ ಹೆಂಗೆ?
ದೇವ ದೈವದ ಸಮ ನಿನ್ನ ಬಿಟ್ಟು ನಮಗಿನ್ಯಾರಿದ್ದಾರೆ?
ಕಾಪಾಡು ನನ್ನಪ್ಪಾ….

ಒಮ್ಮೆ ಕರೆದರೆ ಮೂರು ಬಾರಿ ಓ ಅನ್ನುತ್ತಿದ್ದ
ಚಂದಮುತ್ತ ನನ್ನೊಂದಿಗೆ ಮಾತಾಡಲೊಲ್ಲ. ಗುರುತು
ಹಿಡಿಯಲೊಲ್ಲ. ಬಂದವ ನೆಟ್ಟಗಿ ಹೋಗಿ ಮಲಗಿಬಿಟ್ಟ.
ಎಬ್ಬಿಸಿದರೆ ಹ್ಯಾಗೆ ಹ್ಯಾಗೋ ಕೈಕಾಲು ಆಡಿಸುತ್ತಾನೆ.
ಏನೇನೋ ಮುರಿದು ಮಾತುಗಳ ಕನವರಿಸುತ್ತಾನೆ.
ಮದ್ದು ಮಾಟವೋ ಅರಿಯೆ.

ಬೆಟ್ಟದ ಸಿರಿಮಾಯೀ
ಪ್ರತಿ ಮಂಗಳವಾರ ಹಾಲೋಗರ ನಿನಗೆ.
ಕುರಿ, ಕೋಳಿಯ ಬಾಡಿನ ರುಚಿ ನಿನಗೆ.
ನನ್ನ ಕಂದನ ನನಗೆ ಕೊಡು.

– ಎಂದು ಹರಕೆ ಹೊತ್ತಳು. ಇಷ್ಟಾದರೂ ಸುಮ್ಮನೆ ಕೂತ ಕುಲಗುರುವಿನ ನೋಡಿ, –

ಇನ್ನು ಸುಮ್ಮನೆ ಕುಂತಿದ್ದೀಯಲ್ಲಪ್ಪಾ.

– ಎಂದು ದನಿ ಮಾಡಿ ಬಿಕ್ಕಿ ಬಿಕ್ಕಿ ದುಃಖ ಮಾಡಿದಳು.

ಅಬ್ಬೆಯ ನುಡಿ ಸಾದ್ಯಂತ ಕೇಳಿ ಕಳವಳ ವೇದ್ಯವಾಗಿ ಕುಲಗುರು ಶಿಷ್ಯನ ಬಗ್ಗೆ ಚಿಂತಿಸಿದ. ಬೆಟ್ಟದ ಕಡೆ ಮುಖ ಮಾಡಿ ಸಿರಿಮಾಯಿಯ ಧ್ಯಾನಿಸುವಷ್ಟರಲ್ಲಿ ಕೋಲಕಾರ ಬಂದು ಚಾವಡಿ ಕಟ್ಟೆಯ ಹಿಂದೆ ಕಾಲುಮೆಟ್ಟಿ ಕೋಲುಕುಟ್ಟಿ ನಿಂತು “ಗುರುವೇ” ಎಂದ. “ಯಾರಪ್ಪ ನೀನು?”

“ಗುರುವೇ ಹೆಗಡೆ ಕರೀತಾನೆ. ಎಲ್ಲಿದ್ದರಲ್ಲಿಂದ, ಹೆಂಗಿದ್ದರೆ ಹಂಗೇ ಬರಬೇಕಪೋ” ಅಂದ. ನಿಂತಿದ್ದ ಸಿರಿಲಕ್ಕಿಗೆ, –

“ಬೆಟ್ಟದ ಮಾಯಿ ಎಲ್ಲ ನೋಡಿಕೊಳ್ಳುತ್ತಾಳೆ. ನಿಶ್ಚಿಂತಳಾಗಿರು ಮಗಳೇ. ನೀನಾಗಿ ಮಗನಿಗೆ ಕಠಿಣೋಕ್ತಿ ಆಡಬೇಡ. ನಾನೇ ಚಂದಮುತ್ತನ್ನ ಮಾತಾಡಿಸುತ್ತೇನೆ.”

– ಎಂದು ಹೇಳಿ ಮೂರು ಕಾಲಿನ ಆಸನದಲ್ಲಿ ಕುಂತುಕೊಂಡೇ ಅಬ್ಬೆಗೆ ಪಾದ ಕೊಟ್ಟ. ಮಂಡೆಯ ಮ್ಯಾಲೆ ಕೈಯಿಟ್ಟು ಹರಸಿ, ಬಗಲ ಚೀಲದ ಬಂಡಾರವ ಲಕ್ಕಿಯ ಹಣೆಗೆ ಹಚ್ಚಿ ಉಳಿದುದನ್ನು ಗಾಳಿಗೆ ತೂರಿ “ಬೆಟ್ಟದ ಮಾಯೀ” ಎಂದು ಎದ್ದು ಹೊರಟ.