ಕಂ|| ಈತನ ಬಿರ್ದಿನನೀತಂ
ಭೂತಳಪತಿಯೆನಿಸಿದರಿಗನೊಡೆಯಂ ಹರಿ ತಾ|
ನೀತನೆ ಬಿರ್ದಿನನೆನೆ ವಿ
ಖ್ಯಾತಂಗೆ ನರಂಗೆ ಸೆಱಪುಗೆಯ್ದನನಂತಂ|| ೪೪

ವ|| ಅಂತೆನಿತಾನುಮಂದದೊಳ್ ಸೆಱಪುಗೆಯ್ದು ವಿವಿಧ ವಿನೋದಂಗಳಂ ತೋಱ ಮುನ್ನೆ ಬದರಿಕಾಶ್ರಮದೊಳ್-

ಕಂ|| ಆಯತಿಯಿಂದಂ ನರ ನಾ
ರಾಯಣರೆನೆ ನೆಗೞ್ದೆವರಿಗ ನಾವಿರ್ವರುಮಿಂ|
ತೀ ಯುಗದೊಳೀಗಳಾಂ ನಾ
ರಾಯಣನೆಂ ನೀನುದಾತ್ತನಾರಾಯಣನೈ|. ೪೫

ವ|| ಅದಱಂ ನಿನಗಮೆನಗಮೇತಱ ಳಂ ವಿಕಲ್ಪಮುಂ ವಿಚ್ಛಿನ್ನಮುಮಿಲ್ಲೆಂದು ನುಡಿಯುತಿರ್ಪನ್ನೆಗಮಿತ್ತಲ್-

ಚಂ|| ನವ ನಳಿನೀ ವನಂಗಳ ಪರಾಗರಜಂಗಳನುಂಡು ಮುನ್ನಮಂ
ತವನೆ ವಿಯತ್ತಳ ಭ್ರಮಣ ವಿಹ್ವಲನಾಗಿ ಬೞಲ್ದು ಕಾಱುವಂ|
ತೆವೊಲಿರೆ ಕೆಂಪು ತತ್ಕಮಳ ಕಾನನ ಕಂಟಕ ಲಗ್ನಪಾದನಾ
ದವೊಲುಡುಗುತ್ತುಮಾತ್ಮ ಕರಮಂ ರವಿ ಪೊರ್ದಿದನಸ್ತಶೈಲಮಂ|| ೪೬

ವ|| ಆ ಪ್ರಸ್ತಾವದೊಳ್-

ಉ|| ಆ ಸರಸೀಜ ಬಾಂಧವನ ಪಿಂಬಡಿನೊಳ್ ಕಡುವಿನ್ನನಾದುವಿಂ
ತೀ ಸರಸೀರುಹಂಗಳವನೀ ಪದದೊಳ್ ಬಿಸುಟೆಂತು ಪೋಪೆವೆಂ|
ಬೀ ಸಮಕಟ್ಟಿನೊಳ್ ನೆಲಸಿದಂತೆಱಗಿರ್ದುವು ಷಟ್ಪದಂಗಳು
ತ್ಕೇಸರ ಕೋಟಿ ಸಂಕಟ ಕುಶೇಶಯಕೋಶ ಕುಟೀರಕಂಗಳೊಳ್|| ೪೭

ಚಂಡಮರೀಚಿಗಸ್ತಮಯಮಿಲ್ಲದುದೊಂದೆಡೆ ನಿಮ್ಮ ಕೇಳ್ದುದುಂ
ಕಂಡುದುಮುಳ್ಳೊಡಿನ್ ಬೆಸಸಿಮಾಮಿರದಲ್ಲಿಗೆ ಪೋಪೆವೆಂದು ಮೆ|
ಯ್ಗೊಂಡೊಲವಿಂದಗಲ್ಕೆಗಣಮಾಱದೆ ಪಕ್ಕಿಗಳೆಲ್ಲಮಂ ಮರು
ಳ್ಗೊಂಡವೊಲೂಳ್ದು ಕೂಡೆ ಬೆಸಗೊಂಡು ಬಿೞಲ್ದುವು ಜಕ್ಕವಕ್ಕಿಗಳ್|| ೪೮

ಕುಳಿತಿದ್ದು ಸ್ನಾನ, ಭೋಜನ-ತಾಂಬೂಲ, ಗಂಧಾನುಲೇಪನ, ಆಭರಣ, ಸುಗಂಧಪುಷ್ಪಮಾಲೆಯೇ ಮೊದಲಾದವುಗಳಿಂದ ಸಂತೋಷಪಟ್ಟು ಕೃಷ್ಣನು ತನ್ನ ಹೊಟ್ಟೆಯಲ್ಲಿಯೇ ಅರ್ಜುನನನ್ನು ಮಡಗಿಕೊಳ್ಳುವಷ್ಟು ಪ್ರೀತಿಯಿಂದ ಆಯಾಸಪರಿಹಾರವನ್ನು ಮಾಡಿದನು.

೪೪. ಇವನು ಅತಿಥಿ; ಇವನೇ ಭೂಪತಿಯಾದ ಅರಿಕೇಸರಿ; ಒಡೆಯನಾದ ಕೃಷ್ಣಪರಮಾತ್ಮನೂ (ತಾನೂ) ಈತನೇ. ಇವನೇ ವಾಸ್ತವನಾದ ನೆಂಟ, ಎನ್ನುವ ಹಾಗೆ ಸುಪ್ರಸಿದ್ಧನಾದ ಅರ್ಜುನನಿಗೆ ಕೃಷ್ಣನು ಅತಿಥ್ಯವನ್ನು ಮಾಡಿದನು. ವ|| ಹಾಗೆ ಅನೇಕರೀತಿಯಲ್ಲಿ ಸತ್ಕಾರಮಾಡಿ ನಾನಾರೀತಿಯ ಆಟಪಾಟಗಳನ್ನು ತೋರಿ ಕೃಷ್ಣನು ಅರ್ಜುನನಿಗೆ ಹೀಗೆಂದನು- ಅರ್ಜುನ! ಹಿಂದೆ ಬದರೀಕಾಶ್ರಮದಲ್ಲಿ- ೪೫ ಹಿಂದೆ ನಾವು ಪರಸ್ಪರಾವಲಂಬನದಿಂದ ಸುಪ್ರಸಿದ್ಧರಾದ ನರನಾರಾಯಣರಾಗಿದ್ದೆವು. ಈಗ ನಾವಿಬ್ಬರೂ ಈ ಯುಗದಲ್ಲಿಯೂ ಹಾಗೆಯೇ; ನಾನು ನಾರಾಯಣ (ಶ್ರೀಕೃಷ್ಣ), ನೀನು ಉದಾತ್ತನಾರಾಯಣನಾದ ಅರಿಕೇಸರಿ ವ|| ಆದುದರಿಂದ ನಿನಗೂ ನನಗೂ ಯಾವ ವಿಧದಲ್ಲಿಯೂ ವ್ಯತ್ಯಾಸವೂ ವಿಚ್ಛಿತ್ತಿ (ವಿಚ್ಛಿನ್ನ)ಯೂ ಇಲ್ಲವೆಂದು ಹೇಳುತ್ತಿರುವಲ್ಲಿ ಸಾಯಂಕಾಲವಾಯಿತು. ೪೬. ಸೂರ್ಯನು ಮೊದಲು ಹೊಸದಾಗಿ ಅರಳಿದ ತಾವರೆಯ ತೋಟದ ಧೂಳನ್ನು (ಪರಾಗವನ್ನು) ತಿಂದು, ಆಕಾಶದಲ್ಲಿ ಸುತ್ತಿದ ಶ್ರಮದಿಂದ ಬಳಲಿ ಆ ತಿಂದ ಧೂಳನ್ನೇವಾಂತಿ ಮಾಡುತ್ತಿರುವ ಹಾಗೆ ಸಂಜೆಗೆಂಪು ತೋರುತ್ತಿರಲು ಆ ತಾವರೆಯ ಕಾಡಿನ ಮುಳ್ಳುಗಳಲ್ಲಿ ಕಾಲು ಸಿಕ್ಕಿಕೊಂಡ ಕಿರಣವುಳ್ಳವನಾಗಿ ತನ್ನ ಕಿರಣಗಳನ್ನು ಉಡುಗಿಸಿಕೊಂಡು ಅಸ್ತಾಚಲವನ್ನು ಸೇರಿದನು (ಮುಳುಗಿದನು). ವ|| ಆಸಮಯದಲ್ಲಿ ೪೭. ಕಮಲಬಂಧುವಾದ ಸೂರ್ಯನ ಹಿಂದೆಯೇ ಈ ತಾವರೆಗಳೂ ಬಹಳ ಖಿನ್ನವಾಗಿವೆ (ಬಾಡಿವೆ). ಈ ಸಮಯದಲ್ಲಿ ಇವುಗಳನ್ನು ಬಿಸುಟು ನಾವು ಹೇಗೆ ಹೋಗುವೆವು ಎಂದು ದುರವಸ್ಥೆಯಲ್ಲಿ ನಿಂತಂತೆ ದುಂಬಿಗಳು ಅನೇಕ ಕೇಸರಗಳ ಇಕ್ಕಟ್ಟಿನ ಸಂಕಟಕ್ಕೊಳಗಾಗಿ ತಾವರೆಯ ಮೊಗ್ಗೆಂಬ ಗುಡಿಸಲಿನ ಒಳಗೆ ಸಿಕ್ಕಿಬಿದ್ದುವು. ೪೮. ಸೂರ್ಯನಿಗೆ ಅಸ್ತಮಯವೇ ಇಲ್ಲದ ಸ್ಥಳವೊಂದನ್ನು ನೀವು ಕೇಳಿದ್ದರೆ ಅಥವಾ ಕಂಡಿದ್ದರೆ ಹೇಳಿ; ನಾವು ಸಾವಕಾಶಮಾಡದೆ ಅಲ್ಲಿಗೆ ಹೊರಟುಹೋಗುತ್ತೇವೆ ಎಂದು ಹುಚ್ಚರಂತೆ ಎಲ್ಲ ಪಕ್ಷಿಗಳಿಗೂ ಕೂಗಿ

