ಕನ್ನಡನಾಡಿನ ಕರಾವಳಿ ಪ್ರದೇಶ, ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ, ತೆಂಗು ಕಂಗುಗಳಿಗೆ ಹೇಗೋ ಹಾಗೆಯೇ ಸಾಹಿತಿಗಳಿಗೆ, ಕವಿಗಳಿಗೆ, ತವರೂರು. ಅದು ಪ್ರಕೃತಿ ಸೌಂದರ್ಯದ ನೆಲೆವೀಡು. ಪಶ್ಚಿಮಕ್ಕೆ ದಿಗಂತದಾಚೆಗೂ ವಿಸ್ತರಿಸಿದ ವಿಶಾಲ ಸಾಗರ, ಪೂರ್ವಕ್ಕೆ ಗಗನಚುಂಬಿ ಪಶ್ಚಿಮ ಘಟ್ಟದ ಬೆಟ್ಟಗಳ ಸಾಲು. ಎಲ್ಲಿ ನೋಡಿದರಲ್ಲಿ ಕಣ್ಣು ತಣಿಸುವ ಪಚ್ಚೆಯ ಹಚ್ಚಡ.  ಜಾನಪದ ಸಂಸ್ಕೃತಿ ಜನರಲ್ಲಿ ಹಾಸುಹೊಕ್ಕು. ‘ಯಕ್ಷಗಾನ’ವಂತೂ ಹೆಸರೇ ಸೂಚಿಸುವಂತೆ ಕಣ್ಣು, ಕಿವಿ, ಮನಗಳನ್ನು ತಣಿಸುವ ದೇವಗಾನ. ಈ ಪ್ರದೇಶದ ಸೃಷ್ಟಿ ಸೌಂದರ್ಯವನ್ನು ವರ್ಣಿಸದ ಕವಿಗಳಿಲ್ಲ; ಹಾಡಿ ಹೊಗಳದ ಗಾಯಕರಿಲ್ಲ. ಇಂತಹ ರಮಣೀಯ ಪರಿಸರದಲ್ಲಿ ಜನಿಸಿದ ಬಾಲಕ ನಾರಾಯಣನೇ ಮುಂದೆ ‘ಕನ್ನಡದ ಕೋಗಿಲೆ’, ‘ಗಾನಾಲಂಕಾರ’, ಹರಿದಾಸ ಸಂಗೀತ ಸುಧಾಕರ’, ‘ವಚನ ಗಾಯನ ಹರಿಕಾರ’, ‘ಕರ್ಣಾಟಕ ಕಲಾತಿಲಕ’ ಮುಂತಾದ ಹತ್ತು ಹಲವು ಬಿರುದು, ಪ್ರಶಸ್ತಿಗಳ  ಸರಮಾಲೆಯನ್ನೇ ಧರಿಸಿದ ಚಕ್ರಕೋಡಿ ನಾರಾಯಣ ಶಾಸ್ತ್ರಿಗಳು. ಕರ್ಣಾಟಕ ಸಂಗೀತ ಕ್ಷೇತ್ರದಲ್ಲಿ ಅವರು ‘ಸಿ.ಎನ್‌.ಶಾಸ್ತ್ರೀ’ ಎಂದೇ ಪರಿಚಿತರಾದವರು.

ಜನನ-ಬಾಲ್ಯ: ಈಗ ಕೇರಳ ರಾಜ್ಯದಲ್ಲಿರುವ ಕಾಸರಗೋಡು ಜಿಲ್ಲೆಯ ಮುಂಜೇಶ್ವರ ತಾಲೂಕಿನ (ಹಿಂದೆ ಈ ತಾಲೂಕು ದಕ್ಷಿಣ ಕನ್ನಡ ಜಿಲ್ಲೆಯ ಅಂಗವಾಗಿತ್ತು) ‘ಕೋಳ್ಯೂರು’ ಗ್ರಾಮದಲ್ಲಿ ‘ಚಕ್ರಕೋಡಿ’ ಎಂಬುದು ಸಂಸ್ಕೃತ, ಜ್ಯೋತಿಷ್ಯ ಶಾಸ್ತ್ರ, ಗಣಿತಗಳಲ್ಲಿ ಖ್ಯಾತಿವೆತ್ತ ಹವ್ಯಕ ಬ್ರಾಹ್ಮಣರ ಮನೆತನ. ಕೊಡಗಿನ ಅರಸರು ಈ ಮನೆತನದ ಪೂರ್ವಜರೊಬ್ಬರ ಪಾಂಡಿತ್ಯವನ್ನು ಮೆಚ್ಚಿ ಅವರಿಗೆ ‘ಶಾಸ್ತ್ರಿ’ ಎಂಬ ಬಿರುದನ್ನು ದಯಪಾಲಿಸಿದ್ದರಂತೆ. ಅಂದಿನಿಂದ ಆ ಮನೆತನದವರಿಗೆ ಶಾಸ್ತ್ರೀ ಎನ್ನುವ ಉಪಾಧಿ ಖಾಯಂ ಆಯಿತು ಎಂದು ಪ್ರತೀತಿ!

ಸುಮಾರು ೧೭-೧೮ನೇ ಶತಮಾನದಲ್ಲಿ ಚಕ್ರಕೋಡಿ ಮನೆತನದವರೊಬ್ಬರು ಕೋಳ್ಯೂರು ಗ್ರಾಮವನ್ನು ತೊರೆದು ಬಂಟ್ವಾಳ ತಾಲೂಕಿನ ‘ಹತ್ತೊಕ್ಕಲು’ ಗ್ರಾಮದಲ್ಲಿ ನೆಲಸಿದರಂತೆ. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಅವರ ವಂಶದಲ್ಲಿ ಜನಿಸಿದವರು ಶ್ರೀ ಶ್ಯಾಮ ಶಾಸ್ತ್ರಿಗಳು. ಅವರು ಆಗರ್ಭ ಶ್ರೀಮಂತರು. ಅಂದಿನ ಹೆಚ್ಚಿನ ಹವ್ಯಕ ಬ್ರಾಹ್ಮಣರಂತೆ ಅವರೂ ಕೃಷಿಕರಾಗಿದ್ದರು. ಅಡಿಕೆ, ತೆಂಗು, ಬೆಳೆಯುವ ಜಮೀನು ಅವರ ಆಸ್ತಿಯಾಗಿತ್ತು. ಜೊತೆಗೆ ಸಂಸ್ಕೃತದಲ್ಲಿ ಘನಪಂಡಿತರೂ ಆಗಿದ್ದರು. ಸಂಗೀತ, ಸಾಹಿತ್ಯಗಳ ಆರಾಧಕರಾಗಿದ್ದರು. ಆ ಕಾಲದಲ್ಲಿ ಪ್ರಸಿದ್ಧ ಸಂಗೀತ ವಿದ್ವಾಂಸರಾಗಿದ್ದ ವೈದ್ಯನಾಥ ಅಯ್ಯರ್, ತಿರುಚಿರಪಳ್ಳಿ ಕೃಷ್ಣ ಅಯ್ಯರ್ ಮುಂತಾದವರ ಸಂಗೀತ ಕಚೇರಿಗಳನ್ನು ಕೇಳಲೆಂದೇ ಅವರು ದೂರದ ಮದರಾಸಿನವರೆಗೂ ಪ್ರಯಾಣಿಸುತ್ತಿದ್ದರಂತೆ. ಅವರ ಧರ್ಮಪತ್ನಿ ಸರಸ್ವತಿಯವರು ಕೂಡ ಹಾಡು, ಹಸೆ ಬಲ್ಲವರು; ರಾಮಾಯಣ, ಮಹಾಭಾರತ ಪಠಿಸಿದವರು. ಈ ದಂಪತಿಗೆ ನಾಲ್ವರು ಮಕ್ಕಳು. ಹಿರಿಯವರು ಈಶ್ವರ ಶಾಸ್ತ್ರಿಗಳು. ಓದಿನಲ್ಲಿ ಯಾವಾಗಲೂ ಮುಂದಿದ್ದ ಕಿವರು ದುರ್ದೈವವಶಾತ್‌ ತಮ್ಮ ೧೮ನೇ ವಯಸ್ಸಿನಲ್ಲೇ ದೈವಾಧೀನರಾದರು. ಆಗ ಅವರು ಓದುತ್ತಿದ್ದ ವಿದ್ಯಾಲಯ ಮೂರು ದಿನಗಳ ರಜೆ ಸಾರಿ ಶೋಕವನ್ನು ಆಚರಿಸಿತಂತೆ. ಎರಡನೆಯವರು ಹೊನ್ನಮ್ಮ. ಮೂರನೆಯವರೆ ನಾರಾಯಣ ಶಾಸ್ತ್ರಿಗಳು. ಕೊನೆಯ ಮಗಳು ಶಂಕರಿ. ಇವರು, ಕನ್ನಡ ಸಾಹಿತ್ಯಲೋಕದಲ್ಲಿ ಹೆಸರುವಾಸಿಯಾದ ಪಂಡಿತವರೇಣ್ಯ ದಿವಂಗತ ಸೇಡಿಯಾಪು ಕೃಷ್ಣ ಭಟ್ಟರ ಪತ್ನಿ. ಇತ್ತೀಚೆಗೆ, ಅಂದರೆ ೨೦೦೧-೦೨ ರಲ್ಲಿ ಶ್ರೀ ಸೇಡಿಯಾಪುರವರ ಜನ್ಮ ಶತಮಾನೋತ್ಸವನ್ನು ಕರ್ಣಾಟಕದ ಹಲವು ಕೇಂದ್ರಗಳಲ್ಲಿ ಆಚರಿಸಲಾಯಿತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಸಿ.ಎನ್‌. ಶಾಸ್ತ್ರೀ ಅವರು ಜನಿಸಿದ್ದು ೧೯೧೩ನೇ ಇಸವಿ ಜುಲೈ ೪ ರಂದು. ‘ಬೆಳೆಯ ಸಿರಿ ಮೊಳಕೆಯಲ್ಲಿ’ ಎಂಬಂತೆ. ಚಿಕ್ಕ ಮಗುವಾಗಿದ್ದಾಗಿನಿಂದಲೇ ನಾರಾಯಣನಿಗೆ ವಿಪರೀತ ಸಂಗೀತದ ಹುಚ್ಚು. ಮಗು ಅಳುತ್ತಿದ್ದರೆ, ಹಾಡಿನ ಧ್ವನಿ ಎತ್ತಲಿಂದ ಕೇಳಿ ಬಂದರೂ ಸಾಕು, ಪುಂಗಿಯ ನಾದಕ್ಕೆ ಮರುಳಾಗುವ ನಾಗನಂತೆ ಅಳು ನಿಲ್ಲಿಸಿ ತಲೆದೂಗುತ್ತಿತ್ತು. ತೊಳೆದಿಟ್ಟಿದ್ದ ತಟ್ಟೆ, ಪಾತ್ರೆ, ಬಟ್ಟಲುಗಳ ನಡುವೆ ಕುಳಿತುಕೊಂಡು ಬಾಲಕ ನಾರಾಯಣನು ಚಮಚೆ ಸಟ್ಟುಗಗಳಿಂದ ಪಾತ್ರೆಗಳನ್ನು ಕುಟ್ಟುತ್ತ ಅವುಗಳಿಂದ ಹೊರಹೊಮ್ಮುವ ವಿವಿಧ ಸ್ವರಗಳನ್ನು ಆಲಿಸುತ್ತ ಎಷ್ಟು ಹೊತ್ತು ಬೇಕಾದರೂ ಆಡುತ್ತಿರುತ್ತಿದ್ದನು. ತಂದೆಯೇ ಸಂಗೀತಜ್ಞರಾಗಿದ್ದುದರಿಂದ ಬಾಲಕನಿಗೆ ಅವರೇ ಬಾಲಪಾಠದ ಗುರುವಾಗಿದ್ದರು. ಇಷ್ಟರಲ್ಲಿ ಶ್ಯಾಮ ಶಾಸ್ತ್ರಿಗಳು ಮಂಗಳೂರಿನಲ್ಲಿ ಅಡಿಕೆ ಮಂಡಿಯೊಂದನ್ನು ಸ್ಥಾಪಿಸಿದರು. ಅಡಿಕೆ ಮಂಡಿಯ ಕೆಲಸಕ್ಕೆಂದು ಹಳ್ಳಿಯನ್ನು ತೊರೆದು ಮಂಗಳೂರು ಪಟ್ಟಣವನ್ನು ಸೇರಿದ ಶ್ಯಾಮ ಶಾಸ್ತ್ರಿಗಳು ಮಗನಿಗೆ ಪಾಲಘಾಟ್‌ ವೀರಮಣಿ ಭಾಗವತರಿಂದ ಸಂಗೀತ ತರಬೇತಿ ಕೊಡಿಸಲಾರಂಭಿಸಿದರು. ನಂತರ ಉಡುಪಿ ಲಕ್ಷ್ಮೀಬಾಯಿಯವರಲ್ಲಿಯೂ (ಇವರು ಶಂಕರಾಭರಣ ರಾಗದ ‘ಸಹಜ ಗುಣ ರಾಮ’ ಎನ್ನುವ ಗ್ರಾಮಫೋನ್‌ ರೆಕಾರ್ಡ್‌ ಮೂಲಕ ಆಗಲೇ ಪ್ರಸಿದ್ಧರಾಗಿದ್ದರು) ಸಂಗೀತದ ಶಿಕ್ಷಣ ಕೊಡಿಸಿದರು.

