ಚಕ್ಕೋತನ ಸೊಪ್ಪು ಚಳಿಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಸೊಪ್ಪು ತರಕಾರಿ. ಇದು ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯ.

ಪೌಷ್ಟಿಕ ಗುಣಗಳು : ಚಕ್ಕೋತ ರುಚಿಯಾದ ಸೊಪ್ಪು ತರಕಾರಿಯೇ ಅಲ್ಲದೆ ಹಲವಾರು ಪೌಷ್ಟಿಕ ಗುಣಗಳನ್ನೂ ಸಹ ಹೊಂದಿದೆ. ವಾರಕ್ಕೊಮ್ಮೆಯಾದರೂ ಇದನ್ನು ಬಳಸಬೇಕು.

೧೦೦ ಗ್ರಾಂ ಚಕ್ಕೋತ ಸೊಪ್ಪಿನಲ್ಲಿರುವ ವಿವಿಧ ಪೋಷಕಾಂಶಗಳು

ತೇವಾಂಶ – ೯೩.೦ ಗ್ರಾಂ
ಪ್ರೋಟೀನ್ – ೩.೭ ಗ್ರಾಂ
ನಯಾಸಿನ್ – ೦೦.೮ ಗ್ರಾಂ
ಒಟ್ಟು ಖನಿಜ ಪದಾರ್ಥ – ೨೩೫ ಮಿ.ಗ್ರಾಂ
ಕ್ಯಾಲ್ಸಿಯಂ – ೧೫೦. ಮಿ.ಗ್ರಾಂ
’ಸಿ’ ಜೀವಸತ್ವ – ೩೫ ಮಿ.ಗ್ರಾಂ
ಶರ್ಕರ ಪಿಷ್ಟ – ೨.೫ ಗ್ರಾಂ
ಕೊಬ್ಬು – ೦.೪ ಗ್ರಾಂ
ನಾರು – ೦.೮ ಗ್ರಾಂ
ರಂಜಕ – ೮೦ ಮಿ.ಗ್ರಾಂ
ಕಬ್ಬಿಣ – ೪.೨ ಮಿ.ಗ್ರಾಂ

ಔಷಧೀಯ ಗುಣಗಳು : ಚಕ್ಕೋತ ಸೊಪ್ಪಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಶರೀರಕ್ಕೆ ತಂಪನ್ನುಂಟು ಮಾಡುತ್ತದೆ; ಮಲಬದ್ಧತೆಯಿಂದ ನರಳುತ್ತಿರುವವರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಬೇಕು. ಇದರ ಸೇವನೆಯಿಂದ ಹಸಿವು ಹೆಚ್ಚುವುದಲ್ಲದೆ ನರಗಳು ಬಲಗೊಳ್ಳುತ್ತವೆ. ಇದು ಮೂತ್ರಕೋಶದಲ್ಲಿನ ಕಲ್ಲುಗಳನ್ನು ನಿವಾರಿಸಬಲ್ಲುದು.

ಉಗಮ ಮತ್ತು ಹಂಚಿಕೆ : ಇದರ ತವರೂರು ಭಾರತ. ಇಂದು ಹಲವಾರು ದೇಶಗಳಲ್ಲಿ ಇದನ್ನು ಬೆಳೆದು ಬಳಸುತ್ತಿದ್ದಾರೆ.