ವ|| ಅಂತು ಕಮಳವನಂಗಳಾದಿತ್ಯಂಗೆ ಕೆಯ್ಯಂ ಮುಗಿವಂತೆ ಮುಗಿಯೆ ಜಕ್ಕವಕ್ಕಿಗಳ್ ಸುರತಮಕರಧ್ವಜನ ಸುಭದ್ರೆಯ ವಿರಹಪರಿತಾಪಮಂ ಪಚ್ಚುಕೊಂಡಸುಂಗೊಂಡಗಲೆ ಸಂಧ್ಯಾರಾಗಮವರ ಮನದನುರಾಗಮನನುಕರಿಸುವಂತುಟಾಗೆ ಬೞಯಂ ಕ್ರಮಕ್ರಮದೊಳ್-

ಮ|| ಮಸಿಯಿಂದಂ ಜಗಮೆಲ್ಲಮಂ ದಿತಿಸುತಂ ಮುಂ ಪೂೞ್ದನೋ ಕಾಲಮೇ
ಘಸಮೂಹಂ ದೆಸೆಯೆಲ್ಲಮಂ ಕವಿದುದೋ ಗಂಧೇಭ ಚರ್ಮಂಗಳಂ|
ಪಸರಂಗೆಯ್ದನೊ ಶಂಭುವೆಂಬ ಬಗೆಯಿಂ ತಳ್ಪೊಯ್ದು ಕೞ್ಪೇಱ ಸೂ
ಚಿಸಲಾರ್ಗಂ ವಶಮಾಗದಂತು ಕವಿದತ್ತುದ್ದಾಮ ಭೀಮಂ ತಮಂ|| ೪೯

ವ|| ಆಗಳಾ ತಾರಾಗಣಂಗಳ್ ದಿಶಾವನಿತೆಯರ ಮಕುಟಮಾಣಿಕಂಗಳಂತೆನಿತು ಬೆಳಗಿಯುಂ ಕೞ್ತಲೆಯನಲೆಯಲಾಱವಾದುವು ಕನಕ ಪ್ರಾಸಾದ ಪಂಙ್ಕೆ ಗಳ್ ಪೞಪೞನೆ ಬೆಳಗುವ ಸೊಡರ್ಗಳನಾದಿತ್ಯನ ತಮೋರಾಜಕಂ ಮುಳಿದು ಸೆಗೆಯ್ದ ಬೆಳಗಿನ ಸೆಯ ಮನೆಗಳನ್ನವಾದುವು ಮದಗಜ ಗಂಡಸ್ಥಳಂಗಳೊಳೆಱಗಿ ಮೊರೆವ ತುಂಬಿಯ ಬಂಬಲ್ಗಳೆ ವಿಮುಖಿಭೂತಂಗಳಾದುವು ತಂಡತಂಡದೋಲಗಕ್ಕೆ ಪುಗುವ ಪೊಱಮಡುವ ವಾರವಿಳಾಸಿನಿಯರ ನೂಪುರಂಗಳ ರವಂಗಳೊಳ್ ನೃಪಭವನೋಪವನ ದೀರ್ಘಿಕಾಹಂಸಕುಳಂಗಳ್ ತಳವೆಳಗಾದುವು ರಾಜಹಂಸಪಾರಾವತಮಿಥುನಂಗಳುತ್ತುಂಗಪ್ರಾಸಾದಶಿಖರ ಮಣಿಗವಾಕ್ಷಾಂತರಾಳ ವಿವಿಧ ಗೃಹಾಂತರಗತಂಗಳಾದುವು ಉದಯಗಿರಿ ಕಟಕ ಕುಹರ ಪರಿಕರ ನಿಶಾಕರಂ ಹರಿದಳಿತ ನಿಜ ಹರಿಣ ರುರ ನಿಚಯ ನಿಚಿತಮಾದಂತೆ ಲೋಹಿತಾಂಗನಾಗೆ-

ಮ|| ನೆರೆದೈ ಸಂಜೆಯೊಳೆಂದು ಕಾಯ್ದೊದೆದೊಡೇನಾತ್ಮಾಂಗದೊಳ್ ರೋಹಿಣೀ
ಚರಣಾಲಕ್ತಕ ರಾಗಮಚ್ಚಿಱದುದೋ ಮೇಣ್ ಕಾಮಿಗಳ್ಗೀವ ರಾ|
ಗರಸಂ ಪೊಣ್ಮಿದುದೋ ತಮೋಗಜದ ಕೋಡೇಱಂದಮೇಂ ನೊಂದುದೋ
ಹರಿಣಂ ತಾನೆನಿಸಿತ್ತು ರಕ್ತರುಚಿಯಿಂ ಬಿಂಬಂ ಸುಧಾಸೂತಿಯಾ|| ೫೦

