ನಾನು ಬರೆಯಲು ಶುರುಮಾಡಿದ್ದು ನನಗೆ ನೆನಪಿರುವಂತೆ ನಾನು ದಾವಣಗೆರೆ ಹೈಸ್ಕೂಲಿನ ಎರಡನೆ ತರಗತಿಯ ವಿದ್ಯಾರ್ಥಿಯಾಗಿದ್ದಾಗ. ಆಗ ನನಗೆ ಹದಿನಾಲ್ಕು ವರ್ಷ ವಯಸ್ಸು. ಆ ವೇಳೆಗೆ ನನ್ನ ಪ್ರಾಥಮಿಕ ತರಗತಿಯ ದಿನಗಳಲ್ಲಿ ನನಗೆ ಸಾಹಿತ್ಯದ ಬಗ್ಗೆ ರುಚಿ ಹುಟ್ಟಿಸಿದ್ದು ಅಂದಿನ ಪರಿಸರದಲ್ಲಿ ಪ್ರಕಟವಾಗುತ್ತಿದ್ದ ಕೆಲವು ಸಾಹಿತ್ಯಕ ಪತ್ರಿಕೆಗಳು- ಮಕ್ಕಳಪುಸ್ತಕ, ಕತೆಗಾರ, ಇಂಥವು; ಮತ್ತು ಆಗತಾನೇ ಕಂತುಕಂತಾಗಿ ಬರುತ್ತಿದ್ದ ಶಿವರಾಮ ಕಾರಂತರ ‘ಬಾಲಪ್ರಪಂಚ’ ಸಂಚಿಕೆಗಳಲ್ಲಿನ ಕತೆಯಂಥ ಸಂಗತಿಗಳು. ನಮ್ಮ ತಂದೆ ಮಿಡಲ್‌ಸ್ಕೂಲಿನ ಹೆಡ್ಮಾಸ್ಟರಾಗಿದ್ದರಿಂದ, ಮತ್ತು ಅವರಿಗೆ ಮೂರುವರ್ಷಕ್ಕೆ ಒಂದು ಬಾರಿಯಂತೆ ಊರಿಂದ ಊರಿಗೆ ವರ್ಗವಾಗುತ್ತಾ ಹೋದುದರಿಂದ, ಬೇರೆ ಬೇರೆ ಪರಿಸರದ ಬದುಕಿನ ಪರಿಚಯದ ಜತೆ ಆಯಾ ಊರುಗಳ ಸ್ಕೂಲುಗಳಲ್ಲಿದ್ದ ಲೈಬ್ರರಿ ಪುಸ್ತಕಗಳು, ನನ್ನ ಎಳೆಯಂದಿನಲ್ಲಿ ಹೇಗೋ ಹುಟ್ಟಿಕೊಂಡ ಓದಿನ ಹಸಿವೆಗೆ ಧಾರಾಳವಾಗಿ ಗ್ರಾಸವನ್ನು ಒದಗಿಸಿದವು. ಆ ಕಾಲದ ಕಾದಂಬರಿಗಳು, ಮುಖ್ಯವಾಗಿ ಗಳಗನಾಥ, ವೆಂಕಟಾಚಾರ್ಯ, ದೇವುಡು ಇಂಥವರ ಕಾದಂಬರಿಗಳು, ನನಗೆ ಸಾಹಿತ್ಯದ ಬಗ್ಗೆ ಆಸಕ್ತಿಯನ್ನು ಮೂಡಿಸಿದವು. ಹೀಗೆ ಸಾಹಿತ್ಯದ ಬಗ್ಗೆ ನನಗೆ ಆಕರ್ಷಣೆ ಹುಟ್ಟಿಸಿದ್ದು ಕಥಾಸಾಹಿತ್ಯವೇ ಆದರೂ ನಾನು ಕತೆ-ಕಾದಂಬರಿಗಳನ್ನು ಬರೆಯದೆ ಯಾಕೆ ಕವಿತೆ ಬರೆಯಲು ಮೊದಲು ಮಾಡಿದೆ, ಮತ್ತು ಮುಖ್ಯವಾಗಿ ಕವಿಯಾಗಿಯೇ ಯಾಕೆ ರೂಪುಗೊಂಡೆ ಎಂಬುದನ್ನು ನಾನು ವಿವರಿಸಲಾರೆ. ಆದರೂ ಒಂದು ಹಂತದಲ್ಲಿ ಅಂದರೆ ೧೯೪೨-೧೯೪೩ರ ಕಾಲದಲ್ಲಿ, ಮಾಡಲು ಕೆಲಸವಿಲ್ಲದೆ ಪುಟಗಟ್ಟಲೆ ಕತೆ ಬರೆದೆ. ಆನಂತರ ಓದಿನೋಡಿದ್ದರಲ್ಲಿ ಅವುಗಳಲ್ಲಿ ಅಂತಹ ಸ್ವಾರಸ್ಯವೇನೂ ಕಾಣಲಿಲ್ಲ. ಅದರಿಂದಾಗಿ ಅವುಗಳೆಲ್ಲವನ್ನೂ ಹರಿದು ಹಾಕಿದೆ. ಕತೆ ಬರೆಯುವುದು ಬಹುಶಃ ನನಗೆ ಒಗ್ಗತಕ್ಕದಲ್ಲ ಅನ್ನುವುದ್ದನ್ನು ನಾನು ಕಂಡುಕೊಂಡೆನೋ ಏನೊ.

ನಾನು ದಾವಣಗೆರೆಯ ಹೈಸ್ಕೂಲಿನಲ್ಲಿ ಓದುತಿದ್ದಾಗ ನಮ್ಮ ಗಣಿತದ ಮೇಷ್ಟ್ರೊಬ್ಬರು-ರೇವಣ್ಣ ಎಂದು ಹೆಸರು-ತಮಗೆ ಹಾಕುತ್ತಿದ್ದ ಬದಲಿ ಪಿರಿಯಡ್‌ಗಳಲ್ಲಿ ಗಣಿತದ ಪಾಠ ಮಾಡಲು ಹೋಗದೆ, ಅಂದಿನ ಕೆಲವು ಕವಿಗಳ ಸಾಹಿತ್ಯಕೃತಿಗಳನ್ನು ತಂದು ತರಗತಿಗಳಲ್ಲಿ ಓದುತ್ತಿದ್ದರು. ಅದರಲ್ಲೂ ಅವರಿಗೆ ಅತ್ಯಂತ ಪ್ರಿಯವಾದ ಕುವೆಂಪು ಅವರ ಕೆಲವು ಕವಿತೆಗಳನ್ನು, ‘ರಕ್ತಾಕ್ಷಿ’ ಎಂಬ ನಾಟಕವನ್ನೂ ಒಮ್ಮೆ ಓದಿ ತೋರಿಸಿದರು. ಅದೇನಾಯಿತೋ, ಕುವೆಂಪು ಅವರ ಕಾವ್ಯ-ನಾಟಕ ವಾಚನದ ಮೋಡಿ ನನ್ನನ್ನು ಅಂದು ಮೊಸಳೆಯಂತೆ ಕಾಲು ಹಿಡಿದು ನಾನರಿಯದ ಅನಿರ್ವಚನೀಯ ಅನುಭವದ ಮಡುವಿನೊಳಕ್ಕೆ ಎಳೆದುಕೊಂಡು ಹೋದಂತಾಯಿತು. ನನ್ನೊಳಗೆ ಮಲಗಿದ್ದ ಮೂಕ ಮರ‍್ಮರಗಳನ್ನು ತಟ್ಟಿ ಎಚ್ಚರಿಸಿದಂತಾಯಿತು. ಈ ಅರ್ಥದಲ್ಲಿ ಶ್ರೀ ಕುವೆಂಪು ಅವರೇ ನನ್ನ ಕಾವ್ಯಾಸಕ್ತಿ ಹಾಗೂ ಕಾವ್ಯ ನಿರ್ಮಿತಿಯ ಪ್ರಥಮ ಸ್ಫೂರ್ತಿ ಎನ್ನಬಹುದು. ಅನಂತರ  ಆರೇಳು ವರ್ಷಗಳ ಮೇಲೆ ನಾನು ಮಹಾರಾಜಾ ಕಾಲೇಜಿಗೆ ಬಿ.ಎ. ಆನರ‍್ಸ್ ಹಾಗೂ ಎಂ.ಎ. ತರಗತಿಗಳ ವಿದ್ಯಾರ್ಥಿಯಾಗಿ, ಕುವೆಂಪು ಅವರ ಸಾಕ್ಷಾತ್ ಸಂಪರ್ಕಕ್ಕೆ ಒಳಗಾದಾಗ, ಹಿಂದೆ ಹೈಸ್ಕೂಲಿನ ದಿನಗಳಲ್ಲಿ ಅಕಸ್ಮಾತ್ ಕಾಲಿರಿಸಿದ ಈ ನದಿಯ ಮೂಲಕ ದೋಣಿಯಲ್ಲಿ ತೇಲಿಕೊಂಡು ಬಂದು ಭೋರ್ಗರೆಯುವ ಕಡಲಿನೊಳಕ್ಕೇ ಪ್ರವೇಶಿಸಿದ ಅನುಭವವಾಯಿತು. ಮುಂದೆ ಅವರ ವ್ಯಕ್ತಿತ್ವ ಅವರ ಕಾವ್ಯ ಎಲ್ಲವೂ ನನ್ನನ್ನು ಆಕ್ರಮಿಸಿಕೊಂಡವು. ೧೯೫೧ರಲ್ಲಿ ಕುವೆಂಪು ಅವರ ಮುನ್ನುಡಿಯೊಂದಿಗೆ ಪ್ರಕಟವಾದ ನನ್ನ ಪ್ರಥಮ ಕವನ ಸಂಗ್ರಹ ‘ಸಾಮಗಾನ’ ಬಹುಮಟ್ಟಿಗೆ ಕುವೆಂಪು ಅವರ ದಟ್ಟವಾದ ಪ್ರಭಾವದ ಸಂಕೇತದಂತೆ ತೋರುತ್ತದೆ. ಅಲ್ಲಿಂದ ಮುಂದೆ ಪ್ರಕಟವಾದ ನನ್ನ ಇನ್ನಿತರ ಕವನ ಸಂಗ್ರಹಗಳು, ಈ ಸೆಳೆತದಿಂದ ನಾನು ಪಾರಾದದ್ದು ಹೇಗೆ ಅನ್ನುವುದನ್ನು ಹೇಳುತ್ತವೆ. ಅಂತೂ ನನ್ನ ಹೈಸ್ಕೂಲಿನ ದಿನಗಳಲ್ಲಿ ಕುವೆಂಪು ಅವರ ಕವಿತೆಯ ಪ್ರೇರಣೆಯಿಂದ ನನ್ನಲ್ಲಿ ಎಚ್ಚರಗೊಂಡ ಕಾವ್ಯಾಭಿರುಚಿಯನ್ನು ನೀರೆರೆದು ಬೆಳೆಸಿದವರು, ಈಗಾಗಲೇ ಹೇಳಿದ ನನ್ನ  ಗಣಿತದ ಉಪಾಧ್ಯಾಯರೇ. ಅವರು ನಾನಿದ್ದ ಜಯದೇವ ಹಾಸ್ಟಲ್ಲಿನ ವಾರ್ಡನ್ ಆಗಿದ್ದರು ಮಾತ್ರವಲ್ಲ, ಅಲ್ಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಕೂಡ. ಅವರು ವಾರಕ್ಕೆ ಒಂದು ಸಲ, ಅಂದರೆ ಭಾನುವಾರ, ಎಲ್ಲ ವಿದ್ಯಾರ್ಥಿಗಳೂ ಏನಾದರೊಂದು ವಿಷಯವನ್ನು ಕುರಿತು ಮಾತನಾಡಬೇಕು ಅಥವಾ ಬರೆದು ತಂದು ಓದಬೇಕು ಎಂದು ವ್ಯವಸ್ಥೆ ಮಾಡಿದ್ದರು. ಅಂಥ  ಒಂದು ಭಾನುವಾರ, ನಾನೂ ಒಂದು ಪದ್ಯ ತಯಾರಿಸಿ ಓದಿದೆ. ಮಕ್ಕಳಿಗೆ ಪ್ರಿಯವಾಗಬಹುದಾದ, ನಾನು ಎಲ್ಲೋ ಕೇಳಿದ ಕಥೆಯೊಂದು ನನ್ನ ಪದ್ಯದ ವಸ್ತು. ಆ ಪದ್ಯದ ಕೆಲವು ಸಾಲುಗಳು (ಇನ್ನೂ ನನಗೆ ನೆನಪಿವೆ) ಹೀಗಿವೆ:

ಇರುವೆಯೊಂದು ತನ್ನ ಮರಿಗೆ
ನೀರೊಳೀಜು ಕಲಿಸಲೆಂದು
ಹರಿವ ತೊರೆಯ ತಡಿಗೆ ಬಂದು
ನಿಂತುಕೊಂಡಿತು.

