ನಮ್ಮ ತಂದೆ ಮೇಷ್ಟ್ರು. ಈ ಮೇಷ್ಟ್ರಿಗೆ ಮನೆ ತುಂಬ ಮಕ್ಕಳು. ಬರುವ ಸಂಬಳ ಕಡಿಮೆ. ಸಂಸಾರ ಸಾಗುವುದು ಕಷ್ಟ. ಹೀಗಾಗಿ ಎಸ್ಸೆಸ್ಸೆಲ್ಸಿ ಪಾಸು ಮಾಡಿದ  ತಮ್ಮ ಮೊದಲ ಮಗ ಯಾವುದಾದರೂ ನೌಕರಿ ಸೇರಿ ತಮಗೆ ನೆರವಾಗಲಿ ಎಂಬುದು ಅವರ ಅಪೇಕ್ಷೆ. ಆದರೆ ಹಿರಿಯ ಮಗನಾದ ನಾನು ಇನ್ನೂ ಓದಬೇಕು ಎಂದೆ. ಇಷ್ಟವಿಲ್ಲದಿದ್ದರೂ, ಅವರು ಏನಾದರೂ ಮಾಡು ಎಂದರು. ಸರಿ ನಾನು ಬಂದು   ತುಮಕೂರಿನಲ್ಲಿ ಇಂಟರ್ ಮೀಡಿಯೇಟ್ ಸೇರಿದೆ. ಆಗ ೧೯೪೨. ನಾನು ಕಾಲೇಜು ಸೇರಿದ್ದು ಜೂನ್‌ನಲ್ಲಿ. ಮುಂದೊಂದೆರಡು ತಿಂಗಳಲ್ಲಿ, ಅಂದರೆ ಆಗಸ್ಟ್‌ನಲ್ಲಿ ಭಾರತೀಯ ಸ್ವಾತಂತ್ರ  ಚಳುವಳಿ, ಜೋರಾಯಿತು. ಈ ಸ್ವಾತಂತ್ರ  ಚಳುವಳಿಯ ಬಿರುಗಾಳಿಯಲ್ಲಿ ಶಾಲೆ-ಕಾಲೇಜುಗಳೆಲ್ಲಾ ಹಾರಿಹೋದವು; ರಾಷ್ಟ್ರನಾಯಕರನ್ನೆಲ್ಲಾ ಬ್ರಿಟಿಷರು ಬಂಧಿಸಿ ಸೆರಮನೆಗೆ ಹಾಕಿದ್ದರಿಂದ ಇಡೀ ಭಾರತದೇಶ ಉಗ್ರವಾದ ಹೋರಾಟದಲ್ಲಿ ತೊಡಗಿತ್ತು. ಈ ಬಿರುಗಾಳಿಯಲ್ಲಿ ನಾನೂ ತರಗೆಲೆಯಾಗಿ, ಮೆರವಣಿಗೆಗಳಲ್ಲಿ ಭಾಗವಹಿಸಿ ‘ವಂದೇಮಾತರಂ’ ಕೂಗಿದೆ. ನನ್ನ ತಂದೆಯವರಿಗೆ ಸುದ್ದಿ ಹೋಯಿತು. ಆಗ ಅವರು ಕೊರಟಗೆರೆಯ ಹತ್ತಿರದ ಅಕ್ಕಿರಾಂಪುರದಲ್ಲಿ ಮಿಡಲ್‌ಸ್ಕೂಲು ಹೆಡ್ಮಾಸ್ಟರಾಗಿದ್ದರು. ಸರ್ಕಾರಿ ಹುದ್ದೆಯಲ್ಲಿದ್ದ ಅವರಿಗೆ ಈ ಬಗೆಯ ಚಳುವಳಿಗಳ ಬಗೆಗೆ ಭಯವಿತ್ತು. ಈ ಬಗ್ಗೆ  ಹಿಂದೊಮ್ಮೆ ಅವರು ಸುಟ್ಟುಕೊಂಡಿದ್ದರು. ಅವರು ರಾಮಗಿರಿಯಲ್ಲಿ, ಮಿಡಲ್ ಸ್ಕೂಲಿನ ಹೆಡ್ಮಾಷ್ಟರಾಗಿದ್ದಾಗ, ಒಂದು ಸಲ ಆ ಊರಿನ ಕಾಂಗ್ರೆಸ್ ಪರವಾದ ಸಭೆಯೊಂದಕ್ಕೆ, ಸ್ಕೂಲಿನ ನಾಲ್ಕಾರು ಕುರ್ಚಿಗಳನ್ನು ಕೊಟ್ಟರು. ಅವರು ಹಾಗೆ ಕೊಟ್ಟದ್ದು ಅಪರಾಧ ಎಂದೋ, ದೇಶದ್ರೋಹದ ಕೆಲಸ ಎಂದೋ ಅವರಿಗೆ ಮೇಲಧಿಕಾರಿಗಳಿಂದ ನೋಟೀಸ್ ಬಂದಿತಂತೆ. ಹೀಗಾಗಿ, ಮನೆ ತುಂಬ ಮಕ್ಕಳಿದ್ದ ಈ ಮೇಷ್ಟ್ರಿಗೆ, ಅವರಿಗೆ ಆಧಾರವಾಗಿದ್ದ ನೌಕರಿಯನ್ನು ಕಳೆದುಕೊಳ್ಳುವ ಭಯ ಸಹಜವಾಗಿಯೇ ಆವರಿಸಿಕೊಂಡಿತು. ಇದರಿಂದ, ತಮ್ಮ ಮಗನೂ ಈ ಚಳುವಳಿಗೆ ಸೇರಿದರೆ ತಮ್ಮ ಕೆಲಸಕ್ಕೆ  ಎಲ್ಲಿ ಸಂಚಕಾರ ಬಂದೀತೋ ಎಂದು ಹೆದರಿದ ನನ್ನ ತಂದೆಯವರು ಕೂಡಲೇ ತುಮಕೂರಿಗೆ ಬಂದು ‘ಸದ್ಯಕ್ಕೆ ಓದೂ ಬೇಡ, ಏನೂ ಬೇಡ, ನೆಟ್ಟಗೆ ಮನೆಗೆ ಬಾ’ ಎಂದು ಒತ್ತಾಯದಿಂದ ನನ್ನನ್ನು ಕರೆದೊಯ್ದರು.

ಊರಿಗೆ ಹೋದೆ. ಸ್ಕೂಲಿನಲ್ಲಿದ್ದ ಲೈಬ್ರರಿ ಪುಸ್ತಕಗಳನ್ನು ದಿನಾ ತಿರುವಿ ಹಾಕಿದೆ. ಸಂಜೆ ಆ ಊರಿನ ಕೆರೆಯ ಏರಿಯಮೇಲೆ ದಟ್ಟವಾದ ಎಲೆಗಳನ್ನು ತುಂಬಿಕೊಂಡು ಶಾಖೋಪಶಾಖೆಗಳನ್ನು ಚಾಚಿಕೊಂಡ ಅರಳಿಯ ಮರದ ಎಲೆಗಳನ್ನು ಎಣಿಸಿದೆ; ದಡಕ್ಕೆ ಬಡಿಯುವ ತೆರೆಗಳಲ್ಲಿ ತೇಲಿದೆ; ಕೆರೆಯ ಹಿಂದಿನ ಭತ್ತದ ಗದ್ದೆಯ ಮೇಲೆ ಹಾರುವ ಹಕ್ಕಿಗಳ ಜತೆಗೆ ಹಾರಿದೆ; ಪಶ್ಚಿಮ  ದಿಗಂತದಲ್ಲಿ ಕೆಂಧೂಳೆಬ್ಬಿಸಿಕೊಂಡು ಉರುಳುವ ಸೂರ್ಯ ಚಕ್ರವನ್ನು ದಿಟ್ಟಿಸಿದೆ. ಈ ಕೆರೆ, ಈ ಬಯಲು, ಈ ಹಸಿರುಗಳಾಚೆ ಇಡೀ ದೇಶವೆ quit India ಚಳುವಳಿಯಲ್ಲಿ ಹೊತ್ತಿಕೊಂಡು ಉರಿಯುತ್ತಿತ್ತು. ಆದರೆ ನಾನು ಪರಿಸ್ಥಿತಿಯ ಬಂದಿಯಾಗಿ, ತುಕ್ಕು ಹಿಡಿಯುತ್ತಾ ಮೂಲೆಗೆ ಕೂತಿದ್ದೆ. ಗಾಂಧಿಯವರ ಆತ್ಮಕಥೆ ಓದಿದೆ.

ಒಂದು ದಿನ ಪ್ರಸನ್ನರಾದ ತಂದೆಯವರು ಹೇಳಿದರು: “ಈಗ ಬೆಂಗಳೂರಿನಲ್ಲಿ ಏರೋ ಪ್ಲೇನ್ ಫ್ಯಾಕ್ಟರಿ ಶುರುವಾಗಿದೆ. ಕೆಲಸಕ್ಕೆ ಯುವಕರು ಬೇಕಂತೆ. ಎಸ್. ಎಸ್. ಎಲ್.ಸಿ.ಪಾಸಾಗಿದ್ದರೆ ಸಾಕು; ತಿಂಗಳಿಗೆ ಐವತ್ತು ರೂಪಾಯಿ ಸಂಬಳ. ಅದರ ಮೇಲೆ ಅಲೋಯನ್ಸು. ಇವತ್ತಿನ ಪೇಪರಲ್ಲಿ ಜಾಹೀರಾತು ಬಂದಿದೆ. ಸುಮ್ಮನೆ ಕೂತಿರೋ ಬದಲು ಬೆಂಗಳೂರಿಗೆ ಹೋಗಿ ಅರ್ಜಿ ಕೊಟ್ಟು ನೋಡು. ಆ ಕೆಲಸ ಬೇಜಾರಾದರೆ ಆಮೇಲೆ ಬಿಟ್ಟರಾಯಿತು.”

ನನಗೂ ಎರಡು ಮೂರು ತಿಂಗಳು, ಊರಿನಲ್ಲಿದ್ದು ಬೇಜಾರಾಗಿತ್ತು. ಒಂದೆರಡು ರೂಪಾಯಿ ಪಡೆದು, ತುಮಕೂರಿಗೆ ಬಸ್ಸು ಹಿಡಿದು, ಅಲ್ಲಿಂದ ರೈಲಲ್ಲಿ ಬೆಂಗಳೂರು ತಲುಪಿದೆ. ಅದೇ ಮೊದಲ ಸಲ ನಾನು ಬೆಂಗಳೂರಿಗೆ ಬಂದದ್ದು. ಬೆಂಗಳೂರಿನಲ್ಲಿ, ಹಿಂದೆ ನನ್ನ ಜತೆ ಹೈಸ್ಕೂಲಲ್ಲಿದ್ದ ಗೆಳೆಯನೊಬ್ಬ ಇದ್ದಾನೆಂದು ನೆನಪಿತ್ತು. ಅವನ ವಿಳಾಸ ಕೂಡ ನನ್ನ ಬಳಿ ಇತ್ತು. ರೈಲಿಳಿದು ನಡಿಗೆಯಲ್ಲಿ ಚಾಮರಾಜಪೇಟೆ ಯಾವುದೆಂದು ಕೇಳುತ್ತಾ ಬಂದು, ಕಡೆಗೂ ಅವನ ಮನೆಯನ್ನು ಪತ್ತೆ ಹಚ್ಚಿದೆ. ಆದರೆ, ಆತ ಬೇರೆ ಯಾವುದೋ ಊರಿಗೆ ಹೋಗಿದ್ದಾನೆಂದು ತಿಳಿಯಿತು. ನೆಟ್ಟಗೆ ಮಾರ್ಕೆಟ್ ಹತ್ತಿರ ಬಂದು ಎರಡಾಣೆಗೆ ದೊರೆತ ಪ್ಲೇಟ್ ಊಟವನ್ನು ದಾರಿಬದಿಯ  ಹೋಟಲೊಂದರಲ್ಲಿ ಮುಗಿಸಿ, ಏರೋಪ್ಲೇನ್ ಫ್ಯಾಕ್ಟರಿಯ ಕಡೆ ಹೋಗುವ ಅಲಸೂರಿನ ಬಸ್ಸು ಹಿಡಿದೆ. ಬಸ್ಸು ಕೊನೆ ಸ್ಟಾಪ್‌ಗೆ ನಿಂತಾಗ ಇಳಿದು, ಮತ್ತೂ ಒಂದಷ್ಟು ಏರು ತಗ್ಗಿನ ದಾರಿ ಹಿಡಿದು ಏರೋಪ್ಲೇನ್ ಫ್ಯಾಕ್ಟರಿಗೆ ಹೋದೆ. ವಿಚಾರಿಸಿ ಅರ್ಜಿಫಾರಂ ಅನ್ನು ಭರ್ತಿಮಾಡಿ ಕೊಟ್ಟೆ. ಅರ್ಜಿ ತೆಗೆದುಕೊಂಡರು. ‘ಮೂರುಗಂಟೆಗೆ ಇಂಥ ಕೊಠಡಿಗೆ ಬನ್ನಿ. ನಿಮ್ಮ physical fitness ನೋಡುತ್ತಾರೆ. ಅಂದರು. ಅಲ್ಲೇ ಕಾದು, ಆ ಪರೀಕ್ಷೆಯ ಕೊಠಡಿಗೆ ಹೋದೆ. ಅಲ್ಲಿ ಒಬ್ಬ ಧಡೂತಿ ಡಾಕ್ಟರು; ಕುರುಚಲು ಗಡ್ಡದ ಆಸಾಮಿ. ನನ್ನ ತೂಕ, ಗಾತ್ರ, ಎತ್ತರ ಎಲ್ಲವನ್ನೂ ತಪಾಸಣೆ ಮಾಡಿದ. ಆನಂತರ ‘you are unfit for this job. Go home’ ಎಂದ. ನಾನು, ಮೂಲತಃ ನರಪೇತಲನೇ ಆಗಿದ್ದರೂ, ಅವನ ಮಾತು ಕೇಳಿ ಒಂದು ರೀತಿ ಅವಮಾನವೇ ಆದಂತಾಯಿತು ನನಗೆ. ಮನಸ್ಸಿನಲ್ಲಿಯೇ ಅವನನ್ನು ಶಪಿಸುತ್ತ, ಆ ಬಿರುಬಿಸಿಲಿನಲ್ಲಿ ಹ್ಯಾಪ್‌ಮೋರೆ ಹಾಕಿಕೊಂಡು ರೈಲ್ವೇಸ್ಟೇಷನ್ನಿನ ದಾರಿಯನ್ನು ಹಿಡಿದೆ. ಮರುದಿನ ಊರಿಗೆ ಬಂದಾಗ, ತಂದೆಯವರು, ‘ಹೋದ ಕೆಲಸ ಏನಾಯಿತು’ ಎಂದರು. ನಾನು “ಸದ್ಯಕ್ಕೆ ಕೆಲಸ ಖಾಲಿ ಇಲ್ಲವಂತೆ. ನನ್ನ ಅರ್ಜಿ ತಗೊಂಡಿದಾರಲ್ಲ, ಕೆಲಸ ಖಾಲಿ ಬಿದ್ದ ಕೂಡಲೆ ಅವರೇ ಬರೆದು ತಿಳಿಸುತ್ತಾರಂತೆ” ಎಂದು ಸುಳ್ಳು ಹೇಳಿ ಬಚಾವಾದೆ.

ಮತ್ತೆ ಎರಡು ತಿಂಗಳು ಕಳೆಯಿತು. ನಮ್ಮ ತಂದೆಯವರು ಬೇರೇನನ್ನೂ ಓದದಿದ್ದರೂ ದಿನ ಪತ್ರಿಕೆಗಳನ್ನು ಮೊದಲಿನಿಂದ ತುದಿಯವರೆಗೆ ಓದುತ್ತಿದ್ದರು. ಒಂದು ದಿನ ಅವರ ಕಣ್ಣಿಗೆ ಒಂದು ಜಾಹೀರಾತು ಬಿದ್ದಿತು. ಅದು ಬೆಂಗಳೂರು ನಗರದ, ನಗರಸಭೆ ಕಛೇರಿಯದು. ನಗರಸಭೆಗೆ ಒಂದಷ್ಟು ಜನ ಬಿಲ್ ಕಲೆಕ್ಟರುಗಳು ಬೇಕಾಗಿತ್ತು. ಸಂಬಳ ತಿಂಗಳಿಗೆ ಮೂವತ್ತೈದು ರೂಪಾಯಿಗಳು. ತಕ್ಷಣ ಅವರೇ ಅರ್ಜಿ ಬರೆದು ನನ್ನ ರುಜು ಹಾಕಿಸಿ ಕಳುಹಿಸಿಬಿಟ್ಟರು. ಎರಡು ಮೂರು ವಾರಗಳ ಅವಧಿಯಲ್ಲೆ ಬಿಲ್ ಕಲೆಕ್ಟರ್ ಹುದ್ದೆಯ ಸಂದರ್ಶನಕ್ಕೆ ನಗರಸಭೆಯ ಕಮೀಷನರ್ ಅವರಿಂದ ಕರೆ ಬಂದೇ ಬಿಟ್ಟಿತು.

