ಚಕ್ರಮುನಿ ಅಥವಾ ಚಕೂರ್‌ಮುನಿಸ್ ಸೊಪ್ಪು ಇತರ ಎಲ್ಲಾ ಸೊಪ್ಪುಗಳಿಗಿಂತ ಶ್ರೇಷ್ಠ. ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ವಿವಿಧ ಜೀವಸತ್ವಗಳಿರುವ ಕಾರಣ ಬಹು ಜೀವಸತ್ವದ ಸೊಪ್ಪು ಎಂಬ ಹೆಸರು ಬಂದಿದೆ.

ಪೌಷ್ಟಿಕ ಗುಣಗಳು : ಚಕೂರ್‌ಮುನಿಸ್ ಪೌಷ್ಟಿಕ ಸೊಪ್ಪು.

೧೦೦ ಗ್ರಾಂ ಸೊಪ್ಪಿನಲ್ಲಿರುವ ವಿವಿಧ ಪೋಷಕಾಂಶಗಳು

ಪ್ರೊಟೀನ್ – ೭.೪ ಗ್ರಾಂ
’ಎ’ ಜೀವಸತ್ವ – ೪೭೫೦೦ ಐಯೂ
’ಬಿ’ಜೀವಸತ್ವ – ೫೧ ಐಯೂ
’ಸಿ’ ಜೀವಸತ್ವ – ೧೧೦ ಮಿ.ಗ್ರಾಂ
ಕ್ಯಾಲೊರಿಗಳು – ೫೪

ಔಷಧೀಯ ಗುಣಗಳು ಈ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಪ್ರೊಟೀನ್ ಇರುವ ಕಾರಣ ಬಲಿಷ್ಟ ಮಾಂಸಖಂಡಗಳು ಸಾಧ್ಯ. ಜೀವಸತ್ವಗಳಿರುವುದರಿಂದ ರೋಗ ನಿರೋಧಕ ಸಾಮರ್ಥ್ಯ ಸುಲಭವಾಗಿ ಉಂಟಾಗುವುದು; ಮಕ್ಕಳಿಗೆ ಹೆಚ್ಚಾಗಿ ಕೊಡಬೇಕು.

ಉಗಮ ಮತ್ತು ಹಂಚಿಕೆ : ಇದರ ತವರೂರು ಮಲೇಷ್ಯಾ. ಇದನ್ನು ನಮ್ಮ ದೇಶಕ್ಕೆ ಯಾರು ತಂದರು, ಯಾವಾಗ ತಂದರು ಎಂಬುದು ತಿಳಿದುಬಂದಿಲ್ಲ. ಪ್ರಸ್ತುತ ನಮ್ಮ ದೇಶದಲ್ಲಿ ತಮಿಳುನಾಡು, ಕೇರಳ, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಇದನ್ನು ಸ್ವಲ್ಪಮಟ್ಟಿಗೆ ಬೆಳೆಯುತ್ತಾರಷ್ಟೆ,

ಸಸ್ಯ ವರ್ಣನೆ : ಚಕ್ರಮುನಿ ಯುರ್ಫೊರ್ಬಿಯೇಸೀ ಕುಟುಂಬಕ್ಕೆ ಸೇರಿದ ಪೊದೆ ಸಸ್ಯ. ಪೂರ್ಣಬೆಳೆದಾಗ ೨ ರಿಂದ ೩ ಮೀಟರ್ ಎತ್ತರವಿದ್ದು ಪೊದೆಯಂತೆ ಕಾಣುವುದು. ಕಾಂಡ ಸಣಕಲು. ಪಕ್ಕ ರೆಂಬೆಗಳು ಸಣ್ಣಗೆ ಉದ್ದಕ್ಕಿದ್ದು ನೆಲದತ್ತ ಇಳಿಬಿದ್ದಿರುತ್ತವೆ. ಸಸ್ಯಭಾಗಗಳ ಬಣ್ಣ ಹಸುರು; ನೋಡಲು ಆಕರ್ಷಕವಾಗಿರುತ್ತವೆ. ಎಲೆಗಳು ಸಂಯುಕ್ತ ಕಿರಿದಾದ ತೊಟ್ಟುಗಳಿಂದ ಕೂಡಿರುತ್ತವೆ. ಉಪ ಎಲೆಗಳು ಸ್ವಲ್ಪ ಉದ್ದನಾಗಿದ್ದು ಓರೆಯಾಗಿ ಈಟಿಯಾಕಾರವಿರುತ್ತವೆ. ಅವುಗಳ ಅಂಚು ಒಡೆದಿರುವುದಿಲ್ಲ. ಎಲೆಗಳು ೨.೫ ರಿಂದ ೭.೫ ಸೆಂ.ಮೀ. ಉದ್ದ ಇರುತ್ತವೆ. ಅವು ೧.೨ ರಿಂದ ೩.೦ ಸೆಂ.ಮೀ. ಅಗಲವಿರುತ್ತವೆ. ತೊಟ್ಟಿನ ಉದ್ದ ಕೇವಲ ೦.೩ ರಿಂದ ೦.೪ ಸೆಂ.ಮೀ. ಅಷ್ಟೆ. ಎಲೆಗಳ ಬಣ್ಣ ದಟ್ಟ ಹಸುರು.