ವ|| ಆಗಳ್ ತನ್ನ ರಾಗಮಂ ರಾಗಿಗಳ್ಗೆಲ್ಲಂ ಪಚ್ಚುಕೊಟ್ಟಂತೆ ಕೆಂಪು ಪತ್ತುವಿಟ್ಟಾಗಳ್-

ಹೇಳಿ ತನ್ನಲ್ಲಿ ವ್ಯಾಪ್ತವಾಗಿದ್ದ ಪ್ರೀತಿಯಿಂದ ತಾವು ಬೆರೆಯಲಾರದೆ ಚಕ್ರವಾಕಪಕ್ಷಿಗಳು ವಿಶೇಷವಾಗಿ ಬಳಲಿದುವು. ವ|| ಹಾಗೆ ತಾವರೆಯ ತೋಟಗಳು ಸೂರ್ಯನಿಗೆ ಕೈಮುಗಿಯುವಂತೆ ಮೊಗ್ಗಾಗಲು (ಮುಚ್ಚಿಕೊಳ್ಳಲು), ಚಕ್ರವಾಕಪಕ್ಷಿಗಳು ಅರ್ಜುನ ಸುಭದ್ರೆಯರ ವಿರಹತಾಪದಲ್ಲಿ ತಾವೂ ಭಾಗಿಗಳಾಗಿ (ದುಖಪಟ್ಟು?) ತಕ್ಷಣ ಅಗಲಲು ಸಾಯಂಕಾಲದ ಕೆಂಪುಬಣ್ಣವು ಅವರ ಮನಸ್ಸಿನ ಅನುರಾಗವನ್ನು ಅನುಕರಿಸುವಂತೆ ಸಂಧ್ಯಾರಾಗವು ಕಾಣಿಸಿತು. ೪೯. ಸ್ವಲ್ಪಕಾಲದಲ್ಲಿಯೇ ರಾಕ್ಷಸನು ಸಮಸ್ತ ಜಗತ್ತನ್ನು ಕಾಡಿಗೆಯಿಂದ ಹೂಳಿಬಿಟ್ಟಿದ್ದಾನೆಯೋ ಪ್ರಳಯಕಾಲದ ಮೋಡದ ಸಮೂಹಗಳು ದಿಕ್ಕುಗಳನ್ನೆಲ್ಲ ಕವಿದುಕೊಂಡಿದೆಯೋ ಈಶ್ವರನು ಮದ್ದಾನೆಯ ಚರ್ಮವನ್ನು ಹರಡಿದ್ದಾನೆಯೋ ಎಂಬ ಚಿಂತೆಯನ್ನುಂಟುಮಾಡಿ ಕಪ್ಪುಬಣ್ಣವು ವೃದ್ಧಿಯಾಗಿ (ಇದು ಹೀಗೆ ಎಂದು ಸೂಚಿಸುವುದಕ್ಕೆ) ಯಾರಿಗೂ ಶಕ್ಯವಿಲ್ಲದ ರೀತಿಯಲ್ಲಿ ಬಹಳ ಭಯಂಕರವಾದ ಕತ್ತಲೆಯು ಕವಿದುಕೊಂಡಿತು. ವ|| ಆಗ ನಕ್ಷತ್ರಮಂಡಲವು ದಿಗ್ವನಿತೆಯರ ಕಿರೀಟಮಾಣಿಕ್ಯದಷ್ಟು ಪ್ರಕಾಶಮಾನವಾಗಿದ್ದರೂ ಕತ್ತಲೆಯನ್ನು ಹೋಗಲಾಡಿಸಲು ಶಕ್ತವಾಗಲಿಲ್ಲ. ಸುವರ್ಣ ನಿರ್ಮಿತವಾದ ಉಪ್ಪರಿಗೆಯ ಸಾಲುಗಳು ಪಳಪಳನೆ ಬೆಳಗುತ್ತಿದ್ದ ದೀಪಗಳು ಸೂರ್ಯನ ನಂಟರೆಂದು ಕತ್ತಲೆಯೆಂಬ ರಾಜನು ಕೋಪಗೊಂಡು (ಆ ದೀಪಗಳನ್ನು) ಬಂಸಿದ ಪ್ರಾತಕಾಲದ ಸೆರೆಮನೆಗಳಂತೆ ಆದವು. ಮದ್ದಾನೆಗಳ ಕಪೋಲ ಪ್ರದೇಶಗಳಲ್ಲಿ ಎರಗಿ ಝೇಂಕರಿಸುವ ದುಂಬಿಯ ಸಮೂಹಗಳು ಮುಖತಿರುಗಿಸಿದವು. ಗುಂಪುಗುಂಪಾಗಿ ಅರಮನೆಗೆ ಬಂದು ಹೋಗುವ ವೇಶ್ಯೆಯರ ಕಾಲಂದಿಗೆಯ ಶಬ್ದವನ್ನು ಕೇಳಿ ಅರಮನೆಯ ಕೈದೋಟಸರೋವರದಲ್ಲಿದ್ದ ಹಂಸಸಮೂಹಗಳು ಅಸ್ತವ್ಯಸ್ತವಾದುವು. ರಾಜಹಂಸ ಮತ್ತು ಪಾರಿವಾಳದ ಜೋಡಿಗಳು ಉಪ್ಪರಿಗೆಯ ತುದಿಯಲ್ಲಿರುವ ರತ್ನಖಚಿತವಾದ ಕಿಟಕಿಗಳ ಮಧ್ಯಭಾಗದ ಮನೆಗಳನ್ನು (ಗೂಡುಗಳನ್ನು) ಹೋಗಿ ಸೇರಿದುವು. ಉದಯ ಪರ್ವತದ ತಪ್ಪಲಿನ ಗುಹೆಗಳ ಸಹಾಯವನ್ನುಳ್ಳ (ಅಂದರೆ ಮೂಡದಿಕ್ಕಿನಲ್ಲಿ ಉದಯಿಸುತ್ತಿದ್ದ) ಚಂದ್ರನು ಸಿಂಹದಿಂದ ಸೀಳಲ್ಪಟ್ಟ ತನ್ನ ಜಿಂಕೆಯ ರಕ್ತರಾಶಿಯಿಂದ ತುಂಬಿದವನಂತೆ ಕೆಂಪು ವರ್ಣದವನಾದನು. ೫೦. ಸಂಜೆಯೆಂಬ (ಅನ್ಯ) ಸ್ತ್ರೀಯಲ್ಲಿ ಕೂಡಿದೆಯಾ ಎಂದು (ಹೆಂಡತಿಯಾದ ರೋಹಿಣಿ ದೇವಿಯು) ಕೋಪದಿಂದ ಒದೆಯಲು ಅವಳ ಕಾಲಿನ ಅರಗಿನ ಬಣ್ಣವು ಚಂದ್ರನ ಶರೀರದಲ್ಲಿ ಎರಕ ಹೊಯ್ದಿದೆಯೋ ಅಥವಾ ಕಾಮಿಗಳಿಗೆ (ಸಹಜವಾಗಿಯೇ) ಕೊಡುವ (ಹೆಚ್ಚುವ) ಕಾಮರಸವು ಅಭಿವೃದ್ಧಿಯಾಯಿತೋ ಅಥವಾ (ಚಂದ್ರನ) ಜಿಂಕೆಯು ಕತ್ತಲೆಯೆಂಬ ಆನೆಯ ಕೊಂಬಿನ ಗಾಯದಿಂದ ಗಾಯಗೊಂಡಿದೆಯೋ ಎನ್ನುವ ಹಾಗೆ ಚಂದ್ರಬಿಂಬದ ಕೆಂಪು ಕಾಂತಿಯು ಎನ್ನಿಸಿತು. ವ|| ಸ್ವಲ್ಪಕಾಲದ ಮೇಲೆ ತನ್ನ ರಾಗ (ಕೆಂಪುಬಣ್ಣ)ವನ್ನು ರಾಗಿಗಳಿಗೆಲ್ಲ (ಪ್ರೀತಿಪಾತ್ರರಾದವರು- ಪ್ರಿಯ ಪ್ರೇಯಸಿಯರು- ವಿರಹಿಗಳು)

ಮ|| ಮುನಿದೀಶಂ ತವೆ ಸುಟ್ಟು ಮುಂ ಕರುಣದಿಂದಿತ್ತಂ ಪುನರ್ಜನ್ಮಮಂ
ನಿನಗೆಂದಾ ರತಿ ಪಾಪಮುಂ ಪಡಣಮುಂ ಪೋಪಂತೆ ಕಾಮಂಗೆ ಮಂ|
ಜ್ಜನಕೆಂದೆತ್ತಿದ ಚಂದ್ರಕಾಂತ ಘಟದೊಳ್ ತಂದೞಯಿಂ ಪುಷ್ಪ ವಾ
ಸನೆಗೆಂದಿಕ್ಕಿದ ನೀಳ ನೀರರುಹಮಂ ಪೋಲ್ದತ್ತು ಕೞಂದುವಾ|| ೫೧

ಕನ್ನೆತನಂಗೆಯ್ಯಲ್ ಬಗೆ
ಗುನ್ನಾಣ್ ಮಿಗೆ ಮನಮುಮಿೞ್ದ್ದುವರಿಯಲ್ ಬಗೆಗುಂ|
ಕನ್ನಡಿಕುಂ ತನ್ನಳಿಪಂ
ತನ್ನಲೆ ತಾನಿಂತು ಕನ್ನೆ ತಳವೆಳಗಾದಳ್|| ೫೫

ನುಡಿಯಿಸಿ ಕೇಳ್ಗುಂ ಹರಿಗನ
ಪಡೆಮಾತನೆ ಮಾತು ತಪ್ಪೊಡಂ ಮತ್ತಮದಂ|
ನುಡಿಯಿಸುಗುಂ ಮೊದಲಿಂದಾ
ನುಡಿ ಪಱಪಡೆ ಮುಳಿದು ನೋಡುಗಂ ಕೆಳದಿಯರಂ|| ೫೬

ಅಱ ಮರುಳಂತುಟೆ ಸೊರ್ಕಿನ
ತೆಱದಂತುಟೆ ಮನಮೊಱಲ್ವುದೆರ್ದೆಯುರಿವುದು ಮೆ|
ಯ್ಯೆಱಗುವುದು ಪದೆವುದಾನಿದ
ನಱಯೆನಿದೇಕೆಂದು ಕನ್ನೆ ತಳವೆಳಗಾದಳ್|| ೫೭

ಉ|| ಆನೆಯನೇಱ ಸೌಷ್ಠವದೆ ಬರ್ಪರಿಕೇಸರಿಯೊಂದು ಗಾಡಿಯು
ದ್ದಾನಿ ತಗುಳ್ದು ಕಣ್ಣೊಳೆ ತೊೞಲ್ದೆರ್ದೆಯೊಳ್ ತಡಮಾಡೆ ಬೇಟದು ||
ದ್ದಾನಿಯನಾನೆ ಮನ್ಮಥ ಮಹೀಭುಜನೋವದೆ ತೋಱಕೊಟ್ಟುದೊಂ
ದಾನೆಯೆ ತನ್ನನಾನೆಗೊಲೆಗೊಂದಪುದೆಂದು ಲತಾಂಗಿ ಬೆರ್ಚಿದಳ್|| ೫೮

