ಕಾಶಿಯಲ್ಲಿ ಕನ್ನಡ ಮಾಧ್ಯಮ

ಬಹುಶಃ ೧೯೫೮ನೆಯ ಇಸವಿ ಎಂದು ಕಾಣುತ್ತದೆ. ನಾನು ನನ್ನ ಪಿ ಎಚ್.ಡಿ ಥಿಸೀಸ್ ಅನ್ನು ಮುಗಿಸಿ, ವಿಶ್ವವಿದ್ಯಾಲಯಕ್ಕೆ ಒಪ್ಪಿಸಿ, ನನ್ನ ಗೆಳೆಯರ ಜತೆ, ಕಲ್ಕತ್ತಾಕ್ಕೆ ಹೊರಟೆ. ಕಲ್ಕತ್ತಾದಲ್ಲಿ ನಮ್ಮೆಲ್ಲರಿಗೂ ಗೌರವಾಸ್ಪದರಾದ ಶ್ರೀ ರಾಮಕೃಷ್ಣ ಪರಮಹಂಸರ ದಕ್ಷಿಣೇಶ್ವರವನ್ನೂ, ಬೇಲೂರು ಮಠವನ್ನೂ ಸಂದರ್ಶಿಸಿ ಬನಾರಸ್‌ಗೆ ಹೊರಟೆವು. ನಾವು ಕಾಶಿಯನ್ನು ಕಂಡದ್ದು ಅದೇ ಮೊದಲು. ನಾವು ಅಂದರೆ, ಪ್ರಭುಪ್ರಸಾದ್, ಪ್ರಭುಶಂಕರ್, ಶ್ರೀಮತಿ ಶಾಂತಾ ಮತ್ತು ಸರ್ವಮಂಗಳ ಇಷ್ಟು ಜನ ಒಂದು ಬೆಳಿಗ್ಗೆ ಗಂಗಾನದಿಯಲ್ಲಿ ಸ್ನಾನಮಾಡುವ ಉದ್ದೇಶದಿಂದ ನದೀ ತೀರಕ್ಕೆ ಹೊರಟೆವು. ನೂರಾರು ಜನ ಆ ವಿಸ್ತಾರವಾದ ಹಾಗೂ ವೇಗವಾದ ಪ್ರವಾಹದ ಅಂಚಿನ ಪಾವಟಿಗೆಗಳಲ್ಲಿ ನಿಂತು ನೀರಿನಲ್ಲಿ ಸ್ನಾನ ಮಾಡುತ್ತಿದ್ದರು. ಹಾಗೆ ಜನಸಂದಣಿ ದಟ್ಟವಾಗಿರುವ ಘಟ್ಟದಲ್ಲಿ ಸ್ನಾನ ಮಾಡಲು ಬಯಸದೆ, ಸಾಕಷ್ಟು ಎತ್ತರವಾದ ದಶಾಶ್ವಮೇಧ ಘಾಟ್ ಎಂಬ ಕಡೆ ಬಂದೆವು. ಅಲ್ಲಿ ಹೆಚ್ಚು ಜನರಿರಲಿಲ್ಲ. ಇದು ಸ್ನಾನಕ್ಕೆ ಪ್ರಶಸ್ತವಾದ ಸ್ಥಳವೆಂದು ಭಾವಿಸಿ ನಾನೂ ಮತ್ತು ಪ್ರಸಾದರೂ ಸ್ನಾನಕ್ಕೆ ಸಿದ್ಧರಾದೆವು. ಪ್ರಭುಶಂಕರ್ ಅವರು ‘ನಾನು ಈ ನೀರಲ್ಲಿ ಸ್ನಾನ ಮಾಡೋಲ್ಲಪ್ಪ’ ಎಂದು ಘೋಷಿಸಿದರು. ಹೀಗಾಗಿ ಮೆಟ್ಟಿಲುಗಳ ಮೇಲೆ, ಮಹಿಳೆಯರಿಬ್ಬರ ಜತೆ ಅವರು ಕೂತರು. ನಾನೂ ಪ್ರಸಾದರೂ, ಹರಿಯುವ ನದಿಯ ನೀರಿನೊಳಗಿನ ಪಾವಟಿಗೆಯೊಳಕ್ಕೆ ನಿಧಾನವಾಗಿ ಕಾಲಿರಿಸಿದೆವು. ಒಂದು ಮೆಟ್ಟಿಲಿಳಿದರೆ, ಮೊಳಕಾಲ ತನಕ ಬಂದ ನೀರು, ಎರಡನೆ ಮೆಟ್ಟಿಲಿಳಿದಾಗ ಸೊಂಟದಿಂದ ಮೇಲಕ್ಕೆ ಬಂತು. ಈ ದಶಾಶ್ವಮೇಧ ಘಾಟಿನ ಹತ್ತಿರ ನೀರಿನ ಸೆಳವು ಇಷ್ಟರ ಮಟ್ಟಿಗೆ ಇದೆ ಎಂದು ನಮಗೆ ತಿಳಿದಿರಲಿಲ್ಲ; ಮತ್ತು ನಾವು ಸೊಂಟದೆತ್ತರದ ನೀರಿನಲ್ಲಿ ನಿಂತು ನೋಡಿದಾಗ, ನದಿಯ ನೀರಿನ ಹರವು ಗಾಬರಿಗೊಳಿಸುವಂತಿತ್ತಲ್ಲದೆ, ಅದರ ರಭಸ ನಮ್ಮನ್ನು ಜೋಲಿ ಹೊಡೆಸುವಂತೆ ಕೂಡಾ ಇತ್ತು. ಈಜುಬಾರದ ನಾವು, ಈ ವಿವಿಕ್ತ ಪ್ರದೇಶವನ್ನಾರಿಸಿಕೊಂಡು, ಯಾಕೆ ನೀರಿಗೆ ಇಳಿದೆವೋ ನಮಗೇ ತಿಳಿಯದು. ಈಗ ಯೋಚಿಸಿದ್ದಲ್ಲಿ ನಾವು ದೊಡ್ಡ ಮೂರ್ಖರಾಗಿದ್ದೆವೆಂಬುದಂತೂ ನಿಜ. ಆ ಮಹಾಪ್ರವಾಹದ ಸೆಳೆತದಲ್ಲಿ ಸೊಂಟದುದ್ದ ನೀರಲ್ಲಿ ಪ್ರಸಾದರು, ಒಂದು ಮುಳುಗುಹಾಕಿ ನಿಂತರು; ನಾನೂ ಹಾಗೇ ಮಾಡಿದೆ. ಹೀಗೆ ಒಂದೆರಡು ನಿಮಿಷ ಕಳೆದಿರಬಹುದು. ಅದ್ಯಾವ ಮಾಯದಲ್ಲೋ ಏನೊ, ಸ್ನಾನಮಾಡುವುದಿಲ್ಲವೆಂದು ಘೋಷಿಸಿದ ಪ್ರಭುಶಂಕರ ಅವರಿಗೆ, ಸ್ನಾನ ಮಾಡುವ, ಅಲ್ಲ ಈಜುವ ಸ್ಫೂರ್ತಿಬಂದು, ನಮಗರಿಯದಂತೆ ನೀರಿಗೆ ಇಳಿದು, ನನಗಿಂತ ಒಂದು ಮೆಟ್ಟಿಲು ನೀರಲ್ಲಿ ಕೆಳಗೆ ಇಳಿದು ನನಗೆ ಒಂದೆರಡಡಿದೂರದಲ್ಲೆ ಈಜುವವರಂತೆ ಬಂದು ನೀರೊಳಗೆ ಮುಳುಗಿ ಮತ್ತೆ ಮೇಲೇಳಲು ಅಸಹಾಯಕರಾಗಿ ಪ್ರಯತ್ನಿಸುತ್ತಿದ್ದರು. ಅವರ ಅವಸ್ಥೆಯನ್ನು ನೋಡಿ ನಾನು ಹಿಂದೆಮುಂದೆ ಯೋಚಿಸದೆ ಅವರ ಕೈಯನ್ನು ಹಿಡಿದೆ. ಹಿಡಿದೆನೊ ಇಲ್ಲವೋ, ಅವರ ಕೈಸೆಳೆತಕ್ಕೆ ಒಳಗಾಗಿ ನಾನು ನಿಂತ ನೆಲೆಯಿಂದ ಕ್ಷಣಾರ್ಧದಲ್ಲಿ ಆ ನೀರಿನ ಸೆಳವಿಗೆ ಸಿಕ್ಕಿ, ಆ ಮಹಾ ಜಲರಾಶಿಯಲ್ಲಿ ದಿಗ್ಮೂಢರಾಗಿ ಮೇಲೆ ಕೆಳಗೆ ಮುಳುಗಿ-ಏಳಲು ಚಡಪಡಿಸುತ್ತ ನಾವಿಬ್ಬರೂ ಹೊಯ್ದಾಡುತ್ತಿದ್ದೆವು. ಅದೇನಾಯಿತೋ ಏನೊ ಯಾರೋ ಒಬ್ಬ ದೃಢಕಾಯನಾದ ಈಜುಗಾರ, ಮೆಟ್ಟಿಲ ಮೇಲೆ ನಮ್ಮಿಬ್ಬರನ್ನೂ ಎಳೆದು ದಡಕ್ಕೆ ತಂದ. ನಾವು ಅತ್ಯಂತ ದಿಗ್‌ಭ್ರಾಂತರಾಗಿ, ಪಿಳಿಪಿಳಿ ಕಣ್ಣು ಬಿಡುತ್ತಾ, ಕೂತೆವು. ಆತ ಯಾರು, ಎತ್ತ, ಈವರೆಗೆ ನಮಗೇನಾಯಿತು ಎಂಬುದು ನಮ್ಮ  ಅರಿವಿಗೆ ಬರುವ ಮೊದಲೇ, ‘ದೈವವಶಾತ್ ಉಳಿದು- ಕೊಂಡಿದ್ದೀರಿ, ಹೋಗಿ ಕಾಶಿ ವಿಶ್ವನಾಥನಿಗೆ ಪೂಜೆಮಾಡಿಸಿ, ಊರಿಗೆ ಹೋದ ಮೇಲೆ ನಾಲ್ಕು ಜನಕ್ಕೆ ಅನ್ನ ಹಾಕಿಸಿ’ ಎಂದು ಹೇಳಿದವನೇ, ಅದೆಲ್ಲೆ ಹೊರಟುಹೋದ.

ಆಮೇಲೆ ನಮಗೆ ತಿಳಿದದ್ದು ಇಷ್ಟು; ಪ್ರಭುಶಂಕರರು ನೀರಿಗೆ ಇಳಿಯುವ ಹಠಾತ್ ನಿರ್ಧಾರದ ನಂತರ, ಅವರು ತುಂಬ ಉತ್ಸಾಹದಿಂದ ಸ್ನಾನಕ್ಕೆ ಇಳಿದದ್ದನ್ನು ನೋಡುತ್ತಿದ್ದ ಆ ಮಹಿಳೆಯರಿಗೆ, ಬಹುಶಃ ಅವರು ಈ ಅವಸ್ಥೆಗೆ ಒಳಗಾಗಬಹುದೆಂಬುದರ ಕಲ್ಪನೆಯೇ ಇರಲಿಲ್ಲವಂತೆ. ಆದರೆ ಯಾವಾಗ ನಾನೂ ಅವರೂ ನೀರಿನ ಸೆಳವಿಗೆ ಸಿಕ್ಕು ಒದ್ದಾಡತೊಡಗಿದೆವೋ ಆಗ, ಅವರೂ, ಪ್ರಸಾದರೂ, ‘ಅಯ್ಯೋಬನ್ನಿ, ಯಾರಾದರೂ ಬನ್ನಿ’ ಎಂದು ಕನ್ನಡದಲ್ಲಿ ಕೂಗಿಕೊಂಡರಂತೆ. ಆದರೆ ದೂರದ ಬನಾರಸ್‌ನಲ್ಲಿ, ದಶಾಶ್ವಮೇಧ ಘಾಟಿನಲ್ಲಿ ನಮ್ಮ ಕನ್ನಡ ಮಾಧ್ಯಮ ಯಾವ ಪ್ರಯೊಜನಕ್ಕೂ ಬಾರದಾಯಿತು. ಇವರ ಧ್ವನಿಯೊಳಗಿನ ಗಾಬರಿಯನ್ನು ಕೇಳಿಸಿಕೊಂಡ ಒಬ್ಬ, ಹಿಂದಿಯಲ್ಲೇ ಇವರನ್ನು ಕೇಳಿದಾಗ, ಅವರು ನಮ್ಮ ಕಡೆ ಕೈ ತೋರಿಸಿ “ಆಯಿಯೇ, ಬಚಾಯಿಯೇ” ಎಂದು ಗಟ್ಟಿಯಾಗಿ ಹೇಳಿದರಂತೆ. ಅದನ್ನು ಅರಿತುಕೊಂಡ ಆ ಮಹಾನುಭಾವ ನೀರಿಗೆ ಧುಮುಕಿ ನಮ್ಮನ್ನು ದಡಕ್ಕೆ ಎಳೆದು ಹಾಕಿದ.

ಒಂದೇ ಕ್ಷಣ, ಕೇವಲ ಒಂದೇ ಕ್ಷಣದಲ್ಲಿ ನಾವಿಬ್ಬರೂ ಸಾವಿನ ಪ್ರವಾಹದಿಂದ, ಬದುಕಿನ ದಡಕ್ಕೆ ಬಂದಿದ್ದೆವು. ಇದನ್ನು ನೆನೆದಾಗ ಅನ್ನಿಸುತ್ತದೆ; ಸಾವಿಗೂ ಬದುಕಿಗೂ ಇರುವ ಅಂತರ ಕೇವಲ ಕೂದಲೆಳೆಯಷ್ಟು ಮಾತ್ರದ್ದು, ನಾವು ಬದುಕಿರುವುದೂ ಕೂಡಾ ಒಂದು ಆಕಸ್ಮಿಕವೋ ಏನೊ.

ಕಾನ್ವೋಕೇಷನ್-ಗುಬ್ಬಚ್ಚಿ

ಅದು ೧೯೬೦ನೆಯ ಇಸವಿ. ನಾನು ಮೈಸೂರು ವಿಶ್ವವಿದ್ಯಾಲಯದಿಂದ, ಆ ವರ್ಷದ ಕಾನ್ವೋಕೇಷನ್‌ನಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದ ದಿನ ನಡೆದ ಒಂದು ಸಾಮಾನ್ಯ ಸಂಗತಿ, ನನ್ನ ಪಾಲಿಗೆ ಅಸಾಮಾನ್ಯ ಅನುಭವಕ್ಕೆ ತೆರೆದ ಒಂದು ಕಿಂಡಿಯಾಗಿದೆ.

ಆಗಿನ ದಿನಗಳಲ್ಲಿ ಮೈಸೂರು ವಿಶ್ವವಿದ್ಯಾಲಯದ ಕಾನ್ವೋಕೇಷನ್‌ಗಳು ತುಂಬ ವರ್ಣರಂಜಿತವಾದ ಸಮಾರಂಭಗಳಾಗಿದ್ದವು. ಕಾನ್ವೋಕೇಷನ್‌ಗೆ ಅಂದಿನ ಮೈಸೂರು ವಿಶ್ವವಿದ್ಯಾಲಯದ ಛಾನ್ಸಲರ್ ಆಗಿದ್ದ ಮಹಾರಾಜರು ಬಿಳಿ ಕುದುರೆಗಳನ್ನು ಹೂಡಿದ ಸಾರೋಟಿನಲ್ಲಿ, ಶ್ವೇತಛತ್ರಿಯ ನೆರಳಿನ ಕೆಳಗೆ ಕುಳಿತು, ಸಮಸ್ತ ರಾಜವೈಭವದಿಂದ ಅರಮನೆಯಿಂದ ಹಿಡಿದು, ಪದವೀ ಪ್ರದಾನ ಸಮಾರಂಭ ನಡೆಯುವ ಕ್ರಾಫರ್ಡ್ ಹಾಲ್‌ವರೆಗೆ ಮೆರವಣಿಗೆ ಬರುವ ದೃಶ್ಯವನ್ನು ನೋಡಲು ಸಾವಿರಾರು ಜನ ಸೇರುತ್ತಿದ್ದರು. ೧೯೬೦ಕ್ಕೂ ಹಿಂದೆ, ಇನ್ನೂ ಸ್ವಾತಂತ್ರ  ಪೂರ್ವದ ದಿನಗಳಲ್ಲಿ ‘ಆಳುವ ಮಹಾಸ್ವಾಮಿ’ಗಳು ಹೀಗೆ ಮೆರವಣಿಗೆಯಲ್ಲಿ ದಯಮಾಡಿಸುವಾಗಿನ ಗತ್ತೇ ಬೇರೆಯದು. ಆದರೆ, ಸ್ವಾತಂತ್ರ  ಬಂದ ನಂತರದ ೧೯೬೦ರ ಈ ಕಾಲದಲ್ಲೂ, ಈ ಮೆರವಣಿಗೆ ಹಿಂದಿನದರಷ್ಟು ಡೌಲಾಗಿ ಇರದಿದ್ದರೂ, ಸಾಕಷ್ಟು ಆಕರ್ಷಣೀಯ- ವಾಗಿಯೇ ಇತ್ತು.

ನಾನೂ ಬಿಳಿಗೌನು, ಬಿಳಿಹುಡ್ ಧರಿಸಿ, ಕಾನ್ವೋಕೇಷನ್ ನಡೆಯಲಿದ್ದ ಕ್ರಾಫರ್ಡ್ ಭವನವನ್ನು ಪ್ರವೇಶಿಸಿದೆ. ಆಗ ಡಾಕ್ಟರೇಟ್ ಪದವಿ ಪಡೆಯುವವರ ಹೊರತು ಉಳಿದ ಪದವೀಧರರು ಕಪ್ಪು ಬಣ್ಣದ ಗೌನ್, ಹಾಗೂ ಕಪ್ಪು ಬಣ್ಣದ ಹುಡ್ ಧರಿಸಬೇಕಾಗಿತ್ತು. ಈ ಡಾಕ್ಟರೇಟ್ ಪದವೀಧರರಿಗೆ, ಮುಂದಿನ ಸಾಲನ್ನು ಕಾದಿರಿಸಲಾಗುತಿತ್ತು. ಆ ಮೊದಲ ಪಂಕ್ತಿಯ ಎದುರಿಗೆ, ಐದಾರು ಅಡಿಗಳ  ದೂರದಲ್ಲಿ ಎತ್ತರವಾದ  ವೇದಿಕೆಯ ಮೇಲೆ, ಕಾನ್ವೋಕೇಷನ್‌ಗೆ ಆಹ್ವಾನಿತರಾದ ಮುಖ್ಯ ಅತಿಥಿಗಳಿಗೆ, ಹಾಗೂ ಛಾನ್ಸಲರ್ ಆದ ಮಹಾರಾಜರಿಗೆ ಸಿಂಹಾಸನದಂಥ ಕುರ್ಚಿಗಳು, ಅದರ ಅಕ್ಕ ಪಕ್ಕದಲ್ಲಿ ಪ್ರತಿಷ್ಠಿತರಿಗೆ ಹಾಗೂ ಮಂತ್ರಿ ಮಹೋದಯರಿಗೆ, ಪೀಠಗಳು ಸಿದ್ಧವಾಗಿದ್ದವು. ನಿಗದಿತ ವೇಳೆಗೆ ಸರಿಯಾಗಿ ಅಂದಿನ ಛಾನ್ಸಲರ್ ಆದ

ಶ್ರೀ ಜಯಚಾಮರಾಜ ಒಡೆಯರ್ ಅವರು, ಅರಮನೆಯಿಂದ ಮೆರವಣಿಗೆ ಬಂದು, ಮುಖ್ಯ ಅತಿಥಿಗಳು ಹಾಗೂ ಮಂತ್ರಿ ಮಹೋದಯರೊಡನೆ, ಅರಮನೆಯ ಬ್ಯಾಂಡಿನ ಬಜಾವಣೆಯ ಹಿನ್ನೆಲೆಯಲ್ಲಿ ಕ್ರಾಫರ್ಡ್ ಭವನವನ್ನು ಗಜಗಂಭೀರವಾಗಿ ಪ್ರವೇಶಿಸಿ, ಕಾನ್ವೋಕೇಷನ್ ಸಮಾರಂಭದ ವೇದಿಕೆಯನ್ನು ನಿಧಾನವಾಗಿ ಹತ್ತಿ, ಸಿಂಹಾಸನ ಸದೃಶವಾದ ಕುರ್ಚಿಯ ಮೇಲೆ ಪೀಠಸ್ಥರಾದರು. ಇಡೀ ಕಿಕ್ಕಿರಿದ ಸಭಾಭವನ ನಿಶ್ಶಬ್ದವಾಯಿತು. ವೈಸ್‌ಛಾನ್ಸಲರ್ ಅವರ ಕೋರಿಕೆಯ ಮೇರೆಗೆ, ತಮ್ಮ ಬೃಹದ್ಗಾತ್ರದಿಂದ ವಿರಾಜಮಾನರಾದ ಮಹಾರಾಜರು ಎದ್ದುನಿಂತು ‘I declare the convocation open’ ಎಂದು, ಬಾವಿಯೊಳಗಿಂದ ಮಾತಾಡಿದರೆ ದಡದ ಮೇಲಿದ್ದವರಿಗೆ ಹೇಗೆ ಕೇಳುತ್ತದೋ ಅಂಥ ಸ್ವರದಿಂದ ಘೋಷಿಸಿದರು. ಹಾಗೆ ಘೋಷಿಸಿ ಮತ್ತೆ ಸಿಂಹಾಸನಸದೃಶವಾದ ಪೀಠದ ತುಂಬ ಕೂತರು. ಮತ್ತೆ ಉಪಕುಲಪತಿಗಳ ಸ್ವಾಗತ, ಪದವಿಗಳ ವಿವರ, ಮತ್ತೆ ಛಾನ್ಸಲರ್ ಅವರಿಂದ ಪದವಿ ವಿತರಣೆ ಘೋಷಣೆ ಇವು ಮುಗಿದು ಅಂದಿನ ಮುಖ್ಯ ಅತಿಥಿಗಳ ಉಪದೇಶ ಭಾಷಣ ಪ್ರಾರಂಭವಾಯಿತು.