ಅದೇ ಸಮಯದಲ್ಲಿ ಶ್ಯಾಮ ಶಾಸ್ತ್ರಿಗಳಿಗೆ ಪತ್ನೀವಿಯೋಗವಾಯಿತು. ಅಡಿಕೆ ಮಂಡಿಯ ವ್ಯಾಪಾರದ ಏರುಪೇರುಗಳಿಂದ ಅವರು ಆರ್ಥಿಕವಾಗಿಯೂ ಬಳಲಿದ್ದರು. ಇವೆಲ್ಲ ಕಾರಣಗಳಿಂದ ಬಾಲಕ ನಾರಾಯಣನ ಸಂಗೀತ ಶಿಕ್ಷಣಕ್ಕೆ ಧಕ್ಕೆಯುಂಟಾಯಿತು. ಸಂಗೀತದ ಮೇಲಿದ್ದ ಅಪಾರ ಒಲವಿನಿಂಧಾಗಿ ಅವನು ಆಗ ಮನೆಯನ್ನು ಬಿಟ್ಟು ಗುರುವನ್ನು ಅರಸುತ್ತಾ ತಮಿಳುನಾಡಿನತ್ತ ಓಡಿ ಹೋಗಿದ್ದನಂತೆ. ಹುಡುಗ ಒಂದೆರಡು ವರ್ಷ ಅಲ್ಲಿ ಇಲ್ಲಿ ಸಂಗೀತ ಕಲಿತು ಮರಳಿ ಬಂದು ಮಂಗಳೂರು ತಲುಪಿದಾಗ ಅವನಿಗೆ ಸುಮಾರು ೧೨ ವರ್ಷ ವಯಸ್ಸು. ಒಮ್ಮೆ ಮಂಗಳೂರಿನಲ್ಲಿ ಉತ್ತರದ ಹಿಂದುಸ್ತಾನಿ ಸಂಗೀತ ವಿದ್ವಾಂಸರಾಗಿದ್ದ ‘ಬರ್ವೆ’ ಎಂಬುವರ ಭವ್ಯ ಕಚೇರಿ ನಡೆಯಿತು. ತದನಂತರ ಅದೇ ವೇದಿಕೆಯ ಮೇಲೆ ಬಾಲಕ ನಾರಾಯಣನ ಸಂಗೀತವೂ ಏರ್ಪಾಡಾಗಿತ್ತು. ಪ್ರಬುದ್ಧ ಸಂಗೀತಗಾರನಿಗೆ ಸರಿಮಿಗಿಲೆನ್ನುವಂತೆ ಹಾಡಿದ ಕಿಶೋರನ ಗಾಯನವನ್ನು ಶ್ರೋತೃಗಳೆಲ್ಲ ಮೆಚ್ಚಿ ಪ್ರಚಂಡ ಕರತಾಡನದೊಂದಿಗೆ ಪ್ರೋತ್ಸಾಹಿಸಿದರು. ಅಂದಿನಿಂದ ನಾರಾಯಣನಿಗೆ ಬವೇ ನಾರಾಯಣ ಎನ್ನುವ ಉಪನಾಮ ಲಭ್ಯವಾಯಿತು. ಇಂದಿಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವರು ಸಿ.ಎನ್‌.ಶಾಸ್ತ್ರೀ ಅವರನ್ನು ಅದೇ ಹೆಸರಿನಿಂದ ಜ್ಞಾಪಿಸಿಕೊಳ್ಳುವುದುಂಟು.

ನಾರಾಯಣನು ಸುಮಾರು ೧೩ ವರ್ಷದವನಿದ್ದಾಗ, ತಂದೆ ಶ್ಯಾಮ ಶಾಸ್ತ್ರಿಗಳು ಅಡಿಕೆ ಮಂಡಿಯಲ್ಲಿ ಬಾರಿ ನಷ್ಟ ಅನುಭವಿಸಿ, ಬೇಸತ್ತು, ಅನ್ಯಗತಿಯಿಲ್ಲದೆ ಉತ್ತರ ಭಾರತದ ಕಡೆಗೆ ದೇಶಾಂತರ ಹೊರಟರು. ಆ ವೇಳೆಗಾಗಲೇ ಅವರ ಹೆಂಡತಿ ತೀರಿ ಹೋಗಿದ್ದುದರಿಂದ ಮಕ್ಕಳಿಗೆ ನೆಂಟರಿಷ್ಟರ ಮನೆಯೇ ಗತಿಯಾಯಿತು. ಆದರೆ ನಾರಾಯಣನು ಮಾತ್ರ ಹೇಗೋ ಮಾಡಿ ತಂದೆಯನ್ನು ಒಪ್ಪಿಸಿ ಅವರೊಡನೆ ಹೊರಟು ಬಿಟ್ಟ. ಅಂತೂ ಇಂತೂ ಕಲ್ಕತ್ತಾ ತಲುಪಿದಾಗ ತಂದೆಯ ಕೈಯಲ್ಲಿದ್ದ ಅಲ್ಪಸ್ವಲ್ಪ ಹಣವೂ ಮುಗಿಯಿತು. ಆಗ ಉದರ ಪೋಷಣೆಗೆ ಬಾಲಕ ನಾರಾಯಣನೇ ಕೆಲವೆಡೆ ಸಂಗೀತ ಕಚೇರಿಗಳನ್ನು ನಡೆಸಿ ಹಣ ಸಂಪಾದಿಸಬೇಕಾಯಿತು. ಜೊತೆಗೆ ಕೆಲವು ಸ್ಥಳೀಯ ಬಂಗಾಲೀ ವಿದ್ಯಾರ್ಥಿಗಳಿಗೆ ಸಂಗೀತ ಪಾಠ ಹೇಳಲೂ ತೊಡಗಿದನು. ಅಲ್ಲಿಂದ ಮುಂದೆ ಬನಾರಸ್‌, ಮುಂಬಯಿ ಮೊದಲಾದ ಕಡೆ ಸಂಚರಿಸಿ ಎಲ್ಲೂ ಸರಿಯಾದ ನೆಲೆ ಸಿಗದೆ ಕೊನೆಗೆ ತಂದೆ ಮತ್ತು ಮಗ ಬಳ್ಳಾರಿಗೆ ಬಂದು ಸೇರಿದರು.