ಹೂವು ಎಲೆಗಳ ಕಂಕುಳಲ್ಲಿ ಮೂಡುತ್ತವೆ. ಮೊದಲು ಹೆಣ್ಣು ಹೂವೂ ಮತ್ತು ನಂತರ ಗಂಡು ಹೂವು ಕಾಣಿಸಿಕೊಳ್ಳುತ್ತವೆ. ಹೂವು ತೊಟ್ಟುಗಳಿಗೆ ಅಂಟಿಕೊಂಡಿರುತ್ತವೆ. ಅವುಗಳ ಬಣ್ಣ ಕಡುಗೆಂಪು. ಹೂಗಳ ಪೀಠಭಾಗದಲ್ಲಿ ಆರು ಕಚ್ಚುಗಳಿದ್ದು, ರಸವತ್ತಾಗಿರುತ್ತವೆ. ಅವುಗಳ ಬಣ್ಣ ಕಡುಗೆಂಪು ಇಲ್ಲವೇ ಹಳದಿ. ಅಂಡಾಶಯ ಹಸುರು ಬಣ್ಣದ್ದಿರುತ್ತದೆ. ಅದರಲ್ಲಿ ಮೂರು ಕವಾಟಗಳಿರುತ್ತವೆ. ಕಾಯಿಗಳ ಬಣ್ಣ ಹಸುರು, ಅವು ಬಲಿತು ಪಕ್ವಗೊಂಡಂತೆಲ್ಲಾ ಕೆಂಪು ಬಣ್ಣಕ್ಕೆ ಮಾರ್ಪಡುತ್ತವೆ. ಪ್ರತಿ ಹಣ್ಣಿನಲ್ಲಿ ಆರು ಮೂಲೆಗಳಿರುತ್ತವೆ. ಹಣ್ಣುಗಳ ಗಾತ್ರ ಸರಾಸರಿ ೧.೨೫ ರಿಂದ ೧.೭೫ ಸೆಂ.ಮೀ.

ಹವಾಗುಣ : ಇದರ ಬೇಸಾಯಕ್ಕೆ ಸೌಮ್ಯ ಆರ್ದ್ರತೆ ಹಾಗೂ ಒಂದೇ ತೆರನಾದ ಉಷ್ಣತಾಮಾನ ಇದ್ದಲ್ಲಿ ಅನುಕೂಲ. ದಕ್ಷಿಣ ಭಾರತದಲ್ಲಿ ಇದನ್ನು ಹೆಚ್ಚಾಗಿ ಬೆಳೆಯುವ ಪ್ರದೇಶಗಳೆಂದರೆ ತಮಿಳುನಾಡಿನ ಕೊಯಮತ್ತೂರು, ಕಲ್ಲಾರ್, ಬರ‍್ಲಿಯಾರ್ ಹಾಗೂ ಕನ್ಯಾಕುಮಾರಿ. ಜಾವಾದಲ್ಲಿ ಸಮತಟ್ಟಾದ ಮೈದಾನ ಪ್ರದೇಶಗಳಿಂದ ಹಿಡಿದು ಬೆಟ್ಟ ಪ್ರದೇಶಗಳವರೆಗೆ ಇದರ ಬೇಸಾಯ ಮಾಡುತ್ತಾರೆ. ಅಧಿಕ ಮಳೆಯಾಗುವ ಹಾಗೂ ದಟ್ಟ ನೆರಳಿರುವ ಕಡೆಗಳಲ್ಲಿ ಹೆಚ್ಚು ಸಮೃದ್ಧವಾಗಿ ಬೆಳೆಯುತ್ತವೆ.