ನನ್ನ ಹದಿನಾಲ್ಕನೆಯ ವಯಸ್ಸಿನ ಈ ರಚನೆಯನ್ನು ಕೇಳಿ ನನ್ನ ಆ ಮೇಷ್ಟ್ರು ಹಿಗ್ಗಿ ಹೀರೇಕಾಯಾಗಿ ನನ್ನ ಬೆನ್ನು ತಟ್ಟಿದ್ದನ್ನು ನಾನೆಂದೂ ಮರೆಯಲಾರೆ.

ನನ್ನ ಮನೆತನದಲ್ಲಿ ಸಾಹಿತ್ಯಾಸಕ್ತಿಯುಳ್ಳ ಅಥವಾ ಸಾಹಿತ್ಯ ನಿರ್ಮಿತಿಯನ್ನು ಕೈಕೊಂಡವರು ಯಾರಾದರೂ ಇದ್ದರೋ ಹೇಗೆ ಎಂಬುದು ನನಗೆ ತಿಳಿಯದು. ನಮ್ಮ ತಂದೆ ಶಿವಮೊಗ್ಗಾ ಜಿಲ್ಲೆಯ ಶಿಕಾರಿಪುರದವರು. ಅವರು ತಮ್ಮ ತಂದೆಯನ್ನು ತಮ್ಮ ಎಳೆಯಂದಿನಲ್ಲೆ ಕಳೆದುಕೊಂಡಿದ್ದರಿಂದ, ಆ ಮಬ್ಬಿನಾಚೆಗೇನಿತ್ತೋ ಅದು ಅವರಿಗೂ ತಿಳಿಯದು. ಜತೆಗೆ ನಮ್ಮ ತಂದೆ, ಅವರ ತಂದೆಗೆ ಒಬ್ಬನೇ ಮಗನಾದದ್ದರಿಂದ ಮತ್ತು ಅನಂತರ ಸರ್ಕಾರಿ ಕೆಲಸಕ್ಕೆ ಸೇರಿ, ಊರೂರು ಸುತ್ತುವ ಪಾಡು ಪ್ರಾಪ್ತವಾದದ್ದರಿಂದ, ನನ್ನ ಎಳೆಯಂದಿನಲ್ಲಿಯೂ ನನಗೆ ಶಿಕಾರಿಪುರದ ದರ್ಶನವಾಗಲಿಲ್ಲ. ಹೀಗಾಗಿ ಶಿಕಾರಿಪುರವನ್ನು ನಾನು ನೊಡಿದ್ದು ತೀರಾ ಇತ್ತೀಚೆಗೆ.  ನಮ್ಮ ಪೂರ್ವಿಕರು, ಶಿಕಾರಿಪುರಕ್ಕೆ ಬರುವ ಮುನ್ನ ‘ಗುಗ್ಗರಿ’ಯಲ್ಲಿದ್ದರಂತೆ. ಗುಗ್ಗರಿ ಧಾರವಾಡ ಜಿಲ್ಲೆಯಲ್ಲಿದೆಯಂತೆ. ನನ್ನ ಇನಿಷಿಯಲ್ಲಿನೊಳಗಿರುವ ಈ ‘ಜಿ’, ಸೂಚಿಸುವುದು ‘ಗುಗ್ಗರಿ’ಯನ್ನು. ಅಂತೂ ಪಂಪನ ಬನವಾಸಿ ನಾಡಿಗೆ ಸೇರಿದವನು ನಾನು. ಆದರೂ, ಮುಂದೆ ನನ್ನ ಎರಡನೆಯ ತಾಯಿಯ ಕಾರಣದಿಂದ ಚಿತ್ರದುರ್ಗದ ಪರಿಸರ ನನ್ನ ಬದುಕನ್ನು ತುಂಬಿಕೊಂಡಿತು. ಮತ್ತೆ ಅಲ್ಲಿಂದ ತುಮಕೂರು ಜಿಲ್ಲೆಯ ಊರುಗಳಿಗೆ ನಮ್ಮ ತಂದೆ ವರ್ಗವಾಗಿ ಬಂದದ್ದರಿಂದ, ಎಸ್.ಎಸ್.ಎಲ್.ಸಿ ತರಗತಿಗೆ ಬಂದ ಹೊತ್ತಿಗೆ ನಾನು ದಾವಣಗೆರೆ ಹೈಸ್ಕೂಲಿನಿಂದ, ತುಮಕೂರು ಹೈಸ್ಕೂಲಿಗೆ ವರ್ಗಾಯಿಸಿಕೊಂಡು, ಸಿದ್ಧಗಂಗೆಯ ಮಠವನ್ನು ಸೇರಿದೆ. ತುಮಕೂರಿನಿಂದ ಮೂರೂವರೆ ಮೈಲಿ ದೂರದ ಈ ಋಷ್ಯಾಶ್ರಮಸದೃಶವಾದ ಸ್ಥಳದಲ್ಲಿನ ಬಂಡೆ ಬೆಟ್ಟಗಳು, ಈ ಬೆಟ್ಟಗಳಿಗೆ ಒತ್ತಿಕೊಂಡ ಮರಗಳು, ಆಚೆಯ ಕಣಿವೆಯಲ್ಲಿ ಹರಿಯುವ ಹಳ್ಳ, ಮಿರುಗುವ ಕೆರೆ, ದೇವಸ್ಥಾನಗಳ ಗಂಟೆಗಳ ದನಿ, ವಿಸ್ತಾರವಾಗಿ ಹಬ್ಬಿಕೊಂಡ ಹೊಲ ಗದ್ದೆಗಳು, ಈ ಎಲ್ಲವೂ ನನ್ನ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಮಾಡಿವೆ. ಈ ಪರಿಸರದಲ್ಲಿ ನಾನು ಸಾಕಷ್ಟು ಪದ್ಯ ಬರೆದೆ. ಹಾಗೆ ಬರೆದ ನನ್ನ ಕವಿತೆಯ ಕಂತೆಯನ್ನು ಒಂದು ಸಲ ನನ್ನ ಹೈಸ್ಕೂಲಿನ ಕನ್ನಡ ಪಂಡಿತರ ಕೈಗೆ ಕೊಟ್ಟೆ. ಕಂದ ವೃತ್ತಾದಿಗಳ ಸಂಸ್ಕಾರದಲ್ಲಿ ಬೆಳೆದ ಅವರ ಮನಸ್ಸಿಗೆ ನನ್ನ ಪದ್ಯಗಳು ಹಿಡಿಸಲಿಲ್ಲವೆಂದು ತೋರುತ್ತದೆ. ನಾಲ್ಕು ಉಪಚಾರದ ಮಾತನ್ನಾಡಿ ಹಿಂದಕ್ಕೆ ಕೊಟ್ಟರು. ಅದರ ಮುಂದಿನ ವರ್ಷ ಕಾಲೇಜಿಗೆ ಸೇರಿದೆ. ಸೇರಿದ ಎರಡು ತಿಂಗಳಲ್ಲೇ ಭಾರತ ಸ್ವಾತಂತ್ರ  ಚಳುವಳಿಯ ಗಾಳಿಯಲ್ಲಿ, ದೇಶವೇ ಅಲ್ಲೋಲ ಕಲ್ಲೋಲವಾಗಿ, ನಾನು ಊರಿಗೆ ಹೋಗಬೇಕಾಯಿತು, ಮತ್ತೆ ಅದರ ಮುಂದಿನ ವರ್ಷ, ೧೯೪೩ರ ಜೂನ್ ವೇಳೆಗೆ ಮತ್ತೆ ಕಾಲೇಜಿಗೆ ಬಂದು ಓದನ್ನು ಮುಂದುವರಿಸಿದಾಗ, ಅಲ್ಲಿ ರಾಜರತ್ನಂ ನನಗೆ ಅಧ್ಯಾಪಕರು. ಕಂಚಿನಕಂಠದ ಜಟ್ಟಿಯ ಮೈಕಟ್ಟಿನ ರಾಜರತ್ನಂ ಪದ್ಯ ಓದುವ ವೈಖರಿ ಯಾರನ್ನಾದರೂ ಬೆರಗಾಗಿಸುವಂತಿತ್ತು. ತುಂಬ ಸಂಕೋಚದ ನಾನು, ನನ್ನ ಕವಿತೆಗಳನ್ನು ಅವರಿಗೆ ತೋರಿಸುವುದು ಹೇಗೆ ಎಂದು ಕೆಲವು ತಿಂಗಳು ದೂರ ನಿಂತೆ. ಈ ಕಾಲದಲ್ಲಿ ಇಂಗ್ಲಿಷ್ ತರಗತಿಗಳಲ್ಲಿ ಬೋಧಿತವಾಗುತ್ತಿದ್ದ ಕವಿತೆಗಳ ಸೊಗಸು ನನ್ನನ್ನು ಸೆಳೆದುಕೊಂಡಿತು. ಬೈರನ್, ಗ್ರೇ, ಷೆಲ್ಲಿ, ಕೀಟ್ಸ್, ವರ್ಡ್ಸ್‌ವರ್ತ್ ಇಂಥವರ ಪದ್ಯಗಳ ಗುಂಗು ನನ್ನನ್ನು ಕಾಡಿತು. ಅವುಗಳಿಂದ ಪ್ರಭಾವಿತನಾಗಿ ಒಂದಷ್ಟು ಗೀಚಿದೆ. ಕಡೆಗೊಂದು ದಿನ ಧೈರ್ಯಮಾಡಿ ನನ್ನ ಕವಿತೆಗಳ ಕಂತೆಯನ್ನು ರಾಜರತ್ನಂ ಅವರ ಕೈಯಲ್ಲಿ ಇಟ್ಟೆ. ಮರುದಿನ ನನ್ನನ್ನು ತುಂಬ ಪ್ರೀತಿಯಿಂದ ಕರೆದು ಕೂರಿಸಿಕೊಂಡು, ಪದ್ಯ ಬರೆಯುವುದು ಹೇಗೆ, ಇನ್ನಷ್ಟು ಚನ್ನಾಗಿ ಬರೆಯಬೇಕಾದರೆ ನಾನು ಏನೇನನ್ನು ಓದಬೇಕು, ಇತ್ಯಾದಿಗಳನ್ನು ಹೇಳಿ ನನ್ನ ಕವಿತೆಯ ಕಂತೆಯಿಂದ ಅವರೇ ಒಂದು ಪದ್ಯವನ್ನು ಆರಿಸಿ ಅದರ ಒಂದು ಪ್ರತಿಮಾಡಿಸಿ, ಆಗ ಮಾಸ್ತಿಯವರ ಸಂಪಾದಕತ್ವದಲ್ಲಿ ಬೆಂಗಳೂರಿಂದ ಪ್ರಕಟವಾಗುತ್ತಿದ್ದ ‘ಜೀವನ’ ಪತ್ರಿಕೆಗೆ ಕಳುಹಿಸಿಕೊಟ್ಟರು. ಒಂದೆರಡು ತಿಂಗಳಲ್ಲಿ ಅದು ಜೀವನ ಮಾಸಪತ್ರಿಕೆಯಲ್ಲಿ ಪ್ರಕಟವಾಗಿ, ಅದರ ಗೌರವ ಪ್ರತಿ ನನಗೆ ತಲುಪಿತು. ಆ ಕವಿತೆಯ ಮೊದಲೆರಡು ಪದ್ಯಗಳು ಹೀಗಿವೆ.

