ಸಂಜೆ ಐದುಗಂಟೆಯ ಸಮಯ. ತುಂಗಾನದಿಯ ನೀರಿನ ಹರವಿನ ಮೇಲೆ ಸಂಜೆಯ ಬಿಸಲು ತಳತ್ತಳಿಸುತ್ತಿತ್ತು. ಬೇಸಿಗೆಯ ಕಾಲವಾದದ್ದರಿಂದ ನದಿಯನೀರು ವಿಸ್ತಾರವಾದ ಮರಳುಹಾಸಿನ ಅಂಚಿಗೆ ಆತುಕೊಂಡು, ಸೊರಗಿದ ಪಾತ್ರದಲ್ಲಿ ಪ್ರವಹಿಸುತ್ತಿತ್ತು. ಈಸೂರಿನ ಮಿಡಲ್ ಸ್ಕೂಲ್ ಮೇಷ್ಟ್ರು ಶಾಂತವೀರಪ್ಪ ಮತ್ತು ಅವರ ಹೆಂಡತಿ ವೀರಮ್ಮ ಮಗುವೊಂದನ್ನು ಸೊಂಟದಮೇಲೆ ಕೂರಿಸಿಕೊಂಡು ನದೀ ಪಾತ್ರದ ಮರಳನ್ನು ತುಳಿದುಕೊಂಡು ನೀರಿನ ಹರವಿನ ಹತ್ತಿರಕ್ಕೆ ಬಂದರು. ಮಗುವನ್ನು ಮರಳಿನ ಹಾಸಿನ ಮೇಲೆ ಕೂರಿಸಿ, ತಾವು ತಂದ ರೊಟ್ಟಿಯ ಗಂಟನ್ನು ಬಿಚ್ಚಿದರು. ಜೋಳದ ರೊಟ್ಟಿ, ಸೇಂಗಾ ಚಟ್ನಿ ಒಂದಷ್ಟು ಸೊಪ್ಪಿನ ಪಲ್ಯ ಅವರ  ಸಂಜೆಯ ಉಪಹಾರ ಸಾಮಗ್ರಿಯಾಗಿತ್ತು. ಮಗುವಿನ ಕೈಗೆ ಮುರಿದ ರೊಟ್ಟಿಯ ತುಣುಕೊಂದನ್ನು ಕೊಟ್ಟು, ಅದನ್ನು ತಮ್ಮ ಬೆನ್ನ ಹಿಂದೆ ಕೂರಿಸಿ, ತಾವು ರೊಟ್ಟಿಯನ್ನು ತಿನ್ನತೊಡಗಿದರು. ಬೇಸಗೆಯ ರಜೆಗೆ ಸ್ಕೂಲು ಆಗ ತಾನೇ ಮುಚ್ಚಿದ್ದರಿಂದ, ಅದೇ ಮಧ್ಯಾಹ್ನ ಈಸೂರಿನಿಂದ ಶಿವಮೊಗ್ಗೆಗೆ ಬಂದ ಆ ಮೇಷ್ಟ್ರು, ಸಂಜೆ ಏಳುಗಂಟೆಯ ರೈಲು ಹಿಡಿದು ತಮ್ಮ ಹೆಂಡತಿಯ ತೌರುಮನೆಯಾದ ಬೀರೂರಿಗೆ ಹೊರಡುವ ಮಧ್ಯೆ ದೊರೆತ ಈ ಬಿಡುವಿನಲ್ಲಿ ತುಂಗಾತೀರದ ಮರಳುಹಾಸಿನ ಮೇಲೆ ಕೂತು ಅದೂ ಇದೂ ಮಾತಾಡುತ್ತ ರೊಟ್ಟಿ ತಿನ್ನುವುದರಲ್ಲಿ ಮಗ್ನವಾಗಿದ್ದರು.