ಭಾಗಮಾಡಿಕೊಟ್ಟ ಹಾಗೆ ಕೆಂಪುಬಣ್ಣವು ಕಳೆದುಹೋಗಲಾಗಿ ಚಂದ್ರಬಿಂಬವು ಬೆಳ್ಳಗಾಯಿತು. ೫೧. ಈಶ್ವರನೂ ಮನ್ಮಥನ ಮೇಲೆ ಮೊದಲು ಕೋಪಿಸಿಕೊಂಡು (ನೇತ್ರಾಗ್ನಿಯಿಂದ) ಸುಟ್ಟು ಭಸ್ಮಮಾಡಿ ಪುನ ಕರುಣೆಯಿಂದ ನಿನಗೆ ಜನ್ಮವಿತ್ತಿದ್ದಾನೆ ಎಂದು ರತಿದೇವಿಯು ಅವನ ಪಾಪವನ್ನು ಪತನವನ್ನು ಹೋಗಲಾಡಿಸುವುದಕ್ಕಾಗಿ ಕಾಮನ ಮಜ್ಜನಕ್ಕೆ ಎತ್ತಿದ ಚಂದ್ರಕಾಂತ ಶಿಲೆಯ ಕಲಶದಲ್ಲಿ ಅದನ್ನು ವಾಸನಾಯುಕ್ತವನ್ನಾಗಿ ಮಾಡುವುದಕ್ಕಾಗಿ ಪ್ರೀತಿಯಿಂದ ತಂದಿಟ್ಟ ಕನ್ನೆ ದಿಲೆಯ ಪುಷ್ಪವನ್ನು ಚಂದ್ರನ ಕಪ್ಪು (ಕಲೆ-ಕರೆ) ಹೋಲುತ್ತಿತ್ತು. ೫೨. (ಬೆಳದಿಂಗಳು) ಭೂಮ್ಯಮಂತರಿಕ್ಷಗಳ ಮಧ್ಯಭಾಗವನ್ನು ಅಮೃತದಕಾಂತಿ ಆವರಿಸಿತೊ ಎನ್ನುವ ಹಾಗಿರಲು ವಿರಹಿಗಳು (ಪ್ರೇಮಿಗಳನ್ನು ಅಗಲಿರುವವರು) ಇದು ಮನ್ಮಥನು ನಮ್ಮನ್ನು ಹುಡುಕಲು ತಂದಿರುವ ಹುಡುಕುದೀಪ; ಕಾಪಾಡಿ ಕಾಪಾಡಿ ಎಂದು ಕೂಗಿಕೊಳ್ಳುವಂತೆ ಚಂದ್ರನು ತೊಳಗಿ ಪ್ರಕಾಶಿಸಿದನು. ೫೩. ಹಾಗೆ ಸೊಗಯಿಸುವ ಸ್ವಚ್ಛವಾದ ಬೆಳದಿಂಗಳಿನಲ್ಲಿ ಸುಣ್ಣದಿಂದ ಬಿಳುಪುಮಾಡಲ್ಪಟ್ಟ ಎತ್ತರವೂ ಮನೋಹರವೂ ಆದ ಉಪ್ಪರಿಗೆಯ ಎರಡನೆಯ ಅಂತಸ್ತಿನ ಆಕರ್ಷಕವಾದ ಚಚ್ಚೌಕದ ಮುಂದಿನ ಮಹಡಿಯ ಮುಂಭಾಗದಲ್ಲಿ ವಿಜೃಂಭಣೆಯಿಂದ ಕೃಷ್ಣನು ಓಲಗದಿಂದಿದ್ದು ಅರ್ಜುನನೊಡನೆ ಅನೇಕ ವಿನೋದಗಳಿಂದ ಕೂಡಿದನು. ಆದಿಶೇಷನ ಅನಂತವಾದ ಹೆಡೆಯ ರತ್ನಗಳ ಸಮೂಹವು ಪ್ರಕಾಶಿಸುತ್ತಿರಲು ನಾರಾಯಣನು ಕ್ಷೀರಸಮುದ್ರದಲ್ಲಿ ಸಂತೋಷದಿಂದಿರುವ ಹಾಗೆ (ಇಲ್ಲಿ) ಕೈದೀವಿಗೆಗಳ ಸಮೂಹವು ಪ್ರಕಾಶಿಸಿ ಬೆಳಗುತ್ತಿರಲು ಅರ್ಜುನನು ಸುಖದಿಂದ ಇದ್ದನು. ೫೪. ಆ ಕಡೆ ಸುಭದ್ರೆಯು ಕೂಡ ವಿರಹತಾಪದಿಂದ ಮೈಸುಡುತ್ತಿರಲು ನಿಶ್ಚೇಷ್ಟಳಾಗಿ ಅರ್ಜುನನು ಇದ್ದ ಕಡೆಯೇ ನೋಡುತ್ತಿರಲು ಅವಳ ಸಖಿಯರ ಸಮೂಹವು ಅವಳ ರೂಪವನ್ನು ಸುಂದರವಾದ ಸಾಲುಬೊಂಬೆಯೆಂದು ಭ್ರಮಿಸಿತು. ೫೫. ನಾಚಿಕೆಯು ಕನ್ಯಾಭಾವವನ್ನು ಪ್ರದರ್ಶಿಸಲು ಇಚ್ಚಿಸುತ್ತದೆ. ಮನಸ್ಸಾದರೋ ವಿಶೇಷವಾಗಿ (ಅರ್ಜುನನ ಕಡೆ) ಸೆಳೆದುಕೊಂಡು ಹೋಗಲು ಆಶಿಸುತ್ತದೆ. ತನ್ನ ಪ್ರೇಮವನ್ನು ವಿಶದಪಡಿಸುತ್ತದೆ ಎಂದು ಕನ್ಯೆಯಾದ ಸುಭದ್ರೆಯು ತನ್ನಲ್ಲಿಯೇ ತಬ್ಬಿಬ್ಬಾದಳು. ೫೬. ಅರ್ಜುನನ ವಿಷಯಕವಾದ ಮಾತನ್ನೇ (ಕೆಳದಿಯರಿಂದ) ಹೇಳಿಸಿ ಕೇಳುತ್ತಾಳೆ. ಆ ಮಾತು ನಿಂತುಹೋದರೆ ಪುನ ಆ ಮಾತನ್ನೇ ಮೊದಲಿನಿಂದಲೂ ನುಡಿಯಿಸುತ್ತಾಳೆ. ಅದೂ ನಿಂತುಹೋದರೆ ಸಖಿಯರನ್ನೂ ಕೋಪದಿಂದ ನೋಡುತ್ತಾಳೆ. ೫೭. ಬುದ್ಧಿಭ್ರಮಣೆಯಾಗುತ್ತದೆ. ಸೊಕ್ಕಿನಿಂದ ಮಯ್ ಮರೆದಂತಾಗುತ್ತದೆ. ಮನಸ್ಸು ಪ್ರೀತಿಸುತ್ತದೆ. ಎದೆಯುರಿಯುತ್ತದೆ. ಶರೀರವು (ಅವನ ಕಡೆಯೇ) ಬಾಗುತ್ತದೆ. (ಅವನನ್ನೇ) ಅಪೇಕ್ಷಿಸುತ್ತದೆ.ಇದೇಕೆಂದು ತಿಳಿಯಲಾರದೆ ಕನ್ಯೆಯಾದ ಸುಭದ್ರೆಯು ತಳವೆಳಗಾದಳು. ೫೮. ಆನೆಯನ್ನು ಹತ್ತಿ ಸೊಗಸಾಗಿ ಬರುತ್ತಿರುವ ಅರ್ಜುನನ ಒಂದು ಸೌಂದರ್ಯಾತಿಶಯವು

ಮ|| ಮನಮಾರಾತಹೋಮಭೂಮಿ ಪಶುಗಳ್ ಕಾಮಾತುರರ್ ಬಂದ ಮಾ
ವನಿತುಂ ಸ್ಥಾಪಿತ ಯೂಪಕೋಟಿ ಬಳವತ್ಕಾಮಾಗ್ನಿ ಹೋಮಾಗ್ನಿ ಚಂ|
ದನ ಕರ್ಪೂರ ಮೃಣಾಳನಾಳಮೆ ಪೊದಳ್ದಿಧ್ಮಂಗಳಿಂತಾಗೆ ತಾ
ನಿನಿತುಂ ಕಾಮನ ಬೇಳ್ವೆಯೆಂದು ಸುಗಿದಳ್ ತನ್ವಂಗಿ ಬೆಳ್ದಿಂಗಳೊಳ್|| ೫೯

ವ|| ಅಂತು ಕಾಮದೇವನೆಂಬ ಮಂತ್ರವಾದಿಯ ದಿವ್ಯಮಂತ್ರದಿಂ ಸ್ತೋಭಂಗೊಂಡ ದಿವ್ಯ ಗ್ರಹದಂತೆ ಕಾಮಗ್ರಹ ಗೃಹೀತೆಯಾಗಿರೆ ಮನೋವೈಕಲ್ಯ ರೋಮಾಂಚಕ ಸ್ತಂಭಕ ಕಂಪ ಸ್ವೇದ ವೈವರ್ಣ್ಯ ಸಂತಾಪನಾಹಾರ ವ್ಯಾಮೋಹ ಗದ್ಗದಾಶ್ರುಮೋಕ್ಷ ಮೂರ್ಛಾದಿ ನಾನಾ ವಿಕಾರಂಗಳನೊಡನೊಡನೆ ತೋಱುವುದುಮಾಕೆಯ ದಾದಿಯ ಮಗಳ್ ಚೂತಲತಿಕೆಯೆಂಬಳ್ ಕಂಡು-

