ಕುಲಗುರು ಬರುತ್ತಿರುವುದ ಕಂಡು ಚಾವಡಿಯಲ್ಲಿ ಹೂಗೆಲಸದ ಕರಿಕಂಬಳಿ ಹಾಸಿ ಅಕ್ಷತೆಯಲ್ಲಿ ಚಿತ್ರ ಬರೆದು, ತಾಂಬೂಲ ತಟ್ಟೆ ಅಣಿಮಾಡಿಟ್ಟು ಹಟ್ಟಿಯಾಳ್ತನ ಮಾಡುವ ಹೆಗಡೆ ಕಾದು ನಿಂತ. ಅಷ್ಟರಲ್ಲಿ ಬಗಲ ಚೀಲದ, ಬಿಳಿತಲೆಯ ಕುಲಗುರು ಕೋಲೂರಿಕೊಂಡು ಹಳಬನ ಹಿಂದಿನಿಂದ ಬಂದ. ‘ಬಾ ಶಿವನೇ’ ಎಂದು ಕರವೆತ್ತಿ ನಮಸ್ಕಾರ ಮಾಡಿದ ಹೆಗಡೆಗೆ ಬಲಗೈಎತ್ತಿ ಹರಸಿ ಬಗಲ ಚೀಲದ ಬಂಡಾರ ತೆಗೆದು ಹಣೆಗಂಟಿಸಿ “ಬೆಟ್ಟದ ಮಾಯೀ” ಎನ್ನುತ್ತ ಉಳಿದ ಬಂಡಾರವನ್ನು ಗಾಳಿಯಲ್ಲಿ ತೂರಿದ. ಕರಿಕಂಬಳಿ ಗದ್ದಿಗೆಯಲ್ಲಿ ಕುಂತು ಬಾಯಾರಿಕೆಗೆ ಬೆಲ್ಲ ನೀರು ಕುಡಿದ. ‘ಬೆಟ್ಟದ ಮಾಯೀ’ ಎನ್ನುತ್ತ ಕುಡಿದುದನ್ನ ತಾಯಿಗರ್ಪಿಸಿ ಹೆಗಡೆ ಕಡೆ ನೋಡಿ.

“ಏನು ಕರೆಸಿದ್ದು ನನ್ನಪ್ಪ?” ಎಂದ.

“ಈಗ ಮೂರು ದಿನದಿಂದ ಒಂದೇ ಸ್ವಪ್ನ ಕಾಣಿಸುತ್ತ ಇದೆ. ಸ್ನಪ್ನದಲ್ಲಿ ಏನೋ ದರ್ಶನವಾಗಿ ಆತಂಕದಿಂದ ಹೇಳಿಕಳಿಸಬೇಕಾಯ್ತು.”

“ಸ್ವಪ್ನದಲ್ಲಿ ಕಂಡದ್ದು ದೈವವೋ, ಸೇಡು ಮಾರಿಯೋ?”

“ಹೊಸ ದೈವ ಕಾಣಿಸಿಕೊಂಡು ಮೂರು ದಾರಿ ಕೂಡುವಲ್ಲಿ ಅವತಾರವಾಗಿದ್ದೇನೆ. ಮನ್ನಣೆ ಮಾಡಿ ಗುಡಿ ಗುಂಡಾರ ಕಟ್ಟಿಸಿಕೊಟ್ಟರೆ ಹಿಡಿದ ಮಣ್ಣು ಚಿನ್ನ ಮಾಡೇನು. ತಪ್ಪಿದರೆ ಬೂದಿ ಮಾಡೇನೆಂದು ಹೇಳಿತಪ್ಪಾ! ಏನು ಮಾಡಬೇಕು? ನೀನು ತೋರುವ ಬೆಳಕ ಅನುಸರಿಸಿ ನಡೆವವರು ನಾವು”

“ಇದ್ಯಾವ ಹೊಸ ದೈವವೋ ಕಾಣೆನಲ್ಲ!”

ಎನ್ನುತ್ತಿರುವಂತೆ ತನ್ನ ಕನಸಿನ ನೆನಪಾಯ್ತು

“ನಿನ್ನೆ ಭೂತಸಂಚಾರದ ವ್ಯಾಳ್ಯಾದಲ್ಲಿ
ನನಗೂ ಒಂದು ಕನಸಾಯ್ತಲ್ಲ ನನ್ನಪ್ಪ!
ಆಕಾಶದ ಗಂಟೆ ಢಣಲೆಂದು ಹೊಡೆದವು.
ಬೆಟ್ಟದ ಮೈತುಂಬಿ ಕಾಡು ಗಿಡಮರ ಒಡಮುರಿದು
ಹೂ ಹೂ ಚೆಲ್ಲಿ ಹುಡದಿಯಾಡಿದವು.
ಝಗ್ಗಂತ ಬೆಳಕಲ್ಲಿ ಫಳ್ಳಂತ ಹೊಳೆವಾಕಾಶದಿಂದ
ಯಾರೋ ಉನ್ನತ ದೇವತೆ
ಏಣಿಯಿಲ್ಲದೆ ಕೆಳಗಿಳಿದು ಬಂದುದು ಕಂಡೆ
ಮೂರು ದಾರಿ ಸೇರುವಲ್ಲಿ ದೀವಿಗೆಯ
ಬೆಳಕಾಡಿದ್ದ ಕಂಡೆ
ಫಕ್ಕನೆಚ್ಚರವಾಗಿ ಸಳಸಳ ಮೈಬೆವರಿಳಿದವು !
ನನ್ನ ಕನಸಿಗೂ ನಿನ್ನ ಕನಸಿಗೂ ಸಂಬಂಧವಿರಬಹುದ?” – ಎಂದ

ಹೆಗಡೆ : ನಿನ್ನ ಕನಸಿನಲ್ಲೂ
ಮೂರು ದಾರಿ ಸೇರುವಲ್ಲಿ ದೀವಟಿಗೆ ಬೆಳಕಾಡಿದ್ದು
ವಿಶೇಷವೇ. ಹೋಗಿ ನೋಡಿಕೊಂಡು ಬರಬಹುದಲ್ಲ?

ಹಂಗೇ ಆಗಲೇಳು –

ಎಂದು ಕುಲಗುರು ಹೊರಡುವ ಉತ್ಸಾಹ ತೋರಿದ.