ಕಡಲಿನ ಕತ್ತಲ ಗವಿಯಲ್ಲಿ
ಅಡಗಿಹವೆಷ್ಟೋ ರತ್ನಗಳು
ಘೋರಾರಣ್ಯದ ತರುಗಳಲಿ
ಅರಳಿಹವೆಷ್ಟೋ ಕುಸುಮಗಳು

ಎಸೆಯುವ ರನ್ನವ ಧರಿಸುವರಾರು
ಕಡಲಿನ ಗವಿಯಿಂ ಹೊರತೆಗೆದು
ಕುಸುಮದ ಕಂಪನು ಸೇವಿಪರಾರು
ತುಂಬಿದ ಕಾನನ ಮಧ್ಯದಲಿ
?

ಇದು ಮೊಟ್ಟಮೊದಲು ಪ್ರಕಟವಾದ ನನ್ನ ಕವಿತೆ. ನನಗಾಗ ಹದಿನಾರೋ ಹದಿನೇಳೋ ವಯಸ್ಸು. ಈ ಪದ್ಯ ಕೂಡಾ ಥಾಮಸ್ ಗ್ರೇ ಬರೆದ ‘ಅನ್ ಎಲಿಜಿ ರಿಟನ್  ಆನ್ ಎ ಕಂಟ್ರಿ ಚರ್ಚ್ ಯಾರ್ಡ್’ ಎಂಬ ಉದ್ದನೆಯ ಕವಿತೆಯೊಳಗಿನ ಪದ್ಯಗಳ ಭಾವವನ್ನು ಹಿಡಿದು ಬರೆದದ್ದು. ರಾಜರತ್ನಂ ಹಾಗೂ ಮಾಸ್ತಿ ಅವರ ಪ್ರೀತಿ ಹಾರೈಕೆಗಳು ನನ್ನ ಬದುಕಿನೊಳಗೆ ಬೆಸೆದುಕೊಂಡದ್ದು ಹೀಗೆ.

ನನ್ನ ವಿದ್ಯಾಭ್ಯಾಸಕ್ಕೆ ಒಂದು  ವರ್ಷ ಕಲ್ಲು ಬಿದ್ದು, ಅನಂತರ ೧೯೪೬ನೆ ಜೂನ್‌ನಲ್ಲಿ ಮಹಾರಾಜಾ ಕಾಲೇಜಿಗೆ ಸೇರಿದೆ-ಬಿ.ಎ.ಆನರ‍್ಸ್ ವಿದ್ಯಾರ್ಥಿಯಾಗಿ. ಆಗ ನನ್ನ ಕೆಲವು ಗೆಳೆಯರ ಜತೆ ಮೈಸೂರಿನ ಡಿ. ಸುಬ್ಬಯ್ಯ ರಸ್ತೆಯಲ್ಲಿ ಒಂದು ಬಾಡಿಗೆ ಕೊಠಡಿ ಹಿಡಿದಿದ್ದೆ. ಕೊಠಡಿಯಲ್ಲಿ  ನಾವು ಮೂರು ಜನ; ನಾವು ಮೂವರು ಆರಿಸಿಕೊಂಡಿದ್ದ ವಿಷಯ ಬೇರೆ ಬೇರೆ. ರಾತ್ರಿ ನಾವೆಲ್ಲ ಕೂತು ಓದುತ್ತಿರುವ ಹೊತ್ತಿನಲ್ಲಿ ನಾನು ನನ್ನ ಹಾಸಿಗೆಯ ಸುರುಳಿಯನ್ನೆ ‘ಟೇಬಲ್’ ಮಾಡಿಕೊಂಡು ಗೋಡೆಗೆ ಒರಗಿಕೊಂಡು ಕೂತು ಪದ್ಯ ಬರೆಯುತ್ತಿದ್ದೆ. ನನ್ನ ಸಹವಾಸಿಗಳು, ನಾನೇನೋ ಕ್ಲಾಸ್ ನೋಟ್ಸ್ ಮಾಡಿಕೊಳ್ಳುತ್ತಿದ್ದೇನೆಂದೂ ತಿಳಿದುಕೊಳ್ಳುತ್ತಿದ್ದರು. ಆಗ ಅದೇನೋ ಪದ್ಯ ಅನ್ನುವುದು ನನ್ನ ಬೆನ್ನು ಹತ್ತಿದಂತೆ ತೋರುತ್ತಿತ್ತು. ಹೀಗೆ ನಾನು ಬರೆದ ಸಾಕಷ್ಟು ಪದ್ಯಗಳು ನನ್ನ ಪ್ರಿಯ ಗುರು ತ.ಸು. ಶಾಮರಾಯರ ಕಣ್ಣಿಗೆ ಬೀಳುವುದು ತಡವಾಗಲಿಲ್ಲ. ಒಂದರ್ಥದಲ್ಲಿ ಅವರೇ ನನಗೆ ‘ಪ್ರೇರಕ-ಪೋಷಕ-ಗುರು.’ ‘ಅದೇನು ಬರೆದಿದ್ದಿಯೋ ತಾರಯ್ಯಾ ಕೇಳೋಣ’ ಎಂದು ಅಂದದ್ದೇ ತಡ, ವಾರಕ್ಕೆ ಒಂದು ದಿನ ಅವರ ಮನೆಗೆ ಹೋಗಿ, ಅವರ ಕಾರ‍್ಯಗೌರವವನ್ನೂ ಲೆಕ್ಕಿಸದೆ, ಓದುತ್ತಿದ್ದೆ. ಒಂದೊಂದು ಸಲ ಅವರ ಜತೆಗೆ ಸಂಚಾರ ಹೊರಟು ನಂಜನಗೂಡು ರಸ್ತೆಯ ಎಡಗಡೆಗೆ ಒಂದಷ್ಟು ದೂರದ ಜಾಮುಂಡಿಬೆಟ್ಟದ ತಪ್ಪಲಿನಲ್ಲಿ ಪ್ರಶಸ್ತವಾದ ಬಂಡೆಯ ಮೇಲೆ ಕೂರುತ್ತಿದ್ದೆವು. ಪಶ್ಚಿಮದಲ್ಲಿನ ತೆಂಗಿನ ತೋಟದ ತುರುಗಲಿನಾಚೆ ದೂರದ ದಿಗಂತದಲ್ಲಿ ಸಂಜೆಯ ಸೂರ್ಯ ತಳತ್ತಳಿಸುವಾಗ, ಬಂಡೆಯ ಮೇಲೆ ಕೂತು ಒಂದು ಚಿಟಿಕೆ ನಶ್ಯವನ್ನು ಮೂಗಿಗೆ ಏರಿಸಿ ‘ಸರಿ, ಶುರುಮಾಡಯ್ಯ’ ಅನ್ನುತ್ತಿದ್ದರು. ನಾನು ಆ ವಾರ ಬರೆದ ಪದ್ಯಗಳನ್ನು ಅವರಿಗೆ ಓದುತ್ತಿದ್ದೆ. ಅರ್ಧ ನಿಮೀಲಿತ ನಯನರಾಗಿ, ತಲ್ಲೀನತೆಯಿಂದ ನನ್ನ ಎಂತೆಂಥ ಕೆಟ್ಟ ಪದ್ಯಗಳನ್ನೂ, ಅವುಗಳಲ್ಲೇನೋ ಮಹಾ ವಿಶೇಷ ತುಂಬಿದೆ ಅನ್ನುವಂಥ ಮುಖಮುದ್ರೆಯಿಂದ ಅವರು ಕೇಳುತ್ತಿದ್ದ ಚಿತ್ರ ನನಗೆ ಇಂದಿಗೂ ಕಣ್ಣಿಗೆ ಕಟ್ಟಿದ ಹಾಗಿದೆ. ‘ಎದೆತುಂಬಿ ಹಾಡಿದೆನು ಅಂದು ನಾನು’ ಎಂಬ ನನ್ನದೊಂದು ಬಹು ಜನಪ್ರಿಯವಾದ ಪದ್ಯವಿದೆಯಲ್ಲ? ಅದು ಅವರನ್ನು ಕುರಿತು ಬರೆದದ್ದು. ನಾನು ಎದೆತುಂಬಿ ಹಾಡಿದ್ದನ್ನು ಮನವಿಟ್ಟು ಕೇಳಿದವರು ಅವರೇ.