ಚಂ|| ಪದೆವೆರ್ದೆ ಬತ್ತೆ ಕೆತ್ತುವಧರಂ ದೆಸೆಗೆಟ್ಟಲರ್ಗಣ್ಣ ನೋಟಮು
ಣ್ಮಿದ ಬೆಮರೋಳಿವಟ್ಟ ನಿಡುಸುಯ್ ತೊದಳಿಂಗೆಡೆಗೊಂಡ ಮಾತು ಕುಂ||
ದಿದ ಲತಿಕಾಂಗಮೊಂದಿದ ವಿಕಾರಮದೀಕೆಯೊಳೀಗಳಾದುದಿಂ
ತಿದು ಕುಸುಮಾಸ್ತ್ರನೆಂಬದಟನಿಕ್ಕಿದ ಸೊರ್ಕಿನ ಗೊಡ್ಡಮಾಗದೇ|| ೬೦

ವ|| ಎಂದು ತನ್ನೊಳೆ ಬಗೆದು ಮತ್ತಮಿಂತೆಂದಳ್-

ಚಂ|| ಕೞಯಲರಾದ ಸಂಪಗೆಯ ಬಣ್ಣದವೋಲೆ ಬೆಳರ್ತ ಬಣ್ಣದೊಳ್
ಗೞಯಿಸೆ ಕೆಂಪು ಕಣ್ಗಳ ಮೊದಲ್ಗಳೊಳೊಯ್ಯನೆ ತೋ ಬಾಡಿ ಪಾ|
ಡೞದು ಬೞಲ್ದು ಜೋಲ್ದಿರವು ಮೆಯ್ಯೊಳೆ ಮೆಯ್ವಿಡಿದೆನ್ನ ಕಣ್ಗಳೊಳ್
ಸುೞದುವು ತಾಮೆ ಕನ್ನಡಿಸಿದಪ್ಪುವು ಕನ್ನೆಯ ಕನ್ನೆವೇಟಮಂ|| ೬೧

ವ|| ಅದಱನೀಕೆಯ ಬಗೆಯನಱಯಲ್ವೇೞ್ಕುಮೆಂದು ಮೆಲ್ಲಮೆಲ್ಲನೆ ಕೆಲಕ್ಕೆವಂದು ಕುಂಚದಡಪದ ಡವಕೆಯ ಪರಿಚಾರಿಕೆಯರೆಲ್ಲರುಮಂ ಕಣ್ಗೆತ್ತಿ ಕಳೆದೇಕಾಂತದೊಳ್ ಕನ್ನೆಯನಿಂತೆಂದಳ್-

ಚಂ|| ಮೃಗಮದ ಪತ್ರರೇಖೆಗಳನೇಕೆಗೆ ತಾಳ್ದಿರದಾದುವೀ ಕದಂ
ಪುಗಳುರಮೇಕೆ ಹಾರ ಮಣಿಮಂಜರಿಯಿಲ್ಲದೆ ಬಿನ್ನಗಿರ್ದುದೀ|
ಜಗನಮಿದೇಕೆ ಹೇಮರಶನಾಧ್ವನಿಯಿಲ್ಲದೆ ಮೂಗುವಟ್ಟುದೀ
ಬಗೆಯೊಳಲಕ್ತಕ ದ್ರವದೊಳೊಂದದೆ ನಿಂದುವು ಪಾದಪಂಕಜಂ|| ೬೨

ತನ್ನನ್ನು (ಸುಭದ್ರೆಯನ್ನು) ಹಿಂಬಾಲಿಸಿ ಕಣ್ಣಿನಲ್ಲಿ ಸುತ್ತಾಡಿ ಎದೆಯಲ್ಲಿ ಸ್ಥಿರವಾಗಿ ಪ್ರೇಮಾತಿಶಯವನ್ನುಂಟುಮಾಡಲು ಮನ್ಮಥನೆಂಬ ರಾಜನೇ ತನ್ನಲ್ಲಿ ಸ್ವಲ್ಪವೂ ದಾಕ್ಷಿಣ್ಯವಿಲ್ಲದೆ ತನ್ನ ಆನೆಯನ್ನು ಛೂಬಿಟ್ಟು ಅದರಿಂದ ತನ್ನನ್ನು ಕೊಲ್ಲಿಸುವಂತೆ ಕೊಲ್ಲಿಸುತ್ತಿದ್ದಾನೆ ಎಂದು ಲತಾಂಗಿಯಾದ ಸುಭದ್ರೆಯು ಹೆದರಿದಳು. ೫೯. ಮನಸ್ಸೇ ಪೂಜಿಸಲ್ಪಟ್ಟ ಯಜ್ಞಭೂಮಿ, ಕಾಮಪೀಡಿತರಾದವರೇ ಬಲಿಗಾಗಿರುವ ಪಶುಗಳು, ಫಲಿಸಿ ಬಂದಿರುವ ಮಾವಿನಮರಗಳೇ ನೆಟ್ಟಿರುವ ಬಲಿಗಂಬಗಳು. ಅತಿಶಯವಾದ ಕಾಮಾಗ್ನಿಯೇ ಹೋಮಾಗ್ನಿ, ಶ್ರೀಗಂಧ, ಕರ್ಪೂರ, ತಾವರೆಯ ದಂಟುಗಳೇ ಅಲ್ಲಿ ಹರಡಿರುವ ಸಮಿತ್ತುಗಳ ಕಟ್ಟುಗಳು. ಹೀಗಾಗಲು ಇವಿಷ್ಟೂ ಕಾಮನ ಯಜ್ಞವೆಂದು ಸುಭದ್ರೆಯು ಬೆಳದಿಂಗಳಿನಲ್ಲಿ ಭಯಗೊಂಡಳು. ವ|| ಹಾಗೆ ಕಾಮದೇವನೆಂಬ ಮಂತ್ರವಾದಿಯ ದಿವ್ಯಮಂತ್ರದಿಂದ ಸ್ತಂಭಿತಳಾದ (ತಡೆಯಲ್ಪಟ್ಟ) ದಿವ್ಯಗ್ರಹದ ಹಾಗೆ ಕಾಮಗ್ರಹದಿಂದ ಹಿಡಿಯಲ್ಪಟ್ಟು ಬುದ್ಧಿಭ್ರಮಣೆ, ರೋಮಾಂಚ, ಸ್ತಂಭನ, ನಡುಕ, ಬೆವರುವುದು, ವರ್ಣವ್ಯತ್ಯಾಸ, ಚಿಂತೆ, ಆಹಾರವಿಲ್ಲದಿರುವಿಕೆ, ಪ್ರೇಮಾತಿಶಯ, ಗಂಟತಗಿದ ಮಾತು, ಕಣ್ಣೀರುಸುರಿಯುವಿಕೆ, ಮೂರ್ಛೆಹೋಗುವುದು ಮೊದಲಾದ ನಾನಾ ವಿಕಾರಗಳನ್ನು (ಸುಭದ್ರೆಯು) ಮೇಲೆ ಮೇಲೆ ತೋರುತ್ತಿರಲು ಆಕೆಯ ದಾದಿಯ ಮಗಳಾದ ಚೂತಲತಿಕೆಯೆಂಬವಳು ಇದನ್ನು ಕಂಡಳು. ೬೦. ಈಕೆಯ ಬತ್ತಿದ ಎದೆ, ನಡುಗುವ ತುಟಿ, ಹೂವಿನಂತಿರುವ ಕಣ್ಣಿನ ದೆಸೆಗೆಟ್ಟ ದೃಷ್ಟಿ, ಹೆಚ್ಚಾದ ಬೆವರಿನ ಸಾಲಿಂದ ಕೂಡಿದ ದೀರ್ಘಶ್ವಾಸ, (ನಿಟ್ಟುಸಿರು), ತೊದಳಿನಿಂದ ಕೂಡಿದ ಮಾತು, ಕೃಶವಾದ ಲತೆಯಂತಿರುವ ಶರೀರ, ತೋರಿಬರುತ್ತಿರುವ ವಿಕಾರಗಳು ಇವೆಲ್ಲ ಈಗ ಇವಳಲ್ಲಿ ಉಂಟಾಗುತ್ತಿವೆ, ಇವು ಪುಷ್ಪಬಾಣನಾದ ಮನ್ಮಥನೆಂಬ ದುಷ್ಟನು ಉಂಟುಮಾಡಿರುವ ಸೊಕ್ಕಿನ ಚೇಷ್ಟೆಯೇ ಸರಿ ವ|| ಎಂದು ತನ್ನಲ್ಲಿಯೇ ಯೋಚಿಸಿ ಪುನ ಹೀಗೆಂದಳು- ೬೧. ಕಳಿತುಹೋಗಿರುವ (ಅಜ್ಜಿಯಾದ) ಸಂಪಗೆಯ ಬಣ್ಣದ ಹಾಗೆ ಬೆಳ್ಳಗಿರುವ ಕಣ್ಣಿನ ಮೊದಲಿನಲ್ಲಿ ಕೆಂಪುಬಣ್ಣವು ನಿಧಾನವಾಗಿ ವ್ಯಾಪಿಸಿ ತೋರುತ್ತಿರಲು ಬಾಡಿ ಹಿಂದಿನ ಸ್ಥಿತಿಯನ್ನು ಕಳೆದುಕೊಂಡು ಜೋತುಹೋಗಿರುವ ಈಕೆಯ ಶರೀರಸ್ಥಿತಿಯೇ ನನ್ನ ಕಣ್ಣಿನಲ್ಲಿ ಈ ಕನ್ಯೆಯ ಪ್ರೇಮಾತಿಶಯವನ್ನು ಪ್ರಕಟಪಡಿಸುತ್ತದೆ. ವ|| ಆದುದರಿಂದ ಈಕೆಯ ಮನಸ್ಸನ್ನು ತಿಳಿಯಬೇಕು ಎಂದು ನಿಧಾನವಾಗಿ ಪಕ್ಕಕ್ಕೆ ಬಂದು ಕುಂಚದ ಅಡಪದ ಡವಕೆಯ ಸೇವಕಿಯರನ್ನೆಲ್ಲ ಕಣ್ಸನ್ನೆಯಿಂದಲೇ ಕಳುಹಿಸಿ ರಹಸ್ಯವಾಗಿ ಕನ್ಯೆಯನ್ನು ಕುರಿತು ಕೇಳಿದಳು -೬೨. ಈ ನಿನ್ನ ಕೆನ್ನೆಗಳು ಕಸ್ತೂರಿಯಿಂದ ಬರೆದ ಪತ್ರರೇಖೆಗಳನ್ನು