ಆಸ್ಥಾನ ವಿದ್ವಾನ್‌ ದೇವೇಂದ್ರಪ್ಪನವರಲ್ಲಿ ಶಿಷ್ಯವೃತ್ತಿ: ಬಳ್ಳಾರಿಯಲ್ಲಿ ಅವರಿಗೆ ಮೈಸೂರಿನ ಆಸ್ಥಾನ ವಿದ್ವಾನ್‌ ಬಿ. ದೇವೇಂದ್ರಪ್ಪನವರ ಸಂಗೀತ ಕಚೇರಿಯನ್ನು ಕೇಳುವ ಸುಯೋಗ ಒದಗಿ ಬಂತು. ಇಬ್ಬರೂ ದೇವೇಂದ್ರಪ್ಪನವರ ಸಂಗೀತದ ಮೋಡಿಗೆ ಮಾರು ಹೋದರು. ಮುಂದೆ ನಾರಾಯಣಶಾಸ್ತ್ರಿಗಳು ಮೈಸೂರಿಗೆ ಹೋಘಿ ದೇವೇಂದ್ರಪ್ಪನವರಲ್ಲಿಕ ಶಿಷ್ಯವೃತ್ತಿ ಕೈಗೊಂಡರು. ಮೈಸೂರಿನಲ್ಲಿ ಗುರುಗಳ ಮನೆಯಲ್ಲೇ ವಾಸಿಸುತ್ತಾ ಹತ್ತು ವರ್ಷಕ್ಕೂ ಮೀರಿ ಸಂಗೀತಾಭ್ಯಾಸ ಮಾಡಿದ್ದಲ್ಲದೆ ಗುರುಗಳ ಎಲ್ಲಾ ಸಂಗೀತ ಕಚೇರಿಗಳಲ್ಲೂ ಅವರ ಜೊತೆಯಿದ್ದು ಸಂಗೀತದ ಸೂಕ್ಷ್ಮತೆಗಳನ್ನೆಲ್ಲ ಕರಗತ ಮಾಡಿಕೊಂಡು ಗುರುಗಳ ಮೆಚ್ಚುಗೆಗೆ ಪಾತ್ರರಾದರು. ಮೈಸೂರಿನಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದ ಕಾಲದಲ್ಲಿ ಬಿಡಾರಂ ಕೃಷ್ಣಪ್ಪನವರ ರಾಮಮಂದಿರದಲ್ಲಿ ನಡೆಯುತ್ತಿದ್ದ ಖ್ಯಾತ ಸಂಗೀತಗಾರರಾದ ಮೈಸೂರು ವಾಸುದೇವಾಚಾರ್ಯ, ಟೈಗರ್‌ ವರದಾಚಾರ್ಯ ಮುಂತಾದವರ ಕಚೇರಿಗಳನ್ನು ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಅದರಲ್ಲೂ ವಾಸುದೇವಚಾರ್ಯರ ನೆರವಲ್‌ ಮತ್ತು ರಾಗ, ತಾನ, ಪಲ್ಲವಿಗಳನ್ನು ಪ್ರಸ್ತುತ ಪಡಿಸುವ ಶೈಲಿಯಿಂದ ಅವರು ತುಂಬಾ ಪ್ರಭಾವಿತರಾಗಿದ್ದರು. ಅವರ ಪ್ರೌಢ ಕಚೇರಿ ಬಳ್ಳಾರಿಯಲ್ಲಿ ವಿನಾಯಕ ಚತುರ್ಥಿಯ ಸಮಯ ನಡೆಯಿತು. “ನನ್ನ ಪಟ್ಟ ಶಿಷ್ಯ ನೀನೇ ಕಣೋ ನಾರಾಯಣ” ಎಂದು ಕೊನೆಯಲ್ಲಿ ಗುರುಗಳಿಂದ ಶಹಭಾಸ್‌ಗಿರಿ ಗಳಿಸಿಕೊಂಡರು.

ವಚನಗಾಯನಕ್ಕೆ ನಾಂದಿ: ಸಂಗೀತ ಕಚೇರಿಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಅಳವಡಿಸಿದ ಕೀರ್ತಿ ಶಾಸ್ತ್ರಿಗಳಿಗೆ ಸಲ್ಲಬೇಕು. ೧೯೩೬ರಷ್ಟು ಹಿಂದೆಯೇ ಶಾಸ್ತ್ರಿಗಳು ತಮ್ಮ ಕಚೇರಿಗಳಲ್ಲಿ ಪುರಂದರದಾಸ, ಕನಕದಾಸ ಮೊದಲಾದ ದಾಸವರೇಣ್ಯರ ಕೃತಿಗಳನ್ನು ಕೀರ್ತನೆಗಳಂತೆ ಹಾಡಲು ಪ್ರಾರಂಭಿಸಿ ಕನ್ನಡಿಗರ ಮನ ಗೆದ್ದಿದ್ದರು.

ದೇವೇಂದ್ರಪ್ಪನವರಲ್ಲಿ ಶಾಸ್ತ್ರಿಗಳು ಶಿಷ್ಯವೃತ್ತಿ ಮಾಡುತ್ತಿದ್ದಾಗಲೇ ಒಮ್ಮೆ ಅವರು ಗುರುಗಳಿಗೆ ಪ್ರಶ್ನೆ ಹಾಕಿದರಂತೆ “ಗುರುಗಳೇ, ನೀವು ಶಿವಶರಣರ ವಚನಗಳನ್ನು ಏಕೆ ಹಾಡುವುದಿಲ್ಲ” ಎಂದು. ಆಗ ಗುರುಗಳು “ಹುಚ್ಚಾ ಅವು ವಚನಗಳು. ಅಂದರೆ ಗದ್ಯರೂಪಗಳು. ಅವಕ್ಕೆ ರಾಗ ಹಾಕಿ ಹಾಡಬಹುದಾಗಿದ್ದಿದ್ದರೆ ಇಷ್ಟು ದಿನ ಯಾರಾದರೂ ಸುಮ್ಮನಿರುತ್ತಿದ್ದರೇ?” ಎಂದು ನಕ್ಕು ಬಿಟ್ಟರಂತೆ. ಆದರೆ ಪ್ರತಿಭಾನ್ವಿತ ಯುವಕ ನಾರಾಯಣ ಎದೆಗುಂದಲಿಲ್ಲ. ಗುರುಗಳ ಮಾತನ್ನೇ ಸವಾಲಾಗತಿ ಸ್ವೀಕರಿಸಿದರು. ತಿಂಗಳುಗಟ್ಟಲೆ ಶ್ರಮ ಪಟ್ಟು, ನಾಲ್ಕಾರು ವಚನಗಳಿಗೆ ರಾಗ ತಾಳಗಳನ್ನು ಸಂಯೋಜಿಸಿ ಗುರುಗಳ ಸಮ್ಮುಖದಲ್ಲಿ ಹಾಡಿ ತೋರಿಸಿಯೇ ಬಿಟ್ಟರು. ಶಿಷ್ಯನ ಸಾಧನೆಯನ್ನು ಕಂಡು ಗುರುಗಳಿಗೆ ಮಹದಾನಂದವಾಯಿತು. ಅಂದಿನ ರಾತ್ರಿ ಅವರು ತಾವು ದಿನಾ ಕುಡಿಯುತ್ತಿದ್ದ ಬಾದಾಮಿ ಹಾಲಿನ ಬಟ್ಟಲನ್ನು ಶಿಷ್ಯನಿಗೆ ನೀಢಿ ತಾವೇ ಸ್ವತಃ ಹಾಲು ಕುಡಿಸಿ ಆಶೀರ್ವದಿಸಿದರಂತೆ. ಇದುವೆ ವಚನ ಗಾಯನಕ್ಕೆ ನಾಂದಿಯಾಯಿತು.

ತಾ.೧೭.೭.೧೯೩೭ನೇ ಬುಧವಾರದಂದು ಬೆಂಗಳೂರಿನ ಶ್ರೀ ವೀರಶೈವ ಸಮಾಜ ಸೇವಾ ಸಂಘದವರು ಶಾಸ್ತ್ರಿಗಳ ‘ಶಿವಶರಣರ ವಚನ ಸಂಗೀತ’ ಕಚೇರಿಯನ್ನು ಶ್ರೀ ಕೃಷ್ಣರಾಜೇಂದ್ರ ಕನ್ನಡ ಸಾಹಿತ್ಯ ಪರಿಷನ್ಮಂದಿರದ ಸಭಾಂಗಣದಲ್ಲಿ ಏರ್ಪಡಿಸಿದ್ದರು. ಸಂಘದ ಅಧ್ಯಕ್ಷರು ಜೆ.ಕೆ. ಬಸಪ್ಪ, ಪ್ರಸಿದ್ಧ ಕಾದಂಬರಿಕಾರ ಅ.ನ. ಕೃಷ್ಣರಾಯರು ಮುಖ್ಯ ಅತಿಥಿಗಳಾಗಿದ್ದರು. ತಾ. ೧೨.೭.೧೯೩೭ರ ‘ಶರಣ ಸಂದೇಶ’ ಪತ್ರಿಕೆಯ ವರದಿಯಲ್ಲಿ ಅ.ನ.ಕೃ. ರವರ ಭಾಷಣದ ಒಂದಂಶ ಹೀಗೆ ಉದ್ಧೃತವಾಗಿದೆ. “ಗದ್ಯ ಸಾಹಿತ್ಯವೆನಿಸಿಕೊಂಡಿದ್ದ ವಚನವಾಙ್ಮಯವನ್ನು ಶ್ರೀ ಶಾಸ್ತ್ರಿಗಳವರು ರಾಗ, ತಾಳ, ಸ್ವರಗಳಿಂದಲಂಕರಿಸಿ ಭಾರತೀಯ ಸಂಗೀತ ಪ್ರಪಂಚಕ್ಕೊಂದು ನೂತನ ಕಾಣಿಕೆಯನ್ನು ಸಮರ್ಪಿಸಿರುವರು”.