ಈ ಮೊದಲೆ, ನನ್ನ ಕರೆ ಬಂದಾಗ, ನಾನು ವೇದಿಕೆಯ ಮೇಲೆ ಹೋಗಿ, ಪದವೀಪತ್ರವನ್ನು ಸ್ವೀಕರಿಸಿ, ಕೆಳಕ್ಕೆ ಬಂದು ವೇದಿಕೆಯ ಕೆಳಗಿನ ಮೊದಲ ಸಾಲಿನಲ್ಲಿ ಕೂತು, ಮುಖ್ಯ ಅತಿಥಿಗಳ ‘ಕಾನ್ವೋಕೇಷನ್ ಅಡ್ರೆಸ್’ನ್ನು ಕೇಳುತ್ತಿದ್ದೆ, ಹಾಗೆಯೆ ವೇದಿಕೆಯ ಮೇಲಿನವರ ಪ್ರತಿಕ್ರಿಯೆಗಳನ್ನು ಗಮನಿಸುತ್ತಾ ಇದ್ದೆ. ನಾನು ನೋಡುತ್ತಾ ಇದ್ದಂತೆ, ಆ ವೇದಿಕೆಯ ಮೇಲಿನ ವಿಸ್ತಾರದ ಅವಕಾಶದಲ್ಲಿ ನಾಲ್ಕಾರು ಗುಬ್ಬಚ್ಚಿಗಳು ಅತ್ತಿಂದ ಇತ್ತ, ಇತ್ತಿಂದ ಅತ್ತ ಹಾರಾಡುತ್ತ ಚಿಲಿಪಿಲಿ ಸದ್ದು ಮಾಡುತ್ತಿದ್ದವು. ಆ ಸಭಾಭವನದಲ್ಲಿ ನಡೆಯುತ್ತಿದ್ದ ಸಮಾರಂಭ ಮತ್ತು ಅದರ ಗಾಂಭೀರ್ಯತೆ ಯಾವುದನ್ನೂ ಅವು ಲೆಕ್ಕಕ್ಕೆ ತೆಗೆದುಕೊಂಡಂತೆ ತೋರಲಿಲ್ಲ. ನೋಡುತ್ತೇನೆ, ಒಂದು ಗುಬ್ಬಚ್ಚಿ, ಗೂಡು ಕಟ್ಟಿಕೊಳ್ಳಲೆಂದು ಅದೆಲ್ಲಿಂದಲೋ ಬೊಗಸೆಗಾತ್ರದ ಹುಲ್ಲಿನ ಕಂತೆಯೊಂದನ್ನು ಕಚ್ಚಿಕೊಂಡು ವೇದಿಕೆಯ ಮೇಲಿನ ವಿಸ್ತಾರದಲ್ಲಿ ಹಾರುತ್ತಿದೆ. ವೇದಿಕೆಯ ಮೇಲೆ ಅಂದಿನ ಮುಖ್ಯ ಅತಿಥಿಗಳು, ಅಂದಿನ ಪದವೀ ಪ್ರದಾನ ಸಮಾರಂಭದ ಮಹತ್ವ, ನಾಳಿನ ರಾಷ್ಟ್ರದ ಜವಾಬ್ದಾರಿಯುತವಾದ ಪ್ರಜೆಗಳಾಗುವ ಇಂದಿನ ಪದವೀಧರರು ಕಟ್ಟಿಕೊಳ್ಳಬೇಕಾದ ಕನಸು, ಇಟ್ಟುಕೊಳ್ಳಬೇಕಾದ ಆದರ್ಶ ಇತ್ಯಾದಿಗಳನ್ನು ಕುರಿತು, ಅವರ ಒಂದೊಂದು ಮಾತಿಗೂ ಸುರಿಯುವ ಚಪ್ಪಾಳೆಗಳ ಮಧ್ಯೆ ಉಜ್ವಲವಾದ ಉಪದೇಶ ಭಾಷಣವನ್ನು ಮಾಡುತ್ತಿದ್ದಾರೆ. ಈ ಹಂತದಲ್ಲಿ ತನ್ನ ಬಾಯಲ್ಲಿ ಹುಲ್ಲಿನ ಕಂತೆಯನ್ನು ಕಚ್ಚಿಕೊಂಡು ಗೂಡುಕಟ್ಟುವ ಚಿಂತೆಯಿಂದ ಆ ವೇದಿಕೆಯ ಮೇಲಿನ ಅಂತರದಲ್ಲಿ ಹಾರುತ್ತಿದ್ದ ಆ ಗುಬ್ಬಚ್ಚಿ ತಟ್ಟನೆ ಆ ಹುಲ್ಲಿನಕಂತೆಯನ್ನು ತನ್ನ ಬಾಯಿಂದ ಕೆಳಕ್ಕೆ ಬೀಳಿಸಿತು, ಅಥವಾ ಆ ಹುಲ್ಲಿನ ಕಂತೆ ಅದರ ಬಾಯ ಹಿಡಿತ ತಪ್ಪಿ ಜಾರಿತು. ಸುಮಾರು ಇಪ್ಪತ್ತು-ಇಪ್ಪತ್ತೈದು ಅಡಿಗಳೆತ್ತರದಿಂದ, ಹೀಗೆ ಜಾರಿದ ಆ ಹುಲ್ಲಿನ ಕಂತೆ ನಿಧಾನಕ್ಕೆ ಇಳಿಯುತ್ತಾ ಸಿಂಹಾಸನಸ್ಥರಾಗಿ ಕೂತಿದ್ದ ಕುಲಾಧಿಪತಿ ಮಹಾರಾಜರ ತಲೆಯಮೇಲೆ ರಾರಾಜಿಸುತ್ತಿದ್ದ ಜರಿಪೇಟದ ಮೇಲೆ ಬಿತ್ತು. ಕೂಡಲೇ ಅವರ ಹಿಂದೆ ನಿಂತಿದ್ದ ಅಂಗರಕ್ಷಕ ಅಧಿಕಾರಿ, ಸ್ವಲ್ಪ ಗಲಿಬಿಲಿಗೊಂಡು, ಅವರ ಪೇಟದ ಮೇಲಿಂದ ಪಕ್ಕಕ್ಕೆ ಉರುಳಿ, ಅವರ ಹೆಗಲಿಗೆ ತಾಗಿ, ಅವರ ಲಂಬೋದರವನ್ನಾವರಿಸಿದ್ದ ಕೋಟಿನ ಮುಂಭಾಗಕ್ಕೆ ತಗುಲಿಕೊಂಡ ಆ ಹುಲ್ಲಿನ ಕಂತೆಯನ್ನು ಕೂಡಲೇ ಕೈಯಿಂದ ಎತ್ತಿ ಹಿಂದಕ್ಕೆ ಹಾಕಿದನು. ಕ್ಷಣ ಮಾತ್ರದಲ್ಲಿ ನಡೆದ ಈ ಘಟನೆಯನ್ನು ನೋಡಿ ನನಗೆ ಬೇರೊಂದು ದರ್ಶನವೆ ಆದಂತಾಯಿತು. ಎಷ್ಟು ಧೈರ್ಯ ಆ ಗುಬ್ಬಚ್ಚಿಗೆ! ಪದವೀಪ್ರದಾನ ಸಮಾರಂಭದ ಮಹತ್ವ, ಅದರ ಮುಖ್ಯಮೂರ್ತಿಯಾಗಿ ರಾರಾಜಿಸುತ್ತಿದ್ದ ಮಹಾರಾಜರು,  ಸಮಾರಂಭದ ಮುಖ್ಯ ಅತಿಥಿಗಳು ಹಾಗೂ ಮಂತ್ರಿ ಮಹೋದಯರ ಅಂತಸ್ತು ಎಲ್ಲರನ್ನೂ, ಎಲ್ಲವನ್ನೂ ತೃಣ ಸಮಾನವನ್ನಾಗಿ ಎಣಿಸಿದ ಅಥವಾ ಇಡೀ ಸಮಾರಂಭದ ಮಹತ್ವವನ್ನೆ ತಿರಸ್ಕಾರದಿಂದ ಕಂಡ ಒಂದು ಗುಬ್ಬಚ್ಚಿಯ ನಡವಳಿಕೆ ನನ್ನನ್ನು ದಂಗುಬಡಿಸಿತು.

ಸಮಾರಂಭ ಮುಗಿದ ಮೇಲೆ ಸಭಾ ಭವನದಿಂದ ಹೊರಕ್ಕೆ ಬಂದೆ. ಕ್ರಾಫರ್ಡ್ ಹಾಲ್ ಹೊರಗಿನ ಬಯಲಲ್ಲಿ ನಾಲ್ಕಾರು ಮರಗಳು ಮೈ ತುಂಬ ಹಳದಿಹೂವನ್ನು ಅರಳಿಸಿಕೊಂಡು ನಿಂತಿದ್ದವು. ಮೇಲಿನ ಆಕಾಶದಲ್ಲಿ ಬೆಳ್ಳಗಿನ ಮೋಡಗಳು ತೇಲುತಿದ್ದವು. ನನಗನ್ನಿಸಿತು: ಈ ಸಂದರ್ಭದಲ್ಲಿ ನಾನು ಇಲ್ಲಿರಲಿ ಇಲ್ಲದಿರಲಿ ಈ ಮರದಲ್ಲಿ ಹೂವುಗಳು ಅರಳುತ್ತವೆ; ಆಕಾಶದಲ್ಲಿ ಮೋಡ ಕಟ್ಟುತ್ತದೆ; ಗಾಳಿ ಬೀಸುತ್ತದೆ; ಮಳೆ ಬೀಳುತ್ತದೆ;  ಅನತಿದೂರದಲ್ಲಿ ಕಾಣುವ ಕುಕ್ಕನಹಳ್ಳಿಯ ಕೆರೆಯಲ್ಲಿ ತೆರೆಗಳು ದಡಕ್ಕೆ ಬಡಿಯುತ್ತವೆ. ಸಮಾರಂಭ ನಡೆದು ಖಾಲಿಯಾದ ಕ್ರಾಫರ್ಡ್ ಹಾಲ್‌ನ ವೇದಿಕೆಯ ಮೇಲಿನ ಅಂತರದಲ್ಲಿ ಎಂದಿನಂತೆ ಗುಬ್ಬಿಗಳ ಹಾರಾಟ, ಚಿಲಿಪಿಲಿ ನಡೆದೇ ಇರುತ್ತದೆ. ನಾವು ಇದ್ದೇವೆ ಅಥವಾ ಇಲ್ಲ ಎಂಬ ಕಾರಣಕ್ಕಾಗಿ, ಯಾವುದೂ ನಡೆಯುವುದೂ ಬಿಡುವುದೂ ವ್ಯತ್ಯಾಸವಾಗುವುದಿಲ್ಲ. ನಾವು ಯಾವುದನ್ನು ಮಹತ್ವದ್ದು ಹಾಗೂ ಮೌಲಿಕವಾದದ್ದು  ಎಂದು ಅಂದುಕೊಳ್ಳುತ್ತೇವೋ ಅದನ್ನು ಒಂದು ಗುಬ್ಬಚ್ಚಿ ಕೂಡಾ ಲಕ್ಷ ಕ್ಕೆ ತೆಗೆದುಕೊಳ್ಳುವುದಿಲ್ಲ. ಆದರೂ ನಾವು, ನಮ್ಮ ಕೀರ್ತಿ-ಪ್ರತಿಷ್ಠೆ-ಸಾಧನೆ-ಸಿದ್ಧಿ ಇತ್ಯಾದಿಯಾಗಿ ಕೊಚ್ಚಿಕೊಳ್ಳುತ್ತೇವಲ್ಲ ಇದಕ್ಕೆ ಏನರ್ಥ?ನಮಗೂ ಈ ಜಗತ್ತಿಗೂ ಗಾಢವಾದ ಸಂಬಂಧವಿದೆ ಅಂದುಕೊಳ್ಳುತ್ತೇವಲ್ಲ ಅದು ಎಂಥ ಸಂಬಂಧ?

ಕರಗದ ಅನುಭವ

ಬೆಂಗಳೂರು ಕರಗ ತುಂಬ ಪ್ರಾಚೀನವೂ, ಪ್ರಸಿದ್ಧವೂ ಆದ ಒಂದು ಉತ್ಸವ. ಬಹುಕಾಲದಿಂದ ಮೈಸೂರಿನಲ್ಲಿದ್ದ ನಾನು ಅದರ ಬಗ್ಗೆ ಸಾಕಷ್ಟು ಕೇಳಿದ್ದೆ; ನೋಡಿರಲಿಲ್ಲ. ಬೆಂಗಳೂರಿಗೆ ನಾನು ಬಂದು ನೆಲೆನಿಂತು ಮೂರು ವರ್ಷಗಳನ್ನು ದಾಟಿದ್ದೆ. ಬಹುಶಃ ೧೯೭೦ರ ಅವಧಿಯಲ್ಲಿ, ಆ ವರ್ಷ ಕರಗವನ್ನು ನೋಡಬೇಕೆಂದು ನಾನು, ನನ್ನ ಸಹೋದ್ಯೋಗಿಯಾದ ಉತ್ಸಾಹೀ ಸಂಶೋಧಕ ಡಾ. ಚಿದಾನಂದಮೂರ್ತಿ, ಡಾ.ಕೆ.ಮರುಳಸಿದ್ದಪ್ಪ ಮತ್ತು ಇನ್ನಿಬ್ಬರು ಗೆಳೆಯರು, ನಿರ್ಧರಿಸಿದೆವು. ಬೆಂಗಳೂರಿನ ಕರಗ ನಡೆಯುವುದು ಒಳ್ಳೆಯ ತುಂಬು ಹುಣ್ಣಿಮೆಯ ಒಂದು ರಾತ್ರಿ. ನಾವು ಆ ದಿನ ಊಟ ಮುಗಿಸಿಕೊಂಡು, ರಾತ್ರಿ ಹತ್ತು ಗಂಟೆಯನಂತರ ಕರಗ ಹೊರಡುವ ಧರ್ಮರಾಯನಗುಡಿಯ ಬಳಿಗೆ ಬಂದೆವು. ಗುಡಿಯ ಸುತ್ತಣ ಆವರಣ ಜನಸಂದಣಿಯಿಂದ ಗಿಜಿಗುಟ್ಟುತಿತ್ತು. ದೂರ ದೂರದ ಹಳ್ಳಿಗಳಿಂದ ಬಂದ ಜನ ಮತ್ತು ನಮ್ಮಂಥ ಉತ್ಸವಪ್ರಿಯ ನಾಗರಿಕರು ದೇವಸ್ಥಾನದ ಸುತ್ತ, ಹಾಗೂ ದೇವಸ್ಥಾನದಿಂದ ಕರಗ ಹೊರಟು ನಡೆಯುವ ಕಬ್ಬನ್‌ಪೇಟೆಯ ಬೀದಿಯ ಎರಡೂ ಬದಿಗೆ ತುಂಬಿ ತುಳುಕುತಿದ್ದರು. ಪೇಟೆಯಬೀದಿಯ ದೊಡ್ಡ ದೊಡ್ಡ ಅಂಗಡಿಗಳೆಲ್ಲಾ ಬಾಯ್ಮುಚ್ಚಿಕೊಂಡ ಆ ಹೊತ್ತಿನಲ್ಲಿ, ಹಳ್ಳಿಯ ಜಾತ್ರೆಗಳಲ್ಲಿ ಕಂಡುಬರುವಂಥಾ ಅಂಗಡಿಗಳು, ಆ ಕರಗದ ಇರುಳಿನಲ್ಲಿ ಚಟುವಟಿಕೆಯಲ್ಲಿ ತೊಡಗಿದ್ದವು. ಪುರಿಯನ್ನು ರಾಸಿ ಹಾಕಿಕೊಂಡವರು; ಬೆಂಡು-ಬತ್ತಾಸಿನ ತಳ್ಳುಗಾಡಿಗಳು; ಟೇಪು-ಬಳೆ ರಿಬ್ಬನ್ನು-ಬೆಲೂನು ಮಾರುವವರು; ಕಡಲೆಕಾಯಿ ಮಾರುವವರು; ಪೀಪಿಗಳನ್ನು ಊದಿ ಗಮನ ಸೆಳೆಯುವ ವ್ಯಾಪಾರಿಗಳು; ಹಣ್ಣು-ಕಾಯಿ-ಹೂವುಗಳನ್ನು ದೇವಸ್ಥಾನದ ಸುತ್ತ ಇರಿಸಿಕೊಂಡು ಮಾರುವವರು-ಇತ್ಯಾದಿಗಳಿಂದ ಬೆಂಗಳೂರಿನ ನಾಗರಿಕ ನೋಟ ಹಿಂದಕ್ಕೆ ಸರಿದು, ಗ್ರಾಮೀಣ ಪರಿಸರವೊಂದು ತನ್ನ ಆಧಿಪತ್ಯವನ್ನು ಸ್ಥಾಪಿಸಿದಂತಿತ್ತು. ಇದೆಲ್ಲದರ ಮೇಲೆ ಏನೋ ಮೋಡಿಯನ್ನು ಹಾಕಿದಂತೆ, ಹುಣ್ಣಿಮೆಯ ಬೆಳುದಿಂಗಳು ಬೇರೆ. ನನಗೆ ತಿಳಿದಮಟ್ಟಿಗೆ, ಈ ಕರಗದ ದಿನ ಮತ್ತು ಬಸವನಗುಡಿಯ ಸುತ್ತ ವರ್ಷಕ್ಕೆ ಒಮ್ಮೆ ಸೇರುವ ಕಳ್ಳೆಕಾಯಿ ಪರಿಸೆಯ ದಿನ, ಇಡೀ ಬೆಂಗಳೂರು ತನ್ನ ಪ್ರಪ್ರಾಚೀನ ಗ್ರಾಮೀಣತೆಯ ಕನಸಿಗೆ ಮರಳುತ್ತದೆ- ಅದೂ ಸ್ವಲ್ಪ ಕಾಲ ಮಾತ್ರ.

ಇಂಥ ಪರಿಸರದಲ್ಲಿ ನಾವೂ ಕಡಲೆಕಾಯಿ ತಿನ್ನುತ್ತಾ, ಲುಂಗಿ ಪಂಚೆ ಉಟ್ಟು, ಕೊರಳಿಗೆ ಮಫ್ಲರು ಸುತ್ತಿ, ಕರಗದ ಆ ಬೆಳದಿಂಗಳಿನ ಇರುಳಿನಲ್ಲಿ ಜನಜಂಗುಳಿಯ ನಡುವೆ ಅಡ್ಡಾಡುತ್ತಾ, ಕರಗವನ್ನು ತೀರಾ ಹತ್ತಿರದಿಂದ ವೀಕ್ಷಿಸುತ್ತ ತಕ್ಕ ಸ್ಥಳವೊಂದರ ಸಂಶೋಧನೆಯಲ್ಲಿ ತೊಡಗಿದೆವು. ಕರಗ ಹಾದುಹೋಗುವ ಕಬ್ಬನ್‌ಪೇಟೆಯಿಕ್ಕಟ್ಟಿನ ಬೀದಿಯ ಎರಡೂ ಬದಿಗೆ ನಿಲ್ಲಲು ಕೂಡಾ ಸ್ಥಳವಿಲ್ಲದಂತೆ ಜಮಾಯಿಸಿದ ಜನದ ನಡುವೆ ನಿಂತರೆ, ಕೇವಲ ನಿಂತೇ ಇರಬೇಕಾದಂಥ ಸ್ಥಿತಿಗೆ ಹೆದರಿ, ಎಲ್ಲಾದರೂ ಕೂತು ನಿಧಾನವಾಗಿ ವೀಕ್ಷಿಸಲು ಸರಿಯಾದ ಸ್ಥಳ ದೊರೆತೀತೆ ಎಂದು ಅತ್ತ ಇತ್ತ ನೋಡುವಾಗ, ಕೆಲವರು ದೊಡ್ಡದೊಂದು ಏಣಿಯನ್ನು ತಂದು ಅತ್ತಿತ್ತ ನಿಂತ ಮನೆಗಳ ತಾರಸಿಯಮೇಲೆ ಜನರನ್ನು ಹತ್ತಿಸುತ್ತಿರುವುದನ್ನು ಕಂಡೆವು. ಹೌದಲ್ಲ! ಈ ಏಣಿಯಮೇಲಿಂದ ಹೋಗಿ ಮನೆಯ ತಾರಸಿಯ ಮೇಲೆ ಕೂತರೆ ಕೆಳಗೆ ಬರುವ ಕರಗವನ್ನು, ಅದರ ಹಿಂದೆ ಮುಂದೆ ಬರುವ ಉತ್ಸವಗಳನ್ನು ಸಲೀಸಾಗಿ ನೋಡಬಹುದಲ್ಲ-ಅನ್ನಿಸಿತು. ಹೋಗಿ ವಿಚಾರಿಸಿದರೆ ಏಣಿ ಹತ್ತಿಹೋಗಲು ಒಬ್ಬೊಬ್ಬರಿಗೆ ಕೇವಲ ನಾಲ್ಕೇ ಆಣೆ (ಇಪ್ಪತ್ತೈದು ಪೈಸೆ) ಎಂಬುದು  ತಿಳಿಯಿತು. ಸರಿ, ನಾವೂ ಹಿಂದೆ ಮುಂದೆ ನೋಡದೆ, ನಾಲ್ಕು ನಾಲ್ಕು ಆಣೆ ತೆತ್ತು, ಸರಸರನೆ ಏಣಿಯ ಮೆಟ್ಟಿಲ ಮೇಲೆ ಹತ್ತಿ ಯಾರದೋ ಮನೆಯ ತಾರಸಿಯನ್ನು ತಲುಪಿದೆವು. ಅದೊಂದು ವಿಸ್ತಾರವಾದ ಮೇಲುಪ್ಪರಿಗೆ; ಅದರ ತುಂಬ ಸಾಕಷ್ಟು ಕಸ, ಧೂಳು, ಆದರೂ ಅಲ್ಲೇ ಕೂತು, ನಾವು ಕೊಂಡುತಂದಿದ್ದ ‘ಕಳ್ಳೇಪುರಿ’ ಹಾಗೂ ಕಡಲೆಕಾಯನ್ನು ಮೆಲ್ಲುತ್ತಾ, ಮೇಲಿನ ಆಕಾಶದಲ್ಲಿ ರಾರಾಜಿಸುವ ಪೂರ್ಣಚಂದ್ರನನ್ನೂ, ಆ ಚಂದ್ರಮಂಡಲದಿಂದ ಸುರಿಯುವ ಬೆಳದಿಂಗಳಲ್ಲಿ ಬೆಪ್ಪುತಕ್ಕಡಿಗಳಂತೆ ಮಂಕಾಗಿ ಪಿಳಿಪಿಳಿ ಕಣ್ಣು ಬಿಡುವ ನಗರದ ವಿದ್ಯುದ್ದೀಪಗಳನ್ನೂ, ಕೆಳಗಿನ ಬೀದಿಯಲ್ಲಿ ಗೋಚರಿಸುವ ಜನಸಂದಣಿಯ ಚಲನವಲನವನ್ನೂ ನೋಡುತ್ತಾ ಕುಳಿತೆವು. ಆ ತಾರಸಿಯ ಅಂಚಿಗೆ ಎರಡಡಿಯ ಸಣ್ಣಗೋಡೆಯೊಂದು ಇದ್ದುದರಿಂದ ಯಾವುದೇ ಆತಂಕವಿಲ್ಲದೆ, ಬರುವ ಕರಗದ ದಾರಿ ಕಾಯ್ದುಕೊಂಡು, ಅದೂ ಇದೂ ಹರಟೆ ಹೊಡೆಯುತ್ತಾ ಕೂತೆವು.