ಅವರ ಹಿಂದೆ, ತುಂಡುರೊಟ್ಟಿಯನ್ನು ಜಗಿಯುತ್ತ ಕೂತ ಆ ಮಗು ಹರಿಯುವ ಹೊಳೆಯ ಕಡೆ ನೋಡಿತು. ಸಾಯಂಕಾಲದ ಬಿಸಿಲು, ಜುಳು ಜುಳು ನಿನಾದದಿಂದ ಹರಿಯುತ್ತಿದ್ದ ತುಂಗಾನದಿಯ ನೀರಿನ ಮೇಲೆ ಥಳಥಳಿಸಿ ನೀರೆಲ್ಲಾ ಬೆಳ್ಳಿಯಾಗಿತ್ತು. ಆ ನೀರು, ಮರ‍್ಮರ, ನೀರ ಮೇಲೆ ತಕಪಕನೆ ಕುಣಿದು ಕಿಲಕಿಲ ನಗುತ್ತಿದ್ದ ಆ ಬಿಸಿಲು, ಈ ಮಗುವನ್ನು ಬಾ ಬಾ ಎಂದು ಕರೆಯುವಂತೆ ತೋರಿತು. ಎರಡೂವರೆ ವರ್ಷದ ಆ ಪುಟ್ಟ ಮಗು, ರೊಟ್ಟಿಯನ್ನು ಅತ್ತ ಎಸೆದು, ಥಳಥಳಿಸುವ ತುಂಗಾತರಂಗದ ಕಡೆಗೆ ಧಾವಿಸಿತು. ಕ್ಷಣಾರ್ಧದಲ್ಲಿ ಯಾರೊ, ಬೆನ್ನ ಹಿಂದೆ ಕಿರುಚಿದರು ‘ಅಯ್ಯೋ, ಅಯ್ಯೋ ಅಲ್ನೋಡಿ, ಆ ಮಗು….’ ಜೋಳದರೊಟ್ಟಿಯ ಸವಿಯಲ್ಲಿ ಮತ್ತು ಬೇರೇನೋ ಮಾತುಕತೆಗಳಲ್ಲಿ ಮೈಮರೆತ ಮೇಷ್ಟ್ರು ಮತ್ತು ಅವರ ಹೆಂಡತಿ ಬೆಚ್ಚಿಬಿದ್ದು ನೋಡುತ್ತಾರೆ-ಮಗು ಬೆರಗುಗಣ್ಣು ತೆರೆದುಕೊಂಡು ನದೀ ಪಾತ್ರದ ಅಂಚನ್ನು ಸಮೀಪಿಸಿ ನೀರಿನಲ್ಲಿ ಮಗುಚಿಕೊಳ್ಳುವುದರಲ್ಲಿದೆ. ತಾಯಿ ತಿನ್ನುತ್ತಿದ್ದ ರೊಟ್ಟಿಯನ್ನು ತಟ್ಟನೇ ಕೆಳಗೆ ಹಾಕಿ, ಓಡಿಹೋಗಿ ನೀರಿನಲ್ಲಿ ಮಗುಚಿ ಬಿದ್ದ ಮಗುವಿನ ತೋಳು ಹಿಡಿದು ಎತ್ತಿ, ಆತಂಕ ತುಂಬಿದ ಮುಖದಿಂದ ಎತ್ತಿಕೊಂಡು ಹಿಂದಕ್ಕೆ ತರುತ್ತಾಳೆ.

ಆ ಮಗು ನಾನೇ. ನನಗಾಗ ಎರಡೂವರೆ ವರ್ಷ. ತುಂಗಾನದಿಯ ನೀರಿನ ಮೇಲೆ ಥಳಥಳ ಹೊಳೆದು, ನನ್ನನ್ನು ಬಳಿಗೆ ಕರೆದ ಆ ಬಿಸಿಲಿನ ಕುಣಿತ ಇಂದಿಗೂ ನನ್ನ ನೆನಪಿನಲ್ಲಿದೆ.