ಶಾಮರಾಯರ ಅಕ್ಕರೆಯಲ್ಲಿ ಹೀಗೆ ರೂಪುಗೊಳ್ಳುತ್ತಿದ್ದ ನನ್ನ ಕವಿತೆ ಕುವೆಂಪು ಅವರ ಕಣ್ಣಿಗೆ ಬಿದ್ದದ್ದೂ ಒಂದು ಆಕಸ್ಮಿಕವೇ. ನಾನು ಮೊದಲ ಅನರ‍್ಸ್‌ದಲ್ಲಿದ್ದ ಇಡೀ ವರ್ಷ ನಾನು ಬರೆದದ್ದನ್ನು ಅವರಿಗೆ ತೋರಿಸುವುದು ಹೇಗೆ ಎಂಬ ಅಳುಕಿನಿಂದ ತೆಪ್ಪಗಿದ್ದೆ. ಕುವೆಂಪು ಅವರನ್ನು ನೋಡುವುದು, ಅವರ ಮಾತುಗಳನ್ನು ಕೇಳುವುದು, ಬರೆದರೆ ಅವರ ಹಾಗೇ ಬರೆಯುವುದು ಇತ್ಯಾದಿಗಳೆ ಸಾರ್ಥಕವಾದ ಕೆಲಸಗಳಾಗಿದ್ದವು ನನ್ನ ಪಾಲಿಗೆ. ಕಿತ್ತು ತಿನ್ನುವ ಬಡತನ, ವೈಯಕ್ತಿಕವಾದ ಹಲವಾರು ತಾಕಲಾಟಗಳು. ಇಂಥವುಗಳ ನಡುವೆಯೂ, ಸೂರ್ಯೋದಯ, ಚಂದ್ರೋದಯ, ಆದರ್ಶ, ಅಧ್ಯಾತ್ಮ ಇಂಥವುಗಳೇ ಬಹುಮಟ್ಟಿಗೆ ನನ್ನ ಅಂದಿನ ಕವಿತೆಯ ವಸ್ತುಗಳಾಗಿದ್ದವು. ಇದಕ್ಕೆ ಕಾರಣ ಬಹುಶಃ ನವೋದಯದ ಸಾಹಿತ್ಯಕ ಪರಿಸರ ಮತ್ತು ಕುವೆಂಪು ಅಂಥವರ ಪ್ರಭಾವಗಳು ಎನ್ನಬಹುದು. ಒಂದು ಸಲ ಮಹಾರಾಜಾ ಕಾಲೇಜಿನ ಕರ್ನಾಟಕ ಸಂಘ-ನಾನು ಎರಡನೆ ಬಿ.ಎ. ಅನರ‍್ಸ್‌ನಲ್ಲಿರುವಾಗ-ಏರ್ಪಡಿಸಿದ ಕವಿತಾ ಸ್ಪರ್ಧೆಯಲ್ಲಿ, ನನಗೆ ಮತ್ತು ನನ್ನ ಸಹಪಾಠಿಯಾಗಿದ್ದ (ಇಂಗ್ಲಿಷ್ ಆನರ‍್ಸ್‌ದಲ್ಲಿ) ಎ.ಕೆ. ರಾಮಾನುಜನ್ ಇಬ್ಬರಿಗೂ ಬಹುಮಾನ ಬಂದವು. ಹಾಗೆ ನನಗೆ ಬಹುಮಾನ ಬಂದದ್ದು ನಾನು ಬರೆದ ಒಂದು ‘ಭಯಂಕರ’ ಪದ್ಯಕ್ಕೆ. ಕೆಲವು ತಿಂಗಳ ಹಿಂದೆ ನಾನು ನನ್ನ ತರಗತಿಯ ಗೆಳೆಯರೂ ಹಂಪೆ ಬಾದಾಮಿ ಪಟ್ಟದಕಲ್ಲು ಇತ್ಯಾದಿಗಳ ಕಡೆ ಪ್ರವಾಸ ಹೋದಾಗ, ಒಂದು ಹುಣ್ಣಿಮೆಯ ರಾತ್ರಿ, ತುಂಬುಚಂದ್ರನನ್ನು ಕಾರ್ಮೋಡಗಳು ಆಕ್ರಮಿಸಿದ್ದನ್ನು ಕುರಿತ ಪದ್ಯ ಅದು. “ಉಡುಗಣಗಳೊಡೆಯನಂಬರದ ಲಸಿತ ಲಕ್ಷ ಸ್ತೋಮ ಹೇಮ ಧಾಮಾವೃತದಿ” ಎಂದು ಶುರುವಾಗುವ ಪದ್ಯ ಎಂದು ನನಗೆ ನೆನಪು. ಅದೃಷ್ಟವಶಾತ್ ಆ ಪದ್ಯ ಎಲ್ಲೋ ಕಳೆದು ಹೋಯಿತು; ಮತ್ತೆ ಸಿಕ್ಕಲಿಲ್ಲ. ಆ ಪದ್ಯಕ್ಕೆ ಬಂದ ಬಹುಮಾನವನ್ನು ಸ್ವೀಕರಿಸಲು ಕರ್ನಾಟಕ ಸಂಘದ ವಾರ್ಷಿಕೋತ್ಸವದ ಸಮಾರಂಭದ ದಿನ, ವೇದಿಕೆಯ ಮೇಲೆ ಹೋದಾಗಲೇ ಕುವೆಂಪು ಅವರಿಗೆ ಗೊತ್ತಾದದ್ದು ನಾನು ಪದ್ಯ ಬರೆಯುತ್ತೇನೆ ಅನ್ನುವುದು, ಮರು ದಿನ ಅವರ ತರಗತಿ ಮುಗಿದನಂತರ (ಆ ತರಗತಿಯಲ್ಲಿದ್ದವರು ನಾವು ಎಂಟು ಜನ; ಆಗಿನ ವರ್ಷಗಳಲ್ಲಿ ಮೊಟ್ಟಮೊದಲ ಬಾರಿಗೆ ಬಿ.ಎ. ಆನರ‍್ಸ್‌ಗೆ ಎಂಟು ಜನ ವಿದ್ಯಾರ್ಥಿಗಳು ಬಂದದ್ದು ಅದೇ ಮೊದಲ ವಿಕ್ರಮ)ನನ್ನೆಬ್ಬನನ್ನೆ ಕಣ್ಸನ್ನೆ ಮಾಡಿ ಕೂರಿಸಿಕೊಂಡರು ಕುವೆಂಪು. ನನ್ನೆಲ್ಲ ಪೂರ್ವೋತ್ತರಗಳನ್ನು ವಿಚಾರಿಸಿದರು. ‘ಏನೇನು ಬರೆದಿದ್ದೀಯಾ ಅದನ್ನೆಲ್ಲಾ ತಾ’ ಎಂದರು. ನಿಜಕ್ಕೂ ನನಗೆ ಗಾಬರಿಯಾಯಿತು. ಒಂದೆರಡು ದಿನಗಳನಂತರ ನಾನು ಬರೆದ ಪದ್ಯಗಳ ಹಾಳೆಗಳನ್ನು ಟ್ಯಾಗ್‌ಮಾಡಿ ತೆಗೆದುಕೊಂಡು ಹೋಗಿ ಅವರ ಕೈಗೆ ಕೊಟ್ಟೆ. ‘ಅದ್ಯಾವುದು ಮೊನ್ನೆ ನಿನಗೆ ಬಹುಮಾನ ಬಂತಲ್ಲ? ಅದನ್ನು ತೋರಿಸು’ ಎಂದರು. ಆ ಕಂತೆಯೊಳಗಿನ ಆ ಪದ್ಯವನ್ನು ತೆಗೆದು ತೋರಿಸಿದೆ. ಓದಿದರು. ‘ಇದೇನಿದು? ಬೆಳುದಿಂಗಳ ವರ್ಣನೆ, ಒಳ್ಳೇ ಪ್ರಖರವಾದ ನಡುಹಗಲಿನ ಅನುಭವದ ಹಾಗೆ ಇದೆಯಲ್ಲ’ ಅಂದರು. ನನಗೆ ಬಹುಮಾನವನ್ನು ತಂದುಕೊಟ್ಟ ಕವಿತೆ ಹೀಗೆ ಕೈಕೊಡುವುದೆಂದು ನಾನು ಊಹಿಸಿ ಕೂಡಾ ಇರಲಿಲ್ಲ. ನಾಚಿಕೆಯಿಂದ, ಗಾಬರಿಯಿಂದ ಕುಸಿದೆ. ಕುವೆಂಪು ನಕ್ಕರು. ಇನ್ನೊಂದೆರಡು ಪದ್ಯಗಳ ಮೇಲೆ ಕಣ್ಣಾಡಿಸಿದರು. ‘ಇವು ನಿಜವಾಗಿಯೂ ಚೆನ್ನಾಗಿವೆ. ಬರೀತಾ ಹೋಗಿ’ ಅಂದರು. ನನಗೆ ಹೋದ ಜೀವ ಬಂತು. ಅವರು ಇಷ್ಟಪಟ್ಟ ಕೆಲವನ್ನು ತೋರಿಸಿ, ‘ಇವುಗಳನ್ನು ಪ್ರತಿಮಾಡಿ ಪ್ರಬುದ್ಧ ಕರ್ಣಾಟಕದ ಸಂಪಾದಕರ ಕೈಗೆ ಕೊಡಿ. ನಾನು ಕಳುಹಿಸಿಕೊಟ್ಟೆ ಎಂದು ಅವರಿಗೆ ತಿಳಿಸಿ’ ಎಂದರು. ಅನಂತರ ಮುಂದೆ ಎಷ್ಟೋ ಕಾಲದವರೆಗೆ ನನ್ನ ಕವಿತೆಗಳು ‘ಪ್ರಬದ್ಧ ಕರ್ಣಾಟಕ’ದಲ್ಲಿ  ಪ್ರಕಟವಾದವು.

ನನ್ನ ಬಿ.ಎ. ಆನರ‍್ಸ್ ಪರೀಕ್ಷೆ (ಮೇ ೧೯೪೯) ಮುಗಿದು, ನಾನು ತೇರ್ಗಡೆ ಹೊಂದಿ ದಾವಣಗೆರೆಯ ಕಾಲೇಜಿಗೆ ಉಪನ್ಯಾಸಕನಾಗಿ ಹೋದೆ. ಅಲ್ಲಿ ನನಗೆ ಜತೆಯಾದವರು, ಕಲಾವಿದರೂ, ಸಾಹಿತ್ಯಾಸಕ್ತರೂ ಆದ ಗೆಳೆಯ ಪ್ರಭುಪ್ರಸಾದರು. ಅವರೂ ನಾನೂ ದಾವಣಗೆರೆಯ ಊರಾಚೆಯ ಬಟ್ಟಬಯಲಿನಲ್ಲಿ ದಿನವೂ ಸಂಜೆ ವಿಹಾರ ಹೊರಟು, ಆ ಬಟಾಬಯಲಿನ ನಡುವಣ ದಿಬ್ಬವೊಂದರ ಮೇಲೆ ಕೂತು, ಋತು ಋತುವಿಗೂ ಬದಲಾಗುವ ಆ ಪರಿಸರದ ಸೊಗಸನ್ನು ತುಂಬಿಕೊಳ್ಳುತ್ತಿದ್ದೆವು. ‘ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ’ ಎಂಬ ಪದ್ಯ ಮೂಡಿದ್ದು ಆ ದಿನಗಳಲ್ಲಿ. ಈ ನಡುವೆ ಮೈಸೂರಿನಿಂದ ಶಾಮರಾಯರು ಪತ್ರ ಬರೆದು, “ನಿನ್ನ ಎಲ್ಲಾ ಪದ್ಯಗಳನ್ನೂ ಕಾಪಿ ಮಾಡಿ ಕಳುಹಿಸು. ಈಗೊಂದು ಪ್ರಕಾಶನ ಶುರುಮಾಡಿದ್ದೇವೆ. ಅದರ ಹೆಸರು, ‘ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ.’ ಈ ಮಾಲೆಯಲ್ಲಿ ನಿನ್ನ ಕವನ ಸಂಗ್ರಹ ಪ್ರಕಟಿಸೋಣ” ಎಂದು ತಿಳಿಸಿದರು. ನನಗೋ ಆಶ್ಚರ್ಯ ಆನಂದ ಹಾಗೂ ಸಂಭ್ರಮ. ನಾನೂ ಪ್ರಸಾದರೂ ಕೂತು, ಒಂದಷ್ಟು ಪದ್ಯಗಳನ್ನು ಆರಿಸಿ ‘ಸಾಮಗಾನ’ ಎಂದು ಹೆಸರು ಕೊಟ್ಟು ಶಾಮರಾಯರಿಗೆ ಕಳುಹಿಸಿದೆವು. ೧೯೫೧ರಲ್ಲಿ ನನ್ನ ಮೊದಲ ಕವನಸಂಗ್ರಹ ‘ಸಾಮಗಾನ’ ಶ್ರೀ ಕುವೆಂಪು ಅವರ ಮುನ್ನುಡಿಯ ಸಮೇತ ಪ್ರಕಟವಾಗಿಯೇ ಬಿಟ್ಟಿತು.