ನಟ್ಟಡುರಾತ್ರಿ ಹನ್ನೆರಡು ಗಂಟೆಯಾಯಿತು. ಧರ್ಮರಾಯನ ಗುಡಿಯ ಬಳಿ ವಾದ್ಯಗಳು ಭೋರ್ಗರೆದವು. ಹಾಗೆಯೇ ಗುಡಿಯೊಳಗಿನ ಪೂಜೆಯ ಸಂಭ್ರಮದ ಘೋಷವೂ ಕೇಳತೊಡಗಿತು. ಬೀದಿಯಿಕ್ಕೆಲಗಳಲ್ಲಿ ನಿಂತ ಜನ ‘ಕರಗ ಬಂತು, ಕರಗ ಬಂತು’ ಅನ್ನುತ್ತಾ ತುದಿಗಾಲಲ್ಲಿ ನಿಲ್ಲತೊಡಗಿದರು. ಆದರೂ ಕರಗ ಬರಲೇ ಇಲ್ಲ. ಸಾಧ್ಯವಾದರೆ ಮುಂದಿನ ವರ್ಷದ ವೇಳೆಗೆ ಈ ಕರಗವನ್ನು ಕುರಿತು ಒಂದು ಶಾಸ್ತ್ರೀಯವಾದ ಅಧ್ಯಯನವನ್ನೇಕೆ ಮಾಡಬಾರದು; ಈ ಕರಗ  ನಿಜವಾಗಿಯೂ ಸಂಶೋಧನೆಗೆ ಒಂದು ಒಳ್ಳೆಯ ವಸ್ತು-ಎಂದು ಡಾ.ಮೂರ್ತಿಯವರು ಅದನ್ನು ಕುರಿತು ಯೋಜನೆಗಳನ್ನು ಮಂಡಿಸುತ್ತ ಇರುವ ವೇಳೆಗೆ, ಧರ್ಮರಾಯನ ಗುಡಿಯ ಗಂಟೆ ಬಡಿದು, ಗಡಿಯಾರದ ಮುಳ್ಳು ಮುಂದಕ್ಕೆ ಚಲಿಸುತ್ತಿತ್ತು. ಕರಗದ ಮುಂದೆ ಬರುವ ಅನೇಕ ದೇವರುಗಳ ಮೆರವಣಿಗೆ, ಅವುಗಳ ಮುಂದೆ ವಾದ್ಯಗಳ ಗಡಾವಣೆ, ಕುಣಿತ ಇತ್ಯಾದಿಗಳಿಂದ ಜನರ ಚಟುವಟಿಕೆ ತೀವ್ರತರವಾಯಿತು. ನಾವು ನಮ್ಮ ಚರ್ಚೆಯನ್ನು ಬರಖಾಸ್ತು ಮಾಡಿ, ತಾರಸಿಯಂಚಿಗೆ ಬಂದು ಕೆಳಕ್ಕೆ ನೋಡಿದೆವು. ಬಹುಕಾಲದಿಂದ ಕಾದ ಸಾಕ್ಷಾತ್ಕಾರ ಸನ್ನಿಹಿತವಾಯಿತೆಂದು, ಕುತೂಹಲ-ಸಂಭ್ರಮಗಳಿಂದ ಅತ್ತ ಕಡೆಗೆ ಕಣ್ಣಾದ ನಮಗೆ ನಿಜವಾದ ಕರಗ ಪ್ರತ್ಯಕ್ಷವಾಯಿತು. ಸೀರೆಉಟ್ಟು ಕರಗವನ್ನು ಹೊತ್ತು, ಅಂದರೆ ಗೋಪುರಾಕಾರದ ಹೂವಿನ ಅಲಂಕರಣದಿಂದ ತಲೆಗೆ ಮುಸುಕಿಟ್ಟು, ಕೈಯಲ್ಲಿ ಕತ್ತಿಹಿಡಿದು ದಡದಡನೆ ಓಡುವ ಆ ವ್ಯಕ್ತಿಯೇ ಕರಗದ ಪ್ರತೀಕ. ಕರಗ ಹೊತ್ತವನ ಮುಂದೆ ಅಲ್ಲಲ್ಲಿ ವೀರಕುಮಾರರ ಅಲಗು ಸೇವೆ. ಕರಗ ಹೊತ್ತ ಮನುಷ್ಯನ-ಅಲ್ಲ- ದೇವತೆಯ ನಡಿಗೆ ಕೇವಲ ನಡಿಗೆ ಅಲ್ಲ; ಅದೊಂದು ಬಗೆಯ ಓಟ. ಆ ಓಟದ ಹಿಂದೆ ಹೋ ಎಂದು ಕೂಗಿ ಓಡುವ ಜನ. ಹೀಗೆ ಓಡುವವರ ಸಂದಣಿಯ ನಡುವೆ, ಹೂವಿನ ಗೋಪುರ. ನಾವು ನೋಡನೋಡುತ್ತ ಇದ್ದ ಹಾಗೆ, ಕರಗ ಓಡುತ್ತಾ ಓಡುತ್ತಾ ಆ ಬೀದಿಯುದ್ದಕ್ಕೂ ಸಾಗಿ, ಬೀದಿಯಂಚಿನ ತಿರುವಿನಲ್ಲಿ ಕಾಣದಾಯಿತು. ಆ ಒಂದು ಕ್ಷಣದ ಆ ನೋಟ, ಆ ಸಂಭ್ರಮ ಮತ್ತು ಆ ಸಂಭ್ರಮವೇ ಚಲಿಸುತ್ತಾ ಚಲಿಸುತ್ತಾ ಬೀದಿಯುದ್ದಕ್ಕೂ ಸಾಗಿ ಮಾಯವಾದ ರೀತಿ-ಒಂದು ಅಪೂರ್ವವಾದ ಅನುಭವವಾಗಿ ಪರಿಣಮಿಸಿತು. ಅದು ಹಾಗೆ ಹಾದು ಹೀಗೆ ಮಾಯವಾದ ನಂತರ ನಾವು ನಮ್ಮ ವಾಸ್ತವಸ್ಥಿತಿಗೆ ಮರಳಿದಾಗ ರಾತ್ರಿ ಎರಡು ಗಂಟೆ. ಆದರೂ ಕೆಳಗಿನ ಬೀದಿಯುದ್ದಕ್ಕೂ ಬರುವ-ಹೋಗುವ ಜನದ ಸಂದಣಿಯೇನೂ ಕಡಿಮೆಯಾಗಿರಲಿಲ್ಲ. ಆದರೆ ಆ ಜನ, ಮತ್ತೆ ಎಲ್ಲೆಲ್ಲಿ ಕರಗ ಹೋಗುವುದೊ ಅಲ್ಲೆಲ್ಲ ಅದನ್ನು ನೋಡುವ ಮಾತನಾಡುತ್ತಾ ಸಂದಿಗೊಂದಿಗಳನ್ನು ತೂರಿ ಹೋಗತೊಡಗಿದರು. ಈ ತಾರಸಿಯ ಮೇಲೆ ಕೂತ ನಾವು, ಹಾಗೂ ನಮ್ಮಂತೆ ಬಂದ ಇನ್ನೂ ಹಲವರು, ನಾವು ಇಲ್ಲಿ ಕೂತು ಮಾಡುವುದೇನು, ಕೆಳಗೆ ಹೋಗುವುದೆ ಉಳಿದಿರುವ ದಾರಿ ಅಂದುಕೊಂಡೆವು. ಆದರೆ ಹಾಗೆ ಹೋಗಬೇಕಾದರೆ ತಾರಸಿಯಿಂದ ಇಳಿಯಬೇಕು; ಇಳಿಯಬೇಕಾದರೆ ಏಣಿಗಳು ಬೇಕು; ಏಣಿಗಳಿದ್ದರೆ ತಾನೆ ನಾವು ಇಳಿಯುವುದು? ಆದರೆ ಅಲ್ಲಿ ಏಣಿಗಳೇ ಇಲ್ಲ  ಎಂಬುದು ಕೂಡಲೇ ನಮಗೆ ಅರಿವಿಗೆ ಬಂದಿತು. ಯಾಕೆಂದರೆ ನಮ್ಮಿಂದ  ನಾಲ್ಕಾಣೆ ವಸೂಲ್ಮಾಡಿಕೊಂಡು ಮೇಲಕ್ಕೆ ಹತ್ತಿಸಿದ ಏಣಿಯವರು, ನಮ್ಮನ್ನು ಕೆಳಕ್ಕೆ ಇಳಿಸುವ ಮಾತನ್ನೇನೂ ಹೇಳಿರಲಿಲ್ಲ. ಅಷ್ಟೇ ಅಲ್ಲ, ಹತ್ತುವಾಗ ನಮಗೆ ಕೇವಲ ಮೇಲಕ್ಕೆ ಹೋಗುವ ಬಗೆಗೆ ಕಾತರವಿತ್ತೇ ವಿನಾ, ಕೆಳಕ್ಕೆ ಇಳಿದು ಬರುವುದು ಹೇಗೆಂಬ ಯೋಚನೆಯೇ ನಮ್ಮನ್ನು ಕಾಡಿರಲಿಲ್ಲ. ಹೀಗಾಗಿ ಆ ಬಗ್ಗೆ ಏಣಿಯವರನ್ನು ನಾವು ಕೇಳಿಯೂ ಇರಲಿಲ್ಲ. ಈಗ ನೋಡುತ್ತೇವೆ, ಯಾವ ಏಣಿಯವರೂ ನಮ್ಮನ್ನು ಇಳಿಸಲು ಅಲ್ಲಿರಲಿಲ್ಲ; ಅವರೆಲ್ಲ ಹೀಗೆ ನಾಲ್ಕಾಣೆ ತೆಗೆದುಕೊಂಡು ಉದ್ದಕ್ಕೂ ಅವರಿವರ ಮನೆಯ ತಾರಸಿಯ ಮೇಲೆ ಜನರನ್ನು ಹತ್ತಿಸುವ ಕಾರ್ಯವನ್ನು ಮಾತ್ರ ವಹಿಸಿಕೊಂಡಿದ್ದಂತೆ ತೋರಿತು. ಈಗ ನಾವು, ನಮ್ಮ ಜತೆಗೆ ತಾರಸಿಯ ಮೇಲೆ ಇದ್ದ ಇನ್ನೂ ಇಪ್ಪತ್ತರಷ್ಟು ಜನಕ್ಕೆ ಇಳಿಯುವ ಚಿಂತೆ ಆವರಿಸಿತ್ತು.

ಈ ಆಪತ್ಕಾಲದಲ್ಲಿ ಎಲ್ಲಿಲ್ಲದ ಐಕ್ಯತೆಯೊಂದು ನಮ್ಮನ್ನೆಲ್ಲಾ ಒಂದುಗೂಡಿಸಿತು. ನಮ್ಮನ್ನು ಮೇಲಕ್ಕೆ ಹತ್ತಿಸಿ ಅತಂತ್ರರನ್ನಾಗಿ ಮಾಡಿದ ಏಣಿಯವರನ್ನು ಶಪಿಸುತ್ತಾ, ನಾವೆಲ್ಲಾ ಕೆಳಗಿಳಿದು ನಮ್ಮ ನಮ್ಮ ಗೂಡುಗಳನ್ನು ಸೇರಿಕೊಳ್ಳುವುದು ಹೇಗೆ ಎಂದು ಯೋಚಿಸತೊಡಗಿದೆವು. ಕೆಲವರು ಸಿಟ್ಟಿನಿಂದ, ಕೆಳಗೆ ಓಡಾಡುವವರನ್ನು ಕುರಿತು ಕೂಗತೊಡಗಿದರು. ಆದರೆ ಅವರ‍್ಯಾರೂ ಏಣಿಯವರಾಗಿರಲಿಲ್ಲ. ಕೆಲವರು ಹಾಗೂ ಹೀಗೂ ಆ ತಾರಸಿಯ ಉದ್ದಗಲಕ್ಕೂ ಸಂಶೋಧನೆ ನಡೆಸಿ, ತಾರಸಿಯಿಂದ ಕೆಳಗಿನ  ಮನೆಗೆ ಇಳಿಯುವ ಬಾಗಿಲಿರುವುದನ್ನು ಪತ್ತೆಮಾಡಿ, ಅದನ್ನು ದಢದಢನೆ ಬಡಿಯ ತೊಡಗಿದರು. ಬೇರೆಯ ಸಮಯವಾಗಿದ್ದರೆ ಮೇಲಿನಿಂದ ಹೀಗೆ ಬಾಗಿಲು ಬಡಿಯುವವರು ಕಳ್ಳರೋ, ದರೋಡೆಕೋರರೋ ಎಂದು ಮನೆಯೊಳಗಿನ ನಿವಾಸಿಗಳು ಭಾವಿಸಬಹುದಾಗಿತ್ತು. ಆದರೆ ಮನೆಯೊಳಗಿನ ಮಂದಿಗೆ, ಕರಗದ ದರ್ಶನಕ್ಕಾಗಿ ತಾರಸಿ ಹತ್ತಿದವರ ಪಾಡು ಅರ್ಥವಾಯಿತು. ಯಾಕೆಂದರೆ, ಕರಗದ ದಿನ ಯಾರೋ ಇರಿಸಿದ ಏಣಿಯ ಮೂಲಕ ಜನ ಹೀಗೆ ತಾರಸಿಗೆ ಹತ್ತಿ ಕೂರುತ್ತಾರೆಂಬುದು ಅವರಿಗೆ ಹಲವಾರು ವರ್ಷಗಳ ಅನುಭವದಿಂದ ತಿಳಿದ ಸಂಗತಿ. ಹೀಗಾಗಿ ಮೇಲಿನವರ ಪಾಡನ್ನು ಅರ್ಥಮಾಡಿಕೊಂಡು ಅವರು, ತಾರಸಿಯ ಮೇಲಿನ ಕಿರುಬಾಗಿಲೊಂದನ್ನು ತೆರೆದರು. ತೆರೆದರೋ ಇಲ್ಲವೋ, ಬಿಲಗಳನ್ನು ತೂರುವ ಇಲಿಗಳಂತೆ, ನಾವೆಲ್ಲಾ ಆ ಬಾಗಿಲ ಮೂಲಕ ಮನೆಯೊಳಕ್ಕೆ ಮೆಟ್ಟಿಲುಗಳ ಮೂಲಕ ಇಳಿದು, ಆ ಮನೆಯ ನಡುಮನೆ ಪಡುಸಾಲೆಗಳನ್ನು ಹಾದು ಅವರು ತೆರೆದ ಬೀದಿಬಾಗಿಲ ಮೂಲಕ ಹೊರಕ್ಕೆ ಬಂದೆವು. ಒಂದು ವೇಳೆ, ಆ ಮನೆಯವರು ಹೀಗೆ ತಾರಸಿಯ ಮೇಲಿನ ಬಾಗಿಲನ್ನು ತೆಗೆಯದೆ ಇದ್ದರೆ, ಅಥವಾ ಮೇಲಿಂದ ಮನೆಯೊಳಕ್ಕೆ ಪ್ರವೇಶಿಸುವ ಬಾಗಿಲೇ ಇರದಿದ್ದರೆ, ನಮ್ಮ ಪಾಡು ಏನಾಗಿರಬಹುದಾಗಿತ್ತು ಎಂದು ಊಹಿಸಿಕೊಳ್ಳುತ್ತ ಅಂದಿನ ಕರಗದ ಅನುಭವವನ್ನು ಹೊತ್ತು ನಡುರಾತ್ರಿ ಮೀರಿದ ಹೊತ್ತಿನಲ್ಲಿ ಆಟೋ ಒಂದನ್ನು ಹಿಡಿದು ಮನೆಗೆ ತಲುಪಿದೆವು.

ಹಿರಿಯೂರಿನಲ್ಲಿ ಒಂದುದಿನ

೧೯೭೯ರ ನವೆಂಬರ್ ತಿಂಗಳು, ಒಂದು ದಿನ, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಹಿರಿಯೂರಿನಲ್ಲಿ  ಒಂದು ದಿನದ ಸಾಹಿತ್ಯ ಸಮ್ಮೇಳನವನ್ನು ವ್ಯವಸ್ಥೆಗೊಳಿಸಿತ್ತು. ನಾನು ಒಂದು ಗೋಷ್ಠಿಯ ಅಧ್ಯಕ್ಷತೆ  ವಹಿಸಿಬೇಕಾಯಿತು. ನನ್ನ ಹಲವು ಗೆಳೆಯರ ಜತೆಗೆ ಬಸ್ಸಿನಲ್ಲಿ ಹಿರಿಯೂರಿಗೆ ಹೋದೆ. ಬೆಳಿಗ್ಗೆ ಹತ್ತೂವರೆ ಗಂಟೆಗೆ ಉದ್ಘಾಟನೆಯಾಗಬೇಕಾಗಿದ್ದ ಸಮ್ಮೇಳನ ಮಾನ್ಯ ಮಂತ್ರಿಗಳು ತೀರಾ ತಡವಾಗಿ ಬಂದಿದ್ದರಿಂದ, ಹನ್ನೆರಡೂವರೆಗೆ ಪ್ರಾರಂಭವಾಯಿತು. ಉದ್ಘಾಟನೆಯ  ನಂತರ ಬೆಳಗಿನ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಮಧ್ಯಾಹ್ನ ಎರಡು ಗಂಟೆಯಾಗಿತ್ತು.

ಈ  ಕಾರ‍್ಯಕ್ರಮದ ನಂತರ, ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ನಮಗೆಲ್ಲಾ ಊಟ. ನಾನು ಡಾ. ಹಾ. ಮಾ. ನಾಯಕರು, ಪ್ರೊ. ಎ. ಆರ್. ಮಿತ್ರ, ಬಿ. ವಿ. ವೈಕುಂಠರಾಜು, ಬರಗೂರು ರಾಮಚಂದ್ರಪ್ಪ ಮತ್ತೆ ಇನ್ನೂ ಹಲವರು ಒಂದು ಪಂಕ್ತಿಯಲ್ಲಿ ಕೂತೆವು. ನಮ್ಮ ಎದುರಿನ ಪಂಕ್ತಿಯಲ್ಲಿ ಮಾನ್ಯ ಮಂತ್ರಿ ಕೆ. ಎಚ್.ರಂಗನಾಥ ಮತ್ತು ಆ ಊರಿನ ರಾಜಕಾರಣಿಗಳು, ಮತ್ತಿತರ ಕಾರ್ಯಕರ್ತರು ಕೂತಿದ್ದರು. ಎದುರು ಪಂಕ್ತಿಯಲ್ಲಿ ಕೂತ ಮಾನ್ಯ ಮಂತ್ರಿಗಳು, ನನ್ನ ಪಕ್ಕದಲ್ಲಿ ಕೂತಿದ್ದ ಡಾ.ಹಾ.ಮಾ. ನಾಯಕರನ್ನು ಉದ್ದೇಶಿಸಿ, ಅವರ ಯೋಗಕ್ಷೇಮ ಇತ್ಯಾದಿಗಳನ್ನು ವಿಚಾರಿಸಿದರು. ಥಟ್ಟನೆ ನನ್ನ ಇನ್ನೊಂದು ಪಕ್ಕದಲ್ಲಿ ಕೂತ ವೈಕುಂಠರಾಜು ಅವರು ಮಂತ್ರಿಗಳನ್ನು ಕುರಿತು, ನನ್ನನ್ನು ತೋರಿಸಿ “ಸಾರ್, ಇವರು ಗೊತ್ತಲ್ಲ? ಶಿವರುದ್ರಪ್ಪನವರು ಒಳ್ಳೆ ಲೇಖಕರು” ಅಂದರು. ಮಾನ್ಯ ಮಂತ್ರಿಗಳು “ಯಾರು? ಶಿವರುದ್ರಪ್ಪನವರು? ನನಗೆ ಪರಿಚಯವಿಲ್ಲ. ಅಂದ ಹಾಗೆ ಅವರೇನು ಬರೆಯುತ್ತಾರೆ?” ಅಂದರು. ನಾನು ಅವರ ಹಾಗೂ ಅವರಂಥ ಮಂತ್ರಿಗಳ ಹತ್ತಿರಕ್ಕೆ ಹೋದವನೇ ಅಲ್ಲ. ನಾನು ನಸುನಕ್ಕು ಸುಮ್ಮನಾದೆ. “ಅವರು ಏನು ಕೆಲಸ ಮಾಡುತ್ತಾರೆ?” ಎಂದು ಕೇಳಿದರು, ಮಂತ್ರಿಗಳು ವೈಕುಂಠರಾಜು ಅವರನ್ನು. “ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿದ್ದಾರೆ, ನಮ್ಮ ಹಾ.ಮಾ. ನಾಯಕರು ಮೈಸೂರಿನಲ್ಲಿ ಹೇಗೋ ಹಾಗೆ” ಎಂದರು ವೈಕುಂಠರಾಜು. “ಹಾಗಾದರೆ ನೀವು ಬೆಂಗಳೂರಿನಲ್ಲೇ ಇರುತ್ತೀರಾ. ಬನ್ನಿ ಒಂದು ಸಲ ನನ್ನ ಕಛೇರಿಗೆ” ಎಂದರು ನನ್ನನ್ನು ಕುರಿತು ಮಂತ್ರಿಗಳು. ನಾನು ಅವರಿಗೆ ಏನು ಹೇಳಬೇಕೋ ತಿಳಿಯದೆ, ಊಟ ಮುಂದುವರಿಸಿದೆ.

ಊಟವಾದ ಮೇಲೆ, ನನ್ನ ಗೆಳೆಯ ಅ. ರಾ. ಮಿತ್ರ “ನೋಡಿ ಸಾರ್ ಎಂಥ ಪೆಚ್ಚಾಯಿತು ನಮಗೆಲ್ಲಾ ಈ ದಿನ. ನೀವೂ ನಾಯಕರ ಹಾಗೆ ಇಂಥ ಮಂತ್ರಿಗಳ ಪರಿಚಯ ಮಾಡಿಕೋಬೇಕು. ಇಂಥ ಪೊಸಿಷನ್‌ದಲ್ಲಿ ಇದ್ದೂ ನೀವು ಮಂತ್ರಿಗಳಿಗೆ ಗೊತ್ತಿಲ್ಲ ಅಂದರೆ ಏನರ್ಥ ಸಾರ್” ಅಂದರು. ಮಿತ್ರ ಅವರು ಹಿಂದೆ ನನ್ನ ವಿದ್ಯಾರ್ಥಿಯಾಗಿದ್ದವರು. ಮಂತ್ರಿಗಳಿಗೆ ಎಂತೆಂಥವರೋ ಗೊತ್ತಿರುವಾಗ, ತಮ್ಮ ‘ಗುರು’ಗಳು ಹೀಗೆ ಅಜ್ಞಾತರಾಗಿ ಉಳಿದರಲ್ಲ ಎಂಬ ಅಭಿಮಾನಪೂರ್ವಕವಾದ ಕೊರಗು ಅವರದು. ಅವರ ಮಾತು ಕೇಳಿ ನನಗೆ ನಗು ಬಂತು. ಹೇಳಿದೆ “ಸರೀಪ್ಪ ಸರಿ. ನಾನು ಮಂತ್ರಿಗಳಿಗೆ ಗೊತ್ತಿಲ್ಲ ಅನ್ನೋದಂತು ಖಂಡಿತ ನಿಜ; ಆದರೆ ನಾನು ಅವರಿಗೆ ಗೊತ್ತಿಲ್ಲದೆ ಇರೋದರಿಂದ ಏನು ಮಹಾ ನಷ್ಟವಾದದ್ದು? ಸುಮ್ಮ ಸುಮ್ಮನೆ ಹೋಗಿ ಪರಿಚಯ ಮಾಡಿಕೊಳ್ಳೋ ಅಗತ್ಯವೇನಿದೆ ಹೇಳಿ? ಈಗಾಗಲೇ ಸಾಕಷ್ಟು ವಯಸ್ಸಾಯಿತು. ಇದುವರೆಗೂ ನಾನು ಮಾಡದೆ ಇರೋ ಕೆಲಸವನ್ನು ಈಗ ಯಾಕೆ ಪ್ರಾರಂಭಿಸಲಿ. ಇದಕ್ಕೆ ನೀವ್ಯಾಕೆ ಕೊರಗುತ್ತೀರಿ, ಬಿಡಿ”-ಎಂದೆ.

