ಹೆಬ್ಬೆರಳಿಲ್ಲದ ಹಸ್ತವನ್ನು ನೋಡುತ್ತಾ
ನಿಶ್ಶಬ್ದವಾಗಿ ಕೂತಿದ್ದಾನೆ ಏಕಲವ್ಯ
ಧನ್ಯತೆಯೊ ವಿಷಾದವೊ ಬಲಿದಾನವೊ
ಅದೆಲ್ಲ ಕವಿ ಕಲ್ಪನೆಯ ಸಂಭಾವ್ಯ.

ಹರಿಯುತ್ತಲೇ ಇದೆ ಬೆಟ್ಟದ ಹೊಳೆ
ಘಟ್ಟವನ್ನಿಳಿದು ದೂರದ ಕಡಲಿಗೆ,
ವಸಂತದಲ್ಲಿ ಮರ ಚಿಗುರಿ ಸಮೃದ್ಧವಾಗಿ
ಮತ್ತೆ ಶಿಶಿರದಲ್ಲಿ ಬರೀ ತರಗೆಲೆ.

ಎಲೆಯುದುರಿ ಬಿದ್ದರೂ, ಮತ್ತೆ ಕೊಂಬೆಗೆ
ಚಿಗುರು ಮೂಡುವುದಂತೂ ನಿಶ್ಚಯ,
ಬೆರಳಿನ ವಿಚಾರ ಹಾಗಲ್ಲ ; ಶೋಷಣೆಗೆ
ಎಷ್ಟುಮುಖ ? ಅದು ಚರಿತ್ರೆಯ ವಿಷಯ.

ಮತ್ತೆ ಮತ್ತೆ ಬರುತ್ತಾರೆ ಆಚಾರ್ಯ ದ್ರೋಣರು
ನಿಶ್ಶಬ್ದದಲಿ ಕೂತ ಏಕಲವ್ಯನ ಬಳಿಗೆ,
ಆಮೇಲೇನಾಗುತ್ತದೆ ? ನಿನಗೆ ಗೊತ್ತೇ ಇದೆ
ಈ ಚರಿತ್ರೆಯ ಚಕ್ರಗತಿಯೊಳಗೆ.