ದಾವಣಗೆರೆಯಿಂದ ಮೈಸೂರಿಗೆ ವರ್ಗವಾಗಿ, ಎಂ.ಎ. ಓದಲು ಬಂದೆ. ಯುವರಾಜಾ ಕಾಲೇಜಿನಲ್ಲಿ ಅಧ್ಯಾಪಕ; ಮಹಾರಾಜಾ ಕಾಲೇಜಿನಲ್ಲಿ ಎಂ. ಎ. ವಿದ್ಯಾರ್ಥಿ. ೧೯೫೨ರಲ್ಲಿ ಎಂದು ಕಾಣುತ್ತದೆ, ಒಂದು ದಿನ, ಪ್ರಜಾವಾಣಿಯಲ್ಲೋ ಕನ್ನಡ ಪ್ರಭಾದಲ್ಲೋ ನೆನಪಿಲ್ಲ, ನನ್ನ ಮೊದಲ ಸಂಕಲನ ‘ಸಾಮಗಾನ’ದ ದೊಡ್ಡದೊಂದು ವಿಮರ್ಶೆ ಬಂದಿದೆ ಎಂದು ಯಾರೋ ಹೇಳಿದರು. ಪತ್ರಿಕೆಯನ್ನು ದೊರಕಿಸಿಕೊಂಡು ನೋಡಿದೆ. ದೊಡ್ಡ ಅಕ್ಷರಗಳಲ್ಲಿ ‘ಶಿವರುದ್ರಪ್ಪ-ಬಿಳಿಗಿರಿ’ ಎಂಬ ಶೀರ್ಷಿಕೆ ಕಾಣಿಸಿತು. ಬಿಳಿಗಿರಿ ಆಗ ಎಂ. ಎ. ತರಗತಿಯಲ್ಲಿ ನನ್ನ ಕ್ಲಾಸ್‌ಮೇಟ್. ನನ್ನ ಅವರ ಹೆಸರುಗಳ ಶೀರ್ಷಿಕೆಯ ಕೆಳಗೆ, ನನ್ನ ‘ಸಾಮಗಾನ’ ಮತ್ತು ಬಿಳಿಗಿರಿಯವರ ‘ನಂದನ’ ಈ ಎರಡೂ ಪುಸ್ತಕಗಳ ವಿಸ್ತಾರವಾದ ವಿಮರ್ಶೆಗೆ, ವಿಮರ್ಶಕರು ಕೊಟ್ಟ ಶೀರ್ಷಿಕೆಯಿಂದಲೇ ಅವರ ಉದ್ದೇಶ ಸ್ವಯಂ ಸ್ಪಷ್ಟವಾಗಿತ್ತು. ಮಾನ್ಯ ವಿಮರ್ಶಕರು ಅಂದಿನ ಸುಪ್ರಸಿದ್ಧ ಅಂಕಣ ಲೇಖನಕಾರರು. ಅವರ ಇಡೀ ಬರಹ ಪುಸ್ತಕ ವಿಮರ್ಶೆಯಾಗಿರದೆ, ಒಬ್ಬ ಕವಿಯನ್ನು ಇನ್ನೊಬ್ಬ ಕವಿಯ ಮೇಲೆ ಎತ್ತಿಕಟ್ಟುವ ಧಾಟಿಯಲ್ಲಿತ್ತು. ‘ಶಿವರುದ್ರಪ್ಪ, ನಗರದಿಂದ  ದೂರವಾದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಕೂತು ಆಕಾಶವನ್ನು ನೋಡುತ್ತ ಪದ್ಯ ಬರೆದವರು’ ಎಂಬರ್ಥದ ಮಾತುಗಳನ್ನಾಡುವುದರ ಮೂಲಕ ನನ್ನ ಕವಿತೆ ಜೀವನದಿಂದ ದೂರವಾದದ್ದು, ಪಲಾಯನ ಪ್ರವೃತ್ತಿಯುಳ್ಳದ್ದು ಎಂಬುದನ್ನು ಸಾಧಿಸಿ ತೋರಿಸಿದ್ದರು. ಆದರೆ ಬಿಳಿಗಿರಿಯವರು (ಭದ್ರಾವತಿಯನ್ನೂ ಅಲ್ಲಿನ ಕಾರ್ಖಾನೆಗಳ ಚಿಮಣಿಗಳನ್ನು ಕೆಲವು ಪದ್ಯಗಳಲ್ಲಿ ವರ್ಣಿಸಿದ್ದರಿಂದಲೋ ಏನೊ) ನಿಜವಾದ ಕವಿಗಳೆಂದೂ, ಜೀವನವನ್ನು ಯಥಾವತ್ತಾಗಿ ಎದುರಿಸುವವರೆಂದೂ ಅರ್ಥಬರುವ ಮಾತುಗಳನ್ನು ಬರೆದಿದ್ದರು. ಆಗತಾನೇ ಕಾವ್ಯಲೋಕಕ್ಕೆ ಕಾಲಿರಿಸುತ್ತಿದ್ದ ಮೊದಲ ಕವಿಯ ಚೊಚ್ಚಲ ಕೃತಿಯನ್ನು ಕುರಿತು, ಈ ಸುಪ್ರಸಿದ್ಧ ವಿಮರ್ಶಕರು, ಬರೆದ ವಿಮರ್ಶೆಯ ಧಾಟಿ ನನ್ನನ್ನು ತೀರಾ ಧೃತಿಗೆಡಿಸುವ ಸ್ಪಷ್ಟ ಉದ್ದೇಶದಿಂದ ಕೂಡಿತ್ತು. ಆಶ್ಚರ್ಯದ ಸಂಗತಿಯೆಂದರೆ, ನನ್ನ ಸಹಪಾಠಿಯಾದ ಬಿಳಿಗಿರಿಯವರು ತಮಗೆ ದೊರೆತ ಈ ಪ್ರಶಂಸೆಯನ್ನು ತಮ್ಮ ಜೇಬಿಗೆ ಇಳಿಯಬಿಟ್ಟುಕೊಂಡು ಸಂತೋಷಪಡುವಷ್ಟು ಸಣ್ಣವರಾಗಿರಲಿಲ್ಲ. ಅವರು  ಕೂಡಲೇ ಉಗ್ರವಾಗಿ ಆ ವಿಮರ್ಶೆಗೆ ಒಂದು ಪ್ರತಿಕ್ರಿಯೆಯನ್ನು ಬರೆದರು-ಅದೂ ಪದ್ಯ ರೂಪದಲ್ಲಿ. ಅದರ ಹೆಸರು ‘ಕಾಮ್ರೇಡ್ ವಿಮರ್ಶಕ’. ಇಬ್ಬರು ಸ್ನೇಹಿತರ ಕೃತಿಗಳನ್ನು ವಿಮರ್ಶೆಯ ನೆಪದಲ್ಲಿ ಎತ್ತಿಕೊಂಡು, ಒಬ್ಬರನ್ನು ಹೊಗಳಿ ಇನ್ನೊಬ್ಬರನ್ನು ತೆಗಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರವೃತ್ತಿಯನ್ನು ಆ ಪದ್ಯದಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಇಂಥ ಆರೋಗ್ಯಕರ ಪ್ರವೃತ್ತಿಯನ್ನು ಇವತ್ತು ಎಲ್ಲಿ ತರೋಣ?

ಈಗ ಹೇಳಿದ ವಿಮರ್ಶೆ-ಪ್ರತಿವಿಮರ್ಶೆಯ ಘಟನೆ ನಡೆದ ಒಂದೆರಡು ತಿಂಗಳಲ್ಲಿ ಎಂದು ಕಾಣುತ್ತದೆ. ನಾನು ಒಂದು ಸಂಜೆ ಮೈಸೂರಿನಲ್ಲಿ ನನ್ನ ಗೆಳೆಯರ ಜತೆ, ನೂರಡಿ ರಸ್ತೆಯ ಒಂದು ಬದಿಯಲ್ಲಿ ಹೋಗುತ್ತಿದ್ದೆ. ರಸ್ತೆಯ ಆಚೆ ಬದಿಯಲ್ಲಿ ಪ್ರೊ.ತೀ.ನಂ. ಶ್ರೀಕಂಠಯ್ಯನವರು, ಅವರ ಒಂದಿಬ್ಬರು ಸ್ನೇಹಿತರ ಜತೆಗೆ-ಬಹುಶಃ ಡಿ. ಎಲ್. ನರಸಿಂಹಾಚಾರ್ಯರು ಇದ್ದಂತೆ ನೆನಪು-ಬರುತ್ತಿದ್ದರು. ರಸ್ತೆಯ ಈಚೆ ಕಡೆ ನನ್ನನ್ನು ಕಂಡವರೆ, ಕೈ ಎತ್ತಿ ನನ್ನ ಹೆಸರು ಹಿಡಿದು ಕೂಗಿದರು. ಅಷ್ಟೇ ಅಲ್ಲ ಅವರೊಬ್ಬರೇ ರಸ್ತೆಯನ್ನು ದಾಟಿ ನನ್ನ ಕಡೆ ಬಂದರು. ನಾನು ಸಂಭ್ರಮಾಶ್ಚರ್ಯಗಳಿಂದ ನೋಡುತ್ತಾ ಇದ್ದಂತೆ, ಹತ್ತಿರ ಬಂದು ನನ್ನ ಹೆಗಲ ಮೇಲೆಕೈಹಾಕಿ “ಈ ದಿನ ಬೆಳಿಗ್ಗೆ ಜೀವನ ಪತ್ರಿಕೆಯಲ್ಲಿ ನಿಮ್ಮ ಪದ್ಯ ‘ಕ್ರಾಂತಿಕಾರ’ ಅನ್ನುವುದನ್ನು ಓದಿದೆ. ತುಂಬ ಚೆನ್ನಾಗಿದೆ ಆ ಪದ್ಯ” ಎಂದು ನಸುನಕ್ಕರು. ಕಾಂತಿಯುಕ್ತವಾದ ಆ ನಿರ್ಮಲವಾದ ದುಂಡುಮುಖ,  ಅದರೊಳಗಿನ ಉಲ್ಲಾಸ ಇನ್ನೂ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ. ಈ ಬಗೆಯ ಸಹೃದಯತೆಯನ್ನು ಈ ದಿನಗಳಲ್ಲಿ ಕಾಣುವುದು ದುರ್ಲಭ. ಕೆಲವು ದಿನಗಳ ನಂತರ, ಬೆಂಗಳೂರಲ್ಲಿ ಅವರೇ ನನ್ನನ್ನು ಪು.ತಿ.ನ ಅವರಿಗೆ ಪರಿಚಯ ಮಾಡಿಕೊಟ್ಟರು. ಪು.ತಿ.ನ. ಅವರಂತೂ ಅಕ್ಕರೆಯ ಸಕ್ಕರೆಯ ಮುಗ್ಧಮೂರ್ತಿ. ೧೯೫೩ರಲ್ಲಿ ಪ್ರಕಟವಾದ ನನ್ನ ಎರಡನೆಯ ಕವನ ಸಂಗ್ರಹಕ್ಕೆ- ‘ಚೆಲುವು- ಒಲವು’-ಸೊಗಸಾದ ಮುನ್ನುಡಿಯನ್ನು ಬರೆದು ನನ್ನನ್ನು ಹರಸಿದರು. ತೀ.ನಂ. ಶ್ರೀ ಅವರು ಬಹುವಾಗಿ ಮೆಚ್ಚಿಕೊಂಡ ‘ಕ್ರಾಂತಿಕಾರ’ ಎಂಬ ಕವಿತೆ ಆ ಕವನಸಂಗ್ರಹದಲ್ಲಿದೆ. ಅದು,ಅದೇ ತಾನೇ ಕಾಲುಬಂದ ಪುಟ್ಟ ಮಗುವಿನ ಚೇಷ್ಟೆಗಳನ್ನು ಕುರಿತ ಪದ್ಯ. ನನ್ನ ಸಾಂಸಾರಿಕ ಜೀವನದ ಅನುಭವಗಳೇ ಕವಿತೆಯಾಗಿ ಈ ಸಂಗ್ರಹವನ್ನು ತುಂಬಿಕೊಂಡಿವೆ.