ಈ ಸಲ ನನ್ನೊಬ್ಬನನ್ನೇ ಕಳುಹಿಸಬಾರದೆಂದು ತೀರ್ಮಾನಿಸಿ, ಒಂದೆರಡು ದಿನ ರಜಾ ಹಾಕಿ, ನಮ್ಮ ತಂದೆಯವರು ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಬಂದರು. ಪೈಜಾಮ, ಕೋಟು, ಟೋಪಿಗಳಿಂದ ವಿರಾಜಮಾನನಾದ ನನ್ನನ್ನು ನಗರ ಸಭಾ ಕಛೇರಿಗೆ ಕರೆದುಕೊಂಡು ಬಂದು, ಸಂದರ್ಶನ ನಡೆಯುವ ಸ್ಥಳದಲ್ಲಿ ಕೂರಿಸಿದರು.  ನನ್ನಂತೆ ಉದ್ಯೋಗಾಕಾಂಕ್ಷಿಗಳಾದ ಅನೇಕರ ನಡುವೆ ಕೂತು ಕಾದೆ. ಸ್ವಲ್ಪ ಹೊತ್ತಿನ ನಂತರ ಕಮೀಷನರ್ ಅವರಿಂದ ಕರೆಬಂತು. ಸಿಂಹದ ಗುಹೆಯನ್ನು ಪ್ರವೇಶಿಸುವ ಮೊಲದ ಹಾಗೆ ನಾನು ಸಾಹೇಬರ ಮುಂದೆ ಹೋಗಿ ನಿಂತೆ. Sit down ಎಂದರು ಸಾಹೇಬರು, ಕತ್ತೆತ್ತದೆಯೇ, ಅವರು ಬಿಟ್ಟ ಸುರುಳಿ ಸುರುಳಿಯಾದ ಸಿಗರೇಟು ಹೊಗೆಯ ನಡುವೆ. ನಾನು ಎದುರಿನ ಕುರ್ಚಿಯ ಮೇಲೆ  ಕೂತೆ. ಏನೋ ಬರೆಯುತ್ತಿದ್ದರು ಕಮೀಷನರ್ ಸಾಹೇಬರು. ಒಂದೆರಡು ಕ್ಷಣ ಅಸಹನೀಯ ಮೌನ. ನಿಧಾನಕ್ಕೆ ನನ್ನ ಕಡೆ ನೋಡಿದರು. ಸ್ಕೂಲಿಂದಲೋ ಕಾಲೇಜಿಂದಲೋ ತಪ್ಪಿಸಿಕೊಂಡು ಬಂದವನಂತೆ ತೋರುತ್ತಿದ್ದ ನನ್ನನ್ನು ನೋಡಿ. ‘So you have come for this job’ ಎಂದರು. ‘ಹೌದು ಸರ್’ ಎಂದೆ. ‘My dear boy, what is your age’ ಎಂದರು.  ‘Sixteen years sir’ ಎಂದೆ. ‘ Go home, you are too young for this job’ ಎಂದರು. ನಾನು ತಲೆ ತಗ್ಗಿಸಿ ಮೌನವಾಗಿದ್ದೆ. ‘ಒಬ್ಬನೇ ಬಂದಿದ್ದೀಯಾ’ ಅಂದರು. ‘ಇಲ್ಲ ಸಾರ್ ನಮ್ಮ ತಂದೆಯವರು ಜತೆಗೆ ಬಂದಿದ್ದಾರೆ’ ಅಂದೆ. ಅವರನ್ನು ಒಳಕ್ಕೆ ಕರೆಯಿರಿ ಅಂದರು. ನಮ್ಮ ತಂದೆ ಒಳಗೆ ಬಂದ ನಂತರ ಕಮೀಷನರ್ ಅವರನ್ನು ಅಕ್ಷರಶಃ ತರಾಟೆಗೆ ತೆಗೆದುಕೊಂಡರು: “ಇಷ್ಟು ಚಿಕ್ಕ ಹುಡುಗನ್ನ ಈಗಲೇ ಕೆಲಸಕ್ಕೆ ಸೇರಿಸಲು ಯಾಕ್ರೀ ಕರಕೊಂಡು ಬಂದಿದೀರಿ? ಈ ಕೆಲಸ ಎಂಥದು ಗೊತ್ತೆ? ಕರಕೊಂಡು ಹೋಗಿ ಹುಡುಗನ್ನ, ಮುಂದಕ್ಕೆ ಓದಿಸಿ.”

ನಮ್ಮ ತಂದೆಯವರಿಗೆ ಮುಖಭಂಗವಾಯಿತು. ಮರು ಮಾತಾಡದೆ ಸಾಹೇಬರಿಗೆ  ಕೈಮುಗಿದು, ಹೊರಕ್ಕೆ ಬಂದು ನನ್ನನ್ನು ಕರೆದುಕೊಂಡು ಊರಿಗೆ ಬಂದರು. ಆ ಬಿಲ್ ಕಲೆಕ್ಟರ್ ಹುದ್ದೆ ನನಗೆ ಸಿಕ್ಕಿದ್ದರೆ ಇವತ್ತು ನಾನೇನಾಗಿರುತ್ತಿದ್ದೆ ಎಂದು ಹಲವು ಸಲ ಯೋಚಿಸಿದ್ದೇನೆ.

ಹಾಗೂ ಹೀಗೂ ದಿನಗಳುರುಳಿ, ೧೯೪೩ನೆ ಜೂನ್ ವೇಳೆಗೆ ಮತ್ತೆ ಬಂದು ತುಮಕೂರು ಇಂಟರ್ ಮೀಡಿಯೇಟ್ ಕಾಲೇಜನ್ನು ಸೇರಿದೆ. ತುಮಕೂರಿನ ಜಯದೇವ ಹಾಸ್ಟಲಿನಲ್ಲಿ, ನನಗೆ ಯಾರದೇ ಶಿಫಾರಸ್ಸು ಇಲ್ಲದ ಕಾರಣ ಸ್ಥಳ ದೊರೆಯಲಿಲ್ಲ; ಹೀಗಾಗಿ ಸಿದ್ಧಗಂಗಾ ಮಠವೇ ನನಗೆ ಆಶ್ರಯ ನೀಡಿತು. ದಿನವೂ ಬೆಳಿಗ್ಗೆ ೮-೪೫ರ ವೇಳೆಗೆ ಊಟ ಮುಗಿಸಿ, ನನ್ನ ಸಂಗಡಿಗರ ಜತೆ ಮೂರೂವರೆ ಮೈಲಿ ನಡೆದು ಕಾಲೇಜು ತಲುಪುತ್ತಿದ್ದೆ. ಬಸ್ಸಿನ ದಾರಿಯನ್ನು ಬಿಟ್ಟು, ಹೊಲಗಳ ನಡುವಣ ಕಾಲು ದಾರಿಗಳಲ್ಲಿ ನಮ್ಮ ಪಯಣ. ರಾಗಿ-ಜೋಳ-ಅವರೆಯನ್ನು ಬೆಳೆದ ಹೊಲಗಳ ನಡುವೆ, ಬಿಸಿಲೋ ಮಳೆಯೋ ಮಂಜೋ ಎಲ್ಲಾ ಕಾಲಗಳಲ್ಲೂ ನಮ್ಮ ‘ಪಾದಯಾತ್ರೆ’ ನಿಲ್ಲದೆ ಸಾಗಿತ್ತು. ಒಂಬತ್ತು ಗಂಟೆಗೆ ಸಿದ್ಧಗಂಗೆ ಬಿಟ್ಟರೆ ಕಾಲೇಜು ತಲುಪುವ ವೇಳೆಗೆ ಹತ್ತೂಕಾಲು-ಹತ್ತೂವರೆ. ಮಧ್ಯಾಹ್ನದ ಬಿಡುವಿನಲ್ಲಿ ಒಂದಷ್ಟು ಕಡಲೆಕಾಯಿ ತಿಂದು, ನೀರು ಕುಡಿದರೆ, ಮುಗಿಯಿತು ಮಧ್ಯಂತರದ ಉಪಾಹಾರ. ಮತ್ತೆ ನಾಲ್ಕೂವರೆಯ ನಂತರ, ಹಿಂದಕ್ಕೆ ಮೂರೂವರೆ ಮೈಲಿಗಳ ದಾರಿ.

ಈ ನಡುವೆ ಹಣದ ತೊಂದರೆಯಿಂದ ನಾನು ಯಾವ್ಯಾವುದೋ ಕೆಲಸಕ್ಕೆ ಸುಮ್ಮನೆ ಅರ್ಜಿ ಹಾಕುತ್ತಿದ್ದೆ, ರಜಾ ದಿನಗಳಲ್ಲಿ ಎಲ್ಲಾದರೂ ಒಂದಷ್ಟು ಕೆಲಸ ಮಾಡೋಣ ಎಂದು. ಜೂನಿಯರ್ ಇಂಟರ್ ಪರೀಕ್ಷೆ ಮುಗಿಯುವ ಹೊತ್ತಿಗೆ ಸಕಲೇಶಪುರದ ಸ್ಕೂಲ್ ರೇಂಜ್ ಇನ್‌ಸ್ಪೆಕ್ಟರ್ ಕಛೇರಿಯಲ್ಲಿ ಗುಮಾಸ್ತನಾಗಿ ನೇಮಕಗೊಂಡ ಆರ್ಡರ್ ಬಂತು. ಬೇಸಿಗೆಯ ರಜವನ್ನು ಸದುಪಯೋಗ- ಪಡಿಸಿಕೊಳ್ಳಲು ಸಕಲೇಶಪುರಕ್ಕೆ ಹೋಗಿ ಕೆಲಸಕ್ಕೆ ಸೇರಿಕೊಂಡೆ. ಸಕಲೇಶಪುರ ಪಶ್ಚಿಮ ಘಟ್ಟದ ಮೇಲಿರುವ ತುಂಬ ಸೊಗಸಾದ ಊರು. ದಟ್ಟಹಸುರಿನ, ಏರಿಳಿವುಗಳ ಮಧ್ಯೆ, ಡೊಂಕಾಗಿ ಹರಿಯುವ ಹೇಮಾವತಿ; ಸಲ್ಪ ದೂರ ಪ್ರಯಾಣ ಮಾಡಿದರೆ, ಕಗ್ಗಾಡುಗಳ ಕಣಿವೆಗಳು, ಕಾಫಿ-ಯಾಲಕ್ಕಿ ತೋಟಗಳು. ತುಂಬ ರಮ್ಯವಾದ ಈ ಊರಲ್ಲಿ ಮೂರು ತಿಂಗಳ ಗುಮಾಸ್ತನಾಗಿ ದುಡಿದು, ಕೂಡಿಸಿ ಇಟ್ಟ ಸಂಬಳದ ಒಂದು ನೂರು ರೂಪಾಯಿಗಳ ಸಹಿತ, ಮತ್ತೆ ಬಂದು ಜೂನ್ ವೇಳೆಗೆ ಸೀನಿಯರ್ ಇಂಟರ್ ಮೀಡಿಯೇಟ್ ತರಗತಿಗೆ ಸೇರಿ ವಿದ್ಯಾಭ್ಯಾಸವನ್ನು ಮುಂದುವರಿಸಿದೆ. ಆ ವರ್ಷದ ಕೊನೆಗೆ ಪರೀಕ್ಷೆಗೆ ಕುಳಿತು-ಪಾಸೂ ಆದೆ, ಎರಡನೆ ದರ್ಜೆಯಲ್ಲಿ.

ಮುಂದೆ ಬಿ. ಎ .ಗೆ ಹೋಗಬೇಕೆಂದು ನನ್ನ ಎಣಿಕೆ. ಆದರೆ ನಮ್ಮ ತಂದೆಯವರ ಲೆಕ್ಕಾಚಾರ ಬೇರೆಯೇ ಇತ್ತು. ‘ಓದಿದ್ದು ಸಾಕು’ ಇಲ್ಲೇ ತಾಲ್ಲೂಕು ಕಛೇರಿಯಲ್ಲಿ ಗುಮಾಸ್ತನ ಕೆಲಸ ಖಾಲಿ ಇದೆ, ಸೇರಿಕೋ ಕ್ರಮೇಣ ರೆವಿನ್ಯೂ ಇನ್ಸ್‌ಪೆಕ್ಟರ್ ಆಗಿ, ಆಮೇಲೆ ಅಮಲ್ದಾರನಾದರೂ ಆಗಬಹುದು ಎಂದರು. ಆಗ ಅವರಿದ್ದದ್ದು ಗುಬ್ಬಿಯಲ್ಲಿ. ಎರಡನೇ ಮಹಾಯುದ್ಧದ ಕಾಲ. ಆಹಾರವಿಲ್ಲದೆ ಹಾಹಾಕಾರ. ರೇಷನ್ ಮೂಲಕ ಪಡೆದ ದವಸಧಾನ್ಯಗಳಲ್ಲಿ ಕಾಲ ಹಾಕಬೇಕು. ದುಡ್ಡು ತೆತ್ತರೂ ಆಹಾರ ಪದಾರ್ಥ ದೊರೆಯುತ್ತಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಐದು ಜನ ತಂಗಿಯರು, ಒಬ್ಬ ತಮ್ಮ; ಕೈಗೆ ಬರುವ ಐವತ್ತರವತ್ತು ರೂಪಾಯಿಗಳಲ್ಲಿ ಸಂಸಾರ ಸಾಗುವುದು ಹೇಗೆ?  ಈ ಪರಿಸ್ಥಿತಿಯಲ್ಲಿ ‘ನಾನು ಮುಂದಕ್ಕೆ ನಿನ್ನನ್ನು ಓದಿಸಲಾರೆ’ ಎಂಬರ್ಥದ ಮಾತುಗಳನ್ನು ನನ್ನ ತಂದೆಯವರು ಆಡಿದ್ದು ಸಹಜವಾಗಿಯೇ ಇದೆ. ಸಂದರ್ಭದ ಬಲಕ್ಕೆ ತಲೆಬಾಗಿ, ಮುಂದಕ್ಕೆ ಓದುವ ಅರ್ಹತೆ ಅಪೇಕ್ಷೆ ಇದ್ದರೂ, ನಾನು ಗುಬ್ಬಿಯ ತಾಲ್ಲೂಕು ಕಛೇರಿಯಲ್ಲಿ ಗುಮಾಸ್ತನಾಗಿ ಸೇರಿದೆ. ಸೇರಿದ ಮೂರು ತಿಂಗಳ ನಂತರ ನನ್ನನ್ನು ಗುಬ್ಬಿಗೆ ಆರುಮೈಲಿ ದೂರದ ನಿಟ್ಟೂರಿನ ಆಹಾರ ಧಾನ್ಯಗಳ ಡಿಪೋಕ್ಕೆ ‘ರೇಷನ್ ಗುಮಾಸ್ತ’ನಾಗಿ ವರ್ಗಾಯಿಸಲಾಯಿತು. ನಿಟ್ಟೂರಿನ ಹೊರಗೆ, ದಟ್ಟವಾದ ಮರಗಳ ನಡುವಣ ಟ್ರಾವಲರ‍್ಸ್ ಬಂಗಲೆಯ ಒಂದು ಭಾಗವೇ, ದಾಸ್ತಾನುಮಳಿಗೆ  ಮತ್ತು ನನ್ನ ವಾಸದ ಕೊಠಡಿಯಾಗಿತ್ತು. ಆ  ಬಂಗಲೆಯ ಇನ್ನೊಂದು ಭಾಗ ಯಾರಾದರೂ ಅಧಿಕಾರಿಗಳು ಬಂದರೆ ಉಳಿದುಕೊಳ್ಳಲು ಮೀಸಲಾಗಿತ್ತು.