ಅವತ್ತೆ ಸಂಜೆ ಐದು ಗಂಟೆಗೆ ಅದೇ ಸಮ್ಮೇಳನದ ಕೊನೆಯ ಗೋಷ್ಠಿ. ಆದರ ಹೆಸರು ‘ಕನ್ನಡ ಆಡಳಿತ ಭಾಷಾಗೋಷ್ಠಿ’. ಈ ಗೋಷ್ಠಿಯ ಅಧ್ಯಕ್ಷರು ಡಾ. ಹಾ. ಮಾ. ನಾಯಕರು. ಆ ಗೋಷ್ಠಿಯ ಮುಖ್ಯ ಅತಿಥಿಗಳಾಗಿದ್ದವರು, ಅದೇ ಸುತ್ತಿನ ಶಾಸಕರಾಗಿದ್ದು, ಆನಂತರ ಮಂತ್ರಿಗಳಾದ, ಮಹನೀಯರೊಬ್ಬರು. ಈ ಮಾನ್ಯ ಮಂತ್ರಿ ಮಹನೀಯರು, ಎದ್ದು ಧ್ವನಿವರ್ಧಕದ ಮುಂದೆ ನಿಂತರು. ನಿಂತು ಟೋಪಿ ಸರಿಪಡಿಸಿಕೊಂಡು, ಅಧ್ಯಕ್ಷರನ್ನು ಉದ್ದೇಶಿಸಿ, “ಸನ್ಮಾನ್ಯ ಹಂಪ ನಾಗರಾಜಯ್ಯನವರೇ…” ಎಂದು ಪ್ರಾರಂಭಿಸಿದರು. ಜನರೂ ಹಾಗೂ ವೇದಿಕೆಯ ಮೇಲಿದ್ದ ಅಧ್ಯಕ್ಷರೂ ಕಕ್ಕಾಬಿಕ್ಕಿಯಾದರು. ಯಾಕೆಂದರೆ, ಅತಿಥಿಗಳು ಸಂಬೋಧಿಸಿದ ಹೆಸರಿನವರು ಅಲ್ಲಿ ಇರಲಿಲ್ಲ; ಇದ್ದವರು ಹಾ.ಮಾ.ನಾಯಕರು. ನಾನು ನನ್ನ ಪಕ್ಕದಲ್ಲಿ ಕೂತ, ಅ.ರಾ.ಮಿತ್ರ ಅವರ ಮುಖವನ್ನು ಪ್ರಶ್ನಾರ್ಥಕವಾಗಿ ನೋಡಿದೆ!

***

ಹಂಪನಾ ಅಂದಕೂಡಲೆ ನನಗೆ ಬೇರೊಂದು ಘಟನೆಯ ನೆನಪು ಥಟ್ಟನೆ ಬಿಚ್ಚಿಕೊಂಡಿತು: ಹಿರಿಯೂರಿನ ಈ ಸಮಾರಂಭಕ್ಕೆ ಹಿಂದಿನ ತಿಂಗಳು, ಅಂದರೆ ಅಕ್ಟೋಬರ್ (೧೯೭೯)ಮೂವತ್ತೊಂದನೆ ತಾರೀಖು. ಬೆಳಿಗ್ಗೆ, ಕನ್ನಡ ಸಾಹಿತ್ಯಪರಿಷತ್ತು ‘ಕನ್ನಡ-ಕನ್ನಡ ನಿಘಂಟು’ವಿನ ನಾಲ್ಕನೆಯ ಸಂಪುಟದ ಬಿಡುಗಡೆಯ ಸಮಾರಂಭವನ್ನೇರ್ಪಡಿಸಿತ್ತು, ಬೆಂಗಳೂರಿನಲ್ಲಿ. ಅಂದಿನ ಮಾನ್ಯ ಮುಖ್ಯ ಮಂತ್ರಿಗಳಾದ ದೇವರಾಜ ಅರಸು ಅವರು, ನಿಘಂಟುವನ್ನು ಬಿಡುಗಡೆ ಮಾಡಲು ಒಪ್ಪಿ ಬಂದಿದ್ದರು. ಅದೊಂದು ದೊಡ್ಡ ಸಮಾರಂಭ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹಂಪ ನಾಗರಾಜಯ್ಯನವರಿಂದ ಸ್ವಾಗತ ಭಾಷಣ. ಅವರು ತಮ್ಮ ಸ್ವಾಗತ ಭಾಷಣದಲ್ಲಿ ಕನ್ನಡ ನಾಡು-ನುಡಿಗಳ ಪ್ರಾಚೀನತೆ, ಹಾಗೂ ಮಹತ್ವಗಳನ್ನು ಪ್ರಸ್ತಾಪಿಸುತ್ತಾ “ಒಂದೂವರೆ ಸಾವಿರ ವರ್ಷಗಳಷ್ಟು ಸುದೀರ್ಘವಾದ ಈ ಕನ್ನಡ ಸಾಹಿತ್ಯ ಪರಂಪರೆ, ಪಂಪನಿಂದ ಹಂಪನಾವರೆಗೆ ಹರಿದು ಬಂದಿದೆ” ಎಂದು ಘೋಷಿಸಿಬಿಟ್ಟರು. ಇದುವರೆಗೂ ಸಾಮಾನ್ಯವಾಗಿ “ಪಂಪನಿಂದ ಕುವೆಂಪುವರೆವಿಗೆ” ಎಂದು ಆಗಾಗ ಭಾಷಣಕಾರರು ಹೇಳುತ್ತಿದ್ದರು; ಆದರೆ ಇದೀಗ ಪರಿಷದಧ್ಯಕ್ಷರಾದ ಹಂಪನಾ ಅವರು, “ಪಂಪನಿಂದ ಹಂಪನಾವರೆಗೆ” ಎಂದು ಹೇಳುವುದರ ಮೂಲಕ ತಮ್ಮನ್ನು ತಾವೇ ಕನ್ನಡ ಸಾಹಿತ್ಯದ ಸೀಮಾಪುರುಷರ ಸ್ಥಾನದಲ್ಲಿ ಕೂರಿಸಿ ಕೊಂಡುಬಿಟ್ಟರು. ಇದೀಗ ಧೈರ್ಯ ಅಂದರೆ ಧೈರ್ಯ. ‘ದೇವತೆಗಳೂ ನಡೆದಾಡಲು ಅಂಜುವ ದಾರಿಯಲ್ಲಿ ಮೂರ್ಖರು ನುಗ್ಗುತ್ತಾರೆ’ ಎಂಬ ಇಂಗ್ಲಿಷ್ ಗಾದೆಯೊಂದು ನನಗೆ ನೆನಪಾಯಿತು. ಅಂತೂ ಇಂತಹ ಸ್ವಯಂಘೋಷಿತ ಸೀಮಾಪುರುಷರು ಉದ್ಭವಿಸುತ್ತಲೇ ಇರುತ್ತಾರೆ ನಮ್ಮ ಪರಿಸರದಲ್ಲಿ.

ಇದು ಇಲ್ಲಿಗೇ ಮುಗಿಯಲಿಲ್ಲ. ಅದೇ ನವಂಬರ್ ತಿಂಗಳ ಮೂರನೆ ವಾರದಲ್ಲಿ ಎಂದು ಕಾಣುತ್ತದೆ. ಕನ್ನಡ ಭಾಷಾಂತರ ಸಂಶೋಧನ ವಿಭಾಗದಲ್ಲಿ, ಅದೇ ತಾನೇ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಹಾ.ಮಾ.ನಾಯಕರಿಗೆ, ಮತ್ತು ಪರಿಷದಧ್ಯಕ್ಷರಾದ ಹಂಪ. ನಾಗರಾಜಯ್ಯನವರಿಗೆ ಒಂದು ಸನ್ಮಾನ ಸಮಾರಂಭ. ಆ ಸಭೆಗೆ ಹೋಗಿದ್ದವರೊಬ್ಬರು ನನಗೆ ಹೇಳಿದ ಸಂಗತಿ ಇದು. ಅಂದಿನ ಸನ್ಮಾನ ಸಭೆಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದ ಶ್ರೀ.ಜಿ. ನಾರಾಯಣ ಅವರೆ ಅಧ್ಯಕ್ಷರು. ಅವರು ಅದೂ ಇದೂ ಮಾತಾಡುತ್ತ ತಮ್ಮ ಅಧ್ಯಕ್ಷ ಭಾಷಣದ ಮಧ್ಯೆ ಹೇಳಿದರಂತೆ. “ಕೆಲವು ದಿನಗಳ ಹಿಂದೆ ನಿಘಂಟು ಬಿಡುಗಡೆಯ ಸಮಾರಂಭದಲ್ಲಿ ಮಾನ್ಯ ಹಂಪನಾ ಅವರು ಕನ್ನಡ ಸಾಹಿತ್ಯ ಪಂಪನಿಂದ ಹಂಪನಾವರೆಗೆ ಹರಿದು ಬಂದಿದೆ ಅಂತ ಹೇಳಿದರು. ಆದರೆ ನಾನು ಹೇಳುತ್ತೇನೆ ಕನ್ನಡ ಸಾಹಿತ್ಯ ಪಂಪನಿಂದ ಕೆಂಪನವರೆಗೆ ಹರಿದು ಬಂದಿದೆ ಎಂದು. ನಿಜವಾಗಿ ಕನ್ನಡ ಸಾಹಿತ್ಯ ತಲುಪಬೇಕಾದ್ದು ಕೆಂಪನಿಗೆ, ಆ ಕೆಂಪ ಯಾರು ಅನ್ನುತ್ತೀರೋ? ಅವನೆ ನಮ್ಮ ಹಳ್ಳಿಯ ಶ್ರೀಸಾಮಾನ್ಯ.” ಹಂಪನಾ ಅವರ “ಪಂಪನಿಂದ ಹಂಪನಾವರೆಗೆ” ಎಂಬ ಮಾತನ್ನು, ನಾರಾಯಣ ಅವರು “ಪಂಪನಿಂದ ಕೆಂಪನವರೆಗೆ” ಎಂದು ತಿರುಗಿಸಿಬಿಟ್ಟರು.

ಶ್ರೀ ಜಿ.ನಾರಾಯಣ ಮಾಡಿದ ಸಾಹಿತ್ಯ ಪರಿಷತ್ತಿನ ವ್ಯಾಪಕವಾದ ಕಾರ್ಯಗಳೆಲ್ಲವೂ ಮುಖ್ಯವಾಗಿ ಈ ಕೆಂಪನನ್ನು ಅಥವಾ ಹಳ್ಳಿಯ ಶ್ರೀಸಾಮಾನ್ಯನನ್ನು ಗುರಿಯಾಗಿರಿಸಿಕೊಂಡ ಸ್ವರೂಪದವುಗಳಾಗಿದ್ದವೆಂಬುದು ತುಂಬ ಮಹತ್ವದ ಸಂಗತಿಯಾಗಿದೆ.

ಸಾಯಿಬಾಬಾ ಮತ್ತು ನಾನು

೧೯೭೨ನೆಯ ಇಸವಿ ಎಂದು ಕಾಣುತ್ತದೆ ಕನ್ನಡ ಎಂ.ಎ. ವಿದ್ಯಾರ್ಥಿನಿ- ಯೊಬ್ಬಳು, ಪಾಠದ ಮಧ್ಯಂತರದ ವಿರಾಮದಲ್ಲಿ, ವಿಭಾಗದ ಮುಖ್ಯಸ್ಥನಾದ ನನ್ನನ್ನು ನೋಡಲು ನನ್ನ ಕೊಠಡಿಯೊಳಕ್ಕೆ ಬಂದಳು. ಅತ್ಯಂತ ಚಿಂತಾಕ್ರಾಂತವಾದ ಮುಖ; ಕಣ್ಣಲ್ಲಿ ಮಂಜು ಮಂಜಾಗಿ ತುಂಬಿಕೊಂಡ ನೀರು; ಏನನ್ನೋ ಹೇಳಲೆಂದು ಕಾತರವಾದ ಭಾವ. ನಾನು ಬಂದಾಕೆಯನ್ನು ಕುಳಿತುಕೊಳ್ಳಲು ಹೇಳಿದೆ. ನಾನು “ಯಾಕೆ ಹೀಗಿದೀರಿ? ಏನು ಸಮಾಚಾರ” ಎಂದೆ. ಆಕೆ “ಸಾರ್ ಒಂದು ವಿಷಯ ಹೇಳಬೇಕು ಅಂತ ಬಂದೆ. ಅದು ನನ್ನ ಸ್ವಂತದ್ದು. ನನಗೆ ಕೈಲಾಗುವಷ್ಟು ಸಹಾಯ ಮಾಡಬೇಕು” ಎಂದಳು. ನಾನು ಅದೇನು ವಿಷಯ ಹೇಳಿ ಎಂದೆ, ಆಕೆ ಹೇಳಿದಳು.

ವಿಷಯ ಇಷ್ಟು:  ಆಕೆ ವಿವಾಹಿತೆ. ಎರಡು ವರ್ಷದ ಮಗುವಿನ ತಾಯಿ. ಕನ್ನಡ ಎಂ. ಎ. ಓದಬೇಕೆಂಬ ಅದಮ್ಯವಾದ ಆಸೆ; ಜತೆಗೆ ಅದೂ ಇದೂ ಬರೆಯುವ ಹವ್ಯಾಸ. ಆಕೆಯ ಗಂಡ ಬೆಂಗಳೂರಿನ ಫ್ಯಾಕ್ಟರಿಯೊಂದರಲ್ಲಿ ಎಂಜಿನಿಯರ್. ಆತ ದಿನಾ ಕೆಲಸಕ್ಕೆ ಹೋಗಬೇಕು. ಈಕೆ ತಾನು ಕನ್ನಡ ಎಂ.ಎ.ಗೆ ಸೇರಬೇಕೆಂದು ಹಠ ಹಿಡಿದು, ಗಂಡನ ಮನ ಒಲಿಸಿ, ಎಂ.ಎ.ಗೆ ಸೇರಿ ಆಗಲೇ ಒಂದು ವರ್ಷವಾಗಿದೆ. ಮನೆಯಲ್ಲಿರುವ ಎರಡು ವರ್ಷದ ಗಂಡುಮಗುವನ್ನು, ಗಂಡ ಹೆಂಡಿರಿಬ್ಬರೂ ಹೀಗೆ ಮನೆಯಲ್ಲಿ ಇಲ್ಲದಾಗ ನೋಡಿಕೊಳ್ಳುವವರು ಯಾರು? ಆದರೆ ಬೇರೇನೂ ಕೆಲಸವಿಲ್ಲದ ಆಕೆಯ ತಮ್ಮ ತಾನು ನೋಡಿಕೊಳ್ಳುವುದಾಗಿ ಆಶ್ವಾಸನೆ ಕೊಟ್ಟು ಮನೆಯಲ್ಲಿ ಜತೆಗೆ ಇದ್ದ. ದಿನಾ ಹತ್ತು ಗಂಟೆಗೆ ಗಂಡ ತನ್ನ ಉದ್ಯೋಗಕ್ಕೆ ಹೋದನಂತರ ಈಕೆ ಮಗುವನ್ನು ತನ್ನ ತಮ್ಮನ ರಕ್ಷಣೆಗೆ ಒಪ್ಪಿಸಿ, ಕಾಲೇಜಿಗೆ ಬಂದು, ನಾಲ್ಕು ಗಂಟೆವೇಳೆಗೆ ತರಗತಿಗಳನ್ನು ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದಳು. ಹೀಗೆ ಆಗಲೇ ಒಂದು ವರ್ಷ ಕಳೆದಿದೆ; ಇನ್ನು ಆರೇಳು ತಿಂಗಳು ಕಳೆದು ಪರೀಕ್ಷೆ ತೆಗೆದುಕೊಂಡರೆ ಒಂದು ದಡ ಕಂಡ ಹಾಗೆ. ಒಂದು ದಿನ ಏನಾಗಿದೆ ಎಂದರೆ, ಎಂದಿನಂತೆ ಮಗುವಿಗೆ ಊಟ ಮಾಡಿಸಿ, ತಮ್ಮನ ವಶಕ್ಕೆ ಕೊಟ್ಟು ಟಾಟ ಹೇಳಿ ಸೆಂಟ್ರಲ್ ಕಾಲೇಜಿಗೆ ಬಂದಿದ್ದಾಳೆ. ಈಕೆಯ ತಮ್ಮ ಮಗುವನ್ನು ಮಲಗಿಸಿಕೊಂಡು, ತಾನೂ ಹಾಸಿಗೆ ಬಿಡಿಸಿಕೊಂಡು ಕತೆಯ ಪುಸ್ತಕವನ್ನು ಓದುತ್ತಾ ಮಲಗಿದ್ದಾನೆ. ಯಾವಾಗಲೋ ಅವನಿಗೂ ನಿದ್ದೆ ಕವಿದುಕೊಂಡಿದೆ. ಅವನ ಜತೆಗೆ ಮಲಗಿದ್ದ ಎರಡುವರ್ಷದ ಪುಟ್ಟ ಮಗು, ನಡುವೆಯೇ ಎದ್ದು, ಅರೆತೆರೆದ ಬಾಗಿಲನ್ನು ತಳ್ಳಿಕೊಂಡು ಹೊರಗೆ ಬಂದಿದೆ. ಹಾಗೆ ಬಂದದ್ದು ಬೀದಿಗೆ ಬಂತೋ, ಏನೋ, ಸ್ವಲ್ಪ ಹೊತ್ತಿನ ಮೇಲೆ ತಮ್ಮ ಎದ್ದು ನೋಡುತ್ತಾನೆ ಪಕ್ಕದಲ್ಲಿ ಮಗು ಇಲ್ಲ; ಬಾಗಿಲು ಪೂರಾ ತೆರೆದಿದೆ. ಗಾಬರಿಯಿಂದ ಹೊರಗೆ ಬಂದು ಕೂಗಿದ. ಮಗುವಿನ ಸದ್ದಿಲ್ಲ. ಪಕ್ಕದ ಮನೆಯವರನ್ನು ಕೇಳಿದ. ಅವರು ಗೊತ್ತಿಲ್ಲ ಅಂದರು. ಬೀದಿಯುದ್ದಕ್ಕೂ ಹುಡುಕಿದ, ಮಗುವಿನ ಸುಳಿವಿಲ್ಲ. ಅದೇನು ಅಂಥ ವಾಹನ ಸಂಚಾರದ ಬೀದಿಯೇನಲ್ಲ. ಏನು ಮಾಡಲೂ ತೋಚದೆ, ಗಾಬರಿಯಿಂದ ತಲೆ ಮೇಲೆ ಕೈ ಹೊತ್ತುಕೊಂಡು ಕೂತ. ಅವತ್ತು ಕೊನೆಯ ಪಿರಿಯಡ್ ತರಗತಿ ಇರಲಿಲ್ಲವಾದ ಕಾರಣ, ಆಕೆ ಮೂರು ಗಂಟೆಯ ವೇಳೆಗೇ ಮನೆಗೆ ಬಂದಳು. ಬಂದು ನೋಡುತ್ತಾಳೆ, ಎಂದಿನಂತೆ ತೊದಲು ಮಾತನ್ನಾಡುತ್ತಾ ಬಾಗಿಲಿಗೆ ಬಂದೊಡನೇ ತಬ್ಬಿಕೊಳ್ಳುತ್ತಿದ್ದ ಮಗುವಿಲ್ಲ; ತನ್ನ ತಮ್ಮ ಮಂಕಾಗಿ ಗರಬಡಿದವನಂತೆ ಕೂತಿದ್ದಾನೆ. ಅವನನ್ನು ಅಲ್ಲಾಡಿಸಿ ವಿಚಾರಿಸಿದ ಮೇಲೆ ಸಂಗತಿ ತಿಳಿಯಿತು. ಮಗು ಮನೆಯಿಂದ ಕಾಣೆಯಾಗಿ ಆಗಲೇ ಸುಮಾರು ಒಂದು ಗಂಟೆಯಾಯಿತೆಂದು, ತಮ್ಮ ಹೇಳಿದ. ಆಕೆ ಮರುಳಮರಿದವಳಂತೆ ಬೀದಿ ಬೀದಿಗಳನ್ನು ಮನೆ ಮನೆಗಳನ್ನು ಅಲೆದಳು; ಮಗುವಿನ ಸುದ್ದಿ ಇಲ್ಲ. ಸಂಜೆಯ ವೇಳೆಗೆ ಫ್ಯಾಕ್ಟರಿಯಿಂದ ಬಂದ ಗಂಡ, ವಿಷಯ ತಿಳಿದು ಗಾಬರಿಯಾದ. ಗಂಡಹೆಂಡಿರಿಬ್ಬರೂ ಹತ್ತಿರದ ಪೋಲೀಸ್ ಸ್ಟೇಷನ್ನಿಗೆ ಹೋಗಿ ದೂರು ದಾಖಲು ಮಾಡಿದರು; ಅಂದು ಸಂಜೆ ರೇಡಿಯೋ ಮೂಲಕ ಸುದ್ದಿಯನ್ನು ಪ್ರಸಾರ ಮಾಡಿಸಿದರು; ಮಗುವಿನ ಇತ್ತೀಚಿನ ಭಾವಚಿತ್ರದ ಸಹಿತ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟಮಾಡಿಸಿದರು. ಸ್ಕೂಟರಿನ ಮೇಲೆ  ಬೆಂಗಳೂರಿನ ಬೀದಿ ಬೀದಿಗಳನ್ನೆಲ್ಲಾ ಸುತ್ತಿದರು. ಕಂಡ ಕಂಡ ಮಕ್ಕಳ ಮುಖವನ್ನೆಲ್ಲಾ  ನೋಡಿದರು. ನಿಷ್ಕರುಣವಾದ ರಾತ್ರಿ ಕವಿಯಿತು. ಆಕೆಗೆ ಅನ್ನ ಸೇರಲಿಲ್ಲ, ನಿದ್ದೆ ಬರಲಿಲ್ಲ ಆಕೆಯ ಕಣ್ಣೀರಿನಿಂದ ತಲೆದಿಂಬು ನೆನಯಿತು. ತನ್ನ ಮಗು ಎಲ್ಲಿ ಹೋಗಿರಬಹುದು, ಏನಾಗಿರಬಹುದು, ಅದನ್ನು ಯಾರು ಒಯ್ದಿರಬಹುದು, ಒಯ್ದು ಏನುಮಾಡಿರಬಹುದು, ಆ ಮಗು ಹೇಗೆ ಪರಿತಪಿಸುತ್ತಿರಬಹುದು-ಇತ್ಯಾದಿ ಯೋಚನೆಗಳು ಆಕೆಯನ್ನು ಜರ್ಝರಿತಳನ್ನಾಗಿ ಮಾಡಿದವು. ಮಗುವಿನ ಹುಡುಕಾಟದಲ್ಲಿ ಎರಡುವಾರ ಕಳೆಯಿತು, ಕಾಲೇಜು ಎಲ್ಲೋ ತರಗೆಲೆಯಂತೆ ಹಾರಿಹೋಯಿತು. ಆಕೆ ಕಂಡ ಕಂಡ ದೇವರಿಗೆ ಕೈ ಮುಗಿದಳು: ತಿರುಪತಿಗೆ ಹರಕೆ ಕಟ್ಟಿದಳು; ಬೀದಿ ಬೀದಿಗೆ ಕೂತ ನಾಲ್ಕಾಣೆ ಜೋಯಿಸರಿಂದ ಹಿಡಿದು, ದೊಡ್ಡ ದೊಡ್ಡ ಹೋಟೆಲುಗಳಲ್ಲಿ ಠಿಕಾಣಿ ಹೂಡುವ ಹಸ್ತಸಾಮುದ್ರಿಕರನ್ನು ಕಂಡು ಮಗುವಿನ ಅಸ್ತಿತ್ವವನ್ನು ಪ್ರಶ್ನೆ ಮಾಡಿದಳು. ಒಂದಷ್ಟು ದಿನ ಅನಾಥಾಲಯಗಳನ್ನೂ, ಆಸ್ಪತ್ರೆಗಳನ್ನೂ ನೋಡಿ ಬಂದಳು. ಏನಾದರೂ ಮಗುವಿನ ಪತ್ತೆಯಾಗಲಿಲ್ಲ. ಕಡೆಗೆ ಆಕೆಗೆ ಒಂದು ಯೋಚನೆ ಹೊಳೆಯಿತು. ಭಗವಾನ್ ಸತ್ಯಸಾಯಿಬಾಬಾ ಅವರು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿದ್ದಾರೆ; ಅವರು ಮಹಾ ಪವಾಡಪುರುಷರು, ಅವರು ಯಾರ‍್ಯಾರಿಗೋ ಏನೇನೋ ಮಾಡಿದ್ದಾರಂತೆ. ಅವರ ಬಳಿಗೆ ಹೋಗಿ ತನ್ನ ಕಷ್ಟವನ್ನು ಹೇಳಿಕೊಂಡರೆ, ತನ್ನ ಮಗು ಎಲ್ಲಿದೆ ಎಂಬುದನ್ನು ಅವರು ಹೇಳಬಹುದು. ಅವರು ತಮ್ಮ ಪವಾಡ ಸಾಮರ್ಥ್ಯದಿಂದ ತನ್ನ ಮಗುವನ್ನು ತನಗೆ ದೊರಕಿಸಿಕೊಟ್ಟರೂ ಕೊಡಬಹುದು, ತಾನು ಅವರನ್ನೇಕೆ ಹೋಗಿ ಕಾಣಬಾರದು, ಅನ್ನಿಸಿತು ಆಕೆಗೆ. ಆದರೆ ಅವರನ್ನು ಹೋಗಿ ಕಾಣುವುದು ಹೇಗೆ? ಬೆಂಗಳೂರು ವಿಶ್ವವಿದ್ಯಾಲಯದ ವೈಸ್ ಛಾನ್ಸಲರ್ ಆಗಿ, ನಿವೃತ್ತರಾಗಿ ಬಾಬಾ ಅವರ ಆಶ್ರಮದಲ್ಲೇ ಇರುವ ಪ್ರೊ. ವಿ.ಕೃ.ಗೋಕಾಕರನ್ನು ಕಾಣಬೇಕು; ಗೋಕಾಕರು ಸಾಯಿಬಾಬಾ ಅವರ ಅಚ್ಚುಮೆಚ್ಚಿನ ಭಕ್ತರಂತೆ. ಅವರೇನಾದರೂ ಬಾಬಾ ಅವರ ಹತ್ತಿರ ಕರೆದುಕೊಂಡು ಹೋದರೆ ತನ್ನ ಕೆಲಸ ಹಣ್ಣಾದ ಹಾಗೇ ಎಂಬ ಆಲೋಚನೆ ಅವಳದು. ಆದರೆ ಅವಳ ಮೊದಲ ಸಮಸ್ಯೆ ಎಂದರೆ ಗೋಕಾಕರನ್ನು, ಅಪರಿಚಿತವಾದ ತಾನು ಭೆಟ್ಟಿಯಾಗುವುದು ಹೇಗೆ ಅನ್ನುವುದು. ಆದ್ದರಿಂದಲೇ ಆಕೆ ನನ್ನ ಬಳಿ ಬಂದಿದ್ದಳು. “ಸಾರ್ ನೀವು ಗೋಕಾಕರಿಗೆ ತುಂಬ ಬೇಕಾದವರು. ನನ್ನ ಕಷ್ಟವನ್ನು ನಿಮಗೆ ಹೇಳಿಕೊಂಡಿದ್ದೇನೆ. ನೀವು ದಯಮಾಡಿ ಗೋಕಾಕರಿಗೆ ಒಂದು ಪತ್ರ  ಕೊಟ್ಟರೆ ತುಂಬ ಉಪಕಾರವಾಗುತ್ತದೆ. ನಾನು ಅವರ ಮೂಲಕ ಸಾಯಿಬಾಬಾ ಅವರನ್ನು ಸಂದರ್ಶಿಸುತ್ತೇನೆ”-ಎಂದಳು.