೧೯೫೩ರ ವೇಳೆಗೆ ಕನ್ನಡ ಕಾವ್ಯ ಪರಿಸರದಲ್ಲಿ ನವ್ಯಕಾವ್ಯದ ಗಾಳಿ ಬೀಸ ತೊಡಗಿತ್ತು. ಆದರ್ಶಗಳ ಬಗ್ಗೆ, ಚೆಲುವು-ಒಲವುಗಳ ಬಗ್ಗೆ, ಒಂದು ಬಗೆಯ ಉದ್ದೇಶ ಪೂರ್ವಕವಾದ ನಿರಾಕರಣೆಯ ಧ್ವನಿ ಕೇಳತೊಡಗಿತ್ತು. ನಿಯತವಾದ ಪದ್ಯ ಬಂಧಗಳನ್ನು ಮುರಿದು, ಅಂದಿನ ಕವಿಗಳ ಪ್ರಯೋಗ ಪರಿಣತಿ,  ಆಡು ಮಾತಿನ ಮುಕ್ತ ಛಂದೋ ವಿಧಾನಗಳಲ್ಲಿ ಪ್ರಕಟವಾಗತೊಡಗಿತ್ತು. ಈ ಪ್ರಯೋಗಗಳ ಪರಿಣಾಮದಿಂದ ನನ್ನ ಕಾವ್ಯದ ರೂಪಾಂಶಗಳಲ್ಲಿ ತಕ್ಕಮಟ್ಟಿಗಿನ ಬದಲಾವಣೆಗಳು ಉಂಟಾದರೂ, ನನ್ನ ಒಳಮನಸ್ಸು ಮಾತ್ರ ಬೇರೊಂದು ಬಗೆಯ ಚಿಂತನೆಯಲ್ಲಿ ತೊಡಗಿತ್ತು. ಕಾಲ ಮತ್ತು  ಮನುಷ್ಯ, ಭೂಮಿ ಮತ್ತು ಮನುಷ್ಯ ಈ ಎರಡರ ಸಂಬಂಧಗಳನ್ನು ಕುರಿತ ವಿಚಾರಗಳು ನನ್ನನ್ನು ಕಾಡತೊಡಗಿದ್ದವು. ಕಾಲವನ್ನು ಕುರಿತ ಭಯ ಮತ್ತು ಅದನ್ನು ಗೆದ್ದು ನಿಲ್ಲಲು ಮನುಷ್ಯನು ಮಾಡುವ ಪ್ರಯತ್ನಗಳು ಕಾವ್ಯ-ಕಲೆಗಳ ಹಿಂದಿನ ಮುಖ್ಯ ಪ್ರೇರಣೆಯಾಗಿರಬಹುದೆ ಎಂಬ ಚಿಂತನೆಗಳಿಗೆ ನಾನು ಅಭಿವ್ಯಕ್ತಿ ನೀಡತೊಡಗಿದೆ. ೧೯೫೭ರಲ್ಲಿ ಪ್ರಕಟವಾದ ನನ್ನ ‘ದೀಪದ ಹೆಜ್ಜೆ’ ಎಂಬ ಕವನ ಸಂಗ್ರಹ ಈ ಬಗೆಯ ಚಿಂತನೆಗಳಿಗೆ, ಬದುಕಿನ ಆದರ್ಶ ಹಾಗೂ ವಾಸ್ತವಗಳ ಸಂಘರ್ಷಗಳಿಗೆ ರೂಪುಕೊಟ್ಟಂಥ ಕೃತಿಯಾಗಿದೆ. ಬದುಕಿನ ಚೆಲುವು-ಒಲವುಗಳು, ನಿಜವಾಗಿಯೂ ಉಳಿಯತಕ್ಕವು, ಬದುಕಿನ ದುಃಖ ಕ್ರೌರ್ಯ ಇತ್ಯಾದಿಗಳನ್ನು ಒಪ್ಪಿಕೊಂಡೂ, ಅದನ್ನು ಮೀರಿ ದಾಟಲು ನೆರವಾಗತಕ್ಕವು ಎಂಬ ಆಲೋಚನೆಗಳು ನನ್ನನ್ನು ಈ ಕಾಲದ ‘ಚಂಡೆ ಮದ್ದಳೆ’ಯ ಅಬ್ಬರದ ನಡುವೆಯೂ ಒಂದು ನೆಲೆಗೆ ನಿಲ್ಲಿಸಿದ್ದವು. ಅತಿಯಾದ ಭಾವುಕತೆಯಾಗಲೀ, ಆದರ್ಶಗಳಾಗಲೀ, ಕೇವಲ ದೊಡ್ಡ ದೊಡ್ಡ ಮಾತುಗಳಾಗಲೀ ಎಷ್ಟೊಂದು ಪೊಳ್ಳು ಎಂದು ಅನ್ನಿಸತೊಡಗಿತ್ತು; ದೇವರು, ಧರ್ಮ, ವಿಧಿ, ಕರ್ಮ ಇತ್ಯಾದಿಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ವಾಸ್ತವವನ್ನು ಯಥಾವತ್ತಾಗಿ ಒಪ್ಪಿಕೊಳ್ಳುವ, ಗ್ರಹಿಸುವ ಹಾಗೂ ಎದುರಿಸುವ ಧೈರ್ಯವನ್ನು ಮೈಗೂಡಿಸಿಕೊಳ್ಳುವುದು ಬದುಕಿನ ಅನುಭವಗಳನ್ನು ಶೋಧಿಸುತ್ತ ಅರಿವಿನ ಪರಿಧಿಯನ್ನು ವಿಸ್ತರಿಸುವುದು ಇವೇ ನಿಜವಾದ ಜೀವನ ಮೌಲ್ಯಗಳಾಗಬೇಕೆಂಬ ಎಚ್ಚರ ನನ್ನನ್ನು ಆವರಿಸತೊಡಗಿತು. ದಿನ ದಿನದ ಬದುಕಿನಲ್ಲಿ ಮನುಷ್ಯ ಅಲ್ಲಸಲ್ಲದ ಅಡ್ಡಗೋಡೆಗಳನ್ನು ನಿರ್ಮಿಸಿಕೊಳ್ಳುತಿದ್ದಾನೆ. ಮನಸ್ಸು ಮನಸ್ಸುಗಳ ನಡುವಣ ಕಂದರಗಳನ್ನು ಕೂಡಿಸುವ ಸೇತುವೆಗಳನ್ನೂ, ಸಂಪರ್ಕಗಳನ್ನೂ ಕಡಿದುಕೊಂಡು ಏಕಾಕಿಯಾಗುತಿದ್ದಾನೆ. ಯಂತ್ರ ನಾಗರಿಕತೆಯ ಜೀವನದಲ್ಲಿ ಮನುಷ್ಯ ಕೇವಲ ಯಂತ್ರವಾಗುತ್ತ ತನ್ನ ವ್ಯಕ್ತಿ ವಿಶಿಷ್ಟತೆಯನ್ನು ಕಳೆದುಕೊಳ್ಳುತಿದ್ದಾನೆ; ಈ ಪರಿಸರದಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವೆ ಸೇತುವೆ ಕಟ್ಟುವುದು ಹೇಗೆ, ಮಾನವೀಯ ಸಂಬಂಧಗಳನ್ನು ಬೆಸೆಯುವುದು ಹೇಗೆ ಇತ್ಯಾದಿ ಚಿಂತನೆಗಳು ಕಳೆದ ಹಲವಾರು ವರ್ಷಗಳಿಂದಲೂ ನನ್ನ ಕಾವ್ಯ ನಿರ್ಮಿತಿಯ ಹಿಂದೆ ಕೆಲಸಮಾಡುತ್ತಿವೆ.

ಈ ಬಗೆಯ ಧೋರಣೆಯಿಂದಾಗಿ, ನಾನು ನನ್ನ ಸುತ್ತ ನಡೆಯುವ ಸಾಹಿತ್ಯಕ ಚಳುವಳಿಗಳನ್ನು ಪ್ರೇಕ್ಷಕನಂತೆ ನೋಡುತ್ತ, ಅವುಗಳೊಳಗಿಂದ ಪಡೆಯಬಹು- ದೇನಾದರೂ ಇದ್ದರೆ ಅದನ್ನು ಸ್ವೀಕರಿಸುತ್ತ, ನನ್ನ  ಒಳಗಿನ ಅನುಭವಗಳಿಗೆ ಹಾಗೂ ದನಿಗಳಿಗೆ ನಿಷ್ಠನಾಗುತ್ತ, ನನ್ನ ಕಾವ್ಯಾಭಿವ್ಯಕ್ತಿ ಮತ್ತು ವಿಮರ್ಶನ ಬರೆಹಗಳಲ್ಲಿ ತಲ್ಲೀನನಾಗಿ ನಿಂತೆ. ಹೀಗಾಗಿ ನನ್ನ ಹಾಗೂ ನನ್ನಂಥವರ ಬಗೆಗೆ ಒಂದು ಬಗೆಯ ತಟಸ್ಥ ಹಾಗೂ ಗೊಂದಲದ ನಿಲುವುಗಳು ಅಂದಿನ ವಿಮರ್ಶೆಯಲ್ಲಿ ನಿರ್ಮಾಣವಾದವು. ನನ್ನ ಕಾವ್ಯಾಭಿವ್ಯಕ್ತಿಯನ್ನು ಯಾವ ಪಂಥಕ್ಕೆ ಸೇರಿಸಬೇಕೆಂದು ತಿಳಿಯದೆ ಗೊಂದಲಕ್ಕೀಡಾದ ಕೆಲವರು, ನನ್ನನ್ನು ‘ಸಮನ್ವಯ’ ಕವಿ ಎಂದು ಕರೆದು ಸಮಾಧಾನಪಟ್ಟುಕೊಂಡರು. ಆದರೆ ನಾನು ಅದಲ್ಲ; ಯಾಕೆಂದರೆ ಯಾವುದೇ ಹಣೆ ಚೀಟಿಗಳಿಂದ ನಿರ್ದೇಶಿತವಾಗುವುದನ್ನು ನಾನು ಒಪ್ಪುವುದಿಲ್ಲ.

ಈ ನಡುವೆ ೧೯೪೭ರಲ್ಲಿ ಮೈಸೂರಿನಲ್ಲಿ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟವೊಂದು ಪ್ರಾರಂಭವಾಗಿ, ಆಗಲೇ ಸ್ಥಗಿತಗೊಳ್ಳುತ್ತಿದ್ದ ಸಾಹಿತ್ಯಕ ವಾತಾವರಣಕ್ಕೆ ಹೊಸ ಚಾಲನೆಯೊಂದನ್ನು ನೀಡಿತು. ನಾನು ಅಧ್ಯಕ್ಷನಾಗಿದ್ದ, ಈ ಒಕ್ಕೂಟವನ್ನು ಕುವೆಂಪು ಅವರು ಉದ್ಘಾಟನೆ ಮಾಡಿದರು. ಆಗ ಕುವೆಂಪು ಅವರು  ಮಾಡಿದ ಅದ್ಭುತವಾದ ಉಪನ್ಯಾಸ ‘ವಿಚಾರ ಕ್ರಾಂತಿಗೆ ಆಹ್ವಾನ’ ಎಂಬುದು. ಮುಖ್ಯವಾಗಿ ಬದುಕಿನ ವಿವಿಧ ರಂಗಗಳಲ್ಲಿ ‘ಪುರೋಹಿತಷಾಹಿ’ ಪ್ರವೃತ್ತಿ ನಡೆಯಿಸುತ್ತಿರುವ ಶೋಷಣೆ ಹಾಗೂ ದೌರ್ಜನ್ಯಗಳನ್ನೂ, ಇದನ್ನು ಪ್ರತಿಭಟಿಸಲು ಬೇಕಾದ ವೈಚಾರಿಕ ಎಚ್ಚರದ ಅಗತ್ಯವನ್ನೂ ಒತ್ತಿಹೇಳುವ ಕುವೆಂಪು ಅವರ ಈ ಉಪನ್ಯಾಸ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಸರದಲ್ಲಿ ಒಂದು ಅಲ್ಲೋಲ ಕಲ್ಲೋಲವನ್ನೇ ಎಬ್ಬಿಸಿದ್ದಲ್ಲದೆ, ಮುಂದಿನ ದಲಿತ ಹಾಗೂ ಬಂಡಾಯ ಸಾಹಿತ್ಯ ಚಳುವಳಿಗೆ ಪ್ರಮುಖ ಪ್ರೇರಣೆಯಾಯಿತು. ಒಕ್ಕೂಟದ ಧೋರಣೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಕೆಲವು ‘ಬುದ್ಧಿಜೀವಿಗಳು’ ಅದನ್ನು ಬ್ರಾಹ್ಮಣ ವಿರೋಧೀ ಚಳುವಳಿ ಎಂದು ಕರೆದರು; ಅದರ ಅಧ್ಯಕ್ಷನಾದ ನನ್ನ ಬಗೆಗೂ ಹಲವು ಬಗೆಯ ಕಿರುಕುಳಗಳು ಪ್ರಾರಂಭವಾದವು. ಇದು ಅಂಥ ಮುಖ್ಯವಾದ ಸಂಗತಿ ಅಲ್ಲ; ತೀರ ಮುಖ್ಯವಾದ ಮಾತೆಂದರೆ, ಬರಹಗಾರರ ಒಕ್ಕೂಟದ ಪರಿಣಾಮವಾಗಿ, ಸಾಹಿತ್ಯ ನಿರ್ಮಿತಿಯ ಹಾಗೂ ಸಾಹಿತ್ಯ ವಿಮರ್ಶೆಯ ದೃಷ್ಟಿ-ಧೋರಣೆಗಳು ಬದಲಾದದ್ದಂತೂ ನಿಜ.