ಸಸ್ಯ ವರ್ಣನೆ : ಚಕ್ಕೋತ ಚಿನೊಪೋಡಿಯೇಸೀ ಕುಟುಂಬಕ್ಕೆ ಸೇರಿದ ವಾರ್ಷಿಕ ಮೂಲಿಕೆ. ಪೂರ್ಣ ಬೆಳೆದಾಗ ೧.೫ ರಿಂದ ೨.೦ ಮೀಟರ್ ಎತ್ತರವಿರುತ್ತದೆ. ಇದರ ಸಸಿಗಳು ಕವಲು ರೆಂಬೆಗಳಿಂದ ಕೂಡಿದ್ದು ನೆಟ್ಟಗೆ ಬೆಳೆಯುವ ಸ್ವಭಾವವನ್ನು ಹೊಂದಿರುತ್ತವೆ. ಎಲೆಗಳು ಆಕಾರದಲ್ಲಿ ಬಾಣದ ತುದಿಯಂತೆ. ಎಲೆಗಳಿಗೆ ಸಣಕಲಾದ ತೊಟ್ಟು, ೧೦ ರಿಂದ ೧೨ ಸೆಂ.ಮೀ. ಉದ್ದ. ಸಸಿಗಳು ಹಸುರು ಬಣ್ಣ. ಎಲೆಗಳು ತೆಳ್ಳಗೆ, ತುದಿ ಚೂಪು, ಬಣ್ಣ ದಟ್ಟ ಹಸುರು, ಕೆಲವೊಮ್ಮೆ ಇತರ ಬಣ್ಣಗಳು. ಎಲೆಗಳ ಮೇಲೆಲ್ಲಾ ಹರಳು ರೂಪದ ನವಿರು ಪುಡಿ ಇರುತ್ತದೆ. ಎಲೆಗಳ ತಳಭಾಗದಲ್ಲಿನ ನರಬಲೆಕಟ್ಟು ಸ್ಫುಟ. ಸಸಿಗಳು ಬಲಿತಂತೆಲ್ಲಾ ಅವುಗಳಲ್ಲಿ ನಾರಿನ ಅಂಶ ಜಾಸ್ತಿಯಾಗುತ್ತದೆ. ಹೂವು ಒತ್ತಾಗಿದ್ದು ತೆನೆಗಳಲ್ಲಿ ಮೂಡುತ್ತವೆ. ಬೀಜಗಳ ಮೇಲಿನ ಕವಚ ಸಿಪ್ಪೆ ಒರಟು.

ಹವಾಗುಣ : ಇದರ ಬೇಸಾಯಕ್ಕೆ ಯಥೇಚ್ಛವಾದ ಬಿಸಿಲು ಬೆಳಕುಗಳು ಅಗತ್ಯ. ಚಳಿಗಾಲದಲ್ಲಿ ಚೆನ್ನಾಗಿ ಫಲಿಸುತ್ತದೆ.

ಭೂಗುಣ : ಇದಕ್ಕೆ ನೀರು ಬಸಿಯುವ ಮಣ್ಣು ಬೇಕು. ಕಡಿಮೆ ತೇವ ಹಿಡಿದಿಡುವ ಮಣ್ಣಾದರೂ ಅಡ್ಡಿಯಿಲ್ಲ. ಇದನ್ನು ಚೌಳು ಮಣ್ಣಿನ ಭೂಮಿಯಲ್ಲೂ ಸಹ ಬೆಳೆಯಬಹುದು. ತೇವದಿಂದ ಕೂಡಿದ ಮಣ್ಣಾದರೆ ಸೊಪ್ಪು ರಸಭರಿತವಿದ್ದು ತಿನ್ನಲು ರುಚಿಯಾಗಿರುತ್ತದೆ.

ತಳಿಗಳು : ಇದರಲ್ಲಿ ಹೆಸರಿಸುವಂತಹ ತಳಿಗಳು ಕಡಿಮೆ. ಚಕ್ಕೋತ ನಂಬರ್ ೮ ಮತ್ತು ಚಕ್ಕೋತ ನಂಬರ್ ೧೧ ಸುಧಾರಿತ ತಳಿಗಳಾಗಿವೆ. ಇವು ಸ್ಥಳೀಯ ತಳಿಗಳಿಗಿಂತ ಸುಮಾರು ಹದಿನೇಳು ಪಟ್ಟು ಹೆಚ್ಚು ಇಳುವರಿ ಉತ್ಪಾದಿಸಬಲ್ಲವು. ಇವುಗಳ ಕಾಂಡ ಅಥವಾ ದಂಟು ಮೃದುವಾಗಿರುತ್ತದೆ.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ಚೌಕಾಕಾರದ ಇಲ್ಲವೇ ಆಯಾಕಾರದ ಪಾತಿಗಳನ್ನು ಸಿದ್ಧಗೊಳಿಸಿ, ಬೀಜ ಬಿತ್ತಬೇಕು. ಬಿತ್ತುವ ಮುಂಚೆ ಪೂರ್ಣ ಪ್ರಮಾಣದ ತಿಪ್ಪೆಗೊಬ್ಬರವನ್ನು ಸಮನಾಗಿ ಹರಡಿ ಮಣ್ಣಿನಲ್ಲಿ ಬೆರೆಸಬೇಕು. ಕೈಯಿಂದ ಚೆಲ್ಲಿ ಬಿತ್ತುವುದುರ ಬದಲಾಗಿ ೧೫ ಸೆಂ.ಮೀ. ಅಂತರದ ತೆಳ್ಳನೆಯ ಗೀರು ಸಾಲುಗಳಲ್ಲಿ ಬಿತ್ತಿ, ಅನಂತರ ಸಸಿಗಳನ್ನು ತೆಳುಗೊಳಿಸಬಹುದು. ಬೀಜವನ್ನು ಹೆಚ್ಚು ಆಳಕ್ಕೆ ಬಿತ್ತಬಾರದು; ಬಿತ್ತುವ ಆಳ ಹೆಚ್ಚೆಂದರೆ ಅರ್ಧದಿಂದ ಒಂದು ಸೆಂ.ಮೀ. ಅಷ್ಟೆ. ಬಿತ್ತುವ ಕಾಲಕ್ಕೆ ಮಣ್ಣು ಹಸಿಯಾಗಿರುವುದು ಬಹು ಮುಖ್ಯ. ಬಿತ್ತುವ ಮುಂಚೆ ಬೀಜವನ್ನು ನೀರಿನಲ್ಲಿ ಒಂದು ರಾತ್ರಿಯ ಮಟ್ಟಿಗೆ ನೆನೆಸಿಟ್ಟರೆ ಅವು ಬೇಗ ಮೊಳೆಯುತ್ತವೆ. ವರ್ಷದ ಯಾವ ಕಾಲದಲ್ಲಾದರೂ ಬಿತ್ತಬಹುದಾದರೂ ಚಳಿಗಾಲವಾದರೆ ಉತ್ತಮ. ಸುಮಾರು ನಾಲ್ಕೈದು ದಿನಗಳಲ್ಲಿ ಬೀಜ ಮೊಳೆಯುತ್ತವೆ. ಹೆಕ್ಟೇರಿಗೆ ೨.೫ ರಿಂದ ೪.೦ ಕಿ.ಗ್ರಾಂ ಬೀಜ ಬೇಕಾಗುತ್ತದೆ.

