ಕುಲಗುರು, ಹೆಗಡೆ ಮತ್ತು ಹಟ್ಟಿಯ ಹಿರೀಕರು ಕೂಡಿಕೊಂಡು ಕಾಡಿನ ಮಧ್ಯೆ ಮೂರು ದಾರಿ ಸೇರುವಲ್ಲಿಗೆ ಹೋಗಿ ಹುಡುಕತೊಡಗಿದರು. ದನಗಾಹಿ ಬಾಲಕರಾಗಲೇ ಅಲ್ಲಿದ್ದರು. ಮತ್ತು ಹಿರೀಕರು ಏನು ಹುಡುಕುತ್ತಿದ್ದಾರೆಂದು ತಿಳಿಯದೆ ಸೋಜಿಗಗೊಂಡು ಅವರೂ ಅವರೊಂದಿಗೆ ಹೆಜ್ಜೆ ಹಾಕಿದರು. ಕೊನೆಗೆ ಎಲ್ಲೂ ಸುಳಿವು ಸಿಕ್ಕದಿದ್ದಾಗ ಕುಲಗುರುವಿಗೆ ಸಿರಿಲಕ್ಕಿ ಹೇಳಿದ್ದು ನೆನಪಾಗಿ “ಏನ್ರೆಪ್ಪ, ಇಲ್ಲೆಲ್ಲಾದರೂ ಶಿಲಾಮೂರ್ತಿ ಕಂಡಿತ?” ಎಂದರು. ಹುಡುಗರು ಉತ್ಸಾಹದಿಂದ ಆಲದಮರದ ಬಳಿಯ ಶಿಲಾಮೂರ್ತಿಯ ತೋರಿಸಿದರು. ಆದರೆ ನಿನ್ನೆ ತಾವು ಅದರೊಂದಿಗೆ ಆಡಿದಾಟ ಹೇಳಲಿಲ್ಲ. ಹೇಳಲೆಂದು ಬಾಯಿ ತೆಗೆದ ಸಣ್ಣ ಹೆಗಡೆ ಚಿನ್ನಮುತ್ತನ ಬಾಯನ್ನ ಯಾರೋ ಮುಚ್ಚಿದಂತಾಗಿ ಅವನೂ ಬಾಯಿ ಬಿಡಲಿಲ್ಲ.

ಮೆಳೆಯಲ್ಲಿದ್ದ ಶಿಲಾಮೂರ್ತಿ ತುಂಬ ಸುಂದರವಾದ ಯಕ್ಷಿಯ ಮೂರ್ತಿ, ಲೋಕ ಲೌಕಿಕ ಕಂಡು ಬೆರಗಿನಲ್ಲಿ ಬಟ್ಟಲಗಣ್ಣು ತೆರೆದ ಹಾಗಿತ್ತು. ಬಲಗೈ ಆಶೀರ್ವದಿಸುವ ಭಂಗಿಯಲ್ಲಿತ್ತು. ಬಲಭುಜದ ಮ್ಯಾಲೆ ಗಿಣಿ ಕುಂತಿತ್ತು. ಎಡಗೈ ತೊಡೆ ಮಧ್ಯದ ಮರ್ಯಾದೆ ಮುಚ್ಚಿಕೊಂಡಿತ್ತು. ಮದುವೆಯಾಟದಲ್ಲಿ ಚಂದಮುತ್ತ ಕತ್ತಿಗೆ ಹಾಕಿದ್ದ ಅಮೃತವಲ್ಲಿ ಹಾಗೆ ಇತ್ತು. ಕುಲಗುರುವಿಗೆಲ್ಲ ಗೊತ್ತಾಗಿ ಹೋಯ್ತು. ಆ ವಿಷಯ ಅವನು ಚರ್ಚಿಸಲಿಲ್ಲ. ಯಕ್ಷಿಯ ಗುಡಿ ಕಟ್ಟುವುದಕ್ಕೆ ಮನೆಗೊಂದಾಳು ಬರಬೇಕೆಂದು ಕುಳವಾಡಿ ಡಂಗುರ ಸಾರಿದ. ಮಾರನೆಯ ದಿನ ಹೆಗಡೆಯ ಹಿರಿತನದಲ್ಲಿ ಕಲ್ಲೊಡ್ಡರು ಮಣ್ಣೊಡ್ಡರು ಸೇರಿ ಮನೆಗೊಂದಾಳಿನಂತೆ ಮೆಳೆಗೆ ಬಂದರು. ಸುತ್ತ ಹಸನು ಮಾಡಿ ಒಲಿದು ಬಂದ ಯಕ್ಷಿ ಕುಂತ್ಕೋಳ್ಳೋದಕ್ಕೊಂದು ತಳ ನಿಂತ್ಕಳ್ಳೋದಕ್ಕೊಂದು ನೆಲೆಯಾಗುವಂಥ ಗುಡಿಯ ಕಟ್ಟಿ ಗುಡಿಗೆ ಸುಣ್ಣ ಬಣ್ಣ ಬಳೆದರು. ಬಲಗೋಡೆಯ ಮೇಲೆ ಸೂರ್ಯನಾರಾಯಣಸ್ವಾಮಿ, ಎಡಗೋಡೆಯ ಮ್ಯಾಲೆ ಚಂದ್ರಾಮಸ್ವಾಮಿಯ ಚಿತ್ರ ಬರೆದರು. ಶಿಖರದ ಮ್ಯಾಲೆ ಕಮಳದ ಕಸೂತಿಯಿರುವ ಜೆಂಡಾ ಹಾರಿಸಿದರು. ಹುಣ್ಣಿವೆ ದಿನ ಪೂಜೆಯೆಂದು ಸುತ್ತೂ ಸೀಮೆಯ ದೇವದೈವಂಗಳನ್ನು ಪಾಲ್ಕೀ ಸಮೇತ ಕರೆಸಿದರು. ಗುರ್ನಾಲು ಸಿಡಿದು ಕೊಂಬು ಊದಿ ವಾದ್ಯ ಮೊಳಗಿ ಎತ್ತಿದ ಸತ್ತಿಗೆ ಮರೆದು ಸರ್ವ ಬಿರುದಿಂದ ಮೆರವಣಿಗೆ ಹೊರಟು ಚಾಂಗುಭಲೆಯೆಂಬ ನುಡಿಯ ನುಡಿಯಾಯಿತೆಲ್ಲೆಡೆಗೆ.