ನಂತರದ ಅವರ ಎಲ್ಲ ಸಂಗೀತ ಕಚೇರಿಗಳಲ್ಲೂ ವಚನ ಗಾಯನ ಪ್ರಮುಖ ಸ್ಥಾನ ಪಡೆಯಿತು. ಮೈಸೂರಿನ ಹಿರಿಯರೊಬ್ಬರು ಹೇಳಿದಂತೆ “…..ಅವರು  ಕಚೇರಿ ಪ್ರಾರಂಭಿಸುತ್ತಲೇ ವಚನಗಳನ್ನು ಹಾಡಲು ಚೀಟಿಗಳ ಸರಮಾಲೆಯೇ ಬರುತ್ತಿತ್ತು. ಅವರು ಹಾಡುತ್ತಿದ್ದ ‘ವಚನದಲ್ಲಿ ನಾಮಾಮೃತ ತುಂಬಿ’, ‘ಬೆಟ್ಟದ ಮೇಲೊಂದು ಮನೆಯ ಮಾಡಿ’ ಮೊದಲಾದ ವಚನಗಳು ತುಂಬಾ ಜನಪ್ರಿಯವಾಗಿದ್ದವು. ಸಾಸಿವೆ ಕಾಳು ಹಾಕಲೂ ಸ್ಥಳವಿಲ್ಲದಂತೆ ಜನರು ಕಿಕ್ಕಿರಿದು ಅವರು ವಚನ ಹಾಡುವುದನ್ನು ಕೇಳುತ್ತಿದ್ದರು”. ಮುಂದೆ ದೇವೇಂದ್ರಪ್ಪನವರು ವಚನ ಗಾಯನದ ಪುಸ್ತಕ ಬರೆದಾಗ, ಅವರ ಆದೇಶದಂತೆ ಸುಮಾರು ೨೦೦ಕ್ಕೂ ಮೇಲ್ಪಟ್ಟು ವಚನಗಳಿಗೆ ಕರ್ಣಾಟಕ ಹಾಗೂ ಹಿಂದುಸ್ತಾನಿ, ಎರಡೂ ಶೈಲಿಯಲ್ಲಿ ರಾಗ ಸಂಯೋಜಿಸಿ ಗುರುದಕ್ಷಿಣಾ ರೂಪದಲ್ಲಿ ಕೊಟ್ಟಿದ್ದರು. ಅವನ್ನು ದೇವೇಂದ್ರಪ್ಪನವರು ಪುಸ್ತಕರೂಪದಲ್ಲಿ ಪ್ರಕಟಿಸಿದ್ದರು. ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಶಾಸ್ತ್ರಿಗಳು ‘ನಿಲಯದ ಕಲಾವಿದ’ ಹಾಗೂ ‘ರಾಗ ಸಂಯೋಜನಕ’ರಾಗಿದ್ದಾಗ ಪ್ರಖ್ಯಾತ ಗಾಯಕರಾಗಿದ್ದ ದಿವಂಗತ ಡಾ. ಮಲ್ಲಿಕಾರ್ಜುನ ಮನ್ಸೂರ ಅವರು ಸ್ವತಃಶಾಸ್ತ್ರಿಗಳ ಮನೆಗ ಹೋಗಿ ನಾಲ್ಕಾರು ವಚನಗಳನ್ನು ಹಾಡಿಸಿ ಮುಂದೆ ತಾವೂ ವಚನಗಳನ್ನು ತಮ್ಮ ಕಚೇರಿಗಳಲ್ಲಿ ಹಾಡಲಾರಂಭಿಸಿದರು ಎನ್ನುವುದು ಈಗ ಇತಿಹಾಸ.

ಕರ್ಣಾಟಕ ಸರಕಾರ ನಡೆಸುವ ಸಂಗೀತ ಪಠ್ಯ ಕ್ರಮದಲ್ಲಿ ದಾಸರ ಪದಗಳೊಡನೆ ವಚನಗಳನ್ನೂ ಸೇರಿಸಲಾಗಿದೆ. ಉದಯೋನ್ಮುಖ ಕಲಾವಿದರಾಗಿ ಕರ್ಣಾಟಕ ರಾಜ್ಯದ ಎಲ್ಲೆಡೆಗಳಲ್ಲೂ ವಚನ ಗಾಯನದ ಅಸಂಖ್ಯ ಸ್ಪರ್ಧೆಗಳು ವರ್ಷಂಪ್ರತಿ ನಡೆಯುತ್ತಿವೆ. ಆದರೆ ವಚನಗಾಯನದ ಆದ್ಯ ಪ್ರವರ್ತಕರಾದ ಸಿ.ಎನ್‌. ಶಾಸ್ತ್ರಿಗಳ ಹೆಸರು ಎಲ್ಲಿಯೂ ಪ್ರಸ್ತಾಪವಾಗದಿರುವುದು ನಿಜಕ್ಕೂ ಖೇದದ ಸಂಗತಿ.

ಹಿಂದುಸ್ತಾನಿ ಸಂಗೀತ: ಸಿ.ಎನ್‌. ಶಾಸ್ತ್ರಿಗಳು ಹಿಂದುಸ್ತಾನಿ ಸಂಗೀತವನ್ನೂ ಕರಗತ ಮಾಡಿಕೊಂಡಿದ್ದರು ಎನ್ನುವ ವಿಷಯ ಬಹುಶಃ ಹೆಚ್ಚಿನವರಿಗೆ ಗೊತ್ತಿಲ್ಲ. ಪ್ರೊ. ದೇವಧರರ ಸಂಗೀತ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಗೋಕರ್ಣದ ಪಿಟೀಲು ವಿದ್ವಾಂಸ ಶ್ರೀ ವಿಶ್ವೇಶ್ವರ ಪಂಡಿತರಲ್ಲಿ ಅವರು ಹಿಂದುಸ್ತಾನಿ ಸಂಗೀತದ ಅಭ್ಯಾಸ ಮಾಡಿದ್ದರು. ಶಾಸ್ತ್ರಿಗಳು ಹಾಡುಗಾರಿಕೆ ಮಾತ್ರವಲ್ಲ ಪಿಟೀಲು, ಹಾರ್ಮೋನಿಯಂ, ಜಲತರಂಗ ಮೊದಲಾದ ವಾದ್ಯಗಳನ್ನೂ ಸುಶ್ರಾವ್ಯವಾಗಿ ನುಡಿಸುತ್ತಿದ್ದರು.

ಸಂಗೀತ ಶಿಕ್ಷಕರಾಗಿ ಶಾಸ್ತ್ರಿಗಳು: ಮೈಸೂರಿನ ದೇವೇಂದ್ರಪ್ಪನವರಲ್ಲಿ ಸಂಗೀತಾಭ್ಯಾಸ ಮುಗಿಸಿ ಹುಟ್ಟೂರಿಗೆ ಮರಳಿಸ ಶಾಸ್ತ್ರಿಗಳು ಸುಮಾರು ೧೯೩೮ರಿಂದ ೧೯೫೦ರವರೆಗೆ ಮಂಗಳೂರು, ಮಡಿಕೇರಿ ಮುಂತಾದ ಕಡೆ ಸಂಗೀತ ಶಿಕ್ಷಕರಾಗಿದ್ದರು. ಮಂಗಳೂರಿನ ಪಣಂಬೂರು ಎಂಬಲ್ಲಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ ಕಾಂಚನದ ಶ್ರೀ ಸುಬ್ರಹ್ಮಣ್ಯ ಅಯ್ಯರ್ ಅವರಿಗೆ ಪ್ರೌಢ ಮಟ್ಟದವರೆಗೆ ಸಂಗೀತ ಪಾಠ ಹೇಳುತ್ತಿದ್ದರು. ಶ್ರೀ ಸುಬ್ರಹ್ಮರ್ಣಯ ಅಯ್ಯರವರು ನಂತರ ಕಾಂಚನದಲ್ಲಿ ಸ್ಥಾಪಿಸಿದ ಶ್ರೀ ಲಕ್ಷ್ಮಿನಾರಾಯಣ ಸಂಗೀತ ಶಾಲೆ ತುಂಬ ಪ್ರಸಿದ್ಧಿ ಹೊಂದಿ ಗಮನಾರ್ಹವಾದ ಸಂಗೀತ ಕಲಾಸೇವೆಯಲ್ಲಿ ನಿರತವಾಗಿದೆ. ನೂರಾರು ಜನರಿಗೆ ಸಂಗೀತ ಶಿಕ್ಷಣ ನೀಡುತ್ತಿದೆ. ಈ ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ಅನೇಕರು ಕರ್ಣಾಟಕ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.