ನನ್ನ ವಿದ್ಯಾರ್ಥಿನಿಯಾದ ಆಕೆಯ ಈ ವ್ಯಥೆಯನ್ನು, ನನ್ನ ಸಹಾಯ ಕೋರಿ ಆಕೆ ಬಂದ ಉದ್ದೇಶವನ್ನು ತಿಳಿದು ನನಗೆ ತುಂಬ ದುಃಖವಾಯಿತು. ಈ ಸಂದರ್ಭದಲ್ಲಿ ನಾನು ಖಂಡಿತ ಈಕೆಯ ನೆರವಿಗೆ ನಿಲ್ಲಬೇಕು ಅಂದುಕೊಂಡೆ. ಬಾಬಾನ ಸಾಮರ್ಥ್ಯದ ಬಗ್ಗೆ ಇಷ್ಟೆಲ್ಲ ಹೇಳುತ್ತಾರಲ್ಲಾ; ನಿಜವಾಗಿಯೂ ಈ ಸಂದರ್ಭದಲ್ಲಿ ಭಗವಾನ್ ಬಾಬಾ ಅವರಿಂದ ಈಕೆಗೆ ದುಃಖ ಪರಿಹಾರವಾಗುವುದಾದರೆ, ನಿಜವಾಗಿಯೂ ಅದಕ್ಕಿಂತ ನ್ಯಾಯವಾದ,ಮಾನವೀಯವಾದ ಹಾಗೂ ಮಹತ್ತಾದ ಪವಾಡ ಬೇರೊಂದಿರಲಾರದು,  ಅನ್ನಿಸಿತು. ನಾನು ಕೂಡಲೆ ಪ್ರೊ.ಗೋಕಾಕರಿಗೆ ಒಂದು ಆತ್ಮೀಯವಾದ ಧಾಟಿಯಲ್ಲಿ ಪತ್ರ ಬರೆದು, ತಾವು ದಯಮಾಡಿ ಈ ದುಃಖಾರ್ತಳಾದ ನನ್ನ ವಿದ್ಯಾರ್ಥಿಗೆ, ಸಾಯಿಬಾಬಾ ಅವರ ಸಂದರ್ಶನ ಮಾಡಿಸಬೇಕೆಂದು ಪ್ರಾರ್ಥಿಸಿಕೊಂಡಿದ್ದೆ. ಆಕೆ ನನ್ನ ಪತ್ರವನ್ನು ತೆಗೆದುಕೊಂಡು ಹೋದಳು.

ಡಾ. ಗೋಕಾಕರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಲು ಭಗವಾನ್ ಸಾಯಿಬಾಬಾ ಅವರ ಕೃಪೆಯೇ ಕಾರಣವೆಂದು ಅವರಿವರು ಮಾತಾಡಿಕೊಳ್ಳುತ್ತಿದ್ದರು.  ಗೋಕಾಕರಿಂದಾಗಿ ಬೇಂದ್ರೆ, ರಾಜರತ್ನಂ ಮೊದಲಾದ- ವರೆಲ್ಲಾ  ಬಾಬಾ ಅವರ ಭಕ್ತರಾಗಿದ್ದರು. ಗೋಕಾಕರು ನನಗೆ ಕಳೆದ ಎರಡು ದಶಕಗಳಿಗೂ ಮೀರಿದ ಕಾಲದಿಂದ ಪರಿಚಿತರು. ನನ್ನ ಬಗ್ಗೆ, ನನ್ನ ಕವಿತೆಯ ಬಗ್ಗೆ ತುಂಬ ವಿಶ್ವಾಸವಿರಿಸಿಕೊಂಡಿದ್ದವರು. ಅವರು ಅಲ್ಲಲ್ಲಿ ಭಾಷಣಮಾಡಿದಾಗ ಅವರ ಕಣ್ಣೊಳಗಿನ ಮಿಂಚನ್ನೂ, ಅವರ ಧ್ವನಿಯೊಳಗಣ ಗುಡುಗನ್ನೂ ಗುರುತಿಸಿ, ನಾನು ಅವರ ಪ್ರೀತಿ-ವಾತ್ಸಲ್ಯಮಯವಾದ ವ್ಯಕ್ತಿತ್ವಕ್ಕೆ ಮಾರುಹೋಗಿದ್ದೆ. ಅವರು ಸಾಯಿಬಾಬಾ ಅವರ ಶಿಷ್ಯರೆಂಬ ಸಂಗತಿ ನನಗೆ ಗೊತ್ತಾದದ್ದು ಅವರು ಬೆಂಗಳೂರು ವಿಶ್ವವಿದ್ಯಾಲಯದ ವೈಸ್ ಛಾನ್ಸಲರ್ ಆಗಿದ್ದಾಗಲೇ. ಆಗ ಅವರು ಕಾರ್ಲ್‌ಟನ್ ಹೌಸ್‌ದಲ್ಲಿ ವಾಸಮಾಡುತ್ತಿದ್ದರು. ಬಾಬಾ ಅವರು ಬರುತ್ತಾರೆ, ನೀವೂ ಬನ್ನಿ ಎಂದು ಅವರು ಒಂದೆರಡು ಸಲ ನನಗೆ ಹೇಳಿ ಕಳುಹಿಸಿದ್ದಾಗ ನಾನೂ ಕಾರ್ಲ್‌ಟನ್ ಹೌಸ್‌ನಲ್ಲಿ ಬಾಬಾ ಅವರನ್ನು ಕಂಡಿದ್ದೆ; ಅವರ ಪ್ರವಚನವನ್ನು ಕೇಳಿದ್ದೆ. ಸಾಯಿಬಾಬಾ ತುಂಬ ಆಕರ್ಷಕವಾದ ಹಾಗೂ ಉಲ್ಲಾಸಭರಿತವಾದ ವ್ಯಕ್ತಿ. ಕಾವಿ ಬಣ್ಣದ ಸಿಲ್ಕ್ ನಿಲುವಂಗಿ; ತಾಂಬೂಲ ರಂಜಿತವಾದ ತುಟಿ; ಕಂದುಬಣ್ಣದ ತುಂಬಿದ ಕೆನ್ನೆಗಳ ದುಂಡುಮುಖ; ಆ ಮುಖದ ಸುತ್ತ ದಟ್ಟವಾದ ಕಪ್ಪು ಪೊದೆಗೂದಲ ಪ್ರಭಾವಳಿ. ಅವರ ಮಾತು, ಹಾಗೂ ಉಪದೇಶ ತುಂಬ ಸರಳವೂ, ಅನೇಕ ಬಗೆಯ ದೃಷ್ಟಾಂತಗಳಿಂದ ರಂಜನೀಯವೂ ಆಗಿದ್ದವು. ಅವೆಲ್ಲಾ ಕೇಳಲು ಚೆನ್ನಾಗಿಯೇ ಇರುತ್ತಿದ್ದವು. ಹಾಗೆ ಮಾತಾಡುವಾಗ ಅಥವಾ ಮಾತಿನ ನಂತರ ಅವರು ತಮ್ಮ ಸ್ವಹಸ್ತದಿಂದ ಸುಗಂಧಮಯವಾದ ಬೂದಿಯನ್ನು ಉದುರಿಸುತ್ತ ಎಲ್ಲರಿಗೂ ಹಂಚುವ ಆ ಬೂದಿಪವಾಡದ ಬಗ್ಗೆ ನನಗೆ ಅಂತಹ ಆಕರ್ಷಣೆಯಾಗಲೀ, ವಿಶ್ವಾಸವಾಗಲೀ ಹುಟ್ಟಲಿಲ್ಲ. ಅದು ಜನರನ್ನು ಬೆರಗುಗೊಳಿಸುವ ಒಂದು ಚಮತ್ಕಾರ ಮಾತ್ರವಾಗುತಿತ್ತು.

ನಾನು ಸಾಯಿಬಾಬಾ ಅವರನ್ನು, ಅವರ ಪುಟ್ಟಪರ್ತಿಯ ಪ್ರಶಾಂತಿ ನಿಲಯದಲ್ಲೇ ನೋಡುವ ಒಂದು ಸಂದರ್ಭ ನನಗೆ ಅನೇಕ ವರ್ಷಗಳ ಹಿಂದೆಯೇ ಒದಗಿತ್ತು.  ೧೯೫೮ರಲ್ಲಿ ಎಂದು ತೋರುತ್ತದೆ. ಅನಂತಪುರದ ಕಾಲೇಜಿನ ಕರ್ನಾಟಕ ಸಂಘದಲ್ಲಿ ಒಂದು ಉಪನ್ಯಾಸಕೊಡಲು ಆಹ್ವಾನಿತನಾಗಿ, ನನ್ನ ಗೆಳೆಯರಾದ ಪ್ರಭುಶಂಕರ್, ಪ್ರಭುಪ್ರಸಾದ್ ಮತ್ತು ಎಸ್.ವೆಂಕಟರಾಂ ಅವರ ಜತೆಗೆ ಹೋಗಿದ್ದೆ. ಹಾಗೆ ನಮ್ಮನ್ನು ಆಹ್ವಾನಿಸಿದವರು, ಅನಂತಪುರದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ, ನಮ್ಮ ಹಳೆಯ ಗೆಳೆಯ ರಾಮಚಂದ್ರ ಅವರು. ಕಾಲೇಜಿನ ಉಪನ್ಯಾಸ ಕಾರ‍್ಯಕ್ರಮವನ್ನು ಮುಗಿಸಿಕೊಂಡು ನಾವಷ್ಟು ಜನವೂ ಪುಟ್ಟಪರ್ತಿಗೆ ಹೋದೆವು. ಹಾಗೆ ಹೋದದ್ದರೆ ಹಿಂದೆ ನನಗೆ ಯಾವ ಉದ್ದೇಶವೂ ಇರಲಿಲ್ಲ; ಅಲ್ಲಿ ಇಲ್ಲಿ ಬಾಬಾ ಅವರ ಹೆಸರು ಪ್ರಚಲಿತವಾದದ್ದರಿಂದ ಅವರನ್ನು ನೋಡುವ ಕುತೂಹಲವಿತ್ತು. ಜತೆಗೆ ನನಗೆ ತೀರಾ ಬೇಕಾದ ನಾ. ಕಸ್ತೂರಿಯವರು ಬೇರೆ ಪುಟ್ಟಪರ್ತಿಯಲ್ಲೇ ನೆಲಸಿದ್ದರು. ಅನಂತಪುರಕ್ಕೆ ಪುಟ್ಟಪರ್ತಿ ತೀರಾ ಸಮೀಪವಾದದ್ದರಿಂದ, ಇಷ್ಟು ದೂರ ಬಂದು ಅದನ್ನೂ ನೋಡಿದರಾಯಿತು ಅನ್ನಿಸಿತು. ನಾವು ಐದು ಜನವೂ ಅನಂತಪುರದಿಂದ ಬಸ್ಸು ಹಿಡಿದು ಪುಟ್ಟಪರ್ತಿಗೆ ಹೋದಾಗ ಮಧ್ಯಾಹ್ನದ ಆರತಿ ಮುಗಿದು ಭಕ್ತಾದಿಗಳು ಭೋಜನಕ್ಕೆ ಸಿದ್ಧರಾಗುತ್ತಿದ್ದ ಸಮಯ. ಒಂದೆಡೆ ನಾವು ಉಳಿದುಕೊಂಡು, ಹೋಟೆಲೊಂದರಲ್ಲಿ ಊಟಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆವು. ಇದ್ದಕಿದ್ದ ಹಾಗೆ ಸಂಜೆ ನಾಲ್ಕರ ವೇಳೆಗೆ ಯಾರೋ ಬಂದು “ನೀವೆಲ್ಲಾ ಬರಬೇಕಂತೆ, ಬಾಬಾ ಅವರು ಕರೆಯುತ್ತಿದ್ದಾರೆ” ಎಂದರು. ನಮಗೆ ಅನಿರೀಕ್ಷಿತವಾದ ಸಂತೋಷವಾಯಿತು. ೧೯೫೮ರ ಕಾಲದಲ್ಲಿ, ಬಾಬಾ ಅವರು ೧೯೭೦ರ ದಶಕದಲ್ಲಿಯಷ್ಟು ದುರ್ಲಭ ದರ್ಶನರಾಗಿರಲಿಲ್ಲ. ಆದರೂ ಪುಟ್ಟಪರ್ತಿಗೆ ಬಂದು ಮುತ್ತುವ ಜನಕ್ಕೇನೂ ಕೊರತೆಯಿರಲಿಲ್ಲ. ಆ ಸಂಜೆ ಬಾಬಾ ಅವರ ಪ್ರಶಾಂತಿ ನಿಲಯದ ಬಾಗಿಲಿಗೆ ಹೋದೆವು. ನಾ. ಕಸ್ತೂರಿಯವರು ನನ್ನನ್ನು “ಬಾರಯ್ಯಾ ಬಾ. ಬಹಳ ಕಾಲವಾಯಿತಲ್ಲೋ ನಿನ್ನ ನೋಡಿ” ಅಂದರು. ಒಂದೈದು ನಿಮಿಷದಲ್ಲಿ ನಾವು ಈಗಾಗಲೇ ವರ್ಣಿಸಿರುವ ರೂಪದಲ್ಲಿ ಬಾಬಾ ಅವರು ಹೊರಗೆ ಬಂದು, ತುಂಬ ಆತ್ಮೀಯವಾದ ಮಂದಹಾಸವನ್ನು ಬೀರಿ ನಮ್ಮನ್ನು ತಿರುಗಾಡಲು ಕರೆದುಕೊಂಡು ಹೊರಟರು. ಸುಮಾರು ಒಂದೂವರೆ ಗಂಟೆಗಳ ಕಾಲ, ಆ ಊರಿನ ಹಳ್ಳದ ಬದಿಯಲ್ಲಿ, ಹೊಲಗಳ ಮಧ್ಯೆ, ಗುಡ್ಡದ ತಪ್ಪಲಲ್ಲಿ ಅವರ ಸತ್ಸಂಗದಲ್ಲೆ ಅಡ್ಡಾಡಿದೆವು. ಭಗವದ್ ವಿಷಯಕವಾದ ಮಾತುಕತೆಗಳಿಂದ, ಆ ಸಂಜೆ ಬಾಬಾ ಅವರು ನಮ್ಮನ್ನು ತುಂಬ ಪ್ರೀತಿಯಿಂದ ನಡೆಯಿಸಿಕೊಂಡರು.

ಮಾರನೆ ದಿನ ಬೆಳಿಗ್ಗೆ ಕಸ್ತೂರಿಯವರ ಸೂಚನೆಯಮೇರೆಗೆ ಒಂಬತ್ತೂವರೆಯ ವೇಳೆಗೆ ಬಾಬಾ ಅವರ ಸಂದರ್ಶನವನ್ನು ನಾವು ಒಬ್ಬೊಬ್ಬರೇ ಮಾಡುವುದೆಂದೂ, ಏನಾದರೂ ವೈಯಕ್ತಿಕವಾದ ಸಮಸ್ಯೆಗಳೊ ತಾಪತ್ರಯಗಳೊ ಇದ್ದರೆ ಅವುಗಳಿಗೆ ಬಾಬಾ ಅವರಿಂದ ಪರಿಹಾರವನ್ನು ಕೇಳಬಹುದೆಂದೂ ಏರ್ಪಾಡಾಯಿತು. ಹಾಗೆ, ಸಂದರ್ಶನಕ್ಕೆ ಬಂದವರ ಒಂದು ದೊಡ್ಡ ಕ್ಯೂ ನಿರ್ಮಾಣವಾಗಿತ್ತು. ಅವರನ್ನು ಕಾಣಬೇಕಾದರೆ ಅಲ್ಲಿನ ಪದ್ಧತಿಯ ಪ್ರಕಾರ ನಿಗದಿತವಾದ ಅಂಗಡಿಗಳಲ್ಲಿ ಸಿದ್ಧವಾದ ಕಾಗದದ ಪೊಟ್ಟಣ ಅಥವಾ ಮುತ್ತುಗದೆಲೆಯ ದೊನ್ನೆಯಲ್ಲಿ ಕಲ್ಲುಸಕ್ಕರೆ-ಉತ್ತುತ್ತೆ- ಬಾದಾಮಿ ಇವುಗಳಿದ್ದ ಪ್ರಸಾದ ಅಥವಾ ಕಾಣಿಕೆಯನ್ನು ಸಂದರ್ಶನಕ್ಕೆ ಬಂದವರೆಲ್ಲಾ ಕೊಂಡು ತರಬೇಕಾಗಿತ್ತು. ನಾವೂ ಈ ಬಗೆಯ ‘ಕಾಣಿಕೆ’ಗಳನ್ನು ಹಿಡಿದು ಕ್ಯೂನಲ್ಲಿ ನಿಂತಿದ್ದೆವು. ಆದರೆ ಹೀಗೆ ಕ್ಯೂನಲ್ಲಿ ನಿಂತು ಅವರು ಕರೆದಾಗ ಒಳಗೆ ಹೋಗಿ ನಾನು ಏನನ್ನು ಹೇಳಿಕೊಳ್ಳಬೇಕೆಂಬುದೇ ನನ್ನನ್ನು ಕಾಡುತ್ತಿದ್ದ ಸಮಸ್ಯೆಯಾಗಿತ್ತು. ನನ್ನ ಜತೆಗಿದ್ದ ಪ್ರಭುಪ್ರಸಾದರಿಗೆ, ಸಾಯಿಬಾಬಾ ಅವರು ಪರಿಹರಿಸಬೇಕಾಗಿದ್ದ ಸಮಸ್ಯೆಯೊಂದು ಇತ್ತೆಂದು ತೋರುತ್ತದೆ. ಅವರನ್ನು ಬಿಟ್ಟರೆ ಉಳಿದವರಿಗೆ ಬಾಬಾ ಅವರ ಅನುಗ್ರಹದಿಂದ ಆಗಬೇಕಾದದ್ದು ಏನೂ ಇರಲಿಲ್ಲ. ಅದರಲ್ಲೂ ಗೆಳೆಯ ವೆಂಕಟರಾಂ ಅವರಿಗಂತೂ-ಅವರಿಗೆ ಸಿಹಿ ಎಂದರೆ ತುಂಬ ಇಷ್ಟ-ಬಾಬಾ ಅವರು ಎಲ್ಲಿ ತಾವು ಕೈಯಲ್ಲಿ ಹಿಡಿದಿದ್ದ ಆ ಪ್ರಸಾದದ ಪೊಟ್ಟಣದಿಂದ, ಕಲ್ಲುಸಕ್ಕರೆ-ಬಾದಾಮಿ-ಉತ್ತುತ್ತೆ ಎಲ್ಲವನ್ನೂ ತೆಗೆದುಕೊಂಡು ದೊನ್ನೆ ಖಾಲಿಮಾಡಿಬಿಡುತ್ತಾರೋ ಎಂಬುದೇ ಭಾರೀ ಚಿಂತೆಯಾಗಿತ್ತಂತೆ. ಇನ್ನು ಪ್ರಭುಶಂಕರ್ ಅವರಂತೂ ಆಗಿನ ದಿನಗಳಲ್ಲಿ ಆಧ್ಯಾತ್ಮಿಕ ದಾಹದಿಂದ ಪರಿತಪಿಸುತ್ತಿದ್ದದ್ದರಿಂದ, ಬಹುಶಃ ಬಾಬಾ ಅವರಿಂದ ಅವರು ಪರಿಹರಿಸಿ- ಕೊಳ್ಳಬಹುದಾದ ಆಧ್ಯಾತ್ಮಿಕ ಸಮಸ್ಯೆಗಳಿದ್ದುವೆಂದು ತೋರುತ್ತದೆ. ಆದರೆ ಲೌಕಿಕವೋ ಅಲೌಕಿಕವೋ ಈ ಎರಡೂ ಚಿಂತೆಗಳಿಲ್ಲದೆ ನಿಶ್ಚಿಂತವಾಗಿ ಕ್ಯೂನಲ್ಲಿ ನಿಂತವರೆಂದರೆ ನಾನು ಮತ್ತು ರಾಮಚಂದ್ರ ಹಾಗೂ ವೆಂಕಟರಾಂ ಈ ಮೂವರೇ ಎಂದು ತೋರುತ್ತದೆ.

