ಶಬ್ದ ರಹಿತ ನಿರಾಕಾರದೊಳಗೊಬ್ಬನೇ
ಕೂತು ಕಾಯುತ್ತಿದ್ದೆ ಕವಿತೆಗೆ
ಕಣ್ಣಲ್ಲಿ ಕಣ್ಣಿಟ್ಟು ಹುಡುಕಿದರು ಇರಲಿಲ್ಲ
ಒಂದಾದರೂ ಮೋಡ ಬಾನಿನೊಳಗೆ.

ಮಬ್ಬು ಕವಿದಿತ್ತು ಸುತ್ತಲೂ, ನಿರ್ಭಾವ
ಶೂನ್ಯದ ಮಧ್ಯೆ ಆಕಾಶಕ್ಕೆ
ಕೊಂಬೆಗೈಚಾಚಿಕೊಂಡಿತ್ತು ಬೋಳುಮರ
ಅನಾಥವಾಗಿ, ಅರ್ಥವೇ ಇರದಂತೆ ಥಣ್ಣಗೆ.

ಕಾಯುತ್ತಿರಲು ಹೀಗೆ ನಾನೊಬ್ಬನೇ
ಕವಿತೆಗೆ, ಅದೆಲ್ಲಿಂದಲೋ ಸದ್ದಿರದೆ
ಹಾರಿಬಂತೊಂದು ಕಪ್ಪನೆ ಕಾಗೆ, ಅಸ್ಪಷ್ಟತೆಗೆ
ಮೂಡಿದ ಹಾಗೆ ಎರಡು ರೆಕ್ಕೆ.

ವಕ್ರಾಭಿವ್ಯಕ್ತಿಗಳ ಕೊಂಬೆನಕ್ಷೆಯ ನಡುವೆ
ರೆಕ್ಕೆಯರಳಿಸಿ, ಸ್ವರವೆತ್ತಿ ಕೂತೊಡನೆ ಕಾಗೆ,
ಇಡೀ ಮರಕ್ಕೆ ಮರವೇ, ಪ್ರತೀಕವಾಗಿ
ಪರಿಣಮಿಸಿತ್ತು ನಾನು ಕಾಯುತ್ತಿದ್ದ ಕವಿತೆಗೆ.

ಈಗೊಂದು ಅನುಮಾನ : ಇದುವರೆಗು ಕಾದದ್ದು
ಮರವೋ, ಕಾಗೆಯೊ, ನಾನೊ ಅಥವಾ ಈ ಒಂದು ಕ್ಷಣವೋ
ಒಂದು ಮತ್ತೊಂದಕ್ಕೆ ಸಂಬಂಧವೇರ್ಪಡಿಸಿ
ಮೈದೋರುವರ್ಥಗಳ ವಿನ್ಯಾಸವೊ ?