ಮ|| ನಗೆಗಣ್ ಸೋರ್ವ ಕದುಷ್ಣ ವಾರಿಚಯದಿಂ ಬಿಂಬಾಧರಂ ಸುಯ್ಯ ಬೆಂ
ಕೆಗಳಿಂ ನಾಡೆ ಬೆಡಂಗುಗೆಟ್ಟಿರವಿದಿಂತೇಕಾರಣಂ ಮಜ್ಜನಂ|
ಬುಗದಾರೋಗಿಸಲೊಲ್ಲದಿರ್ಪಿರವಿದೇಂ ನಾಣಳ್ಕಿದೇಂ ಕಾಮನಂ
ಬುಗಳತ್ತಿತ್ತೆಡೆಯಾಡೆ ಸೋಂಕವೆ ವಲಂ ನಿನ್ನಂ ಸರೋಜಾನನೇ|| ೬೩

ವ|| ಎಂದು ಮುನ್ನಮೆ ಮುಟ್ಟಿ ನುಡಿಯದೆ ಪೊಱಪೊಱಗನೆ ಬಳಸಿ ಕನ್ನೆಯ ಶಂಕೆಯಂ ಕಿಡಿಸಿ ಮತ್ತಮಿಂತೆಂದಳ್-

ಮ|| ವನಭೃತ್ಕುಂತಳೆಯಾ ಶಿರೀಷ ಕುಸುಮಾಭಾಂಗಕ್ಕೆ ಕಂದಂ ಕನ
ತ್ಕನಕಾಂಭೋಜನಿಭಾನನಕ್ಕೆ ಪಿರಿದುಂ ದೀನತ್ವಮಂ ನೀಳ್ದ ಮಾ|
ವಿನ ಪೋೞಂದದ ಕಣ್ಗೆ ಬಾಷ್ಪಜಲಮಂ ಚಿತ್ತಕ್ಕೆ ಸಂತಾಪಮಂ
ನಿನಗಂ ಮಾಡಿದನಾವನಾತನೆ ವಲಂ ಗಂಧೇಭ ವಿದ್ಯಾಧರಂ|| ೬೪

ವ|| ಎಂದು ತನ್ನ ಮನಮನಱದು ಮುಟ್ಟಿ ನುಡಿದ ಕೆಳದಿಯ ನುಡಿಗೆ ಪೆಱತೇನುಮನೆನಲಱಯದೆ ನಾಣ್ಚಿ ತಲೆಯಂ ಬಾಗಿ ನೆಲನಂ ಬರೆಯುತ್ತುಂ ನೀರೊಳ್ ಮುೞುಗಿದರಂತುಮ್ಮನೆ ಬೆಮರುತ್ತುಮ್ಮಳಿಕೆ ವಂದು ಬೆಚ್ಚನೆ ಸುಯ್ಡೊಡೆ-

ಕಂ|| ಉಸಿರದಿರೆ ಮನದೊಳೆರ್ದೆಯಂ
ಪಸರಿಸುಗುಂ ಮಱುಕಮದಱನೆನಗಿಂತುಟೆ ಎಂ|
ದುಸಿರುಸಿರ್ದೊಡೆ ಬಗೆ ತೀರ್ಗುಂ
ಬಿಸಿದುಂ ಬೆಟ್ಟತ್ತುಮುಸಿರದೇಂ ತೀರ್ದಪುದೇ|| ೬೫

ಪೇೞೆಂಬುದುಮಾಂ ನಿನಗೆಡೆ
ವೇೞದೆ ಪೇೞiರ್ಗೆ ಪೇೞ್ವೆನಿಂದಿನ ಬಂದಾ|
ಕಾೞiದ ವಾೞ್ತೆಗೊಂಡೊಡೆ
ಪಾೞiದುದು ಮನಮುಮೆರ್ದೆಯುಮೇನಂ ಪೇೞ್ವೆಂ|| ೬೬

ಭೋಂಕನೆ ಮನಮಂ ಕದಡಿ ಕ
ಲಂಕಿದಪುದು ಬಿಡದೆ ಮನಮನೊನಲಿಸಿದಪುದಾ|
ದಂ ಕೆಳದಿ ಪಾಣ್ಬರಂಕುಸ
ನಂಕುಸದಾ ಪೊಳಪುಮವನ ಕಣ್ಗಳ ಬೆಳ್ಪುಂ|| ೬೭