ಹುಣ್ಣಿಮೆಯಂದು ಕುಲಗುರು ಸುಮೂಹೂರ್ತದಲ್ಲಿ ಪೂಜೆ ಸುರುಮಾಡಿ ಏಳು ಗಂಗೆಯ ಕುಂಕುಮ ನೀರಿನಿಂದ ಯಕ್ಷಿಗೆ ಸ್ನಾನ ಮಾಡಿಸಿದ. ಏಳು ಗಂಗೆಯ ಅರಿಷಿಣ ನೀರಿನಿಂದ ಸ್ನಾನ ಮಾಡಿಸಿದ. ನೂರು ಕುರಿ, ನೂರು ಕೋಳಿ, ನೂರು ಮಡಕೆ ಈಚಲ ರಸವ ಅರ್ಪಿಸಿ ಇಪ್ಪತ್ತು ಮೊಳದ ಬಣ್ಣದ ದಟ್ಟಿ, ನೂರು ಮೊಳದ ಹೂವಿನ ದಂಡೆ, ಅಕ್ಷತೆ ಅರಿಷಿಣ ಕುಂಕುಮವ ಬೆಳ್ಳಿಯ ತಟ್ಟೆಯಲ್ಲಿಟ್ಟು ಮೂರ್ತಿಯ ಮುಂದೆ ಸರಿಸಿ.

“ಬಾಗಿನ ಭಕ್ತಿ ನಮ್ಮದು, ಸತ್ಯದ ಶಕ್ತಿ ನಿನ್ನದು
ಕೈಯಾರೆ ತಗೊಂಡು ಭಕ್ತರ ಹರಸವ್ವಾ”

– ಎಂದು ಬಾಗಿದ ನಮಸ್ಕಾರವ ಮಾಡಿದ್ದೇ ಬಾಗಿನ ತಟ್ಟೆಯನ್ನು ತಾನು ಮುಟ್ಟುವುದಿಲ್ಲವೆಂಬಂತೆ ತಟ್ಟೆ ದೂರ ಸರಿಯಿತು.