ಭೂಗುಣ : ಇದಕ್ಕೆ ನೀರು ಬಸಿಯುವ ಮರಳು ಗೋಡು ಅತ್ಯುತ್ತಮ. ಇತರ ಮಣ್ಣುಗಳಲ್ಲೂ ಸಹ ಬೆಳೆಯಬಹುದು.

ಭೂಮಿ ಸಿದ್ಧತೆ ಮತ್ತು ನಾಟಿ : ಭೂಮಿಯನ್ನು ಒಂದೆರಡು ಸಾರಿ ಉಳುಮೆ ಮಾಡಿ ಸಮ ಮಾಡಿದ ನಂತರ ೧.೨೫-೧.೫೦ ಮೀಟರ್ ಅಂತರದಲ್ಲಿ ೩೦ ಘನ ಸೆಂ.ಮೀ. ಗಾತ್ರದ ಗುಂಡಿಗಳನ್ನು ತೆಗೆದು ಸಮಪ್ರಮಾಣದ ತಿಪ್ಪೆಗೊಬ್ಬರ ಮತ್ತು ಮೇಲ್ಮಣ್ಣುಗಳ ಮಿಶ್ರಣ ಹರಡಿ ತುಂಬಬೇಕು. ಈ ಕೆಲಸಕ್ಕೆ ಮೇ-ಜೂನ್ ಸೂಕ್ತ ಕಾಲ. ಅನಂತರ ಮಳೆ ಇಲ್ಲದಿದ್ದರೆ ತೆಳ್ಳಗೆ ನೀರು ಕೊಟ್ಟಲ್ಲಿ ಆ ಮಿಶ್ರಣ ಚೆನ್ನಾಗಿ ಕುಳಿತುಕೊಳ್ಳುತ್ತದೆ. ಕೆಲವೊಮ್ಮೆ ಇದನ್ನು ತೀರಾ ಹತ್ತಿರ ಇರುವಂತೆ ನೆಟ್ಟು ಸಜೀವ ಬೇಲಿಯಾಗಿ ಬೆಳೆಸುವುದುಂಟು.