ಗೊಬ್ಬರ : ಈ ಸೊಪ್ಪಿನ ಬೆಳೆಗೆ ಸೇಂದ್ರಿಯ ಗೊಬ್ಬರದ ಹೊರತಾಗಿ ಮತ್ತೆನನ್ನೂಕೊಡುವ ರೂಢಿ ಇಲ್ಲ. ಸಾಮಾನ್ಯವಾಗಿ ಹೆಕ್ಟೇರಿಗೆ ೧೫ ರಿಂದ ೨೦ ಟನ್ ತಿಪ್ಪೆಗೊಬ್ಬರ ಕೊಡುತ್ತಾರೆ. ರಾಸಾಯನಿಕ ಗೊಬ್ಬರಗಳ ಅಗತ್ಯದ ಬಗ್ಗೆ ಅಧ್ಯಯನ ಮಾಡುವುದು ಅವಶ್ಯಕ.

ನೀರಾವರಿ : ಹವಾ ಮತ್ತು ಭೂಗುಣಗಳನ್ನನುಸರಿಸಿ ಎರಡು -ಮೂರು ದಿನಗಳಿಗೊಮ್ಮೆ ನೀರು ಕೊಡಬಹುದು.

ಮಧ್ಯಂತರ ಬೆಳೆಯಾಗಿ : ಇದನ್ನು ಶುದ್ಧ ಬೆಳೆಯಾಗಿ ಬೆಳೆಯುವುದು ಕಡಿಮೆ; ಮಿಶ್ರ ಬೆಳೆಯಾಗಿ ಬೆಳೆಯುವುದೇ ಹೆಚ್ಚು. ಆಲೂಗೆಡ್ಡೆ, ಈರುಳ್ಳಿ, ತಿಂಗಳ ಹುರುಳಿ ಮುಂತಾದುವುಗಳಲ್ಲಿ ಇದನ್ನು ಮಿಶ್ರಬೆಳೆಯಾಗಿ, ದಿಂಡುಗಳ ಮೇಲೆ ಅಥವಾ ನೀರು ಕಾಲುವೆಗಳ ಉದ್ದಕ್ಕೆ ಬಿತ್ತಿ ಬೆಳೆಯುವುದುಂಟು; ಮುಖ್ಯಬೆಳೆ ಕೊಯ್ಲಿಗೆ ಬರುವ ಮುಂಚೆಯೇ ಇದರ ಸೊಪ್ಪನ್ನು ಕಿತ್ತು ಬಳಸಬಹುದು.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಸಸಿಗಳು ಎಳೆಯವಿದ್ದಾಗ ಒತ್ತಾಗಿರುವ ಹಾಗೂ ಹೆಚ್ಚುವರಿ ಸಸಿಗಳನ್ನು ಬೇರು ಸಹಿತ ಕಿತ್ತು ತೆಳುಗೊಳಿಸಿದರೆ ಉಳಿದ ಸಸಿಗಳು ಸೊಂಪಾಗಿ ಬೆಳೆಯ ಬಲ್ಲವು. ಒಂದೆರಡು ಸಾರಿ ಕಳೆಗಳನ್ನು ಕಿತ್ತು ತೆಗೆಯಬೇಕು. ಅನಂತರದ ದಿನಗಳಲ್ಲಿ ಅಂತರ ಬೇಸಾಯದ ಅಗತ್ಯ ಅಷ್ಟೊಂದಿರುವುದಿಲ್ಲ.