ಏಕಮ್ಮ ಧರಿಸಿಲ್ಲವಾಗಿವೆ. ನಿನ್ನ ಎದೆಯೇಕೆ ರತ್ನಹಾರದ ಗೊಂಚಲುಗಳಿಲ್ಲದೆ ಶೂನ್ಯವಾಗಿದೆ? ಈ ನಿನ್ನ ಸೊಂಟವೇಕೆ ಚಿನ್ನದ ಡಾಬಿನ ಗೆಜ್ಜೆಗಳ ಶಬ್ದವಿಲ್ಲದೆ ಮೂಕವಾಗಿದೆ. ನಿನ್ನ ಪಾದಕಮಲಗಳೇಕೆ ಈ ರೀತಿಯಲ್ಲಿ ಅರಗಿನ ರಸದ ಲೇಪನವಾಗದೆ ನಿಂತಿವೆ? ೬೩. ನಿನ್ನ ಕಣ್ಣು ನಸುಬಿಸಿಯಾದ ಕಣ್ಣೀರಿನ ಪ್ರವಾಹವನ್ನು ಸುರಿಸುತ್ತಿರುವುದೂ ತೊಂಡೆಹಣ್ಣಿನಂತಿರುವ ತುಟಿಯು ನಿಟ್ಟುಸಿರಿನ ಬೆಂಕಿಯಿಂದ ತನ್ನ ಬೆಡಗನ್ನು ಹೋಗಲಾಡಿಸಿಕೊಂಡಿರುವ ಈ ಸ್ಥಿತಿಯೂ ಇದೇಕೆ? ಸ್ನಾನ ಮಾಡದೆ ಊಟಮಾಡದೆ ಇರುವುದಕ್ಕೆ ಕಾರಣವೇನು? ಲಜ್ಜೆಯೂ ಭಯವೂ ಇದೇಕೆ? ಕಾಮಬಾಣಗಳು ನಿನ್ನನ್ನು ವ್ಯಾಪಿಸಿ ನಿಜವಾಗಿಯೂ ಮುಟ್ಟುತ್ತಿಲ್ಲವೇ? ವ|| ಎಂದು ಮೊದಲೇ ಒಳಹೊಕ್ಕು (ಅವಳ ಇಂಗಿತವನ್ನೂ ತಿಳಿದು) ಮಾತನಾಡದೆ ಮೇಲೆ ಮೇಲೆ ಬಳಸುಮಾತುಗಳನ್ನಾಡಿ ಅವಳ ಸಂದೇಹವನ್ನು ಹೋಗಲಾಡಿಸಿ ಪುನ ಹೀಗೆಂದಳು-೬೪. ಮೋಡದಂತೆ ಕಪ್ಪಾದ ಮುಂಗುರುಳುಳ್ಳ ಬಾಗೆಹೂವಿನ ಬಣ್ಣವುಳ್ಳ ನಿನ್ನ ಶರೀರಕ್ಕೆ ಮಾಸುವಿಕೆಯನ್ನೂ ಕಾಂತಿಯುಕ್ತವಾದ ಹೊಂದಾವರೆಗೆ ಸಮಾನವಾದ ಮುಖಕ್ಕೆ ವಿಶೇಷವಾದ ಬಾಡುವಿಕೆಯನ್ನೂ ನೀಳವಾದ ಮಾವಿನ ಹೋಳಿನಂತಿರುವ ಕಣ್ಣಿಗೆ ಕಣ್ಣೀರನ್ನೂ ಮನಸ್ಸಿಗೆ ದುಖವನ್ನೂ ಯಾವನು ನಿನಗುಂಟುಮಾಡಿದನೋ ಅವನೇ ನಿಜವಾಗಿಯೂ ಗಂದೇಭವಿದ್ಯಾಧರನಾದ ಅರ್ಜುನನಲ್ಲವೇ? ವ|| ಎಂದು ತನ್ನ ಮನಸ್ಸನ್ನು ತಿಳಿದು ಹೃದಯಸ್ಪರ್ಶಿಯಾಗಿ ಮಾತನಾಡಿದ ಸಖಿಯ ಮಾತಿಗೆ ಬೇರೆಯೇನನ್ನೂ ಹೇಳಲಾರದೆ ನಾಚಿಕೆಗೊಂಡು ತಲೆಯನ್ನು ಬಗ್ಗಿಸಿ ನೆಲವನ್ನು ಕಾಲಿನಿಂದ ಬರೆಯುತ್ತ ನೀರಿನಲ್ಲಿ ಮುಳುಗಿದವರ ಹಾಗೆ ಸುಮ್ಮನೆ ಬೆವರುತ್ತ ದುಖದಿಂದ ನಿಟ್ಟಿಸಿರನ್ನು ಬಿಟ್ಟಳು. ೬೫. ಆಗ ಚೂತಲತಿಕೆಯು ಸುಭದ್ರೆಯನ್ನು ಕುರಿತು, ಅಮ್ಮಾಸುಭದ್ರೆ ಮನಸ್ಸಿನಲ್ಲಿರುವುದನ್ನು ಬಾಯಿಬಿಟ್ಟು ಹೇಳದಿದ್ದರೆ ದುಖವು ಹೃದಯವನ್ನು ಆವರಿಸುತ್ತದೆ. ಆದುದರಿಂದ ನನಗೆ ಹೀಗೆ ಎಂದು ಹೇಳು; ಹೇಳಿದರೆ ಇಷ್ಟಾರ್ಥವು ಕೈಗೂಡುತ್ತದೆ. ಬಿಸಿಯಾಗಿಯೂ ಬಿರುಸಾಗಿಯೂ ಉಸಿರಾಡುವುದರಿಂದ ತೀರುತ್ತದೆಯೇ? (ನಿಟ್ಟುಸಿರಿನಿಂದ ಇಷ್ಟಾರ್ಥವಾಗುತ್ತದೆಯೇ?) ೬೬. ಹೇಳು ಎನಲು ನಾನು ನಿನಗೆ ವಿಷಯವನ್ನು ತಿಳಿಸದೆ ಬೇರೆ ಯಾರಿಗೆ ಹೇಳಲಿ. ಈ ದಿನ ಆ ಕೆಟ್ಟ ಸುದ್ದಿಯನ್ನು ಕೇಳಿದೊಡನೆಯೇ ಮನಸ್ಸೂ ಎದೆಯೂ ಹಾಳಾಯಿತು.

ಏನು ಹೇಳಲಿ ೬೭. ಎಲೆ ಸಖಿಯೇ ಪಾಣ್ಬರಂಕುಶನೆಂಬ ಬಿರುದುಳ್ಳ ಅರ್ಜುನನ (ಅರಿಕೇಸರಿಯ) ಅಂಕುಶವೆಂಬ ಹೊಳಪೂ

ಅವನ ಕಣ್ಣುಗಳ ಬಿಳುಪೂ ಇದ್ದಕ್ಕಿದ್ದ ಹಾಗೆ ಮನಸ್ಸನ್ನು ಕದಡಿ ಕಲಕಿಸುತ್ತವೆ. ಅಷ್ಟಕ್ಕೆ ಬಿಡದೆ ಮನಸ್ಸನ್ನು ವಿಶೇಷವಾಗಿ ಕೆರಳಿಸುತ್ತವೆ.

ಚಂ|| ಮನಸಿಜನಂಬರಲ್ದ ಪೊಸ ಮಲ್ಲಿಗೆ ತೆಂಕಣ ಗಾಳಿಯೆಂಬಿವಿಂ
ತನುಬಲದಿಂದಮೆನ್ನನಲೆದಪ್ಪುವವೆನ್ನನೆ ಪೆಟ್ಟುವೆರ್ಚಿ ಚಂ|
ದ್ರನ ಬಲದಿಂದಮೆನ್ನ ನಲೆದಪ್ಪುವದರ್ಕೆನಗೀಗಳೊಂದಿ ಚಂ
ದ್ರನ ಬಲಮೊಳ್ಳಿತಾಗಿ ಸಲೆಯಿಲ್ಲದೊಡಾವುದುಮೊಳ್ಳಿಕೆಯ್ಗುಮೇ|| ೬೮

ವ|| ಎಂದು ಮನದ ಮಱುಕಮುಮನೆರ್ದೆಯ ಕುದಿಪಮುಮಂ ಬಗೆಯ ಕುಱಪಮುಮಂ ಮೆಯ್ಯ ಬಡತನಮುಮನಱಯೆ ತೋಱ ನುಡಿದೊಡೆ ರಾಜಹಂಸಿ ಮಾನಸ ಸರೋವರಮನಲ್ಲದೆ ಪೆಱತನೇಕೆ ಬಯಸುಗುಂ ಕಳಹಂಸಗಮನೆಯಾ ಸುರತಮಕರಧ್ವಜನನಲ್ಲದೆ ಪೆಱತನೇಕೆ ಬಯಸುಗುಮೆಂದು ಮನದೊಳೆ ಮಂತಣಮಿರ್ದು ಬಗೆಯೊಳೆ ಗುಡಿಗಟ್ಟಿ ಸಂತಸಂಬಟ್ಟಿಂತೆಂದಳ್-

ಮ|| ನನೆಯಂಬಂ ತೆಗೆದೆಚ್ಚನಂಗಜನ ತಪ್ಪೇನಾನುಮಂ ತೋ ಕಾ
ಣ್ಬನಿತಂ ಮಾಡದೆ ಪದ್ಮಜಂ ಮದನನಂ ಬೈದಂತುಟೇ ಬೇಡವಿ
ಬಿನದಂ ತಪ್ಪಲೆ ಕಲ್ಪಿತಂ ಪರಿಯದಾತಂಗೆಂದು ನಿನ್ನೀ ಮನಂ
ನಿನಗಾತಂ ದೊರೆ ನೆಟ್ಟನಾದಿ ಪುರುಷಂಗೇಕಕ್ಕ ನೀನ್ನಾಣ್ಚುವೈ||

ವ|| ನೀನಿದರ್ಕೇನುಮಂ ಬಗೆಯಲ್ವೇಡ ನಿನ್ನ ಬಗೆಯಂ ಬಗೆದಂತೆ ತೀರ್ಚುವೆನೆಂದನೇಕ ಪ್ರಕಾರ ವಚನ ರಚನೆಗಳಿಂದಾಕೆಯ ಮನಮನಾ ನುಡಿಯುತ್ತಿರ್ಪಿನಮಿತ್ತ ವಿಕ್ರಮಾರ್ಜುನನುಮೋಲಗಂ ಪರೆದಿಂಬೞಯಂ ತನ್ನ ಪವಡಿಸುವ ಮಾಡಕ್ಕೊಡನೊಡ ನೋಲಗಿಸುತ್ತುಂ ಬಂದ ಪಂಡಿಕರ್ತಳುಮನುಚಿತ ಪ್ರತಿಪತ್ತಿಗಳಿಂ ವಿಸರ್ಜಿಸಿ ಸುಭದ್ರೆಯ ರೂಪು ಕಣ್ಣ ಪಾಪೆಯಂತೆ ಕಣ್ಣೊಳೆ ತೊೞಲೆ ಕಣ್ಮುಚ್ಚದೆ ತನ್ನ ಜಸದಂತೆ ಪಸರಿಸಿದಚ್ಚವೆಳ್ದಿಂಗಳನಾಕೆಯ ಕಣ್ಗಳ ಬೆಳ್ಪಿನ ತಳರ್ಪೆನುತ್ತುಂ ಪೆಳ್ಪಳಿಸಿ ಚಂದ್ರನಂ ನೋಡಿ-