ಚಕ್ರಮುನಿ ಗಿಡಗಳನ್ನು ಬೀಜ ಊರಿ ಇಲ್ಲವೇ ಕಾಂಡದ ತುಂಡುಗಳನ್ನು ನೆಟ್ಟು ವೃದ್ಧಿ ಪಡಿಸಬಹುದು. ಬೀಜ ಪದ್ಧತಿ ನಿಧಾನ. ಎರಡನೆಯ ಪದ್ಧತಿ ಸುಲಭ. ಸೂಕ್ತ ಸಸ್ಯಚೋದಕದಲ್ಲಿ ತುಂಡುಗಳ ಬುಡಭಾಗವನ್ನು ಅದ್ದಿ ನೆಟ್ಟರೆ ಅಧಿಕ ಸಂಖ್ಯೆಯ ಬೇರು ಸಾಧ್ಯ. ಈ ಉದ್ದೇಶಕ್ಕೆ ಸುಮಾರು ೨೨ ಸೆಂ.ಮೀ. ಉದ್ದದ ಹಾಗೂ ಮೂರು ನಾಲ್ಕು ಗೆಣ್ಣುಗಳಿರುವ ತುಂಡುಗಳನ್ನು ಜೂನ್-ಜುಲೈ ತಿಂಗಳಲ್ಲಿ ಸಿದ್ಧಗೊಳಿಸಿ ಸಸಿಮಡಿಗಲಲ್ಲಿ ಇಲ್ಲವೇ ಪ್ಲಾಸ್ಟಿಕ್ ಚೀಲಗಳಲ್ಲಿ ನೆಟ್ಟು, ನೀರು ಕೊಡುತ್ತಿದ್ದಲ್ಲಿ ಬೇಗ ಬೇರು ಬಿಡುತ್ತವೆ. ಚೋದಕಗಳ ಪೈಕಿ ಇಂಡೋಲ್ ಅಸೆಟಿಕ್ ಅಮ್ಲ, ಇಂಡೋಲ್ ಬ್ಯುಟಿರಿಕ್ ಆಮ್ಲ, ನ್ಯಾಫ್ತಲಿನ್ ಅಸೆಟಿಕ್ ಆಮ್ಲ ಮುಂತಾದುವು ಸೂಕ್ತವಿರುತ್ತವೆ. ಕೊಯಮತ್ತೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯಲ್ಲಿ ೫೦ ಪಿಪಿಎಂ ಸಾಮರ್ಥ್ಯದ ಇಂಡೋಲ್ ಅಸೆಟಿಕ್ ಆಮ್ಲದ ದ್ರಾವಣದಲ್ಲಿ ತುಂಡುಗಳ ಬುಡಭಾಗವನ್ನು ಅದ್ದಿ ನೆಟ್ಟಾಗ ಶೇಕಡಾ ೭೫ ರಷ್ಟು ಬೇರು ಉತ್ಪತ್ತಿಯಾಗಿದ್ದು ನ್ಯಾಫ್ತಲಿನ್ ಅಸೆಟಿಕ್ ಆಮ್ಲವು ದಪ್ಪನಾದ ಹಾಗೂ ಬಲಿಷ್ಠ ಬೇರುಗಳಲ್ಲಿ ಪರಿಣಮಿಸಿದ್ದಾಗಿ ವರದಿಯಾಗಿದೆ. ಹೀಗೆ ಉಪಚರಿಸಿದ ತುಂಡುಗಳನ್ನು ಸಸಿಮಡಿಗಳಲ್ಲಿ ೬೦ ಸೆಂ.ಮೀ. ಅಂತರದ ಸಾಲುಗಳಲ್ಲಿ ೪೫ ಸೆಂ.ಮೀ. ಗೊಂದರಂತೆ ನೆಡುವುದು ಸರಿಯಾದ ವಿಧಾನ. ಹದವರಿತು ನೀರು ಕೊಡುತ್ತಿದ್ದಲ್ಲಿ ಅವು ಬೇರು ಬಿಟ್ಟು ಮುಂದಿನ ವರ್ಷ ನಾಟಿಮಾಡಲು ಸೂಕ್ತ. ಸಸಿಗಳನ್ನು ಹೆಪ್ಪು ಸಮೇತ ಜೋಪಾನವಾಗಿ ಕಿತ್ತು, ಗುಂಡಿಗಳಿಗೆ ವರ್ಗಾಯಿಸಬೇಕು. ಆಸರೆ ಕೋಲು ಸಿಕ್ಕಿಸಿ ಕಟ್ಟಿದರೆ ಅವು ಗಾಳಿಗೆ ಅಲುಗಾಡುವುದಿಲ್ಲ.

ಆಕಾರ ಮತ್ತು ಸವರುವಿಕೆ : ಇದರ ಗಿಡಗಳನ್ನು ಚಪ್ಪರದ ಆಕಾರದಲ್ಲಿ ಕಮಾನು ಇಲ್ಲವೇ ತಡಿಕೆ ವಿಧಾನಗಳಲ್ಲಿ ಹಬ್ಬಿಸಿ ಬೆಳೆಸಬಹುದು. ಕಡಿಮೆ ಸಂಖ್ಯೆಯ ಗಿಡಗಳಿದ್ದರೆ ಪೊದೆಯಂತೆ ಬೆಳೆಯಲು ಬಿಡಬಹುದು. ಹಾಗೆಯೇ ಬಿಟ್ಟರೆ ಪೊದೆಯಾಗಿ ಅನಂತರ ಸಣ್ಣ ಮರವಾಗುತ್ತದೆ.

ಗೊಬ್ಬರ : ಇದರ ಗಿಡಗಳಿಗೆ ಪ್ರತಿ ವರ್ಷ ತಲಾ ೧೦ ರಿಂದ ೨೦ ಕಿ.ಗ್ರಾಂ. ತಿಪ್ಪೆ ಗೊಬ್ಬರ ಕೊಡಬೇಕು. ಇದಕ್ಕೆ ರಾಸಾಯನಿಕ ಗೊಬ್ಬರಗಳನ್ನು ಕೊಡುವ ರೂಢಿ ಇಲ್ಲ.

ನೀರಾವರಿ : ಮಳೆ ಇಲ್ಲದ ದಿನಗಳಲ್ಲಿ ವಾರಕ್ಕೊಮ್ಮೆ ನೀರು ಕೊಡಬೇಕು.