ದಿನವೂ ತಾಲ್ಲೂಕು ಮತ್ತಿತರ ಕಡೆಯಿಂದ ಬರುವ ಆಹಾರ ಧಾನ್ಯಗಳ ಲೆಕ್ಕ ತೆಗೆದುಕೊಂಡು, ನಾನಿದ್ದ ಕೊಠಡಿಯ ಪಕ್ಕದ ಹಾಲ್‌ನಲ್ಲಿ ಹಾಕಿಸುವುದು, ದಿನವೂ ರೇಷನ್‌ಗಾಗಿ ಬರುವ ಮಂದಿಗೆ ಆಹಾರ ಧಾನ್ಯ ವಿತರಣೆ ಮಾಡುವುದು; ಲೆಕ್ಕ ಪತ್ರಗಳ ಸಹಿತ ಹಣವನ್ನು ತಾಲ್ಲೂಕು ಕಛೇರಿಗೆ ಜಮಾ ಮಾಡಿಸುವುದು; ವಾರದಲ್ಲಿ ಒಂದು ಸಲ ಧಾನ್ಯದ ಮೂಟೆಯನ್ನು ಗಾಡಿಯಲ್ಲಿ ಹೇರಿಸಿಕೊಂಡು ಐದಾರು ಮೈಲಿ ದೂರದ ಹಳ್ಳಿಗೆ ಹೋಗಿ ಅಲ್ಲಿನ ಜನಕ್ಕೆ ರೇಷನ್ ಕಾರ್ಡಿನಲ್ಲಿ ನಮೂದಾದಷ್ಟು ಪಡಿತರವನ್ನು ವಿತರಣೆ ಮಾಡುವುದು, ಇದು ನನ್ನ ಕೆಲಸವಾಗಿತ್ತು.

ಮನಸ್ಸು ಮಾಡಿದ್ದರೆ ಆ ಕಾಲದಲ್ಲಿ ನಾನು ಸಾಕಷ್ಟು ದುಡ್ಡು ಮಾಡಬಹುದಾಗಿತ್ತು. ಸಾಕಷ್ಟು ಪ್ರಲೋಭನೆಗಳು ಬಲೆ ಬೀಸಿದವು, ಹೋಟಲಿನವರಿಂದ ಮತ್ತು ಅಂಗಡಿಗಳವರಿಂದ. ಯಾವ ದೈವವೋ ಏನೋ, ನಾನು ದಾರಿತಪ್ಪದಂತೆ ಕಾಪಾಡಿತು. ಹತ್ತು ಜನ ಹಸಿವಿನಿಂದ ನರಳುವಾಗ, ಅವರಿಗೆ ವಿತರಣೆ ಮಾಡಲು ನನ್ನ ಜವಾಬ್ದಾರಿಗೆ ಕೊಟ್ಟ ಅನ್ನವನ್ನು, ನಾನು ದುರುಪಯೋಗ ಮಾಡಿಕೊಳ್ಳಲು ಬಯಸಲಿಲ್ಲ. ಸುಮಾರು ಎಂಟು ತಿಂಗಳ ಕಾಲ ನೇರವಾಗಿ ನಡೆದುಕೊಂಡು ಒಳ್ಳೆಯ ಡಿಪೋ ಗುಮಾಸ್ತನೆಂದು ಹೆಸರು ಪಡೆದುಕೊಂಡೆ. ಈ ಅವಧಿಯಲ್ಲಿ ಹಳ್ಳಿ ಹಳ್ಳಿಗಳಿಂದ ನಡೆದುಬಂದು, ಆಹಾರ ಧಾನ್ಯಗಳಿಗಾಗಿ, ದೀನರಾಗಿ ಡಿಪೋದ ಮುಂದೆ ಸಾಲು ಕೂರುತ್ತಿದ್ದ ಜನರನ್ನು ಕಂಡು ನನಗೆ ದುಃಖವಾಗುತ್ತಿತ್ತು. ದುಡ್ಡು ಕೊಟ್ಟೂ ಅವರು ಈ ಡಿಪೋಗಳ ಮೂಲಕ ಪಡೆಯುತ್ತಿದ್ದ ರೇಷನ್, ಅವರಿಗೆ ಮೂರು ದಿನಕ್ಕೆ ಕೂಡಾ ಸಾಕಾಗುತ್ತಿರಲಿಲ್ಲ. ಅಂಥ ಕಷ್ಟ ಕಾಲ ಅದು. ಸಾಮಾನ್ಯವಾಗಿ ರೈತರಿಂದ ಸರ್ಕಾರ, ಹೀಗೆ ಮಾರಾಟಕ್ಕೆಂದು ಅಳೆದು ತುಂಬಿಸುತ್ತಿದ್ದ ಒಂದೊಂದು ಮೂಟೆಯಲ್ಲಿ ಎರಡು ಮೂರು ಸೇರು ಹೆಚ್ಚಾಗಿಯೇ ಇರುತ್ತಿತ್ತು. ನಾನು ಈ ಹೆಚ್ಚುವರಿ ಅಕ್ಕಿ ರಾಗಿಯನ್ನು ಪ್ರತ್ಯೇಕವಾಗಿ ತೆಗೆಯಿಸಿ ಒಂದೆಡೆ ಇರಿಸಿ, ಭಾನುವಾರಗಳಲ್ಲಿ, ತುಂಬ ನಿರ್ಗತಿಕರಾದ ಜನಕ್ಕೆ ಉಚಿತವಾಗಿ ಹಂಚಿಸಿಬಿಡುತ್ತಿದ್ದೆ. ಹಾಗೆ ಆ ದಿನಗಳಲ್ಲಿ ಅದನ್ನು ಪಡೆದವರ ಮುಖದಲ್ಲಿ ಅರಳಿದ ನೆಮ್ಮದಿ ಹಾಗೂ ಕೃತಜ್ಞತಾಭಾವ ಇಂದಿಗೂ ನನ್ನ ನೆನಪಿನಲ್ಲಿ ಉಳಿದಿದೆ. ಈ ದಿನಗಳ ಜನದ ಬವಣೆಗಳನ್ನು ಹಾಗೂ ನನ್ನ ತಾಕಲಾಟಗಳನ್ನು ಕುರಿತು ಆನಂತರ ಚಕ್ರವ್ಯೂಹ ಎಂಬ ಕಾದಂಬರಿಯನ್ನು ಬರೆದೆ. ಅದರ ಹಸ್ತಪ್ರತಿಯನ್ನು ಓದಲು ತೆಗೆದುಕೊಂಡು ಹೋದವರೊಬ್ಬರು, ಅದನ್ನು ಮತ್ತೆ ನನಗೆ ಹಿಂದಿರುಗಿಸಲೇ ಇಲ್ಲ.

ಅಂತೂ ಈ ಚಕ್ರವ್ಯೂಹದಿಂದ ಸುರಕ್ಷಿತವಾಗಿ ಪಾರಾಗಿ ೧೯೪೬ ನೇ ಜೂನ್ ವೇಳೆಗೆ ಹೊರಕ್ಕೆ ಬಂದೆ. ಈ ಏಳೆಂಟು ತಿಂಗಳಲ್ಲಿ ನಾನು  ಕೂಡಿಟ್ಟುಕೊಂಡ ಸಂಬಳದ ಹಣ ಸುಮಾರು ಮುನ್ನೂರು ರೂಪಾಯಿ. ನನ್ನ ತಂದೆಯವರಿಗೆ ಹೇಳಿದೆ: ‘ನಾನು ಮುಂದಕ್ಕೆ ಓದಬೇಕು. ಅದಕ್ಕೇನೂ ನೀವು ಹಣ ಕೊಡಬೇಕಾಗಿಲ್ಲ. ನನ್ನನ್ನು ತಡೆಯಬೇಡಿ.’ ಅವರು ಸುಮ್ಮನಾದರು. ನಾನು ಮೈಸೂರಿಗೆ  ಬಂದು ಬಿ. ಎ.ಅನರ‍್ಸ್ (ಕನ್ನಡ)ಗೆ ಸೇರಿಕೊಂಡೆ.  ಪ್ರೊ.ಎ.ಆರ್, ಕೃಷ್ಣಶಾಸ್ತ್ರಿಗಳು ಆಗ ಪ್ರಾಧ್ಯಾಪಕರು. ‘ಕನ್ನಡ ಆನರ್ಸ್‌ಗೆ ಯಾಕಯ್ಯ ಸೇರುತ್ತೀಯ. ಬೇರೆ ಯಾವುದಾದರೂ ವಿಷಯವನ್ನು ತಗೊ. ನಾಳೆ ನಿನಗೆ ಒಳ್ಳೆಯದಾಗಬಹುದು’ ಎಂದು ಮೊದಲು ಉಪದೇಶಿಸಿದರು. ಕನ್ನಡ ಓದಿದವರು ಅಂದು ಉದ್ಯೋಗವಿಲ್ಲದೆ ತೊಂದರೆಗೆ ಈಡಾದದ್ದನ್ನು ಅವರು ಗಮನಿಸಿದ್ದರು.  ಅದರಿಂದ ಹಾಗೆ ಹೇಳಿದರು. ಆದರೆ, ನಾನು, ನನಗೆ ಕನ್ನಡವೇ ಬೇಕು ಎಂದು ಪಟ್ಟು ಹಿಡಿದೆ. ಅವರು ನಕ್ಕು ನನಗೆ ಪ್ರವೇಶ ಕಲ್ಪಿಸಿದರು. ಮೂರುನಾಲ್ಕು ತಿಂಗಳ ನಂತರ ಕೃಷ್ಣಶಾಸ್ತ್ರಿಗಳು ನಿವೃತ್ತರಾಗಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಕೆ.ವಿ. ಪುಟ್ಟಪ್ಪನವರು ಮಹಾರಾಜಾ ಕಾಲೇಜಿಗೆ ಪ್ರಾಧ್ಯಾಪಕರಾಗಿ ಬಂದರು. ಅಲ್ಲಿಂದ ಎಂ.ಎ. ತರಗತಿಯವರೆಗೆ, ಒಟ್ಟು ಐದು ವರ್ಷಗಳ ಕಾಲ ಪುಟ್ಟಪ್ಪನವರ ಸಾನ್ನಿಧ್ಯದಲ್ಲಿ ಕೂತು ಪಾಠ ಕೇಳುವ ಅಪೂರ್ವ ಯೋಗ ನನಗೆ ಲಭಿಸಿತು.

೧೯೪೯ರ ಮೇ ತಿಂಗಳ ಬಿ.ಎ.ಅನರ‍್ಸ್ ಪರೀಕ್ಷೆಯಲ್ಲಿ ನಾನು ಪ್ರಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದೆ. ಫಲಿತಾಂಶ ಬಂದಾಗ, ನಾನು ಗುಬ್ಬಿಯಲ್ಲಿದ್ದೆ. ನಮ್ಮ ತಂದೆಯವರಿಗೆ ತುಂಬ ಖುಷಿಯಾಯಿತು. ಅಷ್ಟೇ ಅಲ್ಲ ಫಲಿತಾಂಶ ಪ್ರಕಟವಾದ ಒಂದು ವಾರದಲ್ಲೇ ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅವರಿಂದ, ದಾವಣಗೆರೆಯ ಡಿ. ಆರ್.ಎಂ. ಕಾಲೇಜಿನಲ್ಲಿ ನನ್ನನ್ನು ತಾತ್ಕಾಲಿಕ ಕನ್ನಡ ಉಪನ್ಯಾಸಕನನ್ನಾಗಿ ನೇಮಿಸಿದ ಆಜ್ಞೆ ನನ್ನ ಮನೆಯ ವಿಳಾಸಕ್ಕೇ ಬಂದಿತು. ಆ ಕಾಲದಲ್ಲಿ, ನೇಮಕಗಳಾಗುತಿದ್ದದ್ದೇ ಹೀಗೆ. ಕೆಲಸ ಖಾಲಿ ಇದ್ದರೆ, ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ, ಬಹುಶಃ ವಿಭಾಗದ ಮುಖ್ಯಸ್ಥರ ಸೂಚನೆಯ ಮೇಲೆ, ರಿಜಿಸ್ಟ್ರಾರ್ ಅವರೇ ಹೀಗೆ ನೇಮಕ ಮಾಡುತ್ತಿದ್ದರು. ನನ್ನ ನೇಮಕಾತಿ ಆಜ್ಞೆಯನ್ನು ನೋಡಿ ನಮ್ಮ ತಂದೆಯವರು ದಂಗು ಬಡಿದು ನಿಂತರು.