ನವೋದಯದಿಂದ ಪ್ರಾರಂಭವಾಗಿ ಈ ಹೊತ್ತಿನವರೆಗೂ ಅತ್ಯಂತ ವೈವಿಧ್ಯಮಯವೂ ಸಮೃದ್ಧವೂ ಆದ ಸಾಹಿತ್ಯ ನಿರ್ಮಿತಿಯನ್ನು ಒಳಗೊಳ್ಳುವ, ಕಳೆದ ಸುಮಾರು ಆರೂವರೆ ದಶಕಗಳ ಕಾಲ, ನಮ್ಮ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿಯೇ ಅಪೂರ್ವವಾದ ಕಾಲವೆಂದು ನನ್ನ ಭಾವನೆ. ಹಿಂದೆ ಸಾಹಿತ್ಯದಲ್ಲಿ ಬದಲಾವಣೆ- ಯಾಗಬೇಕಾಗಿದ್ದರೆ, ಅದು ಹಲವು ಶತಮಾನಗಳನ್ನೇ ತೆಗೆದುಕೊಳ್ಳುತ್ತಿತ್ತು. ಆದರೆ ಕಳೆದ ಆರೂವರೆ ದಶಕಗಳಲ್ಲಿ ಹೊಸಗನ್ನಡ ಸಾಹಿತ್ಯ ಇಟ್ಟ ಹೆಜ್ಜೆ ಹಾಗೂ ತೊಟ್ಟ ರೂಪಗಳು ಅತ್ಯಂತ ವೈವಿಧ್ಯಮಯವಾಗಿವೆ. ಅಲ್ಲದೆ ಏಕಕಾಲಕ್ಕೆ ಬಹು ಸಂಖ್ಯೆಯ ಎತ್ತರದ ಸಾಹಿತಿಗಳು, ವಿವಿಧ ಸಾಹಿತ್ಯಕ ಚಳುವಳಿಗಳ ಸಂದರ್ಭದಲ್ಲಿ ಕಾಣಿಸಿಕೊಂಡದ್ದು ತೀರಾ ವಿಶೇಷದ ಸಂಗತಿಯಾಗಿದೆ. ಅಷ್ಟೇ ಯಾಕೆ ಇಡೀ ಭಾರತೀಯ ಸಾಹಿತ್ಯ ಪರಿಸರದಲ್ಲಿ ಈ ಹೊಸಗನ್ನಡ ಸಾಹಿತ್ಯ, ಹಲವು ಪ್ರಕಾರಗಳಲ್ಲಿ ಸಾಧಿಸಿದ ಮುನ್ನಡೆ ಅನನ್ಯವಾಗಿದೆ. ನಾನು ಈ ಪರಿಸರದಲ್ಲಿ, ಈ ಎಲ್ಲ ದೊಡ್ಡ ಲೇಖಕರ ಸಾನ್ನಿಧ್ಯ ಹಾಗೂ ವಿಶ್ವಾಸದ ಬೆಳಕಿನಲ್ಲಿ ಇದ್ದೇನೆ ಮತ್ತು ವ್ಯಕ್ತಿತ್ವವನ್ನು ಬೆಳೆಯಿಸಿಕೊಂಡಿದ್ದೇನೆ ಎನ್ನುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ.