ಈ ಅವಧಿಯಲ್ಲಿ ಶಾಸ್ತ್ರಿಗಳು ಮಡಿಕೇರಿಯಲ್ಲಿಯೂ ಕೆಲವು ವರ್ಷಕಾಲ ನೆಲೆಸಿದ್ದರು. ಮಡಿಕೇರಿ ಗೌರ್ನಮೆಂಟ್‌ ಹೈಸ್ಕೂಲಿನ ಟೀಚರ್ಸ್ ಟ್ರೇನಿಂಗ್‌ ವಿಭಾಗದಲ್ಲಿ ಸಂಗೀತ ಕಲಿಸಿದ ಮೊದಲ ಅಧ್ಯಾಪಕರು ಸಿ.ಎನ್‌.ಶಾಸ್ತ್ರಿಗಳು. ಮಡಿಕೇರಿಯ ಹೆಸರಾಂತ ಕವಿ ಹಾಗೂ ಗಮಕಿಗಳಾಗಿದ್ದ ಕೀರ್ತಿಶೇಷ ಮೈ.ಶೇ. ಅನಂತ ಪದ್ಮನಾಭರಾಯರು ಶಾಸ್ತ್ರಿಗಳ ವಿದ್ವತ್ತನ್ನು ಮೆಚ್ಚಿ ಆಸಕ್ತರಿಗೆ ಸಂಗೀತ ಶಿಕ್ಷಣ ನೀಡಲು ಅವರನ್ನು ಮಡಿಕೇರಿಗೆ ಕರೆಸಿಕೊಂಡಿದ್ದರು. ದಿ. ಪದ್ಮನಾಭರಾಯರ ಚಿರಂಜೀವಿಗಳಾದ ಶ್ರೀ ಎಂ.ಎ. ಜಯರಾಮರಾಯರೂ ಶಾಸ್ತ್ರಿಗಳ ಶಿಷ್ಯರಾಗಿದ್ದರು.

ಶಾಸ್ತ್ರಿಗಳು ತಮ್ಮ ಜೀವಿತಕಾಲದಲ್ಲಿ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡಿದ್ದಾರೆ. ಧಾರವಾಡದಲ್ಲಿ ವಾಸಿಸುತ್ತಿದದಾಗ ಅವರು ಕರ್ಣಾಟಕ ಕಾಲೇಜಿನಲ್ಲಿ ಸಂಗೀತ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ತಮ್ಮ ವಿದ್ಯಾರ್ಥಿಗಳೆಲ್ಲರೂ ಸಂಗೀತ ಶಾಸ್ತ್ರದಲ್ಲಿ ಪರಿಪೂರ್ಣತೆಯನ್ನು ಗಳಿಸಬೇಕೆಂದು ಅವರು ಆಶಿಸುತ್ತಿದ್ದರು. ಅಪೇಕ್ಷಿತ ಮಟ್ಟಕ್ಕೆ ಏರಲು ಅಸಮರ್ಥರಾದ ವಿದ್ಯಾರ್ಥಿಗಳನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸುವುದಕ್ಕೂ ಅವರು ಹಿಂದೆ ಮುಂದೆ ನೋಡುತ್ತಿರಲಿಲ್ಲ.

ಆಕಾಶಾವಾಣಿಯಲ್ಲಿ ಸೇವೆ: ಶ್ರೀ ನಾರಾಯಣ ಶಾಸ್ತ್ರಿಗಳು ೧೯೫೦ರಲ್ಲಿ ಮೈಸೂರು ಆಕಾಶಾವಾಣಿಯಲ್ಲಿ ‘ನಿಲಯದ ಕಲಾವಿದ’ರಾಗಿ ನೇಮಕಗೊಂಡರು. ಮೈಸೂರು ಕೇಂದ್ರವು ಆಗಷ್ಟೇ All India Radioದೊಂದಿಗೆ ವಿಲೀನಗೊಂಡಿತ್ತು. ಮೈಸೂರಿನಲ್ಲಿ ಕೆಲವೇ ತಿಂಗಳುಗಳ ಸೇವೆಯ ನಂತರ ಅವರಿಗೆ ಆಕಾಶವಾಣಿಯ ಧಾರವಾಡ ಕೇಂದ್ರಕ್ಕೆ ವರ್ಗವಾಯಿತು. ೧೯೫೧ರಿಂದ ಸುಮಾರು ೨೦ ವರ್ಷಕಾಲ, ಅಂದರೆ ಸರಕಾರೀ ಸೇವೆಯಿಂದ ನಿವೃತ್ತರಾಗುವವರೆಗೂ, ಶಾಸ್ತ್ರಿಗಳು ಆಕಾಶವಾಣಿಯ ಧಾರವಾಡ ಕೇಂದ್ರದಲ್ಲಿ ದುಡಿದರು. ಅವರು ಸುಗಮ ಸಂಗೀತ, ವಚನ ಸಂಗೀತಗಳ ಆಕಾಶವಾಣಿಯ ‘ಎ’ದರ್ಜೆಯ ಕಲಾವಿದರಾಗಿದ್ದರು. ಈ ಅವಧಿಯಲ್ಲಿ ಅವರು ನಿಲಯದ ಕಲಾವಿದರಾಗಿ, ರಾಗ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದ್ದರು. ಅವರು ರಾಗ ಸಂಯೋಜಿಸಿ ಹಾಡಿದ, ಹಾಡಿಸಿದ ಕವನಗಳು ಅಸಂಖ್ಯ. ಬಾನುಲಿ ರೂಪಕಗಳು ಹಲವಾರು. ಇವುಗಳಲ್ಲಿ ಮುಖ್ಯವಾಗಿ ‘ಕೆರೆಗೆ ಹಾರ’, ಬಸವ ದರ್ಶನ’, ವಸಂತ ಕವಲಿಯವರು ತಯಾರಿಸಿದ ‘ಪುರಂದರ ದರ್ಶನ’ ಮೊದಲಾದವುಗಳನ್ನು ಇಲ್ಲಿ ನೆನಪಿಸಬಹುದು. ದಿ.ಡಾ. ಶಿವರಾಮ ಕಾರಂತರ ‘ಸಾವಿತ್ರಿ-ಸತ್ಯವಾನ್‌’ ಎನ್ನುವ ಗೀತನಾಟಕವನ್ನು ದಿವಂಗತ ಶ್ರೀನಿವಾಸ ಉಡುಪರ ದಿಗ್ಧರ್ಶನದಲ್ಲಿ ಮಂಗಳೂರು ಆಕಾಶವಾಣಿಯ ಸಂಗೀತ ರೂಪಕವಾಗಿ ಪ್ರಸಾರ ಮಾಡಿದಾಗ ಅದರಲ್ಲಿ ಶಾಸ್ತ್ರಿಗಳು ಸತ್ಯವಾನನ ಭೂಮಿಕೆಯನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ನಿರ್ವಹಿಸಿದ್ದರು.

ಸಿ.ಎನ್‌. ಶಾಸ್ತ್ರಿಗಳು ಆಕಾಶವಾಣಿಯ ಧಾರವಾಡ, ಮೈಸೂರು, ಬೆಂಗಳೂರು ಕೇಂದ್ರಗಳಿಂದ ಮಾತ್ರವಲ್ಲ ದೆಹಲಿ, ಕೊಲ್ಕತ್ತಾ, ಹೈದರಾಬಾದ್‌, ಮುಂಬಯಿ, ಚೆನ್ನೈ, ತಿರುವನಂತಪುರ ಮುಂತಾದ ಕೇಂದ್ರಗಳಿಂದಲೂ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವರು ಹಾಡಿದ ಅಕ್ಕಮಹಾದೇವಿಯ ವಚನಗಳನ್ನು ಕೊಲಂಬಿಯಾ ಗ್ರಾಮಫೋನ್‌ ಕಂಪೆನಿಯವರು ಧ್ವನಿ ಮುದ್ರಿಸಿ ಗ್ರಾಮಫೋನ್‌ ರೆಕಾರ್ಡ್‌ ಆಗಿ ೧೯೭೭ರಲ್ಲಿ ಪ್ರಕಟಿಸಿದ್ದಾರೆ.

ದೆಹಲಿಯಲ್ಲಿ ವಚನ ಗಾಯನ: ೧೯೫೭ರ ಸುಮಾರು ಆಕಾಶವಾಣಿಯ ದೆಹಲಿ ಕೇಂದ್ರದಿಂದ ಪ್ರತಿ ಶನಿವಾರ ರಾತ್ರಿ ಒಂದೂವರೆ ಗಂಟೆಗಳ ಕಾಲ ಪ್ರಾದೇಶಿಕ ಭಾಷೆಗಳ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಷ್ಟ್ರಮಟ್ಟದಲ್ಲಿ ಬಿತ್ತರಿಸಲಾಗುತ್ತಿತ್ತು. ಅದೇ ವರ್ಷ ಜುಲೈ ತಿಂಗಳ ೧೭ರಂದು ಕರ್ಣಾಟಕದ ಸರದಿ ಬಂದಿತ್ತು. ಅದಕ್ಕಾಗಿ, ಬೆಂಗಳೂರು, ಮೈಸೂರು ಧಾರವಾಡ ಆಕಾಶವಾಣಿ ಕೇಂದ್ರಗಳಿಂದ ಹಾಗೂ ಇನ್ನಿತರ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಖ್ಯಾತರಾಗಿದ್ದ ಕಲಾವಿದರ ತಂಡ ದೆಹಲಿಗೆ ಹೋಗಿತ್ತು. ವಚನ ಗಾಯನಕ್ಕಾಗಿ ಸಿ.ಎನ್‌. ಶಾಸ್ತ್ರಿಗಳು ಆಯ್ಕೆಯಾಗಿದ್ದರು. ವಚನಗಾಯನದಲ್ಲಿ ಶಾಸ್ತ್ರಿಗಳು ಅದ್ವಿತೀಯರು ಎಂಬುದಕ್ಕೆ ಬೇರೆ ಪುರಾವೆ ಬೇಕೆ?