ಸರದಿಯ ಬೆಳೆ ಹಾಗೂ ಬೆಳೆ ಪರಿವರ್ತನೆ : ಚಕ್ಕೋತ ಸೊಪ್ಪು ಅಲ್ಪಾವದಿ ಬೆಳೆ ವರ್ಷದಲ್ಲಿ ಒಂದೇ ತಾಕಿನಲ್ಲಿ ಹಲವು ಬಾರಿ ಬಿತ್ತಿ ಬೆಳೆಯಬಹುದು. ಅಲ್ಲದೆ ಚಕ್ಕೋತ ಸೊಪ್ಪಿನ ಬೆಳೆ ನಂತರ ಆಳವಾಗಿ ಬೇರುಬಿಡುವ ಮತ್ತಾವುದಾದರೂ ತರಕಾರಿ ಬೆಳೆಯನ್ನು ಇಲ್ಲವೇ ದ್ವಿದಳಧಾನ್ಯ ಬೆಳೆಗಳನ್ನು ಬೆಳೆಯುವುದು ಸೂಕ್ತ.

ಕೊಯ್ಲು ಮತ್ತು ಇಳುವರಿ : ಸೊಪ್ಪು ಎಳಸಾಗಿದ್ದಷ್ಟೂ ಅದಕ್ಕೆ ಬೇಡಿಕೆ ಹೆಚ್ಚು. ಬಿತ್ತನೆ ಮಾಡಿದ ೫-೬ ವಾರಗಳಲ್ಲಿ ಸೊಪ್ಪು ಸಾಕಷ್ಟು ಬಲಿತಿರುತ್ತದೆ. ಹೆಕ್ಟೇರಿಗೆ ೧೦ ರಿಂದ ೧೫೬ ಟನ್ನುಗಳಷ್ಟು ಸೊಪ್ಪು ಸಾಧ್ಯ.

ಬೀಜೋತ್ಪಾದನೆ : ಇದು ಅನ್ಯಪರಾಗಸ್ಪರ್ಶದ ಬೆಳೆ. ಬಿತ್ತನೆ ಮಾಡಿದ ಮೂರುವರೆ ತಿಂಗಳಲ್ಲಿ ಸಸಿಗಳ ಬೆಳವಣಿಗೆ ಪೂರ್ಣವಾಗುತ್ತದೆ. ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಉದುರಿ ಬೀಳಲು ಪ್ರಾರಂಭಿಸುತ್ತವೆ ಹಾಗೂ ಬೀಜ ಬಲಿತು ಗಟ್ಟಿಯಾಗುತ್ತವೆ. ಕೆಲವೊಮ್ಮೆ ಈ ಬೆಳೆಯೊಂದಿಗೆ ಹೆಚ್ಚು ಚಕ್ಕೋತ ಸೊಪ್ಪಿನ ಸಸಿಗಳು ಇರುವುದುಂಟು. ಅವುಗಳನ್ನು ಪ್ರಾರಂಭದಲ್ಲಿಯೇ ಕಿತ್ತು ಹಾಕಬೇಕು. ಅದರಿಂದ ಬೀಜ ಶುದ್ಧವಾಗಿರುವುದು ಸಾಧ್ಯ. ಹೆಕ್ಟೇರಿಗೆ ೫೦೦ ರಿಂದ ೬೦೦ ಕಿ.ಗ್ರಾಂ. ಬೀಜ ಸಾಧ್ಯ. ಬೇಸಿಗೆ ಕಾಲದಲ್ಲಿ ಸಿದ್ದಗೊಳಿಸಿದ ಬೀಜ ಸ್ವಚ್ಛವಾಗಿರುತ್ತವೆ.

***