ನನಗೆ ನೆನಪಿಲ್ಲ. ನಮ್ಮಜ್ಜಿ ಹೇಳುತ್ತಿದ್ದರು, ನಾನು ಎಳೆಯಂದಿನಲ್ಲಿ ಒಂದು ದೊಡ್ಡ ಗಂಡಾಂತರದಿಂದ ಪಾರಾದೆನೆಂದು. ಈಸೂರಿನಲ್ಲಿ ಒಂದು ದಿನ. ನಾನಾಗ ತೊಟ್ಟಿಲ ಕೂಸು. ತಂದೆಯವರು ಸ್ಕೂಲಿಗೆ ಹೋಗಿದ್ದಾರೆ. ತಾಯಿ, ತನ್ನ ಮಗು ಮಲಗಿದೆಯಲ್ಲ, ಒಂದೆರಡು ನಿಮಿಷದಲ್ಲಿ ಬಂದರಾಯಿತು ಎಂದು ಮನೆಯ ಬಾಗಿಲನ್ನು ಎಳೆದುಕೊಂಡು ಹತ್ತಿರದ ಬಾವಿಗೆ ನೀರು ತರಲು ಹೋಗಿದ್ದಾರೆ. ಆಗ ಇದ್ದಕಿದ್ದಹಾಗೆ ಈ ಮನೆಯ ಪಕ್ಕದ ಹುಲ್ಲುಜೋಪಡಿಗೆ ಬೆಂಕಿ ಹತ್ತಿಕೊಂಡಿತು. ಅಕ್ಕಪಕ್ಕದ ಮನೆಗೆ ತಗುಲಿದ ಬೆಂಕಿ ನಮ್ಮ ಬಾಡಿಗೆಯ ಮನೆಗೂ ತಗುಲಿತು. ಮನೆಯ ಮೇಲಿನ ಗಳು ಹೊದಿಸಿದ ಚಾವಣಿ ಉರಿಯುತ್ತಿದೆ. ಜನರ ಗದ್ದಲ ಕೇಳಿ, ನೀರಿಗೆ ಹೋಗಿದ್ದ ನನ್ನ ತಾಯಿ ಬಂದು ನೋಡುತ್ತಾಳೆ. ಮನೆಯ ಒಂದು ಭಾಗವನ್ನು  ಬೆಂಕಿ ಮೇಯುತ್ತಿದೆ. ಆ ಹೊಗೆ-ಬೆಂಕಿಯ ನಡುವೆ ನುಗ್ಗಿ ತೊಟ್ಟಿಲಲ್ಲಿ ಮಲಗಿದ್ದ ಮಗುವನ್ನೆತ್ತಿಕೊಂಡು, ಆಕೆ ಉರಿಯುವ ಮನೆಗಳ ನಡುವೆ ಹಾದು ಊರಾಚೆಯ ಬಯಲಿಗೆ ಬಂದು ಕೂತಳು. ಬೆಂಕಿ ಹತ್ತಿದ ಸುದ್ದಿ ಕೇಳಿ, ಸ್ಕೂಲನ್ನು ಬಿಟ್ಟು ತಂದೆಯವರು ಬಂದು ನೋಡುತ್ತಾರೆ, ಮನೆಯಲ್ಲಿ ತಾಯಿ ಮಗು ಇಲ್ಲ.  ಮನೆ ಹೆಚ್ಚೂ ಕಡಿಮೆ ಸುಟ್ಟು ಕುಸಿದು ಹೋಗಿದೆ. ಗಾಬರಿಗೊಂಡ ಅವರಿಗೆ ಯಾರೋ ಹೇಳಿದರಂತೆ, ತಾಯಿ ಮಗು ಪಾರಾಗಿ ಬಂದ ಸಂಗತಿಯನ್ನು. ಅವರು ಬಂದು ಊರ ಹೊರಗೆ ಮರದ ಕೆಳಗೆ ಸುರಕ್ಷಿತವಾಗಿ ಕೂತ ಹೆಂಡತಿ ಮಕ್ಕಳನ್ನು ಕಂಡು, ಅವರಿಗೆ ಸಮಾಧಾನವಾಯಿತಂತೆ. ಆ ದಿನ ಹತ್ತಿದ ಬೆಂಕಿಯಲ್ಲಿ ಅರ್ಧಕ್ಕರ್ಧ ಊರು ಬೂದಿಯಾಯಿತಂತೆ. ಈ ಸಂದರ್ಭವನ್ನು ನೆನೆದರೆ ನನ್ನ ತಾಯಿಯ ಬಗ್ಗೆ ಒಂದು ಕೃತಜ್ಞತೆಯ ಭಾವನೆ ತುಳುಕುತ್ತದೆ.

