ಚಂದಮುತ್ತ ಬಂಡೆ ಮ್ಯಾಲೆ ಕುಂತು ಕೊಳಲು ನುಡಿಸುತ್ತಿದ್ದ. ಹುಲ್ಲುಗಾವಲಿನಲ್ಲಿ ಹೂಗಾಳಿ ಬೀಸಿ ನುಡಿಸುತ್ತಿದ್ದ ಹಾಡು ಕಿವಿಗೆ ಹಿತಕರವಾಗಿತ್ತು. ಕಣ್ಣು ಮುಚ್ಚಿದ್ದ. ಹಾರ್ಯಾಡೋ ಕೂದಲಿನ ಹಣೆಯಂಚಿನ ಮ್ಯಾಲೆ ಎಳೆಬಿಸಿಲು ಆಟವಾಡುತ್ತಿತ್ತು. ಹೆಗಲ ಮ್ಯಾಲೆ ಕರಿ ಕಂಬಳಿಯಿತ್ತು. ಯಾವುದೋ ಕನಸನ್ನ ಕೊಳಲುಲಿಯ ಬಲೆ ಹಾಕಿ ಜಗ್ಗಿ ಜಗ್ಗಿ ತರುತ್ತಿದ್ದ ಹಾಗೆ ಕೊಳಲನ್ನು ಅಲುಗುತ್ತಿದ್ದ. ಅದು ಸಿಗದಾಗಿತ್ತು. ಬಲೆಯಿಂದ ಜಗುಳುತ್ತಿರಬೇಕು. ಕಣ್ಣುಗಳನ್ನ ಇನ್ನಷ್ಟು ಜೋರಾಗಿ ಮುಚ್ಚಿ ಇನ್ನೊಮ್ಮೆ ಬಲೆ ಎಸೆದು ಹೊಂಚುತ್ತಿದ್ದ. ಸಿಕ್ಕಿತೆಂಬಾಗ ನುಸುಳಿ ಕೈಜಾರಿದಂತೆ, ಕಣ್ಣೆದುರಲ್ಲೇ ಕರಗಿದಂತೆ ಆಟವಾಡಿಸುವ ಕನಸು.

ಅಬ್ಬೆ ಬಂದು ನಿಂತದ್ದು ಮಗಂಗೆ ಅರಿವಾಗಲಿಲ್ಲ. ಅಗಲೇ ಅಬ್ಬೆಗೆ ಗೊತ್ತಾದದ್ದು ‘ಎಲಾ ಶಿವನೆ! ಮಗ ಎಷ್ಟು ದೊಡ್ಡವನಾಗಿ ಬೆಳೆದಿದ್ದಾನಲ್ಲಾ!’ ಎಂದು.

ಭುಜಗಳ ವಿಸ್ತಾರ ಕಂಡು ಆನೆಮರಿ ನನ್ನಮಗ ಎಂದಳು.
ನೆತ್ತಿಯಲ್ಲಿ ಲೋಲಾಡುವ ನವಿಲುಗರಿ ನೋಡಿ
ಕೃಷ್ಣದೇವರಾಯ ನನ್ನ ಮಗ ಎಂದಳು.
ಜಗ್ಗಿ ಜಡೆ ಕಟ್ಟಿದ್ದರೂ ಬಿಡುಗಡೆಗೊಂಡು
ಕೆನ್ನೆ ಕತ್ತಿನ ಮ್ಯಾಲೆ ಆಟವಾಡುವ
ಮಿಡಿನಾಗರ ಜಡೆ ಕಂಡು
ಶಿವದೇವರು ನನ್ನ ಮಗರಾಯನೆಂದಳು.
ಹದಿನೆಂಟು ಗೊಂಡೆಗಳ ಲಂಗೋಟಿಯ
ಗಟ್ಟಿಮುಟ್ಟಾದ ತೊಡೆಸೊಂಟಗಳ ನೋಡಿ
ಕಾಮದೇವರು ನನ್ನ ಮಗರಾಯನೆಂದಳು.
ದೃಷ್ಟಿ ತಾಗೀತೆಂದು ಮನಸ್ಸಿನಲ್ಲೇ ನಿವಾಳಿ ಚೆಲ್ಲಿದಳು.

ಕೊಳಲೂದುವ ಮಗ ಈಗ ಸೋತ ಹಾಗಿತ್ತು. ಬೆನ್ನು ತಟ್ಟಿದಳು. ಸಮಾಧಿ ಭಂಗವಾಗಿ ಕಣ್ತೆರೆದ. ಎದುರಿಗೆ ಹಡೆದವ್ವ! ‘ಅಬ್ಬೇ’ ಎಂದ.

ಮಗನ ಚೆಲುವಿಕೆಯ ಚೋದ್ಯವ ನೋಡಿ ಆದ ಆನಂದ ಒಂದು ಕಡೆ, ಕುಲ ಗುರುವಿನ ನುಡಿಕೇಳಿ ಆದ ಆತಂಕ ಇನ್ನೊಂದು ಕಡೆ. ಆನಂದ ಆತಂಕಗಳಲ್ಲಿ ಅಬ್ಬೆಯ ಹೃದಯ ಹಸಿರೇರಿ ಹೆಚ್ಚು ನುಡಿದಾಡಿಸದೆ ಮಗನ ಗೂಡಿಗೆ ಕರೆತಂದಳು.

ಬಾವಿಯ ಕಿರುಯಾತದಿಂದ ನೀರು ಸೆಳೆಸೆಳೆದು ಹಂಡೆ, ಹರವಿ ತುಂಬಿ ಒಲೆಗೆ ಬೆಂಕಿಯಿಟ್ಟಳು. ಮಗನ ಮುಂದೆ ಕೂರಿಸಿಕೊಂಡು ಬೆಳ್ಳಿಯೆಣ್ಣೆ ಕುಡಿಕೆಯಿಂದ ಎಣ್ಣೆ ತಗೊಂಡು ಮಗನ ಕೈ ಕಾಲು ತಲೆ ತಂಪಾಗುವಂತೆ ಎಣ್ಣೆ ಹಚ್ಚಿದಳು. ತುಂಡು ಸಾಬಾನು ಸೀಗೆಪುಡಿ ತಗೊಂಡು ಬಾ ಜಳಕಕ್ಕೆಂದು ಕೈಹಿಡಿದು ಬಚ್ಚಲಿಗೆ ಕರೆದೊಯ್ದಳು.

ನೂರು ತಂಬಿಗೆ ಬಿಸಿನೀರೆರದು ಸಾಬೂನಿನಿಂದೊಮ್ಮೆ ಮೈಹಸನು ಮಾಡಿದಳು. ಸೀಗೆಯಿಂದೊಮ್ಮೆ ಶುದ್ಧಮಾಡಿದಳು. ನೂರು ತಂಬಿಗೆ ಬಿಸಿನೀರೆರೆದು ಬಿಸಿ ಮಾಡಿ, ತಣ್ಣೀರಲ್ಲಿ ತಂಪು ಮಾಡಿದಳು. ಮಡಿ ಪಾವಡದಿಂದ ತಾನೇ ಮುಂದಾಗಿ ತಲೆ ಒರೆಸಿ ಗೊಂಡೇದ ಲಂಗೋಟಿ ಕೊಟ್ಟಳು. ಮಗ ಮರೆಗೆ ಹೋಗುತ್ತಲೂ ಹೆಮ್ಮೆಯಿಂದ ಹಿಡಿದಿಟ್ಟ ನಗೆಯ ಮೆಲ್ಲಗೆ ಚೆಲ್ಲಾಡಿದಳು. ಚಂದಮುತ್ತ ದೇವರ ಬಿಲಕ್ಕೆ ಹೋಗಿ ಸಾವಿರದೆಂಟು ನಾಮಂಗಳಿಂದ ಕುಲದೇವರ ಹೊಗಳಿ ಹೊರಬಂದ.

ಅಬ್ಬೆ ಬಾಳೆಯೆಲೆ ಹಾಕಿ ನೀರು ಚಿಮುಕಿಸಿದಳು. ಮುದ್ದೆ ಬಡಿಸಿದಳು. ಎರಡು ಬಗೆ ಅನ್ನ ಬಡಿಸಿದಳು. ಮೂರುಬಗೆ ಬಾಡು ಬಡಿಸಿದಳು. ಆರು ಬಗೆ ಪಲ್ಯ ಪದಾರ್ಥ ಚಟ್ನಿಯ ಬಡಿಸಿ ತುತ್ತು ಮಾಡಿ ಮಾಡಿ ಮಗನ ಬಾಯಿಗಿಟ್ಟು ಉಣಿಸಿದಳು.

ಕಾವಲಿಗೆ ಹೋಗುತ್ತೇನೆಂದ ಮಗನ ತಡೆದು, ಮುಂದೆ ಕೂರಿಸಿಕೊಂಡು ಸೊಂಪಾಗಿ ಬೆಳೆದ ತಲೆಗೂದಲನ್ನು ಬಿಡಿಸಿ ಬೆನ್ನಿಗಿರಿಸಿ ಹಿತಕರ ಬಿಸಿಲಲ್ಲಿ ಹಾಯಾಗಿ ಕುಂತಳು. ಬಣ್ಣದ ಬಾಚಣಿಕೆಯಿಂದ ಮಗನ ತಲೆ ಬಾಚಿ ಹೇನು ಹೆಕ್ಕುತ್ತ ಕೇಳಿದಳು:

“ನಿನ್ನೆ ಮನೆಗೆ ಬಂದವನು ನನ್ನ ನುಡಿದಾಡಿಸದೆ ಇಂದು ಬೆಳಿಗ್ಗೆ ಕಾಡಿಗೆ ಓಡಿದೆಯಲ್ಲ, ಏನು ಕಾರಣ ಮಗನೆ?”

“ಏನಿಲ್ಲಬ್ಬೆ”

“ಮತ್ಯಾಕೆ ಹಾಗೆ ಹೇಳದೆ ಕೇಳದೆ ಕಾಡಿಗೆ ಓಡಿ ಹೋದೆ?”

“ರಾತ್ರಿ ಒಂದು ಕನಸು ಕಂಡೆ ಅಬ್ಬೆ”

“ಕನಸಿನಲ್ಲೇನು ಕಣ್ಣು ತುಂಬುವ ದನ ಕಂಡೆಯಾ? ಕಂಡಿದ್ದರೆ ಹೇಳು ಬೆಲೆ ಕೊಟ್ಟು ಕೊಳ್ಳುವಾ.”

“ಇಲ್ಲ ಅಬ್ಬೆ”

“ಇನ್ನೇನು ಪರಿಮಳದ ಹೂಬಳ್ಳಿ ಕಂಡೆಯಾ? ಕಂಡಿದ್ದರೆ ಹೇಳು, ಅಂಗಳದಲ್ಲೇ ಸಸಿ ನೆಟ್ಟು ಬೆಳೆಸುವಾ.”

“ಇಲ್ಲ ಅಬ್ಬೆ”

“ಸೊಬಗುಳ್ಳ ಬೆಡಗಿಯಾ ಕಂಡೆಯಾ?”

ಈಗ ಚಂದಮುತ್ತ ತಲೆ ತಿರುಗಿಸಿ ಅಬ್ಬೆಯ ಮುಖ ನೋಡಿದ.

“ಕನಸಿನಲ್ಲಿ ಚಂದ್ರನ ಕಂಡೆ ಅಬ್ಬೆ” – ಅಂದ.

“ಚಂದ್ರನ ಕಂಡೆಯೋ ಚಂದ್ರನಂಥ ಹೆಣ್ಣ ಕಂಡೆಯೋ!

ಇಂದಿನ ನಿನ್ನ ಕೊಳಲ ಹಾಡು ಪಸಂದಾಗಿತ್ತಪ್ಪ. ಹಾಡು

ನಮಗಿರಲಿ, ಹಾಡಿನ ಹುಡುಗಿ ನಿನಗಿರಲೇಳು”

– ಎನ್ನುತ್ತ ಅಕ್ಕರೆ ಮತ್ತು ಆತಂಕದಿಂದ ಲಟಿಕೆ ಮುರಿದಳು. ಮಗ ನಗುತ್ತ ನವಿಲುಗರಿ ತುರಾಯಿ ನೆತ್ತಿಯ ಮುಡಿಗಿಟ್ಟು, ಕರಿ ಕಂಬಳಿಯ ಹೆಗಲಿಗೆ ಹೊತ್ತು, ಬೆಳ್ಳಿ ಹಿಡಿಯ ಕಿರುಗತ್ತಿಯ ಎಡಸೊಂಟಕ್ಕೆ ಜೋತು, ಬಣ್ಣದ ಕೊಳಲು ಬಲಸೊಂಟಕ್ಕೆ ಜೋತು ಕಕ್ಕೆದೊಣ್ಣೆ ಕೈಲಿ ಹಿಡಕೊಂಡು, ಹಿಮ್ಮಣ್ಣಿ ಚೀಲದಲ್ಲಿ ಎಲಡಿಕೆ ಸುಣ್ಣ ಕಡ್ಡೀಪುಡಿ ಹಾಕ್ಕೊಂಡು ಹೊರಟ. ಅಬ್ಬೆಯ ಕಣ್ಣು ಹಾದಿಯಾದವು.