೧೯೭೧ರಷ್ಟು ಹಿಂದೆಯೇ ಆಕಾಶವಾಣಿಯಲ್ಲಿ ಪ್ರಸ್ತುತವಾದ ‘ಸಮಾನ ರಾಗ ದರ್ಶನ’ ಕಾರ್ಯಕ್ರಮದಲ್ಲಿ ಹಿಂದುಸ್ತಾನಿ ಸಂಗೀತಗಾರರಾದ ಡಾ.ಎಂ.ಆರ್. ಗೌತಮ್‌ ಅವರು ಹಿಂದುಸ್ತಾನಿ ರಾಗಗಳನ್ನು ಹಾಡಿದರೆ ಶಾಸ್ತ್ರಿಗಳು ಅವಕ್ಕೆ ಸಮಾನವಾದ ರಾಗಗಳನ್ನು ಕರ್ಣಾಟಕ ಶೈಲಿಯಲ್ಲಿ ಹಾಡಿದ್ದರು.

ವಾಗ್ಗೇಯಕಾರರಾಗಿ ಶಾಸ್ತ್ರಿಗಳು: ಶಾಸ್ತ್ರಿಗಳು ಕೇವಲ ಸಂಗೀತಗಾರರು ಮಾತ್ರವಲ್ಲ ವಾಗ್ಗೇಯಕಾರರೂ ಆಗಿದ್ದರು . ಅವರು ತಮ್ಮ ಆಧ್ಯಾತ್ಮಿಕ ಹಾಗೂ ಆರಾಧ್ಯ ಗುರುಗಳಾದ ಶ್ರೀರಮಣ ಮಹರ್ಷಿಗಳ ಮೇಲೆ ಅನೇಕ ಕೃತಿಗಳನ್ನು ರಚಿಸಿ ಹಾಡಿದ್ದಾರೆ.

ಶಾಸ್ತ್ರಿಗಳು ಬರೆದ ‘ಕರ್ಣಾಟಕ ಸಂಗೀತ ವೈಭವ’ ಎನ್ನುವ ಗ್ರಂಥವನ್ನು ಕರ್ಣಾಟಕ ವಿಶ್ವವಿದ್ಯಾಲಯದ ಪಠ್ಯ ಪುಸ್ತಕ ನಿರ್ದೇಶನಾಲಯವು ೧೯೭೬ರಲ್ಲಿ ಪ್ರಕಟಿಸಿದೆ. ಇದರಲ್ಲಿ ಶಾಸ್ತ್ರಿಗಳು ಸಂಗೀತಕ್ಕೆ ಸಂಬಂಧ ಪಟ್ಟ ಎಲ್ಲಾ ವಿಚಾರಗಳನ್ನೂ ಕೂಲಂಕಷವಾಗಿ ವಿವರಿಸಿದ್ದಾರೆ. ಭರತ ಮುನಿಯಿಂದ ಪ್ರಾರಂಭಿಸಿ ಆಧುನಿಕರವರೆಗೆ ೫೮ ಸಂಗೀತಗಾರರ/ವಾಗ್ಗೇಯಕಾರರ ಸಂಕ್ಷಿಪ್ತ ಪರಿಚಯನವನ್ನೂ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಸಂಗೀತ ಶಾಸ್ತ್ರದ ವಿದ್ಯಾರ್ಥಿಗಳಿಗೆ ಇದೊಂದು ಅಮೂಲ್ಯವಾದ ಕೊಡುಗೆ ಎನ್ನಬಹುದು.

ಶಾಸ್ತ್ರಿಗಳ ಶೈಲಿ: ಶಾಸ್ತ್ರಿಗಳದ್ದು ಸುಮಧುರವಾದ ಕಂಠ. ಅವರ ಹಾಡುಗಾರಿಕೆ ಬಯಲು ಪ್ರದೇಶದಲ್ಲಿ ಪ್ರಶಾಂತವಾಗಿ ಹರಿಯುವ ನದಿಯ ಪ್ರವಾಹದಂತಿರುತ್ತಿತ್ತೇ ವಿನಾ ಅದರಲ್ಲಿ ಆಗಸದೆತ್ತರದಿಂದ ಧುಮುಕುವ ಜಲಪಾತದ ಅಬ್ಬರವಿರುತ್ತಿರಲಿಲ್ಲ. ಅವರ ಹಾಡುಗಾರಿಕೆಯ ಇನ್ನೊಂದು ವೈಶಿಷ್ಟ್ಯವೆಂದರೆ ಅವರು ಸಾಹಿತ್ಯಕ್ಕೂ ಸಂಗೀತಕ್ಕೂ ನೀಡುತ್ತಿದ್ದ ಸಮಾನ ಪ್ರಾಮುಖ್ಯ. ಯಾವುದೇ ಭಾಷೆಯ ಕೃತಿಯಾಗಿರಲಿ ಅವರ ಗಾಯನ ಸಾಹಿತ್ಯ ಶೂದ್ಧವಾಗಿರುತ್ತಿತ್ತು. ಭಾವ, ಅರ್ಥ ಪೂರ್ಣವಾಗಿರುತ್ತಿತ್ತು. ಪುರಂದರದಾಸರ ‘ನೀನ್ಯಾಕೋ ನಿನ್ನ ಹಂಗ್ಯಾಕೋ…’ ಎನ್ನುವ ಕೃತಿಯಲ್ಲಿ ಬರುವ ‘ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ..’ ಎನ್ನುವ ಅಂಶವನ್ನು ಕೇಳಿ ಕಣ್ಣೀರು ಸುರಿಸದ ಕೇಳುಗರು ವಿರಳ. ಸಂತ ಶಿಶುನಾಳ ಷರೀಫರ ‘ನಾನಾನೆಂಬುದು ನಾನೇನಲ್ಲಾ.’ ಎಂಬ ಕೃತಿಯನ್ನು ಅವರು ತಮ್ಮದೇ ‘ಆದ ವಿಶಿಷ್ಟ ಶೈಲಿಯಲ್ಲಿ ಹಾಡಿದಾಗ ಸರ್ವಧರ್ಮ ಸಮನ್ವಯದ ಅರಿವಾಗುತ್ತಿತ್ತು. ಅದನ್ನು ಕೇಳಿದ ಯಾರೂ ಅದನ್ನು ಎಂದಿಗೂ ಮರೆಯಲಾರರು. ತಾವೇ ರಚಿಸಿದ ‘ಪರಮಾತ್ಮನಾರೆಂದರಿವೆ ಮಾನವಾ ನಿನ್ನ ನೀನರಿತರೆ..’ ಎಂಬ ಕೃತಿಯನ್ನು ಅವರು ಭಕ್ತಿ ಭಾವ ಪೂರ್ವಕವಾಗಿ ಮೈಮರೆತು ಹಾಡುತ್ತಿದ್ದರೆ ಕೇಳುಗರು ಸಹ ಮೈಮರೆಯುತ್ತಿದ್ದರು. ರಮಣ ಮಹರ್ಷಿಗಳು ಬೋಧಿಸಿದ ತತ್ತ್ವದ ಸಾರವನ್ನೆಲ್ಲಾ ಅವರು ಈ ಹಾಡಿನಲ್ಲಿ ತುಂಬಿದ್ದಾರೆ.

ಶಾಸ್ತ್ರಿಗಳ ಸಂಗೀತಶೈಲಿಯ ವಿಚಾರವಾಗಿ ಅವರ ಅಭಿಮಾನಿಗಳಲ್ಲೊಬ್ಬರಾದ ಪ್ರೊ. ಜಿ.ಟಿ. ನಾರಾಯಣರಾಯರು ಒಂದೆಡೆ ಹೇಳುತ್ತಾಋಎ. “ಮಧುರ ಮತ್ತು ಭಾವಪೂರ್ಣ, ಸುಪುಷ್ಟ ಶಾರೀರ, ಸ್ಫುಟ ಮತ್ತು ಅರ್ಥಪೂರ್ಣ ಸಾಹಿತ್ಯೋಚ್ಚಾರಣೇ, ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಗಳಲ್ಲಿ ಗಹನ ಜ್ಞಾನ, ಇವು ಶಾಸ್ತ್ರಿಗಳ ವ್ಯಕ್ತಿತ್ವವನ್ನು, ಆದ್ದರಿಂದ ಶೈಲಿಯನ್ನು ಸಹ ಪಡೆದಿದೆ. ಸಂಗೀತದ ಯಾಂತ್ರಿಕಾಂಶಗಳೆಂದು ಸಾಧಾರಣವಾಗಿ ಭಾವಿಸಿರುವ ಶ್ರುತಿಭೇದ, ಗತಿಭೇದ, ತಾನ, ಕಲ್ಪನಾಸ್ವರ ಪ್ರಸ್ತಾರ ಮುಂತಾದುವುಗಳಲ್ಲಿ ಅವರು ಪರಿಣತರಾಗಿದ್ದರು. ಅಲ್ಲದೆ ಅವುಗಳಿಗೂ ಸೃಜನಶೀಲತೆಯ ಮೆರುಗು ಪೂಸಿದರು”. ಇನ್ನೊಂದೆಡೆ ಅವರೇ ಹೇಳುತ್ತಾರೆ. “ರಚನೆ ಯಾವುದೇ ಇರಲಿ. ವಾಗ್ಗೇಯ ಕೃತಿ, ಗೀತೆ, ವಚನ, ಕವನ ಅದರ ಭಾವಾರ್ಥವನ್ನು ಸ್ವಾಂಗೀಕರಿಸಿ, ಅದಕ್ಕೆ ಯುಕ್ತ ಸಂಗೀತದ ಪೋಷಾಕು ತೊಡಿಸಿ, ಆತ್ಮ ನಿವೇದನೆ ಸಲ್ಲಿಸುವುದು ಶಾಸ್ತ್ರಿಗಳ ವಿಧಾನ”.