ಮಿಶ್ರ ಬೆಳೆಯಾಗಿ : ಇದರ ರೆಂಬೆಗಳು ಅಷ್ಟೊಂದು ದಟ್ಟ ನೆರಳನ್ನು ಉಂಟು ಮಾಡುವುದಿಲ್ಲ. ಆದ ಕಾರಣ ಸಾಲುಗಳ ನಡುವೆ ಬೇರು ತರಕಾರಿಗಳು, ಸೊಪ್ಪು ಮುಂತಾಗಿ ಬೆಳೆದು ಲಾಭ ಹೊಂದಬಹುದು. ಮಾವು, ಸಪೋಟ ಮುಂತಾದ ಹಣ್ಣಿನ ತೋಟಗಳಲ್ಲಿ ಮೊದಲ ೪-೫ ವರ್ಷಗಳವರೆಗೆ ಇದನ್ನು ಅಂತರ ಬೆಳೆಯಾಗಿ ಸಹ ಬೆಳೆಯಬಹುದು.

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಕಳೆಗಳನ್ನು ಕಿತ್ತು ತೆಗೆಯಬೇಕು. ಪಾತಿಗಳ ಅಗಲಕ್ಕೆ ಒಣಹುಲ್ಲು, ತರಗು ಮುಂತಾಗಿ ಹರಡಿದರೆ ತೇವ ಬಹಳ ಕಾಲ ಉಳಿಯುತ್ತದೆ ಹಾಗೂ ಕಳೆಗಳ ಬಾಧೆ ಇರುವುದಿಲ್ಲ.

ಕೊಯ್ಲು ಮತ್ತು ಇಳುವರಿ : ಸಸಿಗಳನ್ನು ನೆಟ್ಟ ಮೂರು-ನಾಲ್ಕು ತಿಂಗಳುಗಳಲ್ಲಿ ಅಲ್ಪ ಸ್ವಲ್ಪ ಸೊಪ್ಪು ಸಿಗುತ್ತದೆ. ಅಲ್ಲಿಂದಾಚೆಗೆ ಸೊಪ್ಪನ್ನು ಕೊಯ್ಲು ಮಾಡಬಹುದು. ಹಲವಾರು ವರ್ಷಗಳವರೆಗೆ ಸೊಪ್ಪು ಸಿಗುತ್ತಿರುತ್ತದೆ. ಗಿಡವೊಂದಕ್ಕೆ ೫ ರಿಂದ ೧೦ ಕಿ.ಗ್ರಾಂ. ಸೊಪ್ಪು ಸಾಧ್ಯ.

ಕೀಟ ಮತ್ತು ರೋಗಗಳು : ಈ ಸೊಪ್ಪಿನ ಬೆಳೆಗೆ ಹಾನಿಯನ್ನುಂಟು ಮಾಡುವ ಕೀಟ ಮತ್ತು ರೋಗಗಳು ಕಡಿಮೆ. ಕೀಟಗಳ ಪೈಕಿ ಸಸ್ಯ ಹೇನು ಸ್ವಲ್ಪ ಹಾನಿಯನ್ನುಂಟು ಮಾಡುತ್ತವೆ. ಅವುಗಳ ಹತೋಟಿಗೆ ೧೦ ಲೀಟರ್ ನೀರಿಗೆ ೧೦ ಮಿ.ಲೀ. ಪ್ಯಾರಾಥಿಯಾನ್ ಅಥವಾ ಮತ್ತಾವುದಾದರೂ ಸೂಕ್ತ ಕೀಟನಾಶಕ ಸಿಂಪಡಿಸಬಹುದು. ರೋಗಗಳಲ್ಲಿ ಹೇಳಿಕೊಳ್ಳುವಂತಹವು ಯಾವುವೂ ಇಲ್ಲ.

ಬೀಜೋತ್ಪಾದನೆ : ಇದನ್ನು ಹೆಚ್ಚಾಗಿ ನಿರ್ಲಿಂಗ ವಿಧಾನದಲ್ಲಿ ವೃದ್ಧಿಪಡಿಸುವ ಕಾರಣ ಬೀಜೋತ್ಪಾದನೆ ಮಾಡುವುದಿಲ್ಲ.

* * *