ಜೂನ್ ೨೪ನೆ ತಾರೀಖು ಕೆಲಸಕ್ಕೆ ಹಾಜರಾಗಬೇಕೆಂದು ಒಂದೆರಡು ದಿನ ಮೊದಲೇ ದಾವಣಗೆರೆಗೆ ಬಂದೆ. ಲೆಕ್ಚರರ್ ಆಗಿ ಯಾವ ವೇಷ ಧರಿಸಲಿ? ಪಂಚೆ-ಗಿಂಚೆ ಉಟ್ಟರೆ ಹುಡುಗರು ಹಗುರಾಗಿ ತೆಗೆದುಕೊಂಡರೆ, ಗೇಲಿ ಮಾಡಿದರೆ ಗತಿಯೇನು? ವಿದ್ಯಾರ್ಥಿ ಜೀವನದಲ್ಲಿ ಪೈಜಾಮ-ಪ್ಯಾಂಟು ಎರಡನ್ನೂ ಹಾಕುತ್ತಿದ್ದೆ. ಪೈಜಾಮ ಹಾಕಿಕೊಂಡು ಹೋದರೆ, ಪಂಚೆಗಿಂತ ಕೇಡು; ಪ್ಯಾಂಟೇ ವಾಸಿ ಅಂದುಕೊಂಡು, ಅದಕ್ಕೆ ಒಪ್ಪುವ ಕೋಟು ಹೊಲಿಸಿಕೊಂಡು ಶುದ್ಧ ‘ಸೂಟಾವತಾರಿ’ಯಾದೆ. ಬೂಡ್ಸು ಹಾಕಿ ಅಭ್ಯಾಸವೇ ಇರಲಿಲ್ಲವಾದ ಕಾರಣ, ಕೆಲಸಕ್ಕೆ ರಿಪೋರ್ಟು ಮಾಡಿಕೊಳ್ಳುವ ಹಿಂದಿನ ದಿನ ಬೂಡ್ಸು ಕೊಂಡು, ಕಾಲಿಗೆ ಹಾಕಿಕೊಂಡು, ರಾತ್ರಿ ಸ್ವಲ್ಪ ಹೊತ್ತು ರಿಹರ್ಸಲ್ ಮಾಡಬೇಕಾಯಿತು. ಬೆಳಿಗ್ಗೆ ಕಾಲೇಜಿಗೆ ಹೋಗಿ ಡ್ಯೂಟಿಗೆ ರೀಪೋರ್ಟ್ ಮಾಡಿಕೊಂಡೆ. ಅದರ ಮುಂದಿನ ದಿನದಿಂದಲೇ ನಾನು ತರಗತಿಗಳನ್ನು ತೆಗೆದುಕೊಳ್ಳಬೇಕೆಂದು, ಪ್ರಿನ್ಸಿಪಾಲ್ ತ್ಯಾಗರಾಜನ್ ನನಗೆ ತಿಳಿಸಿದರು. ನನಗೆ ಒಂದು ಥರಾ ‘ಭಯವಲ್ಲದ ಭೀತಿ’ ಕವಿದುಕೊಂಡಿತು. ನಾನು ಎಂದೂ ಯಾವುದೇ ವೇದಿಕೆಗಳ ಮೇಲೆ ಮಾತಾಡಿದವನಲ್ಲ; ಯಾವ ಚರ್ಚಾಕೂಟಗಳಲ್ಲೂ ಭಾಗವಹಿಸಿದವನಲ್ಲ. ಕ್ಲಾಸ್ ಸೋಷಿಯಲ್ಸ್ ಸಂದರ್ಭದಲ್ಲಿ ಮಾತಾಡುವಾಗ, ಹಣೆಗೆ ಬೆವರು ಬಂದು, ಕಾಲುಗಳು ತತ್ತರಿಸುವ ಅನುಭವವಾಗಿತ್ತು. ಇನ್ನು ವಿದ್ಯಾರ್ಥಿಗಳ ಮುಂದೆ, ಅದೂ ದಾವಣಗೆರೆಯ ಇಂಟರ್ ಮೀಡಿಯೇಟ್ ಕಾಲೇಜಿನ ವಿದ್ಯಾರ್ಥಿಗಳ ಮುಂದೆ ಮಾತನಾಡುವುದು ಹೇಗೆ? ಏನು ಮಾಡುವುದು? ‘ತಸ್ಮೆ  ಶ್ರೀ ಗುರುವೆ ನಮಃ’ಎಂದು ಕುವೆಂಪು ಅವರನ್ನು ನೆನೆದೆ. ಮರುದಿನ ಮೊದಲ ಪಾಠಮಾಡಬೇಕಾದ್ದು ಸೀನಿಯರ್ ಇಂಟರ್ ತರಗತಿಗೆ. ಕುವೆಂಪು ಅವರ ‘ಚಿತ್ರಾಂಗದಾ’ ಕಾವ್ಯವನ್ನು ಕುರಿತು. ಕುವೆಂಪು ಅವರು ಮೂರು ವರ್ಷ ಮಾಡಿದ ತರಗತಿಯ ಪಾಠದ ಬತ್ತಳಿಕೆ-ಬಿಲ್ಲು-ಖಡ್ಗ-ತೋಮರಗಳಿಂದ ಸಿದ್ಧವಾಗಿ, ಸೂಟು-ಬೂಟು ಧರಿಸಿ ತರಗತಿಗೆ ಪ್ರವೇಶ ಮಾಡಿ ಒಂದು ಗಂಟೆ ಭಯಂಕರ ಭಾಷಣ ಮಾಡಿದೆ. ನನಗೇ ತಿಳಿಯದಂಥ ದಪ್ಪ ದಪ್ಪ ಪದ ಪುಂಜಗಳು. ಆ ವಿದ್ಯಾರ್ಥಿಗಳ ತಲೆಗೇ ಹೋಗದ ಕಾವ್ಯಮೀಮಾಂಸೆಯ ಪಾರಿಭಾಷಿಕ ಪದಗಳು, ನಡುನಡುವೆ ಮಹಾಛಂದಸ್ಸು, ಮಹೋಪಮೆ, ಮಹತ್ ಪ್ರತಿಭೆ ಇಂಥ ಸಂಗತಿಗಳು, ಇತ್ಯಾದಿಗಳಿಂದ ಕೂಡಿದ ನನ್ನ ವಾಕ್ ಪ್ರವಾಹದಿಂದ ನನ್ನ ಮೊದಲ ಪಾಠಕ್ಕೆ ಬಲಿಯಾದ ಸೀನಿಯರ್ ಇಂಟರ್‌ಮೀಡಿಯಟ್‌ನ ವಿದ್ಯಾರ್ಥಿಗಳು ಹಿಂದು-ಮುಂದು ಏನೆಂದೂ ತಿಳಿಯದೆ ಸ್ತಂಭೀಭೂತರಾದರು. ಮಾತಾಡಿದರೆ, ಅರ್ಥವಾಗದಂತೆ ಮಾತಾಡ- ಬಹುದಾದದ್ದು ಇಂಗ್ಲೀಷಿನಲ್ಲೇ ಅಂದುಕೊಂಡಿದ್ದ ನನಗೆ, ಕನ್ನಡದಲ್ಲೂ ಇತರರಿಗೆ ಅರ್ಥವಾಗದಂತೆ ಮಾತನಾಡಬಹುದೆಂಬ ಸತ್ಯ ಸಾಕ್ಷಾತ್ಕಾರವಾಯಿತು. ನನ್ನ ವಾಗಾಡಂಬರದ ಆಘಾತಕ್ಕೆ ಸಿಕ್ಕು ಸ್ತಂಭೀಭೂತರಾದ ಅಂದಿನ ಸೀನಿಯರ್ ಇಂಟರ್‌ಮೀಡಿಯಟ್ ತರಗತಿಯ ವಿದ್ಯಾರ್ಥಿಗಳಲ್ಲಿ ಎಂ.ಚಿದಾನಂದಮೂರ್ತಿ-ಯವರೂ ಒಬ್ಬರಾಗಿದ್ದರು.

ಸಂಜೆಯೊಳಗಾಗಿ ನಾನು ಅದ್ಭುತವಾದ ಅಧ್ಯಾಪಕನೆಂದು ದಾವಣಗೆರೆಯಲ್ಲಿ ಪ್ರಸಿದ್ಧನಾಗಿಬಿಟ್ಟೆ. ಇವತ್ತು ಅದನ್ನು ನೆನೆದರೆ ನನಗೇ ನಗು ಬರುತ್ತದೆ; ನಾಚಿಕೆಯೂ ಆಗುತ್ತದೆ. ಕೆಲವೇ ತಿಂಗಳಲ್ಲಿ ಬೇಸರ ಬಂದು ಸೂಟನ್ನು ವರ್ಜಿಸಿ, ಪಂಚೆಗೆ ಬಂದೆ. ಪಂಚೆಯನ್ನು ಚೆನ್ನಾಗಿ ಉಡುವುದು ಹೇಗೆಂದು ಈ ಹಂತದಲ್ಲಿ ನನಗೆ ಕಲಿಸಿಕೊಟ್ಟವರು ನನ್ನ ಗೆಳೆಯರಾದ ಪ್ರಭುಪ್ರಸಾದರು. ಆನಂತರ ಮೈಸೂರಿಗೆ ಯುವರಾಜಾ ಕಾಲೇಜಿಗೆ ವರ್ಗವಾಯಿತು ೧೯೫೧ರ ವೇಳೆಗೆ. ಆಗ ಮತ್ತೆರಡು ವರ್ಷ ಏಕಕಾಲದಲ್ಲಿ ಮಹಾರಾಜಾ ಕಾಲೇಜಿನ ವಿದ್ಯಾರ್ಥಿಯಾಗಿ, ಯುವರಾಜಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ, ಎಂ.ಎ. ಶಿಕ್ಷಣ ಮುಗಿಸಿಕೊಂಡೆ. ಅದಾದ ನಂತರ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಎರಡು ವರ್ಷ. ದಿನವೂ ಕಾಲೇಜಿಗೆ ಬರುವಾಗ ಋತು ಋತುವಿಗೂ ಪ್ರವಹಿಸುವ ತುಂಗಾ ನದಿಯನ್ನು ನೋಡುತ್ತಿದ್ದೆ. ಅದು ಹೇಗೋ ನಾನು ಮತ್ತೆ ಮೈಸೂರಿಗೆ, ಭಾರತ ಸರ್ಕಾರದ ಫೆಲೋಷಿಪ್ ಮೇಲೆ, ಕುವೆಂಪು ಅವರ ನಿರ್ದೇಶನದಲ್ಲಿ ಪಿಎಚ್.ಡಿ.ಗೆ ಅಧ್ಯಯನ ಮಾಡುವ ಅವಕಾಶ ದೊರೆಯಿತು. ಅನಂತರ ತೀ.ನಂ.ಶ್ರೀ ಅವರ ಮಂದಹಾಸದ ಕೆಳಗೆ ೧೯೬೦ರ ವೇಳೆಗೆ ಮಾನಸ ಗಂಗೋತ್ರಿಯಲ್ಲಿ ಕನ್ನಡ ಅಧ್ಯಾಪಕನಾಗಿ ಕೆಲಸ ಮಾಡುವ ಸಂದರ್ಭ ನನ್ನ ಪಾಲಿಗೆ ಬಂತು. ಆದರೆ ನನ್ನ ವೃತ್ತಿ ಜೀವನದಲ್ಲಿ ಮುಖ್ಯವಾದ ತಿರುವು ಬಂದದ್ದು ೧೯೬೩ರಲ್ಲಿ.

ನಾನು, ನಾಳೆ ಏನಾಗಬೇಕು ಎಂಬ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳಲಿಲ್ಲ. ಏನು ಬರುತ್ತದೋ ಅದನ್ನು ಎದುರಿಸುತ್ತ ಒಪ್ಪಿಕೊಳ್ಳುವುದು ನನಗೆ ಅಭ್ಯಾಸವಾಗಿಬಿಟ್ಟಿದೆ. ಇದರಿಂದಾಗಿ ನಾನು ಯಾವ ಜ್ಯೋತಿಷಿಗೂ ನನ್ನ ಕೈಯನ್ನು ತೋರಿಸಿ, ಅಥವಾ ಜಾತಕವನ್ನು ತೋರಿಸಿ, ನಾಳೆ ನನಗೇನಾಗುತ್ತದೆ ಎಂಬುದನ್ನು ತಿಳಿಯಲು  ಆಶಿಸಲೇ ಇಲ್ಲ. ನನ್ನ ಜತೆಗಿದ್ದ ಹಲವರು ಸ್ನೇಹಿತರಿಗೆ, ಕೈ ತೋರಿಸುವುದು, ಭವಿಷ್ಯ ಕೇಳುವುದು ಇತ್ಯಾದಿಗಳಲ್ಲಿ ಸಾಕಷ್ಟು ಆಸಕ್ತಿ ಇತ್ತು. ಈ ಬಗ್ಗೆ ನನಗಿದ್ದ ನಿರಾಸಕ್ತಿ ಅವರಿಗೆ ಆಶ್ಚರ್ಯದಂತೆ ತೋರಿರಬೇಕು.

೧೯೬೩ನೇ ಮಾರ್ಚಿಯೋ-ಏಪ್ರಿಲ್ ತಿಂಗಳೋ ಇರಬೇಕು. ನನಗೆ ಪರಿಚಿತ- ರಾದವರೊಬ್ಬರು, ಅವತ್ತಿನ ಹಿಂದೂ ಪತ್ರಿಕೆಯನ್ನು ಹಿಡಿದುಕೊಂಡು ಬಂದು, ‘ನೋಡ್ರಿ ಇದರಲ್ಲಿ ಒಂದು ಜಾಹೀರಾತು ಇದೆ. ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ರೀಡರ್ ಹುದ್ದೆಗೆ ಅರ್ಜಿ ಕರೆದಿದ್ದಾರೆ. ಆರುನೂರು ರೂಪಾಯಿ ಸಂಬಳ, (ನನಗಾಗ ಬರುತ್ತಿದ್ದುದು ಮುನ್ನೂರು ರೂಪಾಯಿ) ಇದಕ್ಕೆ ಬೇಕಾದ ಎಲ್ಲಾ ಕ್ವಾಲಿಫಿಕೇಷನ್ನೂ ನಿಮಗಿದೆ. ನೀವ್ಯಾಕೆ ಅರ್ಜಿ ಹಾಕಬಾರದು?’ ಅಂದರು. ನಾನು ನಕ್ಕು, ‘ಅಯ್ಯೋ ಅಷ್ಟು ದೂರ ಯಾರು ಹೋಗುತ್ತಾರೆ. ಅಲ್ಲಿಗೆ ಹೋದೆ ಅನ್ನಿ. ಮಕ್ಕಳ ವಿದ್ಯಾಭ್ಯಾಸ ಹಾಳು. ಇದ್ದುದರಲ್ಲಿ ಇಲ್ಲೇ ನಾನು ಹಾಯಾಗಿದ್ದೇನೆ  ಅಂದೆ. ಅವರು ಸುಮ್ಮನೆ ಅರ್ಜಿ ಹಾಕಿ. ಕಳಕೊಳ್ಳೋದು ಏನಿದೆ? ಅವರೇ ಇಂಟರ್‌ವ್ಯೂಗೆ ಕರೆದರೆ ಹೋಗಿ ಬರೋ ಖರ್ಚನ್ನೂ ಕೊಡಬಹುದು. ಬಿಟ್ಟಿಯಾಗಿ ಹೈದರಾಬಾದ್ ನೋಡಿಕೊಂಡು ಬಂದರಾಯಿತು’  ಅಂದರು. ಅವರ ಮಾತು ಸರಿ ಅನ್ನಿಸಿತು, ಮರುದಿನವೇ ಅರ್ಜಿಯೊಂದನ್ನು ತಯಾರಿಸಿ ಕಳುಹಿಸಿಕೊಟ್ಟೆ ಅಂಚೆಯಲ್ಲಿ.

ಇದಾದ ಮೂರು ವಾರ ಆಗಿರಬಹುದೇನೋ. ಆ ಸಂಜೆ ನಾನು, ಪ್ರಭುಶಂಕರ್ ಮತ್ತು ಸುಬ್ಬರಾಯರು ಎಂದಿನಂತೆ ಕುಕ್ಕನಹಳ್ಳಿಯ ಕೆರೆಯ ಏರಿಯ ಮೇಲೆ ತಿರುಗಾಟಕ್ಕೆ ಹೋಗಿ, ಲತಾಕುಂಜವೊಂದರ ಕಲ್ಲುಬೆಂಚಿನ ಮೇಲೆ ಕುಳಿತು, ಸಂಜೆಯ ಕಾಂತಿಯನ್ನು ಬಿಂಬಿಸುತ್ತಾ ದಡಕ್ಕೆ ಬಡಿಯುವ ಅಲೆಗಳನ್ನು ವೀಕ್ಷಿಸುತ್ತಾ, ಹರಟೆ ಹೊಡೆಯುತ್ತಿದ್ದೆವು. ಮಾತಿನ ಮಧ್ಯೆ, ‘ನೋಡಿ ಪ್ರಭುಶಂಕರ್ ನಾನು ನಿಮಗೊಂದು ಸಂಗತಿಯನ್ನು ಹೇಳುವುದನ್ನು ಮರೆತೆ. ಈಗ್ಗೆ ಸುಮಾರು ಮೂರು ವಾರದ ಹಿಂದೆ ನಮ್ಮ ಪಕ್ಕದ ಮನೆಯವರು ನನಗೊಂದು ಜಾಹೀರಾತು ತೋರಿಸಿದರು. ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದದ್ದು. ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ರೀಡರ್ ಹುದ್ದೆಗೆ ಕರೆದಿದ್ದರು. ಇರಲಿ ಅಂತ ನಾನೂ ಅರ್ಜಿ ಕಳುಹಿಸಿದ್ದೇನೆ.’

ಹಾಂ.ಅಂದರು ಪ್ರಭುಶಂಕರ್, ‘ನಾನೂ ಅದೇ ಹುದ್ದೆಗೆ ಅರ್ಜಿಹಾಕಿದೀನಲ್ಲ ಶಿವರುದ್ರಪ್ಪ. ಕಳೆದ ತಿಂಗಳು ನಾನು ಎನ್.ಸಿ.ಸಿ ಟ್ರೇನಿಂಗಿಗೆ ಅಂತ ಹೈದರಾಬಾದಿಗೆ ಹೋಗಿದ್ದೆನಲ್ಲ, ಆಗ ಅಲ್ಲೇ ಗೊತ್ತಾಯಿತು ಸಮಾಚಾರ. ನಾನು ಆಗಲೇ ಅಲ್ಲೇ ಅದಕ್ಕೆ ಮುಂಗಡ ಅರ್ಜಿ ಸಲ್ಲಿಸಿಯೇ ಬಂದೆ. ಈಗ ನೋಡಿ, ನೀವೂ ಹಾಕಿರುವುದಾಗಿ ಹೇಳ್ತೀರಿ.’ ನಾನೆಂದೆ, ‘ನಾನು ಏನೋ ಸುಮ್ಮನೆ ಹಾಕಿದೇನೆ ಅಷ್ಟೆ. ನೀವೂ ಅದಕ್ಕೆ ಅರ್ಜಿಹಾಕಿರೋ ಸಮಾಚಾರ ತಿಳಿದದ್ದೇ ಈಗ. ಇರಲಿಬಿಡಿ. ನಿಮಗೆ ಅದು ಸಿಗುವುದಾದರೆ ನಾನು ಯಾಕೆ ಅಡ್ಡ ಬರಲಿ. ಇಂಟರ್‌ವ್ಯೂಗೆ ನಾನು ಹೋಗದೆ ಇದ್ದರೆ ಆಯಿತಲ್ಲ?’