ಈ ನನ್ನ ತಾಯಿಯ ಬಗ್ಗೆ ಅವಳ ಮುಖದ ಬಗ್ಗೆ ನನಗೆ ನಿಲ್ಲುವುದು ಒಂದು ಅಸ್ಪಷ್ಟ್ಟವಾದ ನೆನಪು: ಮಮತೆ ತುಂಬಿದ ಒಂದು ಮುಖ;  ಹೊಳೆಯುವ ಎರಡು ಕಣ್ಣು ಮತ್ತು ತಲೆಯ ತುಂಬ ಹೊದ್ದ ಹಸುರು ಸೆರಗು. ಇದಿಷ್ಟೇ ನನಗೆ ನೆನಪಿರುವುದು. ಆದರೆ ಆಕೆ ತುಂಬ ಮಧುರವಾಗಿ ಹಾಡುತ್ತಿದ್ದಳು; ಆ ಹಾಡಿನ ಕೊರಳಿನ ಇಂಪು ಇಂದೂ ನನ್ನ ಮನಸ್ಸಿನಲ್ಲಿ ಅನುರಣಿತವಾಗುತ್ತದೆ. ಇಂಥ ತಾಯಿಯನ್ನು ಕಳೆದುಕೊಂಡಾಗ, ಬಹುಶಃ ನನಗೆ ಆರು ವರ್ಷ ವಯಸ್ಸು; ನನ್ನ ತಮ್ಮನಿಗೆ ಮೂರು. ಆಕೆ ತೀರಿಕೊಂಡ ದಿನ ಬೀರೂರಿನಲ್ಲಿ ನಾನೂ ನನ್ನ ತಮ್ಮ ಹಾಯಾಗಿ ಆಟವಾಡುತ್ತಿದ್ದೆವು. ‘ನಿನ್ನ ಅಮ್ಮ ದೇವರ ಹತ್ತಿರ ಹೋಗಿದಾಳಪ್ಪ’ ಎಂದು ಅವರಿವರು ಹೇಳಿದ್ದನ್ನು ಕೇಳಿ, ಮತ್ತೆ  ಬರುತ್ತಾಳೆ ಎಂದು ನಂಬಿ ಸ್ವಲ್ಪ ಸುಮ್ಮನಿದ್ದೆ. ಆಮೇಲೆ, ಹಾಗೆ ಅವರು ಹೇಳಿದ್ದು ಸುಳ್ಳು ಎಂಬುದು ಅರ್ಥವಾಗಿ, ಆಕೆ ಮತ್ತೆ ಬರುವುದೇ ಇಲ್ಲವೆಂದು ಖಚಿತವಾದಾಗ, ನಿಜಕ್ಕೂ ಅಳು  ಒತ್ತರಿಸಿಕೊಂಡು ಬಂತು. ಆ ಮೇಲೆ  ‘ಕಂಡ ಕಂಡ ಹೆಣ್ಣ ಮೊಗದಿ ತಾಯಿ ಮುಖವನರಸಿದೆ’. ಆನಂತರ ಮತ್ತೊಬ್ಬ ತಾಯಿ ಶಾಂತಮ್ಮ ಮನೆಯನ್ನು ತುಂಬಿದಳು.

ಮತ್ತೆ ನನ್ನ ಎಳೆಯಂದಿನ  ಕೆಲವು ವರ್ಷಗಳು ಕಳೆದದ್ದು ಹೊನ್ನಾಳಿಯಲ್ಲಿ, ತುಂಗಾಭದ್ರಾನದಿಯ ತೀರದಲ್ಲಿ. ನನ್ನ ಪೆಮರೀ ಸ್ಕೂಲಿನ ದಿನಗಳು. ನನಗಾಗ ಐದಾರುವರ್ಷಗಳಿರಬಹುದು. ನಮ್ಮ ಸ್ಕೂಲಿನ ಹಿಂದೆಯೆ ಹೊಳೆಗೆ ಹೋಗುವ ದಾರಿ. ದಿನ ಬೆಳಗಾದರೆ ಬಿಂದಿಗೆ, ಗಡಿಗೆಗಳ ಸಮೇತ ಹೊಳೆಯ ನೀರಿಗೆ ಹೋಗುವ ಹೆಂಗಸರು-ಗಂಡಸರು-ಮಕ್ಕಳು. ಬುಟ್ಟಿ ತುಂಬ ಬಟ್ಟೆಗಳನ್ನು ತುಂಬಿಕೊಂಡು, ಒಗೆಯಲು ಒಯ್ಯುವ ಜನಗಳು. ತಲೆಯ ಮೇಲೆ ಒಂದು ಕೊಡ, ಅವರ ಮೇಲೆ ಇನ್ನೊಂದು ಕೊಡ, ಮತ್ತೂ ಅದರ ಮೇಲೆ ಇನ್ನೊಂದು ಕಿರುಬಿಂದಿಗೆ ಇರಿಸಿಕೊಂಡು ನೀರಿನ ತೇರಿನಂತೆ ನಿಧಾನಕ್ಕೆ ಚಲಿಸುವ ಹೆಂಗಸರು.  ಅಡ್ಡೆಗಳಲ್ಲಿ ಎರಡೂ ಕಡೆ ಬಿಂದಿಗೆಗಳನ್ನಿರಿಸಿಕೊಂಡು ಜೀಕುತ್ತಾ ಬರುವ ಗಂಡಸರು. ಊರಿನ ಮನೆಗೆ, ಹೋಟೆಲುಗಳಿಗೆ ಹಂಡೆಗಳಲ್ಲಿ ಡ್ರಮ್ಮುಗಳಲ್ಲಿ ಹೊಳೆಯ ನೀರನ್ನು ಸಾಗಿಸುವ ಎತ್ತಿನಗಾಡಿಗಳು. ಈ ನೀರಿನ ಮೆರವಣಿಗೆಯನ್ನು ದಿನಾ ನನ್ನ ಸ್ಕೂಲಿನ ತರಗತಿಯ ಕಿಟಕಿಯಿಂದ ನೋಡುವುದೇ ನನಗೊಂದು ಹಬ್ಬವಾಗಿ, ಪಾಠದ ಕಡೆಗೆ ನನಗೆ ಲಕ್ಷ ವೇ ಇರಲಿಲ್ಲ.