ಚಂ|| ಪ್ರಿಯ ಸತಿಯಾನನೇಂದುವೊಳಮಿಂದುವೊಳಂ ಬಿದಿ ಮುನ್ನಮಾವುದಂ
ನಯದೊಳೆ ನೋಡಿ ಮಾಡಿದನದಾವುದನೆಂದಱಯಲ್ಕೆ ನಾಡೆ ಸಂ|
ದೆಯಮದು ನೀಳ ನೀರಜ ವನಂಗಳ ಚೆಲ್ವುಗಳೆಂಬುವಾ ಲತಾಂ
ಗಿಯ ಕಡೆಗಣ್ಣ ಬೆಳ್ಪುಗಳ ಸಿಲ್ಕಿದ ಸಿಲ್ಕಿನ ಸಿಲ್ಕಿವಲ್ಲವೇ|| ೭೦

೬೮. ಮನ್ಮಥನ ಬಾಣ ಹೊಸಮಲ್ಲಿಗೆ ದಕ್ಷಿಣಗಾಳಿ ಇವು ಪರಸ್ಪರ ಒಟ್ಟುಗೂಡಿ ನನ್ನನ್ನು ಹಿಂಸಿಸುತ್ತವೆ. ಇವು ಚಂದ್ರಬಲದಿಂದ (ಬೆಳದಿಂಗಳಿನಿಂದ) ಮತ್ತಷ್ಟು ಕೊಬ್ಬಿ ನನ್ನನ್ನು ಮತ್ತೂ ಹಿಂಸಿಸುತ್ತವೆ. ಈಗ ನನಗೆ ಚಂದ್ರಬಲವು (ಅದೃಷ್ಟ-ಗ್ರಹಬಲ) ಸರಿಯಾಗಿಲ್ಲದಿದ್ದರೆ ಮತ್ತಾವುದು ತಾನೆ ಒಳ್ಳೆಯದನ್ನು ಮಾಡಬಲ್ಲುದು? ವ|| ಎಂದು ಮನಸ್ಸಿನ ದುಖವನ್ನೂ ಹೃದಯದ ಬೇಗೆಯನ್ನೂ ಮನಸ್ಸಿನ ಗುರಿಯನ್ನೂ ಶರೀರದ ಬಡತನವನ್ನೂ ಸ್ಪಷ್ಟವಾಗಿ ತಿಳಿಯುವ ಹಾಗೆ ನಿರ್ದೇಶನ ಮಾಡಿ ನುಡಿಯಲಾಗಿ ಆ ಸಖಿಯು ತನ್ನ ಮನಸ್ಸಿನಲ್ಲಿಯೇ ರಾಜಹಂಸಪಕ್ಷಿಯು ಮಾನಸಸರೋವರವನ್ನಲ್ಲದೆ ಬೇರೆಯದನ್ನೇಕೆ ಅಪೇಕ್ಷಿಸುತ್ತದೆ. ಕಳಹಂಸಗಮನೆಯಾದ ಸುಭದ್ರೆಯು ಸುರತಮಕರಧ್ವಜನಾದ ಅರ್ಜುನನನ್ನಲ್ಲದೆ ಇತರರನ್ನೇಕೆ ಆಶಿಸುತ್ತಾಳೆ? ಎಂದು ಯೋಚಿಸುತ್ತಿದ್ದು ಮನಸ್ಸಿನಲ್ಲಿ ಉತ್ಸಾಹಗೊಂಡು ಸಂತೋಷಪಟ್ಟು ಹೀಗೆಂದಳು- ೬೯. ಪುಷ್ಟಬಾಣವನ್ನು ಪ್ರಯೋಗಿಸಿದ ತಪ್ಪೇನನ್ನೂ ಪ್ರಕಟವಾಗಿ ತೋರುವಂತೆ ಮಾಡುದುದರಿಂದ ಬ್ರಹ್ಮನು ಮನ್ಮಥನನ್ನು ತಪ್ಪಿತಸ್ಥನನ್ನಾಗಿಯೇ ಮಾಡಿದಂತಾಗಿದೆ. ಈ ಆರೋಪಿತವಾದ ವಿನೋದವೂ ತಪ್ಪಾಗುವುದಿಲ್ಲವೇ? ನಿನ್ನ ಮನಸ್ಸು ಆತನನ್ನು ಬಿಟ್ಟು ಹರಿಯದು. ನಿನಗೆ ಅವನೇ ಸರಿಸಮಾನನಾಗಿರುವವನು. ಆದಿಪುರುಷನಾದ ಅರಿಕೇಸರಿಯ ವಿಷಯದಲ್ಲಿ ಏತಕಕ್ಕ ಲಜ್ಜೆಪಡುತ್ತೀಯೇ? ವ|| ನೀನು ಇದಕ್ಕೆ ಏನೂ ಚಿಂತಿಸಬೇಡ. ನಿನ್ನ ಇಷ್ಟಾರ್ಥವನ್ನು ಇಷ್ಟಾರ್ಥದಂತೆಯೇ ತೀರಿಸುತ್ತೇನೆ ಎಂದು ಅನೇಕ ರೀತಿಯ ಮಾತಿನ ಚಮತ್ಕಾರಗಳಿಂದ ಅವಳ ಮನಸ್ಸು ತೃಪ್ತಿಪಡುವಂತೆ ನುಡಿಯುತ್ತಿರಲು ಈ ಕಡೆ ವಿಕ್ರಮಾರ್ಜುನನಾದ ಅರಿಕೇಸರಿಯು ಸಭೆಯು ವಿಸಜರ್ನೆಯಾದ ಬಳಿಕ ಮಲಗುವ ಮನೆಗೆ ಬಂದನು. ತನ್ನ ಜೊತೆಯಲ್ಲಿಯೇ ಅನುಸರಿಸಿ ಬರುತ್ತಿದ್ದ ಪಂಡಿತರುಗಳನ್ನು ಉಚಿತವಾದ ಸತ್ಕಾರಗಳಿಂದ ವಿಸರ್ಜನೆ ಮಾಡಿದನು. ಸುಭದ್ರೆಯ ಸೌಂದರ್ಯವು ತನ್ನ ಕಣ್ಣಿನಲ್ಲಿ ತನ್ನ ಕಣ್ಣಿನ ಗುಡ್ಡೆಯಂತೆಯೇ ಸುತ್ತಾಡುತ್ತಿರಲು ಕಣ್ಣನ್ನು ಮುಚ್ಚದೆ ತನ್ನ ಯಶಸ್ಸಿನಂತೆ ಪ್ರಸರಿಸಿದ್ದ ಸ್ವಚ್ಛವಾದ ಬೆಳುದಿಂಗಳನ್ನು ಆಕೆಯ ಕಣ್ಣುಗಳ ಬಿಳಿಯ ಬಣ್ಣದ ಚಲನೆಯೆಂದೇ ಭಾವಿಸಿ ಹೆದರಿದನು. ಚಂದ್ರನನ್ನು ನೋಡಿ ೭೦. ಚಂದ್ರನೂ ಪ್ರಿಯಸತಿಯಾದ ಸುಭದ್ರೆಯ ಮುಖಚಂದ್ರನೂ ಒಂದೇ ರೀತಿಯಲ್ಲಿವೆ. ಬ್ರಹ್ಮನು ಇವುಗಳಲ್ಲಿ ಯಾವುದನ್ನು ಮಾದರಿಯಾಗಿ ಮೊದಲು ಮಾಡಿದನು.? ತಿಳಿಯುವುದಕ್ಕೆ

(ಈ ಪದ್ಯದ ಅರ್ಥ ಸ್ಪಷ್ಟವಿಲ್ಲ. ಇದರರ್ಥ ಹೀಗಿದ್ದರೂ ಇರಬಹುದು – ಬ್ರಹ್ಮನು ಸುಭದ್ರೆಗೆ ಅರ್ಜುನನ ವಿಷಯದಲ್ಲಾದ ಮನ್ಮಥಚೇಷ್ಟೆಯನ್ನು ಸ್ವಭಾವಸಹಜವನ್ನಾಗಿ ಮಾಡಿ ಕಲ್ಪಿತವೆನ್ನುವ ಹಾಗೆ ಮಾಡಬಾರದಾಗಿತ್ತು. ಹೇಗಾದರೂ ನಿನಗೆ ಅವನೂ ಅವನಿಗೆ ನೀನು ಸಮಾನರಾಗಿರುವವರು.)