ನನ್ನದು ತೀರಾ ಸಹಜವಾದ ಅನಿಸಿಕೆ. ನಾನಾಗಲೇ ಗಂಗೋತ್ರಿಯ ಸ್ನಾತಕೋತ್ತರ ಕೇಂದ್ರದಲ್ಲಿ ಪಾಠ ಹೇಳುವ ಅವಕಾಶವನ್ನು ಪಡೆದುಕೊಂಡಿದ್ದೆ. ಆದರೆ ನನ್ನ ಗೆಳೆಯ ಪ್ರಭುಶಂಕರ್‌ಗೆ ಈ ಅವಕಾಶವೂ ಇರಲಿಲ್ಲ. ಯಾಕೆಂದರೆ ಆಗ ಅವರಿದ್ದದ್ದು ಮಹಾರಾಜ ಕಾಲೇಜಿನಲ್ಲಿ-ಕೇವಲ ಡಿಗ್ರಿ ತರಗತಿಗಳಿಗೆ ಪಾಠ ಹೇಳುವ ಪರಿಸರದಲ್ಲಿ. ಒಂದು ವೇಳೆ ಹೈದರಾಬಾದ್‌ನ ವಿಶ್ವವಿದ್ಯಾಲಯದಲ್ಲಿ ಅವರು ರೀಡರ್ ಆದರೆ, ಅವರಿಗೂ ಸ್ನಾತಕೋತ್ತರ ತರಗತಿಗಳಿಗೆ ಪಾಠಹೇಳುವ ಅವಕಾಶ ದೊರೆಯುತ್ತದೆ. ಹಾಗೆ ದೊರೆಯುವುದಾದರೆ ಅದು ಅವರಿಗೇ ದೊರೆಯಲಿ. ಇದು ನನ್ನ ಅನ್ನಿಸಿಕೆ. ರೀಡರ್ ಪ್ರೊಫೆಸರ್ ಇತ್ಯಾದಿ ಹುದ್ದೆಗಳು ತುಂಬ ದೊಡ್ಡವೆಂದು, ಅವುಗಳಿಗಾಗಿ ಏನಾದರೂ ಮಾಡಿ ಹೊಡೆದಾಡಿ ಅವುಗಳನ್ನು ಗಿಟ್ಟಿಸಿಕೊಳ್ಳಬೇಕು ಎಂಬ ವಿಚಾರ ಯಾವತ್ತೂ ನನ್ನ ತಲೆಗೇ ಹೊಳೆದಿರಲಿಲ್ಲ.

ಜುಲೈ ತಿಂಗಳ ವೇಳೆಗೆ ನನಗೆ ಮತ್ತು ಪ್ರಭುಶಂಕರ್ ಇಬ್ಬರಿಗೂ ಹೈದರಾಬಾದಿನಿಂದ ಸಂದರ್ಶನಕ್ಕೆ ಕರೆಬಂತು. ನಾನು ನನ್ನ ಗೆಳೆಯರಿಗೆ ಮಾತುಕೊಟ್ಟಂತೆ ಸಂದರ್ಶನಕ್ಕೆ ಹೋಗದಿರಲು ನಿರ್ಧರಿಸಿದೆ. ಅದರ ಬದಲು, ಸಂದರ್ಶನಕ್ಕೆ ಪ್ರಭುಶಂಕರ್ ಅವರು ಹೈದರಾಬಾದ್‌ಗೆ ಹೊರಡುವ ದಿನ ರೈಲ್ವೆ ನಿಲ್ದಾಣಕ್ಕೆ ಹೋಗಿ ಅವರಿಗೆ ನನ್ನ ಶುಭಾಶಯಗಳನ್ನು ಹೇಳಿ ಮನೆಗೆ ಬಂದೆ.

ಆದರೆ ಇದಾದ ಒಂದು ತಿಂಗಳ ವೇಳೆಗೆ, ಬಹುಶಃ ಆಗಸ್ಟ್ ಹದಿನೈದರ ಅನಂತರ, ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ರೀಡರ್ ಮತ್ತು ಮುಖ್ಯಸ್ಥನನ್ನಾಗಿ, ನನ್ನನ್ನು ನೇಮಿಸಿದ ಆಜ್ಞೆ ಬಂತು!

ಇದಕ್ಕೆ ಏನು ಹೇಳೋಣ? ಇದನ್ನೆ ವಿಚಿತ್ರ ಅಥವಾ ಯೋಗಾಯೋಗ ಅನ್ನುವುದು. ಹೈದರಾಬಾದ್ ಸಂದರ್ಶನಕ್ಕೆ ನನ್ನ ಶುಭಾಶಯಗಳನ್ನು ಹೊತ್ತು ಹೋದ ನನ್ನ ಗೆಳೆಯರು ಒಂದು ವಾರದ ನಂತರ ಮೈಸೂರಿಗೆ ಬಂದರು. ಸಂದರ್ಶನ ಹೇಗಾಯಿತು ಇತ್ಯಾದಿ ಕೇಳಿದೆ. ‘ಸಂದರ್ಶನ ಚೆನ್ನಾಗಿ ಆಯಿತು, ಬಹುಶಃ ಇಷ್ಟರಲ್ಲೆ ನನಗೆ (ಅಂದರೆ ಅವರಿಗೆ) ಆರ್ಡರ್ ಬಂದರೂ ಬರಬಹುದು’ ಎಂದರು ಪ್ರಭುಶಂಕರ್.

ಆದರೆ ಎರಡು ಮೂರು ದಿನಗಳಲ್ಲಿ, ಪ್ರೊ. ತೀ.ನಂ. ಶ್ರೀಕಂಠಯ್ಯನವರು ನಾನು, ತೀರಾ ತುರ್ತಾಗಿ ಅವರನ್ನು ಹೋಗಿ ನೋಡಬೇಕೆಂದು ಹೇಳಿ ಕಳುಹಿಸಿದರು. ಆ ವೇಳೆಗೆ ತೀ.ನಂ. ಶ್ರೀಕಂಠಯ್ಯನವರು ನಿವೃತ್ತರಾಗಿ ಜಯಲಕ್ಷಿ ಪುರಂದಲ್ಲಿ ಆಗ ತಾನೇ ಕಟ್ಟಿಸಿಕೊಂಡ ಹೊಸ ಮನೆಯಲ್ಲಿದ್ದರು. ಅವರ ಮನೆಗೆ ಹೋದೆ. ಹಸನ್ಮುಖರಾಗಿ ಬರಮಾಡಿಕೊಂಡರು. ಒಳಗಿನಿಂದ ಬಿಸಿ ಬಿಸಿ ಕಾಫಿ ಬಂತು. ‘ಏನು ಸಾರ್ ಹೇಳಿ ಕಳುಹಿಸಿದಿರಂತೆ’ ಎಂದೆ. ‘ಇದೆಯಪ್ಪ ಇದೆ, ಒಂದು ಒಳ್ಳೆಯ ಸಮಾಚಾರವೇ ಇದೆ, ಕೇಳಿ. ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನಿಮ್ಮನ್ನು ರೀಡರ್ ಆಗಿ ಆಯ್ಕೆ ಮಾಡಿದ್ದಾರೆ. ನೀವು ಹೋಗಬೇಕಾಗುತ್ತೆ. ಏನಂತೀರಿ?’ಎಂದು ಮುಗುಳ್ನಕ್ಕರು.

“ಇದೇನು ಸಾರ್, ನಾನು ಇಂಟರ್‌ವ್ಯೂಗೇ ಬಂದಿರಲಿಲ್ಲ. ಹೀಗಿರೋವಾಗ ನನ್ನನ್ನ…”

“ಹಾ. ಅದೇ ನೋಡಿ ಸ್ವಾರಸ್ಯ. ನೀವು ಬಂದಿರಲಿಲ್ಲ. ಬಂದಿದ್ದರೆ ಚೆನ್ನಾಗಿತ್ತು. ಆದರೂ ಆಯ್ಕೆಯಾಗಿದ್ದೀರಿ.”

“ನಾನು ಬರಲಿಲ್ಲ ಸಾರ್. ಅರ್ಜಿಹಾಕಿದ್ದೇನೋ ನಿಜ. ನನ್ನ ಸ್ನೇಹಿತರಾದ ಪ್ರಭುಶಂಕರರಿಗಾಗಿ ನಾನು ಹಿಂದೆ ನಿಂತೆ. ನಾವಿಬ್ಬರೂ ಬಹುಕಾಲದ ಸ್ನೇಹಿತರು. ಹೀಗಿರುವಾಗ ಒಂದೇ ಹುದ್ದೆಗೆ ನಾವಿಬ್ಬರೂ ಸ್ಪರ್ಧಿಸುವುದು ಯಾಕೆ, ಸಿಗುವುದಾದರೆ ಅದು ಅವರಿಗೇ ಸಿಗಲಿ ಅಂತ….”

“ಆಯಿತಲ್ಲ, ಅದು ಅವರಿಗೆ ಸಿಗಲಿಲ್ಲ….”

“ಸಾರ್ ಒಂದು ವೇಳೆ ನಾನು ಈಗಲೂ ಹೋಗದೆ ಇದ್ದರೆ ಅದು ಅವರಿಗೆ ಸಿಕ್ಕಬಹುದಾ….”

“ಇಲ್ಲಪ್ಪಾ ಇಲ್ಲ. ಹೋದರೆ ನೀವೇ ಹೋಗಬೇಕು. ನೀವು ಹೋಗದೆ ಇದ್ದರೆ ಮತ್ತೆ ಅದನ್ನು ಹೊಸದಾಗಿ ಜಾಹೀರಾತು ಕೊಡಬೇಕಾಗುತ್ತೆ. ಪರಿಸ್ಥಿತಿ ಹೀಗಿದ್ದದ್ದರಿಂದಲೇ, ಅಲ್ಲಿನ ವೈಸ್‌ಛಾನ್ಸಲರ್ ಅವರು, ನಿಮ್ಮನ್ನು ರೀಡರ್ ಹುದ್ದೆಗೆ ಯಾಕೆ ಆಹ್ವಾನಿಸಬಾರದು ಎಂದು ಯೋಚಿಸಿ, ನಿಮ್ಮನ್ನು ಒಪ್ಪಿಸುವ ಜವಾಬ್ದಾರಿ- ಯನ್ನು, ಸೆಲೆಕ್ಷನ್ ಕಮಿಟಿಯು ಸದಸ್ಯರಲ್ಲಿ ಒಬ್ಬನಾದ ನನಗೆ ವಹಿಸಿದ್ದಾರೆ. ಹೀಗಾಗಿ ಸಮಿತಿಯು ಎರಡು ವರ್ಷಗಳ ಕಾಲ ನಿಮ್ಮನ್ನು ಮೈಸೂರು ವಿಶ್ವವಿದ್ಯಾಲಯದಿಂದ ಡೆಪ್ಯುಟೇಷನ್ ಮೇಲೆ ಆಹ್ವಾನಿಸುವುದು ಅಂತ ತೀರ್ಮಾನ ಮಾಡಿದೆ. ಎರಡು ವರ್ಷತಾನೇ. ಒಂದಷ್ಟು ಅನುಭವ ದೊರೆತ ಹಾಗಾಯಿತು, ಎರಡು ವರ್ಷಗಳನಂತರ ಹಿಂದಕ್ಕೆ ಬಂದರಾಯಿತು.”

ನನಗೆ ಪರಿಸ್ಥಿತಿ ಅರ್ಥವಾಯಿತು. “ಸಾರ್ ಒಂದು ಮಾತು” ಅಂದೆ. “ಏನದು?”  ಎಂದರು. ತೀ.ನಂ.ಶ್ರೀ.

“ನೀವು ತಪ್ಪು ತಿಳಿಯಬಾರದು.ಈ ಬಗ್ಗೆ ನಾನು ಶ್ರೀ ಕುವೆಂಪು ಅವರನ್ನು ಒಂದು ಮಾತು ಕೇಳಬೇಕು” ಎಂದೆ.

ತೀ.ನಂ.ಶ್ರೀಯವರು ದೊಡ್ಡ ಮನುಷ್ಯರು. ಗಟ್ಟಿಯಾಗಿ ನಕ್ಕು “ಆಗಲಿ ಹಾಗೇ ಮಾಡಿ. ನಾಳೆ ಸಂಜೆ ಇದೇ ಹೊತ್ತಿಗೆ ಬಂದು ನಿಮ್ಮ ಅಭಿಪ್ರಾಯ ತಿಳಿಸಬೇಕು. ಯಾಕೆಂದರೆ ನಾನು ಈ ಬಗ್ಗೆ ಉಸ್ಮಾನಿಯಾ ವಿಶ್ವವಿದ್ಯಾಲಯದ ವೈಸ್‌ಛಾನ್ಸಲರಿಗೆ ಆದಷ್ಟು ಬೇಗ ಬರೆಯಬೇಕಿದೆ.” ಎಂದರು.

“ಆಗಲಿ ಸಾರ್” ಎಂದು ಹೊರಕ್ಕೆ ಬಂದೆ. ಕುವೆಂಪು ಅವರ ಮನೆಯ ಕಡೆ ಹೊರಟೆ. ಕುವೆಂಪು ಅವರ ಮನೆಯಿದ್ದ ಪಶ್ಚಿಮದಿಕ್ಕು ಉಜ್ವಲವಾಗಿತ್ತು. ಅವರಿನ್ನೂ ಸಂಜೆಯ ಸಂಚಾರಕ್ಕೆ ಹೊರಟಿರಲಿಲ್ಲ. ನಾನು ಅವರ ಮನೆ ತಲುಪಿದಾಗ, ವರಾಂಡದಲ್ಲಿ ಏನನ್ನೋ ಓದುತ್ತ ಕೂತಿದ್ದರು. ಒಳಗೆ ಹೋದೆ. ಧ್ಯಾನಸ್ಥರಂತಿದ್ದ ಅವರು ಎದುರಿನ ಕುರ್ಚಿಯನ್ನು ತೋರಿಸಿದರು. ಕೂತೆ.

ನಾನು ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಅರ್ಜಿ ಹಾಕಿದಂದಿನಿಂದ ಹಿಡಿದು, ಅದೇ ಸ್ವಲ್ಪ ಹೊತ್ತಿನ ಕೆಳಗೆ ತೀ.ನಂ.ಶ್ರೀ ಅವರನ್ನು ಭೆಟ್ಟಿಯಾದ ವರೆಗಿನ ಸಂಗತಿಯನ್ನೆಲ್ಲ ವಿವರವಾಗಿ ಹೇಳಿದೆ. “ಈ ಬಗ್ಗೆ ನೀವು ಹೇಗೆ ಹೇಳುತ್ತೀರಿ, ಹಾಗೆ ನಾನು ಮಾಡುತ್ತೇನೆ ಸಾರ್” ಎಂದೆ.

ನಾನು ಹೇಳಿದ್ದನ್ನೆಲ್ಲ ಕೇಳಿ ಕುವೆಂಪು ಗಂಭೀರ ವದನರಾದರು. ಒಂದೆರಡು ನಿಮಿಷ ಕಣ್ಣು ಮುಚ್ಚಿದರು. ಅವರ ಮನೆಯಂಗಳದ ತೋಟದ ಮರಗಳ ಮೇಲೆ ನಾಲ್ಕಾರು ಗುಬ್ಬಚ್ಚಿಗಳು ಕಿಚಿಪಿಚಿ ಸದ್ದು ಮಾಡುತ್ತಿದ್ದವು. ಈ ಮೌನದಿಂದ ಹೊರಬಂದು “ಶಿವರುದ್ರಪ್ಪ, ಹೈದರಾಬಾದಿಗೆ ಹೋಗಿ ಬನ್ನಿ; ಒಳ್ಳೆಯದಾಗುತ್ತದೆ.”

ನನ್ನ ತಳಮಳವೆಲ್ಲಾ ಶಾಂತವಾಯಿತು. ಮನೆಗೆ ಬಂದೆ. ಮರುದಿನ ತೀ.ನಂ.ಶ್ರೀ ಅವರಿಗೆ ನನ್ನ ತೀರ್ಮಾನವನ್ನು ತಿಳಿಸಿದೆ. ಅನಂತರ ನಡೆದ ಸಂಗತಿಯನ್ನೆಲ್ಲಾ ನನ್ನ ಗೆಳೆಯ ಪ್ರಭುಶಂಕರ್ ಅವರಿಗೆ ವರದಿ ಮಾಡಿದೆ. ಸಹಜವಾಗಿಯೇ ಅವರು ಸಂತೋಷಪಡುವ ಸ್ಥಿತಿಯಲ್ಲಿರಲಿಲ್ಲ.