ಮೊದಲು ಒಳಗೆ ಹೋದವರು ವೆಂಕಟರಾಂ. ಅವರು ಮೂರೇ ನಿಮಿಷಗಳಲ್ಲಿ ಹೊರಕ್ಕೆ ಬಂದರು. ಬಂದಾಗ ಅವರ ಮುಖ ಸಂತೋಷದಿಂದ ಅರಳಿತ್ತು. ಬಾಬಾ ಅವರು ತಮ್ಮ ಕೈಯಲ್ಲಿದ್ದ ಪೊಟ್ಟಣದಿಂದ ಒಂದೇ ಒಂದು ಚೂರು ಕಲ್ಲು ಸಕ್ಕರೆಯ ಹರಳನ್ನು ಮಾತ್ರ ತೆಗೆದುಕೊಂಡರೆಂದೂ, ಆ ಕಾರಣದಿಂದ ಬಾಬಾ ಅವರು ತುಂಬ ಒಳ್ಳೆಯವರೆಂದೂ ವೆಂಕಟರಾಂ ಹೊಗಳಿದರು. ಮುಂದಿನ ಸರದಿ ಪ್ರಭುಪ್ರಸಾದರದ್ದು. ಅವರು ಸುಮಾರು ಹದಿನೈದು ಇಪ್ಪತ್ತು ನಿಮಿಷಗಳ ಕಾಲ ಒಳಗಿದ್ದರು. ಅವರ ಜೀವನದ ಯೋಗಕ್ಷೇಮವನ್ನು ತಾವು ನೋಡಿಕೊಳ್ಳುವುದಾಗಿ ಬಾಬಾ ಆಶ್ವಾಸನೆ ನೀಡಿದರಂತೆ. ನಂತರ ಪ್ರಭುಶಂಕರ ಅವರು ಒಳಗೆ ಹೋದರು. ಹತ್ತು ನಿಮಿಷದ ನಂತರ ಹಸನ್ಮಖರಾಗಿ, ಜಪಸರವೊಂದರ ಸಹಿತ ಅವರು ಹೊರಕ್ಕೆ ಬಂದರು. ಬಾಬಾ ಅವರು ಪ್ರಭುಶಂಕರರಿಗೆ ಧ್ಯಾನಮಾಡಲು ಜಪಸರವೊಂದನ್ನು ಕೊಟ್ಟಿದ್ದರು. ಅದನ್ನು ಗಾಳಿಯಲ್ಲಿ ಕೈ ಆಡಿಸಿ ಪವಾಡದ ಮೂಲಕ ಪಡೆದು ಅವರಿಗೆ ಕೊಟ್ಟರೋ, ಅಥವಾ ತಮ್ಮಲ್ಲಿದ್ದ ಒಂದನ್ನು ಕೊಟ್ಟರೋ ನನಗೀಗ ನೆನಪಿಲ್ಲ. ಅವರನಂತರ ನನ್ನ ಸರದಿ, ನಾನು ಒಳಕ್ಕೆ ಹೋದೆ.

ನಾನು ಪ್ರವೇಶಿಸಿದ್ದು ಮಹಡಿಯ ಮೇಲಣ ವಿಸ್ತಾರವಾದ ಒಂದು ಕೊಠಡಿ. ನೆಲಕ್ಕೆ ಕಾರ್ಪೆಟ್ ಹಾಸಿತ್ತು. ಅದರ ಮೇಲೊಂದು ಬೆತ್ತದ ಕುರ್ಚಿ. ಅದರ ಬದಿಗೆ ಶುಭ್ರವಾದ ಮೇಲುಹೊದಿಕೆ ಹಾಸಿದ ಹಾಸಿಗೆಯಿದ್ದ ಮಂಚ. ಗೋಡೆಯ ಮೇಲೆ ಉದ್ದಕ್ಕೂ ನಾನಾ ಭಂಗಿಗಳಲ್ಲಿ ತೆಗೆಯಿಸಿದ ಸಾಯಿಬಾಬಾ ಅವರ ಫೋಟೋಗಳು. ಆ ಗೋಡೆಯೊಳಗೊಂದೆರಡು ಕಿಟಕಿಗಳು. ಆ ಕಿಟಕಿಗಳ ಮೂಲಕ ಕಾಣುವ ಮರಗಳ ತೋಪು. ಹಳ್ಳಿಯ ಮನೆಗಳು, ಹಸಿರು ಹೊಲಗಳು. ಕೋಣೆಯ ತುಂಬ ಸೊಗಸಾದ ಊದುಬತ್ತಿಯ ಪರಿಮಳ.ನಾನು ಹೋದಾಗ, ಬಾಬಾ ಅವರು ಚಿತ್ರಸ್ಥರಂತೆ ಮಂಚದ ಪಕ್ಕದ ಕುರ್ಚಿಯ ಮೇಲೆ ಕೂತಿದ್ದರು. ಅದೇ ಕಾವಿಬಣ್ಣದ ನಿಲುವಂಗಿ, ತಾಂಬೂಲ ರಂಜಿತವಾದ ತುಟಿಗಳು, ನಸುಗೆಂಪು ಬಣ್ಣದ ಮುಖ ಮಂಡಲಕ್ಕೆ ಕಪ್ಪಾದ ತಲೆಗೂದಲ ಪ್ರಭಾವಳಿ, ಮುಖದಲ್ಲಿ ಹೊಳೆ ಹೊಳೆಯುವ ಜಾದೂಗಾರನ ಕಣ್ಣು. ನಾನು ನಮಸ್ಕಾರ ಎಂದೆ. ಕೂತುಕೋ ಎಂದರು. ಎದುರಿಗೆ ಇರಿಸಿದ್ದ ಎತ್ತರವಾದ ಮಣೆಯ ಮೇಲೆ ಕೂತೆ. ನಾನು ಕೈಯಲ್ಲಿ ಹಿಡಿದಿದ್ದ ಪ್ರಸಾದದ ಪೊಟ್ಟಣದಿಂದ ಒಂದು ಚೂರು ಸಕ್ಕರೆಯನ್ನು ತೆಗೆದುಕೊಂಡು, ಅಲ್ಲೇ ಇರಿಸಿದ್ದ ತಟ್ಟೆಗೆ ಹಾಕಿದರು. ನಾನು ಸುಮ್ಮನೆ ನಿಂತೆ. ಅವರನ್ನು ಏನು ಕೇಳಬೇಕೆಂಬುದನ್ನು ನಾನು ಯೋಚಿಸಿ ಕೂಡಾ ಇರಲಿಲ್ಲ. ನನ್ನ ಮೌನವನ್ನು ಕಂಡು ಅವರೇ ಹೇಳಿದರು: “ನನಗೆಲ್ಲಾ ಗೊತ್ತು. ನೀನು ಹೇಳದಿದ್ದರೇನಂತೆ, ನೀನು ಚಿಕ್ಕಂದಿನಿಂದ ತುಂಬ ಕಷ್ಟಪಟ್ಟಿದ್ದೀಯ.”  ಅವರ ಈ ಮಾತಿಗೆ ನಾನು ‘ಹೌದು’ ಎಂದು ಹೇಳುತ್ತೇನೆಂದೋ, ನನ್ನನ್ನು ಈ ಕಷ್ಟಗಳಿಂದ ಪಾರುಮಾಡಿ ಎಂದು ಕೇಳುತ್ತೇನೆಂದೋ ಬಹುಶಃ ಅವರು ನಿರೀಕ್ಷಿಸಿದ್ದರೋ ಏನೋ. ಆಗಲೂ ನಾನು ಸುಮ್ಮನಿದ್ದೆ. ಮತ್ತೆ ಅವರೇ ಹೇಳಿದರು:

“ಚಿಂತೆಯಿಲ್ಲ, ನಿನ್ನ ಕಷ್ಟಗಳನ್ನು ನಾನು ನೋಡಿಕೊಳ್ಳುತ್ತೇನೆ ಎಲ್ಲವೂ ಸರಿ ಹೋಗುತ್ತದೆ.”

ನಾನೆಂದೆ “ಸ್ವಾಮಿ, ನನ್ನ ಕಷ್ಟಗಳನ್ನು ನೀವು ನೋಡಿಕೊಳ್ಳೋದು ಅಂದರೇನು? ಕಷ್ಟಗಳು ಹಿಂದೆಯೂ ಬಂದಿವೆ; ಮುಂದೂ ಬರುತ್ತಲೇ ಇರುತ್ತವೆ. ಪ್ರತಿ ಸಲ ಕಷ್ಟಗಳು ಬಂದಾಗಲೂ ನಾನು ನಿಮ್ಮ ಹತ್ತಿರ ಬರಬೇಕೆ? ಬರುವುದು ಸರಿಯೆ?”

“ನಾನಿರುವುದೇತಕ್ಕೆ” ಎಂದರು ಬಾಬಾ.

ನಾನೆಂದೆ: “ನನ್ನ ಕಷ್ಟಗಳನ್ನು ನೀವು ನೋಡಿಕೊಳ್ಳುವುದು ಬೇಡ. ಆದರೆ ಬರುವ ಕಷ್ಟಗಳನ್ನು ಎದುರಿಸಲು ಅಗತ್ಯವಾದ ಸಾಮರ್ಥ್ಯವನ್ನು ನನಗೆ ತಾವು ಕೊಡುವುದಾದರೆ ಕೊಡಿ. ಬೇರೆ ಏನೂ ಬೇಡ.”

ಬಹುಶಃ ಬಾಬಾ ಅವರು ಈ ಬಗೆಯ ವಾಗ್ವಾದವನ್ನು ಅವರಲ್ಲಿಗೆ ಆರ್ತರಾಗಿ ಬರುವ ಭಕ್ತಾದಿಗಳಿಂದ ನಿರೀಕ್ಷಿಸಿರಲಾರರು. ಒಂದೆರಡು ಕ್ಷಣಗಳ ಮೌನ ಆ ಕೊಠಡಿಯನ್ನು ಆವರಿಸಿತು. ನಾನು “ಸ್ವಾಮಿ, ನನಗೊಂದು ಅನುಮಾನವಿದೆ. ನಿಮ್ಮನ್ನು ಕೇಳಲೆ” ಎಂದೆ. “ಆಗಲಿ” ಎಂದರು ಬಾಬಾ.

“ನೀವು ಪವಾಡ ಇತ್ಯಾದಿಗಳನ್ನೆಲ್ಲ ಮಾಡುತ್ತೀರಲ್ಲ, ಯಾಕೆ?” ಎಂದೆ. ಬಹುಶಃ ಈ ಬಗೆಯ ಪ್ರಶ್ನೆ ಅವರಿಗೆ ಹಿಡಿಸಿರಲಾರದು. ಎಲ್ಲಿ ಬೇಸರಪಟ್ಟುಕೊಳ್ಳುತ್ತಾರೋ ಅಂದುಕೊಂಡ ನನಗೆ, ಅವರು ಹೇಳಿದರು “ನೋಡಪ್ಪ, ಜನರನ್ನು ಸನ್ಮಾರ್ಗದಲ್ಲಿ ನಡೆಸೋದಕ್ಕೆ ಈ ಪವಾಡಗಳು ಬೇಕಾಗುತ್ತವೆ. ಭಕ್ತಿ-ಶ್ರದ್ಧೆಯ ಕಡೆಗೆ ತರಲು ಇದೂ ಒಂದು ದಾರಿ ತಾನೇ?” ಅಂದರು. ಮತ್ತೆ ಮುಂದುವರಿದು “ಆಯಿತು, ಮತ್ತೆ ನೋಡೋಣ. ಆಗಾಗ ಬರ‍್ತಾ ಇರು” ಎಂದು ಸಂದರ್ಶನ ಮುಕ್ತಾಯವಾಯಿತೆಂದು ಸೂಚನೆ ಕೊಟ್ಟರು. ನಾನು ಸುಮ್ಮನಾಗಿ ಹೊರಕ್ಕೆ ಬಂದೆ. “ಅದೇನ್ರೀ? ಬಾಬಾ ಅವರನ್ನು ಏನೂ ಕೇಳೋದಿಲ್ಲ ಅಂತ ನಮ್ಮೆದುರಿಗೆ ಅಂದವರು, ಇಷ್ಟೊಂದು ಹೊತ್ತು ಒಳಗೆ ಏನ್ಮಾಡ್ತಾ ಇದ್ದಿರಿ?” ಎಂದು ನನ್ನ ಗೆಳೆಯರು ನನ್ನನ್ನು ಚುಡಾಯಿಸಿದರು.

ತನ್ನ ಮಗುವನ್ನು ಕಳೆದುಕೊಂಡು ದುಃಖಾರ್ತೆಯಾಗಿರುವ ಈ ನನ್ನ ವಿದ್ಯಾರ್ಥಿನಿಗೆ, ತಾವು ಏನಾದರೂ ಮಾಡಿ ಬಾಬಾ ಅವರ ದರ್ಶನಮಾಡಿಸಿ ಎಂದು, ವೈಟ್ ಫೀಲ್ಡ್‌ನಲ್ಲಿದ್ದ ಡಾ.ಗೋಕಾಕರಿಗೆ ಪತ್ರ ಬರೆದು ಆಕೆಯ ಕೈಯಲ್ಲಿ ಕೊಟ್ಟು ಕಳುಹಿಸಿದೆ. ಒಡನೆಯೇ ಹದಿನಾಲ್ಕು  ವರ್ಷಗಳ ಹಿಂದೆ ಬಾಬಾ ಅವರೊಂದಿಗೆ ನನಗೆ ಒದಗಿದ ಮುಖಾಮುಖಿಯ ನೆನಪು ಹೀಗೆ ಬಿಚ್ಚಿಕೊಂಡಿತು.

ನಾನು ಗೋಕಾಕರಿಗೆ ಕಾಗದ ಕೊಟ್ಟ ಹತ್ತು ದಿನಗಳ ನಂತರ ಆ ನನ್ನ ವಿದ್ಯಾರ್ಥಿನಿ, ನನ್ನ ಕೊಠಡಿಗೆ ಬಂದಳು. ಆಕೆಯ ಮುಖದಲ್ಲಿ ಸಮಾಧಾನವಿರಲಿಲ್ಲ. ಅದರ ಬದಲು ಒಂದು ಬಗೆಯ ಬೇಸರ ಹಾಗೂ ಸಿಟ್ಟು ಈ ಎರಡೂ ಬೆರೆತಿತ್ತು. “ಏನಮ್ಮಾ ಏನಾಯಿತು? ಬಾಬಾ ಅವರನ್ನು ನೋಡಿದಿರಾ? ನಿಮ್ಮ ಮಗುವಿನ ಬಗ್ಗೆ ಏನಾದರೂ ಸುಳಿವು ದೊರೆಯಿತೆ?” ಎಂದೆ. ಆಕೆ ಹೇಳಿದ ಸಂಗತಿ ನಿಜಕ್ಕೂ ದಂಗು ಬಡಿಸುವಂತಿತ್ತು.

ನನ್ನ ಪತ್ರ ತೆಗೆದುಕೊಂಡ ಮಾರನೆ ದಿನ ಬೆಳಿಗ್ಗೆಯೇ ಆಕೆ ವೈಟ್‌ಫೀಲ್ಡ್‌ಗೆ ಹೋದಳು. ತಮ್ಮ ಉಪಕುಲಪತಿ ಸ್ಥಾನದಿಂದ ನಿವೃತ್ತರಾದ ಗೋಕಾಕರು ವೈಟ್ ಫೀಲ್ಡ್‌ನಲ್ಲೇ ನೆಲಸಿದ್ದರು. ಬಾಬಾ ಅವರಿಗೆ ಅವರು ತೀರಾ ಹತ್ತಿರದವರೆಂದೂ, ಅವರ ವ್ಯವಹಾರಗಳನ್ನು ನೋಡುವ ಜವಾಬ್ದಾರಿ ಅವರದಾಗಿತ್ತೆಂದೂ, ಅವರಿವರು ಹೇಳುತ್ತಿದ್ದರು. ಈಕೆ ನೇರವಾಗಿ ಗೋಕಾಕರನ್ನು ಕಂಡಳು. ಅವರು ನನ್ನ ಪತ್ರವನ್ನು ಓದಿ “ಒಳ್ಳೇದು, ದಿನವೂ ಬಂದು ಸಂದರ್ಶನಕ್ಕೆ ಕಾಯಿರಿ” ಎಂದರಂತೆ. ದುಃಖ ತಪ್ತಳಾದ ಈಕೆ ಬಾಬಾ ಅವರ ದರ್ಶನಕ್ಕೆ ಬಂದು ಸಾಮಾನ್ಯ ಜನರ ಸಾಲಿನಲ್ಲಿ ನಿಲ್ಲುವುದು; ದರ್ಶನ ದೊರೆಯದೆ ಸಂಜೆ ಮನೆಗೆ ಹಿಂದಿರುಗುವುದು-ಹೀಗೆ ಸುಮಾರು ಒಂದುವಾರ ಕಳೆಯಿತು. ಅವಳು ಹಾಗೆ ದಿನವೂ ಕಾಯುವಾಗ ಕಾರುಗಳಲ್ಲಿ ಬರುವ ದೊಡ್ಡ ದೊಡ್ಡ ಪ್ರತಿಷ್ಠಿತರಿಗೆ, ಭಾರತದ ವಿವಿಧ ಪ್ರಾಂತ್ಯಗಳಿಂದ ಬರುವ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ಬಾಬಾ ಅವರ ದರ್ಶನವಾಗುವುದೇನೂ ಕಷ್ಟವಾಗುತ್ತಿರಲಿಲ್ಲ; ಕಷ್ಟವಾದದ್ದು ಈಕೆಗೇ, ಮತ್ತು ಕ್ಯೂನಲ್ಲಿ ಮುಖ ಒಣಗಿಸಿಕೊಂಡು ಕಾದುನಿಂತ ಸಾಮಾನ್ಯರಿಗೆ. ಈಕೆ ಇನ್ನೂ ಎರಡು ದಿನ ನಿಂತಳು. ಬಾಬಾ ಅವರ ದರ್ಶನವಾಗಲೇ ಇಲ್ಲ. ಏನಾದರೊಂದು ಕಾರಣದಿಂದ ಅಂದಿನ ಸಂದರ್ಶನ ಮುಂದೆ ಹೋಗತೊಡಗಿತ್ತು. ಕಡೆಗೆ ಬೇಸರಗೊಂಡ ಈಕೆ ಮತ್ತೆ ಒಂದು ದಿನ ಗೋಕಾಕರ ಹತ್ತಿರ ಹೋಗಿ ನೋಡಿ, ತಾನು ಬಾಬಾ ಅವರನ್ನು ಕಾಣಲೇಬೇಕಾಗಿರುವ ಹೃದಯ ವಿದ್ರಾವಕವಾದ ಸಂಗತಿಯನ್ನೂ, ಈ ಬಗ್ಗೆ ನಾನು ಅವರಿಗೆ ಪತ್ರ ಕೊಟ್ಟ ವಿಚಾರವನ್ನೂ ನೆನಪು ಮಾಡಿದಳಂತೆ. ಗೋಕಾಕರು ನಿರ್ಭಾವವಾಗಿ, “ನೋಡಮ್ಮಾ, ಬಾಬಾ ಅವರಿಗೆ ಎಲ್ಲವೂ ಗೊತ್ತು. ನೀನು ಯಾರು, ಯಾತಕ್ಕೆ ಬಂದಿದ್ದೀಯ ಎಲ್ಲವೂ ಗೊತ್ತು. ಹಾಗೆಯೇ ನಿನ್ನನ್ನು ಯಾವಾಗ ಕರೆಸಿಕೊಳ್ಳಬೇಕು ಎಂಬುದೂ ಅವರಿಗೆ ಗೊತ್ತಿದೆ. ಆದರೆ ನೀನು ಕಾಯಬೇಕು, ಅಷ್ಟೆ.” ಎಂದು ಹೇಳಿದರಂತೆ. ಮತ್ತೆ ಆಕೆ ಎರಡು ದಿನ ಬಾಗಿಲು ಕಾದ ನಂತರ, ಬಾಬಾ ಅವರು ಭಕ್ತರ ಕರೆಯ ಮೇರೆಗೆ ಎಲ್ಲೋ ಹೋಗಿದ್ದಾರೆ, ಬರುವುದು ಒಂದು ವಾರವಾಗುತ್ತದೆ ಎಂದು ಅವರ ಸಾಕ್ಷಾತ್ ಸನ್ನಿಧಿಯವರೊಬ್ಬರು ಈಕೆಗೆ ಹೇಳಿದರಂತೆ. ಈಕೆ, ಬೇಸರಮಾಡಿಕೊಂಡು ಮತ್ತೆ ಅಲ್ಲಿಗೆ ಕಾಲಿರಿಸುವುದಿಲ್ಲ ಎಂದು ನಿರ್ಧರಿಸಿ ಹಿಂದಕ್ಕೆ ಬಂದಿದ್ದಳು. ವಿಷಯ ತಿಳಿದು ನನಗೆ ತುಂಬ ಬೇಸರವಾಯಿತು.