ಕಾವ್ಯ ಮತ್ತು ಸಾಹಿತ್ಯ ವಿಮರ್ಶೆ ನನ್ನ ಆಸಕ್ತಿಯ ವಲಯಗಳು. ಕವಿತೆಯಂತೂ ಯಾವತ್ತಿನಿಂದಲೋ ನನ್ನ ಜತೆಗೆ ಬಂದಿದೆ. ಆದರೆ ಸಾಹಿತ್ಯ ವಿಮರ್ಶೆ ಮತ್ತು ಕಾವ್ಯಮೀಮಾಂಸೆಯನ್ನು ಕುರಿತ ನನ್ನ ಆಸಕ್ತಿ ಹುಟ್ಟಿಕೊಂಡದ್ದು ಕುವೆಂಪು ಮತ್ತು ತೀ.ನಂ. ಶ್ರೀ ಅವರಿಂದ. ತೌಲನಿಕ ವಿಧಾನದಿಂದ ಸಾಹಿತ್ಯವನ್ನು, ಸಾಹಿತ್ಯ ತತ್ವಗಳನ್ನು ಅಧ್ಯಯನ ಮಾಡುವುದು ಹೇಗೆ ಎಂಬುದನ್ನು ಕಲಿಸಿದವರು ಕುವೆಂಪು. ಅಂಥ ಅಧ್ಯಯನಕ್ಕೆ ಪರಂಪರೆಯ ಅರಿವು ಎಷ್ಟು ಅಗತ್ಯ ಎಂಬುದನ್ನು, ಅಭಿವ್ಯಕ್ತಿಗೆ ಇರಬೇಕಾದ ಖಚಿತತೆ ಎಂಥದೆಂಬುದನ್ನು ತೋರಿಸಿಕೊಟ್ಟವರು ತೀ.ನಂ.ಶ್ರೀ ಅವರು. ಮಾನಸ ಗಂಗೋತ್ರಿ- ಯಲ್ಲಿ ೧೯೬೦ ರಿಂದ ೧೯೬೨ರ ವರೆಗೆ ಪಾಶ್ಚಾತ್ಯ ವಿಮರ್ಶೆಯನ್ನು ಪಾಠ ಹೇಳುವ ಜವಾಬ್ದಾರಿಯನ್ನು ಅವರು ವಹಿಸಿ ಮಾರ್ಗದರ್ಶನ ಮಾಡಿದ್ದರಿಂದಲೇ, ಈ ಕ್ಷೇತ್ರದಲ್ಲಿ ನನ್ನ ಮೊದಲ ಕೃತಿ, ‘ವಿಮರ್ಶೆಯ ಪೂರ್ವ-ಪಶ್ಚಿಮ’ ಪ್ರಕಟವಾಗಲು  ಸಾಧ್ಯವಾದದ್ದು. ನನ್ನ ಎಷ್ಟೋ ವಿಮರ್ಶೆಯ ವಿಚಾರಗಳು ಹೊಸದಾಗಿ ಹೊಳೆದದ್ದು, ಆಗಲೇ ತಿಳಿದದ್ದು, ಖಚಿತವಾಗಿದ್ದು ನನ್ನ ಪಾಠದ ತರಗತಿಗಳಲ್ಲಿಯೇ. ಸಾಹಿತ್ಯ ವಿಮರ್ಶೆ ಹಾಗೂ ಕಾವ್ಯ ತತ್ವಗಳನ್ನು ಕುರಿತ ಕೆಲಸ, ತಕ್ಕ ಪೂರ್ವಸಿದ್ಧತೆ ಹಾಗೂ ಶ್ರಮವನ್ನು ನಿರೀಕ್ಷಿಸಿದೆ. ಸಾಹಿತ್ಯ ವಿಮರ್ಶೆಯ ಬರೆಹವನ್ನು, ನಿಯತವಾದ ಕಾಲವನ್ನು ಗೊತ್ತು ಮಾಡಿಕೊಂಡು ಮುಂದುವರಿಸಲು ಸಾಧ್ಯವಾಗಿರುವಂತೆ, ಕವಿತೆಯ ನಿರ್ಮಿತಿ ಸಾಧ್ಯವಾಗಿಲ್ಲ. ಅದು ಯಾವಾಗ ಬಂದು ಬಾಗಿಲು ಬಡಿಯುವುದೋ ನನಗೆ ತಿಳಿಯದು. ಈಗ ಹಿಂದೆ ಬರೆದಷ್ಟು ಸಲೀಸಾಗಿ, ಮತ್ತು ವಿಶೇಷವಾಗಿ ಕವಿತೆ ಬರೆಯಲಾರೆ. ಅದು ದುಃಖದ ಸಂಗತಿಯೇನೂ ಅಲ್ಲ. ಬಹುಶಃ ಎಲ್ಲ ಬರೆಹಗಾರರ ವಿಚಾರದಲ್ಲೂ ಇದು ನಿಜವಿರಬಹುದು. ಆದರೆ ಕವಿತೆ ಹುಟ್ಟಿಕೊಳ್ಳುವ  ವಿಸ್ಮಯ, ವಿವರಿಸಲು ಸಾಧ್ಯವಿಲ್ಲದಂಥದ್ದು. ಒಂದು ಸಲ ಮೈಸೂರಿನಲ್ಲಿ, ೧೯೫೨ನೇ ಇಸವಿ ಇರಬಹುದು; ಒಂದು ಸಂಜೆ ಕಾಲೇಜಿನಿಂದ ಮನೆಗೆ ಹೋಗುತ್ತಿದ್ದೆ. ನನ್ನ ಮುಂದೆ ರಸ್ತೆಯಲ್ಲಿ ಸ್ವಲ್ಪ ದೂರದಲ್ಲಿ ಹೆಣ್ಣು ಮಗಳೊಬ್ಬಳು ಹೋಗುತ್ತಿದ್ದಳು. ಬೆನ್ನ ಹಿಂದೆ ನೀಳವಾಗಿ ಕಪ್ಪಾಗಿ ತೂಗಾಡುತ್ತಿದ್ದ ಆಕೆಯ ಜಡೆ ನನ್ನನ್ನು ಅಯಸ್ಕಾಂತದಂತೆ ಆಕರ್ಷಿಸಿತು. ಆಗಲೇ ‘ಲಲನೆಯರ ಬೆನ್ನಿನೆಡೆ ಹಾವಿನೊಲು ಜೋಲ್ವಜಡೆ’ ಎಂಬ ಪಂಕ್ತಿಯೊಂದು ಥಟ್ಟನೆ ಮನಸ್ಸಿನಲ್ಲಿ ರೂಪುಗೊಂಡಿತು. ಕೂಡಲೇ ಅದರ ಜತೆಗಿನ ಇತರ ಪಂಕ್ತಿಗಳು, ಒಂದು ಅನುಕ್ರಮವಲ್ಲದ ರೀತಿಯಲ್ಲಿ ಅಸ್ಪಷ್ಟವಾಗಿ ಮೂಡತೊಡಗಿದವು. ಈ ಭಾವನೆಗಳಿಗೆ ಪ್ರಚೋದಕವಾದ ಹೆಣ್ಣುಮಗಳು ಯಾರೋ ಏನೋ, ಆಕೆ ಎಲ್ಲಿ ಹೋದಳೋ ಆ ಬಗ್ಗೆ ಯಾವ ಯೋಚನೆಯೂ ನನ್ನಲ್ಲಿ ಸುಳಿಯಲಿಲ್ಲ. ಮನೆಗೆ ಬಂದವನೆ ಒಂದಷ್ಟು ಕಾಫಿ ಕುಡಿದು, ನನ್ನ ಕೋಣೆಯೊಳಗೆ ಬಾಗಿಲು ಹಾಕಿ ಕೂತೆ. ಎಲ್ಲಾ ಮೊದಲೇ ಹೇಳಿ ಬರೆಸಿಟ್ಟಂತೆ ಆ ಕವನದ ಪಂಕ್ತಿಗಳು ಬರೆಹದ ಮೂಲಕ ಮೈತಾಳಿಯೇಬಿಟ್ಟವು. ‘ಜಡೆ’ ಎಂಬ ಕವಿತೆ ಹುಟ್ಟಿಕೊಂಡದ್ದು ಹೀಗೆ. ಒಮ್ಮೆ, ಯಾವುದೋ ಕೆಲಸದ ಮೇಲೆ ಚಿತ್ರದುರ್ಗಕ್ಕೆ ಹೋಗಿದ್ದೆ. ಅದು ೧೯೫೫ನೆ ಇಸವಿಯ ಮೇ ತಿಂಗಳ ಒಂದು ರಾತ್ರಿ. ನನ್ನ ಬಂಧುಗಳೊಬ್ಬರ ಮನೆಯಲ್ಲಿ ಮಲಗಿರುವಾಗ, ನಾನೊಂದು ಪದ್ಯ ಬರೆದ ಹಾಗೆ ಕನಸು ಕಂಡೆ. ಕನಸಿನಲ್ಲಿ ಆ ಪದ್ಯದ ಆಕಾರ ಸ್ಪಷ್ಟವಾದ ಹಾಗಿತ್ತು. ಬೆಳಿಗ್ಗೆ ಎಚ್ಚರವಾದಾಗ, ಆ ಕವಿತೆಯನ್ನು ನೆನಸಿಕೊಳ್ಳಲು ಪ್ರಯತ್ನಪಟ್ಟಾಗ, ಆ ಕವಿತೆಯ ಮೊದಲ ಪಂಕ್ತಿ ‘ಚಂದ್ರ ಜೇಡ ಬಲೆ ನೇಯುತಿತ್ತು ಬೆಳುದಿಂಗಳ ನೂಲಿನಲಿ’ ಎಂಬುದು ಮಾತ್ರ ಜ್ಞಾಪಕಕ್ಕೆ ಬಂತು. ಅದನ್ನು ನನ್ನ ಸಣ್ಣ ಪುಸ್ತಕದಲ್ಲಿ ಬರೆದಿಟ್ಟುಕೊಂಡೆ. ಆಮೇಲೆ ಏನು ಮಾಡಿದರೂ, ಆ ಕವಿತೆಯ ಉಳಿದ ಸಾಲುಗಳು ನೆನಪಿಗೆ ಬರಲೇ ಇಲ್ಲ. ಕೆಲವು ವರ್ಷಗಳೇ ಕಳೆದವು. ಆದರೆ, ಒಂದು ದಿನ ನಾನು ಹಾಗೆ ಗುರುತು ಹಾಕಿಕೊಂಡ ಪಂಕ್ತಿಯಿದ್ದ, ಆ ಕಿರುಪುಸ್ತಕ ನನ್ನ ಪುಸ್ತಕಗಳ ರಾಶಿಯಿಂದ ದೊರಕಿತು. ನಾನು ಆ ಪಂಕ್ತಿಯನ್ನು ನೋಡುತ್ತಲೆ, ಆ ಪಂಕ್ತಿಯ ಜತೆಗೆ ಒಂದು ಇಡೀ ಕವಿತೆಯೇ ಐದು ವರ್ಷಗಳ ಹಿಂದೆ ಕನಸಿನಲ್ಲಿ ಸ್ಫುರಿಸಿತ್ತೆಂಬುದನ್ನು ನೆನಪುಮಾಡಿಕೊಳ್ಳುತ್ತಾ ಕೂತೆ. ಅದೇನು ಮೋಡಿಯೋ ಹಠಾತ್ತನೆ, ಕೇವಲ ಒಂದರ್ಧಗಂಟೆಯೊಳಗೇ, ಆ ಪದ್ಯದ ಮೊದಲ ಪಂಕ್ತಿ ಇತರ ಪಂಕ್ತಿಗಳನ್ನು ಬರಮಾಡಿಕೊಂಡು ಪೂರ್ಣವಾಯಿತು. ‘ಕನಸಿನಿಂದ ನನಸಿಗೆ’ ಎಂಬ ಆ ನನ್ನ ಪದ್ಯ, ಐದು ವರ್ಷಗಳ ಹಿಂದೆ ಮೇ ತಿಂಗಳ ಒಂದಿರುಳು ಕನಸಿನಲ್ಲಿ ಕಾಣಿಸಿಕೊಂಡದ್ದು, ಅದೇ ಐದುವರ್ಷಗಳನಂತರ ೧೯೬೧ನೆ ಮೇ ತಿಂಗಳ ಒಂದು ಇರುಳಿನಲ್ಲಿ ಪೂರ್ಣವಾಯಿತು. ಕಾವ್ಯ ಹಾಗೂ ಜೀವನದ ಅಭಿನ್ನತೆಯನ್ನು ಹಾಗೂ ವಿಸ್ಮಯವನ್ನು ಕುರಿತ ಆ ಕವಿತೆ ಹುಟ್ಟಿಕೊಂಡದ್ದು ಹೀಗೆ. ‘ಮಬ್ಬಿನಿಂದ ಮಬ್ಬಿಗೆ’ ಎಂಬ ಪದ್ಯ ಕೂಡಾ ಯುವರಾಜಾ ಕಾಲೇಜಿನ ಇಂಟರ್ ಮೀಡಿಯೇಟ್ ತರಗತಿಯೊಂದಕ್ಕೆ ನಾನು ಪಾಠ ಹೇಳುವಾಗ, ನೀಡುತ್ತಿದ್ದ ವಿವರಣೆಯ ಮಧ್ಯೆ ತನ್ನ ತಲೆಯನ್ನು ತೂರಿಸಿಕೊಂಡು, ಅಸ್ಪಷ್ಟವಾಗಿ ಕಾಣಿಸಿಕೊಂಡು, ಅನಂತರ ಮೈಪಡೆದುಕೊಂಡದ್ದು. ಕವಿತೆಗೆ ಮೂಲವಾದ ಪ್ರೇರಣೆಗಳು ಚಿಂತನೆಗಳು ಅನುಭವಗಳು ಯಾವ್ಯಾವ ಕಾಲದವೋ, ಎಲ್ಲೆಲ್ಲಿ ಹೊಂಚುತ್ತಾ ಇರುತ್ತವೋ ತಿಳಿಯುವುದಿಲ್ಲ. ಅಂದಂದಿನ ಅನುಭವದಿಂದ ಕವಿತೆಯೊಂದು ಮೂಡುವಂತೆ ತೋರಿದರೂ ಸಹ, ಅದು ರೂಪುಗೊಳ್ಳುವಾಗ ಒದಗುವ ಅನುಭವ ಅಂದಿನದು ಮಾತ್ರವಾಗಿರುವುದಿಲ್ಲ; ಯಾವ್ಯಾವತ್ತಿನ ಅನುಭವಗಳೋ, ಚಿತ್ರಗಳೋ ಬಂದು ಕೂಡಿಕೊಂಡುಬಿಡುತ್ತವೆ. ಹೀಗಾಗಿ ಇವತ್ತು ಯಾವುದೋ ಒಂದು ವಿಶೇಷ ಅನುಭವವನ್ನು ಕುರಿತು ಬರೆಯಬೇಕು ಎಂದುಕೊಂಡರೆ ಅದು ಸಾಧ್ಯವಾಗುವುದೇ ಇಲ್ಲ. ಮರೆತೇ ಹೋಯಿತೆಂದುಕೊಂಡ ಅಂದಿನ ಒಂದು ಅನುಭವ ಮತ್ತೆ ಇನ್ನೆಂದೋ ಏನೋ ಆಗಿ ಒತ್ತಿಕೊಂಡು ಬರುತ್ತದೆ. ಹೀಗಾಗಿ ಕವಿತೆ ಕಾಲಬದ್ಧವಾದ ಕ್ರಿಯೆಯಲ್ಲ; ಕಾಲಾತೀತದಲ್ಲಿ ಸಂಭವಿಸುವ ಒಂದು ವಿಸ್ಮಯ.

ಆದರೆ ಈ ನಂಬಿಕೆಯಿಂದಾಗಿ, ಹುಟ್ಟಿಕೊಂಡ ಕವಿತೆ ‘ಪದವಿಟ್ಟಳು- ಪದಗ್ಗಳಿಕೆ’ಯ ಜಗತ್ತಿಗೆ ಸೇರಿದ್ದೆಂದು ನಾನು ತಿಳಿದಿಲ್ಲ. ಬರೆದದ್ದನ್ನು  ಅನಂತರದ ಪುನರ್ ವಿಮರ್ಶೆಗೆ, ತಿದ್ದುಪಾಟಿಗೆ ಒಳಪಡಿಸಿದ್ದೇನೆ. ಹಾಗೆಯೇ ನನ್ನ ಬರಹದ ಬಗ್ಗೆ ನನಗೆ ಯಾವ ಭ್ರಮೆಗಳೂ ಇಲ್ಲ. ನಾನು ಬರೆದದ್ದರಲ್ಲಿ ಮೌಲಿಕವಾದದ್ದು ಒಂದಷ್ಟು ಇರಬಹುದೆಂದು ತಿಳಿದಿದ್ದೇನೆ. ಈ ಧೈರ್ಯವೆ ನಮ್ಮ ಸಮಕಾಲೀನ ವಿಮರ್ಶೆಯ ವಿಲಕ್ಷಣ ವಾತಾವರಣದಲ್ಲಿ ನನ್ನನ್ನು ಮುನ್ನಡೆಸಿದೆ. ಸಾಹಿತ್ಯ ಅನ್ನುವುದು ಮೂಲಭೂತವಾಗಿ ಬದುಕನ್ನು ಅಂದಂದಿನ ಲೇಖಕರು ಗ್ರಹಿಸುವ ಹಾಗೂ ವ್ಯಾಖ್ಯಾನಿಸುವುದರ ಮೂಲಕ, ಸಾಧಿಸಿದ ಜೀವನಪ್ರೀತಿಯ ವಿಸ್ತರಣೆ ಎಂದು ನಾನು ತಿಳಿದಿದ್ದೇನೆ. ನಾನಾ ವಿಚ್ಛಿದ್ರಕಾರಕವಾದ ಶಕ್ತಿಗಳ ನಡುವೆ ಸಾಹಿತ್ಯ ನಮ್ಮನ್ನು ಕೂಡಿಸದೆ ಹೋದರೆ ಮತ್ತೆ ಇನ್ನಾವುದು ತಾನೇ ನಮ್ಮನ್ನು ಕೂಡಿಸೀತು? ಸಾಹಿತ್ಯ ಜೀವನಪ್ರೀತಿಯ ವಿಸ್ತರಣೆ ಮಾತ್ರವಲ್ಲ, ಮಾನವೀಯ ಸಂಬಂಧಗಳ ವಿಸ್ತರಣೆ ಕೂಡಾ. ಈ ಸಂಬಂಧಗಳನ್ನು ಕೆಡಿಸುವ ಹಾಗೂ ಮುರಿಯುವ ಎಲ್ಲ ಸಣ್ಣತನಗಳನ್ನೂ ಕುತಂತ್ರಗಳನ್ನೂ ನಾನು ತೀವ್ರವಾಗಿ ವಿರೋಧಿಸುತ್ತೇನೆ.