ಆಗ ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದವರು ಸರ್ದಾರ್ ಕೆ.ಎಂ.ಪಣಿಕರ್ ಅವರು. ಆತ ಸಿಂಹದಂಥ ಮನುಷ್ಯ. ಅವರಿಗೆ, ಉಸ್ಮಾನಿಯಾ ವಿಶ್ವವಿದ್ಯಾಲಯದ ವೈಸ್‌ಛಾನ್ಸಲರ್, ಡಾ. ಡಿ. ಎಸ್. ರೆಡ್ಡಿಯವರು, ಪತ್ರ ಬರೆದು ನನ್ನನ್ನು ಇಲ್ಲಿಂದ ಅಲ್ಲಿಗೆ ಎರಡು ವರ್ಷಗಳ ಕಾಲ ಕನ್ನಡ ವಿಭಾಗದ ರೀಡರ್ ಮತ್ತು  ಮುಖ್ಯಸ್ಥನಾಗಿ ಡೆಪ್ಯುಟೇಷನ್ ಮೇಲೆ ಕಳುಹಿಸಿಕೊಡುವಂತೆ ಕೇಳಿಕೊಂಡರು. ಯಾವುದೇ ತೊಡಕಿಲ್ಲದೆ ಎಲ್ಲ ಸುಸೂತ್ರವಾಗಿ, ನನಗೆ ಉಸ್ಮಾನಿಯಾದಿಂದ ಕೆಲಸದ ಆರ್ಡರ್ ಬಂತು. ೧೯೬೩ ನೇ ಸೆಪ್ಟಂಬರ್‌ದಲ್ಲಿ ಕರ್ಮಧರ್ಮ ಸಂಯೋಗದಿಂದ ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ಹೋದೆ.

ಹೈದರಾಬಾದ್‌ನಲ್ಲಿ ನಾನು ಕಳೆದ ಎರಡು ವರ್ಷಗಳು ಸೊಗಸಾಗಿದ್ದವು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚೇನೂ ಇರದಿದ್ದರೂ, ನನ್ನ ಪಾಠಪ್ರವಚನ ಹಾಗೂ ಅಧ್ಯಯನಕ್ಕೆ ಏನೂ ತೊಂದರೆಯಾಗಲಿಲ್ಲ. ಜತೆಗಿದ್ದ ನಾಲ್ಕೈದು ಸಹೋದ್ಯೋಗಿಗಳ ಜತೆ ಹೊಂದಿಕೊಂಡು, ನಾವು ನಾವೇ ವಾರಕ್ಕೆ ಒಂದು ಸಲ ಏನಾದರೂ ವಿಷಯವನ್ನು ಕುರಿತು ಚರ್ಚಿಸುವುದು, ಪ್ರತಿ ಭಾನುವಾರ ಒಬ್ಬೊಬ್ಬರ ಮನೆಯಲ್ಲಿ ಸರದಿಯ ಪ್ರಕಾರ, ‘ಪಂಪ ಭಾರತ’ವನ್ನೋದಿ ಚರ್ಚಿಸುವುದು, ಪ್ರೊ. ಗೋಕಾಕರ ನೇತೃತ್ವದಲ್ಲಿ (ಆಗ ಪ್ರೊ. ಗೋಕಾಕರು ಇಂಡಿಯನ್ ಇನ್ಸ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಅಂಡ್ ಫಾರಿನ್ ಲಾಂಗ್ವೇಜಸ್‌ದ ನಿರ್ದೇಶಕರಾಗಿದ್ದರು-ಹೈದರಾಬಾದಿನಲ್ಲಿ) ಊರಿನ ‘ಸಾಹಿತ್ಯ ಮಂದಿರ’ದಲ್ಲಿ ಸೇರಿ ಕವನ ಓದುವುದೂ ಕೇಳುವುದೂ-ಹೀಗೆ ನಮ್ಮನ್ನು ನಾವು ಸಾಕಷ್ಟು ಕ್ರಿಯಾಶೀಲವಾಗಿ ಉಳಿಸಿಕೊಂಡಿದ್ದೆವು. ಆದರೆ, ಕನ್ನಡ ಜನ, ಕನ್ನಡ ಮಾತು, ಕನ್ನಡ ಪರಿಸರದಿಂದ ದೂರವಾದ ಭಾವನೆಯೊಂದು ಸದಾ ಕೊರೆಯುತ್ತಿತ್ತು. ಹೇಗೊ ಎರಡು ವರ್ಷ ಕಳೆದ ನಂತರ ಮತ್ತೆ ಕರ್ನಾಟಕಕ್ಕೆ ಹೋಗುತ್ತೇನಲ್ಲ ಎಂಬ ಆಸೆ, ಸಮಾಧಾನವನ್ನು ತುಂಬುತ್ತಿತ್ತು. ಹಾಗೆಯೇ ಈ ನಡುವೆ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯಲ್ಲಿ ಕರೆಯಲಾದ ರೀಡರ್, ಲೆಕ್ಚರರ್ ಹಾಗೂ ಪ್ರೊಫೆಸರ್ ಈ ಎಲ್ಲಾ ಹುದ್ದೆಗಳಿಗೂ ನಾನು ಅಲ್ಲಿಂದಲೇ ಅರ್ಜಿ ಸಲ್ಲಿಸಿದೆ. ಹಾಗೆ ಸಲ್ಲಿಸುವುದು ಯಾಕೆ ಅಗತ್ಯವಾಗಿತ್ತೆಂದರೆ, ನಾನು ಮಾನಸಗಂಗೋತ್ರಿಯಲ್ಲಿದ್ದಾಗ ಯು.ಜಿ.ಸಿ. ಶ್ರೇಣಿಯಲ್ಲಿ ಕೇವಲ ತಾತ್ಕಾಲಿಕ ಉಪನ್ಯಾಸಕನಾಗಿದ್ದೆ. ನಾನು ಹಿಂದಕ್ಕೆ ಮೈಸೂರಿಗೆ ಬರುವುದಾದರೆ, ಗಂಗೋತ್ರಿಯಲ್ಲಿ ಕರೆಯಲಾದ ಹುದ್ದೆಗಳಿಗೆ ಅರ್ಜಿ ಹಾಕಲೇ ಬೇಕಾಗಿತ್ತು. ಹಾಗೆ ಹಾಕದೆ ಹೋದರೆ, ಅವೆಲ್ಲಾ ಬೇರೆಯವರ ಪಾಲಿಗೆ ಹೋಗಿ, ನನ್ನ ಎರಡು ವರ್ಷದ ಅವಧಿ ಮುಗಿದ ನಂತರ, ಕೇವಲ ಪದವೀ ತರಗತಿಗಳನ್ನುಳ್ಳ, ಮಹಾರಾಜಾ ಕಾಲೇಜಿನ ಉಪನ್ಯಾಸಕ ಸ್ಥಾನಕ್ಕೆ ಹಿಂದಿರುಗಬೇಕಾಗಿತ್ತು.

ಹೀಗೆ ಅರ್ಜಿ ಹಾಕಿದ, ಈ ಎರಡು ವರ್ಷಗಳ ಅವಧಿಯಲ್ಲಿ ನಾನು ಮೈಸೂರಿಗೆ ಎರಡು ಸಲ ಇಂಟರ್‌ವ್ಯೂಗೆ ಬಂದು ಹೋದೆ. ಈ ಕಾಲದಲ್ಲಿ ಕುಲಪತಿ ಸರ್ದಾರ್ ಪಣಿಕ್ಕರ್ ಹಠಾತ್ತನೆ ನಿಧನರಾಗಿ, ವಿಧಾನಸೌಧದಿಂದ ಐ.ಎ.ಎಸ್. ಅಧಿಕಾರಿಯೊಬ್ಬರು ಕುಲಪತಿಗಳಾಗಿ ಕೆಲವು ಕಾಲ ಮೈಸೂರು ವಿಶ್ವವಿದ್ಯಾಲಯದಲ್ಲಿದ್ದರೆಂದು ನನಗೆ ನೆನಪು. ಪ್ರೊ. ದೇ. ಜವರೇಗೌಡರು ಆಗ ಕನ್ನಡ ವಿಭಾಗದ ಮುಖ್ಯಸ್ಥರು. ಎರಡು ಸಲವೂ, ಇಂಟರ್‌ವ್ಯೂಗೆ ನಾನು ಮೈಸೂರಿಗೆ ಬಂದಾಗ, ವಿಭಾಗದ ಮುಖ್ಯಸ್ಥರು ಹಾಗೂ ಆಯ್ಕೆ ಸಮಿತಿಯ ಪರಿಣಿತರ ಅಭಿಪ್ರಾಯ ಒಂದೇ ಆಗಿತ್ತು. ಅದೆಂದರೆ, ನಾನು ಮತ್ತೆ ಮೈಸೂರು ವಿಶ್ವವಿದ್ಯಾಲಯಕ್ಕೆ ಬಾರದಂತೆ ತಡೆದು, ನನ್ನನ್ನು ಹೈದರಾಬಾದ್‌ನಲ್ಲೇ ಉಳಿಯುವಂತೆ ಮಾಡುವುದು. ಪ್ರತಿಸಲದ ಸಂದರ್ಶನದಲ್ಲೂ ನಾನು ಸಮಿತಿಗೆ ಹೇಳಿದೆ. ‘ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ ನಾನಾಗಿಯೇ ಹೋಗಿಲ್ಲ. ಮೈಸೂರು ವಿಶ್ವವಿದ್ಯಾಲಯವೇ ನನ್ನನ್ನು ಕಳುಹಿಸಿಕೊಟ್ಟಿದೆ-ಅದೂ ಎರಡು ವರ್ಷಗಳ ಡೆಪ್ಯುಟೇಷನ್ ಮೇಲೆ. ಆದಕಾರಣ ಎರಡು ವರ್ಷಗಳ ನಂತರ ಅಥವಾ ಅಷ್ಟರೊಳಗೆ ನನ್ನ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರಕ್ಕೆ ನನ್ನನ್ನು ಸ್ಥಳ ತೋರಿಸಿ ಕರೆದುಕೊಳ್ಳಬೇಕು. ಅದಕ್ಕಾಗಿ ನಾನು ಅರ್ಜಿಹಾಕಿದ್ದೇನೆ. ಹೈದರಾಬಾದ್‌ನಲ್ಲೂ ನಾನು ಖಾಯಂ ಆಗಿ ಇರಲು ಸಾಧ್ಯವಿಲ್ಲ.’ ಆದರೆ ಸಂದರ್ಶನ ಸಮಿತಿ ನನ್ನ ಮಾತನ್ನು ಗಣನೆಗೆ ತೆಗೆದುಕೊಳ್ಳಲೇ ಇಲ್ಲ. ಮೊದಲಸಲ ನಿರಾಶನಾದೆ. ಎರಡನೆ ಸಲ ನಾನು ರೀಡರ್ ಹುದ್ದೆಗೆ ಅರ್ಜಿ ಹಾಕಿದಾಗ, ನಾನು ಮತ್ತೊಬ್ಬರು, ಇಬ್ಬರೇ ಪ್ರಬಲ ಸ್ಪರ್ಧಿಗಳು. ಆಗ ನನಗೆ ಡಾಕ್ಟರೇಟ್ ಇತ್ತು. ಆ ಇನ್ನೊಬ್ಬರಿಗೆ ಇರಲಿಲ್ಲ. ಸರಿ, ಕೇವಲ ಒಂದೇ ವಾರದಲ್ಲಿ, ಇಂಟರ್‌ವ್ಯೂ ಒಂದೇ ವಾರ ಇದೆ ಅನ್ನುವಷ್ಟರಲ್ಲಿ ಆ ‘ಇನ್ನೊಬ್ಬರಿಗೆ’ ಅಂದಿನ ಕನ್ನಡ ವಿಭಾಗದ ಮುಖ್ಯಸ್ಥರು ‘ಡಿ.ಲಿಟ್’ ಪದವಿ ದೊರೆಯುವಂತೆ ನೋಡಿಕೊಂಡರು. ಆದ್ದರಿಂದ ಆ ‘ಇನ್ನೊಬ್ಬರ’ ಆಯ್ಕೆ ತೀರಾ ಸಲೀಸಾಯಿತು.

ನನ್ನ ಡೆಪ್ಯುಟೇಶನ್ ಅವಧಿ ಮುಗಿಯಲು ಇನ್ನು ಕೇವಲ ಆರು ತಿಂಗಳು ಮಾತ್ರ ಇತ್ತು. ಈಗಾಗಲೆ ನಡೆದ ಇಂಟರ್‌ವ್ಯೂಗಳ ಹಿನ್ನೆಲೆಯಲ್ಲಿ ನನಗೆ ತೆರೆದ ದಾರಿ ಎರಡೇ: ನನ್ನ ಅವಧಿ ಮುಗಿದ ಕೂಡಲೇ ನಾನು, ಗಂಗೋತ್ರಿಯ ಎಲ್ಲ ಹುದ್ದೆಗಳೂ ಭರ್ತಿಯಾದ್ದರಿಂದ, ಹಾಗೆ ಅಲ್ಲಿ ನೇಮಕವಾದ ಎಲ್ಲರಿಗಿಂತಲೂ ‘ಜೂನಿಯರ್’ ಆಗಿ ಮಹಾರಾಜಾ ಕಾಲೇಜಿಗೆ, ಲೆಕ್ಚರರ್‌ಆಗಿ ಹಿಂದಿರುಗುವುದು; ಎರಡು, ಏನಾದರೂ ಮಾಡಿ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ, ಅಲ್ಲಿನ ಕುಲಪತಿಗಳ ಕೃಪೆಯಿಂದ ಇರುವ ಹುದ್ದೆಯಲ್ಲೇ ನನ್ನನ್ನು ಮುಂದುವರಿಸುವಂತೆ ಅವರನ್ನು ಅಂಗಲಾಚುವುದು. ಈ ಎರಡನೆಯದಕ್ಕೆ ನಾನು ಸಿದ್ಧನಿರಲಿಲ್ಲ. ಆದದ್ದಾಗಲಿ, ಎದುರಿಸೋಣ ಅಂದುಕೊಂಡೆ.

ಈ ನಡುವೆ, ಮೈಸೂರಿನ ಮಹಾರಾಜಾ ಹಾಗೂ ಯುವರಾಜಾ ಕಾಲೇಜುಗಳಲ್ಲಿ ಕನ್ನಡ ರೀಡರ್‌ಗಳ ಹುದ್ದೆಗೆ ಕರೆದಿದ್ದಾರೆಂದೂ, ನೀವು  ಯಾಕೆ ಅರ್ಜಿ ಹಾಕಬಾರದೆಂದೂ, ಮಾನಸಗಂಗೋತ್ರಿಯಲ್ಲಿ ಆ ವೇಳೆಗೆ ಖಾಯಂ ಅಧ್ಯಾಪಕರಾಗಿ ನೇಮಕಗೊಂಡಿದ್ದ ಡಾ. ಚಿದಾನಂದ ಮೂರ್ತಿಯವರು ನನಗೆ ಕಾಗದ ಬರೆದರು. ಆಗಲೇ ಎರಡು ಸಲ ಮೈಸೂರು ವಿಶ್ವವಿದ್ಯಾಲಯದ ಸಂದರ್ಶನ ಸಮಿತಿಯ ಮುಂದೆ ಬಂದು ಹೋಗಿದ್ದ ನಾನು, ಮತ್ತೆ ಮೈಸೂರು ವಿಶ್ವವಿದ್ಯಾಲಯದ ಯಾವ ಹುದ್ದೆಗೂ ಅರ್ಜಿ ಹಾಕಬಾರದೆಂದು ನಿರ್ಧರಿಸಿದ್ದೆ, ನನ್ನ ಈ ನಿರ್ಧಾರವನ್ನು ಡಾ.ಮೂರ್ತಿಯವರಿಗೆ ಬರೆದು ತಿಳಿಸಿದೆ.

ಯಾವ ರೀಡರ್ ಹುದ್ದೆಗಳಿಗೆ ನಾನು ಅರ್ಜಿ ಹಾಕಬಾರದೆಂದು ನಿರ್ಧರಿಸಿದ್ದೆನೋ ಅದೇ ರೀಡರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಶನ ಸಮಿತಿಯ ಸದಸ್ಯನಾಗಿ ಬರಬೇಕೆಂದು ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅವರಿಂದ  ಪತ್ರ ಬಂದಿತು. ನಾನು ಒಪ್ಪಿಕೊಂಡೆ.