ಸನ್ನಿವೇಶವಿಲ್ಲದ ಕುನ್ನಿ

ತುಮಕೂರು ಇಂಟರ್ ಮಿಡಿಯೇಟ್ ಕಾಲೇಜಿನ ಕರ್ನಾಟಕ  ಸಂಘದ ಚುನಾವಣೆಗೆ ಕೆಲವು ದಿನಗಳ ಮೊದಲು, ಚುನಾವಣೆಗೆ ಸ್ಪರ್ಧಿಸಿದವರೊಬ್ಬರು ಹೊರಡಿಸಿದ ಕರಪತ್ರವೊಂದು ನನ್ನ ಕೈಗೆ ಬಂತು. ನೋಡುತ್ತೇನೆ, ಆ ಕರಪತ್ರದ ಶೀರ್ಷಿಕೆ ‘ಸನ್ನಿವೇಶವಿಲ್ಲದ ಕುನ್ನಿ.’ ತಮಾಷೆಯಾಗಿದೆಯಲ್ಲ ಎಂದು ನೋಡುತ್ತೇನೆ, ಒಂದು ಪದ್ಯವಿದೆ ಆ ಕರಪತ್ರದಲ್ಲಿ. ಆ ಪದ್ಯದ ಸಾಲುಗಳೆಲ್ಲಾ ಈಗ ಮರೆತೇ ಹೋಗಿವೆ; ಅದರ ಸಾರಾಂಶ ಹೀಗೆ ಎಂದು ನನಗೆ ಮಸುಕು ನೆನಪು: ‘ನಾನೊಂದು ಸನ್ನಿವೇಶವಿಲ್ಲದ ಕುನ್ನಿ: ತಕ್ಕ ಸನ್ನಿವೇಶ ದೊರೆತರೆ ನಾನೂ ಒಂದಷ್ಟು ಬೊಗಳುತ್ತೇನೆ. ಆದ್ದರಿಂದ ನನ್ನನ್ನು ಚುನಾವಣೆಯಲ್ಲಿ ಆರಿಸಿ.’ ಆ ಪದ್ಯ ಬರೆದವರು ನನ್ನ ಕ್ಲಾಸ್‌ಮೇಟ್ ಜಿ.ಬ್ರಹ್ಮಪ್ಪ.  ಆ ವರ್ಷ ಅಂದರೆ ೧೯೪೪-೪೫ನೇ ಸಾಲಿನಲ್ಲಿ ಕಾಲೇಜಿನ ಕರ್ನಾಟಕ ಕಾರ್ಯದರ್ಶಿಯೋ, ಅಧ್ಯಕ್ಷಕರೋ ಆಗಿ ಆಯ್ಕೆಯಾದರು ನಮ್ಮ ಬ್ರಹ್ಮಪ್ಪ.

ನನಗಿರುವ ಕೆಲವೇ ಕೆಲವು ಸ್ನೇಹಿತರಲ್ಲಿ, ನಾನು ಏಕವಚನದಿಂದ ಕರೆಯಬಹುದಾದ, ಕರೆಯುತ್ತಿರುವ ಸ್ನೇಹಿತರು ಇಬ್ಬರೇ. ಒಬ್ಬರು, ಡಾ.ನ. ಸುಬ್ರಹ್ಮಣ್ಯ, ಇನ್ನೊಬ್ಬರು ಬ್ರಹ್ಮಪ್ಪ.

ನೋಡಲು ಅಂಥ ಪ್ರಭಾವಶಾಲಿಯಾದ ವ್ಯಕ್ತಿಯಲ್ಲ ಬ್ರಹ್ಮಪ್ಪ. ವಿದ್ಯಾರ್ಥಿಯಾಗಿದ್ದಾಗ, ಖಾದಿ ಜುಬ್ಬ, ಖಾದಿ ಪೈಜಾಮ, ಒಂದು ವೇಸ್ಟ್ ಕೋಟ್, ತಲೆಯ ಮೇಲೊಂದು ಖಾದಿ ಟೋಪಿ ಇಟ್ಟುಕೊಂಡ ಒಣಕಲು ಮುಖದ ವ್ಯಕ್ತಿ ಈ ಬ್ರಹ್ಮಪ್ಪ. ಅವರು ಅಧ್ಯಾಪಕರಾದ ಮೇಲೆ ಪೈಜಾಮದ ಬದಲು ಪಂಚೆ ಬಂತು, ಅಷ್ಟೆ. ಆದರೆ ಮಾತನಾಡಲು ಶುರು ಮಾಡಿದರೆ ಹೆಜ್ಜೆ ಹೆಜ್ಜೆಗೂ ರಸವತ್ತಾದ ಸಂಗತಿಗಳಿಂದ ನಗೆಯ ಅಲೆಗಳನ್ನು ಎಬ್ಬಿಸುವ ವಿನೋದದ ಗಣಿ ಬ್ರಹ್ಮಪ್ಪ.

ಅವರು ಇಂಟರ್ ಮಿಡಿಯೇಟ್‌ನಲ್ಲಿದ್ದಾಗಲೇ ‘ಭರತೇಶನ ಬಾಳ್ಗಬ್ಬಂ’ ಎಂಬ ಒಂದು ನಾಟಕವನ್ನು ಬರೆಯಲು ಶುರು ಮಾಡಿದರು. ನಾನು ಇದ್ದ ಅಕ್ಕಿರಾಂಪುರದ ಮುಂದಕ್ಕೆ ಮಧುಗಿರಿಯ ಹತ್ತಿರದ ಊರಿನವರಾದ ಬ್ರಹ್ಮಪ್ಪ, ಬೇಸಿಗೆ ಮುಗಿದು ಕಾಲೇಜು ಪ್ರಾರಂಭವಾಗುವ ಒಂದೆರಡು ದಿನ ಮೊದಲು ನನ್ನ ಬಳಿಗೆ ಬರುತ್ತಿದ್ದರು. ಆಗ ನಾವಿಬ್ಬರೂ ತುಮಕೂರಿಗೆ ಜತೆಯಾಗಿ ಪ್ರಯಾಣ ಮಾಡುತ್ತಿದ್ದೆವು, ಸೈಕಲ್ ಮೇಲೆ. ಆ ಕಾಲದಲ್ಲಿ ಸುಮಾರು ಒಂದು ವರ್ಷ ಕಾಲವೋ ಏನೋ ನನ್ನ ಹತ್ತಿರ ಒಂದು ಹಳೆಯ ಬೈಸಿಕಲ್ ಇತ್ತು. ಹದಿನೆಂಟು ರೂಪಾಯಿ ಕೊಟ್ಟು ನನಗಾಗಿ ನಮ್ಮ ತಂದೆ ಕೊಡಿಸಿಕೊಟ್ಟ ಬೈಸಿಕಲ್‌ನಿಂದ ನಾನು ಚೆನ್ನಾಗಿ ಸವಾರಿ ಮಾಡಿದೆ ಅನ್ನುವುದರ ಬದಲು ಅದನ್ನು ಚೆನ್ನಾಗಿ ರಿಪೇರಿ ಮಾಡುವುದನ್ನು ಕಲಿತೆ ಅನ್ನಬಹುದು. ಯಾಕೆಂದರೆ ಸ್ವಲ್ಪ ದೂರ ಪ್ರಯಾಣ ಮಾಡುವುದರ ಒಳಗೇ ಅದರ ಯಾವುದೋ ಒಂದು ಭಾಗ ಕಳಚಿಕೊಂಡು ಬಿದ್ದುಬಿಡುತ್ತಿತ್ತು. ಹೀಗಾಗಿ ಅದನ್ನೆಲ್ಲಾ ಜೋಡಿಸಿ ರಿಪೇರಿ ಮಾಡುವ ಕೆಲಸ ನನ್ನದಾಗಿತ್ತು. ಬರ ಬರುತ್ತಾ ಅದರಲ್ಲಿ ನಾನು ಎಷ್ಟು ಪರಿಣತನಾದನೆಂದರೆ, ಆ ಬೈಸಿಕಲ್ಲನ್ನು ಸಂಪೂರ್ಣ ಬಿಚ್ಚಿ ಇರಿಸಿ ಮತ್ತೆ ಜೋಡಿಸಬಲ್ಲವನಾಗಿ, ಸಲೀಸಾಗಿ ಸೈಕಲ್ ರಿಪೇರಿಯನ್ನೆ ನನ್ನ ಉದ್ಯೋಗವನ್ನಾಗಿ ನಾನು ಆರಿಸಿಕೊಳ್ಳುವಷ್ಟರಮಟ್ಟಿಗೆ. ಇದೆಲ್ಲಾದರೂ ನಮ್ಮ ತಂದೆಯವರಿಗೆ ಮನದಟ್ಟಾಗಿದ್ದರೆ, ಬಹುಶಃ ನನಗೆ ಆ ಕೆಲಸವನ್ನೆ ಅವರು ಹಚ್ಚಿಬಿಡುತ್ತಿದ್ದರೋ ಏನೊ. ಅಂತೂ ಆ ಬೈಸಿಕಲ್ಲು ನನ್ನ ಕೈಯಲ್ಲಿ ಸುರಕ್ಷಿತವಾಗಿತ್ತು. ಇಂಥ ಬೈಸಿಕಲ್ಲ ಮೇಲೆ ನಾನು ಬ್ರಹ್ಮಪ್ಪನವರೂ ಡಬ್ಬಲ್‌ರೈಡ್ ಮಾಡಿಕೊಂಡು, ಅಕ್ಕಿರಾಂಪುರದಿಂದ ತುಮಕೂರಿನವರೆಗೂ ಸುಮಾರು ಇಪ್ಪತ್ತೈದು ಮೈಲಿ ಪ್ರಯಾಣ ಮಾಡುತ್ತಿದ್ದೆವು. ಸೈಕಲ್‌ನ ಹಿಂದೆ ಕೂತ ಅವರು, ತಾವು ಬರೆಯಲು ಯೋಚಿಸಿದ ನಾಟಕದ ಸಂಗತಿಯನ್ನು ನನಗೆ ಹೇಳುತ್ತಿದ್ದರು.

ಮತ್ತೆ ನಾನು, ೧೯೪೬-೪೭ರ ವೇಳೆಗೆ ಮಹಾರಾಜಾ ಕಾಲೇಜಿನಲ್ಲಿ ಬಿ.ಎ.ಅನರ‍್ಸ್ ಸೇರಿದಾಗ, ಅವರು ನನ್ನ ಸಹಪಾಠಿ. ಆ ವೇಳೆಗೆ ಅವರಿಗೆ ನಶ್ಯದ ಗೀಳು ಅಂಟಿಕೊಂಡಿತ್ತು. ಒಂದು ಚಿಟಕಿ ನಶ್ಯ ಏರಿಸಿದರೆಂದರೆ ಅವರ ಮಾತಿಗೆ ಅಂದಿನಂತೆ ಇಂದೂ ಎಲ್ಲಿಲ್ಲದ ಒಂದು ಸ್ಫೂರ್ತಿ ಬಂದು ಅಮರಿಕೊಳ್ಳುತ್ತದೆ.

ಎರಡನೆ ಬಿ.ಎ. ಆನರ‍್ಸ್‌ನಲ್ಲಿರುವಾಗ, ನಾವು ಒಂದು ಶೈಕ್ಷಣಿಕ ಪ್ರವಾಸ ಹೋಗುವ ಅವಕಾಶ ಲಭಿಸಿತು. ನಮ್ಮ ತರಗತಿಯ ಆರೇಳು ಜನ, ಮತ್ತೆ ಮೂರನೇ ಬಿ.ಎ.ಆನರ‍್ಸ್‌ನ ಒಂದಿಬ್ಬರು, ಹಂಪೆ-ಗದಗು-ಬಾದಾಮಿ-ಐಹೊಳೆ-ಪಟ್ಟದಕಲ್ ಕಡೆಗೆ ಪ್ರಪ್ರಥಮವಾಗಿ ಪ್ರವಾಸ ಹೊರಟೆವು. ಪ್ರೊ.ಕೆ.ವಿ. ರಾಘವಾಚಾರ್ಯರು ನಮ್ಮ ಉಸ್ತುವಾರಿಗೆ ಬಂದವರು. ಮೈಸೂರಿನಿಂದ ಸಂಜೆ ಐದು ಗಂಟೆಗೆ ಹೊಸಪೇಟೆಗೆ ನಾವು ಕೂತ ರೈಲು ಹೊರಟಿತು. ನಮ್ಮ ಬ್ರಹ್ಮಪ್ಪನವರು, ರೈಲ್ವೆ ಕಂಪಾರ್ಟ್‌ಮೆಂಟಲ್ಲಿ ಕುಳಿತವರೇ, ಪೆನ್ನು-ಪೇಪರು ತೆಗೆದರು. ನೋಡುತ್ತೇನೆ ತದೇಕಚಿತ್ತರಾಗಿ ಪಶ್ಚಿಮ ದಿಗಂತದಲ್ಲಿ ಧ್ಯಾನಲೀನರಾಗಿ, ಆಗಾಗ ತಮ್ಮ ಕೈಯೊಳಗಿನ ನೋಟ್‌ಬುಕ್ಕಿನಲ್ಲಿ ಏನನ್ನೊ ಗುರುತು ಹಾಕುತ್ತಿದ್ದರು. ಸರಿ, ಅವರಿಗೆ ‘ಕಾವ್ಯಸಮಾಧಿ’ ಹತ್ತಿದೆ ಎಂದು ನಾವೆಲ್ಲ ಸುಮ್ಮನಾದೆವು. ಮರುದಿನ ಬೆಳಿಗ್ಗೆ ಹಂಪೆಯನ್ನು ತಲುಪಿ ಯಾರದೋ ಒಂದು ಮನೆಯಲ್ಲಿ ಉಳಿದುಕೊಂಡೆವು. ಇಡೀ ಎರಡು ದಿನ ಹಂಪೆ ಭಗ್ನಾವಶೇಷಗಳನ್ನು ನೋಡಿದೆವು. ಅದರ ಮುಂದಿನ ಮಧ್ಯಾಹ್ನ ಹಂಪೆಯಿಂದ ಬಾದಾಮಿಗೆ ಹೊರಡುವುದೆಂದು ಕಾರ್ಯಕ್ರಮ ನಿಶ್ಚಿತವಾಯಿತು. ಊಟ ಮುಗಿಸಿ ನಮ್ಮ ಗಂಟು ಮೂಟೆಗಳನ್ನು ಕಟ್ಟಿ, ಹೊಸಪೇಟೆಯ ರೈಲ್ವೆಸ್ಟೇಷನ್ನಿಗೆ ಹೊರಟಿದ್ದೇವೆ, ನಮ್ಮ ಪ್ರಾಧ್ಯಾಪಕ ರಾಘವಾಚಾರ್ಯರು, ಬ್ರಹ್ಮಪ್ಪ ಎಲ್ಲಿ ಎಂದರು. ನೋಡುತ್ತೇವೆ, ಊಟಕ್ಕೆ ಜತೆಗೆ ಕೂತಿದ್ದ ಬ್ರಹ್ಮಪ್ಪ ಊಟವಾದ ಮೇಲೆ ನಾಪತ್ತೆ. ಎಲ್ಲಿ ಹೋದರು ಇವರು ಎಂದು ನಾವು ನಾಲ್ಕಾರು ಜನ ಅಲ್ಲಿ ಇಲ್ಲಿ ಪರದಾಡುತ್ತಿದ್ದರೆ, ಬ್ರಹ್ಮಪ್ಪ ಯಾವುದೋ ಒಂದು ಮುರುಕು ಮಂಟಪದೊಳಗೆ, ನಿಶ್ಚಿಂತೆಯಿಂದ ಕೂತು ಏನನ್ನೋ ಬರೆಯುತ್ತಿದ್ದಾರೆ. ಹೋಗಿ ನಾವು ಕೂಗಿದರೆ ಮಾತೇ ಇಲ್ಲ; ಅಂಥ ಕಾವ್ಯಸಮಾಧಿ- ಯೊಳಗೆ ಮಗ್ನವಾಗಿದ್ದಾರೆ. ಸರಿ; ಮುಗಿಯಿತು. ಅವರ ಮೈಮೇಲೆ ಹಂಪೆಯಕವಿ ಹರಿಹರ ಬಂದಿದ್ದಾನೆ ಅಂದುಕೊಂಡೆವು. ಕೊನೆಗೆ ಹತ್ತಿರ ಹೋಗಿ ಅಲ್ಲಾಡಿಸಿದಾಗಲೇ, ಅವರಿಗೆ ಅರಿವಾದದ್ದು; ನಾವೆಲ್ಲಾ ಹೊಸಪೇಟೆಗೆ ಹೊರಡಲು ಬಸ್ಸು ಹಿಡಿಯಬೇಕಾಗಿದೆ ಎಂಬ ಸಂಗತಿ ತಿಳಿದದ್ದು.

ನಮ್ಮೆಲ್ಲರಿಗೂ ಬ್ರಹ್ಮಪ್ಪ ಮೈಸೂರು ಬಿಟ್ಟು ಹೊರಟಾಗಿನಿಂದ ಹಿಡಿದು, ಹಾಳು ಹಂಪೆಯ ಮುರುಕು ಮಂಟಪವೊಂದರಲ್ಲಿ ಕಾವ್ಯಸಮಾಧಿಗೆ ಕೂತವರೆಗೂ ಕುತೂಹಲ ಕಾಡುತ್ತಿತ್ತು. ಆದರೆ ಬಾದಾಮಿಯನ್ನು ನೋಡಿಕೊಂಡು ಪಟ್ಟದಕಲ್ ಬರುವವರೆಗೂ ನಮ್ಮ ಕುತೂಹಲಕ್ಕೆ ಪರಿಹಾರ ದೊರೆಯಲೇ ಇಲ್ಲ. ಬಾದಾಮಿಯಿಂದ ಎರಡು ಎತ್ತಿನ ಗಾಡಿ ಮಾಡಿಕೊಂಡು, ಒಂದು ಬೆಳದಿಂಗಳ ಇರುಳಿನಲ್ಲಿ ರಾತ್ರಿ ಹತ್ತು ಗಂಟೆಯ ವೇಳೆಗೆ ಪಟ್ಟದಕಲ್ಲನ್ನು ನಾವು ತಲುಪಿದೆವು. ಈ ಪಯಣದ ರಾತ್ರಿಯ ಅನುಭವವನ್ನೆ ಕುರಿತು ಆನಂತರ ನಾನೂ ಒಂದು ಪದ್ಯ ಬರೆದೆ; ಆ ಪದ್ಯಕ್ಕೆ ಮಹಾರಾಜಾ ಕಾಲೇಜಿನ ಕರ್ನಾಟಕ ಸಂಘದ ಕವಿತಾ ಸ್ಪರ್ಧೆಯಲ್ಲಿ ಬಹುಮಾನ ಬಂತು.

ಪಟ್ಟದಕಲ್ಲು ತಲುಪಿದಾಗ ರಾತ್ರಿ ಹತ್ತು ಗಂಟೆ, ಯಾವುದೋ ಒಂದು ಮುರುಕು ಮನೆಯಲ್ಲಿ ನಮ್ಮ ತಂಗಣೆ. ಜೋಳದರೊಟ್ಟಿ, ಖಾರದ ಚಟ್ನಿ ತಿಂದು ‘ಹಾಹಾಕಾರ’ ಮಾಡುತ್ತಾ ನಾವು ಚಾಪೆಗಳನ್ನು ಬಿಡಿಸಿಕೊಂಡು ಮಲಗಲು ಸಿದ್ಧರಾದೆವು. ಆಗ ನಮ್ಮ ಸ್ನೇಹಿತರೊಬ್ಬರು, ಪ್ರೊಫೆಸರ್ ರಾಘವಾಚಾರ್ಯರಿಗೆ, ‘ಸಾರ್ ಬ್ರಹ್ಮಪ್ಪನವರು ಒಂದು ಭಾರೀ ಕಾವ್ಯಬರೆದು ಮುಗಿಸಿದ್ದಾರೆ ಹಂಪೆಯಲ್ಲಿ; ಅದನ್ನು ಓದಲು ಹೇಳಿ ಸಾರ್’- ಅಂದರು. “ಅದಕ್ಕೇನಂತೆ ಕೇಳೋಣ; ಎಲ್ಲಯ್ಯ ಬ್ರಹ್ಮಪ್ಪ, ಅದೇನು ಬರೆದಿದ್ದೀಯೋ ಓದು” ಅಂದರು. ಕೂಡಲೇ ಬ್ರಹ್ಮಪ್ಪನವರು ತಮ್ಮ ಕೈಚೀಲದಿಂದ ಒಂದು ನೋಟ್ ಬುಕ್ಕನ್ನು ತೆರೆದು, ಒಂದು ಚಿಟಿಕೆ ನಶ್ಯ ಏರಿಸಿ ತಮ್ಮ ಹೊಚ್ಚಹೊಸ ಕಾವ್ಯವನ್ನು ಓದಲು ಸಿದ್ಧರಾದರು. ರಾತ್ರಿ ಹನ್ನೊಂದೂವರೆ ಗಂಟೆ; ನಿಶ್ಶಬ್ದವಾದ ಹಳ್ಳಿ; ಇಡೀ ಹಳ್ಳಿಯ ಮೇಲೆ ಬೆಳುದಿಂಗಳು; ಅದರ ಕೆಳಗಿನ ಮುರುಕು ಹೆಂಚಿನ ಮನೆಯೊಳಗೆ ಉರಿಯುವ ಲಾಟೀನಿನ ಸುತ್ತ ಕುತೂಹಲಭರಿತರಾದ ಸಹೃದಯ ವೃಂದ. ಕವಿಗೆ ಇದಕ್ಕಿಂತ ಪ್ರಶಸ್ತವಾದ ಸಂದರ್ಭ ಬೇರೆ ಬೇಕೆ? ನಶ್ಯವನ್ನು ಮತ್ತೆ ಒಮ್ಮೆ ಮೂಗಿಗೆ ಏರಿಸಿ, ಕರ್ಚೀಫಿನಿಂದ ಮೂಗೊರೆಸಿಕೊಂಡು ಶುರು ಮಾಡಿದರು ಬ್ರಹ್ಮಪ್ಪನವರು-

ಹಂಪೆಯ ಬಳಿ ಹರಿಯುತಿದೆ ತುಂಗಭದ್ರೆ
ಇದ ನೋಡಿದರೆ ನನಗೆ ಬರುವುದು ನಿದ್ರೆ

ಎಂದು ಅವರು ತಮ್ಮ ಮಹಾಕಾವ್ಯದ ಮೊದಲೆರಡು ಪಂಕ್ತಿಗಳನ್ನು ಓದುತ್ತಲೇ, ಹಂಪೆಯಿಂದ ದೂರದ ಪಟ್ಟದಕಲ್ಲಿನ ಮುರುಕು ಮನೆಯಲ್ಲಿ ನಿದ್ರೆಬರುವ ಹಾಗಿದ್ದ ನಾವೆಲ್ಲಾ ‘ಹೋ’ ಎಂದು ನಕ್ಕು ಪ್ರತಿಕ್ರಿಯೆ ತೋರಿದೆವು. ತುಂಗಭದ್ರಾ ನದಿಯ ವರ್ಣನೆ, ಹಾಗೂ ಹಾಳು ಹಂಪೆಯನ್ನು ಕುರಿತು ಅವರ ಪ್ರತಿಕ್ರಿಯೆಗಳಿದ್ದ ಆ ಕಾವ್ಯ, ಮುಂದೆ-

ರಾಣಿಯರ ರಾಗದ ರಾಟೆ ತಿರುವಿದ ತಾಣದಲಿ
ಕತ್ತೆಗಳು ಲದ್ದಿಯನಿಕ್ಕುತಿವೆ ಸೋಗಿನಲಿ

ಎಂಬ ಚರಣಕ್ಕೆ ಬಂದ ಕೂಡಲೆ, ರಾಘಾವಾಚಾರ್ಯರು ‘ಅದೇನಪ್ಪ ಸೋಗಿನಲಿ- ಅಂದರೆ?’ ‘ತಾಣದಲಿ’ ಅನ್ನೋದಕ್ಕೆ ಪ್ರಾಸವಾಗಿ ಬಂದಿದೆ ಸಾರ್ ‘ಸೋಗಿನಲಿ’ ಅನ್ನುವುದು ಅಂದರು ಬ್ರಹ್ಮಪ್ಪ.