ಅವರ ಯಾವ ಒಂದು ಕಚೇರಿಯೂ ಇನ್ನೊಂದರಂತೆ ಇರುತ್ತಿರಲಿಲ್ಲ. ಅವರ ಹಾಡುಗಾರಿಕೆಯಲ್ಲಿ ಅಷ್ಟು ವೈವಿಧ್ಯವಿರುತ್ತಿತ್ತು. ಅವರ ಸಂಗೀತ ಯಾವಾಗಲೂ ಮನೋಧರ್ಮ ಪ್ರಧಾನವಾಗಿರುತ್ತಿತ್ತು. ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತ ಮೊದಲಾದ ವಾಗ್ಗೇಯಕಾರರು ತೆಲುಗು, ಸಂಸ್ಕೃತ ಮತ್ತಿತರ ಭಾಷೆಗಳಲ್ಲಿ ರಚಿಸಿದ ಕೃತಿಗಳನ್ನು ಅವರು ತಮ್ಮ ಕಚೇರಿಗಳಲ್ಲಿ ಹಾಡುತ್ತಿದ್ದರೂ, ಕನ್ನಡದ ದಾಸ ವಾಙ್ಮಯಕ್ಕೂ, ವಚನ ವಾಙ್ಮಯಕ್ಕೂ ಸಾಕಷ್ಟು ಪ್ರಾಮುಖ್ಯವನ್ನು ಕೊಡುತ್ತಿದ್ದರು . ಕೆಲವೊಮ್ಮೆ ಈ ಕನ್ನಡ ಕೃತಿಗಳ ಕೈಯೇ ಮೇಲಾಗುತ್ತಿದ್ದರೂ ಉಂಟು. ತಮ್ಮ ಹಾಡುಗಾರಿಕೆಯನ್ನು ಯಾವಾಗಲೂ ಮಧ್ಯಮಾವತಿ ರಾಗದಲ್ಲಿ ಕನಕದಾಸ ವಿರಚಿತ ‘ಹರಿಭಕ್ತಿ ಸಾರ’ದ-ಹಸಿವರಿತು ತಾಯ್ತನ್ನ ಶಿಶುವಿಗೆ-ಈ ಕನ್ನಡದ ಹಾಡನ್ನೇ ಹಾಡಿ ಮುಕ್ತಾಯಗೊಳಿಸುವುದು ಅವರ ಸಂಪ್ರದಾಯವಾಗಿತ್ತು.

ಸನ್ಮಾನ-ಪ್ರಶಸ್ತಿಗಳು: ಕವಿ ಹೃದಯವನ್ನು ಕವಿಯ ಭಾವದೊಡನೆ ಎಳೆ ಎಳೆಯಾಗಿ ಜೋಡಿಸುವ ಅವರ ಕಂಠಶ್ರೀ ಅಲೆ ಅಲೆಯಾಗಿ ತೇಲಿ ಬಂದಾಗ ಶ್ರೋತೃಗಳು ಮೈಮರೆಯುತ್ತಿದ್ದರು. ಅದ್ಭುತ ಪ್ರತಿಭೆ, ಪಾಂಡಿತ್ಯದೊಂದಿಗೆ ಅಪೂರ್ವ ಹೃದಯವಂತಿಕೆ, ಸರಳ ಸಜ್ಜನಿಕೆಯನ್ನು ಮೈಗೂಡಿಸಿಕೊಂಡ ಅವರು ಯಾವುದೇ ಸಂಘ, ಸಂಸ್ಥೆ, ಸರಕಾರಗಳಿಂದ ಪ್ರಶಸ್ತಿ, ಪುರಸ್ಕಾರಗಳಿಗೆ ಕೈಚಾಚಿದವರಲ್ಲ. ಕೀರ್ತಿಯೆಂಬ ಮರೀಚಿಕೆಯನ್ನು ಬೆಂಬತ್ತಿದವರಲ್ಲ. ಪ್ರಾಪಂಚಿಕ ಸಂಪತ್ತನ್ನು ಆಶಿಸಿದವರಲ್ಲ. ಆದರೂ ಕರ್ಣಾಟಕ ಸಂಗೀತ ನೃತ್ಯ ಅಕಾಡೆಮಿಯು ೧೯೯೦-೯೧ನೆಯ ಸಾಲಿನ ಕರ್ಣಾಟಕ ಕಲಾತಿಲಕ ಪ್ರಶಸ್ತಿಯನ್ನಿತ್ತು ಅವರನ್ನು ಗೌರವಿಸಿದೆ. ಅವರ ಸಂಗೀತ ಕಲಾ ಸೇವೆಯನ್ನು ಗುರುತಿಸಿದ ಕರ್ಣಾಟಕ ಸರಕಾರ ಅವರಿಗೆ ೧೯೭೯ರಿಂದ ೧೯೯೩ರ ವರೆಗೆ ಮಾಸಾಶನ ರೂಪದಲ್ಲ;ಇ ರೂ./ ೫೦೦/- ನ್ನು ಪ್ರತಿ ತಿಂಗಳೂ ನೀಡುತ್ತಿತ್ತು. ಇದಲ್ಲದೆ ಅನೇಕ ಸಂಘ ಸಂಸ್ಥೆಗಳು ಅವರ ಪ್ರತಿಭೆಯನ್ನು, ವಿದ್ವತ್ತನ್ನು, ಸಂಗೀತ ಕಲಾರಾಧನೆಯನ್ನು ಗುರುತಿಸಿ ಗೌರವಿಸಿವೆ. ೧೯೭೦ರಲ್ಲಿ ಬೆಂಗಳೂರಿನ ಗಾನ ಕಲಾ ಪರಿಷತ್ತು ಅವರ ಗಾಯನವನ್ನು ಏರ್ಪಡಿಸಿ ಸನ್ಮಾನಿಸಿತು. ಗುರು ದೇವೇಂದ್ರಪ್ಪನವರು ನಡೆಸುತ್ತಿದ್ದ ಹನುಮಜ್ಜಯಂತಿ ಉತ್ಸವದ ಬೆಳ್ಳಿ ಹಬ್ಬದ ಸಮಯ, ೧೯೭೨ರಲ್ಲಿ ಅವರಿಗೆ ಗಾನಾಲಂಕಾರ ಬಿರುದಿತ್ತು ಸನ್ಮಾನಿಸಲಾಯಿತು. ಪುತ್ತೂರಿನ ಉಮಾಮಹೇಶ್ವರ ಕಲಾಶಾಲೆಯ ೧೯೭೪ರಲ್ಲಿ ಬಿನ್ನವತ್ತಳೆಯೊಡನೆ ಅವರನ್ನು ಸನ್ಮಾನಿಸಿತು. ೧೯೭೯ರಲ್ಲಿ ಉಡುಪಿಯಲ್ಲಿ ನಡೆದ ವಾದಿರಾಜ-ಕನಕದಾಸ ಮಹೋತ್ಸವದ ಅಂಗವಾಗಿ ಸಂಗೀತ ನಾಟಕ ಅಕಾಡೆಮಿಯವರು ಏರ್ಪಡಿಸಿದ್ದ ಸಮಾರಂಭದಲ್ಲಿ ಹರಿದಾಸ ಸಂಗೀತ ಸುಧಾಕರ ಬಿರುದಿನೊಂದಿಗೆ ಅವರು ಸನ್ಮಾನಿಸಲ್ಪಟ್ಟರು. ೧೯೮೦ರಲ್ಲಿ ಕಲಾದರ್ಶನ ಸಂಸ್ಥೆಯ ದಶಮಾನೋತ್ಸವದ ಉದ್ಘಾಟನೆಯ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ಮೈಸೂರಿನ ಗಾನ ಭಾರತೀ ಸಂಸ್ಥೆಯು ಅವರನ್ನು ೧೯೯೧ರಲ್ಲಿ ಶ್ರೀಕೃಷ್ಣ ಜಯಂತಿಯ ಸಂದರ್ಭದಲ್ಲಿ ಇತರ ಹಿರಿಯ ಸಂಗೀತಗಾರರೊಂದಿಗೆ ಸನ್ಮಾನಿಸಿತು.

ರಮಣ ಮಹರ್ಷಿಗಳ ಸೇವೆ: ಶಾಸ್ತ್ರಿಗಳಿಗೆ ಮೊದಲಿನಿಂದಲೂ ಭಗವಾನ್‌ ರಮಣ ಮಹರ್ಷಿಗಳ ಮೇಲೆ ಅನನ್ನು ಭಕ್ತಿ. ವರ್ಷಕ್ಕೆ ಒಮ್ಮೆಯಾದರೂ ತಮಿಳುನಾಡಿನ ತಿರುವಣ್ಣಾಮಲೈಯಲ್ಲಿರುವ ರಮಣಾಶ್ರಮಕ್ಕೆ ಹೋಗಿ ಬರುತ್ತಿದ್ದರು. ಅವರು ಎಳವೆಯಲ್ಲಿಯೇ (ನಾಲ್ಕು ವರ್ಷವಿದ್ದಾಗ) ತಾಯಿಯನ್ನೂ, ಹರೆಯದಲ್ಲಿ ತಂದೆಯನ್ನೂ ಕಳೆದುಕೊಂಡಿದ್ದರಿಂದಲೋ ಏನೋ, ಯಾವಾಗಲೂ ವ್ಯಾಕುಲಚಿತ್ತರಾಗಿರುತ್ತಿದ್ದರಂತೆ. ಆಗ ಅವರಿಗೆ ಕನಸಿನಲ್ಲಿ ಒಬ್ಬ ಗಡ್ಡ ಬಿಟ್ಟ ಯೋಗಯ ಮುಖ ಕಾಣುತ್ತಿತ್ತಂತೆ. ಮುಂದೆ ಅವರೇ ಭಗವಾನ್‌ ಶ್ರೀರಮಣ ಮಹರ್ಷಿಗಳೆಂದು ಯಾವುದೋ ಹಳೆಯ ವೃತ್ತಪತ್ರಿಕೆಯ ವರದಿಯ ಮೂಲಕ ಅರಿತು ಕೂಡಲೇ ರಮಣಾಶ್ರಮಕ್ಕೆ ಹೋಗಿ ಬಂದರಂತೆ. ಅಂದಿನಿಂದಲೇ ಶ್ರೀ ರಮಣ ಮಹರ್ಷಿಗಳನ್ನು ತಮ್ಮ ಆಧ್ಯಾತ್ಮ ಗುರುಗಳನ್ನಾಗಿ ಸ್ವೀಕರಿಸಿ ಕೊನೆಯವರೆಗೂ ಅವರು ತೋರಿದ ದಾರಿಯಲ್ಲೇ ನಡೆದರು.

ಕೊನೆಯ ದಿನಗಳು: ಮೊದಲೇ ಕೃಶಕಾಯರಾಗಿದ್ದ ಶಾಸ್ತ್ರಿಗಳ ಆರೋಗ್ಯ ೧೯೯೩ರ ಹೊತ್ತಿಗೆ ಹದಗೆಟ್ಟಿತು. ಆದರೂ ಮೇ ತಿಂಗಳ ಮೊದಲ ವಾರದಲ್ಲಿ ಹುಬ್ಬಳ್ಳಿಯಲ್ಲಿದ್ದ ಮನೆಯಿಂದ ಧಾರವಾಡದ ಆಕಾಶವಾಣಿ ಕೇಂದ್ರಕ್ಕೆ ಹೋಗಿ ಸಂಗೀತದ ಧ್ವನಿ ಮುದ್ರಣ ಮಾಡಿ ಬಂದಿದ್ದರು. ಒಂದು ವಾರ ಬಂದ ಜ್ವರವೇ ನೆಪವಾಗಿ ಆಮೇಲೆ ಅವರು ಸುಧಾರಿಸಿಕೊಳ್ಳಲೇ ಇಲ್ಲ. ದೆಹಲಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಅವರ ಪುತ್ರ ರಜೆಯಲ್ಲಿ ಊರಿಗೆ ಬಂದವರು, ಅವರನ್ನು ಎಲ್ಲಾ ರೀತಿಯ ವೈದ್ಯಕೀಯ ತಪಾಸಣೆಗಳಿಗೆ ಒಳಪಡಿಸಿದಾಗ ಅವರಿಗೆ ಅನ್ನ ನಾಳದ ಕ್ಯಾನ್ಸರ್ ಆಗಿತ್ತು ಎಂದು ತಿಳಿದು ಬಂತು. ಆದರೆ ಆಗಲೇ ಕಾಯಿಲೆ ಕೊನೆಯ ಹಂತಕ್ಕೆ ತಲುಪಿದ್ದು, ಅವರಿಗೆ ಇನ್ನು ಕೆಲವೇ ತಿಂಗಳ ಸಮಯ ಕೊಟ್ಟಿತ್ತು. ಇಷ್ಟಾದರೂ ಅವರು ತಮಗೆ ಏನೂ ಆಗದವರಂತೆ ಇದ್ದುಬಿಟ್ಟರು. ಇದರಲ್ಲಿಯೂ ಅವರು ತಮ್ಮ ಆರಾಧ್ಯ ಗುರು ಭಗವಾನ್‌ ರಮಣ ಮಹರ್ಷಿಗಳ ಮೇಲ್ಪಂಕ್ತಿಯನ್ನು ಅನುಸರಿಸಿದಂತೆ ಕಾಣುತ್ತದೆ. ಆಹಾರ ತೆಗೆದುಕೊಳ್ಳಲಾಗುತ್ತಿರಲಿಲ್ಲ. ರಕ್ತನಾಳದ ಮೂಲಕ ಕೊಡುತ್ತಿದ್ದ ದ್ರವ ಮಾತ್ರವೇ ಅವರ ಆಹಾರವಾಗಿತ್ತು. ಕೊನೆಯವರೆಗೂ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುತ್ತಿದ್ದರು. ಕೊನೆಗೆ ೧೯೯೩ರ ಸೆಪ್ಟೆಂಬರ್ ೬ನೇ ತಾರೀಖು ಮಧ್ಯಾಹ್ನ ೨.೦೦ ಗಂಟೆಗೆ ತಮ್ಮ ಅಚ್ಚುಮೆಚ್ಚಿನ ‘ನಾನಾನೆಂಬುದು ನಾನೇನಲ್ಲಾ, ಈ ಮಾನವ ಜನ್ಮವು ನಾನಲ್ಲಾ..” ಎಂಬ ಶಿಶುನಾಳ ಷರೀಫ್‌ ಅವರ ಹಾಡನ್ನು ಗುಣುಗಣಿಸುತ್ತಾ ದಾಸ ಸಾಹಿತ್ಯ ಪುರಸ್ಕೃತ, ವಚನಗಾಯನ ಪ್ರವರ್ತಕ ಚಕ್ರಕೋಡಿ ನಾರಾಯಣ ಶಾಸ್ತ್ರಿಗಳು ಭಗವಂತನಲ್ಲಿ ಲೀನರಾದರು. ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಯಿತು. ಶಾರದೆಯ ಕೊರಳ ಹಾರದ ಮಣಿಯೊಂದು ಜಗುಳಿ ಬಿತ್ತು!

 

ಆಕರ

. ‘ಪ್ರಣಾಮ’-ಚಕ್ರಕೋಡಿ ರಾಮಕೃಷ್ಣ ಶಾಸ್ತ್ರಿಗಳ ಸಂಸ್ಮರಣ ಗ್ರಂಥ, ಸಂಪಾದಕರು ಶ್ರೀ ಸಿ. ಸುಬ್ರಹ್ಮಣ್ಯ ಶಾಸ್ತ್ರಿ, ನಿಸರ್ಗ ಪ್ರಕಾಶನ, ಮೈಸೂರು. ೨೦೦೨.

. ‘Traditionalist with a distinct style’ by T.B. Narasimhachar..

. ‘ಶರಣ ಸಂದೇಶ’ ಪತ್ರಿಕೆಯಲ್ಲಿ ವರದಿ. ತಾ. ೧೨.೭.೧೯೩೭

. ಸಿ.ಎನ್‌. ಶಾಸ್ತ್ರಿಗಳಿಗೆ ಸಮರ್ಪಿಸಿದ ‘ಸನ್ಮಾನ ಪತ್ರ’ ರ್ಶರೀ ಉಮಾಮಹೇಶ್ವರ ಸಂಗೀತ ಕಲಾ ಶಾಲೆ. ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ. ೧೮.೫.೧೯೭೪.

. ‘ಗಮಕ ದಿಗ್ಗಜರು’-ಶ್ರೀ ಎಂ.ಎ. ಜಯರಾಮ ರಾವ್‌, ಕರ್ಣಾಟಕ ಸಂಗೀತ ನೃತ್ಯ ಅಕಾಡೆಮಿ, ೧೯೯೮.

. ‘ಕರ್ನಾಟಕ ಸಂಗೀತ ವೈಭವ’-ಶ್ರೀ ಸಿ.ಎನ್‌.ಶಾಸ್ತ್ರೀ, ಪ್ರಕಾಶನ:

ಕನ್ನಡ ಅಧ್ಯಯನ ಪೀಠ, ಕರ್ಣಾಟಕ ವಿಶ್ವವಿದ್ಯಾಲಯ, ಧಾರವಾಡ.

೧೯೭೬

. ‘ವ್ಯಕ್ತ ನಾದಕ್ಕೆ ಶ್ರುತಿಯಾದ ಶಾಸ್ತ್ರಿ’-ಪ್ರೊ. ಜಿ.ಟಿ. ನಾರಾಯಣ ರಾವ್‌,

‘ಪ್ರಜಾವಾಣಿ’ ದೈನಿಕ. ೨೬.೯.೧೯೯೩

. ‘ಚಕ್ರಕೋಡಿ ನಾರಾಯಣ ಶಾಸ್ತ್ರಿ ಒಂದು ಆತ್ಮೀಯ ಸ್ಮರಣೆ-ಕೆ.ಎಸ್‌.

ಸುಬ್ರಾಯ ಭಟ್‌, ‘ಹೊಸ ದಿಗಂತ’ ದೈನಿಕ, ೧೫.೯.೧೯೯೩.