ಆದರೆ ಈ ಸಂದರ್ಶನ ಸಮಿತಿ ಎಂದೂ ಸೇರಲಿಲ್ಲ. ಯಾಕೆಂದರೆ ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅವರು ತಮಗೆ ತಿಳಿಯದೆ ಒಂದು ತಪ್ಪು ಮಾಡಿದ್ದರು. ಅದೇನೆಂದರೆ ಇಂಥ ಸಂದರ್ಶಕ ಸಮಿತಿಯ ಸದಸ್ಯರಾಗುವವರು, ಯಾವ ರೀತಿಯಿಂದಲೂ ಆ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದವರಾಗಿರಬಾರದು. ಇದು ನಿಯಮ. ಆದರೆ ನಾನು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿದ್ದರೂ, ನನ್ನ ಸಂಬಂಧ  (Iien) ಇನ್ನೂ ಮೈಸೂರು ವಿಶ್ವವಿದ್ಯಾಲಯದಲ್ಲೇ ಇದ್ದ ಕಾರಣ, ಈ ಸಂದರ್ಶನ ಸಮಿತಿಯಲ್ಲಿ ನಾನು ಸದಸ್ಯನಾಗಿರುವುದು ಅಕ್ರಮವಾಗುತ್ತದೆ. ಈ ವಿಷಯ ನನಗೆ ತಿಳಿದಿರಲಿಲ್ಲವಾದರೂ, ಸಂದರ್ಶನ ಸಮಿತಿಗೆ ನನ್ನ ಹೆಸರನ್ನು ಸೇರಿಸಿದ ರಿಜಿಸ್ಟ್ರಾರ್ ಅವರಿಗೆ ಹಾಗೂ ಅದೇ ತಾನೆ ಕುಲಪತಿಯಾಗಿ ಮೈಸೂರು ವಿಶ್ವವಿದ್ಯಾಲಯಕ್ಕೆ ಬಂದಿದ್ದ ಶ್ರೀಮಾಲಿಯವರಿಗೆ ತಿಳಿದಿರಬೇಕಾಗಿತ್ತು. ಆದರೆ ಅದು ಹೇಗೋ ಕಣ್ಣುತಪ್ಪಿ ಪ್ರಮಾದ ಸಂಭವಿಸಿತ್ತು. ಇದು ತಾಂತ್ರಿಕವಾಗಿ ತಪ್ಪಾಯಿತೆಂದು ಅವರಿಗೆ ಗೊತ್ತಾಗಲು ತಡವೇನೂ ಆಗಲಿಲ್ಲ. ಆದರೆ, ಈಗೇನು ಮಾಡುವುದು? ನನ್ನನ್ನು ಆಹ್ವಾನಿಸಿ ಆಗಿದೆ; ಈಗ ಮತ್ತೆ ಬರಬೇಡಿ ಎಂದು ನನಗೆ ಹೇಗೆ ತಿಳಿಸುವುದು? ಈ ಉಭಯ ಸಂಕಟದಿಂದ ಪಾರಾಗಲು, ಅಂದಿನ ರಿಜಿಸ್ಟ್ರಾರ್ ಅವರು ನನ್ನ ಸ್ನೇಹಿತರಾದ ಪ್ರಭುಶಂಕರ್ ಅವರನ್ನು ಮೊರೆಹೋಗಬೇಕಾಯಿತೆಂದು ಕಾಣುತ್ತದೆ. ಕೂಡಲೇ ಪ್ರಭುಶಂಕರ್ ಈ ಸಂದರ್ಭವನ್ನೂ, ಕುಲಸಚಿವರಿಗೆ ಒದಗಿದ ಸಂದಿಗ್ಧಯನ್ನೂ ವಿವರಿಸಿ ಹೈದರಾ- ಬಾದಿನಲ್ಲಿದ್ದ ನನಗೆ ಕಾಗದ ಬರೆದರು. ನಾನು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಸಂದರ್ಶನ ಸಮಿತಿಯಲ್ಲಿರಲು ನಾನು ಕೊಟ್ಟ ಒಪ್ಪಿಗೆಯನ್ನು  ಕಾರಣಾಂತರದಿಂದ ಹಿಂದಕ್ಕೆ ತೆಗೆದುಕೊಂಡಿದ್ದೇನೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಿಗೆ ಕಾಗದ ಬರೆದೆ. ಈ ಎಲ್ಲ ತಕರಾರುಗಳಿಂದ, ಜುಲೈ ತಿಂಗಳಲ್ಲಿ ನಡೆಯಬೇಕಾಗಿದ್ದ ಸಂದರ್ಶನ ಮುಂದಕ್ಕೆ ಹೋಯಿತು.

ಉಸ್ಮಾನಿಯಾದಲ್ಲಿ ನನಗೆ ಉಳಿದ ಅವಧಿ ಎರಡು ತಿಂಗಳು ಮಾತ್ರ. ಇಲ್ಲಿನವರೇನಾದರೂ ತಾವಾಗಿಯೇ ಇರಿಸಿಕೊಂಡರೆ ಇರುವುದು ಇಲ್ಲವಾದರೆ ಮೈಸೂರಿನ ಮಹಾರಾಜಾ ಕಾಲೇಜಿಗೆ ಹಿಂದಿರುಗುವುದು ಎಂದು ನಿರ್ಧರಿಸಿದೆ. ಆದರೂ, ಹೊಸದಾಗಿ ಮೈಸೂರು ವಿಶ್ವವಿದ್ಯಾಲಯಕ್ಕೆ ಕುಲಪತಿಯಾಗಿ ಬಂದಿರುವ ಶ್ರೀ ಮಾಲಿಯವರಿಗೆ ಯಾಕೆ ಒಂದು ಪತ್ರ ಬರೆಯಬಾರದು ಅನ್ನಿಸಿತು. ಕೂಡಲೇ ಸಾಕಷ್ಟು ವಿವರವಾದ ಒಂದು ಪತ್ರವನ್ನು ಸಿದ್ಧಪಡಿಸಿದೆ. ನಾನು ಸಂದರ್ಶನಕ್ಕೆ ಬಾರದೆ ಹೋದರೂ ಉಸ್ಮಾನಿಯಾ ವಿಶ್ವವಿದ್ಯಾಲಯವು ನನ್ನನ್ನು  ರೀಡರ್ ಹಾಗೂ ವಿಭಾಗದ ಮುಖ್ಯಸ್ಥನನ್ನಾಗಿ ಆಯ್ಕೆ ಮಾಡಿ, ಆಹ್ವಾನಿಸಿದ ರೀತಿಯನ್ನೂ, ನನ್ನದೇ ಆದ ಮೈಸೂರು ವಿಶ್ವವಿದ್ಯಾಲಯವು ನಾನು ಎರಡು ಬಾರಿ ಸಂದರ್ಶಕ ಸಮಿತಿಯ ಮುಂದೆ ಹಾಜರಾದರೂ ನನ್ನನ್ನು ರೀಡರ್ ಹುದ್ದೆಗೆ ಇರಲಿ, ಸ್ನಾತಕೋತ್ತರ ವಿಭಾಗದ ಲೆಕ್ಟರರ್ ಹುದ್ದೆಗೂ ಪರಿಗಣಿಸದೆ ಹೋದ ರೀತಿಯನ್ನೂ, ಮೈಸೂರು ವಿಶ್ವವಿದ್ಯಾಲಯವೇ ಹೈದರಾಬಾದ್‌ಗೆ ನಿಯೋಗದ ಮೇಲೆ ನನ್ನನ್ನು ಕಳುಹಿಸಿರುವುದರಿಂದ, ಮತ್ತೆ ನನ್ನನ್ನು ನಿಯೋಗದ ಅವಧಿ ಮುಗಿದ ಮೇಲೆ ಹಿಂದಕ್ಕೆ ಕರೆಯಿಸಿಕೊಳ್ಳಬೇಕಾದದ್ದು ಮೈಸೂರು ವಿಶ್ವವಿದ್ಯಾಲಯದ ಜವಾಬ್ದಾರಿ ಎಂದೂ, ಸೃಜನಾತ್ಮಕ ಬರಹಗಾರನಾದ ನಾನು, ನನ್ನದಲ್ಲದ ಬೇರೊಂದು ಭಾಷಾಪರಿಸರದಲ್ಲಿರುವುದಕ್ಕಿಂತ ನನ್ನ ಭಾಷೆಯ ಪರಿಸರಕ್ಕೆ ಬರುವುದು ಅಗತ್ಯವೆಂದೂ, ಈ ಕಾರಣಗಳಿಂದ ದಯಮಾಡಿ ನನ್ನನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ತಾವು ಕರೆಯಿಸಿಕೊಳ್ಳಬೇಕೆಂದೂ ಶ್ರೀ ಮಾಲಿಯವರಿಗೆ ಒಂದು ವೈಯಕ್ತಿಕವಾದ ಪತ್ರವನ್ನು ಬರೆದೆ. ಜತೆಗೆ ಆ ಪತ್ರದಲ್ಲಿ ‘ಅಶೈಕ್ಷಣಿಕ ರಾಜಕೀಯ ಪ್ರವೃತ್ತಿಗಳು ನನ್ನನ್ನು ಮೈಸೂರು ವಿಶ್ವವಿದ್ಯಾಲಯದಿಂದಲೇ ದೂರ ಇಡಲು ಪ್ರಯತ್ನಿಸುವಂತೆ ಕಾಣುತ್ತದೆ’ ಎಂಬ ಒಂದು  ವಾಕ್ಯವನ್ನೂ ಸೇರಿಸಿದ್ದೆ.

ಇದಾದ ಒಂದು ತಿಂಗಳ ನಂತರ, ಅಂದರೆ ಹೈದರಾಬಾದ್‌ನಲ್ಲಿ ನನ್ನ ಅವಧಿ  ಮುಗಿಯಲು ಕೇವಲ ಎರಡು ವಾರಗಳಿವೆ ಅನ್ನುವ  ಹೊತ್ತಿಗೆ, ಮೈಸೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅವರಿಂದ ನನ್ನನ್ನು ಮೈಸೂರು ಮಹಾರಾಜಾ ಕಾಲೇಜಿಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥನನ್ನಾಗಿ ನೇಮಿಸಿದ ಆರ್ಡರ್ ಬಂದು ನನ್ನನ್ನು ಚಕಿತಗೊಳಿಸಿತು. ಹೈದರಾಬಾದ್‌ನಲ್ಲಿ ನಾನು ರೀಡರ್ ಆಗಿ ಪಡೆಯುತ್ತಿದ್ದ ಸಂಬಳವನ್ನೇ ಸಂರಕ್ಷಿಸಿ ನನ್ನನ್ನು ಮಹಾರಾಜಾ ಕಾಲೇಜಿಗೆ ನೇಮಿಸಲಾಗಿತ್ತು. ದೊಡ್ಡ ಆತಂಕವೊಂದು ಅನಾಯಾಸವಾಗಿ ಪರಿಹಾರವಾಗಿ ನಾನು ಮೈಸೂರಿನ ಮಹಾರಾಜಾ ಕಾಲೇಜಿಗೆ ೧೯೬೫ರ ಸೆಪ್ಟೆಂಬರ್ ತಿಂಗಳು ಬಂದು ಸೇರಿಕೊಂಡೆ. ಸ್ನಾತಕೋತ್ತರ ತರಗತಿಗಳಿಗೆ ಪಾಠ ಹೇಳುವ ಅವಕಾಶವಿರಲಿಲ್ಲವೆಂಬ ತೀರಾ ಸಣ್ಣ ಕೊರಗೊಂದನ್ನು ಬಿಟ್ಟರೆ, ನನ್ನ ಎಂದಿನ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ.

ಕೆಲಸಕ್ಕೆ ರಿಪೋರ್ಟು ಮಾಡಿಕೊಂಡ ಒಡನೆ ಮಹಾರಾಜಾ ಕಾಲೇಜಿನ ನಾಲ್ಕನೆಯ ನಂಬರಿನ ಕೊಠಡಿಯನ್ನು ಪ್ರವೇಶಿಸಿ ಕೊತೆ. ಈ ಕೊಠಡಿ ನನಗೆ ಹಾಗೂ ನನ್ನಂಥ ಅನೇಕರಿಗೆ ಅಮೂಲ್ಯವಾದ ನೆನಪುಗಳನ್ನು ಉಕ್ಕಿಸುವ ಬಹು ಗೌರವಾಸ್ಪದವಾದ ಕೊಠಡಿ. ಪ್ರೊ. ಟಿ.ಎಸ್. ವೆಂಕಣ್ಣಯ್ಯ, ಎ.ಆರ್.ಕೃಷ್ಣಶಾಸ್ತ್ರಿ, ಕುವೆಂಪು, ತೀ.ನಂ.ಶ್ರೀಕಂಠಯ್ಯ, ಡಿ.ಎಲ್. ನರಸಿಂಹಾಚಾರ್, ಇಂತಹ ಪ್ರಾತಃಸ್ಮರಣೀ- ರಾದವರು, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಅಲಂಕರಿಸಿದ ಕೊಠಡಿ. ನಾನು ಬಿ.ಎ. ಆನರ‍್ಸ್ ಮತ್ತು ಎಂ. ಎ. ವಿದ್ಯಾರ್ಥಿಯಾಗಿ ಕುಳಿತು ಶ್ರೀ ಕುವೆಂಪು ಅವರ ಪಾಠವನ್ನು ಕೇಳಿದ ಕೊಠಡಿ  ಅದು. ನನಗೂ ಈ ಕೊಠಡಿಯಲ್ಲಿ ವಿಭಾಗದ ಮುಖ್ಯಸ್ಥನಾಗಿ ಸ್ವಲ್ಪ ಕಾಲ ಕೂರುವ ಭಾಗ್ಯ ಅನಿರೀಕ್ಷಿತವಾಗಿ ಪ್ರಾಪ್ತವಾಗಿತ್ತು.