ಸ್ಕೂಲು ಮುಗಿದು, ಸಂಜೆಯಾದ ಮೇಲೆ ಹೊಳೆಯ ಕಡೆ ಓಡುವುದು; ವಿಸ್ತಾರವಾಗಿ ಹರಿಯುವ ತುಂಗಭದ್ರಾ ನದಿಯ ದಡದಲ್ಲಿ ನಿಲ್ಲುವುದು ನನ್ನ ಕೆಲಸವಾಗಿತ್ತು. ಮಳೆಗಾಲದಲ್ಲಂತೂ ಅದರ ಅಬ್ಬರ ಹೇಳತೀರದು. ದೂರದ ಸೇತುವೆಯ ಕಮಾನಿನ ಕಣ್ಣುಗಳು ಮುಚ್ಚುವಷ್ಟು ಎತ್ತರಕ್ಕೆ ಬಂದ ನೀರಿನ ಹರಹು, ತಾನೇತಾನಾಗಿ ಅತ್ಯಂತ ನಿರ್ಲಕ್ಷ ದಿಂದ ವಿಜೃಂಭಿಸುತಿತ್ತು. ಆ ದಡದಿಂದ ಈ ದಡದವರೆಗೆ ಉಜ್ಜಿಕೊಂಡು ಹರಿಯುವ ನೀರು, ಆಗಾಗ ಊರೊಳಗೂ ಭುಸುಗುಟ್ಟಿಕೊಂಡು ನುಗ್ಗುತ್ತಿತ್ತು. ಒಂದೇ ಸಮನೆ ಧಾವಿಸುವ ಕೆಮ್ಮಣ್ಣು ಬಣ್ಣದ ಆ   ಪ್ರವಾಹದಲ್ಲಿ, ದೊಡ್ಡ ದೊಡ್ಡ ಮರಗಳು, ಯಾವ್ಯಾವುದೋ ಊರಿನ ಗುಡಿಸಲುಗಳ ಛಾವಣಿ-ತಡಿಕೆಗಳು, ನಿರ್ಗತಿಕರ ಮನೆಯ ಮಡಕೆ ಕುಡಿಕೆಗಳು, ಸತ್ತು ಉಬ್ಬಿಕೊಂಡ ದನಕರುಗಳ ಶವಗಳು, ಜತೆಗೆ ಮನುಷ್ಯರ ದೇಹಗಳೂ ತೇಲಿ ಹೋಗುತ್ತಿದ್ದವು. ಆಷಾಢ-ಶ್ರಾವಣಗಳಲ್ಲಿ ಭೋರೆಂಬ ಗಾಳಿಯ ಹೊಡೆತಕ್ಕೆ, ದಡದಲ್ಲಿ ನಿಂತ ಮರಗಳೆಲ್ಲ ತಲೆಯನ್ನು ಕೆದರಿಕೊಂಡು ಹೊಯ್ದಾಡುವಾಗ, ಉಕ್ಕೇರಿ ಬಂದ ಕೆಂಪುನೀರಿನ ಆ ಪ್ರವಾಹವನ್ನು ನಾನು ವಿಸ್ಮಯದಿಂದ ಭಯದಿಂದ ನೋಡುತ್ತಾ ನಿಲ್ಲುತ್ತಿದ್ದೆ. ಒಂದೊಂದು ಸಲ ನನ್ನ ತಾಯಿ ಆತಂಕದಿಂದ ಹುಡುಕಿಕೊಂಡು ಬಂದು ನನ್ನನ್ನು ಮನೆಗೆ ಎಳೆದುಕೊಂಡು ಹೋಗುತ್ತಿದ್ದರು.