ಮನುಷ್ಯರೇ ಮುದ್ದಾಂ ಸರಿಸಿದಂತೆ ತಟ್ಟೆ ಸರಿದಾಗ ಕುಲಗುರುವಿಗೆ ಸಿರಿಲಕ್ಕಿಯ ಮಾತು ನೆನಪಾಗಿ ಚಂದಮುತ್ತನ್ನ ಮುಂದೆ ಕರೆದು “ನೀನು ಬಾಗಿನವಿಡು ಕಂದಾ” ಎನ್ನುವಷ್ಟರಲ್ಲಿ ಹೆಗಡೆ ಮುಂದೆ ಬಂದು ಚಿನ್ನಮುತ್ತನ್ನ ಕುಲಗುರುವಿನ ಪಾದದ ಮ್ಯಾಕೆ ಚೆಲ್ಲಿ “ಇವನಿಡಲಿ ಗುರುಪಾದವೇ” ಅಂದ. ಕುಲಗುರು ಅಪ್ಪಣೆ ಕೊಡುವ ಮೊದಲೆ ಚಿನ್ನಮುತ್ತ ಬಾಗಿನ ತಟ್ಟೆಯ ತಗೊಂಡು ಯಕ್ಷಿಯ ಮುಂದಿಟ್ಟು ಬಾಗಿದ ನಮಸ್ಕಾರವ ಮಾಡಿ ಕಣ್ಣು ಮುಚ್ಚಿ ನಿಂತುಕೊಂಡ. ಈ ಬಾರಿಯೂ ತಟ್ಟೆ ದೂರ ಸರಿದು ಬಂತು.

ಚಿನ್ನಮುತ್ತ ಮತ್ತು ಹೆಗಡೆಯ ಮುಖ ಕಪ್ಪಿಟ್ಟವು. ಈ ತನಕ ಸುಮ್ಮನಿದ್ದ ಕುಲಗುರು ಈಗ ಚಂದಮುತ್ತನಿಗೆ ಸನ್ನೆ ಮಾಡಿದ.

ಚಂದಮುತ್ತ ನಿನ್ನೆಯ ಘಟಿತವ ನೆನೆದು ಗಡಗಡ ನಡುಗಿದ. ಯಕ್ಷಿಯ ಗ್ಯಾನದಲ್ಲಿ ನೂರೊಂದು ನೆನೆದ. ತಂದೆ ತಾಯಿಯ ನೆನೆದ. ಸುತ್ತೇಳು ಬಳಗವ ನೆನೆದ. ಬೆಟ್ಟದ ಮಾಯಿಯ ನೆನೆದು ಕುಲದೇವರ ಸ್ಮರಿಸಿ ಬಾಗಿನ ತಟ್ಟೆಯ ದೇವಿಯ ಮುಂದಿಟ್ಟು ನಿಂತ. ಕೂಡಿದವರೆಲ್ಲ ನೆತ್ತಿಯ ಮ್ಯಾಲೆ ಕೈಹೊತ್ತು ಭಕ್ತಿಯ ಭಾವದಲ್ಲಿ ನಿಂತಿರುವಾಗ ದೇವಿ ಬಾಗಿನವ ಒಪ್ಪಿಕೊಂಡಳು. ಶಿಲಾಮೂರ್ತಿಗೆ ದಟ್ಟಿ ಉಡಿಸಿ ತಲೆಮ್ಯಾಲೆ ಹೂದಂಡೆಯಿಟ್ಟ. ಎಲ್ಲರಿಗೂ ಭಕ್ತಿಯ ಆವೇಶವಾಗಿ ಬಲಿನೀಡಿ ಕುಣಿದಾಡಿದರು. ಚಂದಮುತ್ತನ್ನ ‘ದೈವದ ಪಾದಕ್ಕೆ ಒಪ್ಪಿದ ಶಿಶುಮಗ ನೀನೊಬ್ಬನೇ’ ಎಂದು ಕೊಂಡಾಡಿದರು. ನಿತ್ಯದ ಬಾಗಿನಪೂಜೆ ಅವನದೆಂದು ಗೊತ್ತುಮಾಡಿ ಬಿಳಿಯ ಕಂಬಳಿ, ಇಪ್ಪತ್ತು ಮೊಳದ ದಟ್ಟಿ, ಏಳು ಸೇರಡಿಕೆ, ಏಳು ಕಟ್ಟು ವೀಳ್ಯೆದೆಲೆ, ಹಬ್ಬ ಹರಿದಿನಗಳಲ್ಲಿ ಭಕ್ತಾದಿಗಳು ಕೊಟ್ಟ ನೈವೇದ್ಯ ಅವನದೇ ಎಂದು ಹಕ್ಕುಗಳ ನಿರ್ಧರಿಸಿದರು. ಹುಣ್ಣಿವೆ ಅಮಾವಾಸ್ಯೆಗೊಮ್ಮೆ ವ್ರತ, ವರ್ಷಕ್ಕೊಮ್ಮೆ ಮೂರುದಿನದ ಪರಿಸೆ ಮೆರೆಸುವುದೆಂದು ತೀರ್ಮಾನಿಸಿ ಎಲ್ಲರೂ ಹೊಸದೈವದ ಒಕ್ಕಲಾದರು.