ಕುಲಗುರುವಿನ ಪಾದ ಪಡೆದುಕೊಂಡು ಅಬ್ಬೆ ಬಂದದ್ದೇ – ಮಗನಲ್ಲಿಗೆ ಹೋದಳು. ಹಾಸಿಗೆಯಲ್ಲಿ ಮಗನಿರಲಿಲ್ಲ. ಹೊರಗೆ ಬಾವಿಯ ಬಳಿ, ಪಕ್ಕದ ಮೆಳೆಯಲ್ಲಿ ಹುಡುಕಿದಳು. ‘ಮಗಾ ಚಂದ್ರಾಮ, ಚಂದಮುತ್ತಾ’ ಎಂದು ಕರೆದಳು. ಮಗನ ದನಿ ಕೇಳಿಸಲಿಲ್ಲ. ಹೃದಯ ಪರಚಿಕೊಂಡಳು. ಹೆಸರಿಡದ ಭಯಗಳಾವರಿಸಿ ಗರ್ಭದಲ್ಲಿ ಚೂರಿ ಆಡಿಸಿದಂತಾಯ್ತು. ಗಡಬಡಿಸಿ ಹೋಗಿ ಗೋಡೆಯ ಬಿಲದಲ್ಲಿ ಸೀಮೆಸುಣ್ಣದಲ್ಲಿ ಬರೆದ ಕುಲದ ಸ್ವಾಮಿ ಚಂದ್ರಾಮನ ಮುಟ್ಟಿ ಹಣೆಗೊತ್ತಿಕೊಂಡಳು. ಅದಾಗಿ ಬೆಟ್ಟದ ಕಡೆ ಮುಖಮಾಡಿ ‘ಬೆನ್ನಿಗಿರು ಬೆಟ್ಟದ ಮಾಯೀ’ ಎಂದು ಬೆಟ್ಟದ ಮಾಯಿಗೆ ಹೇಳುತ್ತಿರುವಂತೆ ಕಣ್ಣೀರ ಜಲ ಸುರಿಯಿತು. ‘ಇಲ್ಲಿಯತನಕ ಕಾಡುವ ದೈವಂಗಳಿಂದ ಮಗನ ಕಾಪಾಡಿ ಒಂದು ಭವ ಪಾರಾದೆನೆಂದರೆ ಈಗ ಇನ್ನೊಂದು ಸುರುವಾಯ್ತಲ್ಲೇ ತಾಯಿ’ – ಎಂದು ಏಳೇಳು ಲೋಕಂಗಳ ಭಾರಿ ದುಃಖ ಮಾಡಿ ಕರುಳು ತಾಳದೆ ಕಾಡಿಗೆ ಹೊರಟಳು.

ದನಗಳ ಮೇಯಿಸುತ್ತಿದ್ದ ಬಾಲಕರಿದ್ದಲ್ಲಿಗೆ ಹೋದಳು. ಚಂದಮುತ್ತ ಇರಲಿಲ್ಲ. ಎಲ್ಲೆಂದು ಕೇಳಿದಳು. ಎಳೆ ಆಲದ ಮರ ತೋರಿಸಿದರು. ಅವನೊಬ್ಬನನ್ನೇ ಹೊರತು ಪಡಿಸಿದ್ದೀರಲ್ಲಾ? ಜಗಳಾಡಿದಿರಾ? ಎಂದಳು. ಹುಡುಗರು ಹೇಳಿದರು:

ಇಂದು ಚಂದಮುತ್ತ ನಿನ್ನಿನಂತಿಲ್ಲ ಅಬ್ಬೇ.
ಆಡಿದರೆ ಮಾತಾಡಿದ, ಇಲ್ಲದಿದ್ದರಿಲ್ಲ.
ಹತ್ತು ಮಾತಿಗೆ ಒಂದುತ್ತರ ಕೊಡುವ.
ಬೆಳಿಗ್ಗೆ ಬಂದಾಗಿನಿಂದ.
ಕ್ಷಿತಿಜವನ್ನು ಅದು ಕನ್ನಡಿಯೆಂಬಂತೆ
ನೋಡುತ್ತಾ ಕುಂತಿದ್ದಾನೆ.

ಕನ್ನಡಿಯಲ್ಲಿ ಯಾರು ಮೂಡಿರುವರೋ –
ಮೂಡಿದವರೊಂದಿಗೆ ಕೈಸನ್ನೆ ಬಾಯಿಸನ್ನೆಯಲ್ಲಿ
ಮಾತಾಡುವ.
ಮೂಡಿದವರ್ಯಾರೆಂದು ನಮಗೆ ಕಾಣಿಸದಾಗಿ
ಅವನ ಮಾತು ನಮಗೆ ತಿಳಿಯುತ್ತಿಲ್ಲ.
ನಮಗವನ ಕಣ್ಣಷ್ಟೇ ಕಾಣುತ್ತವೆ.
ಕಣ್ಣಲ್ಲಿ ನಾವಂತು ಮೂಡಲಿಲ್ಲ. ಮೂಡಿದ್ದು
ಬರೀ ಕ್ಷಿತಿಜ
ಕ್ಷಿತಿಜದಲ್ಲಿ ಒಮ್ಮೊಮ್ಮೆ ಕಾಮನಬಿಲ್ಲು ಕಂಡಂತೆ
ಅವನ ಕಣ್ಣು ಗಾಜು ಗಾಜಾಗಿ ಫಳಫಳ ಹೊಳೆಯುತ್ತಾವೆ.
ನಿಧಿಯ ಕಂಡವರಂತೆ, ಆದರೆ ಜಿಪುಣ
ಇನ್ನೊಬ್ಬರಿಗೆ ಗುಟ್ಟು ಬಿಡದಂತೆ
ಅಭಿನಯಿಸುವ.
ಒತ್ತಾಯ ಮಾಡಿದರೆ ಕಣ್ಣೀರು ಸುರಿಸುವನೆಂದು
ನಾವ್ಯಾರು ಕೇಳಲಿಲ್ಲ,
ಅವನು ಹೇಳಲಿಲ್ಲ.
ಅಕಾ, ಕೊಳಲುಲಿ ಕೇಳಿಬಂತು.
ನಿನ್ನ ದನಕರು ನಾವು ನೋಡಿಕೊಳ್ಳುತ್ತೇವೆ. ಚಿಂತೆ ಬೇಡವ್ವ”

ಎಂದರು. ಅವಸರ ಮಾಡಿ ಮಗನ ಕಡೆಗೆ ಧಾವಿಸಿದಳು.