ಮುಂದಿನ ನನ್ನ ದಿನಗಳು ‘ಕೋಟೆ ಹಾಳು’ ಎಂಬ ಊರಿನಲ್ಲಿ. ಅದೂ ಮಲೆನಾಡ ಸೆರಗು. ಮನೆಗೆ ಸ್ವಲ್ಪ ದೂರದಲ್ಲೇ ಹಬ್ಬಿಕೊಂಡ ಗುಡ್ಡಗಳ ಸಾಲು. ಅಲ್ಲಲ್ಲಿ ಹರಿಯುವ ಹಳ್ಳಗಳು, ಮಿರುಗುವ ಕೆರೆಗಳು. ಅದರ ಸುತ್ತ ಹರಹಿದ ಕಾಡು. ಈ ಕಾಡುಗುಡ್ಡಗಳಲ್ಲಿ ಸೌದೆ ಸಂಗ್ರಹಿಸಿಕೊಂಡು ತರುವ ಕೆಲಸ ನನಗೆ ಒದಗುತ್ತಿತ್ತು. ಈ ಗುಡ್ಡಗಾಡುಗಳಲ್ಲಿ ಚಿರತೆ, ತೋಳ, ನರಿಗಳಿವೆ ಎಂದು ಹೇಳುತ್ತಿದ್ದರು. ಒಂದು ರಾತ್ರಿ ನಾವಿದ್ದ ಮನೆಯ ಹೊರಗೇ ಹುಲಿಯ ಘರ್ಜನೆ ಕೇಳಿದ ನೆನಪು ಇಂದಿಗೂ ಕಿವಿಗೆ ಕಟ್ಟಿದಹಾಗಿದೆ. ಆನಂತರ ರಾಮಗಿರಿ. ಅಲ್ಲಂತೂ ನೀರಿಗೆ ಬರ. ಉಪ್ಪುನೀರಿನ ಬಾವಿಗಳಿದ್ದವು ಸಾಕಷ್ಟು. ಆದರೆ ಸಿಹಿನೀರು ಬೇಕಾದರೆ ಹೋಗಬೇಕಾಗಿತ್ತು ಒಂದು, ಒಂದೂವರೆ ಮೈಲಿ. ನೀರು ತರಬೇಕಾದದ್ದು ಅಥವಾ ಹೊರಬೇಕಾದದ್ದು ನನ್ನ ಪಾಲಿಗೆ ಬಂತು.

ರಾಮಗಿರಿಯಲ್ಲಿದ್ದಾಗ ನನಗೆ, ಬಯಲಾಟಗಳ ಹುಚ್ಚು. ಯಾವುದೇ ಊರಿನಲ್ಲಿ ಬಯಲಾಟಗಳಾದರೂ, ಒಂದು ಗೋಣಿಚೀಲವನ್ನು ಸುತ್ತಿ ಬಗಲಿಗೆ ಇರಿಸಿಕೊಂಡು ಆಟನೋಡಲು ಹೋಗುವವರ ಜತೆ ಹೊರಟುಬಿಡುತ್ತಿದ್ದೆ. ಗೋಣಿಚೀಲ ಹಾಸಿಕೊಂಡು, ಕೂತು ರಾತ್ರಿಯೆಲ್ಲಾ ಆಟನೋಡಿ ಮತ್ತೆ ಬೆಳಗಾಗುವ ವೇಳೆಗೆ ಹಿಂದಕ್ಕೆ ಬರುತ್ತಿದ್ದೆ. ರಾಮಗಿರಿಯಲ್ಲಿ ನಾವಿದ್ದ ಮನೆಗೆ ಅನತಿ ದೂರದಲ್ಲಿ ‘ಸಾವುಕಾರರ’ ಮನೆ. ಅವರ ಮನೆಯಲ್ಲಿ ಗ್ರಾಮಫೋನು ಇತ್ತು. ಅವರ ಹತ್ತಿರ ಕೊಟ್ಟೂರಪ್ಪನವರು ಪ್ರಮುಖ ಪಾತ್ರವಹಿಸಿದ ‘ದಾನಶೂರ ಕರ್ಣ’ ‘ಗಯಚರಿತ್ರೆ’ ‘ಭೀಷ್ಮ ವಿಜಯ’ ಇಂಥ ರೆಕಾರ್ಡುಗಳಿದ್ದವು. ಸಾಮಾನ್ಯವಾಗಿ ರಾತ್ರಿ ಹತ್ತು ಗಂಟೆಯ ಹೊತ್ತಿಗೆ ಅವರು ಈ  ರೆಕಾರ್ಡು ಹಾಕುತ್ತಿದ್ದರು. ಆ ವೇಳೆಗೆ ನಮ್ಮ ಅಪ್ಪ ಅಮ್ಮ ಗಾಢವಾದ ನಿದ್ರೆಯಲ್ಲಿರುತ್ತಿದ್ದರು. ನಾನು, ಹಾಡಿನ ಶಬ್ದ ಕೇಳಿದ ಕೂಡಲೇ ಮೆತ್ತಗೆ ಎದ್ದು, ಸದ್ದಾಗದಂತೆ ಬಾಗಿಲು ತೆಗೆದು ಓಡಿಹೋಗಿ ಕೂತು ಆ ‘ನಾಟಕ’ಗಳನ್ನು ಕೇಳುತ್ತಿದ್ದೆ.  ‘ದಾನಶೂರ ಕರ್ಣ’ವಂತೂ, ಕೊಟ್ಟೂರಪ್ಪನವರ  ಭಾವಪೂರ್ಣ  ಸ್ವರಾಭಿನಯದ  ಮೂಲಕ ನನ್ನನ್ನು ಸೂರೆಗೊಂಡಿತ್ತು. ಈ ‘ನಾಟಕ’ಗಳ ಎಷ್ಟೋ ಹಾಡುಗಳು ನನಗೆ ಬಾಯಿಪಾಠವಾಗಿದ್ದವು.

ಈ ಊರಿಂದ ನಮ್ಮ ತಂದೆಯವರಿಗೆ ಹೊಸದುರ್ಗದಾಚೆಯ ಬೆಲಗೂರಿಗೆ ವರ್ಗವಾಯಿತು. ಈ ಪ್ರಾಂತ್ಯವಂತೂ ತೆಂಗಿನ ಸೀಮೆ. ಯಾವಕಡೆ ನೋಡಿದರೂ ಗರಿಬಿಚ್ಚಿದ ತೆಂಗಿನ ಮರಗಳ ತೋಟದ ಹರಹು. ನಾವಿದ್ದ ಬಾಡಿಗೆ ಮನೆಯ ಅಟ್ಟದ ತುಂಬ ತೆಂಗಿನಕಾಯಿ. ಮನೆ ಎದುರಿಗೆ ನೇಕಾರರ ಬೀದಿ; ಪಕ್ಕದಲ್ಲಿ  ಕುಂಬಾರರ ಮನೆಗಳು. ನೇಕಾರರ ಮನೆ ಹಾಗೂ ಕುಂಬಾರರ ಬೀದಿ ಈ ಎರಡೂ ನನ್ನ ಆಕರ್ಷಣೆಯ  ಕೇಂದ್ರಗಳು. ಮನೆಯೊಳಗೆ ಹಾಸಿಕೊಂಡ ಮಗ್ಗ; ಅದರೊಳಗೆ ಲಟಾ ಪಟಾ ಶಬ್ದದೊಂದಿಗೆ ಆಡುವ ಲಾಳಿ; ಆಡುತ್ತಲೇ ಹಾಸಿಕೊಂಡ ನೂಲು ಕ್ರಮಕ್ರಮೇಣ ಬಟ್ಟೆಯಾಗುತ್ತಾ ಹೋಗುವುದು ನನ್ನ ಪಾಲಿಗೆ ಒಂದು ದೊಡ್ಡ ಪವಾಡವಾಗಿ  ತೋರಿತು. ದಿನಾ ಗಂಟೆಗಟ್ಟಲೆ ಮಗ್ಗಗಳ ಎದುರು ವಿಸ್ಮಿತನಾಗಿ ನಿಲ್ಲುತ್ತಿದ್ದೆ. ಹಾಗೆಯೇ ಮನೆಯ ಪಕ್ಕದ ಕುಂಬಾರರ ಬೀದಿಯೂ ಅಷ್ಟೆ. ಎರೆಮಣ್ಣನ್ನು ಚಕ್ರದ ಮಧ್ಯೆ ಇರಿಸಿ, ಒಂದು ಕೋಲಿನಿಂದ ಚಕ್ರವನ್ನು ಗಿರಗಿರನೆ ತಿರುಗಿಸಿ ಆನಂತರ ಕುಂಬಾರರವನು ತನ್ನ ಕೈಯಿಂದ ಚಕ್ರದ ನಡುವೆ ಇದ್ದ ಮಣ್ಣಿನಿಂದ ಮಡಕೆ, ಕುಡಿಕೆಗಳನ್ನು ಮೂಡಿಸುವ ಅವನ ಕೈಚಳಕಕ್ಕೆ ನಾನು ದಿಗ್ಮೂಢನಾಗುತ್ತಿದ್ದೆ. ಮಗ್ಗದಲ್ಲಿ ಹಾಸಿದ ದಾರ, ಲಾಳಿಯಾಡುವ ಕ್ರಮದಿಂದ ಬಟ್ಟೆಯಾಗುವ ಆ ಬೆರಗು, ಕುಂಬಾರನ ಚಕ್ರದ ನಡುವಣ ಮಣ್ಣು ಕುಂಬಾರನ ಬೆರಳಿನ ಸ್ಪರ್ಶದಿಂದ ಬಗೆ ಬಗೆಯ ರೂಪುತಾಳುವ ಮೋಡಿ ಈ ಎರಡೂ ಕವಿತೆ  ಹುಟ್ಟುವುದು ಹೇಗೆ ಎಂಬುದನ್ನು ನನಗೆ ತಿಳಿಸಿಕೊಟ್ಟಿವೆ.

ಬೆಲಗೂರಿನಲ್ಲಿದ್ದಾಗಲೇ ನಾನು ಮಿಡಲ್‌ಸ್ಕೂಲ್ ಪರೀಕ್ಷೆಗೆ ಕಟ್ಟಿದ್ದು. ‘ಲೋಯರ್ ಸೆಕೆಂಡರಿ ಪರೀಕ್ಷೆ’ ಅಂದಿನ ದಿನಗಳಲ್ಲಿ ಒಂದು ಮುಖ್ಯವಾದ ಹಂತವೇ ಆಗಿತ್ತು. ಅದನ್ನು ಪಾಸ್ ಮಾಡಿದ ನಂತರವೇ ಹೈಸ್ಕೂಲಿಗೆ ಪ್ರವೇಶ. ನಮ್ಮ ಸ್ಕೂಲಿನಿಂದ ಈ ಪರೀಕ್ಷೆಗೆ ಕೂತವರು ಕೇವಲ ಎಂಟು ಜನ. ನಾವು ಎಂಟೂ ಜನ ಒಂದು ಎತ್ತಿನ ಗಾಡಿ ಕಟ್ಟಿಸಿಕೊಂಡು, ನಮ್ಮ ಕನ್ನಡ ಪಂಡಿತರ ಉಸ್ತುವಾರಿಯಲ್ಲಿ ಹೊಸದುರ್ಗಕ್ಕೆ ಹೊರಟೆವು. ದಾರಿ ಉದ್ದಕ್ಕೂ ನಮ್ಮ ಮೇಷ್ಟ್ರು ನಮ್ಮ  ಪರೀಕ್ಷೆಗೆ ಸಂಬಂಧಪಟ್ಟ ಶಿಕ್ಷಣದಲ್ಲೇ ನಮ್ಮನ್ನು ತೊಡಗಿಸಿದರು. ಪರೀಕ್ಷೆ ಮುಗಿಯಿತು.ಒಂದು ತಿಂಗಳ ನಂತರ ಫಲಿತಾಂಶ ಬಂತು. ನಮ್ಮ ಸ್ಕೂಲಿಂದ ಪಾಸಾಗಿದ್ದವರು ಇಬ್ಬರೇ; ಆ ಇಬ್ಬರಲ್ಲಿ ನಾನೂ ಒಬ್ಬ. ತಡಮಾಡದೆ ನಮ್ಮ ತಂದೆಯವರು ನನ್ನನ್ನು ದಾವಣಗೆರೆಯ ಹೈಸ್ಕೂಲಿಗೆ ಸೇರಿಸಿ, ಊರಿಗೆ ಹೊರಟೇಬಿಟ್ಟರು. ಅವರು ನನ್ನನ್ನು ಬಿಟ್ಟು ಹೋದನಂತರ ದಾವಣಗೆರೆಯ ರೈಲ್ವೆಸ್ಟೇಷನ್ನಿನ ಹೊರಗೆ ನಿಂತ ನನಗೆ, ನಾನು ತಟಕ್ಕನೆ ಏಕಾಂಗಿಯಾಗಿಬಿಟ್ಟೆನೆಂಬ ಒಂದು ಭಯ ನನ್ನನ್ನು ಸ್ವಲ್ಪ ಕಾಲ ದಿಗ್ಮೂಢನನ್ನಾಗಿ ಮಾಡಿಬಿಟ್ಟಿತು.