ಕೆಲಸಕ್ಕೆ ಅರ್ಜಿಯನ್ನೂ ಹಾಕದೆ, ಸಂದರ್ಶಕ ಸಮಿತಿಯ ಮುಂದೆಯೂ ನಿಲ್ಲದೆ ಅದು ಹೇಗೆ ನಾನು ಹೈದರಾಬಾದ್‌ನಿಂದ ಹಿಂದಕ್ಕೆ ಬಂದು, ಈ ಹುದ್ದೆಗೆ ನೇಮಕ- ವಾದೆ-ಎಂಬುದರ ಹಿನ್ನೆಲೆ ಆಮೇಲೆ ನನಗೆ ತಿಳಿಯಿತು. ಮಹಾರಾಜಾ ಹಾಗೂ ಯುವರಾಜಾ ಕಾಲೇಜುಗಳಿಗೆ ರೀಡರ್‌ಗಳನ್ನು ಆಯ್ಕೆ ಮಾಡುವ ಹೊಸ ಸಮಿತಿಯೊಂದು ಸೇರಿತ್ತು. ನಿಯಾಮಾನುಸಾರ ಅರ್ಜಿ ಹಾಕಿದವರು ಈ ಸಂದರ್ಶನ ಸಮಿತಿಯ ಮುಂದೆ ಹಾಜರಾದರು. ಇಂಟರ್‌ವ್ಯೂ ಸಲೀಸಾಗಿ ಮುಗಿಯಿತಂತೆ. ಎಲ್ಲ ಆದಮೇಲೆ, ಹಠಾತ್ತನೆ ಅಂದಿನ ಕುಲಪತಿಗಳಾದ ಶ್ರೀಮಾಲಿಯವರು, ನಾನು ಅವರಿಗೆ ಹೈದರಾಬಾದಿನಿಂದ ಕೆಲವು ದಿನಗಳ ಹಿಂದೆ ಬರೆದಿದ್ದ  ಪತ್ರವನ್ನು ಸಂದರ್ಶನ ಸಮಿತಿಯ ಮುಂದೆ ಇರಿಸಿ, ಅದನ್ನೇ ನನ್ನ ಅರ್ಜಿ ಎಂದು ಪರಿಗಣಿಸಬೇಕೆಂದು ಸಮಿತಿಗೆ ಸೂಚಿಸಿದರಂತೆ. ಆದರೆ ಸಂದರ್ಶನ ಸಮಿತಿಯ ಪರಿಣಿತರೂ, ಮತ್ತು ಕನ್ನಡ ವಿಭಾಗದ ಮುಖ್ಯಸ್ಥರೂ ಕೆಲವು ತಾಂತ್ರಿಕ ಹಾಗೂ ಮತ್ತಿತರ ಆಕ್ಷೇಪಣೆಗಳನ್ನೂ ಮುಂದೊಡ್ಡಿ ಶಿವರುದ್ರಪ್ಪನವರನ್ನು ಈ ರೀತಿ ನೇಮಿಸುವುದು ಅಕ್ರಮ ಎಂದು ವಾದಿಸಿದರಂತೆ. ಅವರ ಆಕ್ಷೇಪಣೆಯ ಮುಖ್ಯಾಂಶಗಳು ಎರಡು: ಒಂದು, ಅಭ್ಯರ್ಥಿಯು ಉಳಿದವರಂತೆ ನಿಗದಿತ ವೇಳೆಗೆ ಅರ್ಜಿ ಸಲ್ಲಿಸಿಲ್ಲ; ಎರಡನೆಯದು ಅಭ್ಯರ್ಥಿಯೇ ಸಂದರ್ಶಕ ಸಮಿತಿಯ ಮುಂದೆ ಬಂದಿಲ್ಲ. ಈ ಎರಡೂ ಆಕ್ಷೇಪಣೆಗಳನ್ನು ಶ್ರೀಮಾಲಿಯವರು ನಿರ್ದಾಕ್ಷಿಣ್ಯವಾಗಿ ತಳ್ಳಿ ಹಾಕಿ, ನಾನು ಅವರಿಗೆ ಬರೆದ ಪತ್ರವನ್ನೇ ಅರ್ಜಿ ಎಂದು ಪರಿಗಣಿಸಿ, ನನ್ನನ್ನು ಮಹಾರಾಜಾ ಕಾಲೇಜಿಗೆ ರೀಡರ್ ಆಗಿ ನೇಮಿಸುವುದರಲ್ಲಿ ಯಶಸ್ವಿಯಾದರು.

ಇದೂ ಒಂದು ಆಶ್ಚರ್ಯ. ದೂರದ ಹೈದರಾಬಾದಿನಲ್ಲಿದ್ದ ನಾನು ಶ್ರೀಮಾಲಿ ಯವರನ್ನು ನೋಡಿಯೇ ಇರಲಿಲ್ಲ; ಅವರಿಗೆ ನಾನು ಪತ್ರ ಬರೆದದ್ದೆಷ್ಟೋ ಅಷ್ಟೇ. ಅದರ ಆಧಾರದ ಮೇಲೇ ಅವರು, ನನಗೆ ಸಲ್ಲಬೇಕಾದ ನ್ಯಾಯವನ್ನು ಸಲ್ಲಿಸಿದ್ದರು. ಇವತ್ತಿನ ದಿವಸ ಇಂಥ ಘಟನೆಗಳನ್ನು ನಿರೀಕ್ಷಿಸುವುದೇ ಸಾಧ್ಯವಿಲ್ಲ. ಮೌಲ್ಯಪ್ರಜ್ಞೆಯುಳ್ಳ ಮತ್ತು ಧೈರ್ಯಶಾಲಿಗಳಾದ ವ್ಯಕ್ತಿಗಳು ನಮ್ಮ ವಿಶ್ವವಿದ್ಯಾಲಯಗಳ ಕುಲಪತಿಗಳಾದಾಗ ಮಾತ್ರ ಇಂಥ ಆಶ್ಚರ್ಯಗಳನ್ನು ನಿರೀಕ್ಷಿಸಬಹುದು. ನಾನು ಮೈಸೂರಿಗೆ ಬಂದು ಕೆಲಸಕ್ಕೆ ಸೇರಿದ ನಂತರ, ಶ್ರೀಮಾಲಿಯವರನ್ನು ಕಂಡು ಕೃತಜ್ಞತೆಗಳನ್ನು ಹೇಳಲು ಮರೆಯಲಿಲ್ಲ.

ನಾನು ಸೆಪ್ಟೆಂಬರ್ ೧೯೬೫ರಿಂದ, ಮುಂದಿನ ಸೆಪ್ಟೆಂಬರ್ ೧೯೬೬ರ ವರೆಗೆ ಮಾತ್ರ ಮಹಾರಾಜಾ ಕಾಲೇಜಿನಲ್ಲಿದ್ದದ್ದು . ಆ ನಡುವಣ ಕಾಲದಲ್ಲಿ, ೧೯೬೪ ರಲ್ಲಿ ಪ್ರಾರಂಭವಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ರೀಡರ್ ಹುದ್ದೆಗೆ ಅರ್ಜಿಗಳನ್ನು ಕರೆಯಲಾಗಿತ್ತು. ನಾನು ಅರ್ಜಿ ಹಾಕಿದೆ. ೧೯೬೬ರ ಸೆಪ್ಟೆಂಬರ್ ಒಂಬತ್ತನೆ ತಾರೀಖು ಬೆಂಗಳೂರು ವಿಶ್ವವಿದ್ಯಾಲಯವನ್ನು ರೀಡರ್ ಆಗಿ ಪ್ರವೇಶಿಸಿ, ಇಲ್ಲಿಯೇ  ನನ್ನ ನೆಲೆಯನ್ನು ನಾನು ಕಂಡುಕೊಂಡೆ. ಆದರೆ ನಾನು ಇಲ್ಲಿಗೆ ಬರುವುದೂ ಸುಲಭವಾಗಿರಲಿಲ್ಲ. ಹಾಗೆ ಅದು ಸಾಧ್ಯವಾದದ್ದು ಆಗ ಇಲ್ಲಿ ರಿಜಿಸ್ಟ್ರಾರ್ ಆಗಿದ್ದ ಶ್ರೀ ಪಿ. ಮಲ್ಲಿಕಾರ್ಜುನಪ್ಪನವರ ಸಹಾಯ ಹಾಗೂ ಪ್ರಯತ್ನಗಳಿಂದ. ಈ ದಿನ ‘ಅಧಿಕಾರಿಕ’ವಾಗಿ ನಾನು ಏನೇನಾಗಿದ್ದೇನೋ, ಅದೆಲ್ಲದಕ್ಕೂ ಶ್ರೀ ಮಲ್ಲಿಕಾರ್ಜುನಪ್ಪ- ನವರೇ ಕಾರಣ. ಅವರನ್ನು ನಾನು ತುಂಬ ಪ್ರೀತಿ ಹಾಗೂ ಕೃತಜ್ಞತೆಗಳಿಂದ ನೆನಯುತ್ತೇನೆ.

ಬೆಂಗಳೂರು ವಿಶ್ವವಿದ್ಯಾಲಯದ ರೀಡರ್ ಹುದ್ದೆಗೆ (ಆಗ ರೀಡರ್ ಆದವರೇ ಮುಖ್ಯಸ್ಥರೂ ಕೂಡ) ನಾನು ಆಯ್ಕೆಯಾದ ಸಂದರ್ಶನದ ಸಂಗತಿ ಕೂಡ ಸ್ವಾರಸ್ಯವಾಗಿದೆ. ಸಂದರ್ಶನ ನಡೆದದ್ದು ಆಗಸ್ಟ್ ತಿಂಗಳ ಮಧ್ಯದ ಒಂದು ದಿನ. ಶ್ರೀಎ.ಎಸ್. ಜಯರಾಮನ್ ಅಂದಿನ ತಾತ್ಕಾಲಿಕ ಕುಲಪತಿಯಾಗಿದ್ದರು. ಪ್ರೊ. ಮಾಳವಾಡರೂ, ಪ್ರೊ. ಡಿ. ಕೆ. ಭೀಮಸೇನರಾಯರೂ ಸಂದರ್ಶಕ ಸಮಿತಿಯ ಪರಿಣತರು. ಅಂದು ಇಂಟರ್‌ವ್ಯೂಗೆ ಬಂದವರು ನನ್ನನ್ನೂ ಸೇರಿಸಿಕೊಂಡು ಏಳೆಂಟು ಜನ.

ಕರೆ ಬಂದಾಗ ಒಳಗೆ ಹೋದೆ. ನನ್ನ ಪ್ರವರಗಳನ್ನೆಲ್ಲ ಕೇಳಲಾಯಿತು. ನಾನು ಉಸ್ಮಾನಿಯಾ ವಿಶ್ವವಿದ್ಯಾಲಯಕ್ಕೆ, ಅದರ ಆಹ್ವಾನದ ಮೇಲೆ ಹೋದದ್ದು, ವಿಭಾಗದ ಮುಖ್ಯಸ್ಥನಾಗಿ ಎರಡು ವರ್ಷಗಳು ನಾನು ಮಾಡಿದ್ದ ಕೆಲಸ ಹಾಗೂ ನಾನು ಪಡೆದುಕೊಂಡ ಅನುಭವ, ಇಲ್ಲಿ ಈ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತವು. ಸಂದರ್ಶನದ ಸಮಯದಲ್ಲಿ, ಪ್ರೊ. ಭೀಮಸೇನರಾಯರು ನನ್ನನ್ನು ಸುಲಭವಾಗಿ ಉರುಳಿಸುವ ವ್ಯಾಕರಣಗಳ ಬತ್ತಳಿಕೆಗೆ ಕೈ ಹಾಕಿದರು. ನಾನು ನನ್ನ ಗುರಾಣಿ ಮನವಿಯನ್ನು ಮುಂದೊಡ್ಡಿ ‘ದಯಮಾಡಿ ವ್ಯಾಕರಣ ಕುರಿತು ನನಗೆ ಪ್ರಶ್ನೆ ಹಾಕಬೇಡಿ, ನನ್ನ ಕ್ಷೇತ್ರ ಅದಲ್ಲ;  ಸಾಹಿತ್ಯವನ್ನು ಕುರಿತು-ಅದು ಯಾವ ಕಾಲದ್ದೇ ಆಗಿರಲಿ-ಏನು ಬೇಕಾದರೂ ಕೇಳಿ, ನಾನು ತಯಾರು’ ಎಂದೆ. ನನ್ನ ಪ್ರಾರ್ಥನೆ ಫಲಿಸಿತು. ಆನಂತರ ಪ್ರೊ. ಮಾಳವಾಡರು ಹಲವಾರು ಉತ್ತರ ಪಡೆದುಕೊಂಡನಂತರ ತಾವು ತಂದಿದ್ದ ಷಡಕ್ಷರಕವಿಯ ‘ಶಬರ ಶಂಕರ ವಿಳಾಸ’ ಗ್ರಂಥವನ್ನು ತೆರೆದು, ಅದರಲ್ಲಿನ ಒಂದು ಪದ್ಯವನ್ನು ತೋರಿಸಿ ‘ಅದರ ಅರ್ಥವನ್ನು ಹೇಳಿ’ ಎಂದರು. ಕೂಡಲೇ ನಾನು ‘ಹೇಳುವುದಿಲ್ಲ’ ಅಂದೆ. ‘ಯಾಕೆ ಹೇಳುವುದಿಲ್ಲ’ ಅಂದರು ಮಾಳವಾಡರು. ನಾನೆಂದೆ: ‘ನೋಡಿ ಸಾರ್ ನಾನು ಒಬ್ಬ ಅಧ್ಯಾಪಕ, ಹದಿನೈದು ವರ್ಷಗಳಿಗೂ ಮೀರಿದ ಕಾಲದಲ್ಲಿ ಪಾಠ ಹೇಳಿದ್ದೇನೆ. ತರಗತಿಗೆ ಹೋಗುವ ಮುನ್ನ ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡೇ ಪಾಠ ಹೇಳುವುದು ನನ್ನ  ಪದ್ಧತಿ. ಹೀಗಿರುವಾಗ ಇದ್ದಕ್ಕಿದ್ದ ಹಾಗೆ ಯಾವುದೋ ಪದ್ಯವನ್ನು ತಾವು ತೋರಿಸಿ ಅದಕ್ಕೆ ಅರ್ಥ ಹೇಳು ಅನ್ನುತ್ತೀರಿ? ಇದರ ಮೇಲೆ ರೀಡರ್ ಅಂಥ ಹುದ್ದೆಗೆ ಬಂದ ನನ್ನನ್ನು, ಯಾವುದೋ ಪದ್ಯವೊಂದರ ಅರ್ಥವನ್ನು ನಾನು ಹೇಳಬಲ್ಲೆನೋ ಇಲ್ಲವೋ ಎಂದು ಶಂಕಿಸುತ್ತಿದ್ದೀರಿ. ಈ ಕಾರಣಗಳಿಂದ ನಾನು ಈ ಪದ್ಯಕ್ಕೆ ಅರ್ಥ ಹೇಳುವುದಿಲ್ಲ.’ ಕುಲಪತಿಗಳು ಕುತೂಹಲದಿಂದ, ರಿಜಿಸ್ಟ್ರಾರ್ ಮಲ್ಲಿಕಾರ್ಜುನಪ್ಪನವರು ಸ್ವಲ್ಪ ಗಾಬರಿಯಿಂದ ಸ್ವಲ್ಪ ಅನುಕಂಪದಿಂದ ನನ್ನ ಕಡೆ ನೋಡುತ್ತಿದ್ದರು. ಸ್ವಲ್ಪ ಸುಧಾರಿಸಿಕೊಂಡ ಮಾಳವಾಡರು ‘ಹೋಗಲಿಬಿಡಿ, ಅರ್ಥ ಹೇಳಬೇಡಿ.  please enlighten me about this poem’ ಎಂದರು. ಆ ಪದ್ಯವನ್ನು ಓದಿನೋಡಿದೆ. ಅದೊಂದು ಬೆಳಕಿಲ್ಲದ ಪದ್ಯ. ‘Sir, there is no light in this poem to enlighten you’ ಎಂದೆ. ಕುಲಪತಿಗಳು ಮತ್ತು ರಿಜಿಸ್ಟ್ರಾರ್ ಎಲ್ಲರೂ ಗಟ್ಟಿಯಾಗಿ ನಕ್ಕರು. ವಾತಾವರಣ ತಿಳಿಯಾಯಿತು. ಕೂಡಲೇ ಮಲ್ಲಿಕಾರ್ಜುನಪ್ಪನವರು ‘ಶಿವರುದ್ರಪ್ಪನವರೇ, ನೀವು ಒಳ್ಳೆಯ ಕವಿ ಎಂದು ಹೆಸರು ಮಾಡಿದ್ದೀರಿ. ಯಾವುದಾದರೂ ನಿಮ್ಮದೊಂದು ಪದ್ಯ ಓದಿ, ಕೇಳೋಣ’ ಎಂದರು. ಓದಿದೆ. ಜಯರಾಮನ್ ಅವರು ‘ಇನ್ನೂ ಒಂದು ಓದಿ’ ಎಂದರು. ಸಂದರ್ಶನ ಹೋಗಿ ಕಾವ್ಯ ವಾಚನ ಗೋಷ್ಠಿಯಾಯಿತು. ಲೌಕಿಕವಾಗಿಯೂ ಕವಿತೆ ನನ್ನನ್ನು ಕಾಪಾಡಿತು.

ಈ ಸಂದರ್ಶನ ಫಲಿತಾಂಶವನ್ನು ತಿಳಿದ, ಆಗಿನ ಕಾಲದ ದೊಡ್ಡ ಪಂಡಿತ ರತ್ನರೊಬ್ಬರು ಹೇಳಿದರಂತೆ: “ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಡಿಪಾರ್ಟ್‌ಮೆಂಟ್ ಹಾಳಾಗಿಹೋಯಿತು. ಮಹಾಕವಿ ಷಡಕ್ಷರದೇವನ ಪದ್ಯಕ್ಕೆ ಅರ್ಥ ಹೇಳಲಾಗದಂಥವರನ್ನು ಒಂದು ವಿಭಾಗದ ಮುಖ್ಯಸ್ಥರನ್ನಾಗಿ ಮಾಡಿದ ಮೇಲೆ ನಮ್ಮ ಶಿಕ್ಷಣದಲ್ಲಿ ಸ್ಟಾ ಂಡರ್ಡ್ ಏನು ಉಳೀತು?”