ಹಂಪೆಯನ್ನು ಕುರಿತು ನಮ್ಮ ಈ ಬ್ರಹ್ಮಪ್ಪ ಬರೆದ ಆ ಮಹಾಕಾವ್ಯ ಎಲ್ಲೂ ಪ್ರಕಟವಾಗಲಿಲ್ಲವೆಂದು ನನ್ನ ನೆನಪು; ಆದರೆ ನನಗೆ ನೆನಪಿರುವುದು ಆ ನಾಲ್ಕು ಪಂಕ್ತಿಗಳು ಮಾತ್ರ.

ಅವರು ನನಗೆ ‘ಡಬ್ಬಲ್‌ರೈಡ್’ ದಿನಗಳಲ್ಲಿ ಸೈಕಲ್ಲಿನ ಹಿಂದೆ ಕೂತು ಹೇಳುತ್ತಿದ್ದ ಆ ನಾಟಕ ‘ಭರತೇಶನ ಬಾಳ್ಗಬ್ಬಂ’ ಆನಂತರ ಅಚ್ಚಾಯಿತು. ಅದು ಆದಿದೇವನ ಮಗನಾದ ಭರತ ಚಕ್ರವರ್ತಿಯನ್ನು ಕುರಿತು ಬರೆದ ಒಂದು ನಾಟಕ. ಆ ನಾಟಕದ ಒಂದು ಸಂದರ್ಭದ ಒಂದೆರಡು ಪಂಕ್ತಿಗಳು ನನಗಿನ್ನೂ ನೆನಪಿವೆ. ಷಟ್‌ಖಂಡಮಂಡಲಗಳನ್ನು ಗೆದ್ದು ತನ್ನ ರಾಜಧಾನಿಗೆ ಹಿಂದಿರುಗುವ ದಾರಿಯಲ್ಲಿನ ವೃಷಭಾಚಲಪರ್ವತದ ಮೇಖಲಾ ಭಿತ್ತಿಯಲ್ಲಿ ಚಕ್ರವರ್ತಿ ತನ್ನ ವಿಜಯಪ್ರಶಸ್ತಿಯನ್ನು ಬರೆಯಿಸುವ ಸಂದರ್ಭದಲ್ಲಿ, ಭರತ ಚಕ್ರವರ್ತಿಗೆ ತನ್ನ ಹೆಸರನ್ನು ಕೆತ್ತಿಸಲು ಒಂದಷ್ಟೂ ಸ್ಥಳವಿಲ್ಲದೆ, ಪೂರ್ವಾವನಿಪಾಲರ ನಾಮಾಂಕಿತಗಳೇ ಕಿಕ್ಕಿರಿದು ತುಂಬಿರುತ್ತವೆ, ಆಗ ಬ್ರಹ್ಮಪ್ಪನವರ ಭರತ ಹೇಳುತ್ತಾನೆ, ತನ್ನ ಮಂತ್ರಿಗೆ:

“ಮಂತ್ರೀ ಉಜ್ಜು ಮೇರುವಿನ ಕಾಯಕಿಡಿದಿರ್ಪ ಕಜ್ಜಿಯಂ” ಎಂದು.

ಈ ಪುಸ್ತಕದ ಮುದ್ರಣ, ಅವರು, ದಾವಣಗೆರೆಯ ಇಂಟರ್ ಮೀಡಿಯೇಟ್ ಕಾಲೇಜಿಗೆ ಕನ್ನಡ ಅಧ್ಯಾಪಕರಾಗಿ ಬಂದಾಗ ಆಯಿತೆಂದು ತೋರುತ್ತದೆ. ಅವರು ಅಲ್ಲಿಗೆ ಬರುವ ವೇಳೆಗೆ ನನಗೆ ದಾವಣಗೆರೆಯ ಕಾಲೇಜಿನಲ್ಲಿ ಒಂದು ವರ್ಷ ಸರ್ವಿಸ್ ಆಗಿತ್ತು. ಆಗಲೇ ಅವರು ನನಗೆ ಅದರದೊಂದು ಪ್ರತಿಯನ್ನು ಉಚಿತವಾಗಿ ಕೊಟ್ಟದ್ದು. ಆಗ  ಅವರು ಆ ತಮ್ಮ ನಾಟಕವನ್ನು ತಾವೇ ಮಾರಾಟ ಮಾಡಿದ ರೀತಿ, ಕನ್ನಡ ಪುಸ್ತಕ ಪ್ರಕಟಣದ ಚರಿತ್ರೆಯಲ್ಲಿಯೇ ‘ನಭೂತೋ ನಭವಿಷ್ಯತಿ’ ಎಂಬಂತಿದೆ. ಕಾಲೇಜು ಮುಗಿದ ಮೇಲೆ ಅವರು ಬಗಲ ಚೀಲದಲ್ಲಿ ‘ಭರತೇಶ ಬಾಳ್ಗಬ್ಬಂ’ ನಾಟಕದ ಪ್ರತಿಗಳನ್ನು ಹಾಕಿಕೊಂಡು ಪೇಟೆಗೆ ಹೋಗುತ್ತಿದ್ದರು. ಒಂದು ಅಂಗಡಿಗೆ, ಅದೂ ಜೈನರ ಅಂಗಡಿಗೆ ಹೋಗುವುದು; ಹೋಗಿ ಒಂದು ಸೇರು ಹುಣಿಸೆ ಹಣ್ಣು ಖರೀದಿ ಮಾಡುವುದು, ಅದನ್ನು ಬೇರೊಂದು ಚೀಲದಲ್ಲಿ ಹಾಕಿಕೊಳ್ಳುವುದು, ಆನಂತರ ಹುಣಿಸೆ ಹಣ್ಣಿನ ಬೆಲೆ ಎಷ್ಟಾಯಿತೆಂದು ಕೇಳುವುದು, ಅವರು ‘ಎರಡು ರೂಪಾಯಿ’ ಎಂದರು ಅನ್ನಿ, ಕೂಡಲೇ ತಮ್ಮ ಬಗಲ ಚೀಲದಿಂದ ‘ಭರತೇಶ ಬಾಳ್ಗಬ್ಬಂ’ ನಾಟಕದ ಒಂದು ಪ್ರತಿಯನ್ನು ಅಂಗಡಿಯವನ ಕೈಯಲ್ಲಿ ಕೊಡುವುದು. “ನೋಡಿ ಇದು ಪ್ರಥಮ ತೀರ್ಥಂಕರನ ಮಗ ಭರತ ಚಕ್ರವಕರ್ತಿಯನ್ನು ಕುರಿತ ನಾಟಕ; ಇದರ ಬೆಲೆ, ಮೇಲೆ ನೋಡಲು ಕೇವಲ ಎರಡು ರೂಪಾಯಿ, ನೀವು ಕೊಟ್ಟ ಹುಣಿಸೆಹಣ್ಣಿನ ಬೆಲೆಗೆ ಇದನ್ನು ವಜಾ ಹಾಕಿಕೊಳ್ಳಿ. ಆದರೆ ನಿಮ್ಮ ಹುಣಿಸೆ ಹಣ್ಣಿನ ಬೆಲೆಗಿಂತ ಇದರ ಬೆಲೆ, ಧರ್ಮದ ದೃಷ್ಟಿಯಿಂದ, ಬಹಳವೆಂದರೆ ಬಹಳ; ಬೆಲೆ ಕಟ್ಟಲು ಬರುವುದಿಲ್ಲ. ದಿನಾ ಇದನ್ನು ಪಠಣಮಾಡಿ” ಅನ್ನುತ್ತಿದ್ದರು. ಮತ್ತೆ ಇಂಥವೇ ಜೈನರ ಬೇರೆ ಬೇರೆ ಅಂಗಡಿಗಳಲ್ಲಿ, ಮನೆಗೆ ಬೇಕಾದ ಬೆಲ್ಲ, ಅಕ್ಕಿ, ಉಪ್ಪು ಇತ್ಯಾದಿಗಳಿಗೆಲ್ಲಾ ಅವರು ಹಣದ ಬದಲು ಕೊಡುತ್ತಿದ್ದದ್ದು ‘ಭರತೇಶನ ಬಾಳ್ಗಬ್ಬಂ’ ನಾಟಕವನ್ನೇ. ಇದು ಬ್ರಹ್ಮಪ್ಪನವರ ವ್ಯಾಪಾರದ ವೈಖರಿ!

ನಾನೂ ಬ್ರಹ್ಮಪ್ಪ ದಾವಣಗೆರೆ ಕಾಲೇಜಿನಲ್ಲಿ ಕನ್ನಡ ಲೆಕ್ಚರರ್ ಆಗಿದ್ದ ಕಾಲದಲ್ಲಿ ನಾ. ಕಸ್ತೂರಿಯವರು ಕಾಲೇಜಿನ ಸೂಪರಿಂಟೆಂಡೆಂಟರು. ಮಲೆಯಾಳ (ಕೇರಳ)ದಿಂದ ಕನ್ನಡನಾಡಿಗೆ ಬಂದು ಕನ್ನಡ ಕಲಿತು, ಅದನ್ನು ಅರಗಿಸಿಕೊಂಡು, ಸೊಗಸಾದ ಸಾಹಿತ್ಯವನ್ನು ಬರೆದು, ಕನ್ನಡದ ಶಬ್ದ ಭಂಡಾರಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡಿದವರು ನಾ.ಕಸ್ತೂರಿಯವರು. ಆದರೆ, ಇಂಥ ವ್ಯಕ್ತಿಗೆ ಕನ್ನಡ ಜನ ಸಲ್ಲಿಸಬೇಕಾದ ಗೌರವವನ್ನು ಸಲ್ಲಿಸಲಿಲ್ಲವಲ್ಲಾ ಎಂಬುದೇ ದುರದೃಷ್ಟಕರವಾದ ಸಂಗತಿ. ದಾವಣಗೆರೆಯಲ್ಲಿ ಅವರು ನನ್ನಂಥ ತರುಣ ಅಧ್ಯಾಪಕರನ್ನು ತಮ್ಮಜತೆ ಸುತ್ತ ಮುತ್ತಣ ಊರೂರುಗಳಿಗೆ ಕರೆದುಕೊಂಡು ಹೋಗಿ ಬಲವಂತವಾಗಿ ಮಾತನಾಡಿಸುವುದರ ಮೂಲಕ ವಿವಿಧ ಸ್ತರದ ಸಭೆಗಳ ಮುಂದೆ ಭಾಷಣ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಟ್ಟು, ಕಲಿಸಿದರು. ಆಗ ನನ್ನಿಂದಲೂ ಕೆಲವು ಹಾಸ್ಯಭರಿತ ಕವನಗಳನ್ನು ಬರೆಯಿಸಿ, ‘ರಾಶಿ’ಯವರು ಬೆಂಗಳೂರಿನಲ್ಲಿ ತರುತ್ತಿದ್ದ ‘ಕೊರವಂಜಿ’ ಮಾಸಪತ್ರಿಕೆಯಲ್ಲಿ ‘ದಿಬ್ಬಯ್ಯ’ನೆಂಬ ಕಾವ್ಯನಾಮದಲ್ಲಿ ಪ್ರಕಟವಾಗುವಂತೆ ನೋಡಿಕೊಂಡರು. ನಾನೂ ನನ್ನ ಗೆಳೆಯ ಪ್ರಭುಪ್ರಸಾದರೂ, ದಾವಣಗೆರೆಯ ಊರಾಚೆಗಿನ ಬಯಲ ನಡುವೆ ಸಂಜೆ ತಿರುಗಾಡಲು ಹೋಗಿ, ಅಲ್ಲಿದ್ದ ದಿಬ್ಬವೊಂದರ ಮೇಲೆ ಕೂರುತ್ತಿದ್ದೆವು. ಅದನ್ನು ಗಮನಿಸಿದ ಕಸ್ತೂರಿಯವರು, ನಾನು ಬರೆದ ಹಾಸ್ಯಕವನಗಳಿಗಾಗಿ, ನನಗೆ ‘ದಿಬ್ಬಯ್ಯ’ನೆಂಬ ಕಾವ್ಯನಾಮವನ್ನು ಸೂಚಿಸಿದರು. ಹಾಗೆ ಅಂದು ನಾನು ಬರೆದ ಒಂದು ಕವನ ಹೀಗಿದೆ:

ಇಂದ್ರಭವನದಲಿ ಚಂದ್ರ ಮೂಡಿತೋ
ದೋಸೆ ಹಂಚಿನಲ್ಲಿ.
ಮೂಡಿತೆಂಬೆಯೊ
, ಮತ್ತೆ ಮುಳುಗಿತೋ
ಉದರ ಗಗನದಲ್ಲಿ!

ಈ ಪದ್ಯವನ್ನು ‘ರಾಶಿ’ (ಡಾ. ಶಿವರಾಂ)ಯವರು ತುಂಬ ಮೆಚ್ಚಿಕೊಂಡಿದ್ದರು.

ಒಂದು ಮಧ್ಯಾಹ್ನ ತರಗತಿ ಮುಗಿಸಿಕೊಂಡು, ಕಸ್ತೂರಿಯವರನ್ನು ನೋಡೋಣ ಎಂದು ಅವರ ಕೊಠಡಿಗೆ ಪ್ರವೇಶಿಸಿದೆ. ಸಾಮಾನ್ಯವಾಗಿ ತುಂಬ ಲವಲವಿಕೆಯಿಂದ ಇರುತ್ತಿದ್ದ ಅವರು ಅಂದು ಯಾಕೋ ಸ್ವಲ್ಪ ಸುಸ್ತಾದವರಂತೆ ತೋರಿದರು. ನನ್ನನ್ನು ಕಂಡು ‘ಬಾರಯ್ಯ ಬಾ, ಕ್ಲಾಸು ಮುಗೀತು ಅಂತ ಕಾಣುತ್ತೆ’ಅಂದರು. ನಾನು, ‘ಹೌದು ಸಾರ್, ಯಾಕೋ ಇವತ್ತು ಸ್ವಲ್ಪ ಆಯಾಸಗೊಂಡವರಂತೆ ಕಾಣಿಸುತ್ತೀರಲ್ಲ?’ ಎಂದೆ. ‘ಇವತ್ತು ಬೆಳಿಗ್ಗೆಯಿಂದ ಬರೀ ಪುರಂದರದಾಸರ ಕೀರ್ತನೆ ಕೇಳಿ ಕೇಳಿ ಸಾಕಾಗಿದೆ ಕಣಯ್ಯ’ ಅಂದರು. ನನಗೆ ಅರ್ಥವಾಗಲಿಲ್ಲ. ಅವರು ಮುಂದುವರಿದರು, “ಈಗ ಗೊತ್ತಲ್ಲ ಫ್ರೀಷಿಪ್ಪು, ಹಾಫ್ ಫ್ರೀಷಿಪ್ಪು, ಸ್ಕಾಲರ್‌ಷಿಪ್ಪು ಡಿಸೈಡ್ ಮಾಡುವ ಕಾಲ. ಅದಕ್ಕಾಗಿ ಹುಡುಗರು ಬೆಳಿಗ್ಗೆಯಿಂದ ಬಂದು ಪೀಡಿಸುತ್ತಾ ಇದ್ದಾರೆ. ಒಬ್ಬ ಬರ‍್ತಾನೆ, ‘ಸಾರ್, ರಾಮಯ್ಯನಿಗೆ ಹಾಫ್ ಫ್ರೀ ಕೊಟ್ಟಿದೀರ, ವೆಂಕಟಪ್ಪನಿಗೆ ಫುಲ್ ಫ್ರೀ ಕೊಟ್ಟಿದೀರಾ, ಸೋಮಣ್ಣನಿಗೆ ಸ್ಕಾಲರ್ ಷಿಪ್ ಕೊಡುವುದಾಗಿ ಹೇಳಿದೀರಿ, ನಂಗ್ಯಾಕೆ ಸಾ, ಒಂದು ಹಾಫ್‌ಫ್ರಿನಾದಾರೂ ಕೊಡಬಾರದು’-ಹೀಗೆ ಪ್ರತಿಯೊಬ್ಬರೂ, ಪುರಂದರದಾಸರ ಹಾಗೆ ‘ಅಜಾಮಿಳನಿಗೆ ನಾರಾಯಣ ಅಂದದ್ದಕ್ಕೆ ಒಲಿದೆ; ದ್ರೌಪದಿ ಕೃಷ್ಣಾ ಎಂದು ಕರೆದದ್ದಕ್ಕೆ ಅಕ್ಷಯ ವಸ್ತ್ರ ಕರುಣಿಸಿದೆ; ಗಜೇಂದ್ರ ಸೊಂಡಿಲೆತ್ತಿ ಕರೆದ, ಅವನಿಗೆ ಒಲಿದೆ. ನನಗ್ಯಾಕೆ ಕೃಪೆ ಮಾಡಬಾರದು?’ ಇದೇ ತಾನೇ ದಾಸರ ಕೀರ್ತನೆಗಳ ಧಾಟಿ? ಬೆಳಗಿಂದಲೂ ನಮ್ಮ ಈ ದಾಸರುಗಳು ಮಾಡಿದ್ದೂ ಇದನ್ನೇ” ಅಂದರು. ನನಗೆ ಜೋರಾಗಿ ನಗು ಬಂದಿತು.

ಕಸ್ತೂರಿಯವರು ಕಾಲೇಜಿನ ಸೂಪರಿಂಟೆಂಡೆಂಟರಾದ, ಕಾಲದಲ್ಲಿ ಒಂದು ದಿನ. ಕ್ರಿಸ್‌ಮಸ್ ರಜಾ ಮುಗಿದು ಕಾಲೇಜು ‘ರೀಓಪನ್’ ಆಗುವ ದಿನ. ಆ ದಿನ ಎಲ್ಲ ಅಧ್ಯಾಪಕರೂ ಊರಿಗೆ, ಗೀರಿಗೆ ಹೋಗಿದ್ದವರು ಬಂದು ಹತ್ತೂವರೆಗೆ ಹಾಜರಾಗಬೇಕಾದದ್ದು ಕಡ್ಡಾಯ. ಅಂಥ ಒಂದು ದಿನ ಮೈಸೂರಿಂದ ಬರಬೇಕಾಗಿದ್ದ ಎಸ್. ಅನಂತನಾರಾಯಣ ಮತ್ತು ಮಧುಗಿರಿಯ ಕಡೆಯಿಂದ ಬರಬೇಕಾಗಿದ್ದ ಬ್ರಹ್ಮಪ್ಪ ಇಬ್ಬರೂ, ಕಾಲೇಜು ಪ್ರಾರಂಭವಾಗಿ ಒಂದುಗಂಟೆ ಕಳೆದರೂ ಬಂದಿರಲಿಲ್ಲ. ಗಂಟೆ ಮಧ್ಯಾಹ್ನ ಒಂದೂವರೆಯಾಯಿತು ಇನ್ನೇನು ಆಬ್ಸೆಂಟ್ ಹಾಕಿ, ಆ ಬಗ್ಗೆ ವಿಶ್ವವಿದ್ಯಾಲಯಕ್ಕೆ ರಿಪೋರ್ಟು ಬರೆಯಬೇಕು ಸೂಪರಿಂಟೆಂಡೆಂಟರು. ಏದುಸಿರು ಬಿಡುತ್ತಾ ಬ್ರಹ್ಮಪ್ಪ ಕಸ್ತೂರಿಯವರ ಕೊಠಡಿಗೆ ನುಗ್ಗಿದರು. ಕಸ್ತೂರಿಯವರು, “ಏನಯ್ಯಾ ಇದು ಬ್ರಹ್ಮಪ್ಪ, ರೀಓಪನಿಂಗ್ ಡೇ ಇದು ಅಂತ ಗೊತ್ತಿಲ್ಲವಾ. ಇಷ್ಟೊಂದು ತಡವಾಗೇನಯ್ಯ ಬರೋದು”ಅಂದರು. ಅದಕ್ಕೆ ಉತ್ತರವಾಗಿ ಬ್ರಹ್ಮಪ್ಪನವರು “ನಿಮ್ಮ ಮನೇಲಿ ಇಟ್ಟುಬಂದಿದ್ದೇನೆ ಸಾರ್ ಅದಕ್ಕೇ ಸ್ವಲ್ಪ ತಡವಾಯಿತು” ಅಂದರು. “ಇದೇನ್ರೀ ನಾನು ಕೇಳೋದು ಏನು? ನೀವು ಹೇಳೋದು ಏನು? ರಿಪೋರ್ಟ್ ಮಾಡಬೇಕಾಗುತ್ತೆ ನಾನು” ಅಂತ ಗದರಿಸಿದರು ಕಸ್ತೂರಿಯವರು. “ಹೌದು ಸಾರ್ ಲೇಟಾಯಿತು, ದಾರೀಲಿ ಬಸ್ಸು ಕೆಟ್ಟು, ಆದರೂ ನಿಮ್ಮ ಮನೇಲಿ ಇಟ್ಟುಬಂದಿದೀನಿ, ಸಾರ್ ನಿಮ್ಮ ಮನೆಯವರನ್ನ ಕೇಳಿ?”ಅಂದರು. “ಅರೆ, ಇದೇನಯ್ಯ ನೀನು ಇಟ್ಟು ಬಂದಿರೋದು” ಅಂದರು ಕಸ್ತೂರಿಯವರು.  ಮತ್ತೆ ಹಲ್ಲು ಕಿರಿಯುತ್ತಾ “ಅದೇ ಸಾರ್ ಹಲಸಿನಹಣ್ಣು, ಮಧುಗಿರಿ ಕಡೆ ನಮ್ಮ ತೋಟದ್ದೆ ಸಾರ್. ಒಳ್ಳೇ ಹಲಸಿನಹಣ್ಣು, ಅದನ್ನು ಬಸ್ಸಿಂದ ಇಳಿಸಿ ನಿಮ್ಮ ಮನೇಲಿ ಇಟ್ಟು ಬಂದಿದೇನೆ ಸಾರ್” ಅಂದರು ಬ್ರಹ್ಮಪ್ಪ.

“ಮೊದಲೇ ಯಾಕಯ್ಯ ಸರಿಯಾಗಿ ಹೇಳಲಿಲ್ಲ. ಈಗ ಹೋಗು. ಕ್ಲಾಸ್ ತಗೋ, ಸಾಯಂಕಾಲ ಮನೆಗೆ ಬಾ, ಹಲಸಿನಹಣ್ಣು ಬಿಚ್ಚೋಣವಂತೆ” ಅಂದರು ಕಸ್ತೂರಿಯವರು.

ಮುಗಿಸುವ ಮುನ್ನ

ನೆನಪುಗಳಿಗೆ ಕೊನೆ ಇಲ್ಲ. ನಾನು ಬರೆಯಲಪೇಕ್ಷಿಸುವ ನೆನಪುಗಳ ಹಾಗೆಯೇ, ಮರೆಯಲಪೇಕ್ಷಿಸುವ ನೆನಪುಗಳೂ ಸಾಕಷ್ಟಿವೆ. ಅವುಗಳನ್ನು ಹೇಳಿಕೊಳ್ಳುವುದರಿಂದ ಯಾವ ಸುಖವೂ ಇಲ್ಲ. ಮನುಷ್ಯ ನೆಮ್ಮದಿಯಿಂದಿರಬೇಕಾದರೆ ಎಷ್ಟನ್ನೋ ನೆನೆಯದಿರುವುದೇ ಒಳ್ಳೆಯದು